ಸಂಪದ ನಿಂತು ಹೋಯಿತೇ?

ಸಂಪದ ನಿಂತು ಹೋಯಿತೇ?

"ಸಂಪದ ನಿಂತು ಹೋಯ್ತಲ್ವೆ?" ಎಂದು ಕೇಳಿದರು ಆ ದಿನ ಅದೊಂದು ಕಾರ್ಯಕ್ರಮಕ್ಕೆ ಬಂದ ಪರಿಚಿತರೊಬ್ಬರು.
"ಇಲ್ಲ, ಇನ್ನೂ ಜೀವಿತವಾಗಿದೆ" ಎಂದು ನಸುನಗುತ್ತಲೇ ತಿಳಿಸಿದೆ.
"ಓಹ್, ಹಾಗಾದರೆ ಒಮ್ಮೆ ನೋಡಬೇಕು" ಎಂದರು.

ಸಂಪದವನ್ನು ಪ್ರಾರಂಭಿಸಿ ಒಂದು ದಶಕವೇ ಕಳೆಯುತ್ತ ಬಂದಿರುವ ಸಮಯಕ್ಕೆ ಏರಿಳಿತದ ದಾರಿಯಲ್ಲಿ ಅದನ್ನು ಜೀವಿತವಾಗಿಟ್ಟುಕೊಂಡು ಬಂದದ್ದೇ ನನಗೆ ಸಾಹಸ ಎನಿಸಿದ್ದು ನಿಜ. ಆದರೂ ಇತ್ತೀಚೆಗೆ ಸಂಪದವನ್ನು ಬಳಸಿ ಇನ್ನೂ ಏನೆಲ್ಲ ಕನ್ನಡ ಕೆಲಸಗಳನ್ನು ಮಾಡಬಹುದಿತ್ತಲ್ಲ ಎಂದು ಪ್ರತಿ ದಿನವೂ ಅನಿಸುವುದುಂಟು. ನನ್ನ ಡೈರಿಯಲ್ಲಿ ಸಂಪದದ ಸುತ್ತ ಮಾಡಬಹುದಾದ ನೂರೆಂಟು ಐಡಿಯಗಳ ಪಟ್ಟಿಯಿದೆ. ಆದರೆ ಎಲ್ಲೋ ಸಂಪನ್ಮೂಲಗಳು ಕೂಡಿಕೊಳ್ಳದೆ ಅಥವ ನನಗೇ ಸ್ವತಃ ಸಮಯವಾಗದೆ ಹೆಚ್ಚಿನವು ಬೆಳಕು ಕಾಣಲೇ ಇಲ್ಲ.

ಇತ್ತೀಚೆಗೆ ಸಂಪದದ ಹಿಂದಿರುವ ತಂತ್ರಜ್ಞಾನವನ್ನು ಮತ್ತೆ ಪುಟ್ಟ ಪುಟ್ಟ ಹೆಜ್ಜೆಗಳೊಂದಿಗೆ ಉತ್ತಮಗೊಳಿಸುತ್ತ ಬಂದಿದ್ದೇವೆ. ಈಗ ಓದುಗರು ಫೇಸ್ ಬುಕ್ಕಿಗೆ ಲಾಗಿನ್ ಆಗಲು ಬಳಸುವ ಐಡಿಯನ್ನೇ ಬಳಸಿ ಸಂಪದಕ್ಕೂ ಲಾಗಿನ್ ಆಗಬಹುದು. ಗೂಗಲ್ ಐಡಿ ಇದ್ದರೂ ನಡೆಯುತ್ತದೆ.  ಮುಂಚಿಗಿಂತ ಉತ್ತಮ ಯೂಸರ್ ಇಂಟರ್ಫೇಸ್ ಈಗ ಸಂಪದಕ್ಕಿದೆ ಎಂದು ನಾನು ಭಾವಿಸುತ್ತೇನೆ. ಮೊಬೈಲಿನಲ್ಲೂ ಸರಾಗವಾಗಿ ಓದಬಹುದಾದ ಪುಟಗಳ ಶೈಲಿ ಈಗ ಸಂಪದದಲ್ಲಿ ಲಭ್ಯವಿದೆ. ಸಂಪದಕ್ಕಾಗಿಯೇ ನಿರ್ಮಿಸಿದ ಮೊಬೈಲ್ ಆಪ್ ಕೂಡ ಬಹಳಷ್ಟು ದಿನಗಳಿಂದ ಆಂಡ್ರಾಯ್ಡ್ ಹಾಗೂ ಐಫೋನುಗಳಿಗೆ ಲಭ್ಯವಿದ್ದು ಕಳೆದ ಆವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿ ತಂತ್ರಾಂಶವನ್ನು ಇನ್ನೂ ಉತ್ತಮಪಡಿಸಿದ್ದುಂಟು. ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ಹೊಸ ಆವೃತ್ತಿ ಸಂಪೂರ್ಣ ನವೀಕೃತ ಶೈಲಿಯಲ್ಲಿ ಆಂಡ್ರಾಯ್ಡ್ ಮೊಬೈಲುಗಳಿಗೆ ಲಭ್ಯವಾಗಲಿದೆ.

ಸಂಪದಕ್ಕೆ ಜೊತೆಯಾಗಿ ಎಷ್ಟೋ ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಪ್ಲಾನೆಟ್ ಕನ್ನಡ ಈಗ ಮತ್ತೆ ಓದುಗರಿಗೆ (ಕಳೆದ ವರ್ಷದಿಂದ ಪ್ರಾರಂಭಿಸಿ) ಲಭ್ಯವಾಗಿದೆ. ಈ ಯೋಜನೆ ಕೂಡ ಮೊಬೈಲ್ ಆಪ್ ರೂಪದಲ್ಲಿ ಆಂಡ್ರಾಯ್ಡ್ ಫೋನುಗಳಿಗೆ ಲಭ್ಯವಾಗಿಸಿದ್ದೇವೆ.

ಇದೆಲ್ಲದರ ನಡುವೆಯೂ ಮುಂಚಿನಷ್ಟು ಚಟುವಟಿಕೆ ಇಲ್ಲ ಎಂಬುದು ಎಲ್ಲರ ಗಮನಕ್ಕೂ ಬರುವ ವಿಷಯವೇ. ಇದಕ್ಕೆ ಕಾರಣಗಳು ಹಲವು. ಆದರಲ್ಲಿ ಪ್ರಮುಖ ಕಾರಣಗಳು ಎರಡು. ಮೊದಲನೆಯದಾಗಿ - ಫೇಸ್ಬುಕ್. ಫೇಸ್ಬುಕ್ ಬಂದಾಗಿನಿಂದ ಕನ್ನಡಿಗರ ಚಟುವಟಿಕೆಯನ್ನೆಲ್ಲ ಅದು ತನ್ನತ್ತ ಸೆಳೆದುಕೊಂಡುಬಿಟ್ಟಿದೆ. ಸಂಪದದಂತಹ ಪುಟ್ಟ ಯೋಜನೆಯೊಂದಕ್ಕೆ ಫೇಸ್ಬುಕ್ ನೀಡಬಹುದಾದ ಸವಲತ್ತುಗಳನ್ನು ನೀಡುವುದು ಕಷ್ಟವೇ. ಎರಡನೆಯದಾಗಿ ಮುಂಚೆ ಸಂಪದದ ಕಡೆ ನಿತ್ಯ ಗಮನಹರಿಸುತ್ತಿದ್ದ ನನಗೂ ಸಂಪದಕ್ಕಾಗಿ ಇತ್ತೀಚೆಗೆ ವೃತ್ತಿ ಜೀವನದ ನಡುವೆ, ಇತರ ಜವಾಬ್ದಾರಿಗಳ ನಡುವೆ ಸಮಯ ತೆಗೆದಿಡುವುದೇ ಕಷ್ಟವಾಗುತ್ತಿದೆ.

ಆದರೆ ಬರುವ ದಿನಗಳಲ್ಲಿ ಮತ್ತೊಮ್ಮೆ ಸಂಪದಕ್ಕೆ ಇನ್ನಷ್ಟು ಜೀವ ತುಂಬುವ ಉದ್ದೇಶದಿಂದ ಕೆಲವೊಂದು ಹೊಸ ಹೆಜ್ಜೆಗಳನ್ನು ಇಡುವತ್ತ ಮನಸ್ಸಿದೆ. ಆದರೆ ಎಂದಿನಂತೆ ಕಠಿಣ ಸವಾಲುಗಳು ನಮ್ಮ ಎದುರಿವೆ. ಇದಕ್ಕೊಂದು ಹೊಸ ರೂಪ ಕೊಡಬೇಕೆಂದು ಆಲೋಚಿಸುವಾಗ ನನಗೆ ಹೆಚ್ಚಿನಂತೆ ಪ್ರಶ್ನೆಗಳೇ ಕಾಡುತ್ತವೆ.

ನಿಮ್ಮೆಲ್ಲರ ಅನಿಸಿಕೆ ಏನು? ಹೆಚ್ಚು ಖರ್ಚಾಗದ ರೀತಿಯಲ್ಲಿ ಸಂಪದವನ್ನು ಮತ್ತೊಮ್ಮೆ ಹೆಚ್ಚಿನ ಚಟುವಟಿಕೆಗಳ ತಾಣವನ್ನಾಗಿಸಲು ಏನು ಮಾಡಬಹುದು? ಬರೆದು ತಿಳಿಸಿ! ಸಂಪದವನ್ನು ಮತ್ತೊಮ್ಮೆ ಮುಂಚಿನಂತಾಗಿಸಲು ನಿಮ್ಮೆಲ್ಲರ ಸಹಾಯವೂ ಅತ್ಯಗತ್ಯ!

Comments

Submitted by nageshamysore Sat, 01/17/2015 - 18:30

ಹರಿಪ್ರಸಾದ್ ನಮಸ್ಕಾರ. ಸಂಪದವನ್ನು ಮುಂದುವರೆಸಿಕೊಂಡು ಹೋಗುವುದು ಕನ್ನಡದ ದೃಷ್ಟಿಯಿಂದ ತುಂಬಾ ಮುಖ್ಯ. ಆದರೆ ಆರ್ಥಿಕ ದೃಷ್ಟಿಯಿಂದ ಇದೊಂದು ಬೃಹತ್ ಸಾಹಸವೆ ಸರಿ. ಈಗಿರುವ ಬರಿಯ 'ಸಹಕಾರಿ ಬಿಸಿನೆಸ್ ಮಾಡೆಲಿನಲ್ಲಿ' ದೊರಕಬಹುದಾದ ಸಾಧ್ಯತೆಗಳು ತುಂಬಾ ಕಡಿಮೆ. ಆದರೆ ಒಂದು ಆಲೋಚನೆಯನ್ನು ಕಾರ್ಯಗತಗೊಳಿಸಿದರೆ ಸ್ವಲ್ಪ ಆದಾಯದ ಒಂದು ಮೂಲವನ್ನು ಹುಟ್ಟು ಹಾಕಬಹುದೆಂದು ಕಾಣುತ್ತದೆ (ನನ್ನ ವೈಯಕ್ತಿಕ ಅನಿಸಿಕೆ). ಅದರ ಸ್ಥೂಲ ವಿವರ ಹೀಗಿದೆ : ಆನ್ ಲೈನಿನಲ್ಲಿ ಎಷ್ಟೆ ಪ್ರಕಟವಾದರೂ ಕಾಗದದ ಮಾಧ್ಯಮದಲ್ಲಿ ಅಥವಾ ಪುಸ್ತಕದ ರೂಪದಲ್ಲಿ ಮಾತ್ರ ಓದುವ ಓದುಗ ಬಳಗ ಇನ್ನೂ ಸಾಕಷ್ಟು ದೊಡ್ಡದಿದೆ. ಹೀಗಾಗಿ ಸಂಪದದ ಎಷ್ಟೊ ಸಾಧನೆಗಳು ಆ ಬಳಗದತ್ತ ಹೋಗುತ್ತಿಲ್ಲ. ನಮ್ಮಲ್ಲಿ ಬರೆಯುವ ಎಷ್ಟೊ ಜನರ ಮನದಲ್ಲಿ ನಮ್ಮ ಬರಹಗಳನ್ನು ಪುಸ್ತಕವಾಗಿಸಬಾರದೆ? ಎನ್ನುವ ಆಸೆಯಂತೂ ಇದ್ದೆ ಇರುತ್ತದೆ. ಆ ಆಶಯಕ್ಕೂ ಯಾಕೆ ಸಂಪದ ಸೂಕ್ತ ವೇದಿಕೆ ಆಗಬಾರದು? ಪುಸ್ತಕ ಮಾಡುವ ಆಸೆಯಿದ್ದವರು ಆ ಮುದ್ರಣದ ವೆಚ್ಚವನ್ನು ಭರಿಸಲು ಸಿದ್ದರಿರಬೇಕು. ಅದನ್ನು ಪ್ರಕಟಿಸುವ ವೇದಿಕೆಯಾದ ಸಂಪದಕ್ಕೂ ಅದರಲ್ಲಿ ಒಂದು ಪಾಲು ಸೇರಬೇಕು. ನಂತರ ಸಂಪದ ಸೂಕ್ತ ಮಾರ್ಕೆಟಿಂಗ್ ಮತ್ತು ಮಾರಾಟಗಾರರ ಜತೆ ಒಪ್ಪಂದವನ್ನೇರ್ಪಡಿಸಿಕೊಂಡರೆ, ಆ ಮೂಲಕ ಪುಸ್ತಕಗಳ ಬಿಡುಗಡೆ, ಬಿಕರಿಯನ್ನು ನಿಭಾಯಿಸಿಕೊಳ್ಳಬಹುದು. ಹೀಗೆ ಮಾರಾಟದಲ್ಲಿ ಬಂದ ಹಣದ ಭಾಗಾಂಶ ಸಂಪದಕ್ಕೆ ಸೇರಿದರೆ ಮಿಕ್ಕ ಭಾಗ ಲೇಖಕನಿಗೆ ಸೇರುವಂತಾಗಬೇಕು (ಮಾರಾಟಗಾರನ ಕಮೀಷನ್, ತೆರಿಗೆ ಇತ್ಯಾದಿ ಕಳೆದ ನಂತರ). ಪುಸ್ತಕ ಚೆನ್ನಾಗಿದ್ದು ಖರ್ಚಾದರೆ ಲೇಖಕನಿಗು ಹಾಕಿದ ಹಣ ಹಿಂದೆ ಬರುವ ದಾರಿಯಾಗುತ್ತದೆ (ಮತ್ತು ಸಂಪದಕ್ಕೆ ಭಾಗಾಂಶ). ಬಿಕರಿಯಾಗದೆ ನಷ್ಟವಾದಲ್ಲಿ ಅದು ಲೇಖಕನೆ ಭರಿಸಬೇಕಾಗಿ ಬಂದರೂ ಪುಸ್ತಕವಾದ ತೃಪ್ತಿ ಮತ್ತು ಪ್ರಯತ್ನಿಸಿದ ತೃಪ್ತಿ ಸಿಗುತ್ತದೆ - ಕನ್ನಡದ ಸೇವೆಯ ಜತೆಗೆ. ಒಬ್ಬ ಸಂಪದಿಗ ವ್ಯಕ್ತಿಯಾಗಿ ಮಾಡಲು ಕಷ್ಟವಾಗುವ ಕಾರ್ಯ ಸಂಪದದ ಮೂಲಕ ಸುಲಭವಾಗಿ ಆಗುತ್ತದೆ. ಬರಿಯ ಕಾಗದದ ಪ್ರತಿ ಮಾತ್ರವಲ್ಲದೆ, ಎಲೆಕ್ಟ್ರಾನಿಕ್ ಪ್ರತಿ ಮಾಡಿ ಮಾರುವುದನ್ನು ಜತೆಗೆ ಸೇರಿಸಿಕೊಳ್ಳಬಹುದು. ಫೇಸ್ಬುಕ್, ಟ್ವಿಟ್ಟರುಗಳೂ ಮಾರ್ಕೆಟಿಂಗ್ ಮಾಧ್ಯಮಗಳಾಗಿ ಬಳಕೆಯಾಗಬಹುದು.

ಈ ರೀತಿಯದೆ ಬೇರೆ ಐಡಿಯಾಗಳೂ ಇರಬಹುದು. ಚೆನ್ನಾದವನ್ನೆಲ್ಲ ಸೇರಿಸಿ ಅಳವಡಿಸಿಕೊಂಡರೆ ಚಟುವಟಿಕೆ ಹೆಚ್ಚಿಸುವ ಸಾಧ್ಯತೆ ಇದೆಯೆಂದು ನನ್ನ ಭಾವನೆ. ಉದಾಹರಣೆಗೆ - ಪುಸ್ತಕವಾಗಿಸುವ ಸಾಧ್ಯತೆ ಹೆಚ್ಚೆಚ್ಚು ಜನರನ್ನು ಆಕರ್ಷಿಸಬಹುದು.

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by venkatb83 Tue, 01/20/2015 - 12:19

In reply to by nageshamysore

+1

6 ವರ್ಷ 2 ತಿಂಗಳುಗಳಿಂದ ಸಂಪದದಲ್ಲಿ ನಾ ಇರುವೆ ..ಮಧ್ಯೆ ಮಧ್ಯೆ ಕೆಲ ಬರ್ಹಗಳ-ಹಾಗೂ ಹೆಚ್ಚಾಗಿ ಪ್ರತಿಕ್ರಿಯೆಗಳ ಮೂಲಕ ಸಕ್ರಿಯನಾಗಿದ್ದೆ ... ನವಜಾತ ಶಿಶು ಬೆಳೆದು ಅದಕ್ಕೆ ಮಾತು -ನಡೆಯುವುದು ಕಲಿಸುವ ಪೋಷಕರ -ಬಂಧುಗಳ ಅಗತ್ಯ ಇರುವ ಹಾಗೆ -ನಮ್ಮಂತ ಕಿರಿ-ಮರಿ ಅಂಬೆಗಾಲಿಡುವ ಬರಹಗಾರರಿಗೆ ಉತ್ತಮ ವೇದಿಕೆ ಆಗಿದ್ದು -ಓದುಗ ಬರ್ಹಗಾರ ಎರಡೂ ಪಾತ್ರ ನಿಭಾಯಿಸುವ ಆಯ್ಕೆ ಕೊಟ್ಟಿದ್ದು ನಮ್ಮೀ ಪ್ರೀತಿಯ ಸಂಪದ...ಆಯಾಯ ಕಾಲಕ್ಕೆ ತಕ್ಕಂತೆ -ಓದುಗರ ಮನೋಭಿಲಾಷೆಗೆ ತಕ್ಕ ಹಾಗೆ ಕೆಲ ಬದಲಾವಣೆಗಳು ನಿರಂತರವಾಗಿ ನಡೆದವು-ನಡೆಯುತ್ತಲಿವೆ...

ಫೇಸ್‌ಬುಕ್ -ವಾಟ್ಸ್ ಆಪ್ , ಟ್ವಿಟ್ಟರ್ ಅಲಿ ಬಾಬಾ ತರಹದ ವಿದೇಶೀ ದೈತ್ಯ ಅಂತರ್ಜಾಲ ಕಂಪನಿಗಳ ಹಾಗೆ ಎಲ್ಲ ವಿಧವಾದ ಸೇವೆ ಒದಗಿಸಲು ದೇಶೀ ಅಂತರ್ಜಾಲ ತಾಣಗಳಿಗೆ ಕಸ್ಟ ಸಾದ್ಯ ಕೆಲ್ಸ..ಆ ದೈತ್ಯ ಕಂಪನಿಗಳಿಗೆ ಅದು ವ್ಯಾಪಾರ -ಅಲ್ಲಿ ಹಣಕಾಸಿಗೆ ಬೆಲೆ ..!! ಆದರೆ ನಿಮ್ಮದು ಕನ್ನಡಮ್ಮನಿಗೆ -ಕನ್ನಡ ಸಾಹಿತ್ಯಕ್ಕೆ ಉಚಿತ ಸೇವೆ ,ಸಂಪದ - ಓದುಗ ಬರಹಗಾರರ ಮಧ್ಯೆ ಸ್ನೇಹ ಸೇತು ..ಆಗಾಗ ಸಂಪದ ನಿರ್ವಹಣೆಯಲ್ಲಿದ್ದಾಗ ನಾ ಹೇಗೆ ಚಡಪಡಿಸಿದ್ದೆ ಎನ್ನುವ್ದು ಎಲ್ಲರೊಡನೆ ಹಂಚಿಕೊಂಡಿರುವೆ...
ದೈನಂದಿನ ತಿಂಡಿ ಊಟ ಆಹಾರ ವಿಹಾರದ ಹಾಗೆ ಸಂಪದ ಸಹಾ ನನ್ನ ದಿನಚರಿಯ ಒಂದು ಭಾಗ....ಅಂದೂ ಇಂದೂ ಮುಂದೂ...
ಇನ್ನೂ ಸಂಪದವನ್ನೂ ಇನ್ನಸ್ಟು ಜನರನ್ನು ತಲುಪಿಸಲು -ಇದರ ವ್ಯಾಪ್ತಿ ವಿಸ್ತರಿಸಲು ಮಾನವ -ಆರ್ಥಿಕ ಸಂಪನ್ಮೂಲದ ಅವಶ್ಯಕತೆ ಖಂಡಿತ ಇರುತ್ತೆ ,ಈ ಹಿಂದೆ ಹಿರಿಯರಾದ ಸ್ವರ ಕಾಮತ್ ಸಾರ್ ಹೇಳಿದ ಹಾಗೆ ಸಂಪದ ಓದುಗರಿಂದಲೇ ಹಣ ಸಂಗ್ರಹಿಸುವ ವ್ಯವಸ್ಥೆ -ಅಥವಾ ನಾಗೇಶ್ ಅಣ್ಣಾ ಅವರು ಹೇಳಿದ ಹಾಗೆ ಇಲ್ಲಿ ಬರೆವ ಬರ್ಹಗಾರರ ಬಾರಹ್ಗಳನ್ನು ಪುಸ್ತಕ ರೂಪದಲ್ಲಿ -ಪಿ ಡಿ ಎಫ್ ತರಹ ಮಾಡಿ ಆನ್‌ಲೈನ್ ಆಫ್‌ಲೈನ್ ಓದುವ ಹಾಗೆ ಅದಕ್ಕೆ ತಕ್ಕ ಮಟ್ಟಿಗೆ ಶುಲ್ಕ ವಿಧಿಸಿದರೆ ಅದೂ ಆದೀತು ...
ಕೆಂಡ ಸಂಪಿಗೆ ಸ್ಥಗಿತ ಆಗಿದ್ದು ಈಗಲೇ ಗೊತಾಗಿದ್ದು ... ಈ ಹಿಂದೆ ಮೊದಲಿಗೆ ಸಂಪದ ನಂತರ ವಿಸ್ಮಯನಗರಿ -ಕೆಂಡ ಸಂಪಿಗೆ, ಪಂಜು ಇತ್ಯಾದಿ ಓದುತ್ತಿದ್ದೆ... ಒಂದು ಅಂತರ್ಜಾಲ ತಾಣ ನಡೆಸಲು ತಾಂತ್ರಿಕ ಮಾನವ ಸಂಪನ್ಮೂಲ ಹಾಗೂ ಹೆಚ್ಚುವ ಓದುಗ ಬರಹಗಾರರ ಬರ್ಹಗಳ ಹೊರೆ ಹೊರಲು ಸರ್ವರ್‌ಗಳ -ಅವಶ್ಯಕತೆ ಇರುವುದು-ಅದಕ್ಕೆ ಬಲು ಖರ್ಚು ಬರುವುದುೀದೆಲ್ಳವನ್‌ನೂ ಗಮನಕ್ಕೆ ತಂದುಕೊಂಡು ಕೆಲ ಅನಾವಶ್ಯಕ ಬರಹಗಳನ್ನು ಬರೆಯದೆ -ಅನಾವಶ್ಯಕ ಪ್ರತಿಕ್ರಿಯೆ ಹಾಕದೆ ತಟಸ್ತವಾದೆ...!!!
ಸಂಪದ ಸದಾ ಕಂಪು ಬೀರಲು ನಿಮ್ಮ ನಮ್ಮೆಲ್ಲರ ಸಹಕಾರದ ಅಗತ್ಯ ಇದೆ ...ಎಂದಿನಂತೆ ಓದುಗರು ಜೊತೆಯಾಗುವರು ಎಂಬ ನಂಬುಗೆ ನನದು..ಈ ತರ್ಹದ ವಿಷ್ಯದಲ್ಲಿ ನಾ ನಿಮ್ಮೊಡನಿರುವೆ..

ಶುಭವಾಗಲಿ

\|/

Submitted by partha1059 Mon, 01/19/2015 - 11:11

ಸಂಪದ ನಿಂತುಹೋಯಿತಲ್ವೆ ?
ಹೇಗೆ ಕೇಳಿದರು ಈ ಪ್ರಶ್ನೆಯನ್ನು. ನಂತರ ಅವರ ಪ್ರತಿಕ್ರಿಯೆ ’ಹಾಗಾದರೆ ನೋಡಬೇಕು’
ಇದೆಂತ ವಿಚಿತ್ರ, ಅಲ್ಲಿಗೆ ಅವರು ಸಂಪದದಲ್ಲಿ ಸಕ್ರಿಯರಾಗದೆ ಅವರಾಗಿಯೆ ಊಹಿಸಿಕೊಂಡಿದ್ದಾರೆ ಸಂಪದ ಇಲ್ಲ ಅಂತ
ಈಗಿನ ಬಹುತೇಕರ ಮಾತು ಹೀಗೆ ತಾವು ಯಾವದರಲ್ಲಿ ಅಜ್ಞಾನಿಗಳೊ ತಮಗೆ ಯಾವುದರಲ್ಲಿ ಆಸಕ್ತಿ ಇಲ್ಲವೋ ಆ ವಿಷಯದ ಬಗ್ಗೆ ಮಾತನಾಡಿ ತಮ್ಮ ಜ್ಞಾನ ಪ್ರದರ್ಶಿಸುವುದು.
ಸಂಪದ ಸತ್ತಿಲ್ಲ, ಸಾಯುವುದೂ ಇಲ್ಲ .
ಪ್ರತಿಯೊಂದು ಜೀವಕ್ಕು ಬದಲಾವಣೆಯ ಸ್ಥಿತಿ ಅನ್ನುವುದು ಇರುತ್ತದೆ. ಅಂತಹ ಬದಲಾವಣೆಯ ಪರ್ವದಲ್ಲಿ ಸಂಪದ ಹಾದು ಹೋಗುತ್ತಿದೆ.
ಎಂತಹ ಪ್ರವಾಹಬಂದು ನದಿಗಳು ಉಕ್ಕಿ ಹರಿದರು ನಂತರ ಶಾಂತವಾದ ನದಿಯ ಹರಿವು ಇದ್ದೆ ಇರುತ್ತದೆ.
ನೀವೇ ತಿಳಿಸಿದಂತೆ
ಫೇಸ್ ಬುಕ್ ಹಾಗು ಇತರೆ ಸಾಮಾಜಿಕ ಜಾಲತಾಣಗಳು ಸಂಪದದ ಚಟುವಟಿಕೆಗೆ ಹಾನಿ ಮಾಡಿದೆ ಎಂದು.
ಪೇಸ್ ಬುಕ್ಕಿನಲ್ಲಿ ನಿಜಕ್ಕೂ ಸಂಪದದಲ್ಲಿ ಆಗುತ್ತಿರುವ ರೀತಿಯ ಸಾಹಿತ್ಯ ಚಟುವಟಿಕೆ ಸಾದ್ಯವೇ ಇಲ್ಲ
ಅಲ್ಲಿ ಸ್ಟೇಟಸ್ ನಲ್ಲಿ ಎಲ್ಲವು ಚುಟುಕು, ಎರಡನೆ ಸಾಲಿನ ನಂತರ ನೀವು ಏನಾದರು ಬರೆದಿದ್ದರೆ ಓದದೆ ಸ್ಕ್ರೋಲ್ ಮಾಡುತ್ತಾರೆ. ಅಲ್ಲಿ ಏನಿದ್ದರು ಅವರವರ ಮನದ ಗೊಂದಲ, ಮತ್ತೊಬ್ಬರ ಬಗ್ಗೆ ದೂರು ದುಮ್ಮಾನಗಳು, ಮತ್ತೊಬ್ಬರನ್ನು ಸದಾ ನಿಂದಿಸುವ ರಾಜಕೀಯವಷ್ಟೆ ಹೆಚ್ಚು. ಅಲ್ಲಿರುವೆ ಕೆಲವು ಶುದ್ದ ಸಾಹಿತ್ಯಕ್ಕೆ ಅಷ್ಟೆ ಮೀಸಲಾದ ಕೆಲವು ಕನ್ನಡ ಗುಂಪುಗಳನ್ನು ಹೊರತುಪಡಿಸಿದರೆ, ಸಂಪದಕ್ಕೂ ಪೇಸ್ ಬುಕ್ಕಿಗೂ ಹೋಲಿಕೆಯೇ ಇಲ್ಲ
ಈಗಲು ಹೇಳುತ್ತೇನೆ ಸಾಹಿತ್ಯಾಸಕ್ತಿಯಿಂದ ಬರೆಯುವ, ಹಾಗು ಮನಸಿನ ಪ್ರತಿಕ್ರಿಯೆಗಳನ್ನು ದಾಖಲಿಸುವದಕ್ಕೆ ಸಂಪದವೇ ಸೂಕ್ತ ವೇದಿಕೆ. ಇಲ್ಲಿ ಮನಸನ್ನು ಬಿಚ್ಚಿ ಹರವಿದಷ್ಟು ಸುಲಲಿತವಾಗಿ ಅಲ್ಲಿ ಸಾದ್ಯವಿಲ್ಲ.
ಸಂಪದ ಎಂದಿದ್ದರೂ ’ಸಂಪದ’ವೇ
ಸಂಪದದ ಉಗಮದ ನಂತರ ಇಷ್ಟೂ ದೀರ್ಘಕಾಲವು ಅದಕ್ಕೆ ವಾಣಿಜ್ಯೀಕರಣದ ವಾಸನೆಯಿಲ್ಲ,
ಶುದ್ದ ಸಾಹಿತ್ಯದ ಸೊಗಡಿದೆ
ಮತ್ತು ಅದೇ ಅದರ ವಿಶಿಷ್ಟ ಗುಣ ಹಾಗು ಆಕರ್ಷಣೆ
ಸಂಪದದ ನಡೆ ಸತತ , ಅದಕ್ಕೆ ಕಾಲವೇ ಸಾಕ್ಷಿಯಾಗಬಲ್ಲದು.

Submitted by swara kamath Mon, 01/19/2015 - 12:57

ಶ್ರೀಯುತ ಹರಿ ಪ್ರಸಾದರೆ ತಮ್ಮ ಈ ಲೇಖನ ಓದುತ್ತಿದ್ದಂತೆ ಮನಸ್ಸಿಗೆ ಕೊಂಚ ನೋವಾಯಿತು.ಸದ್ಯ "ಸಂಪದ"ಕ್ಕೆ
ತಾವು ವಿದಾಯ ಹೇಳಲಿಲ್ಲ ಎಂಬುದೇ ನೆಮ್ಮದಿಯ ವಿಶಯ.
ನಿಮ್ಮ ದೈನಿಕ ಕಾರ್ಯಗಳ ನಡುವೆ ನೀವು ಬೆಳಸಿದ ಈ ಅಂತರ್ಜಾಲದ ತಾಣಕ್ಕೆ ಆಸಂಖ್ಯ ಓದುಗರು ಅದನ್ನು ಪೋಶಿಸಿ ಅದರಲ್ಲೇ ಅನೇಕ ಹೊಸ ಹೊಸ ವಿಚಾರಗಳನ್ನು ವಿನಿಮಯ ಮಾಡಿಕೊಂಡು ಎಂದಿಗೂ ಬಿಡದ ಗಾಢ ನಂಟನ್ನು ಬೆಳಸಿಕೊಂಡಿದ್ದಾರೆ.ಹೀಗಿರುವಾಗ "ಸಂಪದ" ನಿಂತು ಹೋಯಿತೇ ಎಂದು ಕೇಳುವುದೇ ಎಷ್ಟು ಕರ್ಣಕಠೋರ ಮತ್ತು ಅಘಾತದ ವಿಶಯ ಎಂಬುವುದು ನಮಗೇ ಗೊತ್ತು.ಅದನ್ನು ಹುಟ್ಟು ಹಾಕಿದ ನಿಮಗೆ ಎಷ್ಟು ಬೇಸರವಾಗಬಹುದೆಂದು ನಾವು ಊಹಿಸಬಲ್ಲೆವು.
ಈ ತಾಣ ವನ್ನು ಮುಂದುವರೆಸಿಕೊಂಡು ಹೋಗಲು ಎಲ್ಲಾಓದುಗರ ಸಹಕಾರ ಜೊತೆಗೆ ಅದರ ನಿರ್ವಹಣಾ ವೆಚ್ಚವನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಲು ಸಹಾಯ ಹಸ್ತ ನೀಡುವುದು ಒಳಿತು ಎನಿಸುತ್ತದೆ.
ಫೆಸ್ ಬುಕ್ಕಿನಲ್ಲಿ ಇರುವಂತೆ ಲೇಖನಗಳಿಗೆ ಕಾಮೆಂಟನ ಜೊತೆಗೆ ಲೈಕ್ ಮಾಡುವ ಅವಕಾಶ ಕಲ್ಪಿಸುವುದು ಉತ್ತಮ.
ವಂದನೆಗಳು, ,ರಮೇಶ ಕಾಮತ್

Submitted by kavinagaraj Mon, 01/19/2015 - 14:32

ಹರಿಪ್ರಸಾದ ನಾಡಿಗರಿಗೆ ನಮಸ್ಕಾರ. ನಿಮ್ಮ ಶ್ರಮ ಅಭಿನಂದನೀಯವಾಗಿದೆ. ನೂರಾರು ಬರಹಗಾರರಿಗೆ ಪ್ರೇರಣೆ ಸಿಕ್ಕಿದೆ. ಕಳೆದ ಆರು ವರ್ಷಗಳಿಂದ ಸಂಪದದ ನಿರಂತರ ಸಂಪರ್ಕದಲ್ಲಿರುವ ನನಗೆ ಫೇಸ್ ಬುಕ್ಕಿನ ಜೊತೆಜೊತೆಗೇ ಸಂಪದಕ್ಕೂ ಭೇಟಿ ಕೊಡದಿದ್ದರೆ ಸಮಾಧಾನವಾಗುವುದಿಲ್ಲ. ನಿಮ್ಮ ಮನದಲ್ಲಿರುವ ಚಿಂತನೆಗಳ ಕುರಿತು, ಹೊಸ ಹೆಜ್ಜೆಗಳ ಕುರಿತು ಸಂಪದಿಗರೊಂದಿಗೆ ಹಂಚಿಕೊಳ್ಳಿ.

Submitted by anand33 Mon, 01/19/2015 - 15:55

In reply to by kavinagaraj

'ಕೆಂಡಸಂಪಿಗೆ' ಎಂಬ ಕನ್ನಡ ಜಾಲತಾಣ ಮುಂದುವರಿಸಿಕೊಂಡು ಹೋಗಲಾಗದೇ ಮುಚ್ಚಲ್ಪಟ್ಟಿರುವುದರ ಹಿನ್ನೆಲೆಯಲ್ಲಿ ಸಂಪದವೂ ನಡೆಯುತ್ತಿದೆಯೋ ಇಲ್ಲವೋ ಎಂಬ ಸಂಶಯದಿಂದ ಸಂಪದ ನಿಂತು ಹೋಯ್ತಲ್ಲವೇ ಎಂದು ಕೇಳಿರಬಹುದು ಎನಿಸುತ್ತದೆ. ಸಂಪದವನ್ನು ನಡೆಸಲು ತಗಲುತ್ತಿರುವ ಖರ್ಚು ಎಷ್ಟು ಎಂಬ ಬಗ್ಗೆ ಅಂದರೆ ಇದನ್ನು ನಡೆಸಲು ವಾರ್ಷಿಕವಾಗಿ ಅಥವಾ ತಿಂಗಳಿಗೆ ಎಷ್ಟು ವೆಚ್ಚ ಬರುತ್ತದೆ ಎಂದು ಓದುಗರ ಜೊತೆ ಹಂಚಿಕೊಳ್ಳುವುದು ಉತ್ತಮ ಎನಿಸುತ್ತದೆ. ಇಂಥ ಜಾಲತಾಣವನ್ನು ನಡೆಸಲು ಎಷ್ಟು ವೆಚ್ಚ ತಗಲಬಹುದು ಎಂಬುದರ ಬಗ್ಗೆ ಓದುಗರಿಗೆ ಅರಿವಿಲ್ಲ. ಆರ್ಥಿಕವಾಗಿ ಸಬಲರಾಗಿರುವ ಉತ್ತಮ ಆದಾಯ ಉಳ್ಳ ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗ ಸಾಫ್ಟ್ವೇರ್ ತಂತ್ರಜ್ಞರು ಇಂಥ ತಾಣದ ಖರ್ಚನ್ನು ಭರಿಸಲು ಮುಂದೆ ಬರುವುದು ಉತ್ತಮ ಎಂದು ನನ್ನ ಭಾವನೆ.

ಸಂಪದದಂಥ ವಿಶಿಷ್ಟ, ಬರಹಗಾರರು ತಮ್ಮ ಬರಹವನ್ನು ತಾವೇ ಅಂತರ್ಜಾಲದಲ್ಲಿ ಪ್ರಕಾಶಿಸುವ ಅವಕಾಶ ಇರುವ ಇನ್ನೊಂದು ಜಾಲತಾಣ ಕನ್ನಡದಲ್ಲಿ ಇಲ್ಲ. ಅಲ್ಲದೆ ಇದರಲ್ಲಿ ಇಂತಿ೦ಥ ಲೇಖನಗಳಿಗೇ ಸೀಮಿತ ಎಂಬ ಸಂಕುಚಿತ ಮನೋಭಾವವೂ ಇಲ್ಲ. ಬರೇ ಸಾಹಿತ್ಯ ಬರಹಗಳಿಗೆ ಜಾಲತಾಣಗಳು ಸೀಮಿತವಾಗಬಾರದು. ಜನಸಾಮಾನ್ಯರನ್ನು ಪ್ರಭಾವಿಸುವ ಎಲ್ಲ ತರದ ಲೇಖನಗಳಿಗೂ ಜಾಲತಾಣದಲ್ಲಿ ಅವಕಾಶ ಕೊಡುವುದು ಅಗತ್ಯ. ಇದನ್ನು ಮಾಡುತ್ತಿರುವ ಕನ್ನಡ ಏಕಮಾತ್ರ ಜಾಲತಾಣ ಸಂಪದ ಮಾತ್ರ. ಸಂಪಾದಕರ ಅಪ್ಪಣೆಗೆ, ಪ್ರಕಾಶಕರ ಮರ್ಜಿಗೆ ಕಾಯದೆ ಬರಹಗಾರರು ತಮ್ಮ ಬರಹವನ್ನು ತಾವೇ ಪ್ರಕಟಿಸಬಹುದಾದ ಇಂಥ ಜಾಲತಾಣವನ್ನು ನಡೆಸುತ್ತಿರುವುದು ಅಭಿನಂದನೀಯ.

ಫೇಸ್ಬುಕ್ ತಮ್ಮ ಬರಹಗಳನ್ನು ತಾವೇ ಪ್ರಕಟಿಸಬಹುದಾದರೂ ಅದರ ವ್ಯಾಪ್ತಿ ಬಹಳ ಸೀಮಿತ ಏಕೆಂದರೆ ಫೇಸ್ಬುಕ್ ಗುಂಪಿನಲ್ಲಿರುವವರಿಗೆ ಮಾತ್ರ ಅದನ್ನು ನೋಡಲು ಸಾಧ್ಯ ಹಾಗೂ ಉಳಿದವರಿಗೆ ಅದರ ಅರಿವು ಆಗುವ ಸಾಧ್ಯತೆ ಬಹಳ ಕಡಿಮೆ. ಸಂಪದ ಜಾಲತಾಣವಾಗಿರುವುದರಿಂದ ಇದನ್ನು ಎಲ್ಲರೂ ನೋಡಬಹುದು. ಹೀಗಾಗಿ ಇದರ ವ್ಯಾಪ್ತಿ ಬಹಳ ದೊಡ್ಡದು.

Submitted by bhalle Mon, 01/19/2015 - 20:26

ಸಣ್ಣ ಕಥೆಗಳು ಹುಟ್ಟಿಕೊಂಡ ಮಾತ್ರಕ್ಕೆ ಕಾದಂಬರಿಗಳು ನಿಂತವೇ? ದರ್ಶಿನಿಗಳು ಬಂದ ಮಾತ್ರಕ್ಕೆ ಕೂತುಣ್ಣುವ ಖಾನಾವಳಿಗಳು ನಿಂತವೇ? ೨೦-೨೦ ಬಂದ ಮಾತ್ರಕ್ಕೆ ಟೆಸ್ಟ್ ಮ್ಯಾಚುಗಳು ಅಳಿದವೇ? ಎಲ್ಲಕ್ಕೂ ಅದರದ್ದೇ ಆದ ಬೆಲೆ ಇದೆ ... ಫೇಸ್ಬುಕ್ ಎಂಬುದು ಗುಟುಕು ಕಾಫಿಯಂತೆ ... ಸಂಪದ ಸಂಪದವೇ ... ನಿಲ್ಲಬಾರದು ....ಇದು ನನ್ನ ಅನಿಸಿಕೆ ...

Submitted by partha1059 Tue, 01/20/2015 - 15:43

ಹರಿಪ್ರಸಾದ ನಾಡಿಗರೆ
ನೀವು ಹಾಕಿದ ಒಂದು ಬರಹಕ್ಕೆ ಎರಡು ದಿನ ಕಳೆಯುವದರಲ್ಲಿ ೫೦೦ ಮಿಕ್ಕಿದ ಹಿಟ್ಸ್
ಒಂಬತ್ತನೆ ಪ್ರತಿಕ್ರಿಯೆ
ಅಲ್ಲಿಗೆ ಎಲ್ಲರೂ ಸಂಪದವನ್ನು ಓದುತ್ತಲೆ ಇದ್ದಾರೆ .
ಪ್ರತಿಕ್ರಿಯೆಗಳು ಕಡಿಮೆ ಇರಬಹುದು ಅದಕ್ಕೆ ನಾನ ಕಾರಣಗಳು
ಸಂಪದ ಎಂದಿಗೂ ಎಲ್ಲರ ಮೆಚ್ಚಿನ ತಾಣ
ನಮಸ್ಕಾರಗಳೊಡನೆ
ಪಾರ್ಥಸಾರಥಿ

Submitted by H A Patil Wed, 01/21/2015 - 19:52

ಹರಿ ಪ್ರಸಾದ ನಾಡಿಗರವರಿಗೆ ವಂದನೆಗಳು
' ಸಂಪದ ನಿಂತು ಹೋಯಿತೆ ' ಎಂದು ತಾವು ಬರೆದ ಲೇಖನ ಒಂದು ಕ್ಷಣ ದಿಗ್ಭ್ರಮೆ ಹುಟ್ಟಿಸಿದ್ದು ಸುಳ್ಳಲ್ಲ. ನಾನೊಬ್ಬ ಸಾಮಾನ್ಯ ಕನ್ನಡ ಸಾಹಿತ್ಯಾಸಕ್ತ. ನನ್ನನ್ನು ಸುಮಾರು ಮೂರೂವರೆ ವರ್ಷಗಳ ಹಿಂದೆ ಸಂಪದ ಬ್ಲಾಗನ್ನು ಪರಿಚಯಿಸಿ ತಮ್ಮದೆ ಲ್ಯಾಪ್ ಟಾಪಿನಲ್ಲಿ ನನಗೂ ಬರೆಯಲು ಪ್ರತಿಕ್ರಿಯಿಸಲು ಅವಕಾಶ ಮಾಡಿ ಕೊಟ್ಟವರು ರಮೇಶ ಕಾಮತರವರು. ಪ್ರಾರಂಭಿಕ ಎರಡೂವರೆ ವರ್ಷ ನಾನು ಬಹಳ ಸಕ್ರಿಯವಾಗಿ ಸಂಪದದಲ್ಲಿ ತೊಡಗಿಕೊಂಡಿದ್ದೆ. ಪ್ರತಿನಿತ್ಯ ಸಂಪದಕ್ಕೆ ಬರುವುದು ಬರೆಯುವುದು ಮತ್ತು ಪ್ರತಿಕ್ರಿಯಿಸುವುದು ನನ್ನ ಕಾರ್ಯವಾಗಿತ್ತು. ಅದೊಂದು ಆನಂದಕರ ಕಾಲ ಘಟ್ಟ. ಇಳಿವಯದೆಡೆಗೆ ಸಾಗಿದ ಸಾಮಾನ್ಯನಾದ ನನಗೂ ಸಮಾನ ಅವಕಾಶ ಕೊಟ್ಟ ಸಂಪದ ಈಗ ಕಠಿಣ ಕಾಲದಲ್ಲಿರುವುದು ಸಂಪದಾಸಕ್ತರಿಗೆ ನೋವಿನ ಸಂಗತಿ. ಸಂಪದ ನಿಲ್ಲಿಸ ಬೇಡಿ ಓರ್ವ ಸಾಮಾನ್ಯ ಸದಸ್ಯರಾಗಿ ನಮ್ಮಂತಹವರು ಏನು ಮಾಡಬಹುದು ಎನ್ನುವುದನ್ನು ಹಂಚಿಕೊಳ್ಳಿ ಅದಕ್ಕೆ ನಾವು ಬಾಧ್ಯರಿದ್ದೇವೆ.

Submitted by abdul Fri, 01/30/2015 - 02:43

“ಸಂಪದ ನಿಂತು ಹೋಯಿತಲ್ವೆ” ಪ್ರಶ್ನೆಯಲ್ಲಿ ನಿಂತು ಹೋದರೆ ಒಳ್ಳೆಯದು, good riddance ಎಂಬ ಆಶಯ ಸ್ಪಷ್ಟವಾಗಿ ಕಾಣಲು ಸಿಗುತ್ತದೆ. ಈ ಮಾತನ್ನಾಡಿದವರಿಗೆ ಸಂಪದ ಆರಂಭಗೊಂಡ, ನಡೆದುಕೊಂಡ ಬಂದ ದಾರಿ, ಇವುಗಳ ಅರಿವು ಲವ ಲೇಶವೂ ಇಲ್ಲ ಅನ್ನೋದು ಸುಸ್ಪಷ್ಟ. ನಿನ್ನಿಂದ ಈ ಕೆಲಸ ಆಗಲ್ಲ ಬಿಡು ಎಂದು ಉತ್ಸಾಹದ ಮೇಲೆ ತಣ್ಣೀರೆರೆಚುವ ಜನರಿಗೆ ಅಮೋಘ ಕಿವುಡುತನ ಪ್ರದರ್ಶಿಸಿ ನಿಸ್ವಾರ್ಥ, ಉತ್ಸಾಹಿ ಯುವ ಜೀವವೊಂದು ಆರಂಭಿಸಿದ, ಸೊಗಸಾಗಿ ಸಾಕಾರಗೊಂಡ ಕಲ್ಪನೆ ಎಂದಿಗೂ ಮುಗಿಯದು. ಮುಗಿಯಲು ಬಿಡಲೂಬಾರದು.
ಸಂಪದ ನನಗೆ ಪರಿಚಯವಾಗಿದ್ದು ಹೇಗೆ ಎಂದು ಸರಿಯಾಗಿ ಗೊತ್ತಿಲ್ಲ ಆದರೂ ನನ್ನೊಳಗೆ ಬರಹಗಾರ ಎನ್ನುವ ವ್ಯಕ್ತಿ ಇದ್ದಾನೆ ಎನ್ನುವ ಪರಿಚಯ ಮಾಡಿಕೊಟ್ಟಿದ್ದು ಮಾತ್ರ ಸಂಪದ. ಆರಂಭದಲ್ಲಿ ನಾನು ಬರೆದ ಹಲವು ಸಾಧಾರಣ ಲೇಖನಗಳನ್ನು ಆಯ್ದ ಲೇಖನದಲ್ಲಿ ಹಾಕಿ ನನ್ನಲ್ಲಿ ಉತ್ಸಾಹ ಹುಮ್ಮಸ್ಸು ಸಂಪದ ತುಂಬದೆ ಇದ್ದಿದ್ದರೆ ಎಲ್ಲೋ ಮುದುಡಿ ಕೊಂಡು ಬಿದ್ದಿರುತ್ತಿದ್ದೆ. ದಿನ ಬೆಳಗಾದರೆ ಸಂಪದ ತೆರೆಯಲೇ ಬೇಕು ಎನ್ನುವಷ್ಟು ಗೀಳು, ಚಟ ಅಂಟಿ ಕೊಂಡು ಬಿಟ್ಟಿತ್ತು. ಟೈಮ್ಸ್ ಆಫ್ ಇಂಡಿಯಾ ತೆರೆಯುವ ಮುನ್ನವೇ ಸಂಪದ ಅನಾವರಣ ನನ್ನ ಲ್ಯಾಪ್ ಟಾಪ್ ತೆರೆಯ ಮೇಲೆ. ಮೊದ ಮೊದಲ ಲೇಖನಗಳು ಸಂಪದದ ಕೃಪೆಯಿಂದ (ಗ್ರೇಸ್ ಮಾರ್ಕ್ಸ್ ಥರ) ಆಯ್ದ ಲೇಖನಗಳಾದರೂ, ನಂತರ ಕೆಲವು ವಿಷಯಗಳ ಮೇಲೆ ಬರೆದ ಲೇಖನಗಳು ಮೆರಿಟ್ ಮೇಲೆ ಆಯ್ದ ಲೇಖನಗಳಾದವು. ದೊಡ್ಡ ಚರ್ಚೆ, ವಾಗ್ಯುದ್ಧಗಳೂ ನಡೆದವು. ಭಿನ್ನಾಭಿಪ್ರಾಯ ಇದ್ದಾಗ್ಯೂ ಭ್ರಾತೃತ್ವಕ್ಕೆ ಧಕ್ಕೆ ಒದಗಲಿಲ್ಲ. ‘ಹೊಸತರಲ್ಲಿ ಅಗಸ ಎತ್ತೆತ್ತಿ ಒಗೆದ’ ನಾಣ್ಣುಡಿ ನಿಜವಾಗಿಸಲೆಂಬಂತೆ, ಕೆಲವೊಮ್ಮೆ, ಉತ್ಸಾಹ ಬೇರೆಡೆ ಹೊರಳುತ್ತಿತ್ತು. ಫೇಸ್ಬುಕ್ ಅಥವಾ ಟ್ವಿಟ್ಟರ್ ನ ಪ್ರಭಾವ ಸಂಪದದ ಮೇಲೆ ಬೀಳಲಿಲ್ಲ. ಟ್ವಿಟ್ಟರ್ ಫೇಸ್ಬುಕ್ ಆರಂಭ ಗೊಂಡ ಆರಂಭದಲ್ಲೇ ನಾನು ನೊಂದಾಯಿಸಿ ಕೊಂಡಿದ್ದೆ. ಇದನ್ನು ಹೇಳಿದ ಉದ್ದೇಶ ಹರಿ ಹೇಳಿದಂತೆ ಫೇಸ್ ಬುಕ್ ನಿಂದಾಗಿ ಸಂಪದ ಸೊರಗಲಿಲ್ಲ. ಸೊರಗಿದ್ದು ಏಕೆ ಎಂದರೆ, ನನಗೆ ನಿಮಗೆ ಚಿರಪರಿಚಿತ ಜಾಯಮಾನದ ಕಾರಣ..

ಶಿಸ್ತಿನ ಕೊರತೆ ಮತ್ತು ಸೋಮಾರಿತನ. ಶಾಂತಿ ಶಿಸ್ತು ಎಂದು ಗಂಟಲು ಕಿತ್ತು ಬರುವ ಹಾಗೆ ಅರಚುವ ನಮಗೆ ಇವೆರಡೂ ಮರೀಚಿಕೆಯಾದವು.

ಸಂಪದ ಕ್ಕೆ ಆಗಾಗ ಎದುರಾಗುವ ಸಮಸ್ಯೆಗಳ ಬಗ್ಗೆ ತುಂಬಾ ಹಿಂದೆಯೂ ಒಂದೆರಡು ಸಲ ಚರ್ಚೆ ನಡೆದಿದ್ದಿದೆ. ಆರ್ಥಿಕವಾಗಿ ಸಹಾಯ ಮಾಡಲು ನಾನು ಸಿದ್ಧ ಎಂದು ಹರಿಯವರಿಗೆ ಪ್ರತಿಕ್ರಿಯೆ ಮೂಲಕವೂ, ಮಿಂಚಂಚೆ ಮೂಲಕವೂ ಹಲವು ಕೇಳಿದ್ದೆ. ತಕ್ಕ ಪ್ರತಿಕ್ರಿಯೆ ಬರಲಿಲ್ಲ. ತಾಂತ್ರಿಕವಾಗಿ ಸಹಾಯ ಮಾಡುವಂಥ ವಿದ್ಯಾಭ್ಯಾಸ ನನ್ನಲ್ಲಿಲ್ಲ. ಈಗಲೂ ನನ್ನ ಶ್ರಮ ಮೀರಿ ಆರ್ಥಿಕ ಸಹಾಯ ಮಾಡೋ ಇರಾದೆ ಇದೆ. ನನ್ನ ಮೇಲ್ ವಿಳಾಸ ಹರಿಯವರಲ್ಲಿ ಇದೆ. ಟ್ವಿಟ್ಟರ್ ನಲ್ಲೂ ಆಗಾಗ ಸಿಗುತ್ತಾರೆ.
“ನಮ್ಮಲ್ಲಿ ಬರೆಯುವ ಎಷ್ಟೋ ಜನರ ಮನದಲ್ಲಿ ನಮ್ಮ ಬರಹಗಳನ್ನು ಪುಸ್ತಕವಾಗಿಸಬಾರದೆ ಎನ್ನುವ ಆಸೆ.....” ನಾಗೇಶ್ ರವರ ಈ ಸಲಹೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಇದೊಂದು ಸುಂದರ ಸಲಹೆ. ಮನದೊಳಗೆ ಒಂದು ಆಸೆ ಕೂಡಾ, ನನ್ನ ಪುಸ್ತಕವೂ ಯೋಗ್ಯತೆ ಕಂಡುಕೊಳ್ಳಲಿ ಎನ್ನುವ ಅಭಿಲಾಷೆ.
ಸಂಪದ ಸಮಸ್ತ ಕನ್ನಡಿಗರ ಕಣ್ಮಣಿ ಯಾಗಲಿ. ಲವಲೇಶವೂ ದುರಾಸೆಯ ಅಥವಾ ಲೋಭ, ಲಾಭದ ಉದ್ದೇಶ ಇಟ್ಟುಕೊಂಡಿರದ ಯುವ ಉದ್ಯಮಿಯ ಪ್ರಯತ್ನ ಕನ್ನಡ ಭಾಷೆ ಇರುವವರೆಗೂ ಜೀವಂತ ವಾಗಿರಲಿ ಎನ್ನುವ ಅದಮ್ಯ ಆಸೆ, ಭರವಸೆ ವ್ಯಕ್ತಪಡಿಸುತ್ತಾ...ಅಬ್ದುಲ್.

Submitted by abdul Fri, 01/30/2015 - 12:14

In reply to by abdul

ನನ್ನ ಪ್ರತಿಕ್ರಿಯೆ ಪೂರ್ತಿಯಾಗಿ ಪ್ರಕಟಗೊಳ್ಳಲಿಲ್ಲ, ಗಾತ್ರದ ಕಾರಣ ಇರಬೇಕು. ಕೆಳಗಿದೆ ಮೇಲಿನ ಪ್ರತಿಕ್ರಿಯೆಯ ಬಾಕಿ....

ಸಂಪದ ಕ್ಕೆ ಆಗಾಗ ಎದುರಾಗುವ ಸಮಸ್ಯೆಗಳ ಬಗ್ಗೆ ತುಂಬಾ ಹಿಂದೆಯೂ ಒಂದೆರಡು ಸಲ ಚರ್ಚೆ ನಡೆದಿದ್ದಿದೆ. ಆರ್ಥಿಕವಾಗಿ ಸಹಾಯ ಮಾಡಲು ನಾನು ಸಿದ್ಧ ಎಂದು ಹರಿಯವರಿಗೆ ಪ್ರತಿಕ್ರಿಯೆ ಮೂಲಕವೂ, ಮಿಂಚಂಚೆ ಮೂಲಕವೂ ಹಲವು ಕೇಳಿದ್ದೆ. ತಕ್ಕ ಪ್ರತಿಕ್ರಿಯೆ ಬರಲಿಲ್ಲ. ತಾಂತ್ರಿಕವಾಗಿ ಸಹಾಯ ಮಾಡುವಂಥ ವಿದ್ಯಾಭ್ಯಾಸ ನನ್ನಲ್ಲಿಲ್ಲ. ಈಗಲೂ ನನ್ನ ಶ್ರಮ ಮೀರಿ ಆರ್ಥಿಕ ಸಹಾಯ ಮಾಡೋ ಇರಾದೆ ಇದೆ. ನನ್ನ ಮೇಲ್ ವಿಳಾಸ ಹರಿಯವರಲ್ಲಿ ಇದೆ. ಟ್ವಿಟ್ಟರ್ ನಲ್ಲೂ ಆಗಾಗ ಸಿಗುತ್ತಾರೆ.
“ನಮ್ಮಲ್ಲಿ ಬರೆಯುವ ಎಷ್ಟೋ ಜನರ ಮನದಲ್ಲಿ ನಮ್ಮ ಬರಹಗಳನ್ನು ಪುಸ್ತಕವಾಗಿಸಬಾರದೆ ಎನ್ನುವ ಆಸೆ.....” ನಾಗೇಶ್ ರವರ ಈ ಸಲಹೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಇದೊಂದು ಸುಂದರ ಸಲಹೆ. ಮನದೊಳಗೆ ಒಂದು ಆಸೆ ಕೂಡಾ, ನನ್ನ ಪುಸ್ತಕವೂ ಯೋಗ್ಯತೆ ಕಂಡುಕೊಳ್ಳಲಿ ಎನ್ನುವ ಅಭಿಲಾಷೆ.
ಸಂಪದ ಸಮಸ್ತ ಕನ್ನಡಿಗರ ಕಣ್ಮಣಿ ಯಾಗಲಿ. ಲವಲೇಶವೂ ದುರಾಸೆಯ ಅಥವಾ ಲೋಭ, ಲಾಭದ ಉದ್ದೇಶ ಇಟ್ಟುಕೊಂಡಿರದ ಯುವ ಉದ್ಯಮಿಯ ಪ್ರಯತ್ನ ಕನ್ನಡ ಭಾಷೆ ಇರುವವರೆಗೂ ಜೀವಂತ ವಾಗಿರಲಿ ಎನ್ನುವ ಅದಮ್ಯ ಆಸೆ, ಭರವಸೆ ವ್ಯಕ್ತಪಡಿಸುತ್ತಾ...ಅಬ್ದುಲ್.

Submitted by ಗಣೇಶ Sun, 02/01/2015 - 23:42

In reply to by abdul

>>>ಶಿಸ್ತಿನ ಕೊರತೆ ಮತ್ತು ಸೋಮಾರಿತನ. ಶಾಂತಿ ಶಿಸ್ತು ಎಂದು ಗಂಟಲು ಕಿತ್ತು ಬರುವ ಹಾಗೆ ಅರಚುವ ನಮಗೆ ಇವೆರಡೂ ಮರೀಚಿಕೆಯಾದವು.
ನನ್ನ ಪ್ರಕಾರ ಸಂಪದಿಗರಲ್ಲಿ(ನಿಮ್ಮನ್ನೂ ಸೇರಿಸಿ) ಶಿಸ್ತಿನ ಕೊರತೆ, ಸೋಮಾರಿತನವಿಲ್ಲ. ಎಲ್ಲರೂ ತುಂಬಾ ಬಿಝಿ.. ಸಮಯದ ಅಭಾವವೇ ಮುಖ್ಯ ಕಾರಣ.

Submitted by lpitnal Sat, 01/31/2015 - 08:19

ಆತ್ಮೀಯ ಸಂಪದದ ಹರಿಯವರೆ, ಹಾಗೂ ಸಂಪದ ಅಭಿಮಾನಿ ಮಿತ್ರರೆ, ತಮಗೆಲ್ಲ ಹೃದಯತುಂಬಿದ ನಮಸ್ಕಾರ. ತಮ್ಮ ಸಂಪದದ ಕಾಳಜಿಗೆ ಮನ ಮೂಕವಾಯಿತು. ಅದರ ಶೀರ್ಷಿಕೆ ಓದಿ ಕೊಂಚ ಗಲಿಬಿಲಿಗೊಂಡೆ. ಅನೇಕ ಸಹೃದಯರು ತಿಳಿಸಿದಂತೆ ನನಗೂ ದಿಗಿಲಾಯಿತು. ಇಂತಹ ಒಂದು ಸಂಪೂರ್ಣ ಸಾಹಿತ್ಯಿಕ ಪತ್ರಿಕೆ ತನ್ನ ದಾರಿಯಲ್ಲಿ ನಡೆಯುವಲ್ಲಿ, ಎಡವದೇ ಇನ್ನೂ ಇನ್ನೂ ಗಾವುದ ಗಾವುದ ದೂರ ಸಾಗಬೇಕು. ಹರಿಯವರು ಅಂತಿಮವಾಗಿ ಅದರ ಉಳಿವಿಗೆ ಯಾವ ಯೋಜನೆ ಹಾಕಿಕೊಂಡರೂ ನಾನು ಖಂಡಿತ ಅವರೊಂದಿಗೆ ಇರುತ್ತೇನೆ. ಸಂಪದ ಚಿರಾಯುವಾಗಲಿ.