ಚಂದಿರನೆಂಬ ಇಂದಿರ ಗೊತ್ತ? (ಮಕ್ಕಳ ಪದ್ಯ)

ಚಂದಿರನೆಂಬ ಇಂದಿರ ಗೊತ್ತ? (ಮಕ್ಕಳ ಪದ್ಯ)

ಚಂದಿರನೆಂಬ ಇಂದಿರ ಗೊತ್ತ?
ನಿದಿರೆಯ ತುಂಬೊ ನಿಯ್ಯತ್ತಿನ ಗ್ರಾಸ್ತ
ಬೆಳ್ಳನೆ ಹಾಲಿನ ಬೆಳದಿಂಗಳ ಹುತ್ತ
ತಂಪೆರೆಯುತ ತೂಗುವ ಸವಲತ್ತ ! ||

ಬಾನಿನ ತುಂಬ ಬಣ್ಣದ ಗಿಲಕಿ
ಬೆಳ್ಳಂಬೆಳ್ಳಗೆ ತೆರೆದಿಟ್ಟ ಕಿಟಕಿ
ಕಟಕಿಯಾಡದೆ ಕಾರುತ ಸುಧೆಯ
ಸುರಿದಾಡಿ ಹೃದಯ ಚಂದ್ರೋದಯ ||

ಯಾರೊ ಬಿರಡೆಯ ತಿರುಗಿಸಿದವರು?
ನಿರಂತರ ಸುಖ ಹರಿದಂತೆ ಬೆವರು
ತೇಲಾಡಿದ ಸ್ವೇಚ್ಛೆ, ಸ್ವೈರ ವಿಹಾರ
ಕಂಡಲ್ಲೆ ಮನ ಕುಣಿದಾಡುವ ಕಾತರ ||

ದಿನದಿನವು ಬಹನು ಅವಸರವಿಲ್ಲ
ಕೃಶಕಾಯದಿಂದ ದೃಢಕಾಯ ಬಾಲ
ಹಿಗ್ಗುತ ಕುಗ್ಗುತ ನಿರಂತರ ಚಕ್ರ
ಕೃಷ್ಣಪಕ್ಷದಿಂ ಪೌರ್ಣಿಮೆಯ ಸೂತ್ರ ||

ವೃದ್ಧಿ ಕ್ಷಯಗಳಲಿ ಜೀವನ ಸೂತ್ರ
ಹುಟ್ಟು ಸಾವುಗಳ ನಿರಂತರ ಪಾತ್ರ
ನಿಯಮದ ಬದುಕಿಗೆ ಚಂದ್ರಮ ಸದಾ
ಹೆಗ್ಗುರುತಾಗಿಹನೆ ಆಗಸದ ಸಂಪದ || 

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by H A Patil Tue, 02/03/2015 - 20:41

ನಾಗೇಶ ಮೈಸೂರು ರವರಿಗೆ ವಂದನೆಗಳು
ಮಕ್ಕಳ ಪದ್ಯ ಚಂದಿರನೆಂಬ ಇಂದಿರ ಗೊತ್ತ ಕವನ ಸೊಗಸಾಗಿದೆ, ನಿಯತ್ತಿನ ಗ್ರಾಸ್ತ ಮತ್ತು ಬಣ್ಣದ ಗಿಲಕಿ ಪದಗಳು ಮಿಂಚು ಹರಿಸುತ್ತವೆ, ಓದಿ ಖುಷಿಯಾಯಿತು ಇವೆಲ್ಲ ಓದಿಗೆ ಇತ್ತೀಚೆಗೆ ಅಪರೂಪವಾಗುತ್ತಿರುವ ಪದಗಳು, ಕವನ ಮುದ ನೀಡಿತು ದನ್ಯವಾಗಳು.

Submitted by nageshamysore Wed, 02/04/2015 - 17:37

In reply to by H A Patil

ಪಾಟೀಲರೆ ನಮಸ್ಕಾರ. ನೀವು ಗುರುತಿಸಿದಂತೆ ಕೆಲವು ಪದಗಳು ಹಳೆ ಸೊಗಡಿನ ಕಂಪಿನವು ಮತ್ತು ಆಡು ಭಾಷೆಯಲ್ಲಿ ಹೆಚ್ಚು ಬಳಕೆಯಲ್ಲಿರುವವು. ಹೀಗೆ ನಡೆಯುತ್ತಿದ್ದಾಗ ಕಣ್ಣಿಗೆ ಬಿದ್ದ ಪೂರ್ಣಿಮ ಚಂದ್ರಮನ ಪ್ರೇರೇಪಣೆ ಪದಗಳಾಗಿ ಕುಣಿದಿದ್ದು ಹೀಗೆ. ತಮ್ಮ ಎಂದಿನ ಮೆಚ್ಚುಗೆ ಪ್ರತಿಕ್ರಿಯೆಗೆ ಧನ್ಯವಾದಗಳು :-)

Submitted by nageshamysore Wed, 02/04/2015 - 17:48

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನಿಮ್ಮ ಮತು ನಿಜ, ಬರೆದಾದ ಮೇಲೆ ಗಮನಿಸಿದೆ - ಆದರೆ ಬಿಜಿನೆಸ್ ಟ್ರಿಪ್ಪಿನ ನಡುವಲ್ಲಿರುವುದರಿಂದ ಮಾರ್ಪಡಿಸಿ, ತಿದ್ದಲು ಸಮಯವಾಗಲಿಲ್ಲ (ಹೋಟೆಲು ರೂಮಿನಲಿದ್ದಾಗ ಸಿಗುವ ವೈಫೈ ನಲ್ಲಿ ಮಾತ್ರ ಬರೆಯಲು ಸಾಧ್ಯವಿರುವ ಕಾರಣ). ಸುಮಾರು ದಿನದಿಂದ ಸಂಪದದಲ್ಲಿ ಬರೆಯಲಾಗಲಿಲ್ಲವೆಂಬ ಕಾರಣವೂ ಸೇರಿ, ಮೊದಲ ಆವೃತ್ತಿಯನ್ಬೆ ಪ್ರಕಟಿಸಿಬಿಟ್ಟೆ :-)