ಬಲಕ್ಕೇ ಬೆಲೆ

ಬಲಕ್ಕೇ ಬೆಲೆ

ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ

ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ? |

ವೀರನಿಗೆ ಅವಕಾಶ ಹೇಡಿಗದು ನೆಪವು

ನಿಲುವು ಸರಿಯಿರಲು ಗೆಲುವೆ ಮೂಢ ||

     ಕೇವಲ ವಿದ್ಯೆಯನ್ನು ಮನನ ಮಾಡಿಕೊಂಡರೆ ಪ್ರಯೋಜನವಿಲ್ಲ, ವಿದ್ಯೆಯ ಅಂತಸ್ಸತ್ವವನ್ನು ಅರಿತವರಾಗಬೇಕು ಎಂದು ಅರಿತೆವು. ವಾಸ್ತವತೆಗೆ ಆ ಅರಿವು ಸರಿಹೊಂದಬೇಕು. ಯಾವುದೇ ವಿಷಯದ ಸ್ಪಷ್ಟ ಅರಿವಿಲ್ಲದಿದ್ದಲ್ಲಿ ಆ ಕುರಿತು ಮನಸ್ಸನ್ನು ಕೇಂದ್ರೀಕರಿಸುವುದು ಸಾಧ್ಯವಿಲ್ಲವೆಂಬುದನ್ನೂ ಕಂಡುಕೊಂಡೆವು. ಈಗ ಮುಂದಿನ ಸಂಗತಿಯ ಬಗ್ಗೆ ಗಮನ ಹರಿಸೋಣ. ದೇಹ ಮತ್ತು ಮನಸ್ಸುಗಳ ಸಂಬಂಧ ಪರಸ್ಪರ ಪೂರಕವಾಗಿರುತ್ತದೆ. ಮನಸ್ಸಿನ ಇಚ್ಛೆಗೆ ತಕ್ಕಂತೆ ದೇಹ ಸಹಕರಿಸದಿದ್ದರೆ ಪ್ರಯೋಜನವಿಲ್ಲ. ಈ ಕಾರಣದಿಂದಾಗಿ ದೈಹಿಕ ಬಲಕ್ಕೆ ಅರಿವಿಗಿಂತ ಹೆಚ್ಚಿನ ಪ್ರಾಧಾನ್ಯತೆ ಬರುತ್ತದೆ. ದೈಹಿಕ ಬಲದ ಮಹತ್ವದ ಬಗ್ಗೆ ನೋಡೋಣ.

     ಶಕ್ತಿ ಎಂದರೆ ಮನಸ್ಸು ಮತ್ತು ದೇಹದ ಕಾರ್ಯಗಳ ಹಿತಕರ ಮಿಶ್ರಣದ ಫಲ. ದೇಹ ಮತ್ತು ಮನಸ್ಸುಗಳು ಒಟ್ಟಾದರೆ ಒಂದು ಶ್ರೇಷ್ಠ ಚೈತನ್ಯದ ಉದಯವಾಗುತ್ತದೆ. ಒಬ್ಬ ವ್ಯಕ್ತಿಗೆ ಅಸಾಧಾರಣ ಮನೋಬಲವಿದ್ದು, ಆರೋಗ್ಯಕರ ಶರೀರವಿಲ್ಲದಿದ್ದರೆ ಆತನ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಅವನು ಅಸಮರ್ಥನಾಗುತ್ತಾನೆ. ಕಾಯಿಲೆಗಳಿಂದ ನರಳುತ್ತಿರುವ, ಸಾಯುವ ಹಂತದಲ್ಲಿರುವವರು ತಮ್ಮ ಇಚ್ಛೆಗಳನ್ನು ತಾವು ಬಯಸಿದಂತೆ ಕ್ರಿಯಾರೂಪಕ್ಕೆ ತರಲಾರರು. ಒಬ್ಬ ಆರೋಗ್ಯಕರ, ಸಧೃಢಕಾಯ ವ್ಯಕ್ತಿ ಸಹ ಶಕ್ತ ಮನೋಬಲವಿಲ್ಲದಿದ್ದರೆ ಏನನ್ನೂ ಸಾಧಿಸಲಾರ. ಹೀಗಾಗಿ ಬಲವೆಂದರೆ ಅದು ಮನಸ್ಸು ಮತ್ತು ದೇಹಗಳ ಸಂಯುಕ್ತ ಕ್ರಿಯೆಯಾಗಿದ್ದು, ಇದು ಜ್ಞಾನ, ವಾಕ್ಕು, ಮನಸ್ಸು, ಸಂಕಲ್ಪ, ನೆನಪು, ಧ್ಯಾನ, ಅರಿವು, ಇತ್ಯಾದಿಗಳಿಗಿಂತ ಮೇಲಿನ ಸ್ಥಾನದಲ್ಲಿ ನಿಲ್ಲುತ್ತದೆ. ಬಲವಿಲ್ಲದ ನೂರು ಪಂಡಿತರನ್ನು ಬಲವಿರುವ (ಪಾಂಡಿತ್ಯ ಮತ್ತು ಶಕ್ತಿ) ಒಬ್ಬ ಸೋಲಿಸಬಲ್ಲ ಎಂಬುದು ಪ್ರಸಿದ್ಧ ನುಡಿಯಾಗಿದೆ.

     ಹಿಂದೆ ಗುರುಕುಲದಲ್ಲಿ ಶಿಷ್ಯ ಗುರುವಿನೊಂದಿಗೇ ಕುಟೀರದಲ್ಲಿ ವಾಸವಿದ್ದು ವಿದ್ಯೆ ಕಲಿಯಬೇಕಿತ್ತು. ಶಿಷ್ಯರಾದವರು ಗುರುವಿನ ಸೇವೆ ಮಾಡಬೇಕಿತ್ತು. ಒಬ್ಬ ಸೊರಗಿಹೋಗಿರುವ, ರೋಗಿಷ್ಠ, ಶಕ್ತಿಹೀನ ಶಿಷ್ಯನಿಗೆ, ಆತ ಎಷ್ಟೇ ಕಲಿಯುವ ಶಕ್ತಿ ಮತ್ತು ಸಾಮರ್ಥ್ಯ ಇದ್ದರೂ, ಗುರುವಿನ ಸೇವೆ ಮಾಡಲು ಆಗುವುದೇ ಇಲ್ಲ. ಶಕ್ತಿ ಇದ್ದಿದ್ದರೆ, ಆತ ಗುರುವಿನ ಬಳಿ ಹೋಗಿ ನಿಲ್ಲಬಲ್ಲ, ಸೇವೆ ಮಾಡಬಲ್ಲ, ಗುರುವಿನ ಸಮೀಪ ಕುಳಿತು ಯೋಗ್ಯ ವಿದ್ಯೆಯನ್ನು ಕಲಿಯಬಲ್ಲ, ಗುರು ಹೇಳಿದ್ದನ್ನು ತಿಳಿಯಬಲ್ಲ, ದೇಹ ಸಾಮರ್ಥ್ಯದಿಂದ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಲ್ಲ, ಆಗ ಮಾತ್ರ ಆತನ ಕಲಿಕೆ ಪೂರ್ಣವಾಗುತ್ತಿತ್ತು.

     ನೂಕು ನುಗ್ಗಲು ಅಥವ ಹೆಚ್ಚು ಜನಸಂದಣಿ ಇರುವ ಸ್ಥಳದಲ್ಲಿ ಒಬ್ಬ ಠೊಣಪ ಸಣಕಲನೊಬ್ಬನ ಕಾಲನ್ನು ಅಕಸ್ಮಾತ್ತಾಗಿ ತುಳಿದುಬಿಟ್ಟನೆಂದು ಇಟ್ಟುಕೊಳ್ಳಿ. ಆ ಸಣಕಲ ಠೊಣಪನಿಗೆ, 'ಏಯ್, ಕಣ್ಣು ಕಾಣಿಸಲ್ವಾ? ನೋಡಿಕೊಂಡು ಹೋಗಕ್ಕೆ ಆಗಲ್ವಾ?' ಅನ್ನುತ್ತಾನೆ ಎಂದುಕೊಳ್ಳೋಣ. ಠೊಣಪ, 'ಕಾಣಲಿಲ್ಲ, ಸಾರಿ' ಎಂದಾಗ ಸಣಕಲ ಸುಮ್ಮನಿರದೆ, 'ಮಾಡೋದು ಮಾಡಿಬಿಟ್ಟು ಸಾರಿ ಅಂತೆ ಸಾರಿ. ಕೊಬ್ಬು ಜಾಸ್ತಿ' ಎಂದುಬಿಟ್ಟರೆ? ಸಣಕಲ ದೊಡ್ಡ ವಿದ್ಯಾವಂತ, ಪ್ರಭಾವಶಾಲಿ ಇರಬಹುದು. ಆದರೆ ಠೊಣಪ ಮುಷ್ಟಿ ಕಟ್ಟಿ ಒಂದು ಬಿಗಿದುಬಿಟ್ಟರೆ ಸಣಕಲನ ಶರೀರದ ಆಕಾರವೇ ಬದಲಾಗುವುದಿಲ್ಲವೇ? ನಮ್ಮ ರಾಜಕೀಯ ನಾಯಕರುಗಳಾದರೂ ಬಹತೇಕರು ಜನಬಲ, ಜಾತಿಬಲ, ಅಧಿಕಾರಬಲ, ತೋಳ್ಬಲದಲ್ಲಿ ಮುಂದಿರುವವರೇ. ಅವರ ಮಾತುಗಳು, ನಡೆ-ನುಡಿಗಳು ಇಷ್ಟವಾಗದಿದ್ದರೂ ಅವರ ವಿರುದ್ಧ ಯಾರಾದರೂ ಎದುರು ಮಾತನಾಡುತ್ತಾರೆಯೇ? ಬಲದ ಬಲ ಇದು! ಒಂದು ಸಂಸ್ಕೃತದ ಸುಭಾಷಿತ ಹೇಳುತ್ತದೆ: "ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವಚ ನೈವಚ; ಅಜಾಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲಘಾತಕಃ"- ('ಕುದುರೆಯಲ್ಲ, ಆನೆಯಲ್ಲ, ಹುಲಿಯಂತೂ ಅಲ್ಲವೇ ಅಲ್ಲ, ಮೇಕೆಯನ್ನು ಬಲಿ ಕೊಡುತ್ತಾರೆ, ದೇವರೂ ಸಹ ದುರ್ಬಲರನ್ನೇ ಘಾತಿಸುತ್ತಾನೆ'). ಇದರ ಅರ್ಥ ಸ್ಪಷ್ಟವಾಗಿದೆ. ಬಲವಿರುವವರ ತಂಟೆಗೆ ಯಾರೂ ಹೋಗುವುದಿಲ್ಲ!

     ಭೂಮಿ ಧ್ಯಾನಿಸುತ್ತಿದೆ ಎಂದರೆ ವಿಚಿತ್ರವಾಗಿದೆಯೆಂಬಂತೆ ಭಾವಿಸಿಯಾರು! ಧ್ಯಾನವೆಂದರೆ ಕಣ್ಣು ಮುಚ್ಚಿ ಕುಳಿತು ಯಾವುದೋ ಮಂತ್ರ ಪಠಿಸುತ್ತಾ ಕೂರುವುದಲ್ಲ. ಧ್ಯಾನವೆಂದರೆ ಒಂದು ನಿರ್ದಿಷ್ಟ ವಿಷಯದ ಬಗ್ಗೆ ತದೇಕಚಿತ್ತರಾಗಿ ಚಿಂತಿಸುತ್ತಾ ವಿಚಲಿತರಾಗದೆ ಧ್ಯಾನದ ಗಮ್ಯವನ್ನು ತಲುಪಲು ಉಪಕ್ರಮಿಸುವುದು. ಭೂಮಿ ತನ್ನ ಅಕ್ಷದ ಸುತ್ತಲೂ ನಿರ್ದಿಷ್ಟ ಸಮಯ ಅನುಸರಿಸಿ ಸುತ್ತುತ್ತಿರುತ್ತದೆ, ಸೂರ್ಯನ ಸುತ್ತಲೂ ಸುತ್ತಿಬರುವಾಗಲೂ ನಿರ್ದಿಷ್ಟ ನಿಯಮ ಅನುಸರಿಸಿ ನಡೆಯುತ್ತದೆ. ಭೂಮಿ ಚಂಚಲವಾಗಿದ್ದರೆ, ಅರ್ಥಾತ್ ಧ್ಯಾನಿಸದಿದ್ದಿದ್ದರೆ, ಹೇಗೆ ಹೇಗೋ ಸುತ್ತುತ್ತಿತ್ತು ಮತ್ತು ಅದರ ಪರಿಣಾಮ ಸಹ ವಿಪರೀತವಾಗಿರುತ್ತಿತ್ತು ಅಲ್ಲವೇ? ಭೂಮಿಗೆ ಹೀಗೆ ಧ್ಯಾನಿಸುವ ಶಕ್ತಿ ಬಂದಿದ್ದು ಅದು ಹೊಂದಿರುವ ಪ್ರಚಂಡ ಬಲದಿಂದ! ಆದ್ದರಿಂದ ಬಲ ಅಥವ ಶಕ್ತಿ ಅನ್ನುವುದು ಭೌತಿಕ ಬಲ ಮತ್ತು ಜ್ಞಾನ ಮತ್ತು ತಿಳುವಳಿಕೆಯ ಸಂಯುಕ್ತ ಪರಿಣಾಮ ಎನ್ನಬಹುದು. ಎಲ್ಲಾ ಜೀವಿಗಳ ಯಶೋಗಾಥೆಗೆ ಬಲವೇ ಕಾರಣವಾಗಿದೆ. ಇಡೀ ಪ್ರಪಂಚವೇ ಒಂದಲ್ಲಾ ಒಂದು ಶಕ್ತಿಯ ಕಾರಣದಿಂದ ಅಸ್ತಿತ್ವದಲ್ಲಿದೆ. 'ನೀನು ಏನು ಚಿಂತಿಸುತ್ತೀಯೋ, ಅದೇ ನೀನಾಗುತ್ತೀಯೆ' ಎಂಬುದು ಒಂದು ನಾಣ್ಣುಡಿ. ಒಬ್ಬ ವ್ಯಕ್ತಿ ತನ್ನನ್ನು ಒಬ್ಬ ದುರ್ಬಲ, ಏನೂ ಪ್ರಯೋಜನವಿಲ್ಲದವನು, ಜನರಿಗೆ ಬೇಡವಾದವನು, ಬಡವ, ಇತ್ಯಾದಿ ಅಂದುಕೊಳ್ಳುತ್ತಾನೆ ಎಂದಿಟ್ಟುಕೊಳ್ಳಿ. ಅವನು ಸಹಜವಾಗಿ, ತನ್ನನ್ನೇ ತಾನು ಸಮ್ಮೋಹಕ್ಕೆ ಒಳಪಡಿಸಿಕೊಂಡಂತೆ,  ಅದೇ ರೀತಿ ಆದರೆ ಆಶ್ಚರ್ಯಪಡಬೇಕಿಲ್ಲ. ತನ್ನನ್ನು ತಾನು ನಂಬುವ, ತನ್ನ ಶಕ್ತಿಯಲ್ಲಿ ಭರವಸೆ ಇಟ್ಟುಕೊಂಡ ವ್ಯಕ್ತಿ, ತನ್ನ ಮಾನಸಿಕ ಮತ್ತು ಭೌತಿಕ ಬಲಗಳ ಸೂಕ್ತ ಸಂಯೋಜನೆಯಿಂದಾಗಿ ಖಂಡಿತ ಮುಂದಕ್ಕೆ ಬರುತ್ತಾನೆ. ಆದ್ದರಿಂದ ಬಲ ಗಳಿಸಿಕೊಳ್ಳುವಲ್ಲಿ ಸಾಧಕ ಮುಂದುವರೆಯುತ್ತಾನೆ.

     ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯವಿರುವುದೇ ಆರೋಗ್ಯ. ಶರೀರದ ಆಲಸ್ಯ ಮತ್ತು ಮನಸ್ಸಿನ ಚಂಚಲತೆ ಇವುಗಳನ್ನು ತೊರೆಯುವುದು ಇದಕ್ಕೆ ಅತ್ಯಗತ್ಯ. ಇದನ್ನು ಗಳಿಸಲು ಯೋಗಾಭ್ಯಾಸ ಉತ್ತಮ ಮಾರ್ಗವಾಗಿದೆ. ಮಹಾಕವಿ ಕಾಳಿದಾಸ ಹೇಳಿರುವಂತೆ 'ಶರೀರಮಾದ್ಯಂ ಖಲು ಧರ್ಮಸಾಧನಂ' (ಎಲ್ಲ ಧರ್ಮಸಾಧನೆಗೂ ಶರೀರವೇ ಮೊದಲು). ಶರೀರದ ಸ್ವಾಸ್ಥ್ಯ ಕಾಪಾಡುವುದು ಬಹಿರಂಗ ಸಾಧನೆಯಾದರೆ, ಮನಸ್ಸಿನ ಸ್ವಾಸ್ಥ್ಯ ಕಾಪಾಡುವುದು ಅಂತರಂಗ ಸಾಧನೆ ಎನಿಸುತ್ತದೆ. ಅಂತರಂಗ ಮತ್ತು ಬಹಿರಂಗ ಸಾಧನೆಗಳನ್ನು ಸಾಧಿಸುವವನೇ ಸಾಧಕ.

ನಿನ್ನ ಬಲದಲೆ ನಿಲ್ಲು ನಿನ್ನ ಬಲದಲೆ ಸಾಯು

ಇರುವುದಾದರೆ ಪಾಪ ದುರ್ಬಲತೆಯೊಂದೆ |

ದುರ್ಬಲತೆ ಪಾಪ ದುರ್ಬಲತೆಯೇ ಸಾವು

ವಿವೇಕವಾಣಿಯಿದು ನೆನಪಿರಲಿ ಮೂಢ ||

     ಪ್ರಪಂಚದಲ್ಲಿನ ಎಲ್ಲಾ ದುಃಖಗಳ, ಅಸಂತೋಷಗಳ ಕಾರಣ ದುರ್ಬಲತೆ ಎಂದು ವೇದಾಂತ ಸಾರುತ್ತದೆ. ನಾವು ಅಸಹಾಯಕರಾಗುವುದು, ಸುಳ್ಳು ಹೇಳುವುದು, ಕೊಲೆಗಾರರಾಗುವುದು, ಇನ್ನಿತರ ಅಪರಾಧಗಳನ್ನು ಮಾಡುವುದು, ಇತ್ಯಾದಿಗಳ ಮೂಲ ಕಾರಣವೆಂದರೆ ದುರ್ಬಲರಾಗಿರುವುದು. ದುರ್ಬಲರಾಗಿರುವ ಭಯ ಕೀಳರಿಮೆಗೆ, ಪಾಪ ಮಾಡುವುದಕ್ಕೆ ನಿಶ್ಚಿತ ಮೂಲಕಾರಣವಾಗಿದೆ.  ದುರ್ಬಲರಾಗಿರುವುದರಿಂದ ನಾವು ಸಾಯುತ್ತೇವೆ. ನಮ್ಮನ್ನು ದುರ್ಬಲಗೊಳಿಸುವಂತಹದು ಏನೂ ಇಲ್ಲವೆಂದರೆ, ಅಲ್ಲಿ ಸಾವಿಲ್ಲ, ದುಃಖವಿಲ್ಲವೆಂಬದು ವಿವೇಕಾನಂದರ ನುಡಿ. ಶಕ್ತಿಯೆಂಬುದು ಜೀವನ, ಶಕ್ತಿಯೆಂಬುದು ಪುಣ್ಯ; ದುರ್ಬಲತೆಯೆಂಬುದು ಮರಣ, ದುರ್ಬಲತೆಯೆಂಬುದು ಪಾಪ.

     ಈ ಭರತಭೂಮಿ ಶತಮಾನಗಳ ಕಾಲ ದಾಸ್ಯಕ್ಕೊಳಗಾಗಲು ಕಾರಣ ಮಾನಸಿಕ ದುರ್ಬಲತೆಯಲ್ಲದೇ ಮತ್ತೇನಲ್ಲ. ವೀರ-ಶೂರರ ನಾಡು ತುಳಿತಕ್ಕೊಳಗಾಯಿತೆಂದರೆ ಅದು ನಮ್ಮತನದ ಅರಿವಿನ ಕೊರತೆಯಲ್ಲದೆ ಬೇರೆಯಲ್ಲ. ಇತರರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದವರು ನಾವೇನೇ! ಮಾನಸಿಕ ಮತ್ತು ದೈಹಿಕ ಬಲ ನಮ್ಮ ಮಂತ್ರವಾದರೆ ಯಾವ ಕುಯುಕ್ತಿಯೂ ಅಲುಗಾಡಿಸಲಾಗದು. ಸುಯೋಗ್ಯ ಶಿಕ್ಷಣ ಪದ್ಧತಿ ರೂಪಿತವಾಗಿ, ಮನೆಮನೆಗಳು ಉತ್ತಮ ಸಂಸ್ಕಾರ ರೂಪಿಸುವ ಶಕ್ತಿ ಕೇಂದ್ರಗಳಾಗುವತ್ತ ಪ್ರಾಜ್ಞರು, ಗುರು-ಹಿರಿಯರು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಿದೆ. ಬಲ -ದೈಹಿಕ ಮತ್ತು ಮಾನಸಿಕ- ನಮ್ಮ ಧ್ಯೇಯವಾಗಲಿ. ಎಳೆಯ ಮಗು ಹಾಲು ಕುಡಿಯುತ್ತಾ ಶಕ್ತಿಯನ್ನು ಗಳಿಸಿಕೊಳ್ಳಲಿ, ಬೆಳೆಯುತ್ತಾ ಅಂಬೆಗಾಲಿಡುತ್ತಾ ಶಕ್ತಿ ವೃದ್ಧಿಸಿಕೊಳ್ಳಲಿ, ತರುಣರಾಗಿ ಶಕ್ತಿಯ ಚೈತನ್ಯದಿಂದ ನಳನಳಿಸಲಿ, ಆ ಮೂಲಕ ಮತ್ತೊಮ್ಮೆ ನಮ್ಮ ನಾಡು ವಿಶ್ವಕ್ಕೆ ಗುರುವಾಗಲಿ ಎಂದು ಆಶಿಸೋಣ. ಬಲಶಾಲಿ ನಾಡಿನ ಮಾತನ್ನು ಜಗತ್ತು ಕೇಳುತ್ತದೆ, ಒಪ್ಪಿಕೊಳ್ಳುತ್ತದೆ.

-ಕ.ವೆಂ. ನಾಗರಾಜ್.

Comments

Submitted by nageshamysore Thu, 02/05/2015 - 16:39

ಕವಿಗಳೆ ನಮಸ್ಕಾರ. ಬಲವಿದ್ದಲ್ಲಿ ಗೆಲುವು ಎನ್ನುವ ಮಾತು ನಿಜವಾದರು, ಅದನ್ನು ಬಳಸುವ ರೀತಿಯಷ್ಟೆ ಅದರ ಫಲಾಫಲದ ನಿರ್ಧಾರಕ ಶಕ್ತಿ ಎನ್ನಬಹುದು. ಭೂಮಿಯ ಬಲವನ್ನು ಅದರ ತದೇಕಚಿತ್ತ ಧ್ಯಾನಕ್ಕೆ ಸಮೀಕರಿಸಿರುವ ರೀತಿ ವಿಶಿಷ್ಠವಾಗಿದೆ. ಒಟ್ಟಾರೆ ಸುಸೂತ್ರವಾಗಿ ನಡೆಯುವ ಪ್ರತಿಯೊಂದು ಪ್ರಕ್ರಿಯೆಯನ್ನು ಏಕಾಗ್ರತೆಯ ಧ್ಯಾನವೆಂದು ಹೇಳಬಹುದೇನೊ. ಅದನ್ನು ಆಗಗೊಡಿಸುವುದು ಅದರಲ್ಲಿರುವ ಯಾವುದೊ ಬಲ, ಶಕ್ತಿ (ಮನೋಶಕ್ತಿಯೂ ಅಂತದ್ದೆ ಶಕ್ತಿ ತಾನೆ)

Submitted by partha1059 Mon, 02/09/2015 - 13:06

ಕವಿಗಳೆ ಹೌದು
ಈಗೆಲ್ಲ
’ಬಲಕ್ಕೆ’ ಬೆಲೆ
’ಎಡಕ್ಕೆ’ ಬೆಲೆ
ಎಡ ಬಲ ಇಲ್ಲದವರ ಪಾಡಂತು
ಬಲೆಗೆ ಸಿಕ್ಕ ಮೀನಿನ ಬೆಲೆ
- ಪಾರ್ಥಸಾರಥಿ

Submitted by kavinagaraj Mon, 02/09/2015 - 15:15

In reply to by partha1059

ಬಲ, ಎಡಗಳಿಗೆ ಬೆಲೆ ಬರುವುದೂ ಬಲದಿಂದಲೇ! ಬಲೆಗೆ ಸಿಕ್ಕ ಮೀನಿಗೆ ಬೆಲೆಯಿಲ್ಲವೆಂದವರಾರು? ಅದಕ್ಕೂ ಬೆಲೆಯಿದೆ!! ಧನ್ಯವಾದ, ಪಾರ್ಥರೇ. Survival of the fittest ಅನ್ನುವುದು ಪ್ರಕೃತಿ ನಿಯಮ. ನಿಮ್ಮ ವಸ್ತುಸ್ಥಿತಿಯ ವ್ಯಂಗ್ಯ ವಿಶ್ಲೇಷಣೆ ಚೆನ್ನಾಗಿದೆ.