ಓ..ಒಲವೇ(5)

ಓ..ಒಲವೇ(5)

ಹೀಗೇ ಅವರ ಗೆಳೆತನ ಮುಂದುವರಿಯುತ್ತಿರ ಬೇಕಾದರೆ ಒಮ್ಮೆ ಸಂಜು ಫೋನ್ ಮಾಡಿ ತನು ಊಟ ಆಯ್ತೇನೇ ಅಂದ. ತನುಗೆ ಆಶ್ಚರ್ಯವಾಯ್ತು.ಇದೇನು ಇವನು ಯಾವತ್ತೂ ಇಲ್ಲದೆ ಇವತ್ತು ಏಕವಚನದಲ್ಲಿ ಕರೀತಾ ಇದ್ದಾನಲ್ಲಾ, ಆದರೂ ಸುಮ್ಮನಾಗಿ ಆಯ್ತು ಸಂಜು ನೀವ್ ಊಟ ಮಾಡಿದ್ರಾ ಅಂತ ಕೇಳಿದಳು.ಅದಕ್ಕೆ ಅವನು ಇಲ್ಲ ಕಣೆ ಇನ್ನೂ ಆಗಿಲ್ಲ ಅಂದನು. ಅವನು ಮತ್ತೆ ಅದೇ ರೀತಿ ಮಾತನಾಡಿದ್ದನ್ನು ನೋಡಿ ತನುಗೆ ಪಿತ್ತ ನೆತ್ತಿಗೇರಿದಷ್ಟು ಕೋಪ ಬಂತು.ನೋಡಿ ಸಂಜು ನನಗೆ ಕಣೆ ಗಿಣೆ ಅಂದ್ರೆ ಇಷ್ಟವಾಗಲ್ಲ, ಪ್ಲೀಸ್ ಸರಿಯಾಗಿ ಮಾತಾಡಿ ಅಂದಳು. ಅದಕ್ಕೆ ಅವನು ಹೌದು ಕಣೆ ಇನ್ಮೇಲೆ ನಾನು ನಿನ್ನ ಹಾಗೆ ಕರೆಯೋದು, ನೀನು ನನ್ನ ಮನಸ್ಸಿಗೆ ತೀರಾ ಹತ್ತಿರವಾಗಿದ್ದೀಯ,ನಂಗೆ ನೀನಂದ್ರೆ ತುಂಬಾ ಇಷ್ಟ ಡಿಯರ್, ನಾನು ನಿನ್ನ ತುಂಬಾ ಪ್ರೀತಿ ಮಾಡ್ತೀನಿ ಕಣೆ, I LOVE YOU ಅಂದ. ಇದನ್ನು ಕೇಳಿದ ತನುಗೆ ಕೋಪ ತಡೆಯಲಾಗದೆ ನೋಡಿ ಸಂಜು ಈ ಡಿಯರ್, ಡಾರ್ಲಿಂಗ್ ಅಂತ ಕರೆಯೋದನ್ನೆಲ್ಲಾ ನನ್ನ ಹತ್ರ ಇಟ್ಕೋಬೇಡಿ, ನಂಗೆ ಇದೆಲ್ಲ ಇಷ್ಟ ಆಗೋಲ್ಲ.ನೀವು ಪ್ರೀತಿ ಮಾಡೋಕೆ ಅಂತ ನಿಮ್ಮ ಹೆಂಡತಿ ಇದ್ದಾಳೆ,ಅವಳನ್ನ ಎಷ್ಟು ಬೇಕಾದ್ರು ಪ್ರೀತಿ ಮಾಡ್ಕೊಳ್ಳಿ, ನನ್ನ ಹತ್ರ ಇದನ್ನೆಲ್ಲ ಹೇಳಬೇಡಿ,ನನಗೂ ಮದುವೆಯಾಗಿ ಗಂಡ, ಮಗಳು ಇದ್ದಾರೆ, ನಿಮಗೂ ಮದುವೆಯಾಗಿ ಹೆಂಡತಿ, ಮಕ್ಕಳಿದ್ದಾರೆ, ಅವರೊಟ್ಟಿಗಿನ ನಿಮ್ಮ ಜೀವನ ತುಂಬಾ ಚೆನ್ನಾಗಿದೆ.ಹೀಗಿರುವಾಗ ಮತ್ತೆ ಪ್ರೀತಿ ಪ್ರೇಮ ಎಲ್ಲ ಯಾಕೆ ಹೇಳಿ ಅಂದಳು.ಆದಕ್ಕೆ ಅವನು ಹೌದು ಕಣೆ ನಂಗೆ ಮದುವೆಯಾಗಿದೆ, ಆದ್ರೆ ಅವಳನ್ನ ನಮ್ಮಮ್ಮ ಮದುವೆಯಾಗು ಅಂದ್ರು, ನಮ್ಮಮ್ಮ ಅಂದ್ರೆ ನಂಗೆ ಪ್ರಾಣ ಕಣೆ, ಆದ್ರಿಂದ ಅವಳು ತೋರಿಸಿದ ಹುಡುಗೀನ ನಾನು ಏನೂ ಮಾತನಾಡದೆ ಮದುವೆಯಾದೆ. ಆದ್ರೆ ನಂಗೂ ನಂದೇ ಆದ ಒಂದು ಪ್ರೀತಿ ಬೇಕು ಅನ್ಸುತ್ತೆ. ಹಾಗಂತ ಅವಳು ಕೆಟ್ಟೋಳು, ಅವಳಂದ್ರೆ ಇಷ್ಟ ಇಲ್ಲ ಅಂತ ಅಲ್ಲ.ಆದ್ರೆ ನೀನಂದ್ರೆ ತುಂಬಾ ಇಷ್ಟ, ನೀನು ನನ್ನ ಭಾವನೆಗಳಿಗೆ ತುಂಬಾ ಚೆನ್ನಾಗಿ ಸ್ಪಂದಿಸುತ್ತೀಯ, ನನ್ನ ತುಂಬಾ ಆಳವಾಗಿ ಅರ್ಥ ಮಾಡಿಕೊಳ್ತೀಯ, ನೀನು ನನಗಾಗಿಯೇ ಹುಟ್ಟಿದ್ದೀಯೇನೋ ಅನ್ಸುತ್ತೆ ಕಣೆ ಪ್ಲೀಸ್ ನನ್ನ ಅರ್ಥ ಮಾಡ್ಕೋ, ನನ್ನ ಪ್ರೀತೀನ ಸ್ವೀಕಾರ ಮಾಡು ಎಂದನು. ಅದಕ್ಕೆ ತನು ಹೇಳಿದಳು ನೋಡಿ ಸಂಜು ನೀವೇ ಹೇಳ್ತಿದ್ದೀರ ಅಮ್ಮ ಅಂದ್ರೆ ಪ್ರೀತಿ ಜಾಸ್ತಿ ಹಾಗಾಗಿ ಅವಳಿಷ್ಟದ ಪ್ರಕಾರ ಮದುವೆಯಾಗಿದ್ದೀನಿ ಅಂತ. ಈಗ ನೀವು ನನ್ನ ಪ್ರೀತಿ ಮಾಡಿದ್ರೆ ಮೇಲಿಂದ ಅಮ್ಮ ನೋಡ್ತಿರ್ತಾರೆ, ಅವರಿಗೆ ಬೇಜಾರಾಗೋಲ್ವಾ, ಅವಳಿಗೆ ಕೊಟ್ಟ ಮಾತು ತಪ್ಪಿದ ಹಾಗೆ ಆಗೋಲ್ವಾ ಅಂದಳು. ಸಂಜು ಹೇಳಿದ ನಿಜ ಆದ್ರೆ ಯಾರಿಗೊತ್ತು ಈಗ ಅಮ್ಮನಿಗೂ ಅನಿಸಿರಬಹುದು ನನ್ನ ಮಗನಿಗೆ ತಕ್ಕ ಪ್ರೀತಿ ಸಿಕ್ಕಿಲ್ಲ ಅಂತ ಅವಳೂ ಸಹ ಈಗ ಪಶ್ಚಾತಾಪ ಪಡುತ್ತಿರಬಹುದು.ಅದಕ್ಕೇ ನಿನ್ನ ಪ್ರೀತಿ ಮಾಡ್ಲಿ ಅಂತ ಅವಳೇ ನಿನ್ನನ್ನು ನನ್ನ ಜೀವನದಲ್ಲಿ ಕಳುಹಿಸಿರಬಹುದಲ್ವಾ ಅಂದನು.ಇದಕ್ಕೆ ಏನಂತ ಉತ್ತರ ಕೊಡಬೇಕೋ ತನುಗೆ ಗೊತ್ತಾಗಲೇ ಇಲ್ಲ.ಇದೇಕೋ ಸರಿ ಬರುತ್ತಿಲ್ಲ, ಇವನಿಗೇನು ಹುಚ್ಚು ಹಿಡಿದಿದ್ಯಾ, ಹೀಗೆಲ್ಲ ಅರ್ಥವಿಲ್ಲದ ಮಾತುಗಳನ್ನೇಕೆ ಹೇಳ್ತಿದ್ದಾನೆ, ಪ್ರತೀದಿನ ಹೀಗೇ ಅವರು ಫೋನ್ ನಲ್ಲಿ ಮಾತನಾಡಿದಾಗಲೆಲ್ಲಾ ಪ್ರೀತಿಯ ವಿಷ್ಯದಲ್ಲಿ ಇಬ್ಬರಿಗೂ ವಾದ ನಡೀತಾನೇ ಇರ್ತಿತ್ತು.ಅವನೂ ಸಹ ಪ್ರತೀದಿನ ಅವಳಿಗೆ I LOVE YOU ಅಂತ ಹೇಳುವುದನ್ನು ಮಾತ್ರ ಬಿಡುತ್ತಿರಲಿಲ್ಲ. ಒಮ್ಮೆ ಕೇಳಿದ ನಿಜ ಹೇಳು ತನು ನಿನಗೆ ನಾನಂದ್ರೆ ಇಷ್ಟ ಇಲ್ವಾ...ಹೌದು ಸಂಜು ಒಬ್ಬ ಒಳ್ಳೆಯ ಗೆಳೆಯನಾಗಿ ನೀವಂದ್ರೆ ನನಗೆ ಇಷ್ಟನೇ, ಹಾಗಂತ ನೀವು ಹೇಳೋ ಪ್ರೀತಿ ಅಲ್ಲ, ಇದೆಲ್ಲ ತಪ್ಪು, ಇದಕ್ಕೆ ಸಮಾಜನೂ ಒಪ್ಪೋಲ್ಲ ಅಂದಳು. ಹೀಗ ಅರ್ಥ ಆಯ್ತು ಬಿಡೆ ನಂಗೆ, ನಿನಗೂ ನಾನಂದ್ರೆ ತುಂಬಾ ಪ್ರೀತಿ ಇದೆ, ಆದ್ರೆ ಸಮಾಜಕ್ಕೆ ಹೆದರ್ತಾ ಇದ್ದೀಯ, ನೀನು ನಿನ್ನ ಪ್ರೀತೀನ ಮನಸ್ಸಲ್ಲೇ ಇಟ್ಕೊಂಡು ಅದನ್ನ ಅಲ್ಲೇ ಸಾಯಿಸ್ತಿದ್ದೀಯ, ಸುಮ್ನೆ ಸಮಾಜಕ್ಕೆ ಭಯ ಪಡ್ತಿದ್ದೀಯ ಅಷ್ಟೆ, ಈ ಸಮಾಜ ಯಾವತ್ತೂ ನಮ್ಮ ಕಷ್ಟ ದಲ್ಲಿ ಭಾಗಿಯಾಗೋಲ್ಲ, ಈ ಸಮಾಜದಲ್ಲಿ ಯಾರು ಉತ್ತಮರು, ಹೋಗಲಿ ಬೇರೆಯವರ ಕಥೆ ಬೇಡ ನಿನ್ನ ಗಂಡ ಸರಿ ಇದ್ದಾನಾ, ನಿನ್ನ ಜೊತೆ ನಿಯತ್ತಿನಿಂದ ಬಾಳ್ವೆ ಮಾಡುತ್ತಿದ್ದಾನಾ ಹೇಳು ಅಂದ. ಅದಕ್ಕೆ ಅವಳಲ್ಲಿ ಉತ್ತರವಿರಲಿಲ್ಲ. ಹೌದು ಸಂಜು ಹೇಳೋದ್ರಲ್ಲಿ ನಿಜ ಇದೆ, ನನ್ನ ಗಂಡ ಮದುವೆಯಾದಾಗಿನಿಂದ ನನ್ನೊಂದಿಗೆ ಒಮ್ಮೆಯೂ ಪ್ರೀತಿಯಿಂದ ವರ್ತಿಸಿಲ್ಲ, ಪ್ರೀತಿ ಅಂದ್ರೆ ಏನೂ ಅಂತ ಗೊತ್ತಿಲ್ದೆ ಪ್ರೀತಿಗಾಗಿ ಹಂಬಲಿಸ್ತಾ ಇದ್ದೀನಿ, ಹೀಗಿರುವಾಗ ಸಂಜು ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿ ಮಾಡ್ತೀನಿ ಅನ್ನುವಾಗ ನಾನ್ಯಾಕೆ ಬೇಡ ಅನ್ಬೇಕು, ನನಗೂ ಪ್ರೀತಿ ಸಿಗುತ್ತೆ ಸಂಜುಗೂ ಪ್ರೀತಿ ಸಿಗುತ್ತೆ, ಹೌದೇನೋ ನನಗೂ ಅವನ ಮೇಲೆ ಪ್ರೀತಿ ಇದೆಯೇನೋ, ಆದರೆ ಸಮಾಜಕ್ಕೆ ಹೆದರಿ ಸತ್ಯವನ್ನು ಒಪ್ಪಿಕೊಳ್ತಿಲ್ವೇನೋ, ಆದ್ರೆ ನಾನು ನಿಜವಾಗಿಯೂ ಸಂಜುನ ಪ್ರೀತಿ ಮಾಡುವುದೇ ಆದರೆ ಅದು ಎಷ್ಟರ ಮಟ್ಟಿಗೆ ಸರಿ, ಹೀಗೇ ಏನೇನೋ ಸಂಶಯಗಳು ತಲೆಯಲ್ಲಿ ಸೇರಿಕೊಂಡು ತನುಗೆ ಅನೇಕ ಪ್ರಶ್ನೆಗಳು ಕಾಡತೊಡಗಿದವು...

N....R....

ಮುಂದುವರೆಯುತ್ತದೆ......

Comments

Submitted by nageshamysore Wed, 05/27/2015 - 04:24

ಬರೆಯ ಬೇಕೆನ್ನುವ ತುಡಿತ ಈ ಸರಣಿ ಬರಹವಾಗಿ ರೂಪಾಂತರವಾದಂತೆ ಕಾಣುತ್ತಿದೆ. ಸರಳ ಕಥನ ಸುಲಲಿತವಾಗಿ ಓದಿಸಿಕೊಂಡು ಹೋಗುವ ಶೈಲಿ ಹಿಡಿಸಿತು. ಹಾಗೆಯೆ ಚಿತ್ರವೂ ಮೆಚ್ಚುಗೆಯಾಯ್ತು. ಈಚೆಗೆ ಸಂಪದದಲ್ಲಿ ಮಹಿಳಾ ಬರಹಗಾರರು ಯಾಕೊ ತಟಸ್ಥರಾದಂತೆ ಕಾಣುವರಲ್ಲ ಅನಿಸುತ್ತಿತ್ತು. ನಿಮ್ಮ ಬರಹಗಳು ಆ ಕೊರತೆಯನ್ನು ತುಂಬಲೆಂದು ಆಶಿಸುವೆ. ಅಂದ ಹಾಗೆ ಚಿತ್ರದ ಮೂಲ ಯಾವುದೆಂಬ ಕುತೂಹಲ ಸಹ :-)

Submitted by NishaRoopa Wed, 05/27/2015 - 08:48

In reply to by nageshamysore

ಧನ್ಯವಾದಗಳು ನಾಗೇಶ ಮೈಸೂರು ಸರ್,, ಗೂಗಲ್ ನಿಂದ ತೆಗೆದ ಚಿತ್ರವನ್ನು ಸ್ವಲ್ಪ ಎಡಿಟ್ ಮಾಡಿ ಹಾಕಿದ್ದೇನೆ.

Submitted by kavinagaraj Wed, 05/27/2015 - 08:49

ಐದು ಕಂತುಗಳನ್ನೂ ಓದಿದೆ. ಕುತೂಹಲಕರವಾಗಿದೆ.