ಕಣ್ಮುಚ್ಚಿದ ಹೊತ್ತಲಿ.....

ಕಣ್ಮುಚ್ಚಿದ ಹೊತ್ತಲಿ.....

ಮನಃಪಟಲದವಳ 
ತುಂಬಿಕೊಂಡೆ ಕಣ್ಮುಚ್ಚಿದೆ
ಅಲೆಅಲೆಯಾಗವಳ ಕಣ್ಣ ಹನಿ ಸ್ವಗತ..
ಹರಿಸಿದ್ದು ಕಾಂತಿಯೊ
ಕಂಬನಿಯ ಕುಯಿಲೊ ಕಾಣೆ
ಹತ್ತಿದೊಲೆಯಂತೆ ಭುಗಿಲವಳ ನಗೆ ಜಿಗಿತ ||

ಜಡಿಮಳೆಯಾದವಳಲ್ಲ ಮಾತಲಿ
ಹಿಡಿ ಮಲ್ಲಿಗೆಯ ಕಂಪಿನವಳು
ಮುಡಿಯಲಿ ಬಿಡಲಿ ಕಂಪಿನ ಸೊಗಡ ನೀರೆ..
ನೀರವ ಮೌನದ ಬಿಸಿಯುಸಿರು
ನಿಶ್ಯಬ್ದದೊಲುಮೆ ತರಂಗ ಶ್ರವಣಾತೀತ
ನಿಸರ್ಗ ಬಳಸಿತವಳ ಮೈಗುಡಿಸುತ ಸೀರೆ ..||

ಎತ್ತಲೊ ಬೀಸಿದ ಮಾರುತ
ನೇವರಿಸಿ ಕುರುಳ ತಂಪಾಗಿಸಿ ನೆತ್ತಿ
ನೆನಪಿಸಿತವಳ ಮುತ್ತ ತಂಪಿನ ಸ್ವಾತಿ ಹನಿ..
ಯಾಕಿಂದಿಷ್ಟೊಂದು ನೆನಪು ?
ಕಾಡುತಿದೆ ಕಡಲಲೆಯ ತೆರದಿ
ಮುಚ್ಚಿದ ಕಣ್ಣೊಳ ಬಿಂಬ ಬರಿಯವಳ ತಿದಿ .. ||

ಗುದ್ದಲಿಲ್ಲ ಮುಷ್ಟಿಯುದ್ದದಿ
ಒಳಗುದಿಯ ಬಿಚ್ಚಲೆಂತೊ ನವಿರು?
ಅವಳ ಜಾಡಿಗೆ ಸುರಿದ ಮಕಮಲ್ಲಿನ ಹಾಸು...
ನಡೆದಳಾರದೊ ಕೈ ಹಿಡಿದು ;
ಅಡಿಯಿಟ್ಟವಳ ಕಾಲಿಗೆ ಮುಳ್ಳು
ತೊಡರದಂತೆ ತಡೆದೆ, ರಥ ಸಾಗುವ ತನಕ.. ||

ಅಚ್ಚೊತ್ತಿ ಹಾಸಿನ ಮೇಲಿನ ಗಾಲಿ
ಉರುಳಿಹೋಗಿತ್ತು ಹಿಡಿದೆ ದಾರಿ
ನೆಟ್ಟ ನೋಟ ದಿಟ್ಟಿಸಿತ್ತೆ, ನಿರ್ಭಾವದ ನೋವಲಿ..
ಬಿಡಲಿಲ್ಲ ನೋಡು ಹಠವ
ಕಾದಲ್ಲೆ ನಿತ್ಯ ದಿಟ್ಟಿಸುವ ಚಟವ
ಋತುಗಳುರುಳಿದವದೆಷ್ಟೊ ಮುಚ್ಚಿದ ಕಣ್ಣಡಿಯೆ ||

------------------------------------------------
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
 

Comments

Submitted by H A Patil Tue, 03/17/2015 - 20:39

ನಾಗೇಶ ಮೈಸೂರು ರವರಿಗೆ ವಂದನೆಗಳು
ಕಣ್ಮುಚ್ಚಿದ ಹೊತ್ತಲ್ಲಿ ಕವನ ಓದಿ ಖುಷಿಯಾಯಿತು ಬಹಳ ಸೂಕ್ಷ್ಮ ಒಳ ನೋಟಗಳುಳ್ಳ ರಚನೆ ಧನ್ಯವಾದಗಳು.

Submitted by nageshamysore Wed, 03/18/2015 - 20:20

In reply to by H A Patil

ಪಾಟೀಲರೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಭಾವ ಜೀವಿಯೊಬ್ಬನ ನೆನಪಿನ ಯಾತ್ರೆಯಲ್ಲಿ ಹೇಗೆ ಭಾವನೆಗಳು ಜೀವಂತವಾಗಿರಬಹುದೆಂಬ ಅನಿಸಿಕೆಯನ್ನು ಬರಹ ರೂಪಕ್ಕಿಳಿಸಿದ ರೀತಿಯಿದು. ಅದರ ಸೂಕ್ಷ್ಮಜ್ಞತೆಯನ್ನು ಗುರುತಿಸಿದ್ದಲ್ಲದೆ ಮೆಚ್ಚಿಕೊಂಡ ತಮ್ಮ ಕವಿ ಹೃದಯಕ್ಕೆ ಹೃತ್ಪೂರ್ವಕ ನಮನಗಳು