ಹೊಸ ಜಾಗ..
ಹೊಸ ಜಾಗದಲಿ ಬಂದು ಹೊಂದಿಕೊಳ್ಳುವ ತಾಕಲಾಟ ಎಲ್ಲರಿಗು ಪರಿಚಿತವೆ. ಅಂತದ್ದೊಂದು ಸ್ಥಿತ್ಯಂತರ ಸ್ಥಿತಿಯಲ್ಲಿ ಎದುರಾಗುವ ಪಲುಕುಗಳನ್ಬೆ ಪದಗಳಾಗಿಸಿದ ಕೆಲವು ತುಣುಕುಗಳಿವು. ಜಾಗ ಯಾವುದೆ ಆದರು ಪ್ರತಿಯೊಬ್ಬರ ದಿಗಿಲು, ಅವಶ್ಯಕತೆ, ಸಡಗರ, ಆತಂಕಗಳು ಮಾತ್ರ ಅವೆ ಆಗಿರುವುದರಿಂದ ಹೋದಲೆಲ್ಲ ಅವುಗಳಿಗೆ ಹುಡುಕಾಟ ನಡೆಸುವುದು ಸಹಜ ಪ್ರಕ್ರಿಯೆ. ಬೇಕಾದ್ದು ಸಿಗದಿದ್ದರು ಅದಕ್ಕೆ ಸಮೀಪದ ಸ್ಥಿತಿ ಕಂಡರು ಅದನ್ನೆ ಅಪ್ಪಿಕೊಳ್ಳುವ ಅನಿವಾರ್ಯ ಆನಂದದ ಸ್ಥಿತಿ. ಆ ಕಲಸು ಮೇಲೋಗರಗಳ ನಡುವೆಯೂ ಬದಲಾಗದ ಒಂದೆ ಸ್ಥಿತಿ ಒಳಗಿನ ಭಾವನೆ, ತುಡಿತ - ಈ ಕೆಳಗಿನ ಪಲುಕುಗಳೆ ಹೇಳುವಂತೆ :-)
ಅಪರಿಚಿತ
ಮುಖಗಳಲು
ಅದೇ ಪರಿಚಿತ ನಗೆ ! ||
ಹೊಸ ಜಾಗ
ದೂರುಗಳೆ ಸರಾಗ
ತಪ್ಪಿದ್ದು ತಾನೆ ಯಾವಾಗ ? ||
ನಮ್ಮೂರಿನ ತಿನಿಸು
ಹುಲ್ಲಮೆದೆಯ ಸೂಜಿಮೊನೆ
ಸೂಪು ನೂಡಲಲೆ ಹುಡುಕು ! ||
ದೂರಲು
ಸದಾ ಬಿಸಿಲಿತ್ತಲ್ಲಿ
ಇಲ್ಲೇಕೊ ಬಿಸಿಲಿಗು ಬರ! ||
ಮುಂಜಾನೆ ನಾಲ್ಕು
ಸೂರ್ಯನಿಗ್ಯಾಕೊ ಅವಸರ
ಹೊತ್ತಿಗು ಮೊದಲೆ ಎಚ್ಚರ ||
ಭಾಷೆ
ಸಖನಾಗೆ ಅನುಬಂಧ
ವಿಮುಖನಾಗೆ ದಿಗ್ಬಂಧ ! ||
ಹುಡುಕಿದ್ದೆ ಹುಡುಕಿದ್ದು
ಸೂಪರು, ಹೈಪರು ಮಾರ್ಕೆಟ್ಟು
ಅಕ್ಕಿ ತರಕಾರಿ ದಿನಸಿ ಗೋಧಿ ಹಿಟ್ಟು ||
ಬೇಸಿಗೆಯಲ್ಲು
ಒದೆಯುವ ಚಳಿ ಗಾಳಿ
ಹೊದೆವ ಬಟ್ಟೆಯಿನ್ನು ಲಗೇಜಿನಲಿ! ||
ನಿನ್ನೆ ಮಳೆಗಾಳಿ
ಇಂದು ಬಿಸಿಲ ಧಾಳಿ
ಇಲ್ಲೂ ಹವಾಗುಣ ಹೆಣ್ಣಿನ ಮನಸೆ ! ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಹೊಸ ಜಾಗ..
ಹೊಸಜಾಗದ ಚಡಪಡಿಕೆಯ ವಿವರ ನೈಜವಾಗಿ ಬಿಂಬಿಸಿದ್ದೀರಿ. ಹೊಸಜಾಗದ ಅನುಭವ/ಸಂತಸ/ಸುಖ-ದುಃಖಗಳನ್ನು ಹಂಚಿಕೊಳ್ಳಲು ಪರಿಚಿತರಿದ್ದರೆ ಹೊಸಜಾಗವೂ ಸುಂದರವಾಗುತ್ತದೆ.
In reply to ಉ: ಹೊಸ ಜಾಗ.. by kavinagaraj
ಉ: ಹೊಸ ಜಾಗ..
ನಿಮಗೆ ಹೊಸಜಾಗದ ಚಡಪಡಿಕೆ ಹೆಚ್ಚಿದಷ್ಟು ಲಾಭ ನಮಗೆ ಬಿಡಿ !
ಆದರೆ ನನ್ನದ್ದು ತಟಸ್ಥ ಸ್ವಭಾವ ! ಇದ್ದ ಕಡೆಯೆ ಬೇರು ಬಿಟ್ಟರೆ ಬರೆಯಲು ಅನುಕೂಲ ಅನ್ನುವ ಭಾವ :-)
In reply to ಉ: ಹೊಸ ಜಾಗ.. by partha1059
ಉ: ಹೊಸ ಜಾಗ..
ಪಾರ್ಥಾ ಸಾರ್ ನಮಸ್ಕಾರ. ಲೋಕೊಭಿನ್ನರುಚಿಃ ಅನ್ನುವ ಹಾಗೆ ಒಬ್ಬೊಬ್ಬರ ಸ್ಪೂರ್ತಿ ಮೂಲ ಒಂದೊಂದು ಬಗೆ. ನಮ್ಮ ಕಂಪನಿಯ ಕೆಲವು ವಿಜ್ಞಾನಿಗಳನ್ನು ಅವರಿಗೆ ಒಳ್ಳೆಯ ಸಂಶೋಧನೆಯ ಆಲೋಚನೆಗಳು ಹೊಳೆದ ಜಾಗಗಳು, ಸನ್ನಿವೇಶಗಳು ಯಾವುವು ಎಂದು ಕೇಳಿದಾಗ ಬಂದ ಉತ್ತರಗಳ ವೈವಿಧ್ಯವೂ ಇದೇ ರೀತಿ ಇತ್ತು - ಕೆಲವರಿಗೆ ಬಾತ್ರೂಮಿನಲ್ಲಿ, ಕೆಲವರಿಗೆ ಸ್ನಾನ ಮಾಡುವಾಗ, ಇನ್ನು ಕೆಲವರಿಗೆ ವಾಕಿಂಗಿನಲ್ಲಿ, ಮತ್ತೆ ಹಲವರಿಗೆ ತೂಕಡಿಸುವಾಗ - ಹೀಗೆ ಬಗೆ ಬಗೆಯ ಸನ್ನಿವೇಶಗಳಲ್ಲಿ. ನನಗೂ ಏನಾದರೂ ಅನಿಸಿದಾಗ ಹೊರ ಹಾಕದಿದ್ದರೆ ಅದು ಮರೆತೆ ಹೋಗಿಬಿಡುವುದರಿಂದ ಸಾಧ್ಯವಾದಷ್ಟು ಆ ಹೊತ್ತಲ್ಲೆ ಹಿಡಿದಿಡಲು ಯತ್ನಿಸುತ್ತೇನೆ. ಹೀಗಾಗಿ ಕೆಲವೊಮ್ಮೆ ಸತ್ವಪೂರ್ಣವಾಗಿ ಹೊಮ್ಮಿದರೆ ಮತ್ತೆ ಕೆಲವೊಮ್ಮೆ ಎಡಬಿಡಂಗಿಯಾಗುವುದು ಉಂಟು. ಹೇಗೊ ತುಡಿತಕ್ಕೊಂದು ಹೊರಹಾಕುವ ಹಾದಿ ಕಂಡಿತಲ್ಲ ಎನ್ನುವುದಷ್ಟೆ ಸಮಾಧಾನ !
In reply to ಉ: ಹೊಸ ಜಾಗ.. by kavinagaraj
ಉ: ಹೊಸ ಜಾಗ..
ಕವಿಗಳೆ ನಮಸ್ಕಾರ. ಜನಗಳೇನೊ ಸುತ್ತಲು ಇದ್ದರು ಭಾಷೆ ಬರುವ ಜನರಿರದಿದ್ದರೆ ಇದ್ದೂ ಇಲ್ಲದ ಹಾಗೆ ಲೆಕ್ಕ. ಆಗ ಮಾತಿಗಿಂತ ಸಂಜ್ಞೆಯ ಸಂವಹನವೆ ಹೆಚ್ಚು ಪರಿಣಾಮಕಾರಿ. ಇವುಗಳು ಅಂತಹ ವಾತಾವರಣದಲ್ಲೆ ಹೊರಹೊಮ್ಮಿದ್ದು :-)
ಉ: ಹೊಸ ಜಾಗ..
ನಾಗೆಶರೇ ನಮಸ್ತೆ,
ಭಾಷೆ
ಸಖನಾಗೆ ಅನುಬಂಧ
ವಿಮುಖನಾಗೆ ದಿಗ್ಬಂಧ ,,,, ಬಹಳ ಕಾಡುವ ಸಾಲುಗಳು,,,, ಭಾಷೆಯೊಂದು ವಹಿಸುವ ಪಾತ್ರದ ಅಗಾದತೆಯನ್ನು ಬರಿಯ ಮೂರು ಸಾಲುಗಳಲ್ಲಿ ಚೆನ್ನಾಗಿ ಹಿಡಿದು ಇಟ್ಟಿದ್ದೀರಿ,,,,
In reply to ಉ: ಹೊಸ ಜಾಗ.. by naveengkn
ಉ: ಹೊಸ ಜಾಗ..
ನಿಜ ನವೀನರೆ, ಓದಿದಾಗ ಕಾಡಿಸುವುದು ಅನುಭವಿಸಿದಾಗ ಕಂಗಾಲಾಗಿಸುವುದು - ಎರಡು ಬಗೆಯಲ್ಲು ತನ್ನ ಸರ್ವಾಂತರ್ಯಾಮಿ ಪ್ರಭುತ್ವ ತೋರಬಲ್ಲ ಶಕ್ತಿ ಭಾಷೆಯದು. ಅಭಿವ್ಯಕ್ತಿ ಮಾಧ್ಯಮವಾಗಿದ್ದಷ್ಟೆ, ತಾನೆ ಅನುಭೂತಿಗು ಸಂವಹನವಾಗಬಲ್ಲ ಶಕ್ತಿ ಭಾಷೆಗಲ್ಲದೆ ಇನ್ನಾವುದಕ್ಕಿದೆ, ಹೇಳಿ? ಅನುಭವಗಮ್ಯವಾದಾಗ ಅದರ ಬಲಾಬಲದ ತೀವ್ರತೆ ಇನ್ನು ಹೆಚ್ಚು ಕಾಡುವುದು ಕೂಡ ನಿಜವೆ. ಧನ್ಯವಾದಗಳು :-)