ಕೆರೆಕಟ್ಟೆ ಘಾಟಿ ರಸ್ತೆ
ನಿಜ ಹೇಳಬೇಕೆಂದರೆ, ನಾವು ನೋಡಲು ಹೋಗಿದ್ದು, ಕೆರೆಕಟ್ಟೆ ಘಾಟಿಯನ್ನಲ್ಲ. ನಮ್ಮ ಜೀವನಗತಿಯು ನೆಮ್ಮದಿಯಿಂದ ಕೂಡಿರಲಿ ಎಂದು ಪ್ರಾರ್ಥಿಸಲು ಪುಣ್ಯ ಕ್ಷೇತ್ರವೊಂದನ್ನು ಸಂದರ್ಶಿಸಲು ಹೊರಟವರು, ಶಿರಾಡಿ ಘಾಟಿಯ ಅಲಭ್ಯತೆಯಿಂದಾಗಿ, ಅನಿವಾರ್ಯವಾಗಿ ಕೆರೆಕಟ್ಟೆ ಘಾಟಿಯ ಮೂಲಕ ಸಾಗಬೇಕಾಯಿತು. ಅದರಿಂದಾದ ಒಂದು ಅಪರೂಪದ ಅನುಭವವೆಂದರೆ, ಅಲ್ಲಿನ ದಟ್ಟ ಕಾಡನ್ನು ನೋಡಲು ದೊರೆತ ಅವಕಾಶ. ಜೊತೆಗೆ, ನಮ್ಮ ಮುಖ್ಯ ಗಮ್ಯಸ್ಥಾನದ ನೆನಪಾದಾಗಲೆಲ್ಲ, ಕೆರೆಕಟ್ಟೆ ಘಾಟಿಯ ಸ್ನಿಗ್ದ ಸೌಂದರ್ಯದ ನೆನಪಾಗುವಂತಾಯಿತು. ಕರ್ನಾಟಕ ರಾಜ್ಯದಲ್ಲಿ ಯಾವುದೇ ರಸ್ತೆ ಮೂಲಕ ಸಾಗುವಾಗ, ನೋಟಕ್ಕೆ ದಕ್ಕುವ ಅತ್ಯುತ್ತಮ ಕಾಡುಗಳಲ್ಲಿ ಕೆರೆಕಟ್ಟೆ ರಸ್ತೆಯ ಆಸು ಪಾಸಿನಲ್ಲಿರುವ ಅರಣ್ಯವು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಕುದುರೆಮುಖ ರಕ್ಷಿತ ಅರಣ್ಯದಲ್ಲಿ ಸಾಗುವ ಈ ರಸ್ತೆಯು ಶೃಂಗೇರಿಯಿಂದ ಸುಮಾರು 23 ಕಿ.ಮೀ. ದೂರದಲ್ಲಿರುವ ಕೆರೆಕಟ್ಟೆ ಗ್ರಾಮದ ಮೂಲಕ ಸಾಗಿ, ಎಸ್.ಕೆ.ಬಾರ್ಡರ್ ಮೂಲಕ ಹಾದು, ಸುಮಾರು 40 ಕಿ.ಮೀ. ದೂರದಲ್ಲಿರುವ ಮಾಳ ಗ್ರಾಮವನ್ನು ತಲುಪುವಷ್ಟರಲ್ಲಿ ಅತಿ ನಿಬಿಡ ಕಾಡಿನ ಅಭೂತ ಪೂರ್ವ ದರ್ಶನವನ್ನು ನೀಡುತ್ತದೆ. ಕುದುರೆ ಮುಖ ರಕ್ಷಿತ ಅರಣ್ಯವನ್ನು ಕೆರೆಕಟ್ಟೆ ಹತ್ತಿರ ಪ್ರವೇಶಿಸುವಾಗ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ನಲ್ಲಿ ಒಂದು ರಹದಾರಿ ಪತ್ರವನ್ನು ಕೊಡುತ್ತಾರೆ, ಅದನ್ನು ಮಾಳ ಗ್ರಾಮದಲ್ಲಿ, ಅರಣ್ಯದಿಂದ ಹೊರಬರುವಾಗ ವಾಪಸು ನೀಡಬೇಕು. ಆದ್ದರಿಂದ, ಪ್ರಯಾಣಿಕರ ಓಡಾಟಕ್ಕೆ ಈ ಕಾಡಿನಲ್ಲಿ ಅನುಮತಿ ಅಗತ್ಯ ಮತ್ತು ಸ್ವೇಚ್ಛಾಚಾರ ಓಡಾಟಕ್ಕೆ ನಿರ್ಬಂಧವೂ ಇರುವುದರಿಂದಾಗಿಯೋ ಏನೊ, ದಾರಿಯಲ್ಲಿ ಸಾಗುವಾಗ ಕಾಣುವ ಕಾಡು ದಟ್ಟವೆನಿಸುತ್ತದೆ, ಆಪ್ತವೆನಿಸುತ್ತದೆ. ನಾವು ಶೃಂಗೇರಿಯನ್ನು ಬಿಟ್ಟಿದ್ದು ಬೆಳಗಿನ 6 ಗಂಟೆಯ ಸಮಯ. ಶೃಂಗೇರಿ- ಮಂಗಳೂರು ರಸ್ತೆಯನ್ನು ಅನುಸರಿಸಿ ಹೊರಟಾಗ ರಸ್ತೆಯುದ್ದಕ್ಕೂ ಮಸುಕು, ಇಬ್ಬನಿ. ಮೊದಮೊದಲು ರಸ್ತೆ ಇಕ್ಕಟ್ಟಾಗಿದೆ ಎನಿಸಿತು. ಮುಂದುವರಿದಂತೆಲ್ಲಾ, ರಸ್ತೆಯ ಸ್ಥಿತಿ ಉತ್ತಮ. ಆಗಿನ್ನೂ ಬೆಳಗಿನ ನಸುಕು ಕಳೆದಿರಲಿಲ್ಲ. ರಸ್ತೆ ಪಕ್ಕದ ಮನೆಯವರು ಸುಖನಿದ್ದೆ ಮುಗಿಸಿ, ಆಕಳಿಸುತ್ತಾ ಹೊರಬಂದು, ಮನೆ ಎದುರು ಕಸಗುಡಿಸಲು ಆರಂಭಿಸಿದ್ದರು. ಕೆಲವರು ಹಲ್ಲುಜ್ಜುತ್ತಾ ನಿಂತಿದ್ದರು. ಮೊದಮೊದಲು ಅಲ್ಲಲ್ಲಿ ಕಾಣಿಸುತ್ತಿದ್ದ ಮನೆಗಳು, ಕ್ರಮೇಣ ಕಡಿಮೆಯಾಗತೊಡಗಿದವು. ಆಚೀಚೆ ಬೆಳೆದ್ದ ಮರಗಳ ದಟ್ಟಣೆಯು ಕ್ರಮೇಣ ಜಾಸ್ತಿಯಾಗತೊಡಗಿತು. ಗ್ರಾಮಗಳ ಮಿತಿ ಕಳೆದು, ಕುದುರೆ ಮುಖ ರಾಷ್ಟ್ರೀಯ ಅರಣ್ಯವನ್ನು ಪ್ರವೇಶಿಸಿದಂತೆÉ, ಎಲ್ಲೆಲ್ಲೂ ಕೇವಲ ಮರಗಳು. ಸಣ್ಣ ಮರ, ದೊಡ್ಡ ಮರ, ಗಿಡ, ಬಳ್ಳಿ, ಕುರುಚಲು ಗಿಡ, ಮುಳ್ಳು ಗಿಡ ಮಾತ್ರ. ನಾವು ಚಲಿಸುತ್ತಿದ್ದ ರಸ್ತೆಯಲ್ಲೂ ತಿರುವುಗಳ ಸಂಖ್ಯೆ ಜಾಸ್ತಿಯಾಗತೊಡಗಿತು. ಅಲ್ಲಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿತ್ತು. ಈ ಅಭಯಾರಣ್ಯದಲ್ಲಿ ಎಲ್ಲಾ ರೀತಿಯ ವನ್ಯಜೀವಿಗಳು ಇವೆ, ಆದರೆ, ಸಾಮಾನ್ಯ ಪ್ರವಾಸಿಗರಿಗೆ ಕಾಣಿಸುವುದು ತೀರಾ ಅಪರೂಪ. ಆ ಕಾಡಿನ ಮಧ್ಯೆ ಒಂದು ಗ್ರಾಮ – ಅದುವೇ ಕೆರೆಕಟ್ಟೆ ಗ್ರಾಮ. ಒಂದೆರಡು ತಟ್ಟಿ ಹೋಟೆಲುಗಳು, ನಾಲ್ಕೆಂಟು ಮನೆಗಳು, ಅರಣ್ಯ ಇಲಾಖೆಯ ಕಟ್ಟಡಗಳು, ಏರು ತಗ್ಗಿನಿಂದ ಕೂಡಿದ ಬಯಲು ಪ್ರದೇಶ ಇಷ್ಟೆ ಈ ಗ್ರಾಮದ ನೋಟ. ಗ್ರಾಮದ ಹತ್ತಿರವೇ ಹರಿಯುವ ವಿಮಲಾ ಎಂಬ ನದಿಯು (ತುಂಗೆಯ ಉಪನದಿ) ಯು ಟರ್ನ್ ಮಾಡಿ, ಗ್ರಾಮಕ್ಕೆ ನೀರು ಒದಗಿಸುವ ಜಲಮೂಲವಾಗಿದೆ. ಕುದುರೆ ಮುಖ ಸಾಲಿನ ದಟ್ಟ ಅರಣ್ಯದಲ್ಲಿರುವ ಈ ಗ್ರಾಮವು ವಿವಿಧ ಕಾರಣಗಳಿಗೆ ಹಲವು ಬಾರಿ ಸುದ್ದಿ ಮಾಡಿದೆ. 2006-07 ನೆಯ ಸಾಲಿನಲ್ಲಿ ಒಂದು ರಾತ್ರಿ ಕಾಡಿನಿಂದ ಬಂದ ನಕ್ಸಲರು ಇಲ್ಲಿನ ಕಛೇರಿಗಳ ಮೇಲೆ ದಾಳಿ ಮಾಡಿ, ಅರಣ್ಯ ಇಲಾಖೆಯ ವಶದಲ್ಲಿದ್ದ ಕಂಪ್ಯೂಟರ್ ಮತ್ತಿತರ ಸಾಮಗ್ರಗಳನ್ನು ಹಾಳುಗೆಡವಿದ್ದರು. ಈ ಗ್ರಾಮದ ಸುತ್ತಲೂ ಇದ್ದ ಹಳ್ಳಿ ಜನರನ್ನು, ಮುಖ್ಯವಾಗಿ ಗೌಡ್ಲು ಜನಾಂಗದವರನ್ನು ಓಡಿಸಲು ಸರಕಾರದ ಇಲಾಖೆಗಳು ಪ್ರಯತ್ನಿಸುತ್ತಿದ್ದುದನ್ನು ನಕ್ಸಲ್ ಬೆಂಬಲಿಗರು ವಿರೋಧಿಸುತ್ತಿದ್ದುದರಿಂದ ಈ ದಾಳಿ ಎನ್ನಲಾಗಿತ್ತು. ಅವರ ದಾಳಿಯ ನಂತರವೂ, ಆ ಸುತ್ತಲಿನ ಜನರನ್ನು ಕಾಡಿನಿಂದ ಹೊರಬಂದು ಬೇರೆಡೆ ವಾಸಿಸುವಂತೆ ಮನೊಲಿಸುವ ಸರಕಾರದ ಪ್ರಯತ್ನ ಮುಂದುವರಿಯಿತು. ಮಾತ್ರವಲ್ಲ, ಇಂದಿಗೂ ಕೆರೆಕಟ್ಟೆ ಗ್ರಾಮದ ಜನರನ್ನು ಮನವಲಿಸುವ ಕೆಲಸ ಮುಂದುವರಿದೇ ಇದೆ. ಇಲ್ಲಿ ಸಾಗುವ ಹೆದ್ದಾರಿಯಲ್ಲಿ ಚಲಿಸುವ ವಾಹನಗಳನ್ನು ಕಾಡಿನಲ್ಲೆಲ್ಲೂ ನಿಲ್ಲಿಸಬಾರದು ಎಂಬ ಒಂದು ಷರತ್ತು, ಇಲ್ಲಿ ಹಾಕಲಾಗಿದ್ದ ಫಲಕಗಳನ್ನು ಕಿತ್ತು ಹಾಕಿರುವುದು, ವಿದ್ಯುತ್ ಸಂಪರ್ಕಕ್ಕೆ ನಿರ್ಬಂಧ, ಹೋಟೆಲ್ ಆರಂಭಿಸಲು ನಿರ್ಬಂಧ ಮತ್ತಿತರ ಕ್ರಮಗಳಿಂದ ತಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಸರಕಾರ ಪ್ರಯತ್ನಿಸುತ್ತಿದೆ ಎಂಬುದು ಸ್ಥಳೀಯರ ಆರೋಪ. ಈ ಆರೋಪವು ಕಳೆದ ಒಂದು ದಶಕದಿಂದಲೂ ಕೇಳಿಬರುತ್ತಿದೆ. ಹಲವು ಸ್ಥಳೀಯರು ಈ ರೀತಿಯ ಪರಿಸ್ಥಿತಿಯನ್ನು ಸಹಿಸಲಾಗದೆ, ಒಬ್ಬೊಬ್ಬರಾಗಿ ಜಾಗ ಖಾಲಿಮಾಡಿ, ಪಟ್ಟಣಗಳತ್ತ ಮುಖಮಾಡಿರುವುದು ಒಂದು ವಾಸ್ತವ. ಕೆರೆಕಟ್ಟೆ ಗ್ರಾಮವನ್ನು, ನಾವು ಹೊರಗಿನವರು ನೋಡಿದಾಗ, “ಆಹಾ ಎಷ್ಟು ಚಂದ, ಕಾಡಿನ ಮಧ್ಯೆ, ನಿಸರ್ಗದ ಮಡಿಲಲ್ಲಿರುವ ಜಾಗ, ಹಕ್ಕಿಗಳು ಹಾಡುವ ತಾಣ” ಎಂದು ಹೊಗಳಿದರೂ, ಅಲ್ಲಿ ವಾಸ ಮಾಡುವವರ ಜೀವನ ದುರ್ಬರವೆಂದೇ ಹೇಳಬಹುದು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಇನ್ನಷ್ಟು ಬೆಳೆಯಲು ಕೆರೆಕಟ್ಟೆಯಂತಹ ಅದೆಷ್ಟೋ ಗ್ರಾಮಗಳು ತ್ಯಾಗ ಮಾಡಲೇಬೇಕು ಎಂಬುದು ಸರಕಾರದ ನೀತಿ. ಆದ್ದರಿಂದಲೇ, ಕೆರೆಕಟ್ಟೆಯಿಂದ ಮುಂದೆಸಾಗಿ, ದಟ್ಟ ಅರಣ್ಯದಲ್ಲಿ ಒಂದಷ್ಟು ದೂರ ಹೋದರೆ ದೊರೆಕುವ ಎಸ್.ಕೆ.ಬಾರ್ಡರ್ ಎಂಬ ಜಾಗ ಈಗಲೂ ಜನವಸತಿ ರಹಿತ ಪ್ರದೇಶ. ರಸ್ತೆಯಲ್ಲಿ ಸಾಗುವ ವಾಹನಗಳು ಈ ಪ್ರದೇಶದ ಸಂಗಾತಿಗಳು! ಶೃಂಗೇರಿಯಿಂದ ಬಂದ ರಸ್ತೆಯು, ಹೊರನಾಡಿನಿಂದ ಬಂದ ರಸ್ತೆಯನ್ನು ಕೂಡಿಕೊಂಡು, ಕಾರ್ಕಳದತ್ತ ಸಾಗುವ ಕೂಡುಪ್ರದೇಶ ಅದು. ಇಲ್ಲೂ ಹೊಸ ಅಂಗಡಿ ಮುಂಗಟ್ಟುಗಳನ್ನು ಸ್ಥಾಪಿಸಲು ಅರಣ್ಯ ಇಲಾಖೆಯ ವಿರೋಧವಿದೆ. ಆದ್ದರಿಂದ, ಎಸ್. ಕೆ. ಬಾರ್ಡರ್ ಎಂಬುದು ರಸ್ತೆಗಳು ಕೂಡುವ ಜಾಗ ಮಾತ್ರ, ಒಂದು ‘ತಾಣ’ ಅಲ್ಲ. ಇಲ್ಲಿಂದ ಘಾಟಿ ಇಳಿಯುವ ಹೆದ್ದಾರಿಯು ಭಾರೀ ಕಾಡಿನ ನಡುವ ಹಾವಿನಂತೆ ಸರಿಯುತ್ತಾ, ಕೆಳಗಿಳಿಯುತ್ತದೆ. ಹೆದ್ದಾರಿ ನಿರ್ಮಿಸುವ ಇಲಾಖೆಯವರು ಈ ರಸ್ತೆಯನ್ನು ಬಹಳ ಜತನದಿಂದ ಅಭಿವೃದ್ಧಿಪಡಿಸುತ್ತಾ ಇದ್ದಾರೆ. ವಿಶಾಲವಾದ ರಸ್ತೆ, ಎರಡೂ ಕಡೆ ರಕ್ಷಣಾ ಗೋಡೆ, ಮೇಲಿನಿಂದ ಮಣ್ಣು ಜರಿದು ಬೀಳದಂತೆ, ಶಿಲೆಕಲ್ಲುಗಳಿಂದ ರಚಿಸಿದ ತಡೆಗೋಡೆ ಇತ್ಯಾದಿ. 2013ರಲ್ಲಿ, ರಸ್ತೆಯುದ್ದಕ್ಕೂ ನಾಲ್ಕು ಅಡಿ ಎತ್ತರದ ಕಲ್ಲಿನ ತಡೆಗೋಡೆಯನ್ನು ರಚಿಸಲಾಯಿತು. ಇದರಿಂದಾಗಿ, ಇಲ್ಲಿ ರಸ್ತೆದಾಟುವ ಕಾಡು ಪ್ರಾಣಿಗಳಿಗೆ ಬಹಳ ತೊಂದರೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಲೋಕೋಪಯೋಗಿ ಇಲಾಖೆಯು ಇದನ್ನು ನಿರ್ಮಿಸಿದೆ ಎಂಬ ಆರೋಪವನ್ನೂ ಮಾಡಿದರು. ಆದರೆ, ಕಾಡು ಪ್ರಾಣಿಗಳ ಸ್ವಾಸ್ಥ್ಯಕ್ಕಿಂತ, ನಾಡಿನ ಜನರು ಚಲಿಸುವ ವಾಹನಗಳಿಗೆ ಹೆಚ್ಚಿನ ಅನುಕೂಲವಾಗಬೇಕೆಂದು ನಿಶ್ಚಯಿಸಿದ ವಿವಿಧ ಇಲಾಖೆಗಳವರು ತಮ್ಮ ಪಾಡಿಗೆ ತಾವು ಈ ಹೆದ್ದಾರಿಗೆ ಸಂಬಂಧಿಸಿದ “ಕಾಮಗಾರಿ”ಗಳನ್ನು ಮುಂದುವರಿಸಿದರು. ಮಂಗಳೂರು - ಷೋಲಾಪುರ ಹೆದ್ದಾರಿ ಎಂಬ ಹೆಸರನ್ನು ಹೊತ್ತಿ ಈ ಹೆದ್ದಾರಿ ಅಭಿವೃದ್ಧಿಗಾಗಿ ಈಗಲೂ ಕೆಲಸಗಳು ನಡೆಯುತ್ತಲೇ ಇವೆ. ಕೆರೆಕಟ್ಟೆ ಹೆದ್ದಾರಿಯಿಂದಾಗಿ, ವನ್ಯ ಜೀವಿಗಳಿಗೆ ತೊಂದರೆಯಾಗುತ್ತಿದೆ ಎಂಬ ಪರಿಸರವಾದಿಗಳ ವಾದವನ್ನು ಒಪ್ಪಿಕೊಳ್ಳುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಮುಂದೊಂದು ದಿನ ಕೆರೆಕಟ್ಟೆಯಲ್ಲೋ, ಅದರ ಸನಿಹದಲ್ಲೋ ನಿರ್ಮಿತವಾಗಬಹುದಾದ ಒಂದು “ಇಕೊ ಸೆನ್ಸಿಟಿವ್ ರೆಸಾರ್ಟ್” ಜನಪ್ರಿಯಗೊಂಡರೆ, ಅಲ್ಲಿನ ಗೌಜಿನಲ್ಲಿ ಪರಸರವಾದಿಗಳ ಸದ್ದು ಅಡಗಿಹೋಗಲೂ ಬಹುದು! -ಎಂ.ಶಶಿಧರ ಹೆಬ್ಬಾರ ಹಾಲಾಡಿ ( ಚಿತ್ರ ಕೃಪೆ : ಅಂತರ್ಜಾಲ )
Comments
ಉ: ಕೆರೆಕಟ್ಟೆ ಘಾಟಿ ರಸ್ತೆ
ಕಣ್ಣಿಗೆ ಕಟ್ಟುವಂತಹ ವಿವರಣೆ ಚೆನ್ನಾಗಿದೆ. ಬೆಳ್ತಂಗಡಿಯ ಭಾಗದ ಅರಣ್ಯ ಪ್ರದೇಶಗಳಲ್ಲಿ ವಾಸವಿರುವ ಕುಟುಂಬಗಳ ಸಮೀಕ್ಷೆಯನ್ನು ನಾನು ತಹಸೀಲ್ದಾರನಾಗಿದ್ದಾಗ ಮಾಡಿದ್ದೆ. ನನ್ನ ಅನುಭವವೆಂದರೆ ಆಗ ಕಾಡಿನಲ್ಲಿ ವಾಸವಿದ್ದ ಸುಮಾರು 300 ಕುಟುಂಬಗಳ ಪೈಕಿ ಬಹುತೇಕರಿಗೆ ಪಟ್ಟಣ ಪ್ರದೇಶದಲ್ಲೂ ಸಹ ಮನೆಗಳಿದ್ದವು. ಅರಣ್ಯ ಉತ್ಪತ್ತಿಗಳ ಸಂಗ್ರಹದಿಂದ ಬರುವ ಲಾಭಕ್ಕಾಗಿ ಅವರುಗಳು ಕಾಡಿನ ಮನೆಗಳನ್ನು ಬಿಟ್ಟುಬರಲು ಇಚ್ಛಿಸುತ್ತಿರಲಿಲ್ಲ. ಇದು ವಸ್ತುಸ್ಥಿತಿಯ ಇನ್ನೊಂದು ಮುಖವೂ ಆಗಿದೆ.
In reply to ಉ: ಕೆರೆಕಟ್ಟೆ ಘಾಟಿ ರಸ್ತೆ by kavinagaraj
ಉ: ಕೆರೆಕಟ್ಟೆ ಘಾಟಿ ರಸ್ತೆ
ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದ. ಆ ಪ್ರದೇಶ , ಹಾಗಾದರೆ, ನಿಮಗೆ ತುಂಬಾ ಪರಿಚಿತ! ಅಲ್ಲಿ ಚಾರಣ ಹೋಗುವ ಯೋಚನೆ ಇದೆ (ಉದಾ: ಶಿಶಿಲ , ಎತ್ತಿನ ಭುಜ)