' ಯಶೋಧರೆಯ ಅಂತರಂಗ '

' ಯಶೋಧರೆಯ ಅಂತರಂಗ '

ಚಿತ್ರ

 

 ನಟ್ಟ ನಡುರಾತ್ರಿ ಬೀಸುತಿಹ ತಂಗಾಳಿ 

ಸುಪ್ಪತ್ತಿಗೆಯ ಮೇಲೆ ಮಲಗಿದ್ದಾನೆ 

ರಾಜ ಕುವರ ಸಿದ್ಧಾರ್ಥ 

ಸುಮ್ಮನೆ ಪಕ್ಕಕೆ ದೃಷ್ಟಿ ಹರಿಸಿದ 

ಪವಡಿಸಿದ್ದಾಳೆ 

ಸುರ ಸುಂದರಿ ಪತ್ನಿ ‘ಯಶೋಧರೆ’

ಮುದ್ದು ಮಗ ರಾಹುಲನ ಜೊತೆ 

ಮುಗಿಯದ ತೊಳಲಾಟ ಆತನದು 

ಇದೇ ಬದುಕು ಮುಂದುವರಿಸುವುದೆ ಇಲ್ಲ 

ಜಗದ ಸತ್ಯವನರಸಿ ಹೊರಡುವುದೆ

ತೆರೆದ ಕಿಟಕಿಯ ಸಂದಿಯಲಿ 

ಸುಮಗಳ ಸೌಗಂಧವನು ಹೊತ್ತು 

ತೂರಿ ಬರುತಿಹ ತಂಗಾಳಿ 

ಕಿಟಕಿಯ ಹೊರಗಾಚೆ ‘ಅನಂತ ದಿಗಂತ’

ನೆರೆದಿದೆ ಅಲ್ಲಿ ಚುಕ್ಕಿಗಳ ಸಮೂಹ

 

ಕೊನೆಯಿರದ ಕತ್ತಲು ಮುಗಿಯದಾಕಾಶ 

ಏನಿದೆ ಅದರಾಚೆ ? 

ಚಿಂತೆಯ ಭಾರದಲಿ ಕುಗ್ಗಿ ಹೋಗಿದ್ದಾನೆ 

ಬಗೆ ಹರಿಯದ ಜೀವನದ ಜಿಜ್ಞಾಶೆ 

ಜಗದಗಲ ವ್ಯಾಪಿಸಿಹ ರೋಗ ರುಜಿನ 

ವೃದ್ಧಾಪ್ಯ ಸಾವು ನೋವು 

ಇವುಗಳಿಗೆ ಕೊನೆಯಿಲ್ಲವೆ ?

ನಿದ್ರೆ ಬಾರದ ಯಶೋಧರೆ ಬಿಡುಗಣ್ಣಾಗಿ 

ನೋಡುತ್ತ ಮಲಗಿದ್ದಾಳೆ ಗಂಡನ ಚಡಪಡಿಕೆ

ಯೋಚನೆಯೊಂದಾಕೆಯನು ಮುತ್ತಿ ಕಾಡುತಿದೆ

ಯಾಕೆ ? ಸಿದ್ಧಾರ್ಥ ನಿದ್ರೆಯಿಲ್ಲದ ರಾತ್ರಿಗಳ 

ಕಳೆಯುತ್ತಿದ್ದಾನೆ ? ಮೋಹದ ಮಡದಿಯ 

ಸೆಳೆತವಿಲ್ಲ ಮುದ್ದು ಮಗನ ಬಾಲ ಲೀಲೆಗಳ 

ಆಸ್ವಾದವಿಲ್ಲ ಇಹ ಲೋಕದ ಪರಿವೆಯಿಲ್ಲ

 

ಯಾವ ಚಿಂತೆ ಕಾಡುತಿದೆ ಆತನನು ? ಕೇಳಲೆ 

ಊಹೂಂ ! ಹೇಳುವದಾದರೆ ಆತನೆ ಹೇಳಲಿ 

ರಾತ್ರಿ ನಿಧಾನಕೆ ತೆವಳುತಿದೆ ಬಸವನ ಹುಳದಂತೆ 

ಅವರವರ ಯೋಚನೆಯಲಿ ಅವರವರು ಮಗ್ನ 

ಧೃಡ ನಿಶ್ಚಯದಿ ಎದ್ದ ಸಿದ್ಧಾರ್ಥ ಹೆಂಡತಿಯೆಡೆಗೆ

ನಿರ್ಲಿಪ್ತ ನೋಟವನು ಹರಿಸಿ 

ಮಲಗಿದ ಮಗನ ಹಣೆಗೊಂದು ಹೂಮುತ್ತನಿಕ್ಕಿ

ಸಂಸಾರ ವ್ಯಾಮೋಹ ಧಿಕ್ಕರಿಸಿ

ನಿರುಮಳವಾಗಿ ಕತ್ತಲಲಿ ಸಾಗಿ ಹೋದ

ತಡೆಯಲೆಂದೆದ್ದ ಯಶೋಧರೆ ತಡೆಯಲಾಗದೆ 

ವಿಹ್ವಲಳಾಗಿ ಕುಳಿತಿದ್ದಾಳೆ 

ಸಂಬಂಧ ಕಡಿದು ಹೊರಟವನ ತಡೆದು 

ನಿಲ್ಲಿಸಲು ಸಾಧ್ಯವೆ ? ಯಾಕೆ ತಡೆಯಬೇಕು 

ಎಲ್ಲ ತ್ಯಜಿಸಿ ಹೊರಟವನ ? ಕಣ್ಣಂಚಿನಲಿ ತುಳುಕಿದ 

ಕಣ್ಣೀರನೊರಸಿ ತಬ್ಬಿದಳು 

ಗಾಢ ನಿದೆಯಲಿ ಮಲಗಿದ ಮಗನ 

ಬೀಳ್ಕೊಟ್ಟಳು ಯಶೋಧರೆ ಸಿದ್ಧಾರ್ಥನನು 

ಗೌತಮ ಬುದ್ಧನಾಗಲು 

ಸಿದ್ದಾರ್ಥ ಆಕೆಯನು ತ್ಯಜಿಸಲಿಲ್ಲ ಆಕೆಯೆ 

ಆತನನು ಪರಿತ್ಯಜಿಸಿದಳು ಮತ್ತೆ 

ಆತ ಮರಳುವ ನಿರೀಕ್ಷೆಯನಿಟ್ಟು ಕೊಳ್ಳದೆ

 

ಮನೆ ಬಿಟ್ಟು ಸಿದ್ದಾರ್ಥ ಗುರಿಯರಸಿ ಸಾಗಿದ

ವೃದ್ಧಾಪ್ಯದಂಚಿಗೆ ಸಾಗಿದ್ದ ಶುದ್ಧೋದನಗೆ 

ರಾಜ್ಯದ ಆಗು ಹೋಗುಗಳ ಚಿಂತೆ 

ಮೊಮ್ಮಗ ರಾಹುಲ ಇನ್ನೂ ಚಿಕ್ಕ ಹಸುಗೂಸು

ಈ ಜಂಜಾಟದಿಂದ ತನಗೆ ಮುಕ್ತಿಯಿಲ್ಲವೆ ?

ಹನಿಗಣ್ಣಾಗಿ ಯೋಚನೆಗೆ ತೊಡಗಿದ

ಬಿಚ್ಚಿಕೊಂಡವು ನೆನಪುಗಳು ಸುರುಳಿ ಸುರುಳಿಯಾಗಿ  

 

ಸಿದ್ಧಾರ್ಥ ಹುಟ್ಟಿದ ಗಳಿಗೆ ತಂದೆಗೆ ಮಗನ ವ್ಯಾಮೋಹ 

ಜಾತಕದ ಮೊರೆ ಹೋಗಿದ್ದ

ರಾಜ ಜೋತಿಷಿ ನುಡಿದಿದ್ದ ಅಪರೂಪದ ಜಾತಕವಿದು 

ಆದರೆ ಚಕ್ರವರ್ತಿ ಇಲ್ಲದಿರೆ ಸನ್ಯಾಸಿ 

ಶುದ್ಧೋಧನ ಆಗಲೆ ನಿರ್ಧರಿಸಿದ್ದ ಜಗದ ಯಾವ ನೋವೂ 

ಆತನನು ಕಾಡದಂತೆ ಬೆಳೆಸುತ್ತೇನೆ 

ಹಾಗೆಯೇ ಮಾಡಿದ ಆದರೆ ! ಆದದ್ದೇನು ?

ಮಾಡಿದ ಪ್ರಯತ್ನವೆಲ್ಲ ನೀರಲ್ಲಿ ಮಾಡಿದ ಹೋಮ ಆಗ

ಅರಿವಾಗಿತ್ತು ಶುದ್ಧೋಧನಗೆ ವಿಧಿ ಲಿಖಿತದ ಮುಂದೆ 

ಮಾನವ ಪ್ರಯತ್ನ ಏನೂ ಅಲ್ಲ !

 

ಕಾಲ ಗತಿಸಿತು ಸಿದ್ಧಾರ್ಥ ಮರಳಿದ ಬುದ್ಧನಾಗಿ 

ಅವಳೊಬ್ಬಳು ಬದುಕಿದ್ದಳು ಯಶೋಧರೆ

ಗತ ವರ್ತಮಾನದ ಬದುಕುಗಳ ಕೊಂಡಿಯಾಗಿ ಎಲ್ಲ 

ಪರಿತ್ಯಜಿಸಿ ಆತ ಹೊರಟಾಗ ಆಕೆ ಮಲಗಿರಲಿಲ್ಲ 

ಬುದ್ಧನಾಗಿ ಮರಳಿದಾಗ ಕಾಯುತ್ತಲೂ ಇರಲಿಲ್ಲ 

ಆದರೂ ಆತ ಬಂದು ಆಕೆಯೆದುರು ನಿಂದ ಆಕೆಯಲಿ 

ಒಂದು ರೀತಿಯ ತುಮುಲ 

ತನ್ನ ವ್ಯರ್ಥ ಬದುಕಿಗೆ ಕಣ್ಣೀರಿನ ಪರಿಹಾರ ಸಾಕೆ

ಇರಲಿ ! ತನ್ನ ಬದುಕು ತನಗಿರಲಿ !! ಜಗದ ಕಣ್ಣೀರ 

ಒರೆಸುವವರಾರು ? ಆತ ತನ್ನ ಗುರಿಯೆಡೆಗೆ ಸಾಗಲಿ 

ಆತನನು ಬಂಧಮುಕ್ತಗೊಳಿಸುವ ಕರ್ತವ್ಯ ತನ್ನದು 

 

ಆದರೂ ಆಕೆಯಾಗಿದ್ದಾಳೆ ವಿರೋಧಾಭಾಸಗಳ ಮೂಟೆ 

ತಾವಿಬ್ಬರೂ ಸತಿ ಪತಿಗಳಾಗಿ ದೇಹ ಮಾತ್ರವೆ ಅಲ್ಲ 

ಆತ್ಮವನೂ ಹಂಚಿಕೊಂಡವರಲ್ಲವೆ ? 

ವಿವಾಹಿತ ಪುರುಷ ಯಾವಾಗಲೂ ಅರ್ಧ ನಾರೀಶ್ವರ 

ಆತ ಬೆಳಕಿನೆಡೆಗೆ ಸಾಗಲು ತನ್ನದೂ ಸಮಪಾಲಿದೆ 

ಜೊತೆಗೆ ಭೌತಿಕವಾಗಿ ಹೆಜ್ಜೆಗೂಡಿಸದಿದ್ದರೂ 

ಅಭೌತಿಕವಾಗಿ ತನ್ನದೂ ಸಹ ಪಯಣವಿದೆ 

ಗೌತಮನ ಅಮೂರ್ತತೆಗೆ ಯಶೋಧರೆಯೆ ಸಾಕ್ಷಿ 

ತಟಸ್ಥವಾಗಿ ನಿಂತ ಬುದ್ಧನಿಗೆ ಹೇಳುತ್ತಾಳೆ ನೀನೀಗ 

ಸಿದ್ಧಾರ್ಥನಲ್ಲ ಎಲ್ಲ ಮೋಹದ ಬಂಧಗಳ ಕಳಚಿ 

ನಿರ್ಲಿಪ್ತನಾಗಿ ಹೊರಡು ಜಗ ನಿನಗಾಗಿ ಕಾಯುತ್ತಿದೆ

 

ಬುದ್ಧನಲಿ ತಾಯ್ತನದ ಪ್ರೀತಿ ಮನು ಕುಲದ 

ಮೇಲೆ ಇದೆ ಎಂದಾದರೆ ಅದು ಯಶೋಧರೆ ಜಗಕೆ 

ನೀಡಿದ ದಾನ ಸಿದ್ಧಾರ್ಥ ಬುದ್ಧನಾಗಲು

ಅಗೋಚರಳಾಗಿ ನಿಂತು ಸಾಧ್ಯವಾಗಿಸಿದವಳು 

ತ್ಯಾಗಮೂರ್ತಿ ಸಹನಶೀಲೆ ‘ಯಶೋಧರೆ’ 

ಆಕೆಯ ಸಂಯಮದ ಕಾರಣ ಆತ ಬುದ್ಧನಾದ 

ಸಿದ್ಧಾರ್ಥ ಹೊರಡುವಾಗ ಮಲಗಿರದಿದ್ದ ಆಕೆ 

ಬುದ್ಧನ ಬರುವಿಕೆಗಾಗಿ ಕಾದಿರಲಿಲ್ಲ ಕೂಡ !

 

                *

ಚಿತ್ರಕೃಪೆ: ಮಂಜಿತ್ ಸಿಂಗ್

Rating
No votes yet

Comments

Submitted by nageshamysore Thu, 04/09/2015 - 21:24

ಪಾಟೀಲರೆ ನಮಸ್ಕಾರ. ಬುದ್ಧ ಸಿದ್ದಾರ್ಥನಾಗುವ ರೂಪಾಂತರ ಯಶೋಧರೆಯ ನಿಸ್ವಾರ್ಥ ತ್ಯಾಗದ ಪ್ರತಿಫಲವೆನ್ನುವ ದೃಷ್ಟಿಕೋನದ ಚಿತ್ರಣ ವಿಭಿನ್ನವಾಗಿದೆ. ಬಿಟ್ಟು ಹೋದಾಗಲೂ ತಡೆಯದೆ, ಮತ್ತೆ ಬಂದಾಗಲೂ ನಿಲಿಸಿಕೊಳದೆ ಅವನನ್ನು ಅವನು ಸೇರಿದ ಜಗಕ್ಕೆ ಮರಳಿಸುವ ಉದಾತ್ತ ಹಾಗೂ ಧೀಮಂತ ವ್ಯಕ್ತಿತ್ವ ಮನ ಸೆಳೆಯುತ್ತದೆ. ಸಾಮಾನ್ಯ ಕಥಾನಕದಲ್ಲಿ ನೇಪಥ್ಯಕ್ಕೆ ಸರಿದು ಬಿಡುತ್ತಿದ್ದ ಅವಳ ಪಾತ್ರಕ್ಕೆ ನ್ಯಾಯ ಒದಗಿಸುವ ತಮ್ಮ ಯತ್ನ ಸಾರ್ಥಕವಾದುದ್ದು.  ಮತ್ತೊಮ್ಮೆ ಅಭಿನಂದನೆಗಳು..

Submitted by H A Patil Fri, 04/10/2015 - 15:35

In reply to by nageshamysore

ನಾಗೇಶ ಮೈಸೂರುರವರಿಗೆ ವಂದನೆಗಳು
ನನಗೆ ಗೌತಮ ಬುದ್ದ ನೆನಪಾದಾಗಲೆಲ್ಲ ಅತನ ಹೆಂಡತಿ ಯಶೋಧರೆಯ ಚಿತ್ರ ಕಣ್ಮುಂದೆ ಬರುತ್ತಿತ್ತು, ಸಿದ್ಧಾರ್ಥ ಮನೆ ಬಿಟ್ಟು ಹೊರಟಾಗ ಮತ್ತು ಮುಂದೆ ಅಕೆಯ ಭಾವನೆಗಳು ಏನಿದ್ದಿರಬಹುದು ಎನ್ನುವ ಯೋಚನೆ ಬರುತ್ತಿತ್ತು, ಹೀಗಾಗಿ ಆಕೆಯ ಅಬಿವ್ಯಕ್ತಿಗೆ ಒತ್ತು ಕೊಟ್ಟು ಕವನ ಬರೆದರೆ ಹೇಗಿರುತ್ತೆ ಎಂದು ಯೋಚಿಸಿದಾಗ ಮೂಡಿದ ಕವನವಿದು, ತಮ್ಮ ಅಭಿಪ್ರಾಯ
ತಾವು ಕವನವನ್ನು ಗ್ರಹಿಸಿದ ರೀತಿ ಖುಷಿ ನೀಡಿತು ಧನ್ಯವಾದಗಳು.

Submitted by kavinagaraj Sat, 04/11/2015 - 21:27

ಯಶಸ್ಸನ್ನೇ ಧರಿಸಿದ ಯಶೋಧರೆಯ ತುಮುಲಗಳನ್ನು ಅನಾವರಣಗೊಳಿಸಿ ಆಕೆಯನ್ನು ಯಶೋದಾತ್ತಳಾಗಿ ಚಿತ್ರಿಸಿದ ರೀತಿ ಚೆನ್ನಾಗಿದೆ. ಅಭಿನಂದನೆಗಳು.

Submitted by Lakshmikanth Itnal 1 Tue, 04/14/2015 - 18:58

ಹಣುಮಂತ ಅನಂತ ಪಾಟೀಲ್ ಜಿ, ಯಶೋಧರೆಗೆ ಹೊಸ ದಿಗಂತವನ್ನೇ ನೀಡಿದ್ದೀರಿ. ಕವನಕ್ಕೆ ಕಾವ್ಯ ರೂಪ ತೊಡಿಸಿದ್ದೀರಿ. ಯಶೋಧರೆಯ ಕಂಗಳು ಗ್ರಹಿಸಿದ ತುಮುಲ, ದ್ವಂದ್ವಗಳಿಲ್ಲದ ನಿರ್ಧಾರಗಳು ಬುದ್ಧನನ್ನು ಸೃಷ್ಟಿಸಿದವು. ವಾಹ್, ಬಲು ಮೆಚ್ಚುಗೆಯಾಯಿತು. ಸುಂದರ ಭಾಷ್ಯ. ವಂದನೆಗಳು ಸರ್

Submitted by H A Patil Wed, 04/15/2015 - 09:56

In reply to by Lakshmikanth Itnal 1

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ನಮ್ಮ ಕಾವ್ಯ ಪುರಾಣಗಳಲ್ಲಿ ಪ್ರಮುಖ ಪಾತ್ರಗಳ ಪ್ರಭಾ ವಲಯದ ಮುಂದೆ ಅನೇಕ ಪಾತ್ರಗಳು ಗೌಣವಾಗಿ ಬಿಟ್ಟಿರುತ್ತವೆ, ಅಂತಹ ಪಾತ್ರಗಳಲ್ಲಿ ಯಶೋದರೆಯ ಪಾತ್ರವೂ ಒಂದು, ಬುದ್ಧ ನೆನಪಾದಾಗಲೆಲ್ಲ ಯಶೋದರೆಯ ನಿರ್ಲಿಪ್ತತೆ ನನ್ನನ್ನು ಕಾಡಿದೆ, ಸಿದ್ಧಾರ್ಥ ಬುದ್ಧನಾಗಲು ಹೊರಟಾಗ ಮತ್ತು ಮರಳಿದಾಗ ಆಕೆಯ ಮನದ ತುಮುಲಗಳೇನಿರತಬಹುದು ಎಂಬ ಸರಳ ಕುತೂಹಲವೆ ಈ ಕವನದ ಹುಟ್ಟುವಿಕೆಯ ಮೂಲಬಿಂದು, ಮೆಚ್ಚುಗೆಯ ವಿಮರ್ಶೆಗೆ ಧನ್ಯವಾದಗಳು.