ಹೀಗೊಬ್ಬಳು ವಿಶ್ವ ವನಿತೆ...

ಹೀಗೊಬ್ಬಳು ವಿಶ್ವ ವನಿತೆ...

ಈಗೆಲ್ಲ ಸೂಪರ್ ಮಾರ್ಕೆಟ್ಟು, ಬಜಾರು, ಮಳಿಗೆಯಂಗಡಿಗಳಲ್ಲಿ ವ್ಯಾಪಾರ ಮಾಡುವ ದಿನಗಳು. ತರಕಾರಿ, ದಿನಸಿಯಿಂದ ಹಿಡಿದು ಐಷಾರಾಮಿ ಸರಕುಗಳವರೆಗೆ ಎಲ್ಲವೂ ಒಂದೆ ಸೂರಿನಡಿ ಸಿಗುವ 'ಮಾಲ್' ಸಂಸ್ಕೃತಿ'ಯ ಆಧುನಿಕ ಜಗ. ಎಲ್ಲವೂ ಗ್ರಾಹಕನನ್ನು ಮೆಚ್ಚಿಸಿ, ಬೆಚ್ಚಿಸಿ, ಏಮಾರಿಸಿ, ಕಾಸು ಬಿಚ್ಚುವಂತೆ ಪ್ರಲೋಭಿಸಲು ಹಾತೊರೆಯುವ ಜಾಹೀರಾತಿನ ಚಮಕ್ಕುಗಳು. ಎಲ್ಲಾ 'ಗ್ರಾಹಕನಿಂದ, ಗ್ರಾಹಕನಿಗಾಗಿ' ಎನ್ನುತ್ತ, 'ಗ್ರಾಹಕನೆ ದೇವರು' ಎನ್ನುವ ಧ್ಯೇಯವಾಕ್ಯದ ಬೀಜ ಬಿತ್ತುತ್ತ ಅವನ ಥೈಲಿಯತ್ತ ಕಣ್ಣು ಹಾಕುವ ವಾಣಿಜ್ಯ ಜಗ ಇಲ್ಲಿನ ಸಾಮಾನ್ಯ ನಿಯಮ.

ಇದಾವುದು ಇರದ ಹಿಂದಿನ ದಿನಗಳತ್ತ ನೋಡಿ, ಇವೆಲ್ಲ ಹೇಗೆ ನಡೆಯುತ್ತಿತ್ತು ಎಂದು ಅವಲೋಕಿಸಿದರೆ ಅದು ಅದರದೆ ಆದ ಮತ್ತೊಂದು ಪ್ರಪಂಚ. ಈಗಲೂ ಆ ಪ್ರಪಂಚ ಮಾಯವಾಗಿದೆಯೆಂದೇನು ಅಲ್ಲ. ರೂಪಾಂತರಗೊಂಡೊ, ಅಥವಾ ಅಲ್ಲಿಲ್ಲಿ ಮಾತ್ರ ಇನ್ನು ಜೀವವುಳಿಸಿಕೊಂಡೊ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತ ಹೆಣಗಾಡುತ್ತಿವೆ. ಬೀದಿ ಕೊನೆಯಲ್ಲಿದ್ದ ಕಾಕ ಅಂಗಡಿ, ರೋಡು ಬದಿಯ ಪೆಟ್ಟಿಗೆಯಂಗಡಿ, ಮನೆ ಮನೆಗೆ ಹೋಗಿ ಹಾಲು ಹಾಕುವ ಗೌಳಿಗ, ಬೀದಿ ಬೀದಿ ಸುತ್ತಿ ಬೆಣ್ಣೆ-ತರಕಾರಿ ಮಾರುವ ಹಳಿಯ ಗಟ್ಟಿಗಿತ್ತಿಯರು, ಬೆಳಗಿನ ರಂಗೋಲಿಗೂ ಮೊದಲೆ ಕಟ್ಟಿದ ಹೂಮಾಲೆ ಹಿಡಿದು ಗೃಹಿಣಿಯರಿಗೆ ಮಾರು-ಮೊಳದಳತೆಯಲ್ಲಿ (ಈಗ ಅದೂ ಮೀಟರಿನಲ್ಲೆಂದು ಕಾಣುತ್ತದೆ) ಮಾರುವ ಹೂವಾಡಿಗರು - ಎಲ್ಲವೂ ಅಲ್ಲಲ್ಲಿ ಇನ್ನು ಜೀವಂತ. ಬದಲಾದ ಪರಿಸರದಲ್ಲಿ ತಾವು ಪ್ರಸ್ತುತವಾಗಿರಲು, ಬದಲಾಗಿ ಹೊಂದಿಕೊಳಲು ಅವು ಇನ್ನೂ ಏನೇನೆಲ್ಲ ಹುನ್ನಾರ ನಡೆಸಬೇಕೊ - ಎಲ್ಲ ಕಾಲಗರ್ಭದಲ್ಲಿ ಅಡಕ.

ಆ ಹಳೆಯ ದಿನಗಳ ನೆನಪಿನ ಬುತ್ತಿಯಿಂದ ದಿನವೆರಡು ದಿನಕ್ಕೊಮ್ಮೆ ಸೊಪ್ಪು, ತರಕಾರಿ ಮಾರಲು ಬರುತ್ತಿದ್ದ ಹಳ್ಳಿಯ ಹೆಂಗಸೊಬ್ಬಳ ಚಿತ್ರ ಕಣ್ಣೆದುರು ಕಟ್ಟಿದಂತಿದೆ. ಕಂಕುಳಲೊಂದು ಕೂಸು ಹೊತ್ತು, ತಲೆಯ ಮೇಲೊಂದು ಸಿಂಬಿಯಿಟ್ಟುಕೊಂಡು ಅದರ ಮೇಲೆ ಅಗಲ ತಟ್ಟೆಯಾಕಾರದ ಬಿದಿರು ಬುಟ್ಟಿಯಲ್ಲಿ ಹೊಲದಲ್ಲಿ ಬೆಳೆದ ಸೊಪ್ಪು, ತರಕಾರಿ, ಆಗೀಗೊಮ್ಮೆ ಬೆಣ್ಣೆ ಮಾರಲು ಬರುತ್ತಿದ್ದಳು. ಅವಳದೂ ಗ್ರಾಹಕ ಸಂತೃಪ್ತಿಯತ್ತ ನಿಗಾ ವಹಿಸಿದ 'ಬಿಜಿನೆಸ್ ಮಾಡೆಲ್ಲೆ'. ಒಂದಷ್ಟು 'ವರ್ತನೆ' ಗ್ರಾಹಕರನ್ನಿಟ್ಟುಕೊಂಡು ಅವರಿಗೆ ತ್ರಾಸವಾಗದಂತೆ ಅವರಿದ್ದಲ್ಲಿಗೆ ಬಂದು ವ್ಯಾಪಾರ ಮಾಡುವಳು. ಅವರ ಬೇಕು ಬೇಡ ವಿಚಾರಿಸಿ ಅದಕ್ಕೆ ತಕ್ಕಂತೆ ಪೂರೈಕೆ ಮಾಡುವ ಛಾತಿ. ನಗದಾದರೂ ಸೈ, ಸಾಲವಾದರೂ ಸರಿ, ಕಂತಿಗೂ ಓಕೆ - ಯಾವುದೆ ಕಾರ್ಡು, ಕಾಂಟ್ರಾಕ್ಟು, ಗ್ಯಾರಂಟಿ, ಬಡ್ಡಿಗಳ ಗೋಜಿಲ್ಲದೆ. ಗೋಡೆಯ ಮೇಲೆಳೆದ ಗೀಟಷ್ಟೆ ಅವಳ ಲೆಕ್ಕಾಚಾರದ, ವಾಯಿದೆಯ, ಸರಬರಾಜಿನ ಪುಸ್ತಕ. ಅಲ್ಲಾವ ಫೈನ್ಯಾನ್ಶಿಯಲ್ ಅಕೌಂಟಿಂಗಿನ ಪರಿಣಿತಿಯೂ ಇಲ್ಲ, ಚಾಕಚಕ್ಯತೆಯೂ ಇಲ್ಲ. ಇಷ್ಟು ಸಾಲದೆನ್ನುವಂತೆ ಗಿರಾಕಿಗಳ ಜತೆ ಕಷ್ಟಸುಖ ವಿಚಾರಿಸಿ ಮಾತಾಡಿಕೊಂಡು ಅವರ ದನಿಗೆ ಕಿವಿಯಾಗೊ, ಅಳಲಿಗೆ ಸಾಂತ್ವನವಾಗಿಯೊ, ಗೊಂದಲ ಕರಗಿಸುವ ಅನುಭವಗಿತ್ತಿ ಹಿರಿಯಳಾಗಿಯೊ - ವೈಯಕ್ತಿಕ ನೋವು ನಲಿವಲ್ಲೂ ಪಾಲವಳದು. ಅದೇ ಅವಳ ಯಾವುದೆ ಬೂಟಾಟಿಕೆಯಿರದ ನಿಜಾಯತಿಯ 'ಕಸ್ಟಮರ್ ರಿಲೇಷನ್ ಶಿಪ್ ಮ್ಯಾನೇಜ್ಮೆಂಟ್'. ಅದೆಲ್ಲದರ ನಡುವೆಯು ಕಂಕುಳ ಕೂಸನ್ನು ನಿಭಾಯಿಸುವ 'ಮಲ್ಟಿ ಟಾಸ್ಕಿಂಗ್ ಎಕ್ಸ್ ಪರ್ಟ್'. ಬಿಪಿ, ಡಯಾಬಿಟೀಸು, ಥೈರಾಯಿಡ್ ಇತ್ಯಾದಿಗಳು ಕಣ್ಣೆತ್ತಿ ನೋಡಲೂ ಹೆದರುವಂತಹ ಸರಳ, ಸಾಧಾರಣ ಜೀವನ ಶೈಲಿ - ತನಗಿದ್ದ ಪರಿಮಿತಿ, ಪರಿಸರದಲ್ಲೆ ಸಮತೋಲಿತ ಜೀವನ ನಡೆಸುತ್ತ. ಅವಳೊಂದು ಯಾವುದೆ ತರಬೇತಿ, ಪದವಿ, ಡಿಗ್ರಿಯಿರದ ಜೀವನಾನುಭವ ಶಾಲೆಯೆ ರೂಪಿಸಿದ ಅಪ್ಪಟ ನೈಸರ್ಗಿಕ ಮ್ಯಾನೇಜರು.

ವಿಶ್ವ ವನಿತೆಯರ ಆಚರಣೆಯ ದಿನವಾದ ಇಂದು ಅವಳನ್ನು, ಅವಳ ಸಾಮಾಜಿಕ ಕಾಣಿಕೆಯನ್ನು ಸಾಂಕೇತಿಕವಾಗಿ ನೆನೆಯುವುದು, ಸ್ಮರಿಸುವುದು ಮಹಿಳಾ ಸಮುದಾಯವನ್ನೆ ಒಟ್ಟಾರೆ ಗೌರವಿಸಿದಂತೆ. ಎಲ್ಲಾ ಸ್ತರದ, ಎಲ್ಲಾ ಅಂತಸ್ತಿನ ಮಹಿಳೆಯರ ಒಂದಲ್ಲಾ ಒಂದು ಗುಣ, ಶಕ್ತಿ-ಸಾಮರ್ಥ್ಯದ ತುಣುಕುಗಳೆಲ್ಲ ಒಟ್ಟಾಗಿಸಿಕೊಂಡು ಒಡಮೂಡಿದ ಸಮಷ್ಟಿತ ರೂಪ ಅವಳೆಂದರೆ ಅತಿಶಯವೇನಿಲ್ಲ. ಆ ಆಶಯವನ್ನೆ ಬಿಂಬಿಸುವ ಅವಳ ಜೀವನ ಶೈಲಿಯಷ್ಟೆ ಸರಳವಾದ ಈ ಕಿರು ಕವನದ ಜತೆಗೆ, ವಿಶ್ವ ಮಹಿಳಾ ಸಮುದಾಯಕ್ಕೆ ಮಹಿಳಾ ದಿನದ ಶುಭಾಶಯ ಕೋರುತ್ತೇನೆ.

ತರಕಾರಿ ಮಾರಮ್ಮ
_____________________

ಕಾಸಿನಗಲ ಕುಂಕುಮ
ಮುಡಿ ತುಂಬ ಗಮಗಮ
ಕೂಸು ಬಗಲಲಿ ಹೊತ್ತು
ನಡೆದವಳದೇನು ಗತ್ತು ||

ಕುಕ್ಕೆಯದು ಬಿದಿರ ಬುಟ್ಟಿ
ತರಕಾರಿ ಸೊಪ್ಪುಗಳೊಟ್ಟಿ
ಚಕ್ರದಲೆ ಲಾಘವ ಸಕಲ
ತಲೆಗ್ಹೊತ್ತರು ಮಿಸುಕದಲ್ಲ ||

ಕಾಸಿನ ಸರ ಕತ್ತಿನ ಪೂರ
ಕರಿಮಣಿ ಹವಳ ಸತ್ಕಾರ
ಸೆರಗ ಸಿಕ್ಕಿಸಿದ್ದೆ ಸೊಂಟಕೆ
ನಾಚಬೇಕು ಶಿಲಾಬಾಲಿಕೆ ||

ಹತ್ತಾರು ಬೀದಿ ಸುತ್ತುವಳು
ನಾಕಾರನಾಗಲೆ ಹೆತ್ತವಳು
ಕೂತಲ್ಲೆ ಕಷ್ಟ ಸುಖ ವಿಚಾರ
ನಡುವಲ್ಲಷ್ಟಿಷ್ಟದೆ ವ್ಯಾಪಾರ ||

ಸೊಂಟದೆ ನೇತಾಡುವ ಚೀಲ
ಪುಡಿಗಾಸು ಎಲೆಯಡಿಕೆ ಸಕಲ
ಮೆದ್ದವಳ ತುಟಿ ಕೆಂಪಲೆ ಮಿಂದು
ಕಂಕುಳ ಕಂದನ ಮಾಡಿ ಮುದ್ದು ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by nageshamysore Wed, 03/25/2015 - 08:24

In reply to by kavinagaraj

ಕವಿಗಳೆ ನಮಸ್ಕಾರ.  ಈಗಿನ ಪೀಳಿಗೆ, ಅದರಲ್ಲು ನಗರದ ವಾತಾವರಣದಲಿ ಬೆಳೆದವರಿಗೆ ಈ ಅನುಭವ ಆಗುವುದಾಗಲಿ, ಕಾಣಲಾಗಲಿ ದುಸ್ತರ. ಇಂತದ್ದೆಲ್ಲ ಕಾಲ ಯಾನದಲ್ಲಿ ಮಸುಕಾಗಿ ಹೋಗಿ ಕೊನೆಗೆ ಕಥೆ, ಬರಹಗಳಲಷ್ಟೆ ಉಳಿದುಹೋಗುವುದೊ ಏನೊ?  ಟ್ಯಾಗೋರರ ಕಾಬೂಲಿವಾಲ ಕಥೆಯನ್ನು ಬಾಲ್ಯದಲ್ಲಿ ಓದಿದಾಗ ನನಗು ಅದೆ ರೀತಿಯ ಅನುಭವವಾಗಿತ್ತು.. ! ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Wed, 03/25/2015 - 10:15

ನಾಗೇಶ ಮೈಸೂರುರವರಿಗೆ ವಂದನೆಗಳು
ಮಹಿಳಾ ದಿ ನಾಚರಣೆಯ ಈ ಶುಭ ಸಂಧರ್ಭದಲ್ಲಿ ತಾವು ಚಿತ್ರಿಸಿದ ಮಹಿಳಾ ರೂಪಕ ಬಹಳ ಸೊಗಸಾಗಿ ಮೂಡಿ ಬಂದಿದೆ. ಬರಿ ಆಧುನಿಕತೆಯೆ ಒಂದು ಮಾಡೆಲ್ ಆಗುತ್ತಿರುವ ಇಂದಿನ ದಿನಮಾನಗಳಲ್ಲಿ ನಮ್ಮ ದೇಶದ ಮಹಿಳಾ ಪ್ರತಿನಿಧಿಯನ್ನಾಗಿ ಅಯ್ಕೆ ಮಾಡಿರುವುದು ತಮ್ಮ ಸೂಕ್ಷ್ಮ ಗ್ರಹಿಕೆಗೆ ಒಂದು ಉದಾಹರಣೆ, ಕವನ ಬರಹ ಎರಡೂ ಸೊಗಸಾಗಿವೆ ಧನ್ಯವಾದಗಳು.

Submitted by nageshamysore Thu, 03/26/2015 - 10:56

In reply to by H A Patil

ಪಾಟೀಲರೆ ನಮಸ್ಕಾರ. ಪ್ರಾತಿನಿಧಿಕವಾಗಿರಬೇಕಾದ್ದು ಸಾರ್ವತ್ರಿಕವಾಗಿರಬಎಕಿಲ್ಲ ಎನ್ನುವ ಜಗವೀಗ. ಸದ್ದು ಮಾಡಿದರಷ್ಟೆ ಗಮನ ಸ್ಳೆಯಲು ಸಾಧ್ಯ. ಆ ಸದ್ದಿನ ನಡುವೆ ಸದ್ದು ಮಾಡದವರ ಕುರಿತು ಯಾರು ತಾನೆ ಕಾಳಜಿ ವಹಿಸುತ್ತಾರೆ ? ಅದರಲ್ಲಾವ ವಾಣಿಜ್ಯಾನುಕೂಲವೂ ಇಲ್ಲದ ಕಾರಣ ವ್ಯಾಪಾರಿ ದೃಷ್ಟಿಯಿಂದ ಅವು ಪರಿಗಣಿತವಾಗುವುದೆ ಇಲ್ಲ. ನಾವಿಲ್ಲಿ ನೆನೆಯುವುದು ಕೂಡ ಬರಿಯ ಸಾಂಕೇತಿಕವಾಗಿ ಬಿಡುತ್ತದೆಯೆ ಹೊರತು ಮತ್ತಾವ ಪರಿಣಾಮ ಬೀರುವುದಿಲ್ಲವೆನ್ನುವುದು ಮತ್ತೊಂದು ವಿಪರ್ಯಾಸ ! ತಮ್ಮ ಎಂದಿನ ಪ್ರೋತ್ಸಾಹಕ ಪ್ರತಿಕ್ರಿಯೆಗೆ ಧನ್ಯವಾದಗಳು.