ನೆರಳುಗಳು - ಲಕ್ಷ್ಮೀಕಾಂತ ಇಟ್ನಾಳ
ನೆರಳುಗಳು
- ಲಕ್ಷ್ಮೀಕಾಂತ ಇಟ್ನಾಳ
ಎಲ್ಲೆಲ್ಲೋ ತಿರುಗಿದರೂ ನನ್ನ ಜೊತೆಯಲ್ಲೇ ಮಲಗುವುದು..ಈ ನೆರಳು
ಎಂದೂ ಅದು ನನ್ನ ಮೇಲೆ ಮಲಗಿದ ನೆನಪಿಲ್ಲ !
ನಾನು ಮಲಗುವ ಸಮಯದಲ್ಲಿ ಕಾಣುವುದಿಲ್ಲ, ಕೂಡ
ಯಾವಾಗ ನನ್ನಡಿಗೆ ನುಸುಳಿ ಬಿಡುವುದೋ ಗೊತ್ತಾಗದು
ದಿನವೂ ನನ್ನನಪ್ಪಿ ಮಗಲುವುದಂತೂ ಹೌದು,
ಈ ನೆರಳು....
ಆದರೂ ಇವುಗಳಲ್ಲಿ,
ನಾನು ಕೆಲ ನೆರಳುಗಳನ್ನು ನಂಬುವುದಿಲ್ಲ
ಏನಾದರೂ ಸಿಗುವಂತಿದ್ದರೆ
ನನಗಿಂತ ಮುಂದೆ ಮುಂದೆಯೇ ಇರುತ್ತವೆ,
ಬಲು ಬೆರಕಿತನ ತೋರುತ್ತವೆ
ಈಗೀಗಂತೂ
ಹಾಗೆಯೇ, ಬಲು ಸೂಕ್ಷ್ಮ ಕೆಲವು
ಅಪಾಯವಿರುವಲ್ಲಿ,
ಉಪಾಯವಾಗಿ ಹಿಂದೆ ಹಿಂದೆ ಸರಿಯುತ್ತವೆ,
ಕೆಲವೊಮ್ಮೆ ಎಡಪಂಥವಾದರೆ, .........ಇನ್ನೊಮ್ಮೆ ಬಲಪಂಥ
ನೀಯತ್ತನ್ನೇ ಉಳಿಸಿಕೊಂಡಿಲ್ಲ ಕೆಲವು
ಈಗೀಗಂತೂ
ಎಷ್ಟೋ ಸಾರಿ, ಹಾಡು ಹಗಲೇ
ನಟ್ಟ ನಡು ಮೈದಾನದಲ್ಲೂ ಕೂಡ
ಕೆಲವೊಮ್ಮೆ ಹತ್ತಾರು ಕಡೆಗಳಿಂದ ಮುತ್ತಿಕೊಂಡಿರುತ್ತವೆ !
ಇನ್ನೊಮ್ಮೆ ಒಂದೂ ಇಲ್ಲದಂತೆ,
ಮಟಾಮಾಯವಾಗಿಬಿಡುತ್ತವೆ, ...
ಅದೇ ನೆರಳುಗಳು
ಈಗೀಗಂತೂ
ಎಂತಹ ಕಡು ಬಿಸಿಲಿನಲ್ಲೂ
ಮೊದಮೊದಲು ನನ್ನ ಬಿಟ್ಟು ಇರುತ್ತಿಲ್ಲದ ಕೆಲವು
ಈಗ ತಂಪೊತ್ತಿನಲ್ಲೂ ಜೊತೆಗೂಡಲು
ಕ್ಯಾತೆ ತೆಗೆಯುವವು
ಹೀಗಾಗಿ, ಕೆಲ ನೆರಳುಗಳಿಂದ....
ನಾನೀಗ ದೂರ ದೂರ ಸರಿದಿದ್ದೇನೆ....
ಎಂತಹ ಚಂದ್ರಾಮರನ್ನೂ ಬಿಡದ ರಾಹುಗಳೆಂಬ ಆರೋಪ ಬೇರೆ,
ಅಸಲು 'ಹಕೀಕತ್ತು' ಏನಂದರೆ,
ನಿರುಪದ್ರವಿ, ನಿರ್ಲಿಂಗ ಜೀವಿಗಳಿವು...
ಬಲು ಆಪ್ತ,... ನಂಬಿ ಬರುತ್ತವೆ,
ನಾಯಿಯ ಹಾಗೆ...
ಹೋದಲ್ಲಿ ಬಂದಲ್ಲಿ ಬೆನ್ನು ಬಿಡದ ಹಾಗೆ
'ದೌಡ ದೌಡ' ಹಾಕಿದರೂ ಹೆಜ್ಜೆ, ದಾಪುಗಾಲಲ್ಲೆ ಹಿಂಬಾಲಿಸುತ್ತ,
ನಿಧಾನವಾದರೂ ಕಾಲುಕಾಲಲ್ಲೆ... ಬೆರಳು ಹಿಡಿದ ಮಕ್ಕಳ ಹಾಗೆ
ಕತ್ತಲಾದರೆ, ಬಲು ತಳಮಳ ಅವಕ್ಕೆ, ಹುಡುಕುತ್ತವೆ ನನಗೆ,
'ಹ್ವಾರೇವು' ಸಿಗದ ಹೆಣಮಗಳ ಹಾಗೆ
ಹೌದು,... ಇವುಗಳ ಲೋಕವೆ ಬೇರೆ,
ಕತ್ತಲೆ ಲೋಕದ
ದ್ವಿ ಆಯಾಮಿಗಳು,
ನೀರ ಮೇಲಂತೂ ದೋಣಿಯಂತೆ ತೇಲುತ್ತ,
ಕಂದು, ಕಪ್ಪನೆಯ ಬಣ್ಣದ ಜೀವಿಗಳು,
ಹುಡುಕಿದರೂ ಸಿಗಲಾರವು, ಬಿಳಿಯ ನೆರಳುಗಳು!
ಬೆಳಕು ಎದುರಾದರೆ
ಓಡುತ್ತವೆ ಕತ್ತಲೆಯನ್ನು ಅರಸಿಕೊಂಡು,
ಚಪ್ಪಟೆ ದೇಹಿಗಳು,.... ಬಾಯಿ ಇಲ್ಲದ ಬಡಪಾಯಿಗಳು
ಆಸರೆ ಸಿಕ್ಕರೆ ಮೇಲಕ್ಕೂ ಏರಬಲ್ಲವು,
ಯಾವ ಲೋಕದಲ್ಲಿಯೂ ಬದಲಾಗದ ತಂತುಗಳು !
ಎಲ್ಲರ ಜೊತೆಗೂ ಇವುಗಳ ಸ್ನೇಹ,
ಜೀವಿ, ನಿರ್ಜೀವಿ, ಚಲ-ನಿಶ್ಚಲ, ಬಡವ, ಬಲ್ಲಿದ, ಹೆಣ್ಣು , ಗಂಡು,
ಉಂಹೂಂ, ಯಾವುದೂ ಅಡ್ಡಬರದ ಮೋಹ
ಯಾವ ಭೇದವೆನಿಸದ ಸಮತತ್ವದ ಗೇಹ
ಆದರೂ ಬೆಳಕಿನೊಂದಿಗೆ ಇವುಗಳ ಸರಸ!
ಆಟವಾಡುತ್ತಲೇ ಇರುತ್ತವೆ,..... ಕಣ್ಣುಮುಚ್ಚಾಲೆ
ಇದ್ದವೋ ಇಲ್ಲವೊ ಎನ್ನುವಂತೆ ಮರೆಯಾಗುತ್ತವೆ,
ಬೆಳಕು ಬರುತ್ತಲೇ..ಮಾಯ....ಕೈಗೆ ಸಿಗದಲೇ
ಕತ್ತಲೆಯಲ್ಲಿ ಸೇರಿಬಿಡುತ್ತವೆ, ಯಾವುದೋ ಮೂಲೆ
ಹೇ ನೆರಳೇ,
ನನಗೂ ನೆರಳಾಗುವ ಆಸೆ,...
ನೆರಳು ನೀಡುವ ಆಸೆ....
ನಿನ್ನ ಲೋಕದ ಆತ್ಮ ಅರಿಯುವಾಸೆ,
ಕೈಜೋಡಿ, ಕೋರುವೆ ನಿನಗೆ,
ಒಮ್ಮೆ ನೀನು ನಾನಾಗಿ,
ನಾನು ನೀನಾಗಲೇ ?
(ಚಿತ್ರಕೃಪೆ : ಅಂತರ್ಜಾಲದಿಂದ)
Comments
ಉ: ನೆರಳುಗಳು - ಲಕ್ಷ್ಮೀಕಾಂತ ಇಟ್ನಾಳ
ನನಗೂ ನೆರಳಾಗುವ ಆಸೆ.....
ಆಸೆಯೇನೊ ಚೆನ್ನಾಗಿದೆ
ಆದರೆ ನೀವು ನಿಮಗೆ ನೆರಳಾಗಲಾರಿರಿ
ನೀವು ಮತ್ತೊಬ್ಬರ ನೆರಳಾಗಬೇಕಾಗುತ್ತೆ
ಅದು ಚಿಂತೆಯ ವಿಷಯ :-)
ಕವನ ಚೆನ್ನಾಗಿದೆ
-ಪಾರ್ಥಸಾರಥಿ
In reply to ಉ: ನೆರಳುಗಳು - ಲಕ್ಷ್ಮೀಕಾಂತ ಇಟ್ನಾಳ by partha1059
ಉ: ನೆರಳುಗಳು - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ಪಾರ್ಥಸಾರಥಿಯವರೆ, ತಮ್ಮ ಪ್ರತಿಕ್ರಿಯೆಗೆ ಕೃತಜ್ಞತೆಗಳು. ಹೌದು ನೆರಳುಗಳಿಗೆ ಜೀವವಿದ್ದಿದ್ದರೆ, ಅಥವಾ ಜೀವವಿರುವುದೇ ಹಾಗೋ, ಇಂತಹ ಕಲ್ಪನೆಯ ಲಹರಿಯೊಂದು ಮನದಲ್ಲಿ ಹಾಯ್ದುಹೋದಾಗ ನೆರಳು ಮೂಡಿತು. ಒಂದುವೇಳೆ ಅವುಗಳಿಗೆ ಮಿಡಿಯುವ ಹೃದಯಗಳಿದ್ದರೆ ಏನಾಗುತ್ತಿತ್ತು, ಇದ್ದರೆ ಅದರ ಆತ್ಮವನ್ನು ಅನುಭವಿಸಿ ನೋಡಬೇಕೆನಿಸಿದ ಗಳಿಗೆಯ ಕ್ಷಣ ಒಂದುವೇಳೆ ದೊರಕಿದರೆ,, ಿತ್ಯಾದಿ ಗಳ ಅಬ್ ಸ್ಟ್ರ್ಯಾಕ್ಟ್ ಇಮೇಜರಿಗಳನ್ನು ಕಲ್ಪಿಸಿದ ಕವನ, ನೆರಳುಗಳು, ಧನ್ಯವಾದಗಳು ಸರ್.
ಉ: ನೆರಳುಗಳು - ಲಕ್ಷ್ಮೀಕಾಂತ ಇಟ್ನಾಳ
ನೆರಳು- ಕತ್ತಲೆಯಲ್ಲಿ ನಾವೇ ನೆರಳಾಗುವೆವು. ನೆರಳೇ ನಾವಾಗುವೆವು.ಬೆಳಕಿರುವಲ್ಲಿ ನೆರಳು, ನೆರಳಿರುವಲ್ಲಿ ಬೆಳಕು ಇರುವುದು.
ಇನ್ನೊಬ್ಬರಿಗೆ ನೆರಳು ನೀಡಿದರೆ ಸೊಗಸು.
ಇನ್ನೊಬ್ಬರ ನೆರಳಾದರೆ ಕೆಲವೊಮ್ಮೆ ನರಳಬೇಕಾಗಬಹುದು.
In reply to ಉ: ನೆರಳುಗಳು - ಲಕ್ಷ್ಮೀಕಾಂತ ಇಟ್ನಾಳ by kavinagaraj
ಉ: ನೆರಳುಗಳು - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಕವನಾ ಸರ್ ಜಿ ಗೆ ವಂದನೆಗಳು. ನೆರಳುಗಳ ಗಹನ ವಿಚಾರಗಳನ್ನು ವಿಶ್ಲೇಷಣಾತ್ಮಕವಾಗಿ ಪ್ರತಿಕ್ರಿಯೆಸಿದ್ದೀರಿ ಸರ್. ಧನ್ಯವಾದಗಳು.
ಉ: ನೆರಳುಗಳು - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೆ ನಮಸ್ಕಾರ. ನೆರಳಿನ ವಿಹಂಗಮ ಲೀಲೆಯನ್ನು ಸೊಗಸಾಗಿ ಹಿಡಿದಿಟ್ಟ ಕವನ. ನೆರಳ ಗೂಢತೆ ನಿಜಕ್ಕು ಅದ್ಬುತವೆನ್ನಬಹುದಾದ ಅಚ್ಚರಿಯಾದರು ಬೆಳಕಿಲ್ಲದೆ ಅದರ ಅಸ್ತಿತ್ವ ಅನಾವರಣವಾಗದು. ಅಥವಾ ಬೆಳಕನ್ನು ನುಂಗಿ ಶಾಂತ ರೂಪ ತೋರುವ ಪರಿಯೆ ನೆರಳೆನ್ನಬಹುದು. ಜತೆಗಿದ್ದು ಕೈಗೆ ಸಿಗದ, ಕಂಡರು ಹಿಡಿಯಲಾಗದ, ಬೆನ್ನತ್ತಿಯೊ - ಬೆನ್ನಟ್ಟಿಸಿಕೊಂಡೊ ಸದಾ ಹಿಂಬಾಲಿಸುತ್ತಲೆ ಇರುವ ನೆರಳ ಮಹಿಮೆ, ಅನಾವರಣಗೊಂಡು ತಾಳುವ ಬಗೆಬಗೆ ವಿಶ್ವರೂಪವನ್ನು ಸೊಗಸಾಗಿ ಹಿಡಿದಿಟ್ಟ ಕವನ!