ಅಲೋಕ (13)- ಆನಂದ ಬ್ರಹ್ಮ

ಅಲೋಕ (13)- ಆನಂದ ಬ್ರಹ್ಮ

ಅಲೋಕ (13)-  ಆನಂದ  ಬ್ರಹ್ಮ

ಕತೆ : ಅಲೋಕ

ಸುಂದರ ಬೆಳದಿಂಗಳಿನಂತ ಬೆಳಕು ಹರಡಿತ್ತು. ಎದುರಿಗೆ ತಾವರೆಗಳು ಅರಳಿನಿಂತ ನೀರಿನ ಸರೋವರ. ತಂಪಾದ ವಾತಾವರಣ. ನಾನು ಬಿಟ್ಟ ಕಣ್ಣು ಬಿಟ್ಟಂತೆ ಎದುರಿಗೆ ನೋಡುತ್ತಿದ್ದೆ .

ನಾವು ಎಷ್ಟೇ ನಮ್ಮ ಪಾಡಿಗೆ ಅಂತ ಇದ್ದರೂ ನಮ್ಮಿಂದ ಬೇರೆಯವರಿಗೆ ತೊಂದರೆ ಆಗುವ ಸಾಧ್ಯತೆ ಇದ್ದೆ ಇರುತ್ತದೆ ಅನ್ನುವದಕ್ಕೆ ನನ್ನ ನಡುವಳಿಕೆ ನಿದರ್ಶನವಾಗಿತ್ತು. ಸುತ್ತಲೂ ನಡೆಯುತ್ತಿರುವದನ್ನು ಗಮನಿಸದೆ ನನ್ನೊಳಗೆ ನಾನು ಜೀವಿಸಿದ್ದು ತಪ್ಪಾಗಿತ್ತು. ಅವನು ತಾನಾಗೆ ಬಂದು ಹೇಳುವ ಮೊದಲೆ ಎಚ್ಚರವಹಿಸದೇ ಇದ್ದದ್ದು ನನಗೆ ನಾಚಿಕೆ ಅನ್ನಿಸುತ್ತಲಿತ್ತು.

ಈಗ ಇದರ ಪರಿಹಾರ ಹೇಗೆ. ನಾನು ಈ ಪರಿಸ್ಥಿತಿಯಿಂದ ಹೊರಗೆ ಬರಬೇಕು. ಅವನು ಹೇಳಿದಂತೆ ನನ್ನನ್ನು ಪುನಃ ನರಕದ ಲೋಕಕ್ಕೆ ಕಳುಹಿಸಿದರು ಸಹ ಆಶ್ಚರ್ಯ ಪಡುವಂತದ್ದು ಏನು ಇರಲಿಲ್ಲ. ಇದು ನನಗೆ ತಿದ್ದಿಕೊಳ್ಳಲು ಅವನು ಒದಗಿಸಿರುವ ಅವಕಾಶ ಎಂದು ನನಗೆ ಅರ್ಥವಾಗಿತ್ತು.

ಅವನು ಹೇಳಿದ್ದು ನೆನಪಿಗೆ ಬಂದಿತು.

ಭೂಮಿಯ ಅನುಭವಗಳನ್ನು ವೈತರಣೀ ಲೋಕದಲ್ಲಿ ಹೋಲಿಸಲು ಹೋದಾಗಲು ಸಹ ಇದೇ ತೊಂದರೆ ಆಗಿತ್ತು. ಈಗ ಈ ಸ್ವರ್ಗ ಎನ್ನುವ ಲೋಕಕ್ಕು ನರಕದ ನೆನಪನ್ನು ಹೊತ್ತು ತಂದು ಅದೇ ತಪ್ಪನ್ನು ಪುನಃ ಪುನಃ ಮಾಡುತ್ತಿದ್ದೇನೆ. ನಾನು ಬೇಸರ ದುಃಖ ಈ ಎಲ್ಲ ಭಾವಗಳಿಂದ ಹೊರಬರಬೇಕು.

ವೈತರಣಿಯಿಂದ ಈ ಲೋಕಕ್ಕೆ ಬರುವಾಗ ಅಲ್ಲಿಯವನು ಹೇಳಿದ ಮಾತು ನೆನಪಿಗೆ ಬಂದಿತು “ವೈತರಣಿಯಲ್ಲಿ ನಿವಾರಿಸಲು ಸಾದ್ಯವಾಗದ ಕೆಲವು ಭಾವಗಳ ಕೊರತೆಗಾಗಿ ನನ್ನನ್ನು ಇಲ್ಲಿಗೆ ಕಳಿಸಲಾಗಿದೆ “ ಎಂದಿದ್ದ. ಅಲ್ಲದೆ , ತರ್ಕ ಮತ್ತು ಪ್ರಶ್ನೆಗಳು ಇವೆರಡನ್ನು ಅಲ್ಲಿ ನಿವಾರಿಸಲು ಸಾದ್ಯವಿಲ್ಲ ಎಂದಿದ್ದ. ಅಲ್ಲಿಗೆ ಇಲ್ಲಿ ನನ್ನನ್ನು ಯಾವುದೇ ಆನಂದ ಅನುಭವಿಸದಂತೆ ತಡೆಯುತ್ತಿರುವುದು ಅದೇ ತರ್ಕ ಮತ್ತು ಪ್ರಶ್ನೆಗಳ ?. ನಾನು ಎನ್ನುವ ಭಾವ ನನಗೆ ಅಡ್ಡಿಯಾಗಿ ನಿಂತಿದೆಯಾ ?.  ಅಂತಹ ಭಾವದಿಂದ ಹೊರಬರುವುದಾದರು ಹೇಗೆ? ಸಂತಸಗಳನ್ನು ಅನುಭವಿಸುವದಾದರು ಹೇಗೆ?.

ಇಲ್ಲಿನ ಸಂತಸಗಳನ್ನು ಅನುಭವಿಸಲು ಕಲಿಯಬೇಕು. ಒಬ್ಬನೇ ಇರುವಾಗಲು ಆನಂದದಿಂದಿರಲು ಕಲಿಯಬೇಕು. ಅವನು ಮಾತನಾಡಿದ ಮೂರುಲೋಕಗಳ ವಿಷಯ ನೆನೆಯುವಾಗ ಯಾವುದೋ ಭಾವ ಸ್ವಷ್ಟವಾಗುತ್ತಿತ್ತು. ನನ್ನ ಆಲೋಚನೆಗಳು ಹೆಚ್ಚು ಹೆಚ್ಚು ಸ್ವಷ್ಟವಾಗುತ್ತಿತ್ತು.

ಭೂಲೋಕ ಎಂದರೆ ಅಲ್ಲಿ ಎಲ್ಲವೂ ಬಂಧನಗಳ ಮೇಲೆ , ಪರಸ್ಪರ ಸಂಬಂಧಗಳ ಮೇಲೆ ನಮ್ಮ ಕ್ರಿಯೆಗಳು ಕೊಟ್ಟುತೆಗೆದುಕೊಳ್ಳುವ ಕ್ರಿಯೆಗಳು ನಿರ್ಧಾರವಾಗುತ್ತವೆ. ಪ್ರತಿಯೊಂದು ನಮ್ಮ ಕರ್ಮಗಳು ಪೂರ್ವ ನಿರ್ಧಾರದಂತೆ ಕಾಣಿಸುತ್ತದೆ . ಎಲ್ಲವೂ ಮಾಯೆಯ ಬಂಧನದಂತೆ ಕಾಣುತ್ತದೆ .

ಮಾಯೆ ಅನ್ನುವಾಗಲೆ ಶಂಕರಭಗವತ್ಪಾದರ ಮಾಯೆಯ ನೆನಪು ಬಂದಿತು. ಭೂಮಿಯಲ್ಲಿನ ಯಾವುದು ಸತ್ಯವಲ್ಲ ಮಿಥ್ಯೆ  ಎಂದರೆ ಅಲ್ಲಿ ನಮ್ಮ ಆಲೋಚನೆ ಕ್ರಿಯೆಗಳು ಮಾಯೆಗೆ ಒಳಪಟ್ಟಿರುತ್ತವೆ . ಸೃಷ್ಟಿಯನ್ನು ನಿರ್ಮಿಸಿದ್ದು ಶಕ್ತಿ.   ಈ ಶಕ್ತಿಯನ್ನು ಬ್ರಹ್ಮವೆಂದು ಕರೆಯುವದಾದರೆ ಬ್ರಹ್ಮ ಮಾಯು ಸ್ವರೂಪಿಯಾಗಿ ಭೂಮಂಡಲವನ್ನೆ ಆಕ್ರಮಿಸಿದೆ .

ಇಂತಹ ಬ್ರಹ್ಮ  ಪೂರ್ಣ ಬ್ರಹ್ಮಾಂಡವನ್ನೆ ಆಕ್ರಮಿಸಿದೆ ಆದರೆ ಅದು ಬೇರೆ ಬೇರೆ ಲೋಕದಲ್ಲಿ ಬೇರೆ ಬೇರೆ ರೂಪಿನಲ್ಲಿ ಇರಬೇಕು. ಭೂಮಿಯಲ್ಲಿ ಬ್ರಹ್ಮ ಮಾಯೆಯ ಸ್ವರೂಪ ಅಂದುಕೊಳ್ಳುವದಾದರೆ , ಹಿಂದಿನ ಲೋಕ ನರಕದಲ್ಲಿ ಬ್ರಹ್ಮ ಕತ್ತಲೆಯಾಗಿ ಆವರಿಸಿದೆ,  ಅಂದರೆ ಅಲ್ಲಿ ದುಃಖ ಕಷ್ಟ ಪಶ್ಚಾತಾಪಗಳ ರೂಪ ಧರಿಸಿದೆ. ನರಕದ ಅನುಭವ ಜೀವಿಯನ್ನು ಬ್ರಹ್ಮದ ಮತ್ತೊಂದು ರೂಪವನ್ನು ಅರಿಯುವಂತೆ ಮಾಡುತ್ತದೆ .

ಆದರೆ ಈಗ ನಾನಿರುವ ಈ  ಲೋಕದ ವಿಷಯಕ್ಕೆ ಬರುವಾಗ, ಸ್ವರ್ಗ ಅಂದುಕೊಳ್ಳುವದಾದರೆ ಅದೇ ಬ್ರಹ್ಮ ಯಾವ ಸ್ವರೂಪದಲ್ಲಿ ಇರುತ್ತದೆ? . ಬ್ರಹ್ಮ ಪೂರ್ಣ ಬ್ರಹ್ಮಾಂಡವನ್ನೆ ಆವರಿಸಿದೆ ಅನ್ನುವಾಗ ಅದು ಸ್ವರ್ಗವನ್ನು ಬಿಡುವದಿಲ್ಲ .

ಥಟ್ ! ಅಂತ ಹೊಳೆದುಬಿಟ್ಟಿತು !
ಬ್ರ‌ಹ್ಮ ಈ ಲೋಕದಲ್ಲಿ  ಆನಂದದ ಸ್ವರೂಪವನ್ನು ಪಡೆದಿದೆ . ಆನಂದರೂಪಿಯಾಗಿ ಸುಖದ ರೂಪದಲ್ಲಿ ಬ್ರಹ್ಮ ಪೂರ್ಣಸ್ವರ್ಗವನ್ನೆ ಆವರಿಸಿದೆ . ಅದು ಹೊಳೆಯುತ್ತಲೆ ಎಲ್ಲವೂ ನಿಚ್ಛಳವಾಯಿತು. ನಾನು ಇಲ್ಲಿ ಆನಂದದ ಅನುಭವ ಪಡೆಯಬೇಕು ಸುಖದ ಭಾವದ ತುಟ್ಟತುದಿಯನ್ನು ತಲುಪಬೇಕು

ಆನಂದದ ಅನುಭವ ಅಂದರೆ ಹೇಗೆ ? ಪ್ರಶ್ನೆ ನನ್ನ ಮನವನ್ನು ಹೊಕ್ಕಿತು.

ಇಲ್ಲಿಯ ಗಿಡಮರಗಳಾಗಲಿ ಹೂವು ಹಕ್ಕಿಗಳಾಗಲಿ ಮಾನನಿ ಮದಿರೆಯಾಗಲು ನನ್ನ ಮನಸಿಗೆ ಸುಖವನ್ನಾಗಲಿ ಆನಂದದ ಅನುಭವವನ್ನಾಗಲಿ ತರುತ್ತಿಲ್ಲ . ಎಲ್ಲರೂ ಪಡುವ ಮಟ್ಟದಲ್ಲಿ ನನಗೆ ಆನಂದವನ್ನು ಅನುಭವಿಸಲು ಸಾದ್ಯವಾಗುತ್ತಿಲ್ಲ . ನನಗೆ ಹೊಂದುವ , ಮನಸಿಗೆ , ಆತ್ಮಕ್ಕೆ ಅರ್ಥವಾಗುವ ಸಂತಸ, ಅಂತಹ ಆತ್ಮಸಂದಾನಕಾರಕವಾದ ಆನಂದವನ್ನು ಸುಖವನ್ನು ನಾನು ಅನುಭವಿಸಬಾರದೇಕೆ.

ಕಣ್ಣುಮುಚ್ಚಿಕುಳಿತಂತೆ ನನ್ನ ಯೋಚನೆ ಸಾಗಿತ್ತು. ಅಂತಹ ಆನಂದ ಎಲ್ಲಿಯೋ ಅವಿತಿರಲು ಸಾದ್ಯವಿಲ್ಲ. ಆನಂದವು ಇಲ್ಲಿರುವ ಹೂಗಳಲ್ಲಿ ಹಕ್ಕಿ ಪಕ್ಷಿಗಳಲ್ಲಿ ನೀರಿನಲ್ಲಿ ಸುತ್ತಲಿನ ಗಾಳಿಯಲ್ಲಿ ಮಾನಿನಿ ಮದಿರೆಯಲ್ಲಿ ಎಲ್ಲಡೆಯೂ ಹಾಸುಹೊಕ್ಕಾಗಿ ಸೇರಿಹೋಗಿದೆ. ಅಂತಹ ಆನಂದವನ್ನು ನಾನು ಗುರುತಿಸಲು ಪ್ರಯತ್ನಿಸುತ್ತಿಲ್ಲ. ಎಲ್ಲ ಅಡೆತಡೆಗಳನ್ನು ದಾಟಿ ಅಂತಹ ಆನಂದದಲ್ಲಿ ಬೆರೆಯಬೇಕು ಅನ್ನಿಸಿತು.

 ಕ್ರಮೇಣ ಎಲ್ಲ ಯೋಚನೆಗಳು ಶೂನ್ಯವಾಯಿತು. ಮನದಲ್ಲಿ ಯಾವ ಯೋಚನೆ ತರ್ಕ ಪ್ರಶ್ನೆಗಳಿಲ್ಲದ. ಯಾವುದೇ ಭಾವ ಸಂಘರ್ಷವಿಲ್ಲದ  ಸ್ಥಿತಿಯೊಂದು ರೋಪಗೊಳ್ಳುತ್ತ ಹೋಯಿತು.

ಸುತ್ತಲಿನ ಗಿಡಮರಗಳು ನೀರಿನ ಕೊಳ ಅದರಲ್ಲಿನ ನೀರು , ನೀರಿನಲ್ಲಿ ಅರಳಿನಿಂತಿರುವ ಕೆಂದಾವರೆ . ನಾನು ಕುಳಿತ್ತಿದ್ದ ಕಲ್ಲಿನ ಪಾವಟಿಗೆಗಳು. ಮೇಲಿನ ಶುಭ್ರ ಆಕಾಶ ಸುಂದರವಾದ ಬೆಳದಿಂಗಳ ಬೆಳಕು. ಸದಾ ಸುಂದರ ಹಾಗು ಹಿತಕರ ಅನುಭವ ನೀಡುತ್ತಿರುವ ಮಂದಾನಿಲ. ಇಲ್ಲಿ ನೆಲೆಸಿರುವ ಪ್ರಿಯರಾದ ಆತ್ಮಸ್ವರೂಪಿ ಜೀವಿಗಳು ಸೇರಿದಂತೆ ಇಲ್ಲಿಯ ಪ್ರತಿ ಅಣುವು ಆನಂದಸ್ವರೂಪಿಯಾಗಿ ಗೋಚರಿಸಿತು.

ಅಂತಹ ಆನಂದ ಸ್ವರೂಪಿಯಾದ ಸ್ವರ್ಗದ ಪ್ರತೀ ಅಣುವು ತನ್ನ ಎದುರಿನ ಅಣುವಿನಲ್ಲಿ ಇರಬಹುದಾದ ಆನಂದವನ್ನು ಉದ್ರೇಕಿಸುತ್ತಿತ್ತು. ಅಂತಹ ಆನಂದದ ಸುಖ ನನ್ನೊಳಗೆ ನನ್ನ ಹೃದಯದೊಳಗೆ ಕಣ್ಣಿನೊಳಗೆ  ದೇಹದೊಳಗೆ ಪ್ರವೇಶಿಸುತ್ತ ಇರುವಂತೆ ಅಂತಹ ಆನಂದ ನಿಧಾನವಾಗಿ ನನ್ನ ಆತ್ಮವನ್ನು ಆಕ್ರಮಿಸಿತು. ನನ್ನ ಆತ್ಮವೂ ಆನಂದ ಸ್ವರೂಪಿ ಅನ್ನುವ ಉನ್ನತ ಸ್ಥಿತಿಯನ್ನು ತಲುಪಿತು..

ನನ್ನ ದೇಹದ ಅಣುಅಣುವು ಆನಂದ ಸ್ವರೂಪಿ ಅನ್ನಿಸಿತು. ದೇಹ ಮನಸ್ಸು ಹೃದಯ ಆತ್ಮ  ಎಲ್ಲಡೆಯೂ ವ್ಯಾಪಿಸಿದ್ದ ಆನಂದವು ಏಕಿಭವಿಸಿ ಎಲ್ಲವೂ ಆನಂದದಲ್ಲಿ ಲೀನವಾಯಿತು. ಅಂತಹ ಆನಂದದ ಭಾವಗಳು ಸುಖಸ್ವರೂಪಗಳು ಹೊರಗಿನಿಂದ ನನ್ನನ್ನು ಪ್ರವೇಶಿಸಿ , ದ್ವಿಗುಣಗೊಂಡು , ತ್ರಿಗುಣಗೊಂಡು ಮತ್ತೆ ಹೊರಹೋಗುತ್ತಿತ್ತು. ಹಾಗಾಗಿ ಸುತ್ತಲಿನ ಆನಂದ ಮತ್ತೆ ಜಾಸ್ತಿಯಾಗುತ್ತಿತ್ತು. ಆರೀತಿ ಹೊರಗೆ ಜಾಸ್ತಿಯಾದ ಆನಂದ ಸುಖದ ಭಾವಗಳು ಅಂತಹ ಸುಖದ ಭಾವದ ಅಲೆಗಳು ಮತ್ತೆ ನನ್ನನ್ನು ಪ್ರವೇಶಿಸಿ ದ್ವಿಗುಣಗೊಳ್ಳುತ್ತಿತ್ತು. ಹೀಗೊಂದು ಸುಖದ ಆನಂದದ ಅಲೆಗಳ ಸತತ ಹರಿವಿನ ಚಕ್ರ ನನ್ನ ಹಾಗು ಸುತ್ತಲಿನ ಪ್ರಕೃತಿಯ ನಡುವೆ ಏರ್ಪಟ್ಟಿತ್ತು.

ಇಂತಹ ಆನಂದವನ್ನು  ಅನುಭವಿಸಲು ಕಾಲದ ಮಿತಿಯೂ ಇರಲಿಲ್ಲ. ಇಂತಹ ಆನಂದ ಸಂತೋಷಗಳು ಅನುಭವಿಸಲು ಪ್ರಮಾಣದ ಮಿತಿಯು ಇರಲಿಲ್ಲ .

ನಾನೀಗ ಕಳೆದುಹೋಗುತ್ತಲಿದ್ದೆ.

ಸುತ್ತಲಿನ ಆನಂದ ನನ್ನೊಳಗೆ ಐಕ್ಯವಾದಂತೆ,  ’ನಾನು’  ಸುತ್ತಲಿನ ಆನಂದ ಸ್ವರೂಪಿ ಪ್ರಕೃತಿಯಲ್ಲಿ  ಕರಗಿಹೋಗುತ್ತ ಹೊರಗಿನ ಆನಂದ ಸ್ವರೂಪಿ ಬ್ರಹ್ಮ ನನ್ನೊಳಗಿನ ಆನಂದ ಸ್ವರೂಪಿ ಬ್ರಹ್ಮ ಒಂದರ ಒಳಗೊಂದು ಬೆರೆಯುತ್ತ ,  ಏಕರೂಪಿ ಆನಂದ ಸ್ವರೂಪ ತಾಳುತ್ತಲಿರುವಂತೆ  ಕಾಲ ಶೂನ್ಯನಾಗಿ ಕುಳಿತುಬಿಟ್ಟೆ.  

 

…..

ಮುಗಿಯಿತು.

 

Comments

Submitted by nageshamysore Mon, 06/01/2015 - 01:08

ಅಂತ್ಯ ತಾರ್ಕಿಕವಾಗಿ ಚೆನ್ನಾಗಿ ಮೂಡಿಬಂದಿದೆ. ಆಯಾ ಲೋಕಗಳಲ್ಲಿನ ಭಾವಗಳಲ್ಲಿಯೆ ಅಲ್ಲಲ್ಲಿನ ಸಾರ್ಥಕ್ಯವನ್ನು ಹುಡುಕಬೇಕೆನ್ನುವ ನೀತಿಯ ಜತೆಗೆ ಅಡ್ಡಿಯಾಗಿ ಕಾಡುವ ಬೇಡದನ್ನು ವರ್ಜಿಸುವ ಮೂಲಕ ಬೇಕಿದ್ದನ್ನು ಪಡೆಯುವ ಹಾದಿ ಸುಗಮವಾಗುತ್ತದೆಯೆನ್ನುವುದು ಸಹ ಕುತೂಹಲಕಾರಿಯಾಗಿದೆ. ಆ ಮೂಲಕ ನೈಜ ಹಾದಿ ಆಯಾಚಿತವಾಗಿ ತೆರೆದುಕೊಳ್ಳುವ ಬಗೆ ಕೂಡ ಸೊಗಸಾಗಿ ಮೂಡಿಬಂದಿದೆ. ಒಟ್ಟಾರೆ ಭೂಲೋಕ, ನರಕ, ಸ್ವರ್ಗಗಳ ಕಲ್ಪನೆಯ ಪ್ರಚಲಿತ ರೂಪವನ್ನು ಅಲೌಕಿಕ ಪರಿಧಿಯ ಜಿಜ್ಞಾಸೆಗಳ ಜತೆ ಸಮೀಕರಿಸಿ ಬಡಿಸಿದ ರಸದೌತಣವೆನ್ನಬಹುದು. ವಸ್ತು ಕಲ್ಪನೆಯ ವೈಶಿಷ್ಠ್ಯ ಸರಣಿ ಕಥೆಯ ಮತ್ತೊಂದು ಹೈಲೈಟ್ ! ಇದೆಲ್ಲದರ ನಳಪಾಕ ಬಡಿಸಿದ ಪಾರ್ಥರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು :-)

Submitted by partha1059 Tue, 06/02/2015 - 10:35

In reply to by nageshamysore

ವಂದನೆಗಳು ತಮ್ಮ ಧನ್ಯವಾದಕ್ಕೆ
ಇಲ್ಲಿ ವಸ್ತುವಷ್ಟೆ ಮುಖ್ಯವಾಗಿಟ್ಟಿ ಉಳಿದ ತರ್ಕವನ್ನೆಲ್ಲ ಹಿಂದಿಟ್ಟು ಬರೆದ ಕತೆ , ಇಷ್ಟವಾಗಿದ್ದರೆ ಸಂತಸ

ಪಾರ್ಥಸಾರಥಿ

Submitted by H A Patil 1 Mon, 06/01/2015 - 08:46

ಪಾರ್ಥಸಾರಥಿಯವರಿಗೆ ವಂದನೆಗಳು
ಅಲೋಕದ ಪಯಣ ಓದುಗನನ್ನು ಚಿಂತನೆಗೆ ಹಚ್ಚುತ್ತ ನಮ್ಮ ಜೀವನದ ನಂಬಿಕೆ ಅಚಾರಗಳ ಕುರಿತು ಯೋಚಿಸುವಂತೆ ಮಾಡಿದೆ, ನಮ್ಮ ದೇಶದ ಧಾರ್ಮಿಕ ನಂಬಿಕೆಗಳನ್ನು ನವಿರಾಗಿ ಬಿಡಿಸಿಡುತ್ತ ಸಾಗಿದ್ದೀರಿ ಸಮಸ್ತರ ಭಾವನೆಗಳಿಗೆ ಅಕ್ಚರರೂಪ ನೀಡುತ್ತಿದ್ದೀರಿ, ನಿಮ್ಮ ಬರಹದ ಕಂತುಗಳನ್ನು ಓದಿ ಸಂತಸದ ಜೊತೆಗೆ ಹಗುರಾದ ಮನಸ್ತಿತಿಯ ಭಾವನೆ ಬರುತ್ತಿದೆ ಧನ್ಯವಾದಗಳು.

Submitted by partha1059 Tue, 06/02/2015 - 10:39

In reply to by H A Patil 1

ನಮಸ್ಕಾರ ಪಾಟೀಲರಿಗೆ
ಎಂದಿನ ಹಾಗೆ ನಿಮ್ಮ ವಿಮರ್ಷೆ ಓದಲು ಖುಷಿ ಕೊಡುತ್ತದೆ, ತೂಕವಿಟ್ಟು ಆಯ್ದಪದಗಳ ಮೂಲಕ, ಅಭಿಪ್ರಾಯವನ್ನು ಸ್ವಷ್ಟವಾಗಿ ಹೇಳುತ್ತ, ಕತೆಯ ಅಂತರಾಳವನ್ನು ನಿರೂಪಿಸುವಿರಿ, ಕಡಿಮೆ ವಾಕ್ಯಗಳಲ್ಲಿ :‍)
ಧನ್ಯವಾದಗಳು
ಪಾರ್ಥಸಾರತಿ

Submitted by kavinagaraj Mon, 06/01/2015 - 17:00

11,12 ಮತ್ತು 13ರ ಕಂತುಗಳನ್ನು ಒಟ್ಟಿಗೇ ಓದಿದೆ. ಆನಂದಾನುಭೂತಿ ಪರಮವೆಂದು ನಿಮ್ಮ ಕಥೆ ಸಾರಿದೆ. ಒಳ್ಳೆಯ ಪ್ರಯತ್ನಕ್ಕೆ ಅಭಿನಂದನೆಗಳು, ಪಾರ್ಥರೇ.

Submitted by partha1059 Tue, 06/02/2015 - 10:42

In reply to by kavinagaraj

ಆನಂದಾನುಭೂತಿ ಪರಮವೆಂದು ನಿಮ್ಮ ಕಥೆ ಸಾರಿದೆ

ಅಲ್ಲವೆ ಸಾರ್, ಯಾವುದೆ ದೈವ ಸಾಕ್ಷತ್ಕಾರದ, ಮೋಕ್ಷ ಅಭಿಲಾಶೆಯ, ಜೀವನದ ಸಾಕ್ಷತ್ಕಾರದ ಅಂತಿಮ ಗುರಿ ಆನಂದಾನುಭೂತಿಯೆ ಅಲ್ಲವೇ.
ಕತೆಯ ಸಾರ್ಥಕ್ಯದ ಬಗ್ಗೆ ಗೊತ್ತಿಲ್ಲ, ಲೋಪಗಳಿದ್ದಲ್ಲಿ ತಿಳಿಸಿದರೆ ತಿದ್ದಿಕೊಳ್ಳಬಹುದು,
ವಿಶ್ವಾಸಗಳೊಡನೆ
ಪಾರ್ಥಸಾರಥಿ

Submitted by smurthygr Tue, 06/02/2015 - 19:10

ಉತ್ತಮ ಅಂತ್ಯ. ಮೊದಲಿನ ವಿಷಯಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಕಲ್ಪಿಸಿಕೊಂಡರೂ ಬಹುಶಃ ಕೊನೆ ಹೀಗೇ ಇದ್ದರಷ್ಟೇ ಎಲ್ಲವೂ ತಾಳೆಯಾಗಲು ಸಾಧ್ಯ ಅನಿಸುತ್ತೆ.

Submitted by partha1059 Thu, 06/04/2015 - 18:36

In reply to by smurthygr

ತಮ್ಮ ಮೆಚ್ಚುಗೆ ಹಾಗು ಅಭಿಪ್ರಾಯಕ್ಕೆ ವಂದನೆಗಳು, ಹಾಗೆ ಕತೆಯನ್ನು ಓದಿ ಪ್ರೋತ್ಸಾಹ ನೀಡಿರುವದಕ್ಕೆ ಸಹ ಮತ್ತೊಮ್ಮೆ ವಂದನೆಗಳು
:ಪಾರ್ಥಸಾರಥಿ