ಮಳೆಗಾಲಕೆ ಮೊದಲೆ ಕುಣಿವ ನವಿಲು

ಮಳೆಗಾಲಕೆ ಮೊದಲೆ ಕುಣಿವ ನವಿಲು

ಚಿತ್ರ

ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ
ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ
ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್
ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ

-ಹಂಸಾನಂದಿ

ಕೊ: ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟಿದ್ದ ಒಂದು ಸಮಸ್ಯಾಪೂರಣದ ಪ್ರಶ್ನೆ-  "ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ ಮುನ್ನಮೇ" ಎಂಬುದಕ್ಕೆ ಉತ್ತರವಾಗಿ ಬರೆದ ಪದ್ಯವಿದು. 

ಕೊ.ಕೊ: ಮಳೆಗಾಲಕ್ಕೆ ನವಿಲು ಕುಣಿಯುವುದು ಸ್ವಾಭಾವಿಕ. ಆದರೆ ಮಳೆಗಾಲ ಬರುವ ಮುನ್ನ ನವಿಲು ಕುಣಿಯುವುದುಂಟೆ ? ತಾಯಿ ಪ್ರೀತಿಯಿಂದ ಕೊಟ್ಟ ತಿಂಡಿ ಮಗು ತಿನ್ನದೆ ಹೋದಾಗ, ನಾಯಿ ಬಾಲ ಡೊಂಕಾಗಿರದೇ ನೇರವಾದಾಗ, ಸಿಂಹ ಹುಲ್ಲು ತಿಂದಾಗ, ಮರಳಲ್ಲಿ ಮೀನು ಗೂಡು ಕಟ್ಟಿದಾಗ, ಭಾರೀ ದೇಹದ ನೀರಾನೆ ಕುಣಿಯುವಾಗ, ಇಂತಹ ಆಗಲಾರದ  ಘಟನೆಗಳು ಸಂಭವಿಸಿದಾಗ, ನವಿಲೂ ಮಳೆಗಾಲಕ್ಕೆ ಮೊದಲೇ ಕುಣಿದೀತು ಎಂಬುದು ಪದ್ಯದ ಸಾರಾಂಶ.

ಕೊ.ಕೊ.ಕೊ: ಪದ್ಯವು ಮತ್ತೇಭವಿಕ್ರೀಡಿತ ಎಂಬ ವರ್ಣ ಛಂದಸ್ಸಿನಲ್ಲಿದೆ. ಚಿತ್ರ ಕೃಪೆ ವಿಕಿಪೀಡಿಯಾ.

Rating
No votes yet

Comments

Submitted by DR.S P Padmaprasad Fri, 02/06/2015 - 10:34

ಸಮಸ್ಯೆ ಪೂರ್ತಿಗೊಳಿಸಿರುವ‌ ರೀತಿ ಸೊಗಸಾಗಿದೆ. ನಮ್ಮ‌ ಕರ್ನಾಟಕದಲ್ಲೇ ಈಗ‌ ಹೀಗೆ ಮಾದುವ‌ ಯುವಕರ‌ ಸ0ಕ್ಯೆ ಕಡಿಮೆಯಾಗಿದೆ. ಅಭಿನ0ದನೆಗಳು.