ಪರದೇಶಿ ಚೌರ !
ಹೆಂಗಸರಿಗೆ ಹೋಲಿಸಿದರೆ ಗಂಡಸರಿಗೆ ಸುತ್ತಲಿನ ವಸ್ತುವಿನ ಇರುವಿಕೆ / ಇಲ್ಲದಿರುವಿಕೆಯ ಪರಿಜ್ಞಾನ ಕಮ್ಮಿ ಎನ್ನುತ್ತದೆ ಒಂದು ಅಧ್ಯಯನ. ಇದರನುಸಾರ ಕಣ್ಣೆದುರಿಗೆ ಇದ್ದರು ಗಮನಿಸದೆ ಅದನ್ನು ಎಲ್ಲೆಡೆ ಹುಡುಕುವ ದೌರ್ಬಲ್ಯ ಗಂಡಿನ ಮನಃಸತ್ವದ್ದಂತೆ. ಎಷ್ಟೊ ಬಾರಿ ಫ್ರಿಡ್ಜಿನಲ್ಲೊ, ಅಲಮೇರಾದಲ್ಲೊ, ವಾರ್ಡ್ರೋಬಿನಲ್ಲೊ - ಎಷ್ಟು ಹುಡುಕಿದರು ಸಿಗದ ವಸ್ತುವಿಗೆ ರೇಗಿಹೋಗಿ, ಕೂಗಾಡತೊಡಗಿದಾಗ ಮನೆಯಾಕೆ ಬಂದೊಂದೆ ಕ್ಷಣದಲ್ಲಿ ಅದಾವ ಮಾಯೆಯಿಂದಲೊ ಎಂಬಂತೆ ಸರಾಗವಾಗಿ ಆ ವಸ್ತುವನ್ನೆತ್ತಿಕೊಡುವ ಅನೇಕ ಸಂಧರ್ಭಗಳನ್ನು ನೆನೆಸಿಕೊಂಡಾಗ ಆ ಅಧ್ಯಯನದ ಫಲಿತಾಂಶದಲ್ಲಿ ನಿಜವಿದ್ದರು ಇರಬಹುದೇನೊ ಅನಿಸುತ್ತದೆ. ಸುದೈವಕ್ಕೆ ಆ ಪುರುಷ - ಮಹಿಳಾ ನಡುವಳಿಕೆಗೆ ಅವರವರಲ್ಲಿರುವ ಯಾವುದೊ ನಿರ್ದಿಷ್ಠ ಜೀನ್ಸೋ, ಹಾರ್ಮೋನೊ ಕಾರಣವೆಂದು ಆ ಅಧ್ಯಯನದಲ್ಲಿಯೆ ಗಮನಿಸಿ ದಾಖಲಿಸಿರುವುದರಿಂದ ಇದೇನು ಬೇಕೆಂದೆ ಮಾಡುವ ತಂಟೆಯಲ್ಲ - ಜನ್ಮಸಿದ್ದವಾದ ಜೀವದೋಷ ಎಂದು ಸಮಾಧಾನಪಟ್ಟುಕೊಳ್ಳಬಹುದು. ಈ ತುಂಟಾಟದ ನಡೆ ನಮ್ಮ ಪರಿಚಿತವಾದ ವಾತಾವರಣದಲ್ಲೆ ಅಂದರೆ ನಮ್ಮ ಮನೆ, ಆಫೀಸುಗಳಂತಹ ಜಾಗದಲ್ಲಿಯೆ ಸಂಭವಿಸುವುದು ವಿಚಿತ್ರ, ಆದರೂ ನಿಜ. ಹೀಗಿರುವಾಗ ಅಪರಿಚಿತ ಜಾಗದಲ್ಲಿ ಅದರಲ್ಲೂ ವಿದೇಶಿ ವಾತಾವರಣದಲ್ಲಿ, ಭಾಷೆ ಬರದ, ಓದಲು ಆಗದ ರೀತಿಯ ತಾಣಗಳಾದರೆ ? ಅಲ್ಲಿಯ ಅನುಭವಗಳು ಇನ್ನು ರೋಚಕವಾಗಿರಬಹುದಲ್ಲವೆ ? ರೋಚಕವೊ, ಮುಜುಗರವೊ ಆ ಹೊತ್ತಲಿ ಹೇಳ ಬರದಿದ್ದರು ಘಟಿಸಿದ ನಂತರ ತಮಾಷೆಯಾಗಿ ಕಂಡುಬರುವುದು ಅನೇಕ ಬಾರಿಯ ಅನುಭವ - ತೀರಾ ಇಕ್ಕಟ್ಟಿನ ಮುಜುಗರದ ಸನ್ನಿವೇಶಗಳಾಗದಿದ್ದ ಪಕ್ಷದಲ್ಲಿ. ಅಂತಹ ಒಂದು ತೆಳು ಲಹರಿಯ ಪ್ರಸಂಗ - ಪುರುಷರ ಗಮನಿಸುವ ಪ್ರವೃತ್ತಿಯ ದೌರ್ಬಲ್ಯವನ್ನು ಹೌದೆಂದು ನಿರೂಪಿಸುವಂತಿದೆ, ಕನಿಷ್ಠ ಅದನ್ನನುಭವಿಸಿದ ಮೂಲ ಕತೃವಿನ ಮಟ್ಟಿಗಾದರು...!
ಪರದೇಶಿ ಚೌರ
_________________
ಮುಖಾಮೂತಿ ಕಾಣದ ದೇಶ
ಭಾಷೆ ಮಾತಾಡಲೆಲ್ಲಿ ಔರಸ
ಕಟ್ಟಬೇಕಿತ್ತಲ್ಲ ತಲೆಗೆ ಪಟ್ಟ
ಚೌರದಂಗಡಿಗು ಹುಡುಕಾಟ ||
ಪಾರ್ಲರುಗಳೇನಿಲ್ಲ ಕಮ್ಮಿ ಸುತ್ತ
ಮಾತಾಡುವರಷ್ಟಿಷ್ಟಾಂಗ್ಲ ದಿಟ
ಅಷ್ಟಕ್ಕಲ್ಲಿ ತೂಗಿದ ಬೆಲೆಯೆ ಕಷ್ಟ
ಅರೆ ಬೊಕ್ಕ ತಲೆಪಾಡು ಎಲ್ಲೆಲ್ಲು ನಿಕೃಷ್ಟ ! ||
ಇರುವುದೆ ಕಮ್ಮಿ, ಫಸಲಲೆಲ್ಲಿ ಹುಲುಸು
ಕತ್ತರಿಗು ಹುಡುಕಾಟ ಎಲ್ಲಿದೆ ಗೊಲಸು
ಶಿಸ್ತಾಗುವ ಸಂಕಟ ಕತ್ತರಿಯಾಡಲೆಬೇಕು
ಮಸ್ತಾಗಿರದಿದ್ದರು ಕೇಶ 'ಕ್ಯಾಶ' ತೆರಬೇಕು ||
ಸರಿಯ್ಹೊರಟೆ ಹುಡುಕುತ ಬೀದಿ ಗಲ್ಲಿ
ಬರಲಿ ಬಿಡಲಿ ಭಾಷೆ ನಾಪಿತನಿರಬೇಕಲ್ಲಿ
ಅಲೆದು ಬಿದ್ದು ಗಲ್ಲಿ, ತರಕಾರಿ ಮಾರ್ಕೆಟ್ಟು
ಕಂಡಿತು ತಟ್ಟನೆ ಅಂಗಡಿ, ಚಿಕ್ಕದಿತ್ತೆ ರೇಟು ! ||
ಸರಸರ ನಡೆದೊಳಗೆ ಕೂತವನೆದುರಲ್ಲಿ
ಶುರು ಮೂಕಾಭಿನಯ ಕೈತಲೆ ನರ್ತನದಲಿ
ಮುರುಕು ಭಾಷೆಯಲುದ್ದ ಮೂರೆಂದಿದ್ದೆ
ಕೊಡಬೇಕೆಷ್ಟು ಮುಷ್ಟಿ-ಹೆಬ್ಬೆರಳಲೆ ಕೇಳಿದ್ದೆ ||
ಮಾತಾಡದವ ತೋರಿದ ಕ್ಯಾಲುಕುಲೇಟರ್
ಮೊಬೈಲಿನಲೆ ಎಲ್ಲಾ ಅಂಕಿಯ ಬಾರ್ಟರ್
ಬಾಗಿಲಿಗಿದ್ದ ರೇಟು ಏಕಾಏಕಿ ದುಪ್ಪಟ್ಟು !
ಚೌಕಸಿ ಮಾಡಲು ಬರದೆ ಭಾಷೆಯೆ ಎಡವಟ್ಟು ! ||
ಹೋಲಿಸಿತಲ್ಲೆ ಮನ ಹಿಂದಿನೂರಿಗಿಂತ ಅಗ್ಗ
ಪಾರ್ಲರಿನ ಲೆಕ್ಕದಲ್ಲಿ ಬಿಡಿಗಾಸಲೆ ಭೋಗ
ಹೋಗಲಿ ಬಿಡೆಂದ ಮನ, ಆಡಿಸಿತ್ತೆ ತಲೆಯ
ಶಿರವೊಪ್ಪಿಸಿ ಕೂತೆ ಕೊಡಲೊಪ್ಪುತವನ ಬೆಲೆಯ ||
ಮುಡಿ ತೆಗೆದವನ ಕೌಶಲ ಮೂರೆ ಗಳಿಗೆಯಲಿ
ಮುಗಿಸಿಬಿಟ್ಟ ಪಟ್ಟಾಭಿಷೇಕ ಕಣ್ಣಿವೆಯಿಕ್ಕುವಲಿ
ಏಳಬೇಕೆಂದು ಹೊರಟವನ ತಡೆಯಿತವನ ಸಂಜ್ಞೆ
ತೋರಿಸುತಿನ್ನೊಂದು ಕೋಣೆ ಕರೆದೊಯ್ದಿತ್ತವನಾಜ್ಞೆ ||
ಎದ್ದು ನಡೆವಾಗ ಮುಜುಗರ ಮುಸಿಮುಸಿ ನಗು
ನಗುತ ಕೂತ ಹೆಂಗಳೆಯೊಬ್ಬಿಬ್ಬರ ಗುನುಗು
ಕಂಡೂ ಕಾಣದ ಹಾಗೆ ನಡೆದೊಳಗಿನ ಕೋಣೆ
ಶಯನೋತ್ಸವದಾಸನ ಬಿಸಿ ನೀರ ಮಜ್ಜನ ಮೇನೆ ! ||
ದುಪ್ಪಟು ಕೊಟ್ಟರು ಬಿಡು ಚೌರದ ಜತೆಗೆ ಜಳಕ
ಗಮಗಮಿಸುವ ನೊರೆ ಮುಚ್ಚಿದ ಕಣ್ಣಲೆ ಪುಳಕ
ನಿರಾಳದೆ ತೆತ್ತು ಪೆಚ್ಚು ನಗೆಯೆಸೆದು ಹೆಂಗಳೆಯರೆಡೆ
ಬಹರಲ್ಲ ಸರಾಗದಲೆಂದು ಕ್ಷೌರದಂಗಡಿಯಿಂ ಹೊರಡೆ ||
ದಾಟಲಿದ್ದೆ ಬಾಗಿಲು ಗಾಜಿನ ಹೊಳೆವ ತೊಗಲೂ
ತಟ್ಟನೆ ಬಿತ್ತಲ್ಲಿ ಚಿತ್ರ ಸೊಗದ ಹೆಣ್ಣ ಸೊಂಪ ಕೂದಲು
ಬದಿಯಂಗಡಿಯವನೇಕೊ ದಿಟ್ಟಿಸಿದ್ದ ನಿರಂತರ
ಯಾಕೊ ಅನುಮಾನದಲಿ, ತಿರುಗಿಸಿದ್ದೆ ಕೊಂಚ ಶಿರ... ||
ಹೆಂಗಳೆಯರ ಪಾರ್ಲರದು ನುಗ್ಗಿದ್ದೆ ವಿಶ್ಲೇಷಿಸದೆ !
ಚೈನಾದಂಗಡಿಯೊಳಗೆ ದನದಂತೆ ನಡೆದ ಮೊದ್ದೆ
ನಾಚಿ ತಗ್ಗಿಸಿ ತಲೆಯ ಸರಸರ ದಾಟಿದ್ದೆ ರಸ್ತೆ
'ಇದ್ದದದೊಂದೆ ಕ್ಷೌರದಂಗಡಿ ಬಿಡು' ಸಂತೈಸುತ ಬೇಸ್ತು ! ||
Comments
ಉ: ಪರದೇಶಿ ಚೌರ !
ಬಿಡಿ ಹೆಂಗಸಾದರೇನು ಗಂಡಸಾದರೇನು ತಲೆಯ ಕೂದಲು ಕತ್ತರಿಸಲು ಬೆಲೆ ಸಮಾನ
ಆದರು ಮತ್ತೊಮ್ಮೆ ಹೋಗುವಾಗಲೊಮ್ಮೆ ಮೊದಲೇ ನೋಡಿಬಿಡಿ ಸರಿ ಫಲಕ
In reply to ಉ: ಪರದೇಶಿ ಚೌರ ! by partha1059
ಉ: ಪರದೇಶಿ ಚೌರ !
ಹೌದು ಪಾರ್ಥರೆ, ಬೋರ್ಡಿಲ್ಲದ ಚಿಕ್ಕಂಗಡಿಗಳ ಗಾಜಿನ ಬಾಗಿಲ ಫಲಕಗಳನ್ನು ನೋಡಿ ಒಳಗೆ ಕಾಲಿಡಬೇಕೆಂದು ಈಗ ಕಲಿತುಕೊಂಡೆ - ಭಾಷೆ ಗೊತ್ತಾಗದಿದ್ದರು, ಚಿತ್ರಗಳು ಮಾತಾಡುತ್ತವೆ. ನಾನು ಹೋದಾಗ ಬೇರೆ ಯಾರು ಗಿರಾಕಿ ಇರದ ಕಾರಣ ಟೀವಿ ನೋಡುತ್ತ ಕುಳಿತಿದ್ದವ ಯಾಕೆ ಒಂದರೆಗಳಿಗೆ ಮಾತಾಡದೆ ನನ್ನೆ ನೋಡುತ್ತಿದ್ದ ಎಂದು ಅರ್ಥವಾಗಿರಲಿಲ್ಲ. ಬಹುಶಃ ನನಗರಿಯದ ಭಾಷೆಯಲ್ಲಿ, ನನಗೆ ವಿವರಿಸಿ ಮನದಟ್ಟಾಗಿಸುವ ಸಾಹಾಸಕಿಂತ ಸುಮ್ಮನೆ ಕತ್ತರಿಯಾಡಿಸಿ ಕಾಸು ಗಿಟ್ಟಿಸುವುದೆ ಸುಲಭವೆಂದುಕೊಂಡಿರಬೇಕು. ನಡುವಲ್ಲಿ ಯಾರೊ ಮಹಿಳಾ ಗಿರಾಕಿಗಳು ಬಂದು ಕೂತರು, ಯಾಕೆ ಈ ಕ್ಷೌರಾಲಯಕ್ಕೆ ಹೆಂಗಳೆಯರು ಬಂದಿದ್ದಾರೆ? ಬಹುಶಃ ಯಾರೀ ವಿದೇಶಿಗನೆಂಬ ಕುತೂಹಲಕ್ಕೆ ಬಂದ ಅಕ್ಕಪಕ್ಕದವರೆ ? ಅಂದುಕೊಂಡೆನೆ ಹೊರತು ಅವರು ಕೇಶ ಶೃಂಗಾರಕ್ಕೆ ಬಂದವರೆಂದು ಊಹಿಸಲೂ ಇಲ್ಲ - ಬಾಗಿಲ ಚಿತ್ರ ಕಾಣುವ ತನಕ. ಕ್ಷೌರಿಕ ಪುರುಷನಿದ್ದದ್ದು ಏಮಾರಲು ಕಾರಣವಾಯ್ತೇನೊ.. ಆದರೆ 'ಯುನಿಸೆಕ್ಸ್' ಕ್ಷೌರಾಲಯಗಳು ಅಪರೂಪವಲ್ಲದ ಈ ಜಾಗದಲ್ಲಿ ನನ್ನ ಸಾಹಸವೇನು ತೀರಾ ಅಪರಿಚಿತವಿರಲಾರದೆಂದು (ಈಗ) ಸಮಾಧಾನಪಟ್ಟುಕೊಂಡಿದ್ದೇನೆ. ಆದರು ಮುಂದಿನ ಬಾರಿ ಬಾಗಿಲ ಮೇಲೊಂದು ಕಣ್ಣೋಟ ಖಚಿತ :-)
ಉ: ಪರದೇಶಿ ಚೌರ !
ನಾಗೇಶ ಮೈಸೂರುರವರಿಗೆ ವಂದನೆಗಳು
ಪರದೇಶಿ ಚೌರ ಕವನ ಸೊಗಸಾಗಿ ಮೂಡಿ ಬಂದಿದೆ, ಇದು ತಮ್ಮ ಸ್ವಂತ ಅನುಭವವೋ ಕಲ್ಪನೆಯೋ ಗೊತ್ತಾಗಲಿಲ್ಲ ಸ್ವಂತದ್ದೆ ಅನುಭವವಾಗಿದ್ದರೂ ನಿರ್ಮಮಕಾರದಿಂದ ಬರೆದಿದ್ದಿರಿ, ನೀವು ಪರದೇಶದಲ್ಲಿ ಬೆಸ್ತು ಬಿದ್ದಿದ್ದರೆ ನಾನು ನಮ್ಮ ಜಿಲ್ಲಾ ಕೆಂದ್ರದಲ್ಲಿಯೆ ಬೇಸ್ತು ಬಿದ್ದಿದ್ದೇನೆ, ಕಾರ್ಯ ನಿಮಿತ್ತ ಒಂದು ಸಲ ಅಲ್ಲಿಗೆ ಹೋದಾಗ ಕ್ಷೌರದಂಗಡಿಗೆ ಹೋಗಿ ಶೇವಿಂಗ್ ಮಾಡಿಸಿ ಕೊಳ್ಳಬೇಕೆಂದು ಹೋದೆ, ನಂತರ ಹಣ ಎಷ್ಟೆಂದು ಕೇಳಿದಾಗ ಆತ ದುಬಾರಿ ಮೊತ್ತವನ್ನೆ ನನ್ನಿಂದ ವಸೂಲು ಮಾಡಿದ್ದ, ಸುಮ್ಮನೆ ಅಲ್ಲಿನ ರೇಟ್ ಬೋರ್ಡ್ ಗಮನಿಸಿದೆ ಅಲ್ಲಿ ನಮೂದಿಸಿದ ಬೆಲೆಯ ಒಂದೂವರ ಪಟ್ಟು ಶುಲ್ಕ ಪಡೆದಿದ್ದ, ಈಗ ನಮ್ಮಲ್ಲಿಯೂ ಗೆಂಟ್ಸ್ ಬ್ಯೂಟಿ ಪಾರ್ಲರ್ಗಳು ತಲೆ ಎತ್ತಿವೆ, ಅಲ್ಲಿಗೆ ಹೋಗಲು ಧೈರ್ಯ ಸಾಲದೆ ಹಳೆಯ ಕಟ್ಟಿಂಗ್ ಸಲೂನ್ಗಳನ್ನು ಹುಡುಕಿಕೊಂಡು ಹೋಗುತ್ತೇನೆ, ನಿಮ್ಮ ಬರಹ ಮತ್ತು ಕವನಗಳು ಅವನ್ನೆಲ್ಲ ನೆನಪಿಸಿಕೊಳ್ಳುವಂತೆ ಮಾಡಿದವು ದನ್ಯವಾದಗಳು.
In reply to ಉ: ಪರದೇಶಿ ಚೌರ ! by H A Patil
ಉ: ಪರದೇಶಿ ಚೌರ !
ಪಾಟೀಲರೆ ನಮಸ್ಕಾರ. ಕಲ್ಪನೆಯೇನು ಬಂತು - ಎಲ್ಲಾ ಸ್ವಾನುಭವವೆ ! ಕೊಂಚ ಪ್ರಯೋಗ ಮಾಡುವ ಹುಡುಗಾಟ, ಹೊಸತೇನಿದೆಯೆನ್ನುವ ಹುಡುಕಾಟದ ಜತೆಗೆ ಗೊತ್ತಾಗದ ಪರಿಸರದ ಗೂಢತೆಯ ಕುತೂಹಲಗಳು ಸೇರಿಕೊಂಡು ಆಗೀಗೊಮ್ಮೆ ನಡೆಸುವ ಹುನ್ನಾರಗಳಲ್ಲಿ ಇದು ಒಂದು. ಇರುವ ಅರೆಬರೆ ಕೂದಲನ್ನು ಸುಮ್ಮನೆ ಒಂದೆರಡು ನಿಮಿಷ ಕತ್ತರಿಯಾಡಿಸಲು ಯಾಕೆ ದುಡ್ಡು ಸುರಿಯಬೇಕೆನ್ನುವ ಹಿನ್ನಲೆ ಮನೋಭಾವದ ಜತೆಗೆ, ಒಂದು ವೇಳೆ ಹೆಚ್ಚೆ ಕೊಡುತ್ತೇನೆಂದರು ಇರುವ ಕುರುಚಲು ಕಾಡಲ್ಲಿ ಯಾವ ಸ್ಟೈಲಾಗಲಿ, ವಿಶಿಷ್ಠತೆಯಾಗಲಿ ಸಾಧ್ಯವಿಲ್ಲವೆಂಬ ಅರಿವು ಸೇರಿಕೊಂಡ ಪ್ರಭಾವ. ಜತೆಗೆ ಹೀಗೆ ಹೊಸಜಾಗದಲ್ಲಿ ಪ್ರಯೋಗ ಮಾಡಲ್ಹೊರಟಾಗ ಸಿಕ್ಕುವ ಸಾಧಾರಣ ಅನುಭವವೆ ಅಲ್ಲಿನ ಸ್ಥಳೀಯ ಸಾಮಾನ್ಯ ಜ್ಞಾನದ ಪಾಠ ಕಲಿಸುವವೆಂಬ ನಂಬಿಕೆ :-)
ಉ: ಪರದೇಶಿ ಚೌರ !
ಆಹಾ!! ಚೌರ!!!:))
In reply to ಉ: ಪರದೇಶಿ ಚೌರ ! by kavinagaraj
ಉ: ಪರದೇಶಿ ಚೌರ !
ಕವಿಗಳೆ ನಮಸ್ಕಾರ. ಚಂದ್ರ ಮಂಡಲಕ್ಕೆ ಹೋದರು ನಮ್ಮ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳಲೇಬೇಕಲ್ಲ ? ಅದರಲ್ಲು ಹೊಸ ಜಾಗದಲ್ಲಿ ಕೊಂಚ ಟಿಪ್ ಟಾಪಾಗಲ್ಲದಿದ್ದರು, ಶಿಸ್ತಾಗಿರಬೇಕಾದ ಅಗತ್ಯಕ್ಕೆ ಏನೆಲ್ಲ ಮಾಡಬೇಕು ನೋಡಿ :-)