ಗೊರಕೆ ಪುರಾಣ

ಗೊರಕೆ ಪುರಾಣ

ಈ ಗೊರಕೆ ಪುರಾಣ ಬರೆಯಲ್ಹೊರಟರೆ ಅದೇನು ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ. ಹೊಗಳಿದರಾಗಲಿ ತೆಗಳಿದರಾಗಲಿ ಲೆಕ್ಕಿಸದೆ ತನ್ನ ಪಾಡಿಗೆ ತಾನು ತನ್ನ ಕಾರ್ಯಭಾರ ನಿರ್ವಹಿಸುವ ಅದರ ನಿರ್ಲಿಪ್ತ ಪರಿಗೆ ಉರಿದು ಬಿದ್ದಷ್ಟೆ ಸಹಜವಾಗಿ ಭೇಷ್ ಎಂದವರು ಅನೇಕ. ಹೀಗಾಗಿ ಅದರ ವಿಶ್ವರೂಪವನ್ನು ದೂಷಿಸಿ, ಖಂಡಿಸುವ ಬದಲು ಅದರ ಆರೋಹಣಾವರೋಹಣಗಳ ನಯನ ಮನೋಹರ, ಕರ್ಣಾನಂದಕರ ಅದ್ಭುತವನ್ನು ಮನಸಾರೆ ಆಸ್ವಾದಿಸಲು ಕಲಿತರೆ ಅದರೊಂದಿಗಿನ ಸಹಜೀವನ ಸುಲಭ ಸಾಧ್ಯವಾದೀತು. ಅದರಲ್ಲು ಒಟ್ಟಾಗಿ ಜೀವಿಸುವ ಸಾಮಾಜಿಕ ವಾತಾವರಣದಲ್ಲಿ ಗೊರಕೆ ಶೂರರು ಒಬ್ಬರಿದ್ದರು ಕಥೆ ಮುಗಿದಂತೆಯೆ ಲೆಕ್ಕ ; ಮಿಕ್ಕವರು ಬೇಕಿರಲಿ ಬಿಡಲಿ, ನೇರವಾಗಿಯೊ - ಪರೋಕ್ಷವಾಗಿಯೊ, ಲಘುವಾಗಿಯೊ - ತೀವ್ರವಾಗಿಯೊ  ಅದರ ಬವಣೆ ಅನುಭವಿಸಿ ತೀರಲೆಬೇಕು. ಅದನ್ನು ತಾಳಲಾಗದ ಸೂಕ್ಷ್ಮಮತಿಗಳಾದರಂತು, ಏಗಬೇಕಾದ ಪರಿಸ್ಥಿತಿ ಇನ್ನೂ ವಿಷಮ. ಪರದೇಶಗಳಲ್ಲಿ ಸಂಗಾತಿ ವಿಪರೀತ ಗೊರಕೆ ಹೊಡೆದು ನಿದ್ರೆಗೆ ಭಂಗ ತರುವ ಕಾರಣವೊಡ್ಡಿ ವಿಚ್ಛೇದನ ಬಯಸಿದವರೂ ಉಂಟು..! 

ಈ ಗೊರಕೆಯ ಅವತಾರವನ್ನು ವರ್ಣಿಸುವ ಬಗೆಯಂತು ಅಪರಿಮಿತ. ಸದ್ದು ಮಾಡುವ ಯಾವುದೆ ಸರಕಾದರೂ ಸರಿ ಅದು ಗೊರಕೆಯ ಸಂವಾದಿಯಾಗಿ ಬಳಕೆಯಾಗಬಹುದು. ಯಾವುದೆ ಬಗೆಯ ಕಾಡುವ ಅಸಹನೆಯಾಗಲಿ ಅದು ಗೊರಕೆಯನ್ನು ವರ್ಣಿಸುವ ಪಕ್ಕಾ ಸಲಕರಣೆಯಾಗಿಬಿಡಬಹುದು. ಒಂದು ಕಡೆ ನೆಮ್ಮದಿಯ ನಿದ್ದೆಯ ಪ್ರತೀಕವಾದರೆ ಮತ್ತೊಂದೆಡೆ ಪರರ ನಿದ್ದೆಗೆ ಭಂಗ ತರುವ ದಾನವನಾಗಿ ಪ್ರಸ್ತುತ. ಅದನ್ನು ಲಘು ಲಹರಿಯಲ್ಲಿ, ಗೊರಕೆಯಂತದ್ದೆ ಪ್ರಾಸದ ಲಯದಲ್ಲಿ ಹಿಡಿದಿಡುವ ಯತ್ನ ಈ ಕೆಳಗಿನ ಪದ್ಯ ಪಂಕ್ತಿಗಳದು. ಪಂಕ್ತಿಯಿಂದ ಪಂಕ್ತಿಗೆ ನೇರ ಕೊಂಡಿಯಿರದಿದ್ದರು ಗೊರಕೆಯೆಂಬ ಸಡಿಲ ಬಂಧದಿಂದ ಒಗ್ಗೂಡಿಸಿದ ಈ ಪಂಕ್ತಿಗಳನ್ನು ಬೇರೆಯಾಗಿಯೆ ಓದಿದರೂ ಅಡ್ಡಿಯಿಲ್ಲ, ಜತೆ ಸೇರಿಸಿಕೊಂಡು ಓದಿದರೂ ಸರಿಯೆ - ಗೊರಕೆ ಮಾತ್ರ ಗೊರಕೆಯೆ ! ಅದನ್ನು ಓದುತ್ತಲೆ, ಓದುಗರೆ ಇನ್ನಷ್ಟು ಸಾಲನ್ನು ಹೊಸೆದು ಹೊಸದಾಗಿ ಸೇರಿಸಿ ಮತ್ತಷ್ಟು ವಿಸ್ತರಿಸುವ ಹಾಗೆ ಹುಮ್ಮಸ್ಸು ನೀಡಿದರು ಅದರಲ್ಲಿ ಅಚ್ಚರಿಯೇನೂ ಇಲ್ಲ. ಗೊರಕೆಯ ಸರಕೆ ಅಂತದ್ದು..!

ಗೊರಕೆಯ ತಲೆ ಹರಟೆ ತುಣುಕುಗಳು ಈ ಕೆಳಗೆ - ಕಾಲಕ್ಷೇಪದ ಸರಕಾಗಿ :-)

ಗೊರಕೆ ಪುರಾಣ
____________________

ಗೊರಕೆ 
ಪುಕ್ಕಟೆ ಸರಕೆ
ಆರಂಭಕೆ ಹುಲ್ಲು ಗರಿಕೆ
ಕೊನೆ ಮೊದಲಿಲ್ಲ ಕುಟ್ಟಿದ ಒನಕೆ ||

ಸ-ಮುದ್ರ
ಸಂಚಕಾರ ನಿದ್ರ
ಲಯ ಬದ್ದ ವಾದ್ಯಗೋಷ್ಠಿ
ತಲೆದೂಗಬೇಕು ಮೆಚ್ಚುತೆ ಸಮಷ್ಟಿ ||

ಉಬ್ಬರವಿಳಿತ
ಶಯನ ಸಂಗೀತ
ಗೊಗ್ಗರಲೆ ಏರಿಳಿದ ಭರತ
ಮಗ್ಗುಲಲಿ ಮಲಗಿದವರಾ ಕಾಡುತ ||

ಉಸಿರೊ
ಕಟ್ಟಿದ ಕೆಸರೊ
ಸದ್ದೆ ಗುದ್ದು ನಾಸಿಕದೊಡವೆ 
ಪ್ರದರ್ಶನಕಿಟ್ಟ ಮೇಲೆಲ್ಲಿದೆ ಪರಿವೆ ||

ಕೊರೆತ
ನಿಲ್ಲದ ಮೊರೆತ
ಕಿಟಕಿ ಬದಿಗಿರಲಿ ಪ್ರಹಾರ
ಕಾವಲದೆ ಸದ್ದು ತಡೆ ಕಳ್ಳ ಕಾಕರ ||

ಗೊರೆವವ
ಗೋಗರೆಯುವ
ನನ್ನ ಪಾಡಿಗೆ ಬಿಡಿರೆನ್ನುವ
ಗೊರಕೆಯವನ ಸ್ವೇಚ್ಛೆಯ ಭಾವ ||

ಹರಕೆ
ಗೊರಕೆ ಸ್ವರಕೆ
ಮೊರೆವ ಬಾಯಿಗೆ ತುರುಕೆ
ಹೊರಬಾರದಿರಲಿ ಕಸ ಪೊರಕೆ ||

ಆರೋಪ
ನಿಲಿಸದ ಜಪ
ತಟ್ಟಿದಂತೆ ಜನ್ಮಜನ್ಮ ಶಾಪ
ಕಷ್ಟವೊ ಸುಖವೊ ಅನುಭವಿಸಪ್ಪ! ||

ಸ್ವರಕೆ
ಮನಗಳಾಗಿ ಬೆರಕೆ
ದೂರವಾಗೊ ಸಂಗಾತಿ ತೆಕ್ಕೆ
ಕಿವಿಗೆ ಹತ್ತಿ ಇಟ್ಟೆ ಮಲಗುವ ಬೆಕ್ಕೆ ||

ವಾದನ
ಸಹಿಸದೆ ನಿತ್ಯಕದನ
ಬೇಡೆನಿಸಿ ಸತತ ಶಿರಚ್ಛೇದನ
ವಿದೇಶದಲುಂಟಂತೆ ಮದುವೆ ವಿಚ್ಛೇದನ ||

ಅರಿವೆ
ಇಲ್ಲದ ತರವೆ
ಸಾಗುವ ನಿರಂತರ ನಾವೆ
ಬರಿ ದೂರಲೆಂತು ಆದಂತೆ ಮದುವೆ ||

ಭೂಷಣ
ಗೊರಕೆ ಜಾಣ
ಆಡಿಕೊಂಡಿರಲಿ ಗೊಣಗೊಣ
ನಮ್ಮ ಪಾಡಿಗೆ ಗೊರಕೆ ಹೊಡೆಯೋಣ || 

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by ಗಣೇಶ Fri, 04/03/2015 - 00:22

:) ಕವನ ಚೆನ್ನಾಗಿದೆ. ನಿಮ್ಮ ಗೊರಕೆ ಜತೆ ನನ್ನದೂ ಸೇರಿಸಲಿಕ್ಕಿದೆ. ಆದರೆ ಈಗ ಗೊರಕೆ ಹೊಡೆಯುವ ಟೈಮ್..

Submitted by nageshamysore Fri, 04/03/2015 - 04:50

In reply to by ಗಣೇಶ

ಗಣೇಶ್ ಜಿ, ನೀವು ಗೊರಕೆಗೆ ಹೊರಡುವ ಹೊತ್ತಿಗೆ ನಾನಾಗಲೆ ಅರ್ಧ ರೌಂಡ್ ಮುಗಿಸಿಯಾಗಿತ್ತು - 'ಗೊರಕೆ ಹೊಡೆಯುತ ದೂರ ದೂರ, ಹಾರಿದ್ದೆ ಯಾವುದೊ ತೀರ....'! 'ಬೆಳಗಾಗೆದ್ದು ನಾನ್ಯಾರ ನೆನೆಯಲಿ..' ಎಂದು ಕಣ್ಣುಜ್ಜುತ್ತಿದ್ದಂತೆ ಸಾಕ್ಷಾತ್ ಗಣೇಶ ದರ್ಶನ ಈ ಪ್ರತಿಕ್ರಿಯೆಯ ರೂಪದಲ್ಲಿ...:-) ಇಂದು ಗುಡ್ ಫ್ರೈಡೇ ರಜೆ ಇರುವ ಕಾರಣ ಈ ಮರು ಪ್ರತಿಕ್ರಿಯೆ ಮುಗಿಸಿ ಮತ್ತೆ ಹೊರಡುತ್ತೇನೆ - 'ಗೊರಕೆ ಯಾನ (ಪುರಾಣ)' ಮುಂದುವರೆಸಲು..!

Submitted by venkatb83 Fri, 04/03/2015 - 15:14

In reply to by nageshamysore

"ಉಸಿರೊ
ಕಟ್ಟಿದ ಕೆಸರೊ
ಸದ್ದೆ ಗುದ್ದು ನಾಸಿಕದೊಡವೆ
ಪ್ರದರ್ಶನಕಿಟ್ಟ ಮೇಲೆಲ್ಲಿದೆ ಪರಿವೆ ||"

ನಾಗೇಶ್ ಅಣ್ಣಾ -ಗೊರಕೆ ಅದರ ಬೆರಕೆ ಬಗ್ಗೆ ಭಲೇ ತಮಾಷೆ ಕವನ ....!!
ಗೊರಕೆ ತಮಾಷೆ ಅಂದ್ರೆ ಕೆಲವೇ ಕೆಲವು ಜನರಿಗೆ ಮಾತ್ರ ತಮ್ಮ ಗೊರಕೆ ತಮಗೆ ಅರಿವಿಗೆ ಬರುವುದು.. ಮನೆಯಲಿ ಅಣ್ಣಾ ತಮ್ಮ ಸಂಬಂದಿಕರು ಗೊರಕೆ ಹೊಡೆಯೋದರ ಬಗ್ಗೆ ಹೇಳಿದ್ದೆ, ನೀನು ಗೊರಕೆ ಹೊಡೆಯುವೆ ಎಂದರು -ಅದಕ್ಕೆ ಸಾಕ್ಷಿ ಸಿಗಲಿಲ್ಲ..ಆದರೆ ಅದೊಮ್ಮೆ ಅರೆ ಮರೆ ಮಂಪರಲ್ಲಿ ನಿದ್ದೆ ಮಾಡುವಾಗ ನಾ ಸಣ್ಣ್ಗೆ ಗೊರಕೆ ಹೊಡೆಯೋದು ನನಗೆ ಕೇಳಿಸಿ ಅಚ್ಚರಿ ಆಯ್ತು....!! ಈ ಬರಹ ಓದಿದ ಓದುವ ಯಾರಿಗಾದರೂ ಆ ರೀತಿ ಅವರ ಗೊರಕೆ ಅನುಭವ ಅವರಿಗೆ ಆಗಿತ್ತ?
ಗೊರಕೆಯಲ್ಲಿ ಎಸ್ಟೊಂದು ವಿಧ ..!! ಆ ಬಗ್ಗೆ ಹಲವು ಹಾಸ್ಯ ಬರಹಗಳು ಇವೆ ..ಹಾಗ್ಯೆ ಹಲವು ಚಲನ ಚಿತ್ರಗಳಲ್ಲಿ ತಮಾಷೆ ಸನ್ನಿವೇಶಗಳಿವೆ...ರೈಲು ಇಂಜಿನ್ ತರಹ ,ಬೆಟ್ಟದಿಂದ ಬೀಳುವ ಕಲ್ಲಿನಂತೆ,ಕೆನೆತ,ಕುಣಿತ,ನೆಗೆತ,ಅರಚೋ ಪರಚೋ,ಹೀಗೆ ಹಲವು ವಿಧಗಳಲ್ಲಿ ಗೊರಕೆ ಇರುವುದು..ಕೆಲವರಿಗೆ ಕಣ್ಣು ಮುಚ್ಚಿದ ಕೂಡಲೇ ಗೊರಕೆ ಸ್ಟಾರ್ಟ್-ಇನ್ನೂ ಕೆಲವರಿಗೆ ಸ್ವಲ್ಪ ಸಮಯದ ನಂತರ ...!! ಪ್ರಾಣಿಗಳೂ(ನಮ್ಮನ್ನು ಬಿಟ್ಟು ಇನ್ನುಳಿದ ) ಗೊರಕೆ ಹೊಡೆಯುವುದು ತಮಾಷೆ ..ಇಲ್ಲಿದೆ ವಿಡಿಯೋ ಲಿಂಕ್ :www.youtube.com/watch?v=XKv83mQZ-jA
ಮುಸ್ಸಂಜೇಲಿ ಚೇತೋಹಾರಿ ಬರಹ .. :()))
ನನ್ನಿ
ಶುಭವಾಗಲಿ

\|||/

Submitted by nageshamysore Fri, 04/03/2015 - 20:15

In reply to by venkatb83

ಸಪ್ತಗಿರಿಗಳೆ ನಮಸ್ಕಾರ. ಗೊರಕೆ ಹೊಡೆಯುವ ಬಹುತೇಕ ಜನ ತಾವು ಗೊರಕೆ ಹೊಡೆಯುವ ಪ್ರವೃತ್ತಿಯವರಲ್ಲ ಎಂದು ಬಲವಾಗಿ ನಂಬಿರುವಂತಿದೆ. ನಾನು ಕೂಡ ಹಾಗೆಯೆ ವಾದ ಮಾಡುತ್ತಿದ್ದೆ - ಒಮ್ಮೆ ನಿದ್ದೆಯ ಮಂಪರಿನಲ್ಲಿ ನಡುವೆಯೆ ಚಕ್ಕನೆ ಎಚ್ಚರವಾದಾಗ ಗೊರಕೆಯ ಭಾಗಾಂಶ ನನ್ನ ಕಿವಿಗು ಬಿತ್ತು. ಆದರು ಅದು ಅಪರೂಪಕ್ಕೆಂದೊ ಆಗಿರಬೇಕೆ ಹೊರತು ಸದಾ ನಡೆಯುವ ಪ್ರಕ್ರಿಯೆಯಲ್ಲ ಎಂದು ಪುನರ್ವಾದಿಸಿದ್ದೆ...! ಅಂತೂ ಗೊರಕೆ ಬರಿ ಹಾಸ್ಯ ಮಾತ್ರವಲ್ಲದೆ ನಾನಾ ರಸಗಳ ಸರಕಾದರು, ಹಾಸ್ಯದಲ್ಲಿ ಅದರ ಪಾತ್ರ ಹೆಚ್ಚು ಗಮನಾರ್ಹ. ತರತರ ಗೊರಕೆ, ಪ್ರಾಣಿಗಳ ಗೊರಕೆಯನ್ನೆಲ್ಲ ನೋಡಲು ನಿಮ್ಮ ಲಿಂಕ್ ಕ್ಲಿಕ್ಕಿಸಿದೆ - ಯಾಕೊ ಐ ಪ್ಯಾಡಿನಲ್ಲಿ ಓಪನ್ ಆಗಲಿಲ್ಲ. ಆಮೇಲೆ ಬೇರೆ ಕಂಪ್ಯೂಟರಿನಲ್ಲಿ ಯತ್ನಿಸುತ್ತೇನೆ. ಅದೇನು ನನ್ನ ಐ ಪ್ಯಾಡ್ ತೊಡಕೊ ಏನೊ ಗೊತ್ತಿಲ್ಲ - ಸಂಪದದಲ್ಲಿ ಚಿತ್ರದ ಫೈಲು ಅಪ್ಲೋಡ್ ಮಾಡಲೂ ಕೂಡ ಆಗುವುದಿಲ್ಕ (ಬಹುಶ ನನ್ನ ಐ ಪ್ಯಾಡ್ ಹಳೆಯ ಆವೃತ್ತಿಯದಾದ ಕಾರಣ ಇರಬೇಕು - ಮೊದಲ ಸಂತತಿ,  ಐ ಪ್ಯಾಡ್ 1)

Submitted by kavinagaraj Mon, 04/06/2015 - 11:21

ಹಿಂದೊಮ್ಮೆ ನಡೆದ ಪ್ರಸಂಗ ನೆನಪಾಯಿತು. ನನ್ನ ಸೋದರಮಾವನ ಗೊರಕೆ ಅಂದರೆ ಬ್ಯಾಂಡ್ ಸೆಟ್ ಮೊಳಗಿದಂತೆ. ಒಮ್ಮೆ ಮದುವೆ ಮನೆಯಲ್ಲಿ ಕೊನೆಯಲ್ಲಿ ಮಲಗಲು ನೋಡಿದಾಗ ಎಲ್ಲಾ ಕೊಠಡಿಗಳೂ ಭರ್ತಿ. ಇವರಿಗೆ ಜಾಗವೇ ಇರಲಿಲ್ಲ. ಒಂದು ಕೊಠಡಿಯಲ್ಲಿ ಹೇಗೋ ಸಾವರಿಸಿಕೊಂಡು ಒಂದು ಮೂಲೆಯಲ್ಲಿ ಮಲಗಿದರು. ಮಧ್ಯರಾತ್ರಿಯಲ್ಲಿ ಟಾಯ್ಲೆಟ್ಟಿಗೆ ಹೋಗಲು ಅವರು ಎದ್ದಾಗ ನೋಡಿದರೆ ಅವರಿದ್ದ ಕೊಠಡಿಯಲ್ಲಿ ಯಾರೂ ಇರಲೇ ಇಲ್ಲ. ಎಲ್ಲರೂ ಹೊರಗಿನ ಕಾರಿಡಾರಿನಲ್ಲಿ ಮಲಗಿದ್ದರು.ಇವರು ನಂತರ ಆರಾಮವಾಗಿ ಕೊಠಡಿಯಲ್ಲಿದ್ದ ಮಂಚದ ಮೇಲೆ ಸುಖವಾಗಿ ನಿದ್ರೆ ಮುಂದುವರೆಸಿದ್ದರು!!

Submitted by nageshamysore Mon, 04/06/2015 - 17:58

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಅಂತೂ ಗೊರಕೆಯನ್ನೆ ಶಕ್ತಾಯುಧದ ರೀತಿಯೂ ಬಳಸಿ 'ಅರಿ ಭಯಂಕರ' ನ ಸ್ವರೂಪವನ್ನು ಆರೋಪಿಸಬಹುದೆಂದಾಯ್ತು. ವಿದೇಶದಲ್ಲಿ ಗೊರಕೆಗೆ ವಿಚ್ಛೇದನ ಪಡೆಯುವವರೂ ಇದ್ದಾರೆಂದ ಮೇಲೆ ಅದರ ಶಕ್ತಿ ಸಾಮರ್ಥ್ಯದ ಕುರಿತು ಅನುಮಾನಿಸುವುದೂ ತರವಲ್ಲ ಬಿಡಿ. ಆದರೂ ಒಂದು ಕುತೂಹಲ - ಹಿತವಾಗಿ ಜನ ಮೆಚ್ಚುವಂತಹ ಲಹರಿಯಲ್ಲೂ ಗೊರಕೆ ಹೊಡೆಯಲು ಸಾಧ್ಯವೆ? ಹಾಗೆ ಹೊಡೆಯುವವರಾರದರೂ ಇದ್ದಾರೆಯೆ? ಎಂದು. ಬಹುಶಃ ಬೇರೆಲ್ಲಾ ತರದ ಗೊರಕೆಯ ಸಾಧ್ಯತೆ ಇರಬಹುದೇನೊ, ಆದರೆ ಈ ತರಹದ ಗೊರಕೆ ಮಾತ್ರ ಅಸಾಧ್ಯವೆಂದೆ ಕಾಣುತ್ತದೆ :-)