"Daughter of India" ಬಿಬಿಸಿ ಡಾಕ್ಯುಮೆಂಟರಿ ಮತ್ತು ನಮ್ಮ ಮನಸ್ಸಾಕ್ಷಿ

"Daughter of India" ಬಿಬಿಸಿ ಡಾಕ್ಯುಮೆಂಟರಿ ಮತ್ತು ನಮ್ಮ ಮನಸ್ಸಾಕ್ಷಿ

~"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ" ಎಂದು ನಮ್ಮ ದೇಶದಲ್ಲಿ ಹೆಣ್ಣಿಗೆ ನಾವು ಕಲ್ಪಿಸಿರುವ ಸ್ಥಾನದ ಬಗ್ಗೆ ಬೀಗುತ್ತೇವಲ್ಲವೆ? ಅಥವಾ ಹೆಣ್ಣು ಬಾಲ್ಯದಲ್ಲಿ ತಂದೆಯಿಂದಲೂ, ವಿವಾಹದ ನಂತರದಲ್ಲಿ ಪತಿಯಿಂದಲೂ, ವೃದ್ಧಾಪ್ಯದಲ್ಲಿ ಮಗನಿಂದಲೂ ರಕ್ಷಣೆ ಹೊಂದುತ್ತಾಳೆಂಬ ಮನುವಿನ ನೀತಿಯ ಬಗ್ಗೆ ಹೆಮ್ಮೆಯಿಂದ ಭಾಷಣ ಬಿಗಿಯುತ್ತೇವಲ್ಲವೆ? ಇತ್ತೀಚೆಗೆ ಟಿವಿ ಮಾಧ್ಯಮದ ಚರ್ಚೆಯಲ್ಲಿ ಪಾಲುಗೊಂಡಿದ್ದ ಸಿನಿಮಾ ನಟಿ ಶಬಾನ ಆಜ಼್ಮಿ ಹೇಳಿದ್ದು ಹೀಗೆ - "ನೀವು ಪುರುಷರು ನಮ್ಮನ್ನು ಪೂಜಿಸಬೇಡಿ ಅಥವಾ ನಮ್ಮನ್ನು ರಕ್ಷಿಸುವಂತಹ (ಯಾರಿಂದ?) ಜವಾಬ್ದಾರಿಯನ್ನೂ ಹೊರಬೇಡಿ. ಹೆಣ್ಣನ್ನು ನಿಮ್ಮಂತೆಯೇ (ಪುರುಷರಂತೆಯೇ) ಸ್ವತಂತ್ರ ಅಸ್ತಿತ್ವವುಳ್ಳ ಒಬ್ಬ ವ್ಯಕ್ತಿಯಂತೆ ಕಂಡರೆ ಅದಷ್ಟೇ ಸಾಕು". ಈ ಹೇಳಿಕೆಯನ್ನು ವ್ಯಾಖಾನಿಸುವಾಗ ಈ ವಿಷಯದ ಬಗ್ಗೆ ಆಕೆಯ ಧರ್ಮದ ನಿಲುವನ್ನೋ,  ಆಕೆಯ ವೈಯುಕ್ತಿಕ ಜೀವನದ ನಿರ್ಧಾರಗಳನ್ನೋ ಕೆದಕಿದರೆ ಅದು ಈ ಲೇಖನದ ಉದ್ದೇಶದಿಂದ ವಿಷಯಾಂತರಗೊಂಡಂತಾಗುತ್ತದೆ, ಆದ್ದರಿಂದ ಆಕೆಯ ಹೇಳಿಕೆಯನ್ನು ನಮ್ಮ ದೇಶದ ಹೆಣ್ಣೊಬ್ಬಳು ಪುರುಷ  / ಪಿತೃ-ಪ್ರಧಾನ ಸಮಾಜದ ಗಂಡಸರಿಂದ ಏನನ್ನು ಎದುರುನೋಡುತ್ತಾಳೆ ಎಂದಷ್ಟಕ್ಕೇ ಅರ್ಥೈಸಿಕೊಂಡು ಮುಂದುವರೆಯುತ್ತೇನೆ.

ಕೆಲಸದಲ್ಲಿ ವ್ಯಸ್ತವಾದ್ದರಿಂದ ೨ ದಿನಗಳಿಂದ ಭಾರತದ ಸುದ್ದಿಯನ್ನು ಓದುವುದಕ್ಕಾಗಿರಲಿಲ್ಲ. ಇಂದು ನೋಡಿದಾಗ ಮುಖ್ಯ ವಿಷಯಗಳಲ್ಲಿ "ಬಿಬಿಸಿ ಡಾಕ್ಯುಮೆಂಟರಿ - ಡಾಟರ್ ಆಫ಼್ ಇಂಡಿಯ" ದ ಪ್ರಸಾರದ ಮೇಲೆ ಭಾರತ ಸರ್ಕಾರದ ನಿರ್ಬಂಧ" ನನ್ನ ಗಮನ ಸೆಳೆಯಿತು. ನಮ್ಮ ಘನ ಸರ್ಕಾರದ ಪ್ರವಕ್ತಾರ ವೆಂಕಯ್ಯ ನಾಯ್ಡು ಎಂಬ ಮಹಾಮಹಿಮನೊಬ್ಬ "ಈ ಚಿತ್ರವು ಭಾರತದ ಘನತೆಗೆ ವಿದೇಶಗಳಲ್ಲಿ ಮಸಿ ಬಳಿಯುವ ಪ್ರಯತ್ನ" ಎಂದು ಹೇಳಿದ್ದನ್ನೂ ಓದಿದೆ. ಸರಿ, ನಾನಿರುವುದು ಮಡಗಾಸ್ಕರ್ ಆದ್ದರಿಂದ ನೋಡೋಣವೆಂದು ಯೂಟ್ಯೂಬ್ ನಲ್ಲಿ ಹುಡುಕಿದೆ - ಸಿಕ್ಕಿತೂ ಕೂಡ. ತಕ್ಷಣವೇ ಅದನ್ನು ಡೌನ್ ಲೋಡ್ ಮಾಡಿಕೊಂಡೆ ಮತ್ತು ಪೂರ್ತಿ ನೋಡಿದೆ. ನಂತರ ಆ ಚಿತ್ರದ ನಿರ್ಮಾಪಕಿ ಲೆಸ್ಲೀ ಅಡ್ವಿನ್ ನಮ್ಮ ಎನ್.ಡಿ. ಟಿವಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡ (ಇದು ಮಾರ್ಚ್ ೪ರಂದು ಪ್ರಸಾರವಾಯಿತು) ಚಿತ್ರವನ್ನೂ ಡೌನ್ ಲೋಡ್ ಮಾಡಿಕೊಂಡು ನೋಡಿದೆ.

೨೦೧೩ರ ಡಿಸೆಂಬರ್ ನಲ್ಲಿ ದೇಶದ ರಾಜಧಾನಿ ನವದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಇಡೀ ದೇಶವನ್ನೇ ಬಡಿದೆಬ್ಬಿಸಿದ್ದು ನಿಜ. ಘಟನೆಯ ಬಗ್ಗೆ ದೇಶದ ಜನತೆಯ ಆಕ್ರೋಶವು ಕ್ರೊಢೀಕೃತವಾಗುವಂತೆ ಮಾಡುವಲ್ಲಿ ನಮ್ಮ ಮಾಧ್ಯಮಗಳ ಪಾತ್ರವೂ ಅಷ್ಟೇ ಮುಖ್ಯವಾಗಿತ್ತು. ಮತ್ತು ಆರೋಪಿಗಳಿಗೆ ಮರಣದಂಡನೆ ದೊರಕುವಂತೆ ಆಗಿದ್ದು (ಅದು ಈಗ ಸುಪ್ರೀಂ ಕೋರ್ಟ್ ನ ಮುಂದಿದೆ) ಎಲ್ಲರಿಗೂ ತಿಳಿದ ವಿಷಯ. ಆದರೆ ನಮ್ಮ ದೃಶ್ಯ-ಪತ್ರಿಕಾ ಮಾಧ್ಯಮಗಳೆಲ್ಲವೂ ವಿಫಲವಾಗಿದ್ದು ಸಮಾಜದ ಆತ್ಮಸಾಕ್ಷಿಯನ್ನು ನೇರವಾಗಿ ಪ್ರಶ್ನಿಸುವಲ್ಲಿ. ಘಟನೆ ನಡೆದಾಗ ಓದಿದ್ದ ಸುದ್ದಿಗಳಿಗಿಂತ ಈ ಚಿತ್ರವನ್ನು ನೋಡಿದಾಗ ಮನಸ್ಸಿನ ಮೇಲಾದ ಪರಿಣಾಮ ಆಘಾತಕಾರಿಯಾದದ್ದು!  ಆರೋಪಿಗಳಿಗೆ ಮರಣದಂಡನೆ ನೀಡುವುದರಿಂದ ನಾವು ಹುತ್ತವನ್ನು ಬಡಿಯಬಹುದಷ್ಟೆ. ಆದರೆ ಹಾವು ಸಾಯುವುದಿಲ್ಲ.  ಏಕೆಂದರೆ ಆ ಹಾವು ನಮ್ಮ ಮನೋಸ್ಥಿತಿ.

ಆದರೆ ಬಿಬಿಸಿಯಿಂದ ನಿರ್ಮಿತವಾದ ಈ ಚಿತ್ರದ ಪ್ರಸಾರವನ್ನು ನಮ್ಮ ಘನ ಸರ್ಕಾರವು ಕ್ಷುಲ್ಲಕ ಕಾರಣಗಳನ್ನು ಮುಂದೆ ಮಾಡಿ (ಬೇರಾವ ಕಾರಣಗಳೂ ಸಿಗದಿದ್ದುದರಿಂದ) ನಿರ್ಬಂಧಿಸಿದ್ದು ನಮ್ಮ ನೈತಿಕ ದಿವಾಳಿತನಕ್ಕೆ ಸಾಕ್ಷಿ. ಬ್ರಿಟನ್ನಿನಲ್ಲಿ  ಸಾಮಾಜಿಕ ಅನ್ಯಾಯಗಳು ನಡೆಯುವುದಿಲ್ಲವೇ, ಬಿಬಿಸಿ ಅದರ ಮೇಲೆ ಡಾಕ್ಯುಮೆಂಟರಿ ನಿರ್ಮಿಸಲಿ ಎಂಬ ಹೇಳಿಕೆ ನಮ್ಮ ಕೊಳಕು ಮನಸ್ಸಿಗೆ ಹೊರಗಿನವರೊಬ್ಬರು ಕನ್ನಡಿ ಹಿಡಿದರೆಂಬ ಅವಮಾನದಿಂದ ಬರುವಂತಹುದ್ದು. ಅದು ಪಕ್ಕದವನ ಎಲೆಯಲ್ಲಿ ಕತ್ತೆ ಸತ್ತುಬಿದ್ದಿರುವುದರಿಂದ ಅವನಿಗೆ ನನ್ನ ಎಲೆಯಲ್ಲಿನ ಸತ್ತಿರುವ ನೊಣದ ಬಗ್ಗೆ ಮಾತಾಡಲು ನೈತಿಕ ಹಕ್ಕಿಲ್ಲವೆಂಬ ಉಡಾಫ಼ೆಯ ಉತ್ತರ. ಆದರೆ ನನ್ನ ಎಲೆಯಲ್ಲಿ ಬಿದ್ದಿರುವ ನೊಣವನ್ನು ನಾನೇಕೆ ತೆಗೆದು ಬಿಸಾಡುವುದಿಲ್ಲವೆಂಬ ಪ್ರಶ್ನೆಗೆ ಇಲ್ಲಿ ಉತ್ತರವಿಲ್ಲ!

ಬಿಬಿಸಿ ಡಾಕ್ಯುಮೆಂಟರಿಯ ಪ್ರಸಾರದ ಮೇಲಿನ ಸರ್ಕಾರದ ನಿರ್ಬಂಧವನ್ನು ಸಮರ್ಥಿಸುವ ಹೆಚ್ಚಿನ ಪ್ರತಿಕ್ರಿಯೆಗಳು - ಇದು ವಿದೇಶಿ ನಿರ್ಮಾಪಕಿಯೊಬ್ಬಳ ದುರುದ್ದೇಶಪೂರಿತ ಕಿಡಿಗೇಡಿತನವೆನ್ನುವ, ಘಟನೆಯ ೧ ವರ್ಷದ ಬಳಿಕ ಅದನ್ನು ಪುನಃ ಕೆದಕುವ ಮತ್ತು ಈ ಚಿತ್ರದ ಪ್ರಸಾರದಿಂದ ಅತ್ಯಾಚಾರಕ್ಕೊಳಗಾದ ಜ್ಯೋತಿ ಸಿಂಗ್ (ನಿರ್ಭಯಾ)ಳ ಪರಿವಾರಕ್ಕೆ ಉಂಟಾಗಬಹುದಾದ ನೋವಿನ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುವ ಹೇಳಿಕೆಗಳು. ಆದರೆ ಇಂತಹ ಪ್ರಕರಣ ಸುಪ್ರೀಂ ಕೋರ್ಟ್ ಮುಂದೆ ಬಂದು ೧ ವರ್ಷದ ಮೇಲಾಗಿದ್ದರೂ, ಜಯಲಲಿತ - ಜನಾರ್ದನ ರೆಡ್ಡಿಗಳನ್ನು ಜೈಲಿನಿಂದ ಹೊರತರಲು ಕೋರ್ಟ್ ತೋರಿಸುವ ಆತುರತೆ ನಿರ್ಭಯಾ ಪ್ರಕರಣದಲ್ಲಿ ಒಂದೇ ಒಂದು ಹಿಯರಿಂಗ್ ಕೊಡಲು ಕೂಡ ತೋರುವುದಿಲ್ಲವೇಕೆಂಬ ಪ್ರಶ್ನೆಗೆ - ಕಾನೂನು ತನ್ನ ಕ್ರಮ ಕೈಗೊಳ್ಳುತ್ತಿದೆಯೆಂಬ ಜಾರಿಕೆಯ ಉತ್ತರ!

ಸುಮಾರು ೫೯ ನಿಮಿಷಗಳ ಕಾಲದ ಈ ಚಿತ್ರದಲ್ಲಿ ಬಿಂಬಿತವಾಗಿದ್ದು ಇಷ್ಟೇ - ಪ್ರಮುಖ ಆರೋಪಿ  ಬಸ್ ಚಾಲಕ ಮುಖೇಶ್ ಸಿಂಗ್ ನನ್ನು ನಡೆದ ಘಟನೆಯ ಬಗ್ಗೆ ಹೇಳುವಂತೆ ಮಾಡುವ - ಹಾಗೂ ಅದರಿಂದ ಅವನಿಗರಿವಿಲ್ಲದಂತೆಯೇ ಹೊರಬೀಳುವ ಕ್ರೂರ ಕರಾಳ ಮನೋಸ್ಥಿತಿಯ ಅನಾವರಣ; ಆರೋಪಿಯ ಪರ ವಾದಿಸಿದ ಲಾಯರುಗಳ - ಭಾರತದಲ್ಲಿ ಮಹಿಳೆಯ ಸ್ಥಾನ-ಮಾನದ ಬಗೆಗಿನ ಬಡಬಡಿಕೆ, ಒಂದು ವೇಳೆ ತನ್ನ ಮಗಳೇನಾದರೂ ವಿವಾಹ-ಪೂರ್ವ ಲೈಂಗಿಕ ಸಂಬಂಧವೇನಾದರೂ ಹೊಂದಿದಲ್ಲಿ ಅವಳನ್ನು ಮನೆಯವರೆಲ್ಲರ ಎದುರಿನಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವೆನೆಂದ ಎದೆ ತಟ್ಟಿ ಹೇಳುವ ಇನ್ನೊಬ್ಬ ಅಡ್ವೊಕೇಟ್ ಹೀಗೆ ನಮ್ಮ ದೇಶದ ಗಂಡಸರ ಮನೋಸ್ಥಿತಿಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತಾ ಹೋಗುತ್ತದೆ. ಹಾಗೆಯೇ, ಹೆಣ್ಣು ಹುಟ್ಟಿದಾಗ್ಗ್ಯೂ ಕೂಡ ಸಿಹಿ ಹಂಚಿ ಸಂಭ್ರಮಿಸಿದ, ಮಗಳೇ ಕೇಳಿದಂತೆ ಅವಳ ಮದುವೆಗೆಂದು ಇಟ್ಟಿದ್ದ ಚೂರುಪಾರು ಆಸ್ತಿಯನ್ನೂ ಸಹ ಫ಼ಿಸಿಯೋಥೆರಪಿ ಕೋರ್ಸ್ ಗೆ ಹಣ ಹೊಂದಿಸುವ ಸಲುವಾಗಿ ಮಾರಿದ ಜ್ಯೋತಿ ಸಿಂಗ್ ಳ ತಂದೆತಾಯಿಗಳ ನೋವು, ಅವಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದ ಪರಿಚಯದ ಯುವಕನೊಬ್ಬನಿಂದ ಜ್ಯೋತಿ ಸಿಂಗ್ ಎಂತಹ ಸಂವೇದನಾಶೀಲ ಹೆಣ್ಣು ಎಂಬ ವಿವರಗಳು ಇವೆಲ್ಲಾ ಈ ಚಿತ್ರದಲ್ಲಿವೆ. ಇಂತಹ ಚಿತ್ರವೊಂದರ ಮೂಲ ಉದ್ದೇಶ(ಗಂಡಿನ ಮನಸ್ಸಾಕ್ಷಿಯನ್ನು ಪ್ರಶ್ನಿಸುವುದು)ವನ್ನು ತಲುಪುಲು ದೃಶ್ಯಗಳ ಜೋಡಣೆ ಸಿನಿಮೀಯವಾಗಿ ಕಂಡುಬಂದರೆ - ಅದರಲ್ಲಿ ನನಗೆ ತಪ್ಪೇನೂ ಕಾಣಲಿಲ್ಲ.

ಚಿತ್ರವನ್ನು ಪೂರ್ತಿಯಾಗಿ ನೋಡಿದ ನಂತರ, ನಿರ್ಮಾಪಕಿ ಲೆಸ್ಲೀ ಅಡ್ವಿನ್ ಎನ್.ಡಿ. ಟಿವಿಯಲ್ಲಿ ಭಾಗವಹಿಸಿದ ಚರ್ಚೆಯನ್ನೂ ನೋಡಿದೆ. ಚಿತ್ರದ ಪ್ರಾಮಾಣಿಕ ಪ್ರಶ್ನೆಗಳು ನನ್ನನ್ನು ಎಷ್ಟಾಗಿ ಕಾಡಿತ್ತೆಂದರೆ ನಿನ್ನೆ ರಾತ್ರಿ ಪೂರ್ತಿ ನಿದ್ರೆಯೇ ಬರಲಿಲ್ಲ. ಆ ಪ್ರಶ್ನೆಗಳು ನನ್ನ ೫೦ ವರ್ಷದ ಇದುವರೆಗಿನ ಜೀವನದಲ್ಲಿ ಇದುವರೆಗೆ ಬಂದಿರುವ ಹೆಣ್ಣುಗಳ (ತಾಯಿ, ತಂಗಿಯರು, ಶಿಕ್ಷಕಿಯರು, ಸಹಪಾಠಿಗಳು, ಸ್ನೇಹಿತೆಯರು) ಪ್ರತಿ ನನ್ನ ನಡುವಳಿಕೆ ಹೇಗಿತ್ತೆಂಬ, ಹಾಗೂ ಅವು ಸರಿಯಾಗಿದ್ದವೇ ಎಂಬ ಅವಲೋಕನ ಮಾಡಿಕೊಳ್ಳುವಂತೆ ಮಾಡಿತ್ತು. ನನಗೆ ಬುದ್ಧಿ ತಿಳಿದಾಗಿನಿಂದಲೂ ನಾನು ನನ್ನ ಜೀವನದ ಪ್ರತಿ ಹಂತದಲ್ಲೂ ಲಿಂಗ-ಅಸಮಾನತೆಯನ್ನು ವಿರೋಧಿಸುತ್ತಾ ಬಂದಿದ್ದೇನೆಂಬ ಮನವರಿಕೆಯಾಗಿ ನಿದ್ದೆ ಹತ್ತಿದಾಗ ಬೆಳಗಿನ ಜಾವ ೫ ಘಂಟೆಯಾಗಿತ್ತು!

ನನಗೆ ವೈಯಕ್ತಿಕವಾಗಿ ಅನಿಸುವುದೆಂದರೆ, ಭಾರತದಲ್ಲಿ ನಡೆಯುವ ಹೆಣ್ಣಿನ ಮೇಲಿನ ಅತ್ಯಾಚಾರಗಳಿಗೆ ಮೂಲ ಕಾರಣ ಪುರುಷ  / ಪಿತೃ-ಪ್ರಧಾನ ಸಮಾಜದ ಮೌಲ್ಯಗಳು - ಹೆಣ್ಣು ಒಂದು ವಸ್ತುವಾಗಿರುವುದು (ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು .....ಎಂದು ಕಾವ್ಯಮಯವಾಗಿ ಹಾಡುವಂತೆ); ಹೆಣ್ಣು ಒಂದು ಸಂಪತ್ತಿನಂತೆ ಪರಿಗಣಿಸುವುದು (ಅವಳು ಒಂದು ಅನರ್ಘ್ಯ ರತ್ನದಂತೆ ಎಂದು ಹೇಳಿದ ಆರೋಪಿಯ ಪರದ ಲಾಯರ್ ನಂತೆ); ಹೆಣ್ಣು ಬರೇ ಸಂತಾನೋತ್ಪತ್ತಿಯ ಅಥವಾ ಭೋಗದ ಮಾಧ್ಯಮವಾಗಿರುವುದು, ಗೃಹಿಣೀ ಗೃಹಮುಚ್ಯತೆ ಎಂದು ಅವಳ ಜೀವನವನ್ನು ಬಹುತೇಕವಾಗಿ ನಾಲ್ಕು ಗೋಡೆಗಳ ನಡುವೆ ಸೀಮಿತವಾಗಿರುವಂತೆ ಮಾಡಿರುವುದು, ಸಮಾಜದಲ್ಲಿ ಅವಳ ಬಗ್ಗೆ ಲಿಂಗ-ನಿರ್ದಿಷ್ಟವಾದ ತಾರತಮ್ಯದ ಧೋರಣೆ (gender-specific bias), ವಿವಾಹವಾಗದ, ವಿವಾಹ ವಿಚ್ಛೇದನಕ್ಕೊಳಗಾದ ಅಥವಾ ಬಲಾತ್ಕಾರಕ್ಕೊಳಗಾದ ಹೆಣ್ಣಿನ ಬಗ್ಗೆ ಸಮಾಜದ ಕೀಳು ಧೋರಣೆ, ಹೆಣ್ಣೊಬ್ಬಳು ಏನು ಮಾಡಬೇಕು-ಏನು ಮಾಡಬಾರದು ಎಂಬ ಪುರುಷ ನಿರ್ಧಾರಿತ ಕಟ್ಟಳೆಗಳು, ಇವೆಲ್ಲವನ್ನೂ ಗತ್ಯಂತರವಿಲ್ಲದೇ ಒಪ್ಪಿಕೊಂಡು ಅದನ್ನೇ ವ್ಯವಸ್ಥೀಕರಿಸುವ ತಾಯಂದಿರು, ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಅಸಮಾನತೆ ಇವೆಲ್ಲವುಗಳಿಂದ ಒಟ್ಟಾರೆಯಾಗಿ ರೂಪುಗೊಂಡ ಸಾಮಾಜಿಕ ಮನೋಸ್ಥಿತಿ. ಒಂದೆಡೆ ಹೆಣ್ಣನ್ನು ಆದಿಶಕ್ತಿಯೆಂದು ಪೂಜಿಸುವುದೂ, ಮತ್ತೊಂದೆಡೆ ಮೇಲೆ ಹೇಳಿದ - ಸಮಾಜದಿಂದ ಅಂಗೀಕೃತವಾದ ಶೋಷಣೆ - ಇದು ನಮ್ಮ ಆಷಾಡಭೂತಿತನವಲ್ಲದೇ ಮತ್ತೇನು? ಇತ್ತಿಚೆಗೆ ನಡೆದ All India Bakchodನ Roaster Episodeನಲ್ಲಿ ಪ್ರಸಿದ್ಧ ನಿರ್ಮಾಪಕ ನಿರ್ದೇಶಕ ಕರಣ್ ಜೋಹರ್ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ತನ್ನ ತಾಯಿಯ ಎದುರಲ್ಲೇ "ರಣವೀರ್ ಸಿಂಗ್ ಹಿರಿಯ ನಟಿಯರಾದ ರೀಮಾ ಲಾಗೂ, ಫ಼ರೀದಾ ಜಲಾಲ್ ರಂಥವರನ್ನೂ ನೆನೆಸಿಕೊಳ್ಳುತ್ತಾ ಮುಷ್ಟಿಮೈಥುನ ಮಾಡಿಕೊಳ್ಳುತ್ತಾನೆಂದು" ಜೋಕ್ ಮಾಡುವುದು ಮತ್ತು ಇಂತಹ ಜೋಕ್ ಗೆ ಆಘಾತಗೊಳ್ಳುವ ಬದಲು ಚಪ್ಪಾಳೆ ತಟ್ಟುವ ೪೦೦೦ ಪ್ರೇಕ್ಷಕರ ಗುಂಪು  ನಮ್ಮ ಸಮಾಜದ ವಿಕೃತ ಕಾಮನೆಗಳ ಪ್ರತಿಬಿಂಬವಲ್ಲವೇ? ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಬೇಕೆಂಬ ಕೂಗು ಪುರುಷ-ಪ್ರಧಾನ ಸಮಾಜದ ಲೈಂಗಿಕ ತೃಷೆಯನ್ನು ಕಾನೂನಿನ ಚೌಕಟ್ಟಿನಡಿಯಲ್ಲಿಯೇ ಪೂರೈಸಿಕೊಳ್ಳಬೇಕೆಂಬ ಹುನ್ನಾರವೆಂದು ಅನಿಸುವುದಿಲ್ಲವೇ?

ನ್ಯೂನತೆಗಳಿಲ್ಲದ ಸಮಾಜ ಎಲ್ಲಿಯೂ ಇಲ್ಲ. ಆದರೆ ಲಿಂಗ ಸಮಾನತೆಯ (gender equality) ವಿಷಯದಲ್ಲಿ ಮಾತ್ರ ನಮ್ಮ ದೇಶದ ಸಮಾಜ ಒಂದು ರೋಗಗ್ರಸ್ತ ಸಮಾಜ ಎಂಬುದನ್ನು ಎತ್ತಿ ತೋರಿಸುವ ಚಿತ್ರ ಇದು. ವಿದೇಶಗಳಲ್ಲಿ ಅತ್ಯಾಚಾರಗಳು ನಡೆಯುವುದಿಲ್ಲವೇ? ಎಂದು ನೀವು ಕೇಳಬಹುದು. ಹೌದು - ಅದು ಎಲ್ಲೆಡೆಯೂ ನಡೆಯುತ್ತದೆ. ಆದರೆ ಕಾರಣಗಳು ಬೇರೆ ಅಷ್ಟೆ. ವಿದೇಶಗಳಲ್ಲಿ ಬಲಾತ್ಕಾರಕ್ಕೊಳಗಾದ ಹೆಣ್ಣನ್ನು ಕೀಳಾಗಿ ಕಾಣುವುದಿಲ್ಲ; ಆಕೆಯು ತನ್ನ ಜೀವನವನ್ನು ಮತ್ತೆ ರೂಪಿಸಿಕೊಳ್ಳಬಹುದು ಮತ್ತು ಸಮಾಜ ಅದಕ್ಕೆ ಸಹಕಾರವನ್ನೂ ನೀಡುತ್ತದೆ. ಉದಾಹರಣೆಗೆ, ಈ ಚಿತ್ರದ ನಿರ್ಮಾಪಕಿ ಲೆಸ್ಲೀ ಕೂಡ ಹಾಗೆ ಬಲಾತ್ಕಾರಕ್ಕೊಳಗಾದ ಒಂದು ಹೆಣ್ಣು. ಆದರೆ ನಮ್ಮ ದೇಶದಲ್ಲಿ ಹಾಗಲ್ಲ. ನಮ್ಮ ದೇಶದಲ್ಲಿನ ಕಾರಣಗಳು ಯಾವುದೇ ಕಾನೂನಿನಿಂದಾಗಲೀ, ಮನೋವೈದ್ಯಕೀಯ ವಿಧಾನಗಳಿಂದಾಗಲೀ ಸರಿಪಡಿಸುವಂತಹುದ್ದಲ್ಲ. ಇನ್ನು ಮೇಲೆ ಹೇಳಿದ ಕಾರಣಗಳು ನಗರ-ಪಟ್ಟಣಗಳಲ್ಲಿ ಬಹಳ ಕಡಿಮೆ, ಕಾಲ ಬದಲಾಗುತ್ತಿದೆಯೆಂದು ನಾವು ವಾದಿಸಬಹುದು. ಆದರೆ ಈ ಕಾರಣಗಳು ಇಂದಿಗೂ ನಮ್ಮ ದೇಶದ ಬಡತನದ ರೇಖೆಗಿಂತ ಕೆಳಗಿರುವ ಪ್ರತಿಶತ ೫೦ಕ್ಕೂ ಹೆಚ್ಚಿನ ಜನಸಂಖ್ಯೆಯಲ್ಲಿ ಅದು ನಗರ-ಪಟ್ಟಣ-ಹಳ್ಳಿಗಳೆಂಬ ಭೇದವಿಲ್ಲದೆ ಆಳವಾಗಿ ಬೇರುಬಿಟ್ಟಂಥವು. ಈ ಕಾರಣಗಳು ದೂರಾಗಬೇಕಾದರೆ ಅದು ಹೆಣ್ಣು ಒಂದು ಸ್ವತಂತ್ರ ವ್ಯಕ್ತಿ ಎನ್ನುವ ಭಾವನೆ  ನಮ್ಮ ದೇಶದ ಪಿತೃ-ಪ್ರಧಾನ ಸಾಮಾಜಿಕ ವ್ಯವಸ್ಥೆಯ ಅಚ್ಚಿನಲ್ಲಿ ಶತಶತಮಾನಗಳಿಂದ ರೂಪುಗೊಂಡ ಎಲ್ಲ ಜನಗಳ ಮನಸ್ಸಿನಲ್ಲಿ ಮೂಡಬೇಕು. ಅದಕ್ಕೆ ಪೂರಕವಾದ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಬೇಕು. ಇದು ಸಾಧ್ಯವೇ ಎಂಬುದೆ ಒಂದು ಯಕ್ಷಪ್ರಶ್ನೆ.

ಕೊನೆಯದಾಗಿ ಹೇಳುವುದೆಂದರೆ - ನಮ್ಮೆಲ್ಲ ದ್ವಂದ್ವ ನಿಲುವುಗಳನ್ನೂ, ಆಷಾಢಭೂತಿತನಗಳನ್ನೂ, ನಿರಾಕರಿಸುವ ಪ್ರವೃತ್ತಿಗಳನ್ನು (Denial Mode) ಬದಿಗೊತ್ತಿ, ಪ್ರಾಮಾಣಿಕವಾದ ಆತ್ಮಸಾಕ್ಷಿಯೊಂದಿಗೆ ಈ ಚಿತ್ರವನ್ನು ನೋಡಿದಲ್ಲಿ ಹೆಣ್ಣಿನ ದೃಷ್ಟಿಯಲ್ಲಿ ನಮ್ಮ ದೇಶದ ಗಂಡು ಜಗತ್ತಿನೆದುರಲ್ಲಿ ಬೆತ್ತಲೆ ನಿಂತಂತೆ ಅನುಭವವಾಗುವುದು ಸತ್ಯ. ನಮ್ಮ ಸರ್ಕಾರದ ಚಿತ್ರದ ಮೇಲಿನ ನಿರ್ಬಂಧ ಕೂಡ ಚಿತ್ರವು ಉತ್ತರಿಸಲಾಗದ ಪ್ರಶ್ನೆಗಳನ್ನು ಎತ್ತಿರುವುದು ಎಂಬ ಕಾರಣಕ್ಕಾಗಿಯೇ ಎಂದು ಸ್ಪಷ್ಟವಾಗುವುದೂ ಖಂಡಿತ. 

- ಕೇಶವಮೈಸೂರು

Comments

Submitted by H A Patil Sun, 03/08/2015 - 20:16

ಕೇಶವ ಮೈಸೂರು ರವರಿಗೆ ವಂದನೆಗಳು
ಡಾಟರ್‍ ಆಫ್‍ ಇಂಡಿಯಾ ಡಾಕುಮೆಂಟರಿ ಕುರಿತ ತಮ್ಮ ಬರಹದ ದಷ್ಟಿ ಕೋನ ಓದುಗನನ್ನು ಚಿಂತನೆಗೆ ಹಚ್ಚುತ್ತದೆ. ಈ ಕುರಿತಂತೆ ಒಂದು ಅಂಕಣ ಬರಹ ಇಂದಿನ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾಗಿದೆ. ಉತ್ತಮ ಸಕಾಲಿಕ ಬರಹ ಧನ್ಯವಾದಗಳು.

Submitted by keshavmysore Sun, 03/08/2015 - 20:57

In reply to by H A Patil

ಪಾಟೀಲರಿಗೆ ನಮಸ್ಕಾರಗಳು,
ನಿಮ್ಮ ಪ್ರತಿಕ್ರಿಯೆ ಓದಿದೊಡನೆ ಇಂದಿನ e-ಪ್ರಜಾವಾಣಿಯ ಅಂಕಣದ ಬರಹವನ್ನು ಓದಿದೆ. ಈ ಚಿತ್ರವನ್ನು ನೋಡಿದ ಎಲ್ಲರಿಗೂ ಹಾಗೆ ಅನಿಸುವುದರಲ್ಲಿ ಸಂದೇಹವೇ ಇಲ್ಲ. ನಿರ್ಮಾಪಕಿ ಏನಾದರೂ ಕಾನೂನು ಉಲ್ಲಂಘಿಸಿದ್ದಲ್ಲಿ, ಆಕೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅಡ್ಡಿಯಿಲ್ಲ. ಆದರೆ ಚಿತ್ರವನ್ನು ನೋಡುವುದೇ ಸರಿಯಲ್ಲ ಎಂದರೆ ಅದು ಸತ್ಯವನ್ನು ಎದುರಿಸಲಾಗದ ಪಲಾಯನವಾದ.

Submitted by anand33 Mon, 03/09/2015 - 14:53

'ಡಾಟರ್ ಆಫ್ ಇಂಡಿಯಾ ಡಾಕ್ಯುಮೆಂಟರಿ' ಮೇಲೆ ಭಾರತದ ನಿಷೇಧ ತನ್ನ ಕುರೂಪವನ್ನು ನೋಡುವ ಧೈರ್ಯವಿಲ್ಲದ ವ್ಯಕ್ತಿ ಕನ್ನಡಿಯನ್ನೇ ನಿಷೇಧ ಮಾಡಿದಂತೆ ಅತ್ಯಂತ ಹಾಸ್ಯಾಸ್ಪದವಾಗಿದೆ ಹಾಗೂ ನಮ್ಮ ವಿವೇಕದ ಸಂಪೂರ್ಣ ದಿವಾಳಿತನವನ್ನು ಜಗತ್ತಿನ ಎದುರು ತೋರಿಸಿದಂತೆ ಆಯಿತು.