ಅನ್ವೇಷಣೆ ಭಾಗ ೧೩

ಅನ್ವೇಷಣೆ ಭಾಗ ೧೩

ಇನ್ಸ್ಪೆಕ್ಟರ್ ಹೇಳಿದ ಮಾತುಗಳನ್ನು ಕೇಳಿದ ಮೇಲೆ ಜಾನಕಿಯ ಕೊಲೆಯ ಹಿಂದೆ ಯಾವುದೋ ದೊಡ್ಡ ರಹಸ್ಯವೇ ಇದೆ ಎಂದೆನಿಸಿತು. ಅಷ್ಟೇ ಅಲ್ಲದೇ ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನುವ ಅನುಮಾನವೂ ಮೂಡಿತು. ಆದರೆ ಜಾನಕಿಗೆ ಮಾಟ ಮಾಡಿರುವ ಹಾಗೆ ಅದೇ ದಿನ ಶೀಲಾಗೂ ಮಾಟ ಮಾಡಿರುವುದು ಏಕೆ, ಜಾನಕಿಯನ್ನೇ ಕೊಂಡದ್ದು ಏಕೆ ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ಕಂಡು ಹಿಡಿಯಲು ಆಗುತ್ತಿಲ್ಲ. ಈ ವ್ಯಕ್ತಿಗಳು ಬರೀ ಮಾಡಲು ಮಾತ್ರ ಬಳಕೆ ಆಗಿದ್ದಾರೆ ಎಂದರೆ.... ಕೊಲೆ ಮಾಡಿರುವುದೇ ಮತ್ತೊಬ್ಬರು, ಹಾಗೆಯೇ ಕೊಲೆ ಮಾಡಿಸಿರುವುದು ಬೇರೆಯವರು. ಹಾಗಾಗಿ ನಾವೀಗ ಕೊಲೆ ಮಾಡಿರುವವರನ್ನು ಪತ್ತೆ ಹಚ್ಚಿದರೂ ಅದರಿಂದ ಪ್ರಯೋಜನ ಇಲ್ಲ. ಏಕೆಂದರೆ ಅವರೂ ಸಹ ಯಾರದೋ ಸೂಚನೆಯಂತೆ ಕೊಲೆ ಮಾಡಿರುತ್ತಾರೆ. ಹಾಗಾಗಿ ನಮಗೆ ಈಗ ಕೊಲೆ ಮಾಡಿದವರಿಗಿಂತ ಕೊಲೆ ಮಾಡಿಸಿದವರನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲು. ಆದರೆ ಹೇಗೆ??

ಮಾರನೇ ದಿನ ಇನ್ಸ್ಪೆಕ್ಟರ್ ತ್ರಿವಿಕ್ರಂ ಕರೆ ಮಾಡಿ ಅರ್ಜುನ್, ಆ ಕರೆ ಬಂದಿರುವುದು ಕೇರಳದ ಕೊಟ್ಟಾಯಂ ನಿಂದ ಎಂದು ಗೊತ್ತಾಗಿದೆ. ಆ ಸಿಮ್ ಯಾರ ಹೆಸರಿನಲ್ಲಿ ಇದೆ ಎಂಬುದೂ ಗೊತ್ತಾಗಿದೆ. ನಾಳೆಯೇ ನಮ್ಮ ತಂಡ ಕೇರಳಕ್ಕೆ ಹೊರಟಿದ್ದಾರೆ. ನಾನು ಆದಷ್ಟು ಬೇಗ ನಿಮಗೆ ಮುಂದಿನ ವಿಷಯಗಳನ್ನು ಅಪ್ಡೇಟ್ ಮಾಡುತ್ತೇನೆ ಎಂದು ಕರೆ ಕಟ್ ಮಾಡಿದರು.

ನನಗೆ ೧೦೦% ಗೊತ್ತಿತ್ತು, ಇವರು ಅವರನ್ನು ಪತ್ತೆ ಹಚ್ಚಿದರೂ, ಮೂಲ ಕಾರಣ ಯಾರೆಂದು ತಿಳಿಯುವುದಿಲ್ಲ. ಹಾಗಾಗಿ ಅವರ ಕೆಲಸ ಅವರು ಮಾಡಲಿ, ನನ್ನ ಕೆಲಸ ನಾನು ಮಾಡುವುದು ಉತ್ತಮ ಎಂದುಕೊಂಡು ಮತ್ತೆ ವೀಣಾದೇವಿಯವರಿಗೆ ಕರೆ ಮಾಡಿ ಮೇಡಂ, ಶೀಲಾ ಎನ್ನುವ ಹುಡುಗಿ ಬಗ್ಗೆ ಸ್ವಲ್ಪ ಮಾಹಿತಿ ಬೇಕಾಗಿತ್ತು.

ಅರ್ಜುನ್.... ಶೀಲಾ ಮತ್ತು ಜಾನಕಿ ಇಬ್ಬರೂ ಒಂದೇ ದಿನ ಆಶ್ರಮಕ್ಕೆ ಸೇರಿದ್ದು, ಆ ವಿವರ ಹೇಗಿದ್ದರೂ ನಿನಗೆ ನಾನು ಕೊಟ್ಟಿದ್ದ ಕಡತದಲ್ಲೇ ಸಿಕ್ಕಿರುತ್ತದೆ. ಶೀಲಾ ನಮಗೆ ಸಿಕ್ಕಾಗ ಬಹಳ ಆಶ್ಚರ್ಯವಾಗಿತ್ತು. ಒಂದು ದಿನ ಬೆಳ್ಳಂ ಬೆಳಿಗ್ಗೆ ನಾನು ಪ್ರತಿದಿನದಂತೆ ವಾಕಿಂಗ್ ಮುಗಿಸಿಕೊಂಡು ಬರುತ್ತಿದ್ದಾಗ ರಸ್ತೆ ಬದಿಯಿಂದ ಒಂದು ಮಗುವಿನ ಅಳು ಕೇಳಿಸಿತು. ಹೋಗಿ ನೋಡಿದರೆ ಆಶ್ಚರ್ಯ!! ಒಂದು ಪೊದೆಯ ಪಕ್ಕದಲ್ಲಿ ಒಂದು ಪುಟಾಣಿ ಹಾಸಿಗೆ ಮೇಲೆ ಒಂದು ಮಗು ಮಲಗಿತ್ತು, ಮಗುವಿನ ಜೊತೆ ಒಂದು ಕವರಿನಲ್ಲಿ ಒಂದು ಲಕ್ಷ ಹಣ ಮತ್ತು ಒಂದು ಕಾಗದ ಇತ್ತು.

ಆ ಕಾಗದದಲ್ಲಿ ಬರೆದಿದ್ದು ಏನೆಂದರೆ, ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಿ, ಈ ಹಣ ತೆಗೆದುಕೊಂಡು ಈ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಷ್ಟೇ ಬರೆದಿತ್ತು. ಯಾರು ಬರೆದಿದ್ದು, ಯಾರ ಮಗು ಯಾವುದೇ ಮಾಹಿತಿ ಇರಲಿಲ್ಲ. ನಂತರ ಪೊಲೀಸರಿಗೆ ಕರೆ ಮಾಡಿದರೆ ಅವರು ಬಂದು ಆ ಕಾಗದವನ್ನು ಓದಿ ಸ್ವಲ್ಪ ಹೊತ್ತು ಯೋಚಿಸಿ, ಹೇಗಿದ್ದರೂ ನೀವೇ ಅನಾಥಾಶ್ರಮ ನಡೆಸುತ್ತಿದ್ದೀರಿ ಎಂದು ಹೇಳಿದಿರಲ್ಲವೇ.... ಈ ಹಣವನ್ನು ತೆಗೆದುಕೊಂಡು ನೀವೇ ಈ ಮಗುವನ್ನು ಸಾಕಿ ಎಂದು ಆ ಮಗುವನ್ನು ನನ್ನ ಕೈಗಿಟ್ಟರು. ಅವಳೇ ಅರ್ಜುನ್ ಈ ಶೀಲಾ.

ಆ ಹಣದಲ್ಲೇ ಅವಳನ್ನು ಸಾಕಿ ಸಲಹಿ ಚೆನ್ನಾಗಿ ಓದಿಸಿ ಅವಳನ್ನು ಅವಳ ಸ್ವಂತ ಕಾಲಿನ ಮೇಲೆ ನಿಲ್ಲುವ ಹಾಗೆ ಮಾಡಿದೆ. ನಂತರ ಅವಳು ತಾನು ಪ್ರೇಮಿಸಿದ ಹುಡುಗನನ್ನೇ ಮದುವೆ ಆಗಿ ಚೆನ್ನಾಗಿದ್ದಾಳೆ. ಅದು ಸರಿ ಜಾನಕಿ ಕೊಲೆಗೂ ಶೀಲಾಗೂ ಏನು ಸಂಬಂಧ. ಅವಳ ವಿಷಯವನ್ನು ಏಕೆ ಕೇಳಿದೆ?

ಮೇಡಂ ಜಾನಕಿಯನ್ನು ಕೊಲ್ಲಲು ನಡೆಸಿದ ಪ್ರಯತ್ನದಲ್ಲೇ ಶೀಲಾಳನ್ನು ಕೊಲ್ಲಲು ಪ್ರಯತ್ನ ಪಟ್ಟಿದ್ದಾರೆ. ಆದರೆ ನಂತರ ಜಾನಕಿಯನ್ನು ಮಾತ್ರ ಕೊಂದಿದ್ದಾರೆ. ನನಗೆ ಅನಿಸುವ ಮಟ್ಟಿಗೆ ಮೊದಲು ನಿಮ್ಮ ಕಡತ ನೋಡಿದಾಗ ಒಂದೇ ಡೇಟ್ ನಲ್ಲಿ ಈ ಇಬ್ಬರು ಮಕ್ಕಳು ಆಶ್ರಮ ಸೇರಿದ್ದಾರೆ. ಹಾಗಾಗಿ ಅವರಿಗೆ ಬೇಕಿದ್ದ ಮಗು ಯಾರೆಂದು ತಿಳಿಯದೆ ಇಬ್ಬರ ಮೇಲೂ ಕೊಲೆ ಪ್ರಯತ್ನ ನಡೆಸಿದ್ದಾರೆ. ಆದರೆ ನಂತರದಲ್ಲಿ ತಮಗೆ ಬೇಕಾಗಿರುವುದು ಶೀಲಾ ಅಲ್ಲ, ಜಾನಕಿ ಎಂದು ಖಚಿತವಾದ ಬಳಿಕ ಅವಳನ್ನು ಬಿಟ್ಟು ಬಿಟ್ಟಿದ್ದಾರೆ ಎಂದು ನನ್ನ ಅನುಮಾನ. ಹ್ಮ್ .... ನೋಡೋಣ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂದು ಎಂದು ಕರೆ ಕಟ್ ಮಾಡಿದೆ.

ಈಗ ಮುಂದಿನ ಹೆಜ್ಜೆ ಏನು? ಒಂದು ವೇಳೆ ಕೊಲೆ ಮಾಡಿದವರು ಯಾರೆಂದು ಗೊತ್ತಾದರೂ ಅದರಿಂದ ಆಗುವ ಪ್ರಯೋಜನ ಏನು?? ಕೊಲೆ ಮಾಡಿಸಿದವರು ಯಾರು ಏತಕ್ಕೆ ಮಾಡಿಸಿದರು ಎಂದು ತಿಳಿಯಬೇಕಲ್ಲ.... ಇರಲಿ ಒಮ್ಮೆ ತ್ರಿವಿಕ್ರಂ ಕಡೆಯವರು ಕೊಟ್ಟಾಯಂಗೆ ಹೋಗಿ ಬರಲಿ, ಬಂದ ಮೇಲೆ ಏನಾದರೂ ಮಾಹಿತಿ ಸಿಗುತ್ತದ ಎಂದು ನೋಡೋಣ ಎಂದು ತ್ರಿವಿಕ್ರಂ ಕರೆಗಾಗಿ ಕಾಯುತ್ತಿದ್ದೆ.

ಎರಡು ದಿನದ ನಂತರ ಕರೆ ಮಾಡಿದ ತ್ರಿವಿಕ್ರಂ, ಅರ್ಜುನ್...ಜಾನಕಿಯ ವಿಷಯದಲ್ಲಿ ಒಂದು ಮುಖ್ಯವಾದ ಸುಳಿವು ಸಿಕ್ಕಿದೆ. ಕೂಡಲೇ ನೀವು ಸ್ಟೇಷನ್ ಗೆ ಬನ್ನಿ ಎಂದು ಹೇಳಿದರು. ನಾನು ಏನೆಂದು ಕೇಳಿದ್ದಕ್ಕೆ ಅದನ್ನು ಫೋನಿನಲ್ಲಿ ಹೇಳಲು ಸಾಧ್ಯವಿಲ್ಲ, ಈ ಕೂಡಲೇ ನೀವು ಸ್ಟೇಷನ್ ಗೆ ಬನ್ನಿ ಎಂದು ಹೇಳಿ ಕರೆ ಕಟ್ ಮಾಡಿದರು. ನಾನು ಕೂಡಲೇ ಸ್ಟೇಷನ್ ಕಡೆ ಹೊರಟೆ. ಇನ್ನೇನು ಸ್ಟೇಷನ್ ಬಳಿ ಗಾಡಿ ನಿಲ್ಲಿಸಿ ಒಳಗೆ ಹೋಗಬೇಕು ಎನ್ನುವಷ್ಟರಲ್ಲಿ ನನ್ನ ಕಿವಿಯ ಪಕ್ಕದಲ್ಲಿ ರಪ್ ಎಂದು ಗಾಳಿ ಹೋದಂತಾಗಿ ಎದುರಿದ್ದ ಗೋಡೆಗೆ ಏನೋ ಬಡಿದ ಸದ್ದಾಗಿ ಹಿಂತಿರುಗಿ ನೋಡಿದರೆ ಏನೂ ಕಾಣಲಿಲ್ಲ. ಗೋಡೆಗೆ ಬಡಿದದ್ದು ಏನೆಂದು ನೋಡಿದಾಗ ನನಗೆ ಆಶ್ಚರ್ಯ ಭಯ ಎರಡೂ ಆಯಿತು. ಅದೊಂದು ಬುಲೆಟ್ ಆಗಿತ್ತು!!!

Rating
No votes yet

Comments