ಕೊಟ್ಟು ಪುರುಷ, ಪಡೆದು ಪ್ರಕೃತಿ..

ಕೊಟ್ಟು ಪುರುಷ, ಪಡೆದು ಪ್ರಕೃತಿ..

ಸೃಷ್ಟಿಯ ಅತ್ಯಮೋಘ, ಅದ್ಭುತ ಪರಿಕಲ್ಪನೆಯಲ್ಲಿ ಪ್ರಕೃತಿ-ಪುರುಷದ ಸಂವಾದಿ ಪಾತ್ರ ಆ ಸಮಷ್ಟಿತ ಸ್ಥಿತಿಯ ಅಭಿವ್ಯಕ್ತ, ಮೂರ್ತ ರೂಪವೆನ್ನಬಹುದು. ಅವೆರಡರ ಸರಸ-ಸಲ್ಲಾಪದ ಪರಿಯೆ ಜಗದ ಮೂರ್ತಾಮೂರ್ತ ರೂಪಗಳೆಲ್ಲದರ ಪ್ರಸ್ತಾರ-ವಿಸ್ತಾರಕ್ಕೆ ಕಾರಣಿಭೂತವಾದ ಕಾರಣ, ಅವುಗಳ ಕುರಿತಾದ ಅದಮ್ಯ ಕುತೂಹಲ, ಜೀವಕ್ಕೆ. ಅವೇನು, ಅವುಗಳ ಮೂಲ ಸ್ವರೂಪವೇನು? ಬದುಕಿನ ವಿಡಂಬನೆಯಲ್ಲಿ ಅವುಗಳು ವಹಿಸುವ ಪಾತ್ರವೆಂತದ್ದು? ಅವುಗಳು ಪ್ರತಿನಿಧಿಸುವ ಸತ್ವಗಳ ಪ್ರಕಟಾರ್ಥವೇನು? ಅವೇನು ಕಡಿವಾಣದ ಮೂಲಕ ನಿಯಂತ್ರಣದ ಅಪೇಕ್ಷೆಯನ್ನು ಬಿಂಬಿಸುತ್ತವೆಯೊ, ಅಥವ ಸ್ವೇಚ್ಛೆಯ ಮುಖೇನ ಸ್ವಚ್ಛಂದತೆಯನ್ನು ಸಾರುವ ಸ್ವೈರವಿಹಾರದ ಲಹರಿಗಳೊ? ಹೀಗೆ ನೂರೆಂಟು ಪ್ರಶ್ನೆಗಳನ್ನೆಬ್ಬಿಸಿ ತಳಬುಡ ಸೋಸುವಂತೆ ಪ್ರೇರೇಪಿಸುವ ಅವುಗಳ ನಿಗೂಢ ಸತ್ವ ಒಮ್ಮೊಮ್ಮೆ ಸರಳ ಪ್ರಕ್ಷೇಪದಂತೆ ಕಂಡರೆ, ಮತ್ತೊಮ್ಮೆ ಸಂಕೀರ್ಣ ಒಗಟಿನಂತೆಯೂ ಕಾಣಿಸಿಕೊಳ್ಳುತ್ತದೆ. ಅವುಗಳ ಕುರಿತಾದ ಸ್ಪಷ್ಟ, ಸಂಪೂರ್ಣ, ಪರಿಪೂರ್ಣ ಚಿತ್ರಣ ಸಿಗುವುದು ತುಸು ಕಸರತ್ತಿನ ಮಾತೆ.  ಅಷ್ಟೇಕೆ, ಸ್ವಯಂ ಆ ಪ್ರಕೃತಿ ಪುರುಷಗಳಿಗೆ ಎಷ್ಟೊ ಬಾರಿ ಸಂದೇಹ, ಸಂಶಯ, ಅನುಮಾನ ಬಂದುಬಿಡಬಹುದು - ತಮ್ಮದೆ ಅಸ್ತಿತ್ವದ ಬಗೆಗೆ. ಅಂತದ್ದೊಂದು ಸಂಧರ್ಭದಲ್ಲಿ ನಡೆಯುವ ಪ್ರಕೃತಿ-ಪುರುಷಗಳ ನಡುವಿನ ಸಂವಾದ ಈ ಕೆಳಗಿನ ಕವಿತೆ. ಕೊಟ್ಟು ಕಳೆದುಕೊಳ್ಳುವ ಪುರುಷ, ಪಡೆದು ತುಂಬಿಕೊಳ್ಳುವ ಪ್ರಕೃತಿ ಎನ್ನುವುದು ಮೇಲ್ನೋಟದ ಕಾಣ್ಕೆಯಾದರು, ಸೂಕ್ಷ್ಮಸ್ತರದ ಅವಲೋಕನದಲ್ಲಿ ಕೊಟ್ಟು ಪಡೆದುದೆಲ್ಲ ಕಲಸುಮೇಲೋಗರವಾಗಿ, ವಿಭಿನ್ನ ಆಯಾಮಗಳಲ್ಲಿ ಪರ್ಯಾಯ ರೀತಿಯ ಪ್ರಾತಿನಿಧಿಕಗಳಾಗುವ ಗೊಂದಲವೂ ಸಮ್ಮಿಳಿತವಾಗಿ ಅಂತರ್ಗತವಾಗಿದೆ. ಒಟ್ಟಾರೆ ಅನಾದಿ ಕಾಲದ ಈ ಮೂಲ ಸ್ವರೂಪಿ ತತ್ವಗಳ ಕುರಿತಾದ ಕುತೂಹಲ ನಿತ್ಯವೂ ಜೀವಂತ!

ಕೊಟ್ಟು ಪುರುಷ, ಪಡೆದು ಪ್ರಕೃತಿ..
_______________________

ಬೆಳದಿಂಗಳಡಿ 
ನೆರಳು ಮರದ ಕುಡಿ
ಎದೆಗೊರಗಿ ಮಾತಾಡಿತ್ತು -
ಮೌನ ಬಿಮ್ಮನೆ ಪ್ರೇಕ್ಷಕನಾಗಿ ||

ಚಿಗುರು ಬೆರಳ ಹೆಣೆದು
ಹಾವ್ತೋಳಿಗೆ ತೋಳ್ಬೆಸೆದು
ಉಲಿದ ಪ್ರಶ್ನೆ ಗಹನ
ಏನೀ ಪುರುಷ ಪ್ರಕೃತಿ ಮರ್ಮ? ||

ಗಹಿಗಹಿಸಿತು ಮೌನ ಗೌಣ
ಗಹನಕು ಚಿಂತನೆ ಕ್ರಮಣ
ಸಖಿ, ಕಳೆದುಕೊಳುವುದೆ ಪುರುಷ
ಅದ ಪಡೆಯುವ ಸುಖಿ ಪ್ರಕೃತಿ ||

ಅರಿಯಲಿಲ್ಲ ಸಾರ; ತಲೆಯೆತ್ತಿ
ಪ್ರಶ್ನೆಯಾದವಳಿಗಿತ್ತ ಮುತ್ತು..
ಜಡಶಕ್ತಿ ನಿಷ್ಕ್ರಿಯ, ನಿಶ್ಚಲ ಕುಲ
ವ್ಯಯಿಸದ ಚಲನೆ, ಸೃಷ್ಟಿಗೆ ಮೂರ್ತ ||

ನೀಡುತಲೆ ಪುರುಷ ವ್ಯಯ
ಪಡೆದ ಪ್ರಕೃತಿ ಅವ್ಯಯ ತ್ಯಾಗಿ
ಕೊಟ್ಟು ಪಡೆದ ಸಮನ್ವಯ ಶಕ್ತಿ
ಮೊತ್ತದಲಿ ಸಮಷ್ಟಿಯೆ ತುಲನೆ ||

ಕೊಟ್ಟ ಹೆಚ್ಚುಗಾರಿಕೆ, ಪಡೆದ ಭಾರ
ತೂಗಿಸಿ, ಸಮತೋಲಿಸಿ ಅವಲಂಬನೆ
ನಿಜದಿ ಎರಡಲ್ಲ - ಪ್ರಕೃತಿ ಪುರುಷ
ಅದ್ವೈತದ ದ್ವೈತರೂಪದ ಮಾಯೆ ||

ವಿಕಸಿಸಲು ಸೃಷ್ಟಿ, ಜೀವನ ದೃಷ್ಟಿ
ವಿದಳನದಿಂದ ಸಮ್ಮಿಲನ ಕೃಷಿ
ಕೊಟ್ಟು ಪಡೆದ ಲೆಕ್ಕಾಚಾರ ಲೌಕಿಕ
ಸಖಿ, ಜಗದ ಚೌಕಾಭಾರವಷ್ಟೆ ಸಂಗತ ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by nageshamysore Fri, 03/13/2015 - 03:42

ಸಂಪದಿಗರೆ, ಮೊದಲ ಬಾರಿ ಪ್ರಕಟಿಸಿದ್ದು ಮುನ್ನೋಟ ಸರಿಯಾಗಿದ್ದರು ಕೂಡ), ಸಾಲುಗಳೆಲ್ಲ ಕಲಸಿಕೊಂಡುಬಿಟ್ಟಿತು. ಅದಕ್ಕೆ ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ.

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by H A Patil Tue, 03/17/2015 - 20:54

ನಾಗೇಶ ಮೈಸೂರು ರವರಿಗೆ ವಂದನೆಗಳು
ಪ್ರಕೃತಿ ಮತ್ತು ಪುರುಷರ ಕುರಿತು ಮಾರ್ಮಿಕವಾಗಿ ಬರೆದಿದ್ದೀರಿ, ಅವೆರಡೂ ಸೃಷ್ಟಿ ಯ ಮೂಲ ಧಾತುಗಳು ಅವೆರಡಕ್ಕೂ ಸಮಾನ ಸ್ಥಾನ ಮಾನಗಳಿವೆ ಎಂಬುದನ್ನು ಚೆನ್ನಾಗಿ ನಿರೂಪಿಸದ್ದೀರಿ ಧನ್ಯವಾದಗಳು.

Submitted by nageshamysore Wed, 03/18/2015 - 20:09

In reply to by H A Patil

ಪಾಟೀಲರೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರಕೃತಿ ಪುರುಷಗಳ ಮೂಲಧಾತು ಕಲ್ಪನೆ, ಸೃಷ್ಟಿಯಲ್ಲಿ ಗೋಚರವಿದ್ದು ಅಗೋಚರವಿರುವ ಅದ್ಭುತಗಳಲ್ಲಿ ಒಂದು. ಆದರೆ ಅದರ ಸರಳ ಮತ್ತು ನೇರ ಪ್ರಕಟ ರೂಪದಿಂದಾಗಿ ಆ ಮಹತ್ವ ಅವರಣದೊಳಗಡೆ ಅಡಗಿ ಮಸುಕಾಗಿಹೋಗಿರುತ್ತದೆ. ಆ ಧಾತುಗಳೆರಡರ ಪರಸ್ಪರ ಅವಲಂಬನೆಯೆ ಸೃಷ್ಟಿಚಕ್ರದ ಪ್ರೇರಕ ಶಕ್ತಿ ಎನ್ನುವುದು ಮತ್ತೊಂದು ಗಣನೀಯ ಅಂಶ!

Submitted by kavinagaraj Wed, 03/25/2015 - 12:34

ನಾಗೇಶರೇ, ಗಹನವಾದ ವಿಷಯವೇ ನನ್ನ ಭಾವುಕ ಮನಸ್ಸನ್ನು ಮತ್ತೆಲ್ಲೋ ಕರೆದೊಯ್ದಿತು. ಒಂದು ನುಣುಪಾದ ಕಲ್ಲನ್ನು ಕೈಯಲ್ಲಿ ಹಿಡಿದಾಗ ಆ ಕಲ್ಲು ನನ್ನಿಂದಲೂ ಆಗಿರಬಹುದು ಎಂದು ಅನ್ನಿಸಿತು! 'ಅಹಂ ಬ್ರಹ್ಮ?' ಸನಾತನ ಧರ್ಮ ಹೇಳುವಂತೆ ಆತ್ಮಕ್ಕೆ ಅಳಿವಿಲ್ಲ. ಎಷ್ಟೋ ಸುದೀರ್ಘ ಹಿಂದಿನ ಕಾಲದಲ್ಲಿ ಹೊಂದಿದ್ದ ಪಂಚಭೂತಗಳ ಶರೀರ ಕಾಲಧರ್ಮಕ್ಕನಗುಣವಾಗಿ ಪಂಚಭೂತಗಳಲ್ಲಿ ಒಂದಾದಾಗ ಭೂಮಿಯಲ್ಲಿ ಸೇರಿದ ಭಾಗ ಕ್ರಮೇಣ ತನ್ನ ಧರ್ಮಕ್ಕನಗುಣವಾಗಿ ಶಿಲೆಯಾಗಿರಬೇಕು. ನನ್ನ ಈಗಿನ ಅವತಾರದಲ್ಲಿ ಆ ಕಲ್ಲನ್ನು ನಾನು ಹಿಡಿದುಕೊಂಡಿರುವೆ. ನನ್ನ ಅಂಶ ಈ ಕಲ್ಲಿನಲ್ಲಿಲ್ಲವೆಂದು ಹೇಳಲು ಸಾಧ್ಯವೇ? ಸೃಷ್ಟಿಕರ್ತನು ನಾನೇ, ಲಯಕರ್ತನೂ ನಾನೇ, ಸ್ಥಿತಿಗೂ ಕಾರಣ ನಾನೇ! ಹೇಳುತ್ತಾ ಹೋದರೆ ದೊಡ್ಡ ಲೇಖನವೇ ಆಗಿಬಿಡಬಹುದು. ವಿಷಯಾಂತರವಾಯಿತು, ಕ್ಷಮಿಸಿ. ಕೊಡುವುದು, ತೆಗೆದುಕೊಳ್ಳುವುದು ಇದು ಸಹಜ ನಿಯಮ. ಅಂತರಂಗಕ್ಕಿಳಿದರೆ, ತಿಳಿಯುವುದು ಕೊಡುವುದು, ತೆಗೆದುಕೊಳ್ಳುವುದು ಇಬ್ಬರೂ ಒಬ್ಬರೇ!!

Submitted by nageshamysore Thu, 03/26/2015 - 10:48

In reply to by kavinagaraj

ಕವಿಗಳೆ ನಿಮ್ಮ ಮಾತು ನಿಜ. ಮಥನಾಂತರಾಳಕ್ಕಿಳಿದರೆ ಪ್ರತಿಯೊಂದು ಚರಾಚರವು ಮೂಲ ಸೃಷ್ಟಿಯ ಜತೆ ಒಂದಿಲ್ಲೊಂದು ರೀತಿಯಲ್ಲಿ ತಳುಕು ಹಾಕಿಕೊಂಡು ಅದರ ಅಂಶದ ತುಣುಕೊಂದನ್ನು ತನ್ನ ಜತೆಗೆ ಬೆಸೆದುಕೊಂಡೆ ಬಂದಿರಬೇಕು ಅನಿಸುತ್ತದೆ. ಕೆಲವು ಜೀವಂತ ರೂಪದಲ್ಲಿದ್ದರೆ ಮತ್ತೆ ಕೆಲವು ಜೀವವಿರದ ಕಲ್ಲಿನ ಹಾಗೆ. ಎಲ್ಲವೂ ಅಣುಗಳೆ ಎಂದ ಮೇಲೆ ಎಲ್ಲವು ಒಂದೆ ಎನ್ನುವ ಅದ್ವೈತ ಭಾವ, ಊಹೆಯ ಪರಿಧಿಯ ಸೀಮೋಲ್ಲಂಘನ ಮಾಡಿಸಿಬಿಡುತ್ತದೆ. ಹೀಗಾಗಿ ನೀವು ಅನುಭವಿಸಿದ ಭಾವೋತ್ಕರ್ಷವನ್ನು ನಾನೂ ಊಹಿಸಿಕೊಳ್ಳಬಲ್ಲೆ. ತಮ್ಮ ಸೊಗಸಾದ ಪ್ರತಿಕ್ರಿಯೆಗೆ ಧನ್ಯವಾದಗಳು.