ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 01/03)

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 01/03)

'ಅಬ್ಬಾ! ಈ ಅದ್ದೂರಿ ರೂಮಿಗೆ ದಿನವೊಂದಕ್ಕೆ ಮುನ್ನೂರು ಡಾಲರ್ ಬಾಡಿಗೆಯೆ ?' ಎಂದು ಬೆರಗಿನಿಂದ ಸುತ್ತಲು ದಿಟ್ಟಿಸಿದ ಲೌಕಿಕ. ಚಿಕಾಗೊದಲ್ಲಿನ ಪ್ರತಿಷ್ಠಿತ ಹೋಟೆಲೊಂದರ ದುಬಾರಿ ವೆಚ್ಚದ ಆ ಕೊಠಡಿಯ ಒಪ್ಪ ಒರಣಭರಿತ ವೈಭವೋಪೇತ ಅಲಂಕರಣವೆ ದಂಗು ಬಡಿಸುವಂತಿತ್ತು. ಎಲ್ಲವೂ ಅಚ್ಚುಕಟ್ಟು ಮಾತ್ರವಲ್ಲದೆ ಅತೀವ ಶಿಸ್ತು, ಮೇಲ್ವರ್ಗದ ಅಭಿರುಚಿಗಳ ಅಭಿವ್ಯಕ್ತಿಯ ಪ್ರತೀಕದಂತಿತ್ತು. ತಾನಿರುವ ಮೂರು ರಾತ್ರಿಗಳ ತಂಗುವಿಕೆಗೆ ಆ ವಿಶಾಲ, ವೈಭವಪೂರ್ಣ ತಾಣವೇಕೆ ಬೇಕಿತ್ತು, ಬರಿ ಕಾಲು ಚಾಚಿ ಮಲಗಲಿಕ್ಕೆ ಸಾಧ್ಯವಿರುವ ಪುಟ್ಟ ಹೋಟೆಲು ರೂಮೆ ಸಾಕಿತ್ತಲ್ಲವೆ ? ಎನಿಸಿ ಯಾಕೊ ಮುಜುಗರವೂ ಆಯ್ತು. ಆದರೆ ಕಂಪೆನಿಯ ಬಿಜಿನೆಸ್ ಟ್ರಿಪ್ಪಿನ ಸಲುವಾಗಿ ಜಾಗತಿಕ ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ಬಂದ ಎಲ್ಲರೂ ಅದೇ ಹೋಟೆಲಿನಲ್ಲೆ ಇರಬೇಕೆಂದು ತಾಕೀತು ಮಾಡಿದ್ದ ಕಾರಣ ಲೌಕಿಕನೂ ಅಲ್ಲೆ ಇರಬೇಕಾಗಿ ಬಂದಿತ್ತು. ಅಷ್ಟು ದೊಡ್ಡ ಜಾಗಗಳಲಿದ್ದು ಅನುಭವವಿಲ್ಲದ ಕಾರಣಕ್ಕೊ ಏನೊ 'ಆ ಪರಿಸರದಲ್ಲಿ ಹೇಗೆ ವರ್ತಿಸಬೇಕೊ, ಯಾವ ಯಾವ ಬಗೆಯ ಮುಖವಾಡಗಳನ್ನು ಹಾಕಬೇಕೊ ಹೇಗೊ ?' ಎನ್ನುವ ಆತಂಕವೂ ಜತೆಗೆ ಸೇರಿಕೊಂಡು ಮುಜುಗರದ ಅಸಹನೆ ಹೇಳಿಕೊಳ್ಳಲಾಗದ ಚಡಪಡಿಕೆಯಾಗಿ ಮಾರ್ಪಾಡಾಗಿ ಆ ನಿರಾಳ ವಾತಾವರಣದಲ್ಲೂ ಕಂಗಾಲಾಗತೊಡಗಿತ್ತು ಲೌಕಿಕನ ಮನ.

ಅದೇ ತಾನೆ ಹೊರಗಿನಿಂದ ಬರುವಾಗ ತಡೆಯಲಾಗದ ಗಾಳಿ, ಚಳಿಗೆ ನಡುಗುತ್ತ ಬೇಸಿಗೆಯ ಆರಂಭವೆಂದು ತೀರಾ ಬೆಚ್ಚನೆ ಬಟ್ಟೆ ತರದ ಮುಟ್ಠಾಳತನಕ್ಕೆ ತನ್ನನ್ನೆ ಶಪಿಸಿಕೊಂಡು ಬಂದಿದ್ದವನಿಗೆ, ಈ ರೂಮಿನ ಬೆಚ್ಚನೆಯ ವಾತಾವರಣದಿಂದ ಕೆಲವೆ ಗಳಿಗೆಗಳಲ್ಲಿ ಬೆವರುವ ಅನುಭವಾವಾದಾಗ, ಹೊರಗಿನ ದಿರುಸನ್ನು ಬಿಚ್ಚಿ ವಾರ್ಡರೋಬಿನ ಮೂಲೆಯ ನೇತುಕಡ್ಡಿಗೆ ತಗುಲಿ ಹಾಕಿದವನೆ, ಹೂವಿನ ರಾಶಿ ಹಾಸಿದಂತೆ ಮೃದುವಾಗಿದ್ದ ಪಲ್ಲಂಗದ ಮೇಲೆ ದೊಪ್ಪನೆ ಹಿಮ್ಮುಖವಾಗಿ ಉರುಳಿ ಬಿದ್ದ. ಆ ಗಳಿಗೆಯಲ್ಲು ಮತ್ತದೆ ಕೆಲಸಕ್ಕೆ ಬಾರದ ಆಲೋಚನೆಗಳು ಮುತ್ತತೊಡಗಿದಾಗ, ಆ ಹೊತ್ತಿನ ಸುಖದ ಐಷಾರಾಮವನ್ನು ಅನುಭವಿಸಿ ಆಹ್ಲಾದಿಸದೆ ತಾನೇಕೆ ಬೇರೇನೇನೊ ಯೋಚಿಸುತ್ತ ಅಸ್ಥಿರ ಮನಸ್ಥಿತಿಯಲ್ಲಿ ತೊಳಲಾಡುತ್ತಿರುವನೆಂದು ಅವನಿಗೆ ಅರ್ಥವಾಗಲಿಲ್ಲ.  'ಛೇ ! ಇಂತಹ ದುಬಾರಿ, ಐಷಾರಾಮಿ ಜಾಗಗಳಿಗೆ ಪದೆಪದೇ ಬರಲು ಸಾಧ್ಯವೆ ? ನಾನೇಕೆ ಸಿಕ್ಕಿರುವ ಈ ಸದಾವಕಾಶದ ಸುಖದಾಲಿಂಗನದಲ್ಲಿ ಮೈಮರೆಯುವುದನ್ನು ಬಿಟ್ಟು, ಕೆಲಸಕ್ಕೆ ಬಾರದ ತೊಳಲಾಟದಲ್ಲಿ ಸಮಯ ವ್ಯರ್ಥ ಮಾಡುತ್ತಿರುವೆ ?' ಎನಿಸಿ, ಯಾವುದೋ ಪ್ರಜ್ಞೆ ಜಾಗೃತವಾಗಿ ಆಂತರ್ಯವನ್ನು ಬಡಿದೆಬ್ಬಿಸಿದ ಹಾಗೆ ತಟ್ಟನೆ ಮೇಲೆದ್ದವನೆ ರೂಮಿನ ಎಲ್ಲಾ ಪಾರ್ಶ್ವಗಳನ್ನು ಇಂಚಿಂಚಾಗಿ, ಆಳವಾಗಿ ಗಮನಿಸಿ ನೋಡತೊಡಗಿದ. 

ನೆಲ ಗೋಡೆ ಬಚ್ಚಲುಮನೆಯ ಬಾತ್ ಟಬ್ಬಿನಿಂದ ಹಿಡಿದು ಕಮೋಡದವರೆಗೂ ಎಲ್ಲವೂ ಫಳಫಳ ಹೊಳೆವ ಕನ್ನಡಿಯಂತಿದ್ದು, ಧೂಳಾಗಲಿ, ಕಸಕಡ್ಡಿಯಾದಿಯಾಗಿ ಚಿಕ್ಕ ಚುಕ್ಕೆಯಾಗಲಿ ಒಂದಿನಿತೂ ಇರದ ಹಾಗೆ ಸ್ವಚ್ಛ ಶುದ್ಧ ಸ್ಪಟಿಕದಂತೆ ಕಾಣುತ್ತಿದ್ದ ಅದರ ಶುಚಿಬದ್ಧ ಶಿಸ್ತಿಗೆ ಬೆರಗಾಗುತ್ತಲೆ ಬಾತ್ರೂಮಿಗು, ಲಿವಿಂಗ್ ರೂಮಿನಂತಿದ್ದ ಬೆಡ್ರೂಮಿಗು ನಡುವಿದ್ದ ಅರೆ ಪಾರದರ್ಶಕ ಗಾಜಿನ ಗೋಡೆಯತ್ತ ದಿಟ್ಟಿಸಿ ನೋಡಿ , ' ವಾಹ್ ! ಇದರ ರಸಿಕತೆಯೆ? ಹನಿಮೂನಿಗೊ, ವಿಹಾರಕ್ಕೊ ಬಂದ ಜೋಡಿಗಳಿಗೆ ಈ ನಡು ತೆರೆಯಿಂದನಾವರಣವಾಗುವ ಅಸ್ಪಷ್ಟ ದೃಶ್ಯವೆ ಏನೆಲ್ಲ ರೋಚಕ ಭಾವೋದ್ವೇಗವನ್ನೆಬ್ಬಿಸಿ ಜೋಡಿ ಹಕ್ಕಿಗಳಂತೆ ವಿಹರಿಸುವ ಮೂಡಿಗೆ ತಂದುಬಿಡಬಹುದೆಂದು ಊಹಿಸುತ್ತಲೆ ಆ ಗೋಡೆಯ ಮೇಲ್ಮೆಯನ್ನು ಮೆಲುವಾಗಿ ಸ್ಪರ್ಶಿಸಿದ - ಅದರ ನುಣುಪಿನ ಒರಟುತನದ ಅಳತೆ ನೋಡುವವನ ಹಾಗೆ. ಅರೆ! ಹಾಗೆ ಮುಟ್ಟಿದ್ದೆ ತಡ ಅರೆಪಾರದರ್ಶಕದಂತಿದ್ದ ಗಾಜಿನ ಪದರ ಇದ್ದಕ್ಕಿದ್ದಂತೆ ಪೂರ್ತಿ ಪಾರದರ್ಶಕವಾಗಿ ಬದಲಾಗಿ ಹೋಯ್ತು! ಅದರ ಮಿಂಚಿನ ಪರಿವರ್ತನೆಗೆ ಅದುರಿಬಿದ್ದು ಆಯಾಚಿತವಾಗಿ ಅದೆ ಮೇಲ್ಮೈಯನ್ನು ಮತ್ತೊಮ್ಮೆ ಮುಟ್ಟಿದ ಪರಿಣಾಮ ಅದೆ ಪಾರದರ್ಶಕ ಮತ್ತೆ ಅರೆಪಾರದರ್ಶಕವಾಗಿ ಬದಲಾಗಿಹೋಯ್ತು. ಅದರ ಸ್ಪರ್ಶ ಸ್ಪಂದನ ಸೂಕ್ಷ್ಮಜ್ಞತೆಗೆ ಸೋಜಿಗಪಡುತ್ತಲೆ -' ಮಕ್ಕಳ ಜತೆ ಇಂತಹ ರೂಮಿನಲ್ಲಿ ತಂಗಿದರೆ ಏನಪ್ಪ ಗತಿ ? ಗೊತ್ತಿದ್ದೊ, ಇರದೆಯೊ ಹೊರಗಿನಿಂದ ಗಾಜನ್ನು ಮುಟ್ಟಿಬಿಟ್ಟರೆ 'ಏ' ಸರ್ಟಿಫಿಕೇಟ್ ಸಿನಿಮಾ ದೃಶ್ಯದ ಪುಕ್ಕಟೆ ಟಿಕೇಟು ಕೊಟ್ಟಂತಾಗುವುದಲ್ಲಾ?! ' ಎಂದು ಗಾಬರಿಗೊಳ್ಳುತ್ತಲೆ ಹೊರಗೆ ಬಂದು ಆ ಕಡೆಯ ಗೋಡೆ ಮುಟ್ಟಿದರೆ - ಏನು ಬದಲಾಗದೆ ಯಥಾ ರೀತಿಯಲಿದ್ದದ್ದನ್ನು ಕಂಡು ಕೊಂಚ ಸಮಾಧಾನವಾಯ್ತು. ಪರವಾಗಿಲ್ಲ, ಬುದ್ದಿವಂತಿಕೆ ಬಳಸಿ ಒಳಗಿನಿಂದ ಮಾತ್ರ ಸಾಧ್ಯವಾಗುವ ಹಾಗೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಲೆ ಫ್ರಿಡ್ಜು, ಸ್ನ್ಯಾಕುಗಳಿಟ್ಟಿದ್ದ ಮೂಲೆಗೆ ಬಂದ. 

ಆ ಮೂಲೆಯಲಿದ್ದ ಮರದ ಪೀಠೋಪಕರಣವೆ ಮತ್ತೊಂದು ಅದ್ಭುತ ಕಲಾಕೃತಿಯಂತಿತ್ತು. ಅದರಲಿದ್ದ ಹತ್ತಾರು ಖಾನೆಯ ಹಿಡಿಗಳನ್ನು ಎಳೆದು ನೋಡಿದರೆ, ಬೇರೆ ಹೋಟೆಲುಗಳಲ್ಲಿ ಸುಮ್ಮನೆ ತಟ್ಟೆಯೊಂದರಲ್ಲಿ ಜೋಡಿಸಿಡುವ ಸಕ್ಕರೆ, ಕಾಫಿ, ಚಹಾ ಇತ್ಯಾದಿ ಕಿರುಪೊಟ್ಟಣಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದು ಕಂಡು ಬಂತು.  ಅದರ ಕೆಳ ಹಂತದಲ್ಲಿದ್ದ ದೊಡ್ಡ ಖಾನೆಯಲ್ಲಿ ಪುಟ್ಟದೊಂದು ಕಾಫಿ ಮೇಕರು ಮತ್ತದಕ್ಕೆ ಹಿಡಿಸುವ ಗಾತ್ರದ, ಕತ್ತರಿಸಿದ ಕೋನಾಕಾರದ ರೆಡಿಮೇಡ್ ಕಾಫಿ ಮಿನಿ ಕಪ್ಪುಗಳು ಜೋಡಿಸಿದ್ದು ಕಾಣಿಸಿತು. ಎಲ್ಲಕ್ಕಿಂತ ಮೇಲಿನ ಸಾಲಿನ ಖಾನೆಯಲ್ಲಿ ತರತರದ ಕುರುಕು ತಿಂಡಿಗಳು - ಕಡಲೆ ಕಾಯಿ ಬೀಜ, ಬಾದಾಮಿ, ಗೊಡಂಬಿ, ಚಿಪ್ಸು, ಚಾಕಲೇಟ್ ಇತ್ಯಾದಿ. ಕುತೂಹಲಕ್ಕೆ ಅದರ ಮೇಲೆ ನಮೂದಿಸಿದ್ದ ಬೆಲೆಯನ್ನು ನೋಡಿಯೆ ಬೆಚ್ಚಿದ ಲೌಕಿಕ ' ಅಬ್ಬಾ! ಇದು ಹಗಲ ದರೋಡೆಯೆ ! ಇಪ್ಪತ್ತೈದು ಗ್ರಾಮು ಇಲ್ಲದ ಕಡಲೆ ಬೀಜಕ್ಕೆ ಹತ್ತು ಡಾಲರೆ? ದೊಡ್ಡ ಹೋಟೆಲಿನ ಹೆಸರಲ್ಲಿ ಹೇಗೆಲ್ಲ ದುಡ್ಡು ಕೀಳುತ್ತಾರೆ?' ಎಂದುಕೊಳ್ಳುತ್ತಲೆ ಕೈಗೆತ್ತಿಕೊಂಡ ಕಿರುಡಬ್ಬವನ್ನು ಹಾಗೆ ಸ್ವಸ್ಥಾನಕ್ಕೆ ಸೇರಿಸಿದ - ಮೊದಲಿಟ್ಟಿದ್ದ ಹಾಗೆಯೆ ನಿಖರವಾಗಿ ಕೂರಿಸುತ್ತ. 

ಆ ದಿನದ ಡಿನ್ನರಿಗೆ ಆರುಗಂಟೆಯ ನಂತರ ಹೊರಡಲು ಹೇಳಿದ್ದ ಕಾರಣ ಸಮಯವೆಷ್ಟಾಯಿತೆಂದು ನೋಡಿಕೊಂಡ ಲೌಕಿಕನಿಗೆ ಗಡಿಯಾರ ನಾಲ್ಕೂವರೆಯೆಂದು ತೋರಿಸಿದಾಗ, ಇನ್ನು ಒಂದೂವರೆ ಗಂಟೆ ಕಳೆಯಬೇಕು ಎಂದು ಮತ್ತೆ ಹಾಸಿಗೆಯ ಮೇಲುದುರಿಕೊಂಡು ಮೊಬೈಲಿನ ಜತೆ ಆಡತೊಡಗಿದ. ಒಂದೆರಡು ಗಳಿಗೆಯಲ್ಲಿ ಪರದೆಯನ್ನು ನೋಡುತ್ತಿದ್ದ ಆಯಾಸಕ್ಕೊ, ಪ್ರಯಾಣದ ಸುಸ್ತಿಗೊ, ಬೆಚ್ಚನೆಯ ಹಿತವಾದ ಸುಖೋಷ್ಣಕ್ಕೊ ಮಂಪರು ಬಂದಂತಾಗಿ ಅವನಿಗರಿವಿಲ್ಲದಂತೆ ಕಣ್ಣು ಮುಚ್ಚಿಸಿ ನಿದಿರಾವಶನನ್ನಾಗಿಸಿತ್ತು. 

ಗಾಢ ಮಂಪರಿನಲ್ಲಿ ಹಾಸಿಗೆಯ ಮೇಲೆ ಕೆಡವಿಕೊಂಡರೆಗಳಿಗೆಯಲ್ಲೆ ಯಾವುದೊ ಮಯಕ ಆವರಿಸಿಕೊಂಡವನಂತೆ ಮಲಗಿದವನಿಗೆ ಏನೊ ಅರೆ ಎಚ್ಚರದಲ್ಲಿದ್ದಂತೆ, ಕಣ್ಣೆದುರಿಗೇನೊ ನಡೆಯುತ್ತಿರುವಂತೆ, ಅದನ್ನು ಗಾಢವಾಗಿ ಆವರಿಸಿಕೊಂಡು ನೋಡುತ್ತಿದ್ದಂತೆ ಭಾವ.. ಯಾವುದೊ ಬೇರೆ ತಾಣದಲ್ಲಿದ್ದಂತೆ ಕಂಡ ಪರಿಸರದಲ್ಲೂ ರೂಮಿನ ಚಾವಣಿಯಲಿ ನೇತುಹಾಕಿದ್ದ ಜ್ವಾಜ್ಯಾಲಮಾನ್ಯ ದೀಪದ ಪ್ರಖರ ಬೆಳಕೆ ಅಲ್ಲಿಯೂ ಹಬ್ಬಿಕೊಂಡಂತಹ ವಿಲಕ್ಷಣ ಅನಿಸಿಕೆ... ಆ ಬೆಳಕಿನ ನಡುವಲ್ಲೊಂದು ಗಂಟೆಯ ಸದ್ದು ತೇಲಿ ಬರುತ್ತಿರುವ ಅನುಭೂತಿ.. ಹಾಗೆ ಮತ್ತೀನ್ನೇನು ಕಾಣಲಿದೆಯೊ ಎಂದು ದಿಟ್ಟಿಸಿ ನೋಡಲೆತ್ನಿಸುತ್ತಿರುವಂತೆ ಯಾಕೊ ಆ ಗಂಟೆಯ ಸದ್ಧು ಗಾಢವಾಗಿ, ತೀವ್ರವಾಗುತ್ತ ಹೋದಂತನಿಸಿತು. ಅದರ ತೀವ್ರತೆ ಹೆಚ್ಚಿದಂತೆಲ್ಲ ಆ ಸದ್ದಿಂದಲೆ ಎಂಬಂತೆ ಅದುವರೆಗೆ ಮೂಡಿದ್ದ ದೃಶ್ಯವೆಲ್ಲ ಕರಗುತ್ತ ತುಸುತುಸುವಾಗಿ ಮಾಯವಾಗತೊಡಗಿತು.  ಅದನ್ನು ಕರಗೆ ಬಿಡದೆ ಹಿಡಿಯಹೋದಂತೆ, ಅದು ಇನ್ನಷ್ಟು ಕ್ಷಿಪ್ರವಾಗಿ ಕರಗುತ್ತ ಮಸುಕಾಗತೊಡಗಿತು. ಅದರ ಜತೆ ಜತೆಯಲ್ಲೆ, ಅದರ ವಿಲೋಮಾನುಪಾತದಲ್ಲಿ ಗಂಟೆಯ ಸದ್ದು ಹೆಚ್ಚುತ್ತ ಹೋದಂತೆ ಭಾಸವಾಗಿ ಇನ್ನು ತಡೆಯಲೆ ಆಗದು ಎನಿಸಿ ತಟ್ಟನೆ ಕಣ್ಣುಬಿಟ್ಟ ಲೌಕಿಕ.. 

ಅದು ಹೊರಗಿನಿಂದ ಒಂದೆ ಸಮನೆ ಬಡಿದುಕೊಳ್ಳುತ್ತಿದ್ದ ಬಾಗಿಲ ಕರೆಗಂಟೆಯ ಸದ್ದು....

ಆಲಸಿಕೆ ಅನಾಸಕ್ತಿಯಿಂದಲೆ ಮೇಲೆದ್ದು ಬಾಗಿಲು ತೆರೆದರೆ - ರೂಮ್ ಸರ್ವೀಸಿನ ಹೆಂಗಸೊಬ್ಬಳು ಬಾಗಿಲಲ್ಲೆ ನಿಂತಿದ್ದು ಕಾಣಿಸಿತು. ಆಕಳಿಸುತ್ತಲೆ ಪೂರ್ತಿ ಬಾಗಿಲು ತೆರೆದು ಅವಳು ತನ್ನ ಸಲಕರಣೆಗಳ ಟ್ರಾಲಿಯ ಸಮೇತ ಒಳಗೆ ಬರಲು ಅನುವು ಮಾಡಿಕೊಡುತ್ತ ಬದಿಗೆ ಸರಿದು ನಿಂತವನನ್ನು ಕಂಡು ತಾನು ಅವನ ನಿದ್ರಾಭಂಗಕ್ಕೆ ಕಾರಣವಾದೆನೆಂದರಿವಾಗಿ, ' ಸಾರಿ ಸರ್..' ಎಂದು ತಪ್ಪಿತಸ್ಥಳ ದನಿಯಲ್ಲಿ ನುಡಿದಳು. ಅದಕ್ಕೆ ಮಾರುತ್ತರಿಸುವ ಗೋಜಿಗೆ ಹೋಗದೆ ನಿರ್ಲಕ್ಷ್ಯದಿಂದ ಒಳ ನಡೆದವನೆ ಎದುರಿನ ಸೋಫಾದ ಮೇಲೆ ಕೂತು ಟೀವಿಯನ್ನು ಹಾಕಿ ಚಾನೆಲ್ಲುಗಳನ್ನು ತಿರುಗಿಸತೊಡಗಿದ. ಆದರೆ ಐದೆ ನಿಮಿಷಗಳಲ್ಲಿ ಅದು ಬೋರಾಗಿ , ಟೀವಿ ಆರಿಸಿ ಅವಳ ಕೌಶಲಪೂರ್ಣ ಕೆಲಸವನ್ನು ದಿಟ್ಟಿಸಿ ನೋಡುತ್ತ ಕುಳಿತ. ಆಗವನ ಗಮನಕ್ಕೆ ತಟ್ಟನೆ ಬಂದಿದ್ದು ಅವಳ ಲಕ್ಷಣವಾದ ಶಿಸ್ತುಬದ್ಧ ಆಕರ್ಷಕ ರೂಪ.. 

ರಾಜಾ ಸೈಜಿನ ಆ ದೊಡ್ಡ ಹಾಸಿಗೆಯ ಮೇಲಿನ ಹೊದಿಕೆ, ಹಾಸುಗಳನ್ನೆಲ್ಲ ಲೀಲಾಜಾಲವಾಗಿ ಎತ್ತಿ , ಒದರಿ ಟ್ರಾಲಿಗೆ ಸೇರಿಸುತ್ತ ಅಲ್ಲಿಂದ ಅಷ್ಟೆ ಸಲೀಸಾಗಿ ಮಡಿ ಮಾಡಿದ ಶುಭ್ರ ವಸ್ತ್ರಗಳನ್ನು ಬದಲಾಯಿಸುತ್ತಿದ್ದವಳು ಯಾವುದೊ ದಕ್ಷಿಣ ಏಶಿಯಾದ ದೇಶದಿಂದ ಬಂದವಳೆಂದು ಮುಖ ಚಹರೆಯನ್ನು ನೋಡಿದಾಗಲೆ ಗೊತ್ತಾಗುತ್ತಿತ್ತು. ಭಾರತೀಯ ಚಹರೆಯೂ ಕಾಣಿಸಿಕೊಂಡಂತಿದ್ದರು, ಯಾಕೊ ಭಾರತೀಯಳಲ್ಲ ಅನಿಸಿತು. ಬಾಂಗ್ಲಾದೇಶವೊ, ಶ್ರೀಲಂಕಾವೊ ಇರಬಹುದೇನೊ ಅಂದುಕೊಂಡ ಲೌಕಿಕನಿಗೆ ಅವಳ ವಯಸು ಮೂವತ್ತರ ಆಚೀಚೆ ಇರುವಂತೆ ಕಂಡಿತು. ತೀರಾ ತೆಳುವೂ ಅಲ್ಲದ ದಢೂತಿಯು ಅಲ್ಲದ ಮಧ್ಯಮ ಗಾತ್ರದ ಹೆಣ್ಣಾಗಿದ್ದರು ಬಹುಶಃ ಸರಾಸರಿಗಿಂತ ಹೆಚ್ಚು ಉದ್ದವಿದ್ದ ಕಾರಣಕ್ಕೊ ಏನೊ ಸಣ್ಣವಳಾಗಿಯೆ ಕಾಣುತ್ತಿದ್ದಳು. ಆದರೆ ಆ ದೇಹದ ಗಾತ್ರಕ್ಕೆ ಅವಳ ಕೈಗಳ ಮಾತ್ರ ದೊಡ್ಡದಿರುವಂತೆ ಅನಿಸಿತು - ಬಹುಶ ದಿನ ನಿತ್ಯವೂ ಅವಳ ಕೆಲಸಕ್ಕೆ ಅದೆ ಅವಳ ಮೂಲ ಸಲಕರಣೆಯಾಗಿರುವ ಕಾರಣದಿಂದ. 

ಆ ಕೆಲಸದ ನಡುವೆಯೆ ಇತ್ತ ತಿರುಗಿದವಳಿಗೆ, ಅವನು ತದೇಕಚಿತ್ತನಾಗಿ ತನ್ನನ್ನೆ ನೋಡುತ್ತಿರುವನೆಂಬ ಅರಿವು ಮೂಡುತ್ತಿದ್ದಂತೆ ಒಂದು ರೀತಿಯ ಲಜ್ಜೆಯುಂಟಾಗಿ ಅವನನ್ನೆ ನೋಡುತ್ತ ಒಮ್ಮೆ ಕಿರುನಕ್ಕಳು. ಹಾಗೆಯೆ ಮಾಡುತ್ತಿದ್ದ ಕೆಲಸ ನಿಲ್ಲಿಸದೆ, ಆಂಗ್ಲ ಭಾಷೆಯಲ್ಲಿಯೆ, 'ಯಾವ ದೇಶ ? ಇಂಡಿಯಾ ?' ಎಂದಳು ಪ್ರಶ್ನಿಸುವ ದನಿಯಲ್ಲಿ.

ಆ ಮಾತಿಗೆ ಹೌದೆನ್ನುವಂತೆ ತಲೆಯಾಡಿಸುತ್ತ, 'ಹೌದು ಬೆಂಗಳೂರಿನಿಂದ, ಕೆಲಸದ ನಿಮಿತ್ತ ಬಂದಿರುವೆ..' ಎಂದ.

' ಓಹ್..! ನಾನೂ ಕೂಡ ಅಲ್ಲೆ ಪಕ್ಕದವಳೆ' ಅಂದಳು.

ತನ್ನನುಮಾನ ನಿಜವಾದದ್ದಕ್ಕೆ ಖುಷಿಯಾಗಿ , ' ಬಾಂಗ್ಲಾದೇಶ?'  ಎಂದ ಮೆಲುವಾದ ದನಿಯಲ್ಲಿ.

' ಇಲ್ಲಾ ಭೂತಾನ್...' 

' ಓಹ್ ದ ಕಂಟ್ರಿ ದಟ್ ಎಂಜಾಯ್ಸ್ ಮೋಸ್ಟ್ ಪೀಸ್ ಫುಲ್ ಲೈಫ್..' ಎಂದ. 

ಅಭಿವೃದ್ಧಿ ಹೊಂದಿದ ದೇಶಗಳೂ ಸೇರಿದಂತೆ ಜಗತ್ತಿನೆಲ್ಲಾ ದೇಶಗಳ ಜನ ಜೀವನದ ಅಧ್ಯಯನ ನಡೆಸಿದಾಗ, ಭೂತಾನಿನ ಜನ ಅತ್ಯಂತ ಸಂತೋಷದಿಂದಿರುವ ಜನಗಳಿಂದ ತುಂಬಿದ ದೇಶವೆಂದು ಮೊದಲ ಸ್ಥಾನ ಪಡೆದಿರುವ ಸುದ್ದಿ ನೆನಪಾಗಿತ್ತು. ಪ್ರಗತಿ ಭೌತಿಕ ಸುಖ ತರಬಹುದೆ ಹೊರತು ಮಾನಸಿಕ ಸಂತಸವನ್ನಲ್ಲ; ಅದರ ಮಾನದಂಡ, ಅಳತೆಗಳೆ ಬೇರೆ...

' ನಾವು ನೆರೆಯ ದೇಶವಾದರು ನಮ್ಮ ಜೀವನವೆಲ್ಲ ಭಾರತದ ಜೀವನದ ಹಾಗೆ.. ತುಂಬಾ ಹತ್ತಿರದ ಹೋಲಿಕೆ' ಕೆಲಸ ಮಾಡುತ್ತಲೆ ಮಾತು ಮುಂದುವರೆಸಿದ್ದಳು. ಬಹುಶಃ ರೂಮಿಂದ ರೂಮಿಗೆ ಹೋಗಿ ಒಬ್ಬಂಟಿಯಾಗಿ ಒಂದೇ ರೀತಿಯ ಕೆಲಸ ಮಾಡುವ ಅವಳಿಗೆ ಯಾರಾದರೊಡನೆ ನಿರಾಳವಾಗಿ ಮಾತಾಡಲು ಸಿಗುವ ಅವಕಾಶಗಳೂ ಬಹಳ ಕಡಿಮೆಯಿರಬೇಕು. ಅದರಲ್ಲೂ ಹೋಟೆಲಿನ ಅತಿಥಿಗಳ ಜತೆಯೆಂದರೆ ಇನ್ನು ಹೆಚ್ಚು ನಿಯಮ, ಕಟ್ಟುಪಾಡುಗಳು ಸೇರಿಕೊಳ್ಳುತ್ತವೆ. ಒಂದೆ ಕಡೆಯವರೆಂಬ ಸರಾಗ ಭಾವವಷ್ಟೆ ಅವಳನ್ನು ಮಾತನಾಡಲು ಅನುವು ಮಾಡಿಕೊಟ್ಟಿತ್ತೇನೊ..

' ನೀನಿಲ್ಲಿ ದಿನವು ಎಷ್ಟು ಗಂಟೆ ಕೆಲಸ ಮಾಡಬೇಕು?' ಸುಮ್ಮನೆ ಮಾತಿಗೆ ಮಾತು ಎಂಬಂತೆ ಮತ್ತೆ ಆಕಳಿಸುತ್ತ ಪ್ರಶ್ನಿಸಿದ ಲೌಕಿಕ.

'ಗಂಟೆ, ಗಿಂಟೆ ಲೆಕ್ಕವೇನಿಲ್ಲ.. ದಿನವೂ ಒಂಭತ್ತು ಹತ್ತಕ್ಕೆ ಬರುತ್ತೇನೆ. ಇಡಿ ಹೋಟೆಲಿನ ಎರಡು ಹಂತಗಳ ಎಲ್ಲಾ ರೂಮುಗಳು ನನ್ನ ಪಾಲಿನ ಜವಾಬ್ದಾರಿ.. ಅವೆಲ್ಲ ಮುಗಿಯುವ ತನಕ ಕೆಲಸ ಮಾಡುತ್ತೇನೆ. ಹೀಗಾಗಿ ತುಸು ತಡವಾಗಿ ಬಂದರು ಪರವಾಗಿಲ್ಲ, ಬೇಗ ಹೋಗಲೆಂದರೂ ಸರಿ - ಕೆಲಸ ಮುಗಿಯಿತೆಂದರೆ ಹೊರಡಬಹುದು.. ದಿನವು ಹೆಚ್ಚು ಕಡಿಮೆ ಹತ್ತು ಹನ್ನೆರಡು ಗಂಟೆ ಕೆಲಸ..' ಎಂದಳು ಫ್ರಿಡ್ಜು, ಕಾಫಿ, ಚಹಾ ಮತ್ತು ಕುರುಕು ತಿಂಡಿ ಖಾನೆಗಳನ್ನು ಪರಿಶೀಲಿಸುತ್ತ..

'ಹತ್ತು ಹನ್ನೆರಡು ಗಂಟೆಯೆಂದರೆ ತುಂಬಾ ಹೆಚ್ಚಾಗಲಿಲ್ಲವ ? ಅದೂ ಈ ಶ್ರಮದ ಕೆಲಸ...?'

' ಇಲ್ಲಿ ತುಂಬಾ ಚೆನ್ನಾಗಿ ಸಂಬಳ ಕೊಡುತ್ತಾರೆ... ಕೆಲಸ ಶ್ರಮದಾಯಕವಾದರು ಸಂಪಾದನೆ ಚೆನ್ನಾಗಿರುವುದರಿಂದ ತೊಂದರೆಯಿಲ್ಲ.. ಅದರಲ್ಲೂ ಚಿಕಾಗೊ ತುಂಬಾ ತುಟ್ಟಿಯಾದ ಜಾಗ..ನಾವಿಲ್ಲಿ ಬಂದು ಹತ್ತು ವರ್ಷವಾದರು ಇನ್ನು ಮನೆ ಮಾಡಲು ಆಗಿಲ್ಲ...'

' ನಿನ್ನ ಗಂಡನು ಇಲ್ಲೆ ಕೆಲಸ ಮಾಡುತ್ತಿರುವನೇ?' ಲೌಕಿಕನಿಗೆ ಕೊಂಚ ಆಸಕ್ತಿ ಮೂಡಿತ್ತು ಬದುಕಿನ, ಮನೆಯ ವಿಷಯಕ್ಕೆ ಬಂದಾಗ. 

ಅವಳ ಮುಖದಲ್ಲೇನೊ ತೆಳುವಾದ ವಿಷಾದದ ರೇಖೆಯೊಂದು ಹಾದುಹೋದಂತೆ ಭಾಸವಾಯ್ತು ಲೌಕಿಕನಿಗೆ. ಕಂಡು ಕಾಣದ ಆ ಭಾವ ಸ್ಪಷ್ಟವಾಗಿ ಮೂಡುವ ಮೊದಲೆ ಅವಳಿಂದ ಬಂದ ಉತ್ತರ ಅದನ್ನು ಮರೆಯಾಗಿಸಿತ್ತು..' ಟ್ರಕ್ ಡ್ರೈವರ್ ಕೆಲಸ... ಹೀಗಾಗಿ ವಾರವೆಲ್ಲ ರಸ್ತೆಯಲ್ಲೆ ಇರಬೇಕು.. '

ಸುಖ ಜೀವನದಾಸೆಯಲ್ಲಿ ದೇಶ ಬಿಟ್ಟು ಬಂದು ಏನೆಲ್ಲ ಕಷ್ಟ ಪಡುತ್ತಾರಾದರು, ಅವರಿಬ್ಬರು ಇದೇ ಕೆಲಸವನ್ನು ಸ್ವದೇಶದಲ್ಲಿ ಮಾಡಿಕೊಂಡಿದ್ದರೆ ಸಿಗುತ್ತಿದ್ದ ಸುಖಕ್ಕಿಂತ ಈ ಬದುಕು ಬಹುಪಾಲು ಉತ್ತಮವಾಗಿರಬೇಕು..

'ಇಬ್ಬರಿಗು ಈ ರೀತಿಯ ಕೆಲಸ ಕಷ್ಟಕರವಲ್ಲವೆ?' ಎಂದ.

'ಕೆಲಸದ ಮಾತು ಇರಲಿ.. ಈ ಸಿಟಿ ತುಂಬಾ ದುಬಾರಿಯಾದ ಕಾರಣ ದುಡಿಯದೆ ಬದುಕುವುದೆ ದುಸ್ತರ.. ನಮ್ಮಂತಹವರ ಸಂಬಳಗಳಲ್ಲಿ ಬರಿ ಜೀವನ ಸಾಗಿಸಲಷ್ಟೆ ಸಾಧ್ಯ... ಅದಕ್ಕೆ ಹತ್ತಾರು ವರ್ಷ ಕಳೆದರು ನಾವಿನ್ನು ಬಾಡಿಗೆ ಮನೆಯಲ್ಲೆ ಇರುವಂತಹ ಸ್ಥಿತಿ.. ಸಾಲದ್ದಕೆ ಮನೆಯಲ್ಲಿ ಮಗಳನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲವಲ್ಲ ? ಅದಕ್ಕೆ ನಮ್ಮ ತಾಯಿಯನ್ನು ಕರೆಸಿಕೊಂಡು ಜತೆಯಲ್ಲೆ ಇಟ್ಟುಕೊಂಡಿದ್ದೇನೆ. ಈ ಎಲ್ಲಾ ಖರ್ಚುಗಳು ಸೇರಿದರೆ ಉಳಿಸುವುದೆಲ್ಲಿ ? ಮನೆ ಕೊಳ್ಳುವುದೆಲ್ಲಿ?'

ಹೊರಗಿನ ಕೆಲಸ ಮುಗಿದ ಕಾರಣ ಬಾತ್ ರೂಮಿನಿಂದ ಪುಟಾಣಿ ಬಾಟಲುಗಳನ್ನು ಹೊರತಂದು ಅವಕ್ಕೆ ಶಾಂಪು, ದ್ರವರೂಪಿ ಸೋಪುಗಳನ್ನು ತುಂಬಿಸುತ್ತ ಮುಂದುವರೆಸಿದ್ದಳು..' ಅದಕ್ಕೆ ನಾವೀಗ ಸೀರಿಯಸ್ಸಾಗಿ ಯೋಚಿಸುತ್ತಿದ್ದೇವೆ.. ಇಲ್ಲಿ ಇನ್ನೊಂದೆರಡು ಮೂರು ವರ್ಷ ಕಳೆದುಬಿಟ್ಟು ಸ್ವಲ್ಪ ಹಣ ಸೇರಿಸಿಕೊಂಡು ಕನ್ಸಾಸ್ ಪ್ರಾಂತ್ಯಕ್ಕೆ ಹೋಗಿಬಿಡಬೇಕು ಎಂದು.. ಆ ದುಡ್ಡಿಗೆ ಇಲ್ಲೇನು ಸಿಗದಿದ್ದರು, ಅಲ್ಲಿಯ ಬೆಲೆಗೆ ನಮಗೆ ಸಾಕೆನಿಸುವ ಮಟ್ಟದ ಮನೆ ಕೊಳ್ಳಲು ಸಾಧ್ಯ... ಚಿಕಾಗೊ ತರಹ ದೊಡ್ಡ ಪಟ್ಟಣವಲ್ಲ ನಿಜ.. ಈ ದೇಶದಲ್ಲಿ ಇರುವುದೆ ಹೇಗಿದ್ದರು ಊರಿಂದ ಹೊರಗೆ.. ಅದು ಚಿಕಾಗೊ ಆದರೇನು ? ಮತ್ತೊಂದಾದರೇನು? '

ಎಲ್ಲರ ಕಥೆಯೂ ಒಂದಲ್ಲ ಒಂದು ತರದ ದುರಂತ ಅಥವಾ ವಿಷಾದವೆ.. ನನ್ನದೇನು ಕಡಿಮೆಯದೆ ? ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ ಎಂದು ನಿಟ್ಟುಸಿರು ಬಿಟ್ಟ ಲೌಕಿಕ, ' ಅದೇನೊ ನಿಜವೆ...'ಎಂದ.

' ಸರಿ ನನ್ನ ಕೆಲಸವೆಲ್ಲ ಮುಗಿಯಿತು... ಇನ್ನೇನಾದರೂ ಬೇಕಿತ್ತ?' ಎಂದವಳ ದನಿಗೆ ತನ್ನ ಆಲೋಚನಾ ಲೋಕದಿಂದ ವಾಸ್ತವಕ್ಕೆ ಬಂದ ಲೌಕಿಕ 'ಸರಿ' ಎನ್ನುವಂತೆ ತಲೆಯಾಡಿಸಿದ. ಹೋಗುವ ಮೊದಲು ಮತ್ತೆ ಹಿಂತಿರುಗಿ ನೋಡುತ್ತ, ' ಇನ್ನು ಎಷ್ಟು ದಿನ ಇರುತ್ತೀರಿ?' ಎಂದಳು

'ಒಟ್ಟು ಮೂರು ದಿನ..' 

' ಸರಿ ಅಂದ ಮೇಲೆ ಮತ್ತೆರಡು ದಿನವು ನೋಡುವ ಸಾಧ್ಯತೆಯಿದೆ... ಹೆಚ್ಚು ಕಡಿಮೆ ಇದೇ ಸಮಯದಲ್ಲಿ.. ಬೈ ಬೈ..' ಎಂದು ಬಾಗಿಲು ಹಾಕಿಕೊಂಡು ಹೊರಟುಹೋದಳು. 

ಅವಳು ಹೋದತ್ತಲೆ ನೋಡುತ್ತ ಸುಮ್ಮನೆ ಕುಳಿತಿದ್ದವನಿಗೆ ತಾನು ಹೊರಡುವ ಸಮಯ ಹತ್ತಿರವಾಯ್ತೆಂದರಿವಾಗಿ ಮೇಲೇಳುತ್ತಿದ್ದಂತೆ, ಏನೊ ದೊಡ್ಡ ಪ್ರಮಾದವಾದವನಂತೆ ' ಅರೆರೆ! ಅವಳ ಹೆಸರು ಕೇಳುವುದನ್ನೆ ಮರೆತುಬಿಟ್ಟೆನಲ್ಲ?' ಎಂದು ಪೇಚಾಡಿಕೊಂಡ...!

(ಮುಂದುವರೆಯುವುದು)

Comments

Submitted by nageshamysore Mon, 06/01/2015 - 01:37

In reply to by smurthygr

ಹೌದು ಮೂರ್ತಿಗಳೆ, ಸದ್ಯಕ್ಕೆ ಪಾರ್ಥರು ಸರಣಿ ಕಂತುಗಳ ಬರಹದ ಕಾಂಟ್ರಾಕ್ಟ್ ತೆಗೆದುಕೊಂಡಿರುವುದರಿಂದ, ನಾನು ಅವರ ಹಾಗೆ ಒಂದು ಸಣ್ಣಕಥೆ ಬರೆಯೋಣವೊಂದು ಹೊರಟೆ. ಆದರೆ ನೋಡಿ - ಆ ಸಣ್ಣ ಕಥೆಯೂ ಮೂರು ಕಂತುಗಳಾಗುವಷ್ಟು ದೊಡ್ಡದಾಗಿ ಹೋಯ್ತು! '67' ಕಂತಿನ 'ಸಣ್ಣ ಕಥೆ (ಪರಿಭ್ರಮಣಕ್ಕೆ) ಹೋಲಿಸಿದರೆ,'3' ಕಂತಿನ ಸಣ್ಣ ಕಥೆ ಸ್ವಲ್ಪ ವಾಸಿಯೆಂದು ಹೇಳಲಡ್ಡಿಯಿಲ್ಲ. ಅಲ್ಲವೆ? ಮೊದಲ ಕಂತಿನ ಕುತೂಹಲ ಮೂರರವರೆಗೆ ಉಳಿದುಕೊಂಡಿರಲೆಂದು ಆಶಿಸುವೆ :-)

Submitted by nageshamysore Tue, 06/02/2015 - 16:03

In reply to by kavinagaraj

ಕವಿಗಳೆ ಬಹುಶಃ ಭೂತಾನಿನ ಹೆಣ್ಣಿನ ಮತ್ತು ಕುನ್. ಸೂವಿನ ಕೆಲಸದ ಹಿನ್ನಲೆಯಲ್ಲಿ ಸ್ವಲ್ಪ ಹೋಲಿಕೆಯಿರುವುದರಿಂದ ಹಾಗಾಗಿರಬಹುದೇ? ಅದರ ಹೊರತಾಗಿ ಎರಡೂ ಆಧುನಿಕ ವಾಣಿಜ್ಯ ಜಗದ ವಾತಾವರಣದಲ್ಲಿ ನಡೆಯುವ ಕಥೆಗಳಾದ ಕಾರಣದಿಂದಲೂ ಹಾಗಾಗಿರಬಹುದು. ಆದರೆ ಅವೆರಡಕ್ಕು ಮೀರಿದ ನಿಮಗೆ ಮಾತ್ರ ಸಂಬಂಧಿಸಿದ ಮತ್ತೊಂದು ಕಾರಣವು ಇದೆಯೆನಿಸುತ್ತದೆ : ನೀವು ಆ ಸಮಯದಲ್ಲೆ ಅನಾರೋಗ್ಯಕ್ಕೆ ಒಳಗಾದ ಕಾರಣ ಕೊನೆಯ ಕಂತುಗಳನ್ನು ಓದಲು ಆಗಲಿಲ್ಲವೆಂದು ಕಾಣುತ್ತದೆ. ಹೀಗಾಗಿ ಕುನ್. ಸೂ ಪ್ರಕರಣದ ಕೊನೆ ಹೇಗಾಯ್ತೆಂದು ಪೂರ್ತಿ ಸ್ಪಷ್ಟವಾಗಲಿಲ್ಲವೇನೊ? ಈಗಲೂ ತಡವಾಗಿಲ್ಲ - ನಿಲ್ಲಿಸಿದ ಕಂತಿನಿಂದ ಆರಂಭಿಸಿ ಮಿಕ್ಕ ಕಂತುಗಳನ್ನು ಓದಿ, ಕುನ್. ಸೂ ಕಥಾ-ಅತ್ಮಕ್ಕೆ ಮೋಕ್ಷ ಕೊಡಿಸಿಬಿಡಿ :-)