ಸುರಗಿ ಹೂವಿನ ಮಾಲೆ

ಸುರಗಿ ಹೂವಿನ ಮಾಲೆ

 “ಸುರಗಿ” ಯ ಹೆಸರು ಮಲೆನಾಡು ಮತ್ತು ಕರಾವಳಿಯಲ್ಲಿ ಸಾಕಷ್ಟು ಪರಿಚಿತವೇ ಆದರೂ, ಬಯಲು ಸೀಮೆಯವರಿಗೆ ಅಷ್ಟೊಂದು ಬಳಕೆ ಇಲ್ಲದ ಹೂವು ಅದು. ಸಾಹಿತಿ ಅನಂತಮೂರ್ತಿಯವರು ತಮ್ಮ ಆತ್ಮಚರಿತ್ರೆಗೆ “ಸುರಗಿ” ಎಂದು ಹೆಸರಿಟ್ಟ ನಂತರ, ಆ ಹೂವಿನ ಹೆಸರು ಕರ್ನಾಟಕದಾದ್ಯಂತ ಹೆಚ್ಚು ಪರಿಚಿತಗೊಂಡಿತು ಎಂದೇ ಹೇಳಬಹುದು. ತಾನು ಒಣಗಿದ ನಂತರವೂ ಸುವಾಸನೆಯನ್ನು ಬೀರುತ್ತಿರುವ ಸುರಗಿಯ ಹೆಸರನ್ನು ತಮ್ಮ ಆತ್ಮ ಚರಿತ್ರೆಗೆ ಇಟ್ಟುಕೊಳ್ಳುವುದರ ಮೂಲಕ, ಸುರಗಿಯ ಸುವಾಸನೆಗೆ ಗೌರವ ತೋರಿದರು ಆ ಲೇಖಕರು. ಅದಿರಲಿ, ಹೂವು ಒಣಗಿದ ನಂತರವೂ, ಹಲವು ದಿನಗಳ ಕಾಲ ಕಂಪನ್ನು ಸೂಸುತ್ತಾ ತಾನಿಲ್ಲಿದ್ದೇನೆ ಎಂದು ಸಾರಿ ಹೇಳುವ ಸುರಗಿಯ ವಿಶೇಷತೆಯು, ಹೂವುಗಳ ಲೋಕದಲ್ಲಿ ತುಸು ಅಪರೂಪವೆಂದೇ ಹೇಳಬಹುದು. ನಮ್ಮ ನಾಡಿನ ಇನ್ನೊಂದು ಹೂವಾದ ಬಕುಳದ ಹೂವುಗಳು ಸಹಾ ಒಣಗಿದ ನಂತರ ಕಂಪುಸೂಸುವ ಗುಣ ಉಳ್ಳದ್ದು; ಆದರೆ ಸುರಗಿಯು ಒಣಗಿದ ನಂತರ ಸೂಸುವ ಕಂಪು ಇನ್ನೂ ತೀಕ್ಷ್ಣ ಮತ್ತು ಹಲವು ದಿನಗಳ ತನಕ ಇರುವಂತಹದ್ದು. ಸುರಗಿಯ ಮಾಲೆಯನ್ನು ಒಣಗಿಸಿ ಇಟ್ಟು, ಬೇಸಿಗೆ ಕಳೆದ ಹಲವು ದಿನಗಳ ತನಕ ಅದರ ಸುಗಂಧದ ಲಾಭವನ್ನು ಬಳಸಿಕೊಂಡು ಪೂಜೆಗೆ, ಇತರ ಶುಭ ಕಾರ್ಯಗಳಿಗೆ ಉಪಯೋಗಿಸುವ ಪದ್ದತಿ ಕರಾವಳಿ ಮತ್ತು ಮಲೆನಾಡಿನಲ್ಲಿದೆ. ಸುರಗಿಯ ಜೊತೆಗೆ ನನ್ನ ನಂಟು ಸುಮಾರು ಐವತ್ತು ವರ್ಷ ಹಳೆಯದು. ಬಾಲ್ಯ ಕಾಲದಲ್ಲಿ, ಮನೆಯ ಎದುರಿನ ಗದ್ದೆ ಬಯಲನ್ನು ದಾಟಿ, ಹಾಡಿಯ ದಾರಿಯಲ್ಲಿ ಗೋರಾಜಿ ಶಾಲೆಗೆ ಹೋಗುವಾಗ, ಗಿಡಮರಗಳ ನಡುವೆ ಅಲ್ಲಲ್ಲಿ ಸುರಗಿಯ ಮರ ಇರುತ್ತಿತ್ತು. ಬೇಸಗೆಯ ಬಿಸಿಲೇರುತ್ತಿದ್ದಂತೆ, ಸುರಗಿ ಮರದಲ್ಲಿ ಹೂವುಗಳ ಸಂತೆ. ಅಂತಹ ಸಂಖ್ಯೆಯಾದರೂ, ಎಷ್ಟು - ನೂರಾರು, ಸಾವಿರಾರು. ಆ ಹೂವುಗಳನ್ನು ಅರಸಿಕೊಂಡು ಬರುವ ಜೇನ್ನೊಣ ಮತ್ತು ಇತರ ಕೀಟಗಳ ಗುಂಯ್ ಗುಟ್ಟುವಿಕೆ ಅಷ್ಟು ದೂರದಿಂದಲೇ “ಸುರಗಿ ಮರ ಹೂಬಿಟ್ಟಿದೆ” ಎಂದು ಸಾರಿ ಸಾರಿ ಹೇಳುತ್ತದೆ. ಸುರಗಿಯ ಮರ ಮಧ್ಯಮ ಗಾತ್ರದ ಮರ. ಎಲೆಗಳಾದರೋ, ದಟ್ಟ ಹಸಿರಿನ ದಪ್ಪ ದಪ್ಪ ಎಲೆಗಳು. ಸುರಗಿ ಹೂವು ಮಾತ್ರ ಪುಟ್ಟ ಗಾತ್ರದ್ದು. ಇತ್ತ ನಸು ಹಳದಿ ಎನ್ನಲಾಗದ, ಅತ್ತ ದಟ್ಟ ಹಳದಿ ಎಂದೂ ಕರೆಯಲಾಗದು, ಮೃದುಹಳದಿ ಬಣ್ಣದ ಪುಟ್ಟ ಹೂವು, ಪುಟ್ಟ ಪುಟ್ಟ ಪಕಳೆಗಳು. ಆ ದಳಗಳ ಹೊರ ಭಾಗದಲ್ಲಿ ದೃಢವಾದ ಪುಷ್ಪಪಾತ್ರೆ. ತೊಟ್ಟು ಸಹಾ ಬಿರುಸಾದ ರಚನೆ. ಹೂವನ್ನು ಮುಟ್ಟಿದರೆ, ಕೈಯಲ್ಲಿ ಹಿಡಿದು ಅನುಭವಿಸಬಹುದು ಎನ್ನುತ್ತೇವಲ್ಲಾ, ಅಷ್ಟು ಬಿಗಿಯಾದ ರಚನೆ ಆ ಹೂವಿನದ್ದು. ಸುರಗಿ ಹೂವಿನ ಸರ ಮಾಡುವ ಪ್ರಕ್ರಿಯೆ ತುಸು ವಿಶೇಷವಾದದ್ದು. ನಮಗೆಲ್ಲಾ ಪರೀಕ್ಷೆಗೆ ಓದಿಕೊಳ್ಳುವ ರಜಾ ಬರುವ ಸಮಯದಲ್ಲಿ, ಸುರಗಿ ಮರದ ತುಂಬಾ ಮೊಗ್ಗು ತುಂಬಿಕೊಳ್ಳುತ್ತದೆ. ನಾನು ಹೈಸ್ಕೂಲು ಶಾಲೆಗೆ ಹೋಗುವಾಗ, ನಮ್ಮನೆ ಎದುರಿನ ಗರಡಿಜಡ್ಡಿನ ಹಕ್ಕಲಿನಲ್ಲಿ ಒಂದು ಸುರಗಿ ಮರ ಪ್ರತಿ ವರ್ಷ ಹೂವು ಬಿಡುತ್ತಿತ್ತು. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ “ಪರೀಕ್ಷೆಗೆ ಓದಿಕೊಳ್ಳುವ ರಜಾ” ಕೊಟ್ಟಾಗ, ಸುರಗಿ ಮರದ ಮೊಗ್ಗುಗಳ ಆಕರ್ಷಣೆಯನ್ನು ತಡೆಯಲು ನಿಜಕ್ಕೂ ಅಸಾಧ್ಯ. ಮನೆಯಲ್ಲಿದ್ದ ನನ್ನ ತಂಗಿಯರು ಹೇಳುತ್ತಿದ್ದರು, “ಅಣ್ಣಯ್ಯಾ, ಸುರಗಿ ಮಿಟ್ಟೆ ಕೊಯ್ಕಂಡು ಬರೋಣ, ಬಾ . . . . ಸುರಗಿ ಸರ ಸುರಿಯಬೇಕು. . . ಆ ಸರವನ್ನು ಬಿಸಿಲಿನಲ್ಲಿ ಒಣಗಿಸಿ ಇಡೋಣ. . .” ಪರೀಕ್ಷೆ ಓದಲೆಂದು ಬೇಗನೆ ಎದ್ದಿರುತ್ತೇವಲ್ಲಾ, ಸರಿ ಎಂದು ಸೀದ ಗರಡಿ ಜಡ್ಡಿಗೆ ಹೋಗುತ್ತಿದ್ದೆವು. ಬೇಗ ಏಕೆಂದರೆ, ತುಸು ತಡವಾದರೆ, ಇತರ ಯಾರಾದರೂ ಬಂದು ಸುರಗಿ ಮೊಗ್ಗನ್ನು ಕೊಯ್ದುಕೊಂಡು ಹೋಗುತ್ತಿದ್ದರಲ್ಲಾ? ಮರದ ಹತ್ತಿರ ಹೋಗಿ ನೋಡಿದರೆ, ಕೈಗೆಟಕುವ ಎತ್ತರಕ್ಕಿಂತ ತುಸು ಎತ್ತರದಲ್ಲಿ ಸುರಗಿ ಮೊಗ್ಗುಗಳು ರಾಶಿ ರಾಶಿಯಾಗಿ ಅರಳಿಕೊಂಡಿರುತ್ತಿದ್ದವು. ಮರ ಏರುವಲ್ಲಿ ಅಷ್ಟೇನೂ ಚತುರನಲ್ಲದಿದ್ದರೂ, ಒಂದೆರಡು ಗೆಲ್ಲುಗಳನ್ನು ಮಾತ್ರ ಏರಿ, ನಾನು ಸುರಗಿ ಮೊಗ್ಗುಗಳನ್ನು ಕೊಯ್ದು ಕೊಯ್ದು, ಮರದ ಕೆಳಗೆ ನಿಂತಿದ್ದ ತಂಗಿಯರಿಗೆ ಕೊಡುತ್ತಿದ್ದೆ. ಒಂದರ್ಧ ಗಂಟೆ ಮೊಗ್ಗುಗಳನ್ನು ಕೊಯ್ದು, ಮನೆಗೆ ಮರಳಿದ ನಂತರ, ಅದನ್ನು ಸರ ಮಾಡುವ ಕೆಲಸ ತಂಗಿಯರದ್ದು. ಸೂಜಿಗೆ, ಬಾಳೆನಾರನ್ನು ಸೇರಿಸಿಕೊಂಡು, ಒಂದೊಂದೇ ಮೊಗ್ಗನ್ನು ಪೋಣಿಸಿ, ಒಂದೆರಡು ಮೊಳ ಉದ್ದದ ಸರ ಮಾಡುವ ಹೊತ್ತಿಗೆ, ಮೊಗ್ಗುಗಳೆಲ್ಲವೂ ಬಿರಿದು, ನಸು ಹಳದಿಯ ಸುರಗಿ ಮಾಲೆ ತಯಾರಾಗುತ್ತಿತ್ತು. ಅರೆಬಿರಿದ ಸುರಗಿ ಹೂವಿನ ಮಾಲೆಯ ನೋಟ ನಿಜಕ್ಕೂ ಮೋಹಕ. ಆ ಮಾಲೆಯನ್ನು ನಾಲ್ಕೆಂಟು ದಿವಸ ಬಿಸಿಲಿನಲ್ಲಿ ಒಣಗಿಸಿ, ಡಬ್ಬಿಗೆ ಹಾಕಿ ಇಟ್ಟರೆ, ಆ ಮಾಲೆಯಿಂದ ನಾಲ್ಕೆಂಟು ತಿಂಗಳುಗಳ ತನಕ ಸುವಾಸನೆ ಹೊರಸೂಸುತ್ತಿರುತ್ತದೆ. ಮಳೆಗಾಲದಲ್ಲೂ, ತಲೆಗೆ ಮುಡಿಯಲು ಅಥವಾ ಪೂಜೆಗೆ ಸುರಗಿಯ ಒಣಗಿದ ಮಾಲೆಯನ್ನು ಉಪಯೋಗಿಸುವ ಪದ್ದತಿ ಉಂಟು. ದೇವರಿಗೆ ಸುರಗಿ ಮಾಲೆ ಸಮರ್ಪಿಸುವ ಸಂಪ್ರದಾಯವೂ ಉಂಟು. ಒಣಗಿದ ಸುರಗಿ ಹೂವಿನ ಮಾಲೆಯನ್ನು ಹಲವು ಜನಾಂಗದವರು ವಿವಿಧ ರೂಪದಲ್ಲಿ ಬಳಸುವ ಪದ್ದತಿಯೂ ಇದೆ. ಕುಂದಾಪುರ - ಉಡುಪಿ ತಾಲೂಕುಗಳ ಸರಹದ್ದಿನಲ್ಲಿ ವಾಸಿಸುವ ಕುಡುಬಿ ಜನಾಂಗದವರು ಒಣಗಿದ ಸುರಗಿ ಹೂವನ್ನು ತಮ್ಮ ಹೋಳಿ ಹಬ್ಬದ ಸಮಯದಲ್ಲಿ ಉಪಯೋಗಿಸುವ ಪರಿ ವಿಶೇಷವಾಗಿದೆ. ಮಹಿಳೆಯರು ತಲೆಗೆ ಸುರಗಿ ಮಾಲೆಯನ್ನು ಧರಿಸುವುದು ಒಂದೆಡೆಯಾದರೆ, ಪುರುಷರು ತಮ್ಮ ಹೋಳಿ ಕುಣಿತದ ದಿರಿಸಿಗಾಗಿ, ಒಣಗಿಸಿದ ಸುರಗಿ ಹೂವಿನ ಹತ್ತಾರು ಮಾಲೆಗಳನ್ನು ತಮ್ಮ ಅಲಂಕಾರ ಭರಿತ ಪೇಟದ ಸುತ್ತ ಸುತ್ತಿಕೊಳ್ಳುತ್ತಾರೆ. ಜೊತೆಗೆ ತಮ್ಮ ಕೊರಳಿನ ಸುತ್ತಲೂ ಸಹಾ ಸುರಗಿ ಹೂವನ್ನು ಧರಿಸುತ್ತಿದ್ದ ಕುಡುಬಿ ಯುವಕರು, ಅಂತಹ ಸುರಗಿ ಮಾಲೆ ಮಾಡಲು ಒಂದೆರಡು ತಿಂಗಳ ಹಿಂದಿನಿಂದಲೂ ಪರಿಶ್ರಮ ಪಡುತ್ತಿದ್ದುದಂತೂ ನಿಜ. ಕುಂದಾಪುರದ ಕುಡುಬಿ ಜನರ ಹೋಳಿ ಕುಣಿತದ ವಿಶೇಷತೆಗೆ ಸುರಗಿ ಹೂವಿನ ಮಾಲೆಯೂ ತನ್ನ ಘಮಲನ್ನು ಸೇರಿಸುವುದು ಗಮನ ಸೆಳೆಯುತ್ತದೆ. ಸುರಗಿ ಹೂವಿನ ಪರಿಮಳದ ಲಾಭ ಬಿಟ್ಟರೆ, ಸುರಗಿ ಗಿಡದಿಂದ ಬೇರೇನೂ ಹೆಚ್ಚಿನ ಉಪಯೋಗ ಇದ್ದಂತಿಲ್ಲ. ನಾಟಾ ರೂಪದಲ್ಲೂ ಸುರಗಿ ಮರದ ಉಪಯೋಗ ಕಡಿಮೆ ಎಂದೇ ಹೇಳಬಹುದು. ಅಥವಾ, ಮನೆ ಕಟ್ಟಲು ಸುರಗಿ ಮೋಪಿನ ಬಳಕೆ ಇದ್ದಿರಬಹುದಾದರೂ, ನನಗೆ ಆ ಕುರಿತು ಜ್ಞಾನ ಕಡಿಮೆ ಎಂದೇ ಹೇಳಬಹುದು. ಗೃಹನಿರ್ಮಾಣ ನಿಪುಣ ಸ್ಥಪತಿಗಳು ಇದರ ಕುರಿತು ಬೆಳಕು ಚೆಲ್ಲಬಹುದು. ನಿಧಾನವಾಗಿ ಬೆಳೆಯುವ ಪ್ರಬೇಧದ ಸಸ್ಯವಾಗಿರುವುದರಿಂದಾಗಿ, ಸುರಗಿ ಮರಗಳÀÀ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಜೊತೆ ಜೊತೆಯಲ್ಲೇ, ಹೂವುಗಳನ್ನು ದೈಹಿಕ ಅಲಂಕಾರಕ್ಕಾಗಿ ಬಳಸುವ ಪದ್ದತಿಯು ಹಿನ್ನೆಲೆಗೆ ಸರಿಯುತ್ತಿರುವ ವಾಸ್ತವದಿಂದಾಗಿ, ಸುರಗಿ ಹೂವಿನ ಮಾಲೆ ಮಾಡುವ ಹವ್ಯಾಸವೂ ಕ್ಷೀಣಿಸುತ್ತಿದೆ. ಅದೇನಿದ್ದರೂ, ಹಾಡಿ ಹಕ್ಕಲಿನ ಸನಿಹ ಸಾಗಿದಾಗ, ಜೇನು ಹುಳಗಳ ಗುಂಯ್‍ಗುಟ್ಟುವಿಕೆಯ ನಡುವೆ ಅರಳಿರುವ ಸುರಗಿಯ ಕಂಪು ಉಲ್ಲಾಸವನ್ನು ತರುತ್ತದೆ, ಮನದ ಒಂದು ಮೂಲೆಯಲ್ಲಿ ಮಧುರ ನೆನಪನ್ನು ಮೀಟುತ್ತದೆ.                                 --ಎಂ.ಶಶಿಧರ ಹೆಬ್ಬಾರ ಹಾಲಾಡಿ

ಚಿತ್ರ ಕ್ರುಪೆ : ಪ್ಲವರ್ಸ್ ಆಪ್ ಇಂಡಿಯಾ.ನೆಟ್

Comments

Submitted by H A Patil Sat, 03/21/2015 - 19:39

ಶಶಿಧರ ಹೆಬ್ಬಾರರವರಿಗೆ ವಂದನೆಗಳು
ಸುರಗಿ ಹೂವಿನ ಕರಿತು ಕೇಳಿದ್ದೆ ಆದರೆ ವಿವರಗಳು ತಿಳಿದಿರಲಿಲ್ಲ, ನಿಮ್ಮ ಸಚಿತ್ರ ಲೇಖನ ಸುರಗಿ ಹೂವಿನ ಪರಿಚಯವನ್ನು ಸೊಗಸಾಗಿ ಮಾಡಿ ಕೊಟ್ಟಿದೆ ಧನ್ಯವಾದಗಳು.

Submitted by kavinagaraj Wed, 03/25/2015 - 15:39

ಸುರಗಿಯ ವಿವರ ಓದಿ ಅದರ ಕಂಪಿನ ಪರಿಮಳ ಆಘ್ರಾಣಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು.