ಬೇಡುವೆನು ವರವನ್ನು ... ಕೊಡು ತಾಯಿ !!

ಬೇಡುವೆನು ವರವನ್ನು ... ಕೊಡು ತಾಯಿ !!

ಬೇಡುವೆನು ವರವನ್ನು ... ಕೊಡು ತಾಯಿ

"ಇನ್ನೊಂದ್ ವಾರ ಪರೀಕ್ಷೆಗಳಿವೆ ... ಬೆಳಿಗ್ಗೆ ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡೋದು ಮರೀಬೇಡ ..."

ಸ್ನಾನಾದಿಗಳಾಗಿ ಶಂಕ್ರಿ ದೇವನ ಮುಂದೆ ನಿಂತ "ದೇವ್ರೇ, ಇವತ್ತಿನ ಪರೀಕ್ಷೇಲಿ ನನಗೆ ಗೊತ್ತಿರೋ ಉತ್ತರಾನೇ ಬರಲಿ ... ಅಲ್ಲ ಅಲ್ಲ ... ದೇವ್ರೇ ವೈಟ್ ... ಟೈಮ್ ಪ್ಲೀಸ್ .. ಎಲ್ಲ ಪ್ರಶ್ನೆಗೂ ನನಗೆ ಉತ್ತರ ಗೊತ್ತಿರೋ ಹಾಗೇ ಮಾಡು" ... ಮೊದಲ ನಮಸ್ಕಾರ .. ಅದರ ಮೇಲೆ ಇನ್ನೊಂದು ಮತ್ತೊಂದು ಮಗದೊಂದು ... "ಪರೀಕ್ಷೆ ಮುಗಿದು ಹೋಗುತ್ತೆ .. ಹೊರಡು"

"ಯಾವ ಪರೀಕ್ಷೇನೋ ಇವತ್ತು?"

"ಕನ್ನಡ ಅಪ್ಪಾ ... ಅದಕ್ಕೇ ಕನ್ನಡದ್ ದೇವ್ರನ್ನೇ ಬ್ಲೆಸ್ ಮಾಡಕ್ಕೆ ಕೇಳಿದ್ದು" ...

ಇದು ವರ್ಷಾಂತ್ಯದ ಮಹಾಬೇಡಿಕೆ ... ವರ್ಷದುದ್ದಕ್ಕೂ ಇತರೆ ಬೇಡಿಕೆಗಳು ಅಂದರೆ - 
"ದೇವ್ರೇ, ರೋಸಿ ಮಿಸ್ ಕ್ವಿಜ್ ಪ್ರಶ್ನೆ ನನ್ನ ಕೇಳದೇ ಇರಲಿ ... ಸೇವ್ ಮೀ" ........ "ದೇವ್ರೇ, ಟ್ರ್ಯಾಫಿಕ್ ಬೇಗ ಕ್ಲಿಯರ್ ಆಗ್ಲಿ. ಲೇಟ್ ಆದ್ರೆ ಬೆಂಚ್ ಮೇಲೆ ನಿಲ್ಲಿಸ್ತಾರೆ’ ...... "ದೇವ್ರೇ ಈ ರನ್ನಿಂಗ್ ರೇಸ್’ನಲ್ಲಿ ನಾನೇ ಫಸ್ಟ್ ಬರೋ ಹಾಗೆ ಮಾಡು ..." ..... "ದೇವ್ರೇ, ಹಿಂದೀ ಟೀಚರ್ ಕೈಗೆ ಯಾವ ಕೋಲೂ, ಸ್ಕೇಲೂ ಸಿಗದೇ ಹೋಗ್ಲಿ" ಹೀಗೆ ...

ಮುಂದಿನ ಜೀವನದಲ್ಲಿ ಸ್ವಲ್ಪ ಅಡ್ವಾನ್ಸ್ ಆಗುತ್ತೆ ... ಹೈಸ್ಕೂಲ್ ಮೆಟ್ಟಿಲು ಏರಿದ ಮೇಲೆ ... 
"ದೇವ್ರೇ, ತರಳೇ ಸುಬ್ಬ ಮಾಡಿದ್ ಗಲಾಟೆಗೆ ನನ್ನನ್ನೂ ಹೊರಗೆ ಹಾಕಿದ್ದಾರೆ. ಲೆಕ್ಕದ ಮೇಷ್ಟ್ರಿಗೆ ನಾನು ಹೊರಗೆ ಇರೋದು ಮರೆತು ಹೋಗ್ಲಿ" ...... "ದೇವ್ರೇ, ಕ್ರಿಕೆಟ್ ಮ್ಯಾಚ್ ನೋಡ್ಟಾ ಸೈನ್ಸ್ ಓದೋದೇ ಮರೆತು ಹೋಯ್ತು ... ಇವತ್ತು ಸೈನ್ಸ್ ಮಿಸ್’ಗೆ ಜ್ವರ ಬರಲಿ" ..... "ಜೈ ಭಜರಂಗ ಬಲಿ, ಆ ಪೋನಿ ಟೈಲ್ ಪಿಂಕಿ ನನ್ ಕಡೆ ನೋಡೋ ಹಾಗೆ ಮಾಡಪ್ಪಾ" ಹೀಗೆ ...

ಎರಡನೇ ಪಿಯುಸಿ’ಗೆ ಮತ್ತೊಂದು ಮಜಲು ... ಗಣೇಶನಿಗೆ ಅಭಿಷೇಕಕೆ ಬರೆಸಿದ್ದಾಗಿದೆ... 
"ಗಣೇಶ, ಆ ರಾಮೂಗಿಂತ ನನಗೇ ಜಾಸ್ತಿ ಮಾರ್ಕ್ಸ್ ಬರಲಿ" .... "ಎಲ್ಲ ಪೇಪರ್ಸ್ ಕ್ಲಿಯರ್ ಆದ್ರೆ ನೂರೊಂದು ಕಾಯಿ ಒಡಿಸ್ತೀನಿ" .... "ಐಪಿಎಲ್ ಗಲಾಟೇಲಿ ಒದೋಕ್ಕೇ ಆಗಲಿಲ್ಲ. ಪೇಪರ್ ಕರೆಕ್ಷನ್ ಮಾಡೋವ್ನು ಸುಮ್ನೆ ೯೫ ಹಾಕಿಬಿಡ್ಲಿ" ... "ಆ ಪಿಂಕಿ ಅಪ್ಪನಿಗೆ ಬೇರೆ ಊರಿಗೆ ಟ್ರ್ಯಾನ್ಸ್ಫರ್ ಆಗದೇ ಇರೋ ಹಾಗೆ ಮಾಡಪ್ಪಾ"

ಹೆಚ್ಚು ಕಮ್ಮಿ ಓದು ಮುಗಿಯೋವರೆಗೂ ಪರೀಕ್ಷೆ ಭಯ, ಮಾರ್ಕ್ಸ್ ಭಯ, ಟೀಚರ್ ಭಯ, ಆಕರ್ಷಣೆಯ ಸುತ್ತಲ ಭಯ ಹೀಗೆ. ಮುಂದ?

"ದೇವ್ರೇ, ಇದುವರೆಗೂ ನಿನ್ನನ್ನ ಏನೂ ಕೇಳಿಕೊಂಡಿಲ್ಲ (ಆ?) ಈ ಕ್ಯಾಂಪಸ್ ಇಂಟರ್ವ್ಯೂ’ನಲ್ಲಿ ಸೆಲೆಕ್ಟ್ ಆಗೋ ಹಾಗೆ ಮಾಡು" ... "ದೇವ್ರೆ, ಮೊದಲೇ ಇಂಟವ್ಯೂ ಸಿಕ್ಕಾಪಟ್ಟೆ ಭಯ ಆಗೋಯ್ತು ... ಸಾರಿ ... ಈ ಎರಡನೇ ಇಂಟರ್ವ್ಯೂ ಸಕ್ಸಸ್ ಆಗೋ ಹಾಗೆ ಮಾಡು" ... "ದೇವ್ರೇ, ಚಿಕ್ಕ ಕೆಲಸ ಆದ್ರೂ ಪರವಾಗಿಲ್ಲ, ಬೇಗ ಕೊಡಿಸಪ್ಪಾ"

ಎಲ್ಲಕ್ಕೂ ಟೈಮ್ ಬರಬೇಕಲ್ಲ? ಅಂತೂ ಕ್ಲಿಕ್ ಆಯ್ತು

"ದೇವ್ರೇ, ಯು ಆರ್ ಗ್ರೇಟ್ ... ನನ್ ಬಾಸ್’ಗೆ ನನ್ ಕೆಲ್ಸ ಇಷ್ಟ ಆಗೋ ಮಾಡು" ... "ದೇವ್ರೇ, ಈ ಸುಟ್ ಬಾಸ್ ಏಳಕ್ಕೇ ವಕ್ಕರಿಸ್ತಾನೆ, ಸಂಜೆ ಏಳಾದ್ರೂ ಎದ್ದೇಳಲ್ಲ. ಅವನಿಗೆ ದಿನಾ ಅವನ ಹೆಂಡ್ತಿ ನಾಲ್ಕು ಘಂಟೆಗೆ ಫೋನ್ ಮಾಡಿ ಮನಗೆ ಬರೋಕ್ಕೆ ಹೇಳು" ... "ಪರಮಾತ್ಮಾ, ಇವತ್ತು ಕೆಲಸಕ್ಕೆ ಸೇರೋ ಹೊಸಾ ಹುಡುಗಿಗೆ ಇನ್ನೂ ಮದುವೆ ಆಗಿಲ್ಲದೇ ಇರಲಿ. ಸೂಪರ್ ಆಗಿ ಇರಲಿ. ನನ್ ಪಕ್ಕದ್ ಕ್ಯೂಬ್’ನಲ್ಲೇ ಕೂರಲಿ" ... "ದೇವ್ರೇ, ಹತ್ತು ನಿಮಿಷ ಕಾಫಿ ಅಂತ ಹೇಳಿ ಇವಳ ಜೊತೆ ಹೊರಗೆ ಬಂದು ಒಂದು ಘಂಟೆ ಆಯ್ತು ... ನನ್ ಬಾಸ್’ಗೆ ಅದರ ಬಗ್ಗೆ ಗೊತ್ತಾಗದೇ ಇರಲಿ" ... "ಶರಣು ಶಂಕರ ಶಂಭೋ, ಇವತ್ತು ಇಂಕ್ರಿಮೆಂಟ್ ಮೀಟಿಂಗ್ ಇದೆ. appraisal rating ಚೆನಾಗಿ ಬಂದು ನನ್ ಸಂಬಳ ಹತ್ತು ಸಾವಿರ ಏರಲಿ"

ಶಂಕ್ರಿ ಈಗ ಶಂಕರ್ ಆಗಿದ್ದಾನೆ. "ದೇವ್ರೇ, ನನ್ನ ಫಾರಿನ್ ಟ್ರಿಪ್ಪು ಸ್ಯಾಂಕ್ಷನ್ ಆಗೋ ಹಾಗೆ ಮಾಡಪ್ಪಾ" ... "ನನ್ ಹೊಸಾ ಕಾರಿಗೆ ಲೋನ್ ಸ್ಯಾಂಕ್ಷನ್ ಆಗಲಿ ಅಂತ ಹಾರೈಸಪ್ಪಾ" ... "ಮನೆ ಲೋನ್ ಸ್ಯಾಂಕ್ಷನ್ ಆಗ್ಲಿ ಅಂತ ಹಾರೈಸೋ ತಿಮ್ಮಪ್ಪ" ....

ಶಂಕರ್ ರಾವ್’ಗೆ ಮದುವೆಯೂ ಆಯ್ತು ... ಮಗುವಿನ ತಂದೆಯೂ ಆದರು ...

"ದೇವ್ರೇ, ನನ್ ಮಗುವಿಗೆ ಯಾವ್ ಖಾಯಿಲೇನೂ ಹತ್ತಿರ ಬಾರದಿರಲಿ" ... "ತಂದೇ, ಸಿಟಿಯಲ್ಲಿರೋ ಬೆಸ್ಟ್ ಸ್ಕೂಲಿಗೆ ನನ್ ಮಗನಿಗೆ ಅಡ್ಮಿಷನ್ ಸಿಗಲಿ. ನನಪಿರಲಿ, ಹಾಲಿನ ಅಭಿಷೇಕಕೆ ಬರೆಸಿದ್ದೇನೆ" ... "ನನ್ ಮಗ ಸದಾ ಕ್ಲಾಸಿಗೇ ಮೊದಲು ಇರಲಿ. ಇಲ್ದೇ ಇದ್ರೆ ಕ್ಲಬ್’ನಲ್ಲಿ ನನ್ನನ್ನ ಒಂಥರಾ ನೋಡ್ತಾರೆ" ... "ದೇವ್ರೇ, ಇವತ್ತೇ ಮೊದಲು ನನಗೋಸ್ಕರ ನಿನ್ನನ್ನ ಕೇಳ್ಕೋತಾ ಇರೋದು ... ಆ ಡಿರೆಕ್ಟರ್ ಪೊಸಿಶನ್ ನನಗೇ ಸಿಗೋ ಹಾಗೆ ಮಾಡು".

ಶಂಕ್ರಿ, ಶಂಕರ್ ಆಗಿ, ಶಂಕರ್ ರಾವ್ ಆಗಿ ಈಗ ರಿಟೈರ್ ಆದ ಶಂಕರ ರಾಯರು ಸತ್ಯವಾಗಲೂ ಶ್ರದ್ದೆಯಿಂದ ದೇವರ ಮುಂದೆ ಕೂತಿದ್ದಾರೆ.

"ದೇವ್ರೇ, ವಿದೇಶದಲ್ಲಿ ಕೂತಿರೋ ನನ್ ಮಗ ಬೇಗ ವಾಪಸ್ ಬರಲಿ ಅಂತ ಹಾರೈಸಪ್ಪಾ" ... "ನಾನೇನು ತಪ್ಪು ಮಾಡಿದೆ ಅಂತ್ಲೇ ನನಗೆ ಗೊತ್ತಾಗ್ತಾ ಇಲ್ಲ ... ನನ್ನೆಲ್ಲ ತಪ್ಪು ಮನ್ನಿಸೋ. ಒಂಟಿ ಜೀವನ ಸಾಕಾಗಿದೆ’ ... "ದೇವಾ, ಈ ಹಾಳು ಖಾಯಿಲೆ ಬೇಗ ಗುಣ ಪಡಿಸೋ ಖೊಕ್ ಖೊಕ್ ಖೊಕ್".

ಶಂಕರ ರಾಯರು ಈಗ ಜೀವನದಲ್ಲಿ ಹಣ್ಣಾಗಿ ದೇವನನ್ನು ಪ್ರಾರ್ಥಿಸಿದ್ದಾರೆ ಇಲ್ಲ ಬೇಡುತ್ತಿದ್ದಾರೆ "ಪರಮಾತ್ಮಾ ... ಮನಸ್ಸಿಗೆ ಶಾಂತಿ ನೀಡು. ನನಗಿನ್ನೇನೂ ಬೇಡ".

ಇದಿಷ್ಟು ಪ್ರಾರ್ಥನೆಗಳ ಹಂತದಲ್ಲಿ ಈಗ ನೀವೆಲ್ಲಿದ್ದೀರಾ?

Comments