ಅಲೋಕ (10) - ಆಸಕ್ತಿ ಹುಟ್ಟಿಸದ ಸ್ವರ್ಗ

ಅಲೋಕ (10) - ಆಸಕ್ತಿ ಹುಟ್ಟಿಸದ ಸ್ವರ್ಗ

ಅಲೋಕ (10) - ಆಸಕ್ತಿ ಹುಟ್ಟಿಸದ ಸ್ವರ್ಗ

ಕತೆ : ಅಲೋಕ

ಈ ಸ್ವರ್ಗ ಲೋಕ ನನಗೆ ಅಪರಿಚಿತ ಅನ್ನಿಸುವಂತಿತ್ತು. ಕೆಲದಿನ ಹಾಗೆ ಕಳೆದೆ. ಅಲ್ಲಲ್ಲಿ ವಿಹರಿಸುವುದು . ನೀರು ಹರಿಯುತ್ತಿರುವ ಕಡೆ ಕುಳಿತಿರುವುದು. . ಹೂವಿನ ಗಿಡಗಳ ನಡುವೆ ಓಡಾಟ ಹೀಗೆ . ರಾತ್ರಿಗಳಂತು  ತೀರ ಅಹ್ಲಾದಕರವಾಗಿರುತ್ತಿದ್ದವು , ಹುಣ್ಣಿಮೆಯ ಚಂದ್ರನ ಬೆಳಕೋ ಎಂಬಂತೆ ಎಲ್ಲಡೆ ಎಲ್ಲಕಾಲದಲ್ಲಿಯೂ ಬೆಳದಿಂಗಳು. ಅರಳಿನಿಂತ ಹೂವಿನ ಘಮಲು. ಮೊಲ ಜಿಂಕೆಗಳ ಓಡಾಟ. ಯಾವ ಗದ್ದಲವೂ ಇಲ್ಲದ ಸುಖಕರ ಎನಿಸುವ ಸುಂದರ ಸ್ಥಳಗಳು. ಸುತ್ತಿದಷ್ಟು ಮುಗಿಯದ ಉದ್ಯಾನಗಳು.

ಸುತ್ತಲ ಬೆಟ್ಟಗುಡ್ಡಗಳಾದರು ಅಷ್ಟೆ ಹಸಿರು ತುಂಬಿದ ಬೆಟ್ಟಗಳು ಹೇಗೆ ಮನಸೆಳೆಯುತ್ತಿದ್ದವೋ , ಹಾಗೆ ಹಿಮದ ಮುಸುಕು ಹೊದ್ದ ಪರ್ವತಗಳು ಸಹ ಕಣ್ಣುಗಳನ್ನು ಸೆಳೆಯುತ್ತಿದ್ದವು.  ಓಡಾಟವು ಅಂತಹ ಕಷ್ಟವೆನಿಸುತ್ತಿರಲಿಲ್ಲ. ರಥದ ಮಾದರಿಯ ವಾಹನಗಳಿದ್ದು, ಅದರಲ್ಲಿ ಕುಳಿತರೆ ಸಾಕಿತ್ತು ಆ ವಾಹನ ನಮ್ಮ ಮನಸಿನ ಲಹರಿಯನ್ನು ಅನುಸರಿಸಿ ಚಲಿಸುತ್ತಿತ್ತು. ದೂರದಿಂದ ನೋಡುವಾಗ ತೇಲುತ್ತಿರುವಂತೆ ಬಾಸವಾಗುತ್ತಿತ್ತು.

ಸಾಕು ಅನ್ನಿಸುವಷ್ಟು ಎಲ್ಲ ಕಡೆ ಸುತ್ತಿದೆ. ಎಷ್ಟು ಸುತ್ತಿದರು ಆಯಾಸ ಅನ್ನಿಸುತ್ತಿರಲಿಲ್ಲ. ಅಲ್ಲಿ ಇದ್ದ ಜನರೂ ಸಹ ಸ್ನೇಹಪ್ರಿಯರು. ಗಂಡು ಹೆಣ್ಣು ಎನ್ನುವ ಭೇದವಿಲ್ಲದೆ ಬೆರೆಯುವರು. ಕುಶಾಲು ತಮಾಷಿಗಳೆಲ್ಲ ಸದಾ ಇರುತ್ತಿದ್ದವು.

ಆದರೆ ಹೀಗೆ ಎಂದು ಹೇಳಲಾರೆ , ಏತಕ್ಕೆ ಎಂದು ಹೇಳಲಾರೆ ನನಗೆ ಯಾವುದರಲ್ಲಿಯೂ ಆಸಕ್ತಿ ಹುಟ್ಟಲಿಲ್ಲ. ಹೀಗೆ ಆಸಕ್ತಿ ಕಳೆದುಕೊಂಡ ನನ್ನಲ್ಲಿ ಸಂತಸ ಹುಟ್ಟುವುದು ಸಾದ್ಯವಿರಲಿಲ್ಲ. ಸ್ವರ್ಗ ಎನ್ನುವ ಸ್ಥಳ ನನಗೆ ಅದೇಕೊ ಆಕರ್ಷಕ ಅನ್ನಿಸಲೇ ಇಲ್ಲ.

ಕ್ರಮೇಣ ಒಂದು ಯೋಚನೆ ಹುಟ್ಟಿಕೊಂಡಿತು. ಭೂಮಿ ಅಥವ ನರಕ ಎಂದು ನಾನು ಭಾವಿಸಿದ ಲೋಕದಲ್ಲಿ ಮುಂದಿನ ಲೋಕ ಎನ್ನುವ ಒಂದು ನಿರೀಕ್ಷೆ ಒಂದಿತ್ತು. ಆದರೆ ಇಲ್ಲಿ ಅಂತಹ ನಿರೀಕ್ಷೆಗಳಾವುದು ಇರಲಿಲ್ಲ. ನರಕವಾದರು ಸರಿ ಅಲ್ಲಿ ನನಗೆ ಎಂದು ನಿಗದಿಯಾದ ಒಂದು ಕೆಲಸವಿತ್ತು. ಮತ್ತು ಆ ಕೆಲಸದ ಮೂಲಕ ನನ್ನನ್ನು ನಾನು ಗುರುತಿಸಿಕೊಳ್ಳುತ್ತಿದ್ದೆ. ನನಗೆ ನನ್ನದೆ ಆದ ಒಂದು ವ್ಯಕ್ತಿತ್ವವಿತ್ತು. ಹಾಗೆ ಮೆಚ್ಚುಗೆಯೊ ಅಥವ ಟೀಕೆಯೋ ಏನೊ ಒಂದು ದಕ್ಕುತ್ತಿತ್ತು.

ಇಲ್ಲಿ ಅಂತಹ ಸಂಭವಗಳೆ ಇರಲಿಲ್ಲ. ಅಲ್ಲಿ ಇಲ್ಲಿ ಒಂದಿಷ್ಟು ಸುತ್ತುವುದು , ಸುತ್ತುವುದು ಬೇಡ ಅನ್ನಿಸಿದಾಗ ಯಾವುದಾದರು ಒಂದು ಭವನ ಪ್ರವೇಶಿಸಿ ಪ್ರತ್ಯೇಕವಾಗಿ ವಿಶ್ರಾಂತಿ ಪಡೆಯುವುದು. ಇಲ್ಲಿ ನನಗೆ ಎಂದು ಯಾರೇ ಸಂಗಾತಿಯಾಗಲಿ ಸ್ನೇಹಿತರಾಗಲಿ ಇರಲಿಲ್ಲ. ಹಾಗೆ ನನಗೆ ಎಂದು ನಿಗದಿಯಾದ ಒಂದು ಸ್ಥಳವೂ ಇರಲಿಲ್ಲ.

ಮನ ಅದೇಕೊ ಭಾರವೆನಿಸುತ್ತಿತ್ತು,  ಅದ್ಯಾವ ಮಟ್ಟಕ್ಕೆ ಎಂದರೆ,  ಕಡೆಗೊಮ್ಮೆ ಈ ಹಾಳು ಸ್ವರ್ಗವೆನ್ನುವ ಸ್ಥಳಕ್ಕಿಂತ , ನಾನು ನರಕ ಎಂದು ಭಾವಿಸಿದ್ದ ಸ್ಥಳವೇ ಸೊಗಸಾಗಿತ್ತು ಅನ್ನಿಸಿಬಿಟ್ಟಿತು.

ನನ್ನೊಳಗೆ ನಾನು ಕುಸಿಯುತ್ತ ಹೋದೆ . ನಾನು ಯಾರೊಡನೆ ಸಹ ಮಾತನಾಡುತ್ತ ಇರಲಿಲ್ಲ. ಅದೇಕೊ ಯಾರನ್ನಾದರು ಮಾತನಾಡಿಸಬೇಕೆನ್ನುವ ಉತ್ಸಾಹವೆ ನನ್ನಲ್ಲಿ ಮೂಡುತ್ತ ಇರಲಿಲ್ಲ. ನನ್ನ ಮುಖ ಹೀಗೆ ಗಂಭೀರವಾಗಿ ಕಾಣುವಾಗ ಎದುರಿಗೆ ಸಿಗುವ ಕೆಲವರು ಸಹ ನನ್ನೊಡನೆ ಬೆರೆಯದೆ ಪಕ್ಕಕ್ಕೆ ಸರಿದು ಹೋಗಿಬಿಡುತ್ತಿದ್ದರು.

ನೋಡೋಣ ಎಂದು ಒಮ್ಮೆ ಮಧುಶಾಲೆಗೂ ಹೋದೆ. ಅಲ್ಲಿ ಯಾವುದೇ ಯಾರದೇ ನಿಯಂತ್ರಣ ಇರಲಿಲ್ಲ. ಬಟ್ಟಲಿಗೆ ಸ್ವಲ್ಪ ಮಧು ಸುರಿದುಕೊಂಡು ಹೊರಬಂದು ಗುಟುಕು ಗುಟುಕ ಕುಡಿದು ನೋಡಿದೆ. ಛೇ !! ಅದು ಏಕೊ ಮಧು ಸಹ ನನಗೆ ಇಷ್ಟವಾಗಲಿಲ್ಲ . ಅದನ್ನು ಏಕೆ ಎಲ್ಲರೂ ಸ್ವೀಕರಿಸುವರು ಎನ್ನುವ ಸಮಸ್ಯೆ ನನ್ನನ್ನು ಕಾಡುತ್ತಿತ್ತು.

ಬೆಳದಿಂಗಳ ಬೆಳಕು ತುಂಬಿದ ರಾತ್ರಿಗಳಲ್ಲಿ ಒಂಟಿಯಾಗಿ ನೀರಿನ ಕೊಳದ ಬಳಿ ಕುಳಿತು ದೀರ್ಘವಾಗಿ ಯೋಚಿಸುತ್ತ ಇದ್ದುಬಿಡುತ್ತಿದ್ದೆ. ಎಂತಹುದೋ ಒಂದು ನಿರಾಸೆಯಲ್ಲಿ ಕುಸಿಯುತ್ತಿದ್ದೆ. ಇದು ಬದುಕಲ್ಲ . ಬದುಕಿಗೆ ಸಾವು ಎನ್ನುವ ಕೊನೆಯಾದರು ಇರುತ್ತದೆ . ಆದರೆ ಇದು ಸಾವಿನ ನಂತರದ ಅತಂತ್ರವಾದ ತ್ರಿಶಂಕು ಸ್ಥಿತಿ ನನ್ನದಾಗಿತ್ತು. ಇದಕ್ಕೆ ಕೊನೆಯೂ ಇರಲಿಲ್ಲ.

ಒಮ್ಮೆ ಹೀಗೆ ಕೊಳದ ಪಾವಟಿಗೆಗಳ ಮೇಲೆ ಒಮ್ಮೆ ಒಂಟಿಯಾಗಿ ಕುಳಿತಿದ್ದೆ. ಹಾಗೆ ಕುಳಿತು ಎಷ್ಟು ಕಾಲವಾಗಿತ್ತೊ. ನನ್ನ ಬೆನ್ನ ಹಿಂದೆ ಯಾರೋ ಬಂದು ನಿಂತ ಅನುಭವವಾಯಿತು.

ಯಾರಿರಬಹುದು ??

ಕುತೂಹಲದಿಂದ ಹಿಂದೆ ತಿರುಗಿನೋಡಿದೆ.

‘ಓಹ್ ‘ ಅವನೇ ಆದಿನ ನಾನು ಈ ಸ್ವರ್ಗ ಎನ್ನುವ ಲೋಕಕ್ಕೆ ಬಂದಾಗ ನನ್ನನ್ನು ಸ್ವಾಗತಿಸಿದ, ನಾನು ಇಲ್ಲಿ ಕಾಲಿಟ್ಟ ದಿನ ನನ್ನನ್ನು ಎದುರುಗೊಂಡು ಈ ಲೋಕದಲ್ಲಿರುವದನ್ನೆಲ್ಲ ಪರಿಚಯ ಮಾಡಿಕೊಟ್ಟವನು. ನಾನು ಅವನನ್ನು ಕಂಡು  ಎದ್ದು ನಿಲ್ಲಲ್ಲು ಹೋದೆ.

 

ಮುಂದುವರೆಯುವುದು….

 

Comments

Submitted by NishaRoopa Wed, 05/27/2015 - 13:20

ನಮಸ್ತೆ ಪಾರ್ಥಸಾರಥಿ ಸರ್,
ನಿಮ್ಮ ಅಲೋಕ ಕಥೆಯ ಒಂಭತ್ತೂ ಸಂಚಿಕೆಗಳನ್ನು ಓದಿದ್ದೇನೆ.ತುಂಬಾ ಕುತೂಲಹಲವಾಗಿ ಚೆನ್ನಾಗಿತ್ತು. ಒಂಭತ್ತನೆಯ ಸಂಚಿಕೆಯ ಕೊನೆಯಲ್ಲಿ ಮುಂದುವರೆಯುತ್ತದೆ ಎಂದು ಇರಲಿಲ್ಲವಾದ್ದರಿಂದ ಕಥೆ ಮುಗಿಯಿತೇನೋ ಅಂದುಕೊಂಡೆ. ನೀರಸವಾಗಿ ಕಥೆ ಮುಕ್ತಾಯವಾಯ್ತು ಅಂದುಕೊಂಡೆ.ಸ್ವರ್ಗಕ್ಕಿಂತ ನರಕವೇ ವಾಸಿ ಎಂದುಕೊಂಡೆ. ಆದರೆ ಕಥೆಯನ್ನು ನೀರಸವಾಗಿ ಮುಕ್ತಾಯಗೊಳಿಸದೆ ಮುಂದುವರೆಸುತ್ತಿರುವುದಕ್ಕಾಗಿ ಸಂತೋಷವಾಗುತ್ತಿದೆ. ಧನ್ಯವಾದಗಳು......

Submitted by partha1059 Thu, 05/28/2015 - 19:34

In reply to by NishaRoopa

ನಮಸ್ತೆ
ಎಲ್ಲ‌ ಭಾಗಗಳನ್ನು ಓದಿ ಪ್ರತಿಕ್ರಿಯಿಸುತ್ತ‌ ಇರುವದಕ್ಕೆ ವಂದನೆಗಳು
ಸಾಮಾನ್ಯ‌ ಕಡೆಯಲ್ಲಿ ಮುಂದುವರೆಯುತ್ತದೆ / ಮುಗಿಯಿತು ಎಂದು ಹಾಕುತ್ತೇನೆ , ಒಂಭತ್ತನೆಯ‌ ಸಂಚಿಕೆಯಲ್ಲಿ ಹೇಗೊ ಮರೆತುಹೋಗಿರುವೆ .
ಇನ್ನು ಎರಡು ಅಥವ‌ ಮೂರು ಬಾಗ‌ ಆಗಬಹುದು
ವಂದನೆಗಳೊಡನೆ
ಪಾರ್ಥಸಾರಥಿ

Submitted by nageshamysore Wed, 05/27/2015 - 20:13

ಸ್ವರ್ಗವೆಂದರೆ ಏನೇನೊ ನಿರೀಕ್ಷೆಗಳನ್ನಿಟ್ಟುಕೊಳ್ಳುವುದರಿಂದ, ಪ್ರಾಯಶಃ ಅದು ನೈಜ ನಿರೀಕ್ಷೆಯ ಮಿತಿಯನ್ನು ಮೀರಿ ಅಸಾಧು ನಿರೀಕ್ಷೆಗಳನ್ನು ಊಹಿಸಿಕೊಳುವುದರಿಂದಲೊ ಏನೊ - ಸರಳ ಸುಖ ದರ್ಶನ ಮಾತ್ರವಾದಾಗ ಭ್ರಮ ನಿರಸನವಾಗುವುದು ಸಾಧ್ಯ. ಈ ಕಂತಿನ ಆ ರೀತಿಯ ಭ್ರಮನಿರಸನವಾಗುವ 'ಟ್ವಿಸ್ಟ್' ನಿರೀಕ್ಷಿಸಿರಲಿಲ್ಲ. ಹೀಗಾಗಿ ಕಾಯ್ದುಕೊಂಡು ಬಂದ ಕುತೂಹಲ, ಮುಂದುವರೆಯುತ್ತಲಿದೆ ಮಿಕ್ಕ ಕಂತುಗಳತ್ತ. :-)

Submitted by partha1059 Thu, 05/28/2015 - 19:39

In reply to by nageshamysore

ಅತಿಯಾದ‌ ಸುಖದ‌ ನಿರೀಕ್ಷೆ ಕೆಲವೊಮ್ಮೆ ಭ್ರಮನಿರಸನಕ್ಕೆ ಕಾರಣವಾಗುವುದು ಹೌದು.
ಆದರೆ ಇಲ್ಲಿ ಸುಖದ‌ ನಿರೀಕ್ಷೆ ಅಂತ‌ ಅಲ್ಲ‌, ಇರುವ‌ ಸುಖದಲ್ಲಿ ಅವನ‌ ಮನ‌ ತೊಡಗಿಕೊಳ್ಳುತ್ತಿಲ್ಲ‌, ಅಲ್ಲಿರುವ‌ ಸುಖದಿಂದ‌ ಅವನ‌ ಮನ‌ ಅರಳುತ್ತಿಲ್ಲ‌ ಅನ್ನುವುದು ನನ್ನ‌ ಉದ್ದೇಶ‌
ಖಂಡಿತ‌ ಮುಂದಿನ‌ ಭಾಗದತ್ತ‌ ಹೋಗುತ್ತಿರುವೆ
ನನ್ನ‌ ಕತೆಯ‌ ಅಂತ್ಯ‌ ಎಲ್ಲರೂ ಹೇಗೆ ಸ್ವೀಕರಿಸುವರು ಎನ್ನುವ‌ ಆತಂಕ‌ ನನ್ನನ್ನೂ ಕಾಡುತ್ತಿದೆ :‍)
ಪಾರ್ಥಸಾರಥಿ