ಅಲೋಕ : ಒಂದು ಹಿನ್ನೋಟ

ಅಲೋಕ : ಒಂದು ಹಿನ್ನೋಟ

ಅಲೋಕ : ಒಂದು ಹಿನ್ನೋಟ
ಅಲೋಕ ಕತೆಯಂತಹ ಒಂದು ವಸ್ತು ಹೊಳೆದಾಗ ಬಹಳ ದಿನಗಳಿಂದ ಕತೆ ಬರೆಯದ ಮನಸಿಗೆ, ಬರೆಯಬೇಕೆಂಬ ಒತ್ತಡ ಉಂಟಾಯಿತು. ಕತೆ ಪ್ರಾರಂಬಿಸಿದಾಗಲು, ತಾರ್ಕಿಕ ಅಂತ್ಯದ ಬಗ್ಗೆ ಅಸ್ವಷ್ಟತೆ ಇತ್ತು. ಒಂದೆರಡು ಘಟನೆಗಳನ್ನು ನಿರೂಪಿಸುವಾಗ ಕತೆಗೆ ಒಂದು ಸ್ವರೂಪ ಗೋಚರಿಸಿತು.

ನರಕವಾದರು ಸರಿ ಒಂದಿಷ್ಟು ಮನ ಒಪ್ಪಿ ಕೊಳ್ಳುತ್ತೆ ಆದರೆ ಸ್ವರ್ಗವೆಂದರೆ ಏನು ಅನ್ನುವಾಗ ಗೊಂದಲ ಕಾಡುತ್ತೆ. ನಾನು ನೀವು ಓದಿ ತಿಳಿದಿರುವದೆಲ್ಲ ಗಂಡಸರ ಕಲ್ಪಿತ ಸ್ವರ್ಗ. ಅಲ್ಲಿನ ಅಮೋದ ಪ್ರಮೋದಗಳು, ಸುಖ ಸಂಚಾರ, ದೇವತೆಗಳು ಸ್ವೀಕರಿಸುವ ಮಧು, ರಂಬೆ ಊರ್ವಶಿ ಮೇನಕೆ ತಿಲೋತ್ತಮೆ ಎನ್ನುವ ಇಂದ್ರನ ಸಖಿಯರು. ಮುಂತಾದ ಸಂಭ್ರಮಗಳೆಲ್ಲ ಗಂಡಸರ ಕಲ್ಪನೆಯಾಯಿತು. ಆದರೆ ನಿಜವಾದ ಸ್ವರ್ಗ ಎಂದರೇನು ? ಎಂದುಯೋಚಿಸುವಾಗ ಯಾರಿಗೂ ಸರಿಯಾಗಿ ಹೊಳೆಯದು.

ಸ್ವರ್ಗ ಎನ್ನುವುದು ಗಂಡಸರ ಮಾತ್ರ ಇರುವ ಸ್ಥಳವಲ್ಲ. ಸಾವಿನ ನಂತರ ಹೆಂಗಸರು ಸಹಿತ ಸ್ವರ್ಗಕ್ಕೆ ಹೋಗುವರು ಅನ್ನುವಾಗ ಹೆಣ್ಣಿನ ದೃಷ್ಟಿಯಲ್ಲಿ ಸ್ವರ್ಗ ಎಂದರೇನು. ಯಾವ ಪುಸ್ತಕದಲ್ಲೂ ವರ್ಣನೆ ಸಿಗುವದಿಲ್ಲ. ಹಾಗಾಗಿ ನಾನು ಒಂದಿಬ್ಬರು ಸ್ತ್ರೀಯರಲ್ಲು ಪ್ರಸ್ತಾಪ ಮಾಡಿ ನೋಡಿದೆ, ಹೆಂಗಸರ ಸ್ವರ್ಗ ಹೇಗಿರುತ್ತೆ ಎಂದು , ಅವರಲ್ಲೂ ಸ್ವಷ್ಟವಾದ ಕಲ್ಪನೆಯಿಲ್ಲ !!! . ಅವರು ಸಹ ಇದೇ ಸ್ವರ್ಗವನ್ನೆ ವರ್ಣಿಸುತ್ತಾರೆ ರಂಬೆ ತಿಲೋತ್ತಮೆ ಎಂದು !!

ಇನ್ನು ನರಕವಾದರು ಅಷ್ಟೆ ಎಲ್ಲರಿಗೂ ಒಂದೆ ಶಿಕ್ಷೆಯನ್ನು ಕೊಡುವದಾಗುವದಿಲ್ಲ. ಅವರವರ ಮನೋಧರ್ಮದ ಮೇಲೆ ಬದಲಾಗಬಹುದು. ಇನ್ನೂ ಇಲ್ಲಿ ಭೂಮಿಯಲ್ಲಿನ ನಮ್ಮ ತಪ್ಪುಗಳಿಗೆ , ಕರ್ಮಗಳಿಗೆ ನರಕದಲ್ಲಿ ಶಿಕ್ಷೆ ಎನ್ನುವದಾದರೆ ಅದು ಅರ್ಥಹೀನ ಅನ್ನಿಸುತ್ತೆ. ಹಾಗಾಗಿ ನಾನು ನರಕ, ಹಾಗು ಸ್ವರ್ಗವನ್ನು ನಮ್ಮನ್ನು ಪರಿಪೂರ್ಣತೆಯತ್ತ , ಮೋಕ್ಷದತ್ತ ಕರೆದೊಯ್ಯುವ ನಡುವಿನ ಲೋಕಗಳು ಎಂದೆ ಭಾವಿಸಿದೆ. ನಮ್ಮ ಅಪೂರ್ಣವಾದ ಅನುಭವಗಳು, ಸ್ಪಂದನೆಗಳನ್ನು ನರಕ ಎನ್ನುವ ಲೋಕ ಪೂರ್ಣತೆಯ ಭಾವನೆ ಕೊಡುವುದು ಎಂದು ಕಲ್ಪಿಸಿದೆ.
ಹಾಗೆನ್ನುವಾಗ, ನಮ್ಮ ಹಳೆಯ ನಂಭಿಕೆಗಳನ್ನು ಅಂದರೆ ಘೋರ ಶಿಕ್ಷೆಗಳನ್ನು ಅಂತಹ ಕಲ್ಪನೆಗಳನ್ನು ಸಹ ತಪ್ಪು ಎನ್ನಲಾಗದು ಅನ್ನಿಸಿತು.

ಕತೆಯ ಕೆಲವು ಮಜಲುಗಳಲ್ಲಿ ಓದುಗರಿಗೆ ಹೇಗೆ ಅನುಮಾನ ಕಾಡಿತ್ತೋ ಹಾಗೆ ನನ್ನಲ್ಲು ಅನುಮಾನ ಕಾಡುತ್ತಿತ್ತು, ಹಾಗೆ ಅದಕ್ಕೆ ಸಮಾದಾನವನ್ನು ನಾನೆ ಹುಡಿಕಿಕೊಂಡೆ. ಮತ್ತೆ ಕೆಲವು ಅನುಮಾನಗಳಿಗೆ, ಓದುವವರೆ ಉತ್ತರ ಕಲ್ಪಿಸಿಕೊಂಡಿದ್ದು ನನಗೆ ಅನುಕೂಲವಾಯಿತು.

ಉದಾಹರಣೆ: ನರಕದಲ್ಲಿ ಸದಾ ತಾನಾಗೆ ಕಡಿಮೆ ಹಾಗು ಹೆಚ್ಚುತ್ತಿದ್ದ ಬೆಳಕಿನ ವ್ಯೆತ್ಯಾಸ. ಅದನ್ನು ಬರೆಯುವಾಗ ನನ್ನಲ್ಲಿ ಯಾವುದೆ ಕಲ್ಪನೆ ಇರಲಿಲ್ಲ. ನನಗೆ ಅನ್ನಿಸಿದ್ದು, ಮನದಲ್ಲಿ ಅಜ್ಞಾನ ಇದ್ದಾಗ ಕತ್ತಲೆಯು, ನಂತರ ಮನಸಿಗೆ ಭೋದನೆಯಾದಗ ಬೆಳಕು ಇರುವದೆಂದು ಕಲ್ಪಿಸಿಕೊಂಡಿದ್ದೆ. ಆದರೆ ಭೂಮಿಯಲ್ಲಿನ ಹಗಲು ರಾತ್ರಿಗಳ ಪರಿಣಾಮ ಇರಬಹುದೆಂದು ಒಬ್ಬರು ಅನ್ನುವಾಗ ಸುಮ್ಮನಾಗಿಬಿಟ್ಟೆ.

ಹಾಗೆ ನಮ್ಮ ಇಂದ್ರೀಯಗಳ ಅನುಪಸ್ಥಿತಿಯಲ್ಲಿ ಸಹ ಬೆಳಕು ಕತ್ತಲೆಯ , ಸ್ಪರ್ಶದ , ಶಭ್ದದ ಅನುಭವದ ಬಗ್ಗೆ ಮಾತನಾಡುತ್ತ ನಾವೆಲ್ಲ ನಿದ್ದೆಮಾಡುತ್ತ ಕನಸು ಕಾಣುವಾಗ, ಯಾವ ಇಂದ್ರಿಯಗಳು ಅಂದರೆ ಕಣ್ಣು, ಕಿವಿ, ನಾಲಿಗೆ ಕೆಲಸ ಮಾಡದಿರುವಾಗಲು ಸಹ ಬೆಳಕಿನ, ಶಬ್ಧದ ಸ್ಪರ್ಶದ ಅನುಭವ ಆಗುತ್ತಲ್ಲ ಅನ್ನುವಾಗ ನಿಜ ಅನ್ನಿಸಿತು, ಆದರೆ ಹಾಗಾಗಿ ಕತೆಯನ್ನು ನಿದ್ದೆಯಲ್ಲಿನ ಕನಸು ಇರಬಹುದೆಂದೆ ಕಡೆಯಲ್ಲಿ ನಿದ್ದೆಯಿಂದ ಎಚ್ಚರವಾಗಿ ಎಲ್ಲ ಕನಸು ಎಂದು ಭ್ರಮಿಸುವನೆಂದು ಅಂತ್ಯವನ್ನು ಮತ್ತೊಬ್ಬರು ಹೇಳುವಾಗ ನನಗೂ ಆಶ್ಚರ್ಯ , ಕತೆಗೆ ಹೀಗೆ ನಾನಾ ಅಂತ್ಯವಿರಬಹುದೆಂದು.

ಆದರೆ ಕತೆ ಪ್ರಾರಂಬಿಸಿದಾಗ ಇದು ಕನಸಾಗಿರಲಿಲ್ಲ, ಹಾಗಾಗಿ ಯಾವ ಕೊನೆಯನ್ನು ತೆಗೆದುಕೊಳ್ಳದೆ , ನಾನು ಮೊದಲೆ ಬರೆದಿದ್ದ ಅಂತ್ಯವನ್ನೆ ಉಳಿಸಿಕೊಂಡಿದ್ದೇನೆ. ಇದೆಲ್ಲ ಕನಸಿನಂತೆ ಕಂಡರು ನಿಜ.

ಮನುಷ್ಯ ತನ್ನ ಬಳಿ ಇಲ್ಲದಕ್ಕೆ ಹೋರಾಟ ನಡೆಸುತ್ತ ಇರುತ್ತಾನೆ ಅದು ಅನಗತ್ಯವಾದರು ಸಹ. ಅದು ಅವನ ಗುಣ. ಇಲ್ಲಿ ಇರುವ ಮಧುರ ಸಂಭಂದಗಳು, ಪ್ರೀತಿ ವಾತ್ಸಲ್ಯದ ಅನುಭೂತಿ, ಎಲ್ಲವನ್ನು ತೊರೆದು ಮಾಯೆಗೆ ವಿರುದ್ದವಾಗಿ ಹೋರಾಡುತ್ತಾನೆ ಆ ಮೂಲಕ ತಾನು ಮೋಕ್ಷ ಪಡೆಯುವೆನೆಂದು ತಿಳಿಯುತ್ತಾನೆ. ಇಲ್ಲಿ ಎಲ್ಲ ಸುಖವನ್ನು ತೊರೆದು ಯಾವ ಸ್ವರ್ಗಕ್ಕಾಗಿ ಜೀವನದಲ್ಲಿ ಕಷ್ಟ ಪಡುವನೋ, ಅಂತಹ ಸ್ವರ್ಗದಲ್ಲಿ ಮತ್ತೆ ಭೂಮಿಯ ಸುಖಗಳನ್ನೆ ಕಲ್ಪಿಸಿಕೊಳ್ಳುತ್ತಾನೆ!! .

ಎಲ್ಲರ ವಿಮರ್ಶೆಯನ್ನು ತೆಗೆದುಕೊಳ್ಳುತ್ತಾ ಸಾಗುವಾಗಲು ಕತೆ ಮಾತ್ರ ತನ್ನ ದಾರಿ ಬದಲಿಸದೆ, ನಾನು ಮೊದಲು ಹಾಕಿದ್ದ ಮಾರ್ಗದಲ್ಲಿಯೆ ಸಾಗಿತ್ತು. ’ಆನಂದವೆ ಪರಮ ಅನುಭವವೆ’ ಎಂದು ಕವಿನಾಗರಾಜ್ ಸರ್ ಪ್ರಶ್ನಿಸುವಾಗಲು, ಮನಸಿಗೆ ಅದೇ ತೋರಿತು. ದೈವಸಾಕ್ಷತ್ಕಾರವಾಗಲಿ, ಮೋಕ್ಷವಾಗಲಿ, ಅಥವ ಜೀವನ ಸಾಕ್ಷತ್ಕಾರವಾಗಲಿ ಕಡೆಯಲ್ಲಿ ಅನಂದಾನುಭೂತಿಯೆ ಪರಮ ಅನ್ನುವುದು ನಿಜ ಅನ್ನಿಸಿತು. ಹಾಗಾಗಿ ಕಡೆಯ ಪುಟ ಆನಂದ ಬ್ರಹ್ಮ ಎಂದೇ ಉಳಿಸಿದೆ
ಹೀಗೆ ಕತೆಯಲ್ಲಿ ವಸ್ತುವನ್ನಷ್ಟೆ ಮುಖ್ಯವಾಗಿಟ್ಟು ಬರೆದ ಕಲ್ಪನೆಯ ಕತೆ ಇದು .

Comments

Submitted by nageshamysore Tue, 06/02/2015 - 20:00

ಪಾರ್ಥರೆ ತರ್ಕಾತರ್ಕದ ಮಾತಿರಲಿ, ಈ ಕಥಾನಕದ ಕಲ್ಪನೆಯೆ ಒಂದು ಅದ್ಭುತ ವಿಷಯ. ಬ್ರಹ್ಮಾನಂದದ ಅಂತಿಮ ಗುರಿಯ ಕುರಿತು ಸಾಕಷ್ಟು ಕಡೆ ಓದಬಹುದಾದರು ಅದನ್ನು ಲೌಕಿಕದ ಭೂವಾಸದಿಂದ ಪಾರಮಾರ್ಥಿಕ ಸ್ತರದ ಸ್ವರ್ಗ, ನರಕದ ಜತೆ ಸಮೀಕರಿಸಿ ಒಂದು ಸಮಷ್ಟಿತ ಅನುಭವವಾಗಿ ಕಟ್ಟಿಕೊಟ್ಟದ್ದು ಈ ಸರಣಿಯ ಹಿರಿಮೆ. ಉದ್ದಕ್ಕು ಸರಳ ಭಾಷೆಯಲ್ಲಿ ಆಯಾ ಲೋಕದ ಸಾರ್ಥಕ್ಯದ ಪರಿಭಾಷೆಯಲ್ಲಿ ಅದರದೆ ವ್ಯಾಖ್ಯಾನ ಕೊಟ್ಟಿದ್ದು ಮತ್ತೊಂದು ಹೈಲೈಟು. ಅದೆಲ್ಲದರ ಹಿನ್ನಲೆಯಲ್ಲಿ ಕೆಲಸ ಮಾಡಿದ ಚಿಂತನೆಯನ್ನು ಈ ಬರಹದಲ್ಲಿ ಸೊಗಸಾಗಿ ಸಂಗ್ರಹಿಸಿದ್ದೀರಾ. ಒಟ್ಟಾರೆ, ಈ ಹಿನ್ನೋಟ ಕಥಾನಕಕ್ಕೊಂದು ಪೂರ್ಣ ರೂಪ ನೀಡಿದೆ ಎಂದೂ ಹೇಳಬಹುದು.

Submitted by lpitnal Wed, 06/03/2015 - 09:19

ಆತ್ಮೀಯ ಪಾರ್ಥ ಜಿ, ತಮ್ಮ ಹೊಳಹುಗಳಿಗೆ, ದ್ವಂದ್ವಗಳಿಗೆ, ಪರಿಕಲ್ಪನೆಗಳಿಗೆ, ಊಹೆಗಳಿಗೆ ತುಂಬ ಚನ್ನಾಗಿ ತೂಗಿ, ಅಳೆದು ವಿಷದ ಪಡಿಸಿದ್ದು ತಿಳಿಯಿತು. ತಮ್ಮ ಅದ್ಭುತ ಕಾವ್ಯ ಶೈಲಿಯ, ಸರಳ ನಿರೂಪಣೆ ಓದುಗರನ್ನು ಸೆಳೆದು ಸಂಪದವನ್ನು ಶ್ರೀಮಂತಗೊಳಿಸಿದ್ದು, ಸಂತಸ ಸಾಕಾರಗೊಳಿಸಿದ್ದಕ್ಕೆ ಅಭಿನಂದನೆಗಳು. ಇದೇ ರೀತಿ ತಮ್ಮ ಕಾವ್ಯ ಝರಿ ಹರಿಯುತ್ತಿರಲೆಂದು ತುಂಬು ಮನದ ಹಾರೈಕೆ ಸರ್. ವಂದನೆಗಳು.

Submitted by kavinagaraj Wed, 06/03/2015 - 15:09

ಅಭಿನಂದನೆಗಳು. ಮುಕ್ತ ವೈಚಾರಿಕತೆ, ಅಂತರಂಗದ ಕರೆಗೆ ಓಗೊಡುವುದೇ ಮುನ್ನಡೆಯುವುದು!