ಭಯವೇಕೆ ಬೆಡಗಿ?

ಭಯವೇಕೆ ಬೆಡಗಿ?

ಚಿತ್ರ

ಎದೆಮೇಲೆ ಹೊಳೆವ ಸರ ಸೊಂಟದಲ್ಲೊಡ್ಯಾಣ
ಕಾಲ್ಗೆಜ್ಜೆ ಗಣಗಣಿಪ ದನಿಯು ಸಾರಿರಲು
ಡಂಗುರವ ನೀ ತೆರಳುತಿರಲು ನಿನ್ನಿನಿಯನೆಡೆ
ಅಂಜಿನಡುಗುತ ಸುತ್ತಲೇಕೆ ನೋಡುತಿಹೆ?

ಸಂಸ್ಕೃತ ಮೂಲ: ಅಮರುಕನ ಅಮರು ಶತಕ, (೨೮/೩೧)

उरसि निहितस्तारो हारः कृता जघने घने
कलकलवती काञ्ची पादौ क्वणन्मणिनूपुरौ ।
प्रियमभिसरस्येवं मुग्धे समाहतडिण्डिमा
यदि किमधिकत्रासोत्कम्पं दिशः समुदीक्षसे ॥२८॥(३१)

ಉರಸಿ ನಿಹಿತಸ್ತಾರೋ ಹಾರಃ ಕೃತಾ ಜಘನೇ ಘನೇ
ಕಲಕಲವತೀ ಕಾಂಚೀ ಪಾದೌ ಕ್ವಣನ್ಮಣಿನೂಪುರೌ
ಪ್ರಿಯಮಭಿಸರಸ್ಯೇವಂ ಮುಗ್ಧೇ ಸಮಾಹತಡಿಂಡಿಮಾ
ಯದಿ ಕಿಮಧಿಕತ್ರಾಸೋತೋತ್ಕಂಪಂ  ದಿಶ: ಸಮುದೀಕ್ಷಸೇ ||

-ಹಂಸಾನಂದಿ

ಕೊ: ಸಾಮಾನ್ಯವಾಗಿ ಮೂಲದಲ್ಲಿ ಇರುವ ಎಲ್ಲವನ್ನೂ ಹೇಳಬೇಕಾದ್ದು ಅನುವಾದದ ಧರ್ಮ. ಆದರೂ ಈ ಪದ್ಯದಲ್ಲಿ, ಘಲ್ಲೆನುವ ಗೆಜ್ಜೆಗನ್ನೂ , ಗಣಗಣಿಸುವ ಡಾಬಿನ ಸದ್ದನ್ನೂ ಒಟ್ಟುಗೂಡಿಸಿ ಹೇಳಬೇಕಾಯ್ತು. ಒಟ್ಟಿನಲ್ಲಿ, ತನ್ನ ನಡಿಗೆಯಿಂದ, ತನ್ನ ಒಡವೆಗಳಿಂದ, ಎಲ್ಲರ ಗಮನವನ್ನು ಡಂಗೂರ ಸಾರಿದಂತೆ ಸೆಳೆಯುತ್ತಿರುವ ಈ ಅಭಿಸಾರಿಕೆ, ಅತ್ತಿತ್ತ ನೋಡುತ್ತ ಹೆದರುತ್ತ ಅಂಜುತ್ತ ಹೋಗುವುದೇಕೆ ಎಂದು ಚೇಷ್ಟೆಯಿಂದ ಕವಿ ಪ್ರಶ್ನಿಸುತ್ತಿದ್ದಾನೆ ಎಂಬುದು ಭಾವ.

ಕೊ.ಕೊ: ಮೂಲವು ಹರಿಣೀ ಎಂಬ ವೃತ್ತದಲ್ಲಿದೆ. ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ. ಪ್ರಾಸವನ್ನಿಟ್ಟಿಲ್ಲ.

ಕೊ.ಕೊ.ಕೊ: ಅಭಿಸಾರಿಕೆ ಎಂದರೆ ತನ್ನಿನಿಯನನ್ನು ನೋಡಹೊರಟಿರುವ ಹೆಣ್ಣು. ಚಿತ್ರ ಅಬನೀಂದ್ರ ನಾಥ ಠಾಕುರರದ್ದು.
 

Rating
No votes yet

Comments