' ಸಿಹಿ ಕಹಿ ಯುಗಾದಿ '
ದಶ ದಿಕ್ಕಿಗೂ ಹರಡಿದ
ಕರಿಯ ಮರಭೂಮಿ
ಬಟಾ ಬಯಲಲ್ಲಿ ನಿಂತಿದೆ
ಬೃಹತ್ ಕಹಿಬೇವು
ಭೂಗರ್ಭದಾಳಕೆ
ತಾಯಿ ಬೇರನು ಇಳಿಸಿ
ಅಂತರಾಳದ
ಜಲ ಹೀರಿ ಬೆಳೆದು
ಶೂನ್ಯವನಾವರಿಸಿ ಬೆಳೆದಿದೆ
ಗಗನಮುಖಿಯಾಗಿ
ಪ್ರಖರ ಬಿಸಿಲಿಗೆ
ಕಮರಿ ನಲುಗದೆ
ಎಲ್ಲ ಪ್ರತಿಕೂಲತೆಗಳಿಗೆ
ಶೆಡ್ಡು ಹೊಡೆದು ಛಲಬಿಡದ
ತ್ರಿವಿಕ್ರಮನಂತೆ ಬೆಂಬಿಡಿದು
ನೀರ ಸೆಲೆಯರಸಿ
ಮುಗುಳುಗಳರಳಿಸಿ
ಸವಾಲಿಗೆ ಮೈಯೊಡ್ಡಿ
ಬೆಳೆದು ನಿಲ್ಲುವ ಪರಿ
ಋತುರಾಜ ವಸಂತ
ಹರುಷದಿ ತಾ ಬಂದ
ಹಾಡಿದನುದ್ದೀಪನದಿ
ಮಧುರ ಪ್ರೇಮದ ರಾಗ
ರೆಂಬೆ ಕೊಂಬೆಗಳಲ್ಲಿ
ನವಿರಾಗಿ ಚಿಗುರಿ
ಮೈದುಂಬ ಹೊದ್ದ
ನಸುಗೆಂಪು ಮೃದು ಹಸಿರು
ಪಲ್ಲವಗಳು ಬಿಳಿ
ಮೊಗ್ಗುಗಳ ಹೂವಾಗರಳಿಸಿ
ಕಾಯಿ ಹಣ್ಣುಗಳಾಗಿ
ಬಿರು ಬೇಸಿಗೆಗೆ ಹೆದರದೆ
ಮುರುಟದೆ ಜೀವನ
ಸಾರ್ಥಕ ಗೊಳಿಸಿ ಕೊಳ್ಳುವ
ಬೇವಿನ ಬಗೆ
ಹಾರಿಬಂದವು ಭ್ರಮರ
ಜೀವ ಹೂವರಸಿ
ಬೇವು ಕಹಿಯಾದರೇನು? ಹೂವಿನ
ಮಾಧುರ್ಯ ಅರಿಯವೆ ಅವು?
ಮುತ್ತಿದವು ಭ್ರಮರಗಳು
ಬಿಳಿಯ ಹೂಗೊಂಚಲು
ಕುಕ್ಕಿದವು ಶುಕ ಪಿಕ
ಪಕ್ವ ಫಲಗಳನು ಹಾರಿದವು
ದುಂಬಿಗಳು ಪಲ್ಲವದ ಹೂವೆಡೆಗೆ
ಮುತ್ತುಗದಿ ಅರಳಿದ
ಬೆಂಕಿಯ ಹೂವುಗಳಡೆಗೆ
ಪ್ರಕೃತಿಗೆ ಬಂದಿದೆ
ಸಸ್ಯ ಕಾಶಿಗೆ ಬಂದಿದೆ ಫಲಿತ
ಮರ ಗಿಡ ಪೊದೆಗಳಿಗೆ ಬಂದಿದೆ ಪ್ರತಿ
ವರುಷ ಬರುವ ‘ಸಿಹಿಕಹಿ ಯುಗಾದಿ’
ಇಳೆ ಕಾಯ್ದು ಬೆಂದು ತಪ್ತವಾಗುವುದು
ಮೋಡಗಳ ಒಡಲುಕ್ಕಿ ಬಾನಿಂದ ಸುರಿದು
ಸಂದಿ ಕೊರಕಲು ಗುಡ್ಡ ಬೆಟ್ಟ
ಬಯಲುಗಳಲಿ ಹರಿದು ಜಗತ್ ಪ್ರಳಯದ
ರೀತಿ ಅಬ್ಬರಿಸಿ ಬೊಬಿರಿದರೂ
ಹೆದರಿಲ್ಲ ಪ್ರಕೃತಿ ಹುಟ್ಟು ಸಾವುಗಳ
ನಶ್ವರತೆಗೆ ಬಾಳಿನಲಿ ಬರುವ ಸಿಹಿಕಹಿಗಳಿಗೆ
ಎಡರು ತೊಡರು ಸಕಲ ಗುಣ ದೋಷಗಳ
ಪ್ರಾಂಜಲದಿ ಸ್ವೀಕರಿಸಿ ಸಾಗಿದೆ ಸಕÀಲ
ಜೀವರಾಶಿ ಗಣ ಹುಟ್ಟು ಸಾವುಗಳು
ಜೀವನದ ಸಹಜ ಧರ್ಮವೆಂದರಿತು ನಾವು
ಮನುಜರು ಮಾತ್ರ ಭಿನ್ನರೆನ್ನದೆ ಪ್ರಕೃತಿಯ
ಸಹಜ ಒಂದಂಗ ವೆಂಬುದನರಿತು
ಸಿಹಿಕಹಿಗೆ ಅಂಜದೆ ಬೇವಕಹಿ ಮಾವಸಿಹಿ
ಜೀವನದಿ ಸ್ವೀಕರಿಸಿ ವರುಷ ವರುಷವೂ
ಬರುವ ಬಾಳಿಗೆ ಹರುಷವನು ತರುವ
‘ಚಿರಂತನ ಯುಗಾದಿ’ಯನು
ಬರಮಾಡಿ ಕೊಳ್ಳೋಣಮ ಕಷ್ಟ ಸುಖಗಳನು
ಸಮಭಾವದಲಿ ಸ್ವೀಕರಿಸಿ ದೈನಂದಿನ
ಬಾಳ ತೇರನೆಳೆಯೋಣ ಸಹಜೀವನದ
ಬದುಕನು ಸಹ್ಯವಾಗಿಸೋಣ
*
ಚಿತ್ರ ಕೃಪೆ : ಅಂತರ್ ಜಾಲ
Comments
ಉ: ' ಸಿಹಿ ಕಹಿ ಯುಗಾದಿ '
ಪಾಟೀಲರೆ ನಮಸ್ಕಾರ. ನಾವು ಮನುಷ್ಯರು ಕೂಡ ಪ್ರಕೃತಿಗಿಂತ ಭಿನ್ನರಲ್ಲ, ಹೀಗಾಗಿ ಅದು ಅನುಭವಿಸುವ ಸಂತಸ, ಯಾತನೆ, ತಪನೆ, ವೇದನೆ, ಬದಲಾವಣೆಯಾದಿ ಅನುಭೂತಿಗಳೆಲ್ಲವು ಅಷ್ಟೆ ಸಹಜವಾಗಿ ಮನುಜ ಜೀವನದಲ್ಲೂ ಮಿಳಿತ - ಕೆಲವೊಮ್ಮೆ ಕಹಿ ಬೇವು ಬಡಿಸಿದರೆ ಮಗದೊಮ್ಮೆ ಸಿಹಿ ಬೆಲ್ಲದ ಸವಿಯುಣಿಸುತ್ತ. ಮನುಜತ್ವ, ನಿಸರ್ಗತ್ವ - ಎರಡು ಒಂದೆ ತತ್ವದ ವಿಭಿನ್ನ ಸತ್ವಗಳು ಎನ್ನುವ ಕಾಣ್ಕೆಯನ್ನು ಸೊಗಸಾಗಿ ಬಿಂಬಿಸಿ, ಎತ್ತಿ ತೋರಿಸಿದ ಋತು ರಾಜನ ಕವನ ಮನಸಿಗೆ ಮುದ ನೀಡಿತು. ಧನ್ಯವಾದಗಳು!
ತಮಗೆ ಮತ್ತು ಸಂಪದಿಗರೆಲ್ಲರಿಗು ಯುಗಾದಿಯ ಶುಭಾಶಯಗಳು !
In reply to ಉ: ' ಸಿಹಿ ಕಹಿ ಯುಗಾದಿ ' by nageshamysore
ಉ: ' ಸಿಹಿ ಕಹಿ ಯುಗಾದಿ '
ನಾಗೇಶ ಮೈಸೂರು ರವರಿಗೆ ವಂದನೆಗಳು ಕವನದ ಮೆಚ್ಚುಗೆಗೆ ದನ್ಯವಾದಗಳು ಜೊತೆಗೆ ಯುಗಾದಿ ಹಬ್ಬದ ಶುಭಾಶಯಗಳು
ಉ: ' ಸಿಹಿ ಕಹಿ ಯುಗಾದಿ '
ನಾಗೇಶರೆ ತಮಗೆ ಹಾಗು ತಮ್ಮ ಈ ಬ್ಲಾಗ್ ಮೂಲಕ ಸಮಸ್ತ ಸಂಪದಿಗರಿಗೆ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು
In reply to ಉ: ' ಸಿಹಿ ಕಹಿ ಯುಗಾದಿ ' by partha1059
ಉ: ' ಸಿಹಿ ಕಹಿ ಯುಗಾದಿ '
ಪಾಟೀಲರಿಗೆ ನಮಸ್ಕಾರ,
ಆತುರಗಾರನಿಗೆ ಬುದ್ಧಿಮಟ್ಟ ಎಂದು ಮತ್ತೊಮ್ಮೆ ಸಾಬೀತಾಯಿತು :)
ನಾಗೇಶರ ಹೆಸರನ್ನು ಓದುತ್ತ ಅವರ ಬ್ಲಾಗ್ ಅಂದುಕೊಂಡೆ
ತಮಗೆ , ನಾಗೇಶರಿಗೆ ಸಮಸ್ತ ಸಂಪದಿಗರಿಗೆ , ಸಂಪದ ಆಡಳಿತ, ತಾಂತ್ರಿಕವರ್ಗದವರಿಗೆ
ಯುಗಾದಿ ಹಬ್ಬದ ಶುಭಹಾರೈಕೆಗಳು
ವಿಶ್ವಾಸಗಳೊಡನೆ
ಪಾರ್ಥಸಾರಥಿ
In reply to ಉ: ' ಸಿಹಿ ಕಹಿ ಯುಗಾದಿ ' by partha1059
ಉ: ' ಸಿಹಿ ಕಹಿ ಯುಗಾದಿ '
ಪಾರ್ಥಾ ಸಾರ್, ಹೆಸರು ತಪ್ಪಾದರು ವಿಳಾಸ ಸರಿಯಾಗಿಯೆ ಇದೆ . ಶುಭಾಶಯ ತಲುಪಬೇಕಾದಲ್ಲಿಗೆ ತಲುಪಿದೆ ಬಿಡಿ. ತಮಗೂ ಯುಗಾದಿಯ ಹಾರ್ದಿಕ ಶುಭಾಶಯಗಳು :-)
In reply to ಉ: ' ಸಿಹಿ ಕಹಿ ಯುಗಾದಿ ' by partha1059
ಉ: ' ಸಿಹಿ ಕಹಿ ಯುಗಾದಿ '
ಪಾರ್ಥಸಾರಥಿಯವರಿಗೆ ವಂದನೆಗಳು ತಮಗೂ ಯುಗಾದಿ ಹಬ್ಬದ ಶುಭಾಶಯಗಳು
ಉ: ' ಸಿಹಿ ಕಹಿ ಯುಗಾದಿ '
ನಮಸ್ಕಾರ ಸರ್
ತುಂಬಾ ಚನ್ನಾಗಿದೆ ಸರ್ ಯುಗಾದಿ ಹಬ್ಬವನು ವಿಧ ವಿಧವಾಗಿ ನಾವು ಆಚರಿಸಿದರು ಪ್ರಕೃತಿ ಮಾತ್ರ ಸುಂದರವಾಗಿ ಎಲ್ಲರನ್ನು ತೃಪ್ತಿ ಪಡಿಸುತ್ತದೆ
ಧನ್ಯವಾದಗಳು ಸರ್
In reply to ಉ: ' ಸಿಹಿ ಕಹಿ ಯುಗಾದಿ ' by ravindra n angadi
ಉ: ' ಸಿಹಿ ಕಹಿ ಯುಗಾದಿ '
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು ತಮ್ಮ ಪ್ರತಿಕ್ರಿಯೆ ನೋಡಿ ಸಂತಸವಾಯಿತು ಧನ್ಯವಾದಗಳು.
ಉ: ' ಸಿಹಿ ಕಹಿ ಯುಗಾದಿ '
ಸಕಲರ ನವೋತ್ಕರ್ಷ ಕೋರಿ ನವೋತ್ಸಾಹ ತುಂಬುವ ಭರವಸೆಯೊಂದಿಗೆ ನವವರ್ಷವನ್ನು ಸ್ವಾಗತಿಸಿದ ಪರಿ ಚೆನ್ನಾಗಿದೆ, ಪಾಟೀಲರೇ. ಧನ್ಯವಾದಗಳು.
In reply to ಉ: ' ಸಿಹಿ ಕಹಿ ಯುಗಾದಿ ' by kavinagaraj
ಉ: ' ಸಿಹಿ ಕಹಿ ಯುಗಾದಿ '
ಕವಿ ನಾಗರಾಜರವರಿಗೆ ವಂದನೆಗಳು ಕವನದ ಮೆಚ್ಚುಗೆಗೆ ದನ್ಯವಾದಗಳು.