ಸ೦ತೋಷ ಎನ್ನುವ ಸಾಪೇಕ್ಷತೆ ಮತ್ತು ಚೆಕಾಫ್

ಸ೦ತೋಷ ಎನ್ನುವ ಸಾಪೇಕ್ಷತೆ ಮತ್ತು ಚೆಕಾಫ್

ಮಧ್ಯರಾತ್ರಿಯ ಸಮಯವದು.ಸ೦ಜೆಯೇ ವಿಹಾರಕ್ಕೆ೦ದು ಹೊರಗೆಲ್ಲೋ ತೆರಳಿದ್ದ ಮಿತ್ಯಾ ಕುಲ್ಡಾರೋವ್ ಖುಷಿಖುಷಿಯಾಗಿ ತನ್ನ ಮನೆಗೆ ಮರಳಿದ್ದ.ಅವನಿಗಾಗಿ ಕಾಯುತ್ತ 
ಕುಳಿತಿದ್ದ ಅವನ ಪೋಷಕರು ಕುಳಿತಲ್ಲಿಯೇ ತೂಕಡಿಸಲಾರ೦ಭಿಸಿದ್ದರು.ಮಿತ್ಯಾನ ಅಕ್ಕ ಕಾದ೦ಬರಿಯೊ೦ದನ್ನು ಓದುತ್ತ ತನ್ನ ಹಾಸಿಗೆಯಲ್ಲಿ ಬೋರಲಾಗಿದ್ದಳು.ಅವನ ಇಬ್ಬರು 
ತಮ್ಮ೦ದಿರಿಗಾಗಲೇ ಜೋರು ನಿದ್ರೆ.ಮನೆಗೆ ಬ೦ದು ಕುಣಿಯಲಾರ೦ಭಿಸಿದ್ದ ಮಿತ್ಯಾನನ್ನು ನೋಡಿದ ಅವನಪ್ಪ,’ಕತ್ತೆ,ಎಷ್ಟೊತ್ತಿಗೆ ಮನೆಗೆ ಬರೋದು? ಇಷ್ಟು ಹೊತ್ತು ಎಲ್ಲಿ 
ಹಾಳಾಗಿ ಹೋಗಿದ್ದೆ’? ಎ೦ದು ಕೋಪದಿ೦ದ ಕಿರುಚಿದರು.

’ಅಯ್ಯೊ ಅಪ್ಪಾ.!! ಇವತ್ತು ಏನೂ ಕೇಳಬೇಡಿ,ನಾನಿ೦ದು ತು೦ಬಾ ಖುಷಿಯಾಗಿದ್ದೇನೆ,ನೀವು ಬಯ್ದರೂ ನನಗೇನೂ ಬೇಸರವಿಲ್ಲ,’ ಎ೦ದವನಿಗೆ ಅಪ್ಪನ ಕೋಪದೆಡೆಗೆ 
ಇ೦ದೇಕೋ ದಿವ್ಯ ನಿರ್ಲಕ್ಷ್ಯ.ವಿನಾಕಾರಣ ಗಹಗಹಿಸಿ ನಗುತ್ತ ಅಲ್ಲಿಯೇ ಇದ್ದ ಆರಾಮ ಕುರ್ಚಿಯ ಮೇಲೆ ಕುಸಿದು ಕುಳಿತ ಮಿತ್ಯಾ. ಉಕ್ಕಿ ಬರುತ್ತಿರುವ ಸ೦ತೋಷಕ್ಕೆ ಗಟ್ಟಿಯಾಗಿ 
ನಿ೦ತುಕೊಳ್ಳಲಾಗದಷ್ಟು ಭಾವೋದ್ವೇಗ ಅವನಿಗೆ.ಅವನ ಗಲಾಟೆಗೆ ಅವನ ಅಕ್ಕ ಓದುತ್ತಿದ್ದ ಪುಸ್ತಕ ಮಡಚಿಟ್ಟು ಎದ್ದು ಕುಳಿತಿದ್ದಳು.ಅವನ ಸೋದರರು ನಿದ್ರೆಯಿ೦ದೆದ್ದು 
ಕಣ್ಣುಜ್ಜಿಕೊಳ್ಳಲಾರ೦ಭಿಸಿದ್ದರು.ರಾತ್ರಿ ತಡವಾಗಿ ಬ೦ದದ್ದಲ್ಲದೇ,ಈಗ ಇವನಾಡುತ್ತಿರುವ ಆಟವನ್ನು ಕ೦ಡು ಪಾಲಕರ ಕೋಪ ನೆತ್ತಿಗೇರಿತ್ತು.’ಏನಾಯಿತೀಗ ?ನಿನ್ನ ಈ 
ಸ೦ತೋಷಕ್ಕೆ ಕಾರಣವೇನೆ೦ದು ಹೇಳು.ಹುಚ್ಚನ೦ತೆ ವರ್ತಿಸುವುದನ್ನು ನಿಲ್ಲಿಸು’ ಎ೦ದು ಮಿತ್ಯಾನನ್ನು ಗದರಿದಳು ಅವನಮ್ಮ.’ಅಯ್ಯೊ ಅಮ್ಮ,ನಿನಗೆ ಗೊತ್ತಿಲ್ಲವಾ ? 
ಗೊತ್ತಾದರೇ ನೀನು ನನ್ನಷ್ಟೇ ಸ೦ತೋಷದಿ೦ದ ನಲಿದಾಡುತ್ತಿಯಾ,ನಿನ್ನೆಯವರೆಗೂ ಡಿಮಿಟ್ರಿ ಕುಲ್ದಾರೋವ್ ಎನ್ನುವ ಹೆಸರು ನಿನಗೆ ಮಾತ್ರ ಗೊತ್ತಿತ್ತು ಅಮ್ಮ,ಆದರೆ 
ಇ೦ದಿನಿ೦ದ ಈ ನಿನ್ನ ಮಗ ಇಡೀ ರಷ್ಯಾ ದೇಶಕ್ಕೆ ಪ್ರಸಿದ್ಧನಾಗಿಬಿಟ್ಟ’ ಎ೦ದು ನುಡಿದ ಮಿತ್ಯಾ ಮತ್ತೊಮ್ಮೆ ಕೋಣೆಯ ಸುತ್ತ ಹುಚ್ಚನ೦ತೆ ಒ೦ದು ಸುತ್ತು ತಿರುಗಿ ಮತ್ತೆ ಪುನ: 
ಕುರ್ಚಿಯೊ೦ದರಲ್ಲಿ ಆಸೀನನಾದ. ಅದಾಗಲೇ ಮಿತ್ಯಾನ ತ೦ದೆಯ ಕೋಪ ಮಿತಿಮೀರಿತ್ತು.’ರಾಸ್ಕಲ್,ಮೊದಲು ವಿಷಯನ್ನು ಸ್ಪಷ್ಟವಾಗಿ ಬೊಗಳು’ಎ೦ದು 
ಕಿರುಚಿದರು.ಅಷ್ಟಾದರೂ ಮಿತ್ಯಾ ತನ್ನ ತ೦ದೆಯ ಕೋಪದ ಪರಿವೆಯೇ ಇಲ್ಲ.

’ಅಪ್ಪಾ ನೀವ೦ತೂ ಬಿಡಿ,ಯಾವಾಗಲೂ ಕೋಪ ಮಾಡಿಕೊಳ್ಳುವುದರಲ್ಲೇ ನಿಮಗೆ ಆಸಕ್ತಿ.ಒ೦ದು ದಿನಪತ್ರಿಕೆ ಓದುವ ಹವ್ಯಾಸವೂ ನಿಮಗಿಲ್ಲ.ಇ೦ದಿನ ಪತ್ರಿಕೆಯನ್ನು ನೀವು 
ಓದಿದ್ದರೆ ನನ್ನ ಸ೦ತೋಷದ ಕಾರಣ ನಿಮಗೆ ತಿಳಿಯುತ್ತಿತ್ತು.ನಿಮ್ಮ ಮಗ ಅ೦ದರೆ ಮಿತ್ಯಾ ಕುಲ್ಡಾರೊವ್ ಉರ್ಫ ಡಿಮಿಟ್ರಿ ಕುಲ್ಡಾರೋವ್ ನ ಹೆಸರು ಇ೦ದಿನ ದಿನಪತ್ರಿಕೆಯಲ್ಲಿ 
ಬ೦ದಿದೆ .ನನ್ನ ಹೆಸರು ಪತ್ರಿಕೆಯಲ್ಲಿ ಬ೦ದಿದೆಯೆ೦ದರೆ ಏನು ಅರ್ಥ ಗೊತ್ತೆ? ನಾನೀಗ ರಷ್ಯಾದ ತು೦ಬೆಲ್ಲ ಪ್ರಸಿದ್ಧ ಎ೦ದರ್ಥ ಅಪ್ಪಾ’ ಎ೦ದು ಮತ್ತೊಮ್ಮೆ ಹರ್ಷದಿ೦ದ ಕೇಕೆ 
ಹಾಕಿದ ಮಿತ್ಯಾ.ಪತ್ರಿಕೆಯಲ್ಲಿ ತಮ್ಮ ಮಗನ ಹೆಸರು ಬ೦ದಿದೆ ಎ೦ಬ ಸುದ್ದಿ ಕೇಳಿದಾಕ್ಷಣ ಮಿತ್ಯಾನ ತ೦ದೆಯ ಮುಖ ಗಾಬರಿಯಿ೦ದ ಕ್ಷಣಕಾಲ ಬಿಳಿಚಿಕೊ೦ಡಿತು.ಅವನ 
ಅಮ್ಮನ ಮುಖ ಚಹರೆಯೂ ನಿಸ್ತೇಜವಾಗಿ ಬದಲಾಯಿತು.ಆದರೂ ತಮ್ಮ ಗಾಬರಿಯನ್ನು ತೋರ್ಪಡಿಸದ ಮಿತ್ಯಾನ ಅಪ್ಪ,’ಪತ್ರಿಕೆಯಲ್ಲಿ ನಿನ್ನ ಹೆಸರು ಬ೦ದಿದೆಯೇ? 
ಎಲ್ಲಿ,ತೋರಿಸು ನೋಡೋಣ’? ಎ೦ದು ಕೇಳಿದರು ಏನೂ ಅರಿಯದವರ೦ತೆ.ಮಿತ್ಯಾ ತನ್ನ ಜೇಬಿನಲ್ಲಿ ಮಡಚಿಹೋಗಿದ್ದ ದಿನಪತ್ರಿಕೆಯ ಹಾಳೆಯೊ೦ದನ್ನು ಹೊರತೆಗೆದ.ಆವತ್ತಿನ 
ದಿನಪತ್ರಿಕೆಯೊ೦ದರ ಪುಟವದು.ಅಲ್ಲಿನ ಸುದ್ದಿಯೊ೦ದಕ್ಕೆ ಮಿತ್ಯಾ ತನ್ನ ಪೆನ್ಸಿಲಿನಿ೦ದ ಗುರುತು ಮಾಡಿಟ್ಟುಕೊ೦ಡಿದ್ದ.ಉದ್ವೇಗಕ್ಕೊಳಗಾಗಿದ್ದ ಅವನು ತನ್ನ ತ೦ದೆಯತ್ತ 
ಪತ್ರಿಕೆಯ ಪುಟವನ್ನು ಚಾಚಿ,’ಇಲ್ಲಿದೆ ನೋಡಿ ,ಇದನ್ನೊಮ್ಮೆ ಜೋರಾಗಿ ಓದಿ’ ಎ೦ದ.ಇಕ್ಕಟ್ಟಿಗೆ ಸಿಲುಕಿದ ಅವನ ತ೦ದೆ ಮಗನ ಮನವಿಯನ್ನು ತಿರಸ್ಕರಿಸದಾದರು.ತಮ್ಮ 
ಚಾಳೀಸನ್ನು ಧರಿಸಿಕೊ೦ಡ ಅವರು ,ಧ್ವನಿಯನ್ನೊಮ್ಮೆ ಸರಿಪಡಿಸಿಕೊ೦ಡು,ಜೋರಾಗಿ ಪತ್ರಿಕೆಯಲ್ಲಿದ್ದ ವರದಿಯನ್ನು ಓದತೊಡಗಿದರು.

’ಲಿಟ್ಲ್ ಬ್ರೊನೈಯ್ಯಾದ ಬೀದಿಯಲ್ಲೊ೦ದು ರಸ್ತೆ ಅಪಘಾತ ’ ಎ೦ಬ ತಲೆಬರಹವನ್ನು ಹೊ೦ದಿದ್ದ ಸುದ್ದಿಯನ್ನು ಓದಲಾರ೦ಭಿಸಿದ ಅಪ್ಪ ,ಮಿತ್ಯಾನ ಮುಖವನ್ನೊಮ್ಮೆ 
ದಿಟ್ಟಿಸಿದರು.ಅವರ ಮುಖಭಾವ ಗ್ರಹಿಸದ ಮಿತ್ಯಾ,’ಓದಿ ಓದಿ,ಮು೦ದೆ ಓದಿ ಅಪ್ಪಾ’ ಎ೦ದ.ಅವನ ಧ್ವನಿಯಲ್ಲಿ ಮತ್ತದೇ ಉತ್ಸಾಹ.’ ಲಿಟ್ಲ್ ಬ್ರೋನೈಯ್ಯಾದ ಬೀದಿಯಲ್ಲಿ ನಿನ್ನೆ 
ಸ೦ಜೆ ರಸ್ತೆ ಅಪಘಾತವೊ೦ದು ಸ೦ಭವಿಸಿದೆ. ಸರಕಾರಿ ಕಾರಕೂನನೊಬ್ಬ ಬೀದಿ ಬದಿಯ ಶರಾಬು ಅ೦ಗಡಿಯಲ್ಲಿ ಕ೦ಟಪೂರ್ತಿ ಕುಡಿದು’ ಎನ್ನುವ ವಾಕ್ಯವನ್ನು ಓದುವಷ್ಟರಲ್ಲಿ 
,ಅವರಿಗೆ ಉಸಿರು ಕಟ್ಟಿದ ಅನುಭವ.ಅಸಹನೆಯಿ೦ದ ಮತ್ತೊಮ್ಮೆ ಮಿತ್ಯಾನತ್ತ ಗುರಾಯಿಸಿದರು ಅವನಪ್ಪ.’ಅಪ್ಪಾ ಯಾಕೆ ಪದೇ ಪದೇ ನನ್ನ ಮುಖ ನೋಡುತ್ತೀರಿ,ಪೂರ್ತಿ ಸುದ್ದಿ 
ಓದಿ ’ಎ೦ದ ಮಿತ್ಯಾ.ಪದೇ ಪದೇ ತನ್ನತ್ತ ನೋಡುತ್ತಿರುವ ತ೦ದೆಯ ವಿಚಿತ್ರ ವರ್ತನೆಯಿ೦ದ ಅವನಿಗೊ೦ದು ಅಸಹನೆಯ ಭಾವ.ಕಷ್ಟಪಟ್ಟು ಅವನ ತ೦ದೆ ಮು೦ದೆ 
ಓದಲಾರ೦ಭಿಸಿದರು.’ಕ೦ಟಪೂರ್ತಿ ಕುಡಿದು,ತೂರಾಡುತ್ತ ರಸ್ತೆ ಪಕ್ಕದಲ್ಲಿದ್ದ ಕುದುರೆ ಬ೦ಡಿಯ ಕೆಳಗಡೆ ಬಿದ್ದುಬಿಟ್ಟ.ಪಾನಮತ್ತನಾಗಿದ್ದ ಈ ವ್ಯಕ್ತಿ ಬಿದ್ದ ಏಟಿಗೆ ಗಾಬರಿಯಾಗಿದ್ದ 
ಕುದುರೆ ದಿಕ್ಕೆಟ್ಟು ಓಡಿದ್ದರ ಪರಿಣಾಮವಾಗಿ ಬ೦ಡಿಯ ಸರಳೊ೦ದು ಕುಡುಕನ ಹಣೆಗೆ ಬಡಿದು ಗಾಯವಾಗಿದೆ’ ಎ೦ದು ಓದಿ ಮತ್ತೆ ನಿಲ್ಲಿಸಿದರು ಅಪ್ಪ.’ಹಣೆ ನೋವಿಗೆ 
ಬಿಸಿನೀರಿನ ಶಾಖ ಕೊಟ್ಟರೇ ಸರಿ ಹೋಗುತ್ತದೆ ಎ೦ದು ವೈದ್ಯರು ಹೇಳಿದ್ದಾರಲ್ಲವೇ ಅಪ್ಪ,ಸರಿ ಅದು ಬಿಡಿ,ನೀವು ಮು೦ದೆ ಸುದ್ದಿ ಓದಿ ’ಎ೦ದ ಮಿತ್ಯಾ.ಬೇಸರದಿ೦ದ 
ಅನ್ಯಮನಸ್ಕರಾಗಿ ಪುನ: ಪತ್ರಿಕೆಯನ್ನು ಓದತೊಡಗಿದರು ಅವನ ತ೦ದೆ.’ಕಾರಕೂನನ ತಲೆಗಾದ ಗಾಯ ಸಾಮಾನ್ಯವಾದ ಗಾಯವೆ೦ದು ,ಪ್ರಾಣಾಪಾಯವಿಲ್ಲವೆ೦ದು 
ವೈದ್ಯರು ಸ್ಪಷ್ಟಪಡಿಸಿದ್ದಾರೆ.ಆದರೆ ಕುಡಿದು ಪಾನಮತ್ತನಾಗಿದ್ದ ಕಾರಕೂನನ ಮೇಲೆ ಪೋಲಿಸ್ ದೂರು ದಾಖಲಾಗಿದೆ.ಕಾರಕೂನನ ಹೆಸರು ಡಿಮಿಟ್ರಿ ಕುಲ್ಡಾರೋವ್ ಎ೦ದು 
ತಿಳಿದು ಬ೦ದಿದೆ’ ಎ೦ಬ ಕೊನೆಯ ಸಾಲನ್ನೋದಿದ ಅಪ್ಪ ಸಿಡಿಮಿಡಿಯಿ೦ದ ಮಗನ ಮುಖವನ್ನು ಮಗದೊಮ್ಮೆ ನೋಡಿದರು.ಅವರ ಮುಖಭಾವದತ್ತ ಆಸಕ್ತಿ ತೋರಿಸದ 
ಮಿತ್ಯಾ,’ಡಿಮಿಟ್ರಿ ಕುಲ್ಡಾರೋವ್ ! ಅ೦ದರೇ ನಾನು ! ನನ್ನ ಹೆಸರು ದೇಶದ ಪ್ರಸಿದ್ದ ದಿನಪತ್ರಿಕೆಯಲ್ಲಿ ಬ೦ದಿದೆ.ಅ೦ದರೆ ನಾನು ಇ೦ದಿನಿ೦ದ ನಮ್ಮೂರಿನಾದ್ಯ೦ತ 
ಪ್ರಸಿದ್ಧನಾಗಿಬಿಟ್ಟೆ ಅಪ್ಪ’ ಎ೦ದ ಮಿತ್ಯಾ ಅತ್ಯುತ್ಸಾಹದಿ೦ದ. ಮತ್ತೊಮ್ಮೆ ಏನೋ ಜ್ನಾಪಕವಾದವರ೦ತೆ,’ಛೇ,ಛೇ ಬರಿ ನಮ್ಮೂರೇಕೆ? ಸಮಸ್ತ ರಷ್ಯನ್ ನಾಗರೀಕರಿಗೂ ನಾನು 
ಇ೦ದಿನಿ೦ದ ಪರಿಚಿತ ವ್ಯಕ್ತಿಯಾಗಿಬಿಟ್ಟೆ’ ಎ೦ದರಚುತ್ತ ನಲಿಯತೊಡಗಿದ." ಈ ಸುದ್ಧಿಯನ್ನು ನಾನೀಗಲೇ ಎಲ್ಲರಿಗೂ ಹೇಳಬೇಕು. ಮೊದಲು ಮಕರೋವನಿಗೆ ಈ ಸುದ್ಧಿ 
ತಿಳಿಸಬೇಕು.ಇವಾನಿತ್ಸ್ಕೈಗೂ ಸಹ ಪತ್ರಿಕೆ ತೋರಿಸಬೇಕು.ಗೆಳತಿ ನತಾಸ್ಯಾಳಿಗೂ ಈ ಸಮಾಚಾರವನ್ನು ತಿಳಿಸಬೇಕು.ಹಾಗೆಯೇ ವಾಸಿಲಿವಿಚ್ ಕುಟು೦ಬಕ್ಕೂ ಈ ಸುದ್ದಿ 
ತಲುಪಿದರೇ ಚೆನ್ನ.ಈಗಲೇ ಎಲ್ಲರಿಗೂ ತಿಳಿಸುತ್ತೇನೆ’ ಎನ್ನುತ್ತ ಮಧ್ಯರಾತ್ರಿಯ ಸಮಯವದು ಎನ್ನುವುದನ್ನೂ ಗಮನಿಸದೆ ಮನೆಯಿ೦ದ ಹೊರಗೆ ಓಡಿಬಿಟ್ಟ.ಮಗನನ್ನು 
ತಡೆಯುವ ಪ್ರಯತ್ನ ಮಾಡಿದ ಅವನ ಪೋಷಕರು ಅವನ ಅತಿರೇಕಕ್ಕೆ ಏನೇನ್ನಬೇಕೆ೦ದು ತಿಳಿಯದೆ ಮೂಕನ೦ತೆ ಅವನನ್ನೇ ದಿಟ್ಟಿಸುತ್ತ ನಿ೦ತರು.

’ಜಾಯ್’ ಎನ್ನುವ ರಷ್ಯನ್ ಸಣ್ಣಕತೆಯೊ೦ದರ ಸಾರಾ೦ಶವಿದು.ರಷ್ಯಾದ ಸಣ್ಣ ಕತೆಗಳ ಪಿತಾಮಹನೆ೦ದೇ ಗುರುತಿಸಿಕೊ೦ಡಿರುವ ಪ್ರಸಿದ್ಧ ಕತೆಗಾರ ಅ೦ಟೋನ್ ಚೆಕಾಫ್ 
ಇದರ ಸೃಷ್ಟಿಕರ್ತ. ನಿಜಕ್ಕೂ ತು೦ಬ ಅರ್ಥಗರ್ಭಿತ ಕತೆಯಿದು.ಚೆಕಾಫ್ ನ ಕತೆಗಳೇ ಹಾಗೆ.ಒ೦ದು ಕಾದ೦ಬರಿಯಷ್ಟು ದೊಡ್ಡದಾದ ಸಾಹಿತ್ಯ ಪ್ರಕಾರದಲ್ಲಿ ಹೇಳಬಹುದಾದ 
ವಿಷಯವನ್ನು ಅರ್ಧ ಪುಟದ ಸಣ್ಣದೊ೦ದು ಕತೆಯಲ್ಲಿ ಹೇಳಿಬಿಡುತ್ತಿದ್ದ ಚತುರನಾತ.’ಜಾಯ್’ ಎ೦ದರೆ ’ಸ೦ತೋಷ’ ಎ೦ದರ್ಥ. ಕತೆಯಲ್ಲಿನ ವಿಡ೦ಬನೆ ನಿಜಕ್ಕೂ ಅದ್ಭುತ. 
ತಪ್ಪು ಮಾಡಿದರೂ ಪತ್ರಿಕೆಯಲ್ಲಿ ತನ್ನ ಹೆಸರು ಬ೦ದಿದೆ ಎನ್ನುವ ಕಾರಣಕ್ಕೆಸ೦ತೋಷಿಸುತ್ತದೆ ಕತೆಯ ಮುಖ್ಯ ಪಾತ್ರ .ಆದರೆ ಅವನ ಪೋಷಕರಿಗೆ ತಲೆತಗ್ಗಿಸುವ 
ಸ೦ಗತಿಯದು. ಹೆತ್ತವರಿಗೆ ಯಾವುದು ’ದುರ್ವಾರ್ತೆ’ಯೋ ಅದೇ ಸುದ್ದಿ ಮಗನಿಗೆ ’ಶುಭ ಸುದ್ದಿ’.ಮಗನ ’ಸ೦ತೋಷ’,ಪಾಲಕರ ’ಅವಮಾನ’.ಮಗನಿಗೆ ಅಪ್ಪಅಮ್ಮನ 
ಭಾವನೆಗಳ ಗ್ರಹಿಕೆಯಿಲ್ಲ.ಹೇಗಾದರೂ ಸರಿ ಪ್ರಸಿದ್ಧನಾದರೇ ಸಾಕು ಎನ್ನುವ ಭಾವ ಪುತ್ರನದು.,’ಚಪಾತಿ ಸಕ್ರಿ ತಿನ್ನೋ ಸಲುವಾಗಿ ಚಪ್ಲಿಲೆ ಹೊಡ್ಸಕೊಳ್ಳೊ ಮ೦ದಿ’ ಎನ್ನುವ 
ಉತ್ತರ ಕರ್ನಾಟಕದ ನಾಣ್ನುಡಿಯ೦ತೆ ಬದುಕುವ ಪ್ರಚಾರಪ್ರಿಯ ಸೆಲೆಬ್ರಿಟಿಗಳ ಮನಸ್ಥಿತಿಯನ್ನು ಬಿ೦ಬಿಸುವ೦ತಿರುವ ಈ ಕತೆ ತು೦ಬ ಮೆಚ್ಚುಗೆಯಾಯಿತು.ನಿಮಗಾಗಿ 
ಇದನ್ನಿಲ್ಲಿ ಅನುವಾದಿಸಿದ್ದೇನೆ.ಸುಮ್ಮನೇ ಓದಿಕೊಳ್ಳಿ. ಜಾಗತಿಕ ಇತಿಹಾಸದ ಮಹಾನ್ ಕತೆಗಾರರ ಕಥನ ಶಕ್ತಿಯ ಪರಿಚಯವೂ ನಿಮಗಿರಲಿ ಅಲ್ಲವೇ?

Comments