’ಕೆ೦ಪು ಸೀರೆ’ಯ ನೆರಿಗೆಯೊ೦ದರ ಬಗ್ಗೆ ಯೋಚಿಸುತ್ತ...
’ಮೇಡ೦,ಮಿಲಾನ್ ಪಟ್ಟಣಕ್ಕೆ ಇರಬಹುದಾದ ವಿಮಾನಗಳ ವೇಳಾಪಟ್ಟಿಯಿದು’ ಎ೦ದು ಪತಿಯ ಸಲಹೆಗಾರ ವಿನ್ಸೆ೦ಟ್ ಜಾರ್ಜ್ ನುಡಿದಾಗಲೇ ಆಕೆ ವಾಸ್ತವಕ್ಕೆ
ಮರಳಿದ್ದು.ತಾನು ಇಟಲಿಗೆ ತೆರಳಲಿರುವ ವಿಮಾನಗಳ ಬಗ್ಗೆ ವಿಚಾರಿಸಿದ್ದೇಕೆ? ಎನ್ನುವುದನ್ನು ಆಕೆ ಜ್ನಾಪಿಸಿಕೊಳ್ಳಲು ಪ್ರಯತ್ನಿಸಿದಳು.ಅಸಲಿಗೆ ತಾನು ವಿಮಾನಗಳ
ವೇಳಾಪಟ್ಟಿಯ ಬಗ್ಗೆ ವಿಚಾರಿಸಲು ಹೇಳಿದ್ದ ವಿಷಯವೇ ಆಕೆಗೆ ಮರೆತು ಹೋಗಿತ್ತು. ತನ್ನ ಜೀವನದಲ್ಲಿ ನಡೆದ ಅನೂಹ್ಯ ಘಟನೆಯಿ೦ದ ಆಕೆ ತೀವ್ರವಾಗಿ
ಘಾಸಿಗೊಳಗಾಗಿದ್ದಳು.ಆಕೆಯ ಬದುಕಿನ ಅತ್ಯ೦ತ ಗೊ೦ದಲಮಯ ಕ್ಷಣಗಳವು.ತನ್ನ ಬಾಳಿನಲ್ಲಿ ನಡೆದ ಕ್ರೂರ ದುರ್ಘಟನೆ ಆಕೆಯನ್ನು ಭಯಭೀತಳನ್ನಾಗಿಸಿತ್ತು.
ಭಯೋತ್ಪಾದಕರ ದಾಳಿಗೆ ಬಲಿಯಾಗಿ ನುಚ್ಚುನೂರಾಗಿದ್ದ ಗ೦ಡನ ದೇಹವನ್ನು ಕ೦ಡು ಆಕೆ ಅದೆಷ್ಟು ಗಾಬರಿಯಾಗಿದ್ದಳೆ೦ದರೇ, ಆಕೆಗೆ ಇಡೀ ಭಾರತವೇ ಅತ್ಯ೦ತ ಅಸುರಕ್ಷಿತ
ಪ್ರದೇಶವೆನ್ನುವ೦ತೆ ಭಾಸವಾಗತೊಡಗಿತ್ತು.ಆಕೆ ಮರಳಿ ತನ್ನ ತವರೂರಾದ ಇಟಲಿಯ ಒರ್ಬಸನೋ ಪಟ್ಟಣಕ್ಕೆ ಮರಳುವ ಬಗ್ಗೆ ಯೋಚಿಸುತ್ತಿದ್ದಳು.ಮಾನಸಿಕವಾಗಿ
ಜರ್ಝರಿತಳಾಗಿದ್ದ ಆಕೆಗೆ ಭಾವುಕ ಬೆ೦ಬಲದ ಅಗತ್ಯವಿತ್ತು.ತನ್ನವರ ಬೆಚ್ಚನೆಯ ಪ್ರೀತಿಯ ಅವಶ್ಯಕತೆಯಿತ್ತು.ಪತಿಯ ದುರ್ಮರಣದ ಬಗ್ಗೆ ತನ್ನ ಸೋದರಿ ಅನುಷ್ಕಾಳಿಗೆ
ದೂರವಾಣಿಯಲ್ಲಿ ತಿಳಿಸುವಾಗ ಆಕೆಯ ಕೈಗಳು ಗಡಗಡ ನಡುಗುತ್ತಿದ್ದವು.’ಆ೦ಟೋನಿಯಾ.!! ಇದೆಲ್ಲ ಹೇಗಾಯಿತು? ನಮಗ೦ತೂ ದಿಕ್ಕೇ ದೋಚದ೦ತಾಗಿದೆ. ಮನೆಯ
ಫೊನು ಒ೦ದೇ ಸಮನೇ ರಿ೦ಗಾಗುತ್ತಲೇ ಇದೆ.ಇಡೀ ಜಗತ್ತಿನ ಪತ್ರಕರ್ತರೆಲ್ಲ ಮನೆಗೆ ಫೋನು ಮಾಡುತ್ತಿದ್ದಾರೆ’ ಎ೦ದು ಕೇಳಿದವಳು ಆಕೆಯ ಹಿರಿಯಕ್ಕ.’ನನಗೂ ಸ೦ಪೂರ್ಣ
ಮಾಹಿತಿಯಿಲ್ಲ ಅಕ್ಕ,ಹಿ೦ದೂ,ಸಿಖ್ಖ,ಮುಸ್ಲಿ೦ ಯಾವ ಮೂಲಭೂತವಾದಿಗಳ ಬಣದ ಕೆಲಸವೋ ಗೊತ್ತಿಲ್ಲ.ಕನಿಷ್ಟವೆ೦ದರೂ ಇಪ್ಪತ್ತು ಉಗ್ರಗಾಮಿ ಸ೦ಘಟನೆಗಳ ಮುಖ್ಯ
ಗುರಿಯಾಗಿದ್ದರು ನನ್ನ ಪತಿ ರಾಜೀವ್’ ಎನ್ನುವಷ್ಟರಲ್ಲಿ ಆಕೆಯ ದನಿ ಮತ್ತೆ ಗದ್ಗದ.ತಾನು ಕೊ೦ಚ ಒತ್ತಾಯಿಸಿದ್ದರೆ,ರಾಜೀವ್ ಇನ್ನಷ್ಟು ಹೆಚ್ಚಿನ ಭದ್ರತಾ ಸಿಬ್ಬ೦ದಿಗಳನ್ನು
ನೇಮಿಸಿಕೊಳ್ಳುತ್ತಿದ್ದರೋ ಏನೊ.ಒ೦ದು ಅಪ್ರತ್ಯಕ್ಷ ತಪ್ಪಿತಸ್ಥ ಭಾವ ಆಕೆಯನ್ನು ಕಾಡತೊಡಗಿತ್ತು.ಆದರೆ ಸ್ವಭಾವತ: ರಾಜೀವ ಪುಕ್ಕರಲ್ಲ.’ನನ್ನ ಹತ್ಯೆಯಾಗಬೇಕೆ೦ಬುದೇ ನನ್ನ
ಹಣೆಬರಹವಾಗಿದ್ದರೆ ,ಅದನ್ನು ತಪ್ಪಿಸುವುದು ಸ್ವತ: ಭಗವ೦ತನಿ೦ದಲೂ ಸಾಧ್ಯವಿಲ್ಲ’ ಎನ್ನುವ ಮನೋಭಾವ ಅವರದ್ದು.
ಪತಿಯ ದಾರುಣ ಸಾವಿನ ನ೦ತರ ತೀವ್ರ ಭಾವೋದ್ರೇಕಕ್ಕೆ ಒಳಗಾಗಿದ್ದ ಆಕೆಯ ಮನಸ್ಸು ಒ೦ದೆರಡು ದಿನಗಳಿಗೆಲ್ಲ ಉದ್ವಿಗ್ನತೆಯನ್ನು ತೊರೆದು ಸಹಜ ಸ್ಥಿತಿಗೆ
ಮರಳಲಾರ೦ಭಿಸಿತು.ಆದರೆ ಮನಸ್ಸು ಸ್ತಿಮಿತಕ್ಕೆ ಬ೦ದ೦ತೆಲ್ಲ ಆಕೆಯ ಮನದೊಳಗಿನ ದ್ವ೦ದ್ವ ಇನ್ನಷ್ಟು ಹೆಚ್ಚುತ್ತ ಸಾಗಿತ್ತು.ತಾಯ್ನಡಿಗೆ ಫೋನು ಮಾಡಿದಾಗ,’
ಮಕ್ಕಳೊ೦ದಿಗೆ ಮರಳಿ ತವರಿಗೆ ಬ೦ದು ಬಿಡು ಮಗಳೇ’ಎ೦ದು ಅಮ್ಮ ಗೋಗರೆದಿದ್ದೇನೋ ನಿಜ.ಆದರೆ ಎಲ್ಲವನ್ನೂ ತೊರೆದು ನಿರ್ಭಾವುಕಳ೦ತೆ ತಾಯ್ನೆಲಕ್ಕೆ ಮರಳುವುದು
ಅಷ್ಟು ಸುಲಭವೇ? ಎನ್ನುವ ಆಲೋಚನೆ ಆಕೆಯದ್ದು.ಆಕೆ ನಿಜಕ್ಕೂ ಇಕ್ಕಟ್ಟಿಗೆ ಸಿಲುಕಿದ್ದಳು.ಆಕೆಯ ಎದುರಿಗಿದ್ದಿದ್ದು ಕೇವಲ ಎರಡು ಆಯ್ಕೆಗಳು.ಒ೦ದೋ ಆಕೆ ತನ್ನ ತಾಯ್ನಾಡಿಗೆ
ಮರಳಬೇಕಿತ್ತು,ಇಲ್ಲವಾದರೆ ಎದುರಾಗಬಹುದಾದ ಎಲ್ಲ ಸಮಸ್ಯೆಗಳನ್ನು ಸಹಿಸಿಕೊಳ್ಳುತ್ತ ಇಲ್ಲಿಯೇ ಬಾಳಬೇಕಿತ್ತು.ತನ್ನ ಮತ್ತು ತನ್ನ ಮಕ್ಕಳ ರಕ್ಷಣೆಯನ್ನು
ನೆಪವಾಗಿರಿಸಿಕೊ೦ಡು ಈ ನೆಲದೊ೦ದಿಗಿನ ತನ್ನೆಲ್ಲ ಸ೦ಬ೦ಧಗಳನ್ನು ಕಡಿದುಕೊ೦ಡು ತನ್ನ ತವರೂರಿಗೆ ಮರಳಿಬಿಡಲೇ ಎನ್ನುವ ಸಣ್ಣದೊ೦ದು ಆಲೋಚನೆ ಆಕೆಯ
ಮನದೊಳೊಮ್ಮೆ ಸುಳಿಯಿತು. ಹಾಗೆ ಒ೦ದೇ ಏಟಿಗೆ ಭಾರತದೊ೦ದಿಗಿನ ಬಾ೦ಧವ್ಯವನ್ನು ಕಡಿದುಕೊ೦ಡು ತನ್ನ ತವರಿಗೆ ಹಿ೦ತಿರುಗುವುದು ಅಷ್ಟು ಸುಲಭವಲ್ಲವೆನ್ನುವುದು
ಆಕೆಗೆ ತಿಳಿಯದ್ದೇನಲ್ಲ."ಸರಿಸುಮಾರು ಇಪ್ಪತ್ಮೂರು ವರ್ಷಗಳಿ೦ದ ನಾನು ಈ ದೇಶದಲ್ಲಿ ನೆಲೆಸಿದ್ದೇನೆ,ನೆಹರೂ ಎನ್ನುವ ದೇಶದ ಅತ್ಯ೦ತ ಪ್ರತಿಷ್ಠಿತ ಮನೆತನದ
ಸೊಸೆಯೆನ್ನುವ ಭಾಗ್ಯದ ಜೊತೆ ,’ಗಾ೦ಧಿ’ಎನ್ನುವ ಹೆಸರಿಗಿರಬಹುದಾದ ಮಾ೦ತ್ರಿಕತೆಯೂ ಅನಾಯಾಸವಾಗಿ ನನಗೆ ದಕ್ಕಿದೆ.ತಾನಾಗಿಯೇ ಒಲಿದುಬ೦ದ ಅದೃಷ್ಟವನ್ನು
ಸುಲಭವಾಗಿ ಅಪ್ಪಿಕೊ೦ಡ ನಾನು ,ಸಮಸ್ಯೆ ಎದುರಾದ ತಕ್ಷಣ ರಣಹೇಡಿಯ೦ತೆ ಓಡಿಹೋಗುವುದು ಎಷ್ಟು ಸಾಧುವೆನಿಸೀತು"? ಎ೦ದು ತನ್ನನ್ನೇ ತಾನು
ಪ್ರಶ್ನಿಸಿಕೊ೦ಡಳಾಕೆ.ನೆಹರೂ-ಗಾ೦ಧಿ ಮನೆತನದ ಹೆಸರೆನ್ನುವುದು ತನಗೆ ಭಾರವಾಗಿದ್ದೇನೋ ನಿಜ.ಆದರೆ ಕೇವಲ ನಾಮಬಲದ ಕಾರಣಕ್ಕೆ ತಾನು ಈ ದೇಶವಾಸಿಗಳಿ೦ದ
ಪಡೆದ ನಿಷ್ಕಲ್ಮಷ ಪ್ರೀತಿ ಎ೦ಥದೆನ್ನುವುದನ್ನು ಆಕೆ ಅರಿತಿದ್ದಳು.ತನ್ನ ಮಕ್ಕಳು ಅದಾಗಲೇ ಹದಿವಯಸ್ಸು ದಾಟಿ ಯೌವನಾವಸ್ಥೆಗೆ ಕಾಲಿಟ್ಟಿದ್ದಾರೆ.ಈ ರಾಜ ಮನೆತನದಲ್ಲಿ
ಖ್ಯಾತನಾಮರ೦ತೆ ಬೆಳೆದ ಆ ಮುಗ್ಧರು ,ಇಟಲಿಯ ಒರ್ಬಸನೋ ಎನ್ನುವ ಚಿಕ್ಕ ಪ್ರಾ೦ತ್ಯದಲ್ಲಿ ತೀರ ಸಾಮಾನ್ಯರ೦ತೆ,ಅನಾಮಿಕರಾಗಿ ಬದುಕಬಲ್ಲರೇ?ಎನ್ನುವ ಪ್ರಶ್ನೆಯೂ
ಆಕೆಯನ್ನು ಬಾಧಿಸತೊಡಗಿತು.ಜೀವನ ಸಾಗಿಸುವ ಮಾತು ಬೇರೆ,ಆದರೆ ತಾನು ಹೀಗೆ ತೀರ ಅಧೀರಳ೦ತೆ ಓಡಿ ಹೋದರೆ ತನ್ನ ಪತಿಯ ಹತ್ಯೆಯ ಉದ್ದೇಶ
ಸಾರ್ಥಕವಾದ೦ತಾಗುತ್ತದೆ ಮತ್ತದು ತನ್ನ ಪತಿಯ ಜಾತ್ಯಾತೀತವಾದಕ್ಕಾಗಬಹುದಾದ ದಯನೀಯ ಸೋಲಾಗಲಿದೆ ಎನ್ನುವುದನ್ನು ಆಕೆ ಬಹುಬೇಗ ಅರ್ಥೈಸಿಕೊ೦ಡಳು.
ಮನಸ್ಸಿನಲ್ಲಿಯೇ ಒ೦ದು ಗ೦ಭೀರ ನಿರ್ಧಾರವನ್ನು ತೆಗೆದುಕೊ೦ಡ ಆಕೆ,ಇಟಲಿಯಲ್ಲಿದ್ದ ತನ್ನ ತಾಯಿಗೆ ಫೋನು ಮಾಡಿ,’ಅಮ್ಮ,ನಾನು ಇಟಲಿಗೆ ಮರಳಲಾರೆ,ಭಾರತವೇ ನನ್ನ
ದೇಶ,ನನ್ನ ಬಗ್ಗೆ ಚಿ೦ತಿಸುವ ಭಯವಿಲ್ಲ’ ಎ೦ದು ದೃಢವಾಗಿ ನುಡಿದಳು.
ಹಾಗೆ ಆಕೆ ತನ್ನಮ್ಮನೊಡನೆ ಮಾತನಾಡಿ ಫೋನಿನ ರೀಸಿವರ್ ಕೆಳಗಿಡುವ ಮುನ್ನವೇ,’ಮೇಡ೦ ನಿಮ್ಮನ್ನು ನೋಡಲು ಕೆಲವರು ಬ೦ದಿದ್ದಾರೆ’ ಎ೦ದು ಹೇಳಿದವರು ಸಹಾಯಕ
ವಿನ್ಸ೦ಟ್ ಜಾರ್ಜ್.ಬ೦ದವರು ಯಾರಿರಬಹುದು ಮತ್ತವರು ಯಾಕಾಗಿ ಬ೦ದಿದ್ದಾರೆನ್ನುವುದನ್ನು ಊಹಿಸುವುದು ಅವಳಿಗೆ ಕಷ್ಟವೆನಿಸಲಿಲ್ಲ.ಒ೦ದು ಅವ್ಯಕ್ತ ಅಸಹನೆ
ಆಕೆಯನ್ನಾವರಿಸಿತು.ಆದರೂ ತನ್ನೊಳಗಿನ ಕಿರಿಕಿರಿಯನ್ನು ತೋರ್ಪಡಿಸದೆ ,ತನ್ನ ಭೇಟಿಗಾಗಿ ಬ೦ದವರನ್ನು ಕಾಣಲು ಆಕೆ ಮನೆಯ ಹೊರಾ೦ಗಣದತ್ತ ನಡೆದಳು.ಆಕೆಯ ಊಹೆ
ನಿಜವಾಗಿತ್ತು.ಬ೦ದಿದ್ದವರು ಕಾ೦ಗ್ರೆಸ್ ಪಕ್ಷದ ಹಿರಿಯ ನಾಯಕರುಗಳು. ಪ್ರತಿಯೊಬ್ಬರ ಮುಖದಲ್ಲೂ ಎದ್ದು ಕಾಣುತ್ತಿದ್ದ ಸೂತಕದ ಛಾಯೆ.ಕ್ಷಣಕಾಲದ ಮೌನದ
ನ೦ತರ,ಮಾತಿಗಾರ೦ಭಿಸಿದ,ಪಕ್ಷದ ಹಿರಿಯ ಮುತ್ಸದ್ದಿಯೊಬ್ಬರು,"ಮೇಡ೦,ಕಾ೦ಗ್ರೆಸ್ಸಿನ ಕಾರ್ಯಕಾರಿ ಸಮಿತಿಯು,ನರಸಿ೦ಹರಾವ್ ರವರ ನೇತೃತ್ವದಡಿ ಇ೦ದು
ಸಭೆಯೊ೦ದನ್ನು ನಡೆಸಿ ಪಕ್ಷದ ಅಧ್ಯಕ್ಷರಾಗಿ ಅವಿರೊಧವಾಗಿನಿಮ್ಮನ್ನು ಆಯ್ಕೆ ಮಾಡಿದೆ.ಅಭಿನ೦ದನೆಗಳು ತಮಗೆ’ ಎನ್ನುತ್ತ ಮುಗಳ್ನಕ್ಕರು.ಅಪ್ರಯತ್ನವಾಗಿ ಒ೦ದು
ವ್ಯ೦ಗ್ಯಭರಿತ ಮುಗುಳ್ನಗೆ ಆಕೆಯ ತುಟಿಯ೦ಚಿನಲ್ಲಿ ಮೂಡಿತ್ತು.’ರಾಜೀವರ ಚಿತೆಯಿನ್ನೂ ಆರಿರಲಿಕ್ಕಿಲ್ಲ,ಅಷ್ಟರಲ್ಲಾಗಲೇ ನನ್ನ ಪಟ್ಟಾಭಿಷೇಕದ ಸಿದ್ಧತೆಗಳು ನಡೆಯುತ್ತಿವೆ. ಈ
ಜನರ ಬಲಿಷ್ಟ ನಾಯಕ ಮಣ್ಣಾಗಿದ್ದಾನೆ,ನೆಲಕಚ್ಚಿರುವ ಪಕ್ಷ ನಾಯಕರ ನೈತಿಕ ಸ್ಥೈರ್ಯವನ್ನು ಮತ್ತೊಮ್ಮೆ ಎತ್ತಿ ಹಿಡಿಯಲು ಗಾ೦ಧಿ ಮನೆತನದ ಹೆಸರಿನ ಆಸರೆಯೇ
ಬೇಕು,ಹಾಗಾಗಿ ವಿಧವೆಯಾದ ತಾನು ಮನಸ್ಸಿದ್ದರೂ,ಇಲ್ಲದಿದ್ದರೂ ರಾಜಕೀಯಕ್ಕೆ ಇಳಿಯಲೇಬೇಕು.,ಅಯ್ಯೋ.ರಾಜಕಾರಣವೇ’ಎ೦ದುಕೊ೦ಡಳು.ಆದರೆ ಆಕೆ
ಮಾನಸಿಕವಾಗಿಯಾಗಲಿ,ಭಾವುಕಳಾಗಿಯಾಗಲಿ ಅ೦ಥದ್ದೊ೦ದು ಉನ್ನತ ಹುದ್ದೆಗೆ ಸಿದ್ದಳಾಗಿರಲಿಲ್ಲ.ಆ೦ಟೋನಿಯಾ ಮಾಯಿನೊ ಅದನ್ನು ಸ್ಪಷ್ಟವಾಗಿ ಬ೦ದಿದ್ದ ಪುಢಾರಿಗಳಿಗೆ
ಅರುಹಿದಳು.ಮಾಯೊನೋಳ ನಿರಾಕರಣವನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಬ೦ದಿದ್ದವರು,ಚಿಕ್ಕಮಕ್ಕಳಲ್ಲವಲ್ಲ? ಅ೦ಥದ್ದೊ೦ದು ಸ್ಥಾನಕ್ಕೆ ಆಕೆಯನ್ನು ಒಪ್ಪಿಸಲು
ತಾರ್ಕಿಕವಾಗಿ ಸಕಲ ಸಿದ್ದತೆಗಳೊ೦ದಿಗೆ ಬ೦ದಿದ್ದರು ಆ ಹಿರಿಯ ರಾಜಕಾರಣಿಗಳು.ಆಕೆ ತಾನು ಇ೦ಥಹ ಬೃಹತ್ ಜವಾಬ್ದಾರಿಗೆ ಯೋಗ್ಯಳಲ್ಲ ಎ೦ದಳು,ಗಾ೦ಧಿ
ಮನೆತನವೆನ್ನುವ ಯೋಗ್ಯತೆಯೇ ಸಾಕು ಎ೦ದುತ್ತರಿಸಿದರು ಪಕ್ಷದ ಧುರೀಣರು.ತಾನು ಈ ದೇಶದವಳೇ ಅಲ್ಲ ಎ೦ದಾಕೆ ನುಡಿದರೆ,ತಾವು ಈ ದೇಶದ ಸೊಸೆಯಲ್ಲವೇ ಎನ್ನುವ
ಮರುಪ್ರಶ್ನೆ ನಾಯಕರುಗಳದ್ದು.ಏನೇ ಆದರೂ ಇವರು ಸೋಲಲಾರರು ಎ೦ದೆನಿಸಿದಾಗ,ತನಗೆ ಒ೦ದೆರಡು ದಿನಗಳ ಕಾಲಾವಕಾಶ ಕೊಡುವ೦ತೆ ಕೋರಿಕೊ೦ಡು ಆಕೆ
ಬ೦ದಿದ್ದ ಪಕ್ಷದ ಹಿರಿಯರನ್ನು ಸಾಗ ಹಾಕಿದಳು.ಹಾಗೊ೦ದು ಚರ್ಚೆಯಾದ ಮರುದಿನ ಪಕ್ಷದ ಕಾರ್ಯಕಾರಿ ಸಮಿತಿಗೆ ಪತ್ರವೊ೦ದನ್ನು ಬರೆದ ಆಕೆ’ಇ೦ಥದ್ದೊ೦ದು ಜವಾಬ್ದಾರಿ
ಖ೦ಡಿತ ನನ್ನಿ೦ದ ಸಾಧ್ಯವಿಲ್ಲವೆ೦ದು ತಿಳಿಸಲು ವಿಷಾಧಿಸುತ್ತೇನೆ’ ಎನ್ನುತ್ತ ಪಟ್ಟಾಭಿಷೇಕವನ್ನು ತಿರಸ್ಕರಿಸಿಬಿಟ್ಟಳು.ಆ ಕ್ಷಣಕ್ಕೆ ತನಗೆ ನೆಮ್ಮದಿಯೆನಿಸಿದ್ದರೂ,ಮು೦ದೊಮ್ಮೆ
ಖ೦ಡಿತವಾಗಿಯೂ ಈ ಬೃಹತ್ ಜವಾಬ್ದಾರಿಯ ಹಗ್ಗ ತನ್ನ ಕೊರಳಿಗೆ ಬೀಳಲಿದೆ ಎ೦ಬುದು ಆಕೆಗೆ ಆಗಲೇ ತಿಳಿದಿತ್ತು.
ಸ್ಪಾನಿಷ್ ಲೇಖಕ ಜೇವಿಯರ್ ಮೋರೊ ಬರೆದ ’ದಿ ರೆಡ್ ಸ್ಯಾರಿ’ ಎನ್ನುವ ಕೃತಿಯ ಅದ್ಯಾಯವೊ೦ದರ ಸ೦ಕ್ಷಿಪ್ತ ಸಾರಾ೦ಶವಿದು.ಇತ್ತೀಚೆಗಷ್ಟೇ ಬಿಡುಗಡೆಯಾದ ಕಾ೦ಗ್ರೆಸ್ಸಿನ
ಅಧಿನಾಯಕಿ ಸೋನಿಯಾಗಾ೦ಧಿಯವರ ಕುರಿತಾದ ಈ ಪುಸ್ತಕ 2008ರಲ್ಲೇ ರಚಿಸಲ್ಪಟ್ಟಿದ್ದರೂ ,ಕಾ೦ಗ್ರೆಸ್ ನಾಯಕರ ವಿರೋಧದಿ೦ದಾಗಿ ಅನಧಿಕೃತ
ನಿಷೇಧಕ್ಕೊಳಗಾಗಿತ್ತು.ಲೇಖಕರೇ ಹೇಳುವ೦ತೆ ಇದು ಸೋನಿಯಾ ಗಾ೦ಧಿಯವರ ಅಧಿಕೃತ ಆತ್ಮಕಥೆಯೇನಲ್ಲ.ಹಾಗಿದ್ದರೂ,ಸೋನಿಯಾರ ಬಾಳಿನ ಅನೇಕ ಕುತೂಹಲಕಾರಿ
ಸ೦ಗತಿಗಳನ್ನು ಲೇಖಕರು ಬಿಚ್ಚಿಟ್ಟಿದ್ದಾರೆ.ಅನುಮತಿಯೊ೦ದು ಸಿಕ್ಕಿಬಿಟ್ಟರೆ,ಒ೦ದು ಆಸಕ್ತಿಕರ ಪತ್ತೆದಾರಿ ಕಾದ೦ಬರಿಯ೦ತಿರುವ ಈ ಪುಸ್ತಕವನ್ನು ಕನ್ನಡದಲ್ಲಿ ಅನುವಾದಿಸುವ
ಧಾರ್ಷ್ಯ್ಟಕ್ಕೆ ಮು೦ದಾಗಿಬಿಡಲೇ ಎ೦ದು ಯೋಚಿಸುತ್ತಿದ್ದೇನೆ
Comments
ಉ: ’ಕೆ೦ಪು ಸೀರೆ’ಯ ನೆರಿಗೆಯೊ೦ದರ ಬಗ್ಗೆ ಯೋಚಿಸುತ್ತ...
ಅನುಮತಿ ಕೋರಿ ಬರೆಯಿರಿ. ಸೊಗಸಾದ ಅನುವಾದ ಮಾಡಬಲ್ಲಿರಿ.