ಕಚ'ಗುಳಿಗೆ' - 08

ಕಚ'ಗುಳಿಗೆ' - 08

ದಿನ ಕುಡಿದರು ಮತ್ತೆ ಮತ್ತೆ ಕುಡಿಯುವ ಕಾಫಿ ಚಹಗಳಂತೆ, ಅದೇ ಥೀಮುಗಳು ನೂರಾರು ಹನಿಗವನ ಚುಟುಕಗಳಲ್ಲಿ ಹರಿದಾಡಿದ್ದರು ಮತ್ತೆ ಓದಿದ ಹೊತ್ತಲ್ಲಿ ಒಂದು ಮುಗುಳ್ನಗೆ, ಕುತೂಹಲ, ತುಸು ಚಿಂತನೆ ಮೂಡಿಸುವ ಸಾಮರ್ಥ್ಯ ಹನಿಗವನಗಳದ್ದು. ಅಂತದ್ದೆ ಆಗಾಗ್ಗೆ ಸ್ಪುರಿಸಿದ ಹನ್ನೆರಡು ತುಣುಕುಗಳು ಇಲ್ಲಿವೆ - ವಾರದ ಕೊನೆಯನ್ನು ಜಾಡಿಸುವ ಗುಟುಕುಗಳ ರೂಪದಲ್ಲಿ.

ಹುಡುಗಾಟ
____________________

ಹುಡುಗರು ಮಾಡಿದರು
ಹುಡುಗಾಟ..
ಹುಡುಗಿಯರು ಮಾಡಿದರು
ಹುಡುಗಾಟ !
ಭಾರಿ ಮೋಸದ ತಾಣ
ನಮ್ಮ ಪದಗಳ ವ್ಯಾಕರಣ ||

ಯಶಸ್ಸಿನ ಗುಟ್ಟು
___________________

ತಪ್ಪು 
ನಿನದಿದ್ದರು ಸರಿ 
ಅವಳದಿದ್ದರು ಸರಿ
ಸಂಧಾನ'ಕೊಂದೆ' ದಾರಿ -
ಕೊನೆಗವಳದೆ ಸರಿ ||

ಯಶಸ್ಸಿನ ಹಿಂದೆ
__________________

ಪ್ರತಿ
ಯಶಸ್ವಿ ಗಂಡಿನ ಹಿಂದೆ
ಒಂದು ಹೆಣ್ಣಿನ ಛಾಯೆ ಪ್ರಖರ ;
ಪ್ರತಿ 
ಯಶಸ್ವಿ ಹೆಣ್ಣಿನ ಹಿಂದೆ
ಗಂಡಾಗಿ ನಿಂತಿದ್ದರೆ ಸಾಕು ಬಕರ ! ||

ಯಶದ ತರ
_________________

ಪ್ರತಿ ಗಂಡಿನ 
ಯಶದ ಹಿಂದೆ
ಒಂದು ಹೆಣ್ಣಿರಲೆ ಬೇಕು;
ಒಂದೊ 
ಪ್ರೇರಣೆಯಾಗಿ..
ಇಲ್ಲಾ
ಆರೋಪಣೆಯಾಗಿ ||

ಹಳ್ಳಿಯ ಬದುಕು
_________________

ಸರಕಾರಿ 
ಖರ್ಚಲಿ ಸಂಡಾಸು
ಕಟ್ಟಿದರು ನಮ್ಮವರಿಗೆ -
ಕಾಲುವೆ ಬದಿಯೆ
ಸೊಗಸು ! ||

'ಅರ್ಥ'
____________

ಸರಿಯಾಗಿ
'ಅರ್ಥ'
ಮಾಡಿಕೊಂಡರೆ
ಸುಖ ದಾಂಪತ್ಯ :
ಅವನರ್ಥ
ಸಿರಿ ಸಂಪತ್ತು ಹಣ 
ಅವಳರ್ಥ 
ಬಯಸಿದ್ದೆಲ್ಲ ಪೂರ್ಣ ! ||

ಅಂತರಾತ್ಮ
________________

ಕಟಕಿಯಾಡುವಳು
ಕುಟುಕುವಳು
ಕೆಣಕುವಳು
ಕೊನೆಗು
ಗೆಲಿಸುವಳೊ?
ಸೋಲಿಸುವಳೊ?
ಬಿಟ್ಟಿದ್ದು ಹುಚ್ಚು ಮನಕೆ! ||

ವ್ಯತ್ಯಾಸ
_________________

ವಿಷಯವಿರದೆಯು
ಮಾತಾಟ
ಪ್ರೇಮಿಗಳಿಗಿಹ ಚಟ
ವಿಷಯವಿದ್ದು
ಮೌನದ ಹಠ
ವಿವಾಹೋತ್ತರ ಸಂಕಟ ||

ನೈಜ
___________________

ಕನ್ನಡ ಬರೆದಿದ್ದು ಸಾಕು
ಮಾಡಿಸಯ್ಯ ಬುಕ್ಕು...
ಕೇಳಿದೆ 'ಏನಾಗಬೇಕು?'
ಪ್ರಿಂಟಿಗೆ ಕಾಂಚಾಣದ ಹೆಲ್ಪು
ಜೋಡಿಸೆ ಧೂಳ್ಹಿಡಿಸದ ಶೆಲ್ಪು! ||

ವಾಗ್ದಾನ
_________________

ನಲ್ಲೆ ನಿನಗಾಗಿ
ಕೇಳೆಷ್ಟಾದರು ಕೊಡುವೆ
'ಬ್ಲಾಂಕು ಚೆಕ್ಕು'
ಬೌನ್ಸಾಗಬಾರದು
ಕಾನೂನಿನದೆ ಗೊಡವೆ
ಸಹಿ ನಿನದೆ ಹಾಕು! ||

ಕಾಲ ಧರ್ಮ
__________________

ಈಗಿನ ಮಕ್ಕಳು
ಎಲ್ಲದರಲ್ಲು
ಬಲು ಮುಂದು..
ಕೆಲವರಂತು
ಹುಟ್ಟುವುದೆ
ಮದುವೆಗು ಮುಂದು ! ||

ಗಂಟು-ನಂಟು
___________

ಇದ್ದರೆ ಗಂಟು
ಸುಲಭ ನಂಟು
ಮೂರು ಗಂಟು
ಬೀಳಲದೆ ಗುಟ್ಟು ||

Comments

Submitted by kavinagaraj Wed, 04/22/2015 - 20:30

ಸಿಹಿ, ಕಹಿ, ಒಗಚು, ಹುಳಿ ಮುಂತಾದ ಬಗೆ ಬಗೆಯ ರುಚಿಯ ಗುಳಿಗೆಗಳು!

Submitted by nageshamysore Thu, 04/23/2015 - 08:43

In reply to by kavinagaraj

ಕವಿಗಳೆ ನಮಸ್ಕಾರ. ಎಲ್ಲಾ ಗುಳಿಗೆಗಳನ್ನು ನುಂಗಿದ್ದು ಮಾತ್ರವಲ್ಲದೆ, ರುಚಿ ವೈವಿಧ್ಯಗಳ ಗುಣಗಾನ ಬೇರೆ ಮಾಡಿದ್ದಕ್ಕೆ ಧನ್ಯವಾದಗಳು! :-)