ನೂರಾರು ಕದ ತೆರೆದು

ನೂರಾರು ಕದ ತೆರೆದು

ನೂರಾರು ಕದ ತೆರೆದು
ಬಿಟ್ಟುಕೊಳುತಿರು ಬೆಳಕು
ನುಗ್ಗಿ ಬರುತಿರಲಿ ಸಗಾಳಿ
ಒಳಗಾವರಿಸೆಲ್ಲ ಕಣಕಣದೆ ||

ಮುಚ್ಚುವುದೇಕೊ ಮನಸಾ
ಬಿಚ್ಚೆ ಕೋಶದಗಣಿತ ಪಟಲ
ಜೀವದುಸಿರುಸಿರ ಆಯಾತ
ಕೊಳೆ ಕಶ್ಮಲ ತೊಳೆ ನಿರ್ಯಾತ ||

ಕಾಣದ ಕೋಶದಡಿ ತಾಣ
ತಾವಿಗಿದೆ ಅಪಾರ ವಿಸ್ತಾರ
ತುಂಬಿದಂತೆಲ್ಲ ತಣಿದು ಹಿಗ್ಗಿ
ಹೊಸತ ಬರಮಾಡೊ ಚತುರ ||

ಎಚ್ಚರ ತೆರೆದ ಕಿಟಕಿ, ಕದ
ಕದ್ದು ಬಹ ಬೇಡದ ಭೂತ
ಪಂಚಭೂತಗಳ ವಿಕೃತಿಸಿ
ತಾಮಸ ಲೇಪಿಸೊ ಕುಟಿಲ ||

ತುಂಬಲಿ ಸಾತ್ವಿಕ ಶಕ್ತಿ
ರಾಜಸವಾಗಲಿ ವಿಭಕ್ತಿ
ದ್ಯುತಿ ಸುತ್ತೆರಡು ತಮವ
ಬಂಧಿಸಲಿ ಸರಿ ಸತ್ವ ತತ್ವ ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by lpitnal Wed, 02/11/2015 - 22:17

ನೂರಾರು ಕದ ತೆರೆದು
ಬಿಟ್ಟುಕೊಳುತಿರು ಬೆಳಕು
ನುಗ್ಗಿ ಬಾರೆ ವರ್ಷಗರೆದು
ಆವರಿಸಲೊಳಗೆ ಕಣಕಣಕು ...ಸುಂದರ ಆಸ್ಮಿತೆ ಹೊಂದಿದ ಕವನ, ತುಂಬ ಪ್ರೀತಿಯಿಂದ ಓದಿ, ಮೆಚ್ಚಿಕೊಂಡೆ. ಧನ್ಯವಾದಗಳು ಸರ್ ನಾಗೇಶ್ ಜಿ.

Submitted by nageshamysore Fri, 02/13/2015 - 03:22

In reply to by lpitnal

ಇಟ್ನಾಳರೆ, ನಮಸ್ಕಾರ ಮತ್ತು ಧನ್ಯವಾದಗಳು. ನಮ್ಮ ಸುತ್ತಲೆ ಅಪಾರ ಧನಾತ್ಮಕ ಶಕ್ತಿಯಿದ್ದರು ಅದರ ಅವ್ಯಕ್ತ ರೂಪ ಮತ್ತು ನಮ್ಮದೆ ಆದ ಆಂತರಿಕ ಅಡೆತಡೆಗಳಿಂದ ಅವುಗಳನ್ನು ಒಳಬರಮಾಡಿಕೊಳದೆ ತೊಳಲಾಡುವುದೆ ಹೆಚ್ಚು. ಆ ಅರಿವಿನ ತರುವಾಯವಾದರೂ ಅಂತರಂಗದ ಕದಗಳು ತೆರೆದುಕೊಳ್ಳತೊಡಗಿದರೆ ಸಕಾರಾತ್ಮಕವೆಲ್ಲವು ಸಹಜವಾಗಿ ಪ್ರವಹಿಸಿ ಒಳಹೊರಗೆಲ್ಲವನ್ನು ಪ್ರಪುಲ್ಲಿತಗೊಳಿಸಬಹುದೆಂಬ ಆಶಯವೆ ಇದರ ಹಿನ್ನಲೆ. ಇದೂ ಕೂಡ ವಿಮಾನವೇರುವ ಮೊದಲು ಸಿಕ್ಕ ಬಿಡುವಿನ ಹೊತ್ತಲ್ಲಿ ಬರಮಾಡಿಕೊಂಡ ಭಾವ :-) 

Submitted by kavinagaraj Thu, 02/12/2015 - 15:14

ಬಾಳಪಯಣದ ಕುರಿತು ಸುಂದರ ಅಭಿವ್ಯಕ್ತಿ ಮತ್ತು ಸು-ಅಪೇಕ್ಷೆ, ಕೋರಿಕೆ, ಹಾರೈಕೆಗಳ ಸಮ್ಮಿಲನ! ಅಭಿನಂದನೆ, ನಾಗೇಶರೇ.
ಆವರಣ ಚೆಂದವಿರೆ ಹೂರಣಕೆ ರಕ್ಷಣ
ಹೂರಣ ಚೆಂದವಿರೆ ಆವರಣಕೆ ಮನ್ನಣ|
ಆವರಣ ಹೂರಣ ಚೆಂದವಿರೆ ಪ್ರೇರಣ
ಬದುಕು ಸುಂದರ ಪಯಣ ಮೂಢ||

Submitted by nageshamysore Fri, 02/13/2015 - 03:15

In reply to by kavinagaraj

ಕವಿಗಳೆ, ನಮಸ್ಕಾರ ಮತ್ತು ಧನ್ಯವಾದಗಳು. ಬದುಕಿನ ಸುಂದರ ಪಯಣದ ಅಭಿವ್ಯಕ್ತಿ ನಿಮ್ಮ ಚುಟುಕದಲ್ಲೂ ಅಷ್ಟೆ ಸೊಗಸಾಗಿ ಮೂಡಿಬಂದಿದೆ. ಬಂದದ್ದೆಲ್ಲ ಬರಲಿ ಭಗವಂತನ ದಯೆಯೊಂದಿರಲಿ ಎಂದುಕೊಂಡು ಹೊರಟರೆ ಎಂತಹ ಕುಗಾಳಿಯೂ, ಸುಗಾಳಿಯಾಗುವುದು :-)