ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ ಪುಟ) -ಲಕ್ಷ್ಮೀಕಾಂತ ಇಟ್ನಾಳ
ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ ಪುಟ)
ಬೆಂಗಳೂರು ಏರ್ ಪೋರ್ಟನಲ್ಲಿರುವಾಗಲೇ ನನ್ನ ಮೋಬೈಲ್ಗೆ ಜೈಪುರ ಏರ್ಪೋರ್ಟಗೆ ಬರುವ ವಾಹನದ ನಂಬರು ಹಾಗೂ ಡ್ರೈವರ್ ಹೆಸರು, ಮೋಬೈಲ್ ನಂಬರುಗಳು ಬಂದಿದ್ದವು. ನಾವು ಜೈಪುರ ತಲುಪಿ ಹೊರಗೆ ಬರುತ್ತಲೇ ಅವನನ್ನು ಗುರುತಿಸುವುದು ತಡವಾಗಲಿಲ್ಲ. ಡ್ರೈವರ್ ಸರವನ್ ಸಿಂಗ್, ಚಟಪಟ ಮಾತಿನ, ಉತ್ತಮವೆನ್ನಿಸುವಷ್ಟು ಮಾಹಿತಿವಂತ ಪ್ರಾಮಾಣಿಕತೆಯ ಆತ್ಮೀಯ ಮಾತುಗಾರ ಎನಿಸಿತು. ಇಲ್ಲಿ ತಮ್ಮ ಕ್ಲೈಂಟ್ಗಳ ಬಗ್ಗೆ ಭಾರಿ ಕಾಳಜಿ ವಹಿಸುತ್ತಾರೆ ಡ್ರೈವರ್ಗಳು ಹಾಗೂ ಟ್ರಾವೆಲಿಂಗ್ ಎಜೆನ್ಸಿಗಳು. ಸರವನ್ ನಮಗೆ ಸೀದಾ ಹೋಟಲ್ಗೆ ಕರೆದೊಯ್ಯದೇ 'ಅಭೀ ಜ್ಯಾದಾ ದೇರ್ ಹೋಗಯಾ ಹೈ ಸರ್' ಹಮೇಂ ಇಧರ್ ಸೇ ಹೀ ಬಿರ್ಲಾ ಟೆಂಪಲ್ ಜಾನಾ ಹೋಗಾ, ನಹೀಂ ತೊ ಆಗೆ ಬಹುತ್ ದೇರ್ ಹೋಜಾಯೇಗಾ, ರೂಮ್ ತಕ್ ಜಾ ಕೆ ಆನೆಮೇಂ ದೀಡ್ ಯಾ ದೋ ಘಂಟಾ ನಿಕಲ್ ಹೀ ಜಾಯೇಗಾ, ಇಸ್ಸೆ ಬೆಹತರ್ ಹಮ್ ಸೈಟ್ ಸೀಯಿಂಗ್ ಕರನಾ ಹೀ ಅಚ್ಛಾ ಹೈ ಸರ್, ಬಾಕೀ ಆಪಕಾ ಮರ್ಜಿ, ಯೇ ಸಿರ್ಫ್ ಮೇರಾ ರಾಯ್ ಹೈ ಸರ್' (ಈಗಾಗಲೇ ಲೇಟ್ ಆಗಿದೆ ಸರ್ ನಾವು ಈಗಲೇ ಬಿರ್ಲಾ ಮಂದಿರಕ್ಕೆ ಹೋಗುವುದು ಒಳಿತು. ಏಕೆಂದರೆ ಬಹುತೇಕ ಅರಮನೆಗಳು, ಇಂಪಾರ್ಟಂಟ್ ಮಾನುಮೆಂಟ್ಗಳಿಗೆ ಪ್ರವೇಶ ಸಂಜೆ 5 ಗಂಟೆಗೆ ಕ್ಲೋಸ್ ಆಗುವುದರಿಂದ ತಮಗೆ ಇಲ್ಲೆಲ್ಲಾದರೂ ದಾರಿಯಲ್ಲಿ ರೀಫ್ರೆಶ್ ಮಾಡಿಸುತ್ತೇನೆ. ಸುಮ್ಮನೆ ಹೋಟಲ್ ವರೆಗೆ ಹೋಗಿ ಬರಲು ಒಂದ್ಒಂದೂವರೆ ತಾಸು ಹಿಡಿಯುವುದು, ಟೈಮ್ ವೇಸ್ಟ್ ಮಾಡುವುದರಲ್ಲಿ ಅರ್ಥವಿಲ್ಲವೆನಿಸುತ್ತದೆ ಎಂದ. ಇದು ನನ್ನ ಅಭಿಪ್ರಾಯ ಮಾತ್ರ, ಇಷ್ಟಕ್ಕೂ ತಾವು ಹೇಗೆ ಹೇಳುವರೋ ಹಾಗೆ ಸರ್.) ಎಂದು ನಮಗೆ ಆಪ್ಶನ್ ಕೊಟ್ಟ. ನಾವು ಅಲ್ಲಿಗೆ ಬೇಗ ತಲುಪಿದ್ದೇವೆ ಅಂದುಕೊಂಡರೂ ಆಗಲೇ ಮಧ್ಯಾಹ್ಬ ಸಮೀಪಿಸಿದ್ದು, ಅವನ ಆತಂಕಕ್ಕೆ ಕಾರಣವಾಗಿತ್ತು. ಅವರ ಪ್ರಕಾರ ನಾವು ಸಾಧ್ಯವಾದಷ್ಟು ಜೈಪುರವನ್ನು ಅಂದೇ ನೋಡಬೇಕಿತ್ತು. ತುಸು ಉಳಿದರೆ ಪ್ರವಾಸ ಮುಗಿಸಿ, ನಾವು ಇಲ್ಲಿದಂಲೇ ಮರಳುವದರಿಂದ ಅಂದಿನ ದಿ£ವೂ ಬಾಕಿ ಸ್ಥಳಗಳನ್ನು ನೋಡುವುದೆಂದು ನಮಗೂ ಕೂಡ ಮೊದಲೇ ತಿಳಿಸಿದ್ದರು. ಫ್ಲೈಟ್ ಎರಡು ತಾಸು ತಡವಾಗಿದ್ದು ತುಸು ಎಡವಟ್ಟಾಗಿತ್ತು .... ಈ ಫಾಗ್ ಸಮಸ್ಯೆಯಿಂದ....ನಿರ್ವಾಹವಿಲ್ಲದೇ 'ಹೂಂಂ' ಹೇಳಿದೆವು. ಅದೇ ಹೇಳಿದ್ದೆನಲ್ಲ, ಹತ್ತು ಪರ್ಸೆಂಟ್ ಅತ್ತಿತ್ತ.
ಮೊದಲು ಏರ್ ಪೋರ್ಟ್ನಿಂದ ಸಮೀಪವಿರುವ ಬಿರ್ಲಾ ಮಂದಿರದಿಂದ ನಮ್ಮ ಪ್ರವಾಸಕ್ಕೆ ನಾಂದಿಯಾಯಿತು. ತುಂಬ ಸುಂದರವಾದ ಮಂದಿರವಿದು. ಶುಭ್ರ ಶ್ವೇತ ಸಂಗಮರಮರ ಕಲ್ಲುಗಳಿಂದ ನಿರ್ಮಿಸಿದ ಮಂದಿರ ಒಳಪ್ರವೇಶವಾದ ಕೂಡಲೇ ತುಸು ಬಿಸಿಲಿನಿಂದ ಏಸಿ ಚೇಂಬರ್ಗೆ ಹೋದಂತಾಯಿತು. ಕಾಲುಗಳು ಜುಣುಗುಡುವಷ್ಟು ತಂಪು ಅಲ್ಲಿ ಒಳಗೆ... ಲಕ್ಷ್ಮೀನಾರಾಯಣ ಮಂದಿರ...ಒಳ್ಳೆಯ ಶಿಲ್ಪಕಲೆಯ ದರ್ಶನಭಾಗ್ಯ ಮುಂಜಾನೆಯಿಂದಲೇ ಪ್ರಾರಂಭವಾಯಿತು. ಇದೆಲ್ಲ ಈಗಿನ ಕಲಾವಂತಿಕೆ, ಇನ್ನೂ ನಾವು ನಮ್ಮ ಪ್ರಾಚೀನ ಕಲೆಯ ದರ್ಶನದ ಆನಂದವನ್ನು ಪಡೆಯುವವರಿದ್ದೆವು. ದೇವರ ದರ್ಶನಮಾಡಿಕೊಂಡು ಮಂದಿರದ ಹೊರಗೆ ಸುತ್ತಾಡಿದೆವು. ಈ ಸ್ಥಳವು ಇದ್ದುದರಲ್ಲಿಯೇ , ತುಸು ಎತ್ತರದ ಬೆಟ್ಟದಂತಹ ಸ್ಥಳದಲ್ಲಿ ನಿರ್ಮಿಸಿದೆ. ಹೊರಗೂ ತಂಗಾಳಿ ಆಹ್ಲಾದಕರವಾಗಿತ್ತು.
ಬಿರ್ಲಾ ಮಂದಿರ ನೋಡಿ, ಹೊರಬಂದೊಡನೆ, ರಾಜಸ್ಥಾನೀ ಫೋಕ್ ಡ್ರೆಸ್ನಲ್ಲಿ ಸಜಾಯಿಸಿ, ಆ ಸತರಂಗಿ ಡ್ರೆಸ್ಗಳನ್ನೆಲ್ಲಾ ತೊಡಿಸಿ, ಫೋಟೋ ತೆಗೆದು ಕೊಡುತ್ತಾರೆ. ಅದರ ಆ ಬೋರ್ಡ್ನ್ನು ನೋಡುತ್ತಲೇ, ಅದನ್ನೇ ಹುಡುಕುತ್ತಿರುವಂತೆ, ಆ ಗೂಡಿನಂತಹ ಮಳಿಗೆಯೆಡೆಗೆ, ಕರೆದೊಯ್ದುಬಿಟ್ಟವು ಈ ನನ್ನ ಕಾಲುಗಳು, ಅದರ ಬಗ್ಗೆ ವಿಚಾರಿಸುತ್ತಿರುವಾಗಲೇ, ಅದಕ್ಕೆ ತಗಲುವ ಸಮಯವನ್ನು ಕೊಡಲಾಗದಷ್ಟು ಲೇಟ್ ಆಗಿದ್ದರಿಂದ, ಬೇಗ ಹೊರಡಲು ಒತ್ತಾಯ ಮನೆಯವರಿಂದ. ನನಗೋ ರಾಜಸ್ಥಾನೀ ಧಿರಿಸಿನಲ್ಲಿ ಇವಳು, ಮಗಳು ಹೇಗೆ ಕಾಣುವರೋ ಎಂಬ ಕುತೂಹಲ!.. ಅವರ ಮಾತಿಗೊಪ್ಪಿ, ಮತ್ತೊಮ್ಮೆ ನೋಡಿದರಾಯಿತೆಂದು, ರಚ್ದೆ ಹಿಡಿದು ಕೀಳಲಾರದ ಕಾಲುಗಳಿಗೆ ಸಾಂತ್ವನಿಸಿ ದರ ದರ ಎಳೆದುಕೊಳ್ಳುತ್ತ, ಮುನ್ನಡೆಸಿಕೊಂಡು ಕಾರೆಡೆಗೆ ಬಂದೆ.
ಈಗ ನಮ್ಮ ಸವಾರಿ ಹಳೆಯ ಜೈಪುರ ಸಿಟಿಯತ್ತ ಹೊರಟಿತು. ಇದಕ್ಕೆ ಪಿಂಕ್ಸಿಟಿ (ಗುಲಾಬಿ ನಗರಿ) ಎನ್ನುವರು. ಇದರ ವಿಶೇಷತೆಯೆಂದರೆ ಬಹು ದೊಡ್ಡ ರಸ್ತೆಯ ಇಕ್ಕೆಲಗಳಲ್ಲಿ, ಸಂದು ಗೊಂದುಗಳಲ್ಲಿ, ಎಲ್ಲಾ ಕಟ್ಟಡಗಳು ಗುಲಾಬಿ ಬಣ್ಣದವು. ಇವೆಲ್ಲಾ ಗುಲಾಬಿ(ಪಿಂಕ್) ಬಣ್ಣ ಬಳಿದುಕೊಂಡಿರುವುದರಿಂದ ಈ ಹಳೆಯ ಜೈಪುರ ನಗರಕ್ಕೆ ಪಿಂಕ್ ಸಿಟಿ ಎಂಬ ಅನ್ವರ್ಥ ನಾಮ ಬಂದಿದ್ದು ತಿಳಿಯಿತಾದರೂ, ಅದಕ್ಕೆ ಕಾರಣ ಕೇಳುತ್ತಲೇ, ಸರವನ್ ಹೇಳಿದ, ಸಾವಿರದೆಂಟುನೂರಾ ಎಪ್ಪತ್ತೆಂಟ್ರಲ್ಲಿ ಬ್ರಿಟಿಶ್ ಪ್ರಿನ್ಸ್ ಆಫ್ ವೇಲ್ಸ್, ಅಲ್ಬರ್ಟ ಎಡ್ವರ್ಡ್ ಜೈಪುರಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಸ್ವಾಗತಕ್ಕಾಗಿ ಅದ್ದೂರಿಯಾಗಿ ಸಿಂಗರಿಸಲು ಈಗಿನಂತೆ ಯಥೇಚ್ಛ ಹೂಗಳು ಸುತ್ತಮುತ್ತ ಸಿಗುತ್ತಿರಲಿಲ್ಲ. ಅದಕ್ಕೇ ರಾಜಾ ಜಯಸಿಂಗ್ಜಿ ಮುಖ್ಯಬೀದಿಗಳ ಕಟ್ಟಡಗಳಿಗೆಲ್ಲಾ ಪಿಂಕ್(ಗುಲಾಬಿ) ಬಣ್ನ ಬಳಿದು ತಮ್ಮ ಗೌರವ ವ್ಯಕ್ತಪಡಿಸಿದರು. ಹೀಗಾಗಿ ಮುಂದೆ ಇದಕ್ಕೆ 'ಪಿಂಕಿ ಸಿಟಿ' ಎಂದೇ ಕರೆಯಲಾಯಿತು. ಆ ಬಣ್ಣದ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದು ಅಚ್ಚರಿಯೊಂದಿಗೆ ಖುಷಿಯೆನಿಸಿತು.
ಈ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲಾ ಕಟ್ಟಡಗಳೂ ಸರ್ಕಾರದ ಸೊತ್ತು, ಅವುಗಳಲ್ಲಿ ವಾಸ ಮಾಡುತ್ತಿರುವವರು, ವ್ಯಾಪಾರಿ ಜನಾಂಗ. ಟೆನಂಟ್ಗಳು, ..., ಮಾರುವ ಹಾಗೂ ಇಲ್ಲ, ಬಿಡುವ ಹಾಗೂ ಇಲ್ಲ, ಅದು ಸರ್ಕಾರದ ಸೊತ್ತಾದರೂ, ಮಹಾರಾಜರ ಕಾಲದಿಂದಲೂ ಇರುವುದರಿಂದ ಅವರನ್ನು ಒಕ್ಕಲೆಬ್ಬಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದರೆ ಯಾರಿಗೇ ಆಗಲಿ, ಕಟ್ಟಡಗಳನ್ನು ಹೊಸದಾಗಿ ಕಟ್ಟಲು ಅಲ್ಲಿ ಅನುಮತಿ ಇಲ್ಲ, ದುರಸ್ಥಿ ಮಾಡಬಹುದು, ಹೀಗೆ ಅವುಗಳು ಇನ್ನೂ ಇಂಟ್ಯಾಕ್ಟ್ ಆಗಿವೆ ಎನ್ನಲಡ್ಡಿಯಿಲ್ಲ......ಈ ಬಣ್ಣವನ್ನು ಮಾತ್ರ ಎಲ್ಲರೂ ಇದುವರೆಗೂ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ, ಇದು ಸುಮಾರು 5 ಕಿಮೀ ಸುತ್ತಳತೆಯ ಹಳೆಯ ಜೈಪುರ ನಗರ ಭಾಗ..
ಅನೇಕ ಮಾನ್ಯುಮೆಂಟ್ಸಗಳು, ಅರಮನೆಗಳು, ಹವೇಲಿಗಳು, ಮುಖ್ಯವಾಗಿ ಜಗತ್ಪಸಿದ್ಧ 'ಹವಾ ಮಹಲ್' ಮನಸೆಳೆವ ವಿನ್ಯಾಸದಿಂದ ನಿರ್ಮಿಸಲ್ಪಟ್ಟ ಪಿಂಕ್ ಮತ್ತು ಕೆಂಪು ಕಲ್ಲುಗಳ ಕಟ್ಟಡ ಇರುವುದು ಇಲ್ಲಿಯೇ 'ಪಿಂಕ್ ಸಿಟಿ'ಯಲ್ಲಿಯೇ. .. ಅಂತ:ಪುರ ರಾಣಿವಾಸಕ್ಕಾಗಿಯೇ ನಿರ್ಮಿಸಿದೆ ಈ 'ಜನಾನಾ'. ಇದರ ಇನ್ನೊಂದು ಹೆಸರು, 'ಪ್ಯಾಲೇಸ್ ಆಫ್ ವಿಂಡ್ಸ್' , ಸಿಟಿ ಪ್ಯಾಲೇಸ್ನ ಇನ್ನೊಂದು ಅಂಚಿನಿಂದ ಶುರುವಾಗಿ 'ಜನಾನಾ' (ಅಂತಪುರ)ದೆಡೆ ಸಾಗುತ್ತದೆ ಈ ಹವಾ ಮಹಲ್'. ಒಂತರಹದ ವಿಶೇಷತೆಯ ಯುನೀಕ್ ಸ್ಟೈಲ್ ಇದರದು. ಸಾವಿರದೇಳುನೂರಾ ತೊಂಭತ್ತೊಂಭತ್ತರಲ್ಲಿ ಮಹಾರಾಜಾ ಸವಾಯಿ ಪ್ರತಾಪ ಸಿಂಗ್ ನಿರ್ಮಿಸಿದ ಮಹಲಿದು. ಇದರ ವಿನ್ಯಾಸಕಾರ ಲಾಲ್ಚಂದ ಉಸ್ತಾದ್, ಎದುರಿನಿಂದ ನೋಡಿದರೆ, ಶ್ರೀಕೃಷ್ಣನ ಕಿರೀಟದ ಆಕಾರದ ಐದು ಅಂತಸ್ತಿನ ಜೇನುಗೂಡಿನಂತಹ ವಿನ್ಯಾಸದ ಕಟ್ಟಡವಿದು. 953 'ಝರೋಖಾ'ಗಳು ಅಂದರೆ ಸಾಮಾನ್ಯವೇ! ಕಲ್ಲಿನಲ್ಲಿ ಕುಸುರಿಯಂತಹ ಕೆತ್ತನೆಯ ನವಿರು ಜಾಲರಿಯುಳ್ಳ ಕಿಟಕಿಗಳು ಇದನೊಂದು ಜೇನುಗೂಡಿನ ರಚನೆಯ ಮೂಲಕ ಸದಾ ತಂಪುಗಾಳಿಯನ್ನು ಒಳ ಅಂತ:ಪುರದೊಳಗೆ ತೂರಿಸಿ ಪಸರಿಸುತ್ತವೆ. ಒಳಾವರಣದಲ್ಲಿನ ಕಾರಂಜಿಗಳು ಅದಕ್ಕೆ ಇನ್ನಷ್ಟು ತಂಪೆರೆದು ಎಂತಹ ಬೇಸಿಗೆಯಲ್ಲೂ ಕೂಡ ಬಿಸಿಲು ಝಳ ತಾಕದಂತೆ ಇಡೀ ಮಹಲನ್ನು ತಂಪಾಗಿರಿಸುªಂತೆ ವಿನ್ಯಾಸಗೊಳಿಸಿದ್ದು, ಅಂದಿನ ಕಾಲದಲ್ಲಿನ ಎಂಜಿನೀಯರಿಂಗ್ ಬಗ್ಗೆ ಹೆಮ್ಮೆ ಎನಿಸಿತು. ಜನಕ್ಕೆ ಹತ್ತಿರವಾಗುವಂತೆ ಮುಖ್ಯ ರಸ್ತೆಗೆ ಹೊಂದಿಕೊಂಡೇ ಜನನಿಬಿಡ ಸ್ಥಳದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಮಹಲಿನ ಆರ್ಚ್ಗಳು, ಕೊಳಲಾಕಾರದ ಸಣ್ಣ ಕಂಬಗಳು, ಕಂಬಗಳ ಮೇಲೆ ಕಮಲಗಳು, ಹೂಬಳ್ಳಿಗಳು ಇದರಲ್ಲಿ ರಾಜಪೂತ ಶೈಲಿ ಅರಳಿಸಿದ್ದರೆ, ಅದರ ಜಾಲರಿಗಳು ಮೊಘಲ್ ಶೈಲಿಯನ್ನು ಬಿಂಬಿಸುತ್ತವೆ. ಮಹಾರಾಜರ ವಿಶೇಷ ಮೆರವಣಿಗೆಗಳು, ಇತರೆ ಜಾತ್ರಾ ಸಂದರ್ಭಗಳಲ್ಲಿ ವಿವಿಧ ನೃತ್ಯ, ಹಾಡು, ವರಸೆ, ಕಸರತ್ತು ಪ್ರಯೋಗಗಳನ್ನು ಮಾಡುತ್ತ ಮೆರವಣಿಗೆಯಲ್ಲಿ ಬಣ್ಣ ಬಣ್ಣದ ಧಿರಿಸಿನಲ್ಲಿ ಕಲಾವಿದರು, ಯುವಕರು, ಬೇರೆ ಬೇರೆ ಮಾಂಡಲೀಕ ಯುವರಾಜರು., ಶೂರರು, ಕಲಿಗಳು, ದಂಡನಾಯಕರು ಆನೆ, ಒಂಟೆ, ಕುದುರೆಗಳೊಂದಿಗೆ, ಪದಾತಿದಳದೊಂದಿಗೆ ಮೆರವಣಿಗೆಯ ಮೂಲಕ ಹಾಯ್ದು ಹೋಗುತ್ತಿದ್ದಾಗ, ಆ ಮೆರವಣಿಗೆಯನ್ನು ಆನಂದಿಸುವ ಸಲುವಾಗಿ, ಡಜನ್ ಗಟ್ಟಲೆ ಇರುವ ಎಲ್ಲಾ ರಾಣಿಯಂದಿರು, ಲಲನಾಮಣಿಗಳಿಗೆ, ಕನ್ಯೆಯರಿಗೆ ಅಲ್ಲಿ ¥ರದಾ ಪದ್ಧತಿ ಜಾರಿಯಲ್ಲಿದ್ದುದರಿಂದ,...ಇವರೆಲ್ಲರಿಗೆ ಕಾಣುವಂತೆ, ಅವರವರ ಕಕ್ಷೆಗಳಲ್ಲಿಯೇ ಕಲ್ಲಿನಲ್ಲಿ ಕೆತ್ತಿದ ಜಾಲರಿಯ ಕಿಟಕಿಗಳಿವೆ. ಈಗಲೂ ಕೂಡ ಇಲ್ಲಿ ಈ ಪರದಾ ಪದ್ಧತಿ ಜೀವಂತವಾಗಿದೆ. ಒಂದು ಕಿಟಕಿಯಿಂದ ಇನ್ನೊಂದು ಕಿಟಕಿಗೂ ವಿನ್ಯಾಸದಲ್ಲಿ ತುಸುವಾದರೂ ಅಂತರವಿರುವುದನ್ನೂ ಗುರುತಿಸಬಹುದು.,..ಇದು ಒಂದೊಂದು ಗುಂಪು ಒಂದೊಂದು ಕಡೆಯಿಂದ ಕಟ್ಟುತ್ತ ಬರುವಾಗ, ನಿಖರತೆಗಳ ಮಾನದಂಡಗಳು ಎಲ್ಲರಿಗೂ ಲಭಿಸದಿದ್ದುದರಿಂದ ಆಗಿರುಬಹುದೇನೋ ಅನಿಸಿತು.
ಇಲ್ಲಿಂದ ಕಣ್ಣೋಟಕ್ಕೆ ಸಿಕ್ಕ ಸುಮಾರು ದೂರದವರೆಗೂ ಜೈಪುರ ನೋಡಲು, ಅಳೆಯಲು ಸಿಕ್ಕಿತು. ಜೈಪುರ ಮೊದಲ ನೋಟಕ್ಕೆ ನೋಡಿದಾಗ, ಅದು ನಮ್ಮದೊಂದು ದೊಡ್ಡ ನಗರದಷ್ಟೆ ಅನಿಸಿತು.. ಮೆಟ್ರೋ ಎನ್ನಿಸುವುದಿಲ್ಲ, ಸಾಂಸ್ಕøತಿಕ ನಗರ, ನಮ್ಮ ಮೈಸೂರಿನಷ್ಟಿರಬೇಕು ಅಂದುಕೊಂಡಿತು ಮನಸು. ... ಹಳೆಯ ಹೊಸ ಕಟ್ಟಡಗಳ ಸಮ್ಮಿಶ್ರಣವಿದೆ. . ದೊಡ್ಡ ದೊಡ್ಡ ಗಗನಚುಂಬಿಗಳ ಪ್ರವೇಶವಾಗಿಲ್ಲ, ......ಹೀಗಾಗಿ ಬಹುತೇಕರು ಅಲ್ಲಿ ಆಕಾಶವನ್ನು ನೋಡಬಲ್ಲರು! ಚುಕ್ಕಿ ಚಂದ್ರಮರೊಂದಿಗೆ ನೇರಾ ನೇರ ಮಾತಾಡಬಲ್ಲರು, ಸೂರ್ಯನ ಉದಯ ಹಿಡಿದು, ಸಂಜೆಯ ರಂಗನ್ನು ಕೂಡ ಅನುಭವಿಸಬಲ್ಲರು, ಅದೃಷ್ಟವಂತರು ಕಣ್ರೀ, ..ನಮಗಾದರೋ ಒಂದಿದ್ದರೆ ಇನ್ನೊಂದಿಲ್ಲ ಅಲ್ಲವೇ? ...ಮಕ್ಕಳ ಕಟ್ಟಡ ಕಟ್ಟುವ ಪ್ಲಾಸ್ಟಿಕ್ ಆಟಿಕೆಯಂತೆ ಎಲ್ಲಾ ಚೌಕ ಚೌಕ ಮಾಳಿಗೆಯ ಮನೆಗಳು. ಇಸ್ತ್ರೀ ಮಾಡಿ ಒಂದರ ಪಕ್ಕ ಇನ್ನೊಂದು ಜೋಡಿಸಿ ಇಟ್ಟಂತೆ ಕಾಣುತ್ತಿದ್ದವು. ಎಲ್ಲಿಗೋ ಕಳುಹಿಸಲು ಪ್ಯಾಕ್ ಮಾಡಿಟ್ಟ ಮಾವಿನ ಹಣ್ಣಿನ ತರಹದ ಪಾರ್ಸಲ್ಗಳಂತೆ ಕಂಡವಂತೆ ಇವಳಿಗೆ, ಆ ಚೌಕ ಆಯತಾಕಾರದ ಮನೆಗಳು
ರಾಜನಿಗೆ ಎಲ್ಲಾ ರಾಣಿಯರ ಕೊಠಡಿ, ಕಕ್ಷೆಗಳಿಗೆ ತೆರಳಲು ಮಾರ್ಗವಿದ್ದು, ಯಾವ ರಾಣಿಯ ಹತ್ತಿರ ರಾಜನು ರಾತ್ರಿ ಕಳೆಯುತ್ತಿದ್ದಾನೆ ಎಂದು ಬೇರೆ ರಾಣಿಯರಿಗೂ ಗೊತ್ತಾಗದ ರೀತಿ ಅದನ್ನು ನಿರ್ಮಿಸಲಾಗಿದೆ...ಇಡೀ ಕಟ್ಟಡದಲ್ಲಿ ಎಲ್ಲಿ ನಿಂತರೂ, ಗಾಳಿ ಬೆಳಕುಗಳು ಯಥೇಚ್ಛ ಬರುವಂತಿರುವುದನ್ನು ಸ್ವತ: ಪರಿಶೀಲಿಸಿದೆ. ಆ ಕಟ್ಟಡದ ಸಂದು ಗೊಂದು, ಕಾರಿಡಾರುಗಳಲ್ಲಿಯೂ ಗೋಡೆಗಳಲ್ಲಿ ಅಂಕುಡೊಂಕಿನ ಸಣ್ಣ ಸಣ್ಣ ಕೊಳವೆಯಾಕಾರದ ಪೈಪುಗಳ ಮೂಲಕ ಗಾಳಿ ಬರುತ್ತಿತ್ತು.. ಮೇಲಂತಸ್ಥಿನಿಂದ ರಾಜ ರಾಣಿಯರು ಕುಳಿತು ನೋಡಿದರೆ, ಸುತ್ತಲೂ ಇಡೀ ಜೈಪುರವೇ ಕಾಣುತ್ತದೆ. ಹವಾಮಹಲ್ ಜೈಪುರದ 'ಶಾನ್', ಕಿರೀಟವಿದ್ದ ಹಾಗೆ.
ಹವಾಮಹಲ್ ನೋಡಿ ಹೊರಬಂದಾಗ ಆಗಲೇ ಸಮಯ ಮಧ್ಯಾಹ್ನ ಮೀರುತ್ತಿದ್ದುದರಿಂದ ಹೊಟ್ಟೆ ಚುರುಗುಟ್ಟತೊಡಗಿತ್ತು. 'ಹಸಿವಾಗುತ್ತಿದೆ' ಎಂದು ಅವನಿಗೆ ಹೇಳುತ್ತಲೇ ಅಲ್ಲಿಯೇ ಉತ್ತಮವೆನ್ನಬಹುದಾದ ಹೋಟಲೊಂದಕ್ಕೆ ಕರೆದೊಯ್ದ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕಂಡುಬಂದಿತು, ನಮ್ಮ ಪಕ್ಕದ ಟೇಬಲ್ನವರು ಬಂಗಾಲಿಗಳು, ಮುಂದಿನ ಟೇಬಲ್ನವರು ಹಿಮಾಚಲ ಪ್ರದೇಶದವರು... ನಾವು ಅಲ್ಲಿಯ ಮೆನುವನ್ನು ಜಾಲಾಡಿ, ಶಾಹಿ ಜೈಪುರಿ ಭೋಜನ ಹೇಳಿ ಕುಳಿತೆವು. ಆ ನೆಲದ ದಾಲ್ ಭಾಟಿ, ಬಾಜರಾ ಕಿ ರೋಟಿ, ಪರಾಟಾ, ಘಟ್ಟಿ ಕಿ ಸಬ್ಜಿ, ಕೇರ್ ಸಾಂಗರಿ. ಮುಂತಾದ ಅಲ್ಲಿಯ ಸಾಂಪ್ರದಾಯಿಕ ಅಡಿಗೆಯ ರುಚಿ ಬಲು ಚನ್ನಾಗಿತ್ತು. , ನಡುವೆ ಸಪ್ಲೈಯರ್ ಬಂದು ತಮಗೆ 'ಲಸ್ಸಿ' ಯಲ್ಲಿ ಉಪ್ಪು ಇರಲೋ, ಸಿಹಿ ಇರಲೋ ಎಂದು ಕೇಳಿದ್ದಕ್ಕೆ ನಮ್ಮ ನಮ್ಮ ಚಾಯ್ಸ್ ಹೇಳಿದೆವು. ಊಟ ನಡೆದಿರುವಾಗಲೇ ಮಾಣಿ ಬಂದು, ತೀರ ಕಾಳಜಿಯಿಂದ, ' ನಮ್ಮಲ್ಲಿ ಇಂದು ಮೂರೇ ತಹರದ ಐಸ್ ಕ್ರೀಮ್ ಲಭ್ಯ. ಇದರಲ್ಲಿ ತಾವು ಯಾವುದು ಹೇಳುವಿರೋ ಅದನ್ನೇ ಕೊಡುವೆ' ಎಂದು ವಿನಮ್ರನಾಗಿ ಕೇಳಿದ ವೇಟರ್ನಿಗೆ ನಮ್ಮ ನಮ್ಮ ಚಾಯಿಸ್ ಹೇಳಿದೆವು. ಎಲ್ಲ ತಿಂದಾದ ಮೇಲೆ ತಿಳಿದದ್ದು ಏನಂದರೆ ಅದೆಲ್ಲ ಬೇರೆ ಬೇರೆ ಬಿಲ್ಲುಗಳು. ಊಟದ ಬಿಲ್ಲು ಅತಿ ಕಡಿಮೆ ಇದ್ದರೆ, ಅದರ ವ್ಯಂಜನಗಳೇ ಡಬಲ್ ಆಗಿದ್ದವು. ನಾವು ಊಟದ ಥಾಲಿಯೊಂದಿಗೆ ಬರುತ್ತದೇನೋ ಎನ್ನುವಂತೆ ಉಪಾಯವಾಗಿ ಕೇಳಿದ್ದಕ್ಕೋ ಅಥವಾ ನಾವು ಹಾಗೆ ತಿಳಿದುಕೊಂಡೆವೋ , ಅಂತೂ ಬೇಸ್ತು ಬಿದ್ದದ್ದೇ ಹೆಚ್ಚು ಖರೆಯೇನೋ. ಮುಂದೆ ಅಲ್ಲಿ ಭೇಟಿ ಕೊಡುವವರಿಗೆ ಸುಮ್ಮನೆ ಇದು ತಿಳಿದಿರಲಿ ಎಂದು ಈ ಪ್ರಸಂಗ ಹೇಳುತ್ತಿರುವೆ ಅಷ್ಟೆ.
ಇಲ್ಲಿಂದ ಅಲ್ಬರ್ಟ್ ಹಾಲ್ ಮ್ಯೂಜಿಯಂಗೆ ಹೋದೆವು. ಅದೇ ಈಗ ತಾನೇ ಹೇಳಿದ್ದೆನಲ್ಲ, ಪ್ರಿನ್ಸ್ ಆಫ್ ವೇಲ್ಸ್ನ ರಾಜಕುಮಾರ ಪ್ರಿನ್ಸ್ ಎಡ್ವರ್ಡ ಜೈಪುರದ ಭೇಟಿಯ ಸಂದರ್ಭದಲ್ಲಿ ಅವರಿಗೆ ಉಳಿದುಕೊಳ್ಳಲು ಕಟ್ಟಿದ ಭವ್ಯ ಮಹಲು ಇದು. ಅದರ ಸವಿನೆನಪಿಗಾಗಿ ಇದನ್ನು ಈಗ ಅಲ್ಬರ್ಟ್ ಹಾಲ್ ಮ್ಯೂಜಿಯಂ ಎಂದೇ ಕರೆದು ಸಾರ್ವಜನಿಕಗೊಳಿಸಲಾಗಿದೆ. ರಾಜ ಮಹಾರಾಜರ, ಬ್ರಿಟಿಶ್ ಕಾಲದ ಎಲ್ಲ ದಾಖಲೆಗಳು, ಯುದ್ಧಾಸ್ತ್ರಗಳು, ತಲವಾರುಗಳು, ಗನ್ಗಳು, ,ರಾಜ ರಾಣಿಯರ ಧಿರಿಸುಗಳು, ಅಪರೂಪದ ಛಾಯಾಚಿತ್ರಗಳು ತೈಲಚಿತ್ರಗಳು, ಬೆಲ್ಜಿಯಂ ಕನ್ನಡಿಗಳು, ಮಂಚಗಳು, ಸಿಂಹಾಸನಗಳು, ಸಂಗೀತ ಉಪಕರಣಗಳು, ಢೋಲುಗಳು, ಪಿಯಾನೋಗಳು, ಕಮಾಯ್ಚಾ, ಕರತಾಲಗಳು, ತಬಲಾ ಹೀಗೆ ಏನೆಲ್ಲಾ, ಝೂಮರುಗಳು, ಬೇಟೆಗಳು, ಅಪರೂಪದ ಕಲೆಯ ಶಿಲ್ಪಮೂರ್ತಿಗಳು, ಹೀಗೆ ಎಲ್ಲಾ ವಿವರಗಳನ್ನು, ಉಪಕರಣಗಳ ಸಹಿತ ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಮೂಲತ: ಅದು ಅಲ್ಲಿನ ಜನರ ಕುಶಲ ಕಲೆಗಳ ಜಾಗತಿಕ ಪ್ರದರ್ಶನವನ್ನು ಏರ್ಪಡಿಸಿ, ಅದರಿಂದ ತನ್ನ ಕುಶಲಕರ್ಮಿಗಳಿಗೆ ಅನುಕೂಲ ಒದಗಿಸಲು ಹಾಗೂ ಅವರ ವಸ್ತುಗಳನ್ನು ವಿಲೇವಾರಿ ಮಾಡಲು, ಹೆಚ್ಚಿನ ತಾಂತ್ರಿಕ ಅನುಭವ ಪಡೆಯಲು ಸಾಧ್ಯವಾಗಿಸಲು, ಸ್ಥಳೀಯರಿಗೆ ಜಗತ್ತಿನ ಸಮಕಾಲೀನತೆಯ ಅರಿವು ಮಾಡಿಕೊಟ್ಟು ಸ್ಪರ್ಧಾ ಜಗತ್ತಿನ, ಉತ್ಕøಷ್ಟಮಟ್ಟದ ಬಟ್ಟೆ, ಕರಕುಶಲ ವಸ್ತುಗಳನ್ನು ತಯಾರಿಸಲು ಅವರನ್ನು ಹೆಚ್ಚು ಹೆಚ್ಚು ಸಕ್ಷಮರನ್ನಾಗಿ ಮಾಡಲು ಅನುವಾಗಿಸುವ ಉದ್ದೇಶ ಹೊಂದಲಾಗಿತ್ತು. ಜಗತ್ತಿನ ಇತ್ತೀಚಿನ ಮಾಹಿತಿ ಸಿಗುವಂತೆ ವರ್ಷ ವರ್ಷವೂ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು. 1898 ರಷ್ಟೊತ್ತಿಗೆ ಸುಮಾರು ಮೂವತ್ತು ಲಕ್ಷ ಜನ ಅದರ ಭೇಟಿಮಾಡಿದ್ದರೆಂದರೆ, ಅದರ ಪ್ರತೀತಿ ಅರ್ಥವಾಗುವಂತಹದ್ದು ಅಲ್ಲವೇ. ಇಲ್ಲಿನ ಅಪರೂಪದ ತೈಲಚಿತ್ರವೊಂದರಲ್ಲಿ ಸಂತ ಕಬೀರದಾಸ ನೇಯುತ್ತಿರುವ ಚಿತ್ರವನ್ನು ಕ್ಲಿಕ್ಕಿಸಿದೆ.
ಆ ಕಟ್ಟಡದ ಕಂಬ ಕಂಬಗಳ ಮೇಲೆಲ್ಲ ಅಕ್ಬರ್ನ ದ್ವಿಪದಿಗಳು, ಯುರೋಪಿಯನ್, ಪರ್ಸಿಯನ್, ಬ್ಯಾಬಿಲೋನಿಯನ್, ಚೈನೀಸ್, ಗ್ರೀಕ್, ಹಿಂದು ರಾಮಾಯಣ, ಮಹಾಭಾರತ ಕಾವ್ಯಗಳ ಚಿತ್ರಿಕೆಗಳನ್ನು ಕೆತ್ತಿಸಲಾಗಿದ್ದು ಮನಸೆಳೆಯಿತು.
ಅಲ್ಬರ್ಟ ಹಾಲ್ ಮ್ಯೂಜಿಯಂನಿಂದ ನಾವು ಸೀದಾ ಜಲ್ ಮಹಲ್ನೆಡೆಗೆ ತೆರಳಿ ಮಾನಸಾಗರ ಸರೋವರದ ದಂಡೆ ತಲುಪಿದೆವು. ನಟ್ಟನಡು ನೀರಲ್ಲಿರುವ ಜಲ್ಮಹಲ್ವರೆಗೆ ಹೋಗಲು ಯಾವುದೇ ವ್ಯವಸ್ಥೆ ಕಲ್ಪಸಿಲ್ಲದೇ ಇದ್ದುದರಿಂದ ದಂಡೆಯಿಂದಲೇ ನೋಡಬೇಕಾಯಿತು.. ದೊಡ್ಡದಾದ ಸರೋವರ ಒಂದರಲ್ಲಿ ಮಧ್ಯದಲ್ಲಿ ನಿರ್ಮಿಸಿದ ಮಹಾರಾಜರ ಬೇಸಿಗೆ ಅರಮನೆ ಅದು. 18ನೇ ಶತಮಾನದಲ್ಲಿ ಮಾನ್ ಸರೋವರದಲ್ಲಿ ಈ ಸರೋವರ ಹಾಗೂ ಮಹಲನ್ನು 2ನೇ ಅಮೇರ್ ರಾಜಾ ಜೈ ಸಿಂಗ ಕಟ್ಟಿಸಿದ.. ನಾವು ನಿಂತ ಕಡೆ ಜೈಪುರವಿದ್ದರೆ, ಎದುರಿನಲ್ಲಿ ಅರಾವಳಿ ಪರ್ವತ ಶ್ರೇಣಿ ಇದೆ. ಸರೋವರದ ಮಧ್ಯೆಯೇ ನಡುಗಡ್ಡೆ ತರಹದ ಜಾಗದಲ್ಲಿ ಎರಡು ಅಂತಸ್ತುಗಳಲ್ಲಿ ನಿರ್ಮಿಸಿದ ಅರಮನೆ ಇದು. ಮೊದಲಿನ ಅಂತಸ್ತು ಬೇಸಮೆಂಟ್ , ಇದು ನೀರ ಕೆಳಗಿದೆ,.. ಎರಡನೆ ಅಂತಸ್ತು ಹೊರಗೆ ಕಾಣುವುದು, ಅರ್ಧ ನೀರಲ್ಲಿ, ಇನ್ನರ್ಧ ಹೊರಚಾಚಿಕೊಂಡಿದೆ. ಅಲ್ಲಿಯೇ ಸುಂದರ ಚಮೇಲಿ ಬಾಗ್ ಎಂಬ ಉದ್ಯಾನವನ್ನು ನಿರ್ಮಿಸಲಾಗಿದೆ. ಅಲ್ಲಿ ಸುತ್ತ ಮರಗಳೂ ಕೂಡ ಬೆಳೆದು ಅದನ್ನೊಂದು ಸುಂದರ ಪ್ರವಾಸಿ ಧಾಮವನ್ನಾಗಿ ಮಾಡಿವೆ. ಮೊದಲು ಹೋಟೆಲ್ ಇದ್ದುದು ಈಗ ಸಧ್ಯಕ್ಕೆ ಅಲ್ಲಿ ಯಾವ ಹೊಟೆಲ್ ಇಲ್ಲ, ಆದರೆ ಸಧ್ಯದಲ್ಲೇ ಅಲ್ಲೊಂದು ಫೈವ್ ಸ್ಟಾರ್ ಹೊಟೆಲೊಂದು ಪ್ರಾರಂ¨sವಾಗಲಿದೆ ಎಂದು ಗೈಡ್ನಿಂದ ತಿಳಿದುಬಂತು. ಸರೋವರದ ನೀರು ಈಗ ತುಂಬ ಕಲುಷಿತವಾಗಿದ್ದು, ಜೈಪುರದ ಡ್ರೇನೇಜ್ನಿಂದ ಸರೋವರ ಹೂಳು ತುಂಬಿದ್ದುದನ್ನು, ಗೈಡ್ ವಿವರಿಸಿ, ಸ್ಥಳೀಯ ಸಮಸ್ಯೆಯನ್ನು ಬಿಂಬಿಸಿದ.. ಇದು ಎಲ್ಲಾ ಊರ ಹಾಡು ಎಂದು ಮನದಲ್ಲಿಯೇ ಹೇಳಿಕೊಂಡೆ.
ಇಲ್ಲಿಂದ ಮುಂದೆ ಸವಾರಿ ಹೊರಟದ್ದು, ಅಂಬರ್ ಪ್ಯಾಲೇಸ್ನತ್ತ. ಜೈಪುರದಿಂದ ಸುಮಾರು ಹತ್ತು ಕಿಮೀಗಳ ದೂರ ಬೆಟ್ಟದ ಮೇಲೆ ಆಮೇರ್ ಎಂಬಲ್ಲಿ ಇದನ್ನು ನಿರ್ಮಿಸಲಾಗಿದೆ. ಅರಾವಳಿ ಪರ್ವತ ಶ್ರೇಣಿಯ ಚೀಲ್ ಕಾ ತೀಲ್ (ಹದ್ದುಗಳ ಬೆಟ್ಟ)ಗಳ ಮೇಲೆ ಈ ಅಂಬರ್ (ಆಮೇರ್) ಕೋಟೆ ಹಾಗೂ ಅರಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಹೊಂದಿಕೊಂಡೇ ಜೈಘರ್ ಕೋಟೆ ಇದೆ. ಆಮೇರ್ ಕೋಟೆಯಿಂದ ಜೈಘರ ಕೋಟೆಗೆ ರಸ್ತೆಗಳು ಇಲ್ಲದಿದ್ದರೂ, ಒಳ ಸುರಂಗಗಳಿಂದ ಅದು ಜೋಡಿಸಲ್ಪಟ್ಟಿದೆ. ಇಲ್ಲಿ ಮಹಾರಾಜರ ಸೈನ್ಯದ ತುಕಡಿ ಸದಾ ಸನ್ನದ್ಧ ಸ್ಥಿತಿಯಲ್ಲಿತ್ತು. ಆ ಕೋಟೆ ಹಾಗೂ ಅರಮನೆಗಳು ದಂಗು ಬಡಿಯುವಷ್ಟು ಅಪ್ಡೇಟ್ ಆಗಿವೆ, ಅವೆಷ್ಟು ಶಾಹೀ (ವೈಭವಯುತ) ಇವೆಯೆಂದರೆ, ಅವನ್ನು ನೋಡಿಯೇ ತಿಳಿಯಬೇಕು.ಜೋಧಾ ಸ್ವತಃ ಅಡುಗೆ ಮಾಡಿದ ದೊಡ್ಡದಾದ ಕಡಾಯಿ ನೋಡಿ, ಅದನ್ನು ಮುಟ್ಟಿ ಜೋಧಾನೊಂದಿಗೆ, ಅಕ್ಬರ್ ನೊಂದಿಗೆ ದಾವತ್ ಮಾಡಿದಂತೆ ತೃಪ್ತಿ ಪಟ್ಟೆ.
ಆಮೇರ್ ಪಟ್ಟಣವನ್ನು ಮೀನಾ ವಂಶದ ರಾಜರಾಡಳಿತದಲ್ಲಿ ಕಟ್ಟಲಾಗಿತ್ತು. ಮೊದಲು ಇದಕ್ಕೆ ಖೋಂಗೋಂಗ್ ಪ್ರಾಂತ ವೆಂದು ಕರೆಯಲಾಗುತ್ತಿತ್ತು. ಮೀನಾ ವಂಶದ ರಾಜಾ ಅಲನ್ ಸಿಂಗ್ ಚಂದಾ ತುಂಬಾ ವಿಶಾಲ ಹೃದಯದ ರಾಜನಾಗಿದ್ದು, ಪ್ರಜೆಗಳ ಪ್ರೀತಿ ಸಂಪಾದಿಸಿದ್ದ. ಧರ್ಮಸ್ನೇಹಿಯಾಗಿದ್ದ. ಸಹಜವೆಂಬಂತೆ, ಒಂದು ಅನಾಥÀ ರಾಜಪೂತ ತಾಯಿ ಮಗನ ಕುಟುಂಬಕ್ಕೆ ಆಶ್ರಯ ನೀಡಿದ್ದ, ಮುಂದೆ ಇದೇ 'ಧೋಲಾ ರೇ' ಹೆಸರಿನ ಈ ಸಾಕು ಹುಡುಗನನ್ನು ದೊಡ್ಡವನಾದ ಮೇಲೆ ಅಕ್ಕರೆಯಿಂದ ತನ್ನ ಪ್ರತಿನಿಧಿಯಾಗಿ ದೆಹಲಿಗೆ ಕಳುಹಿಸಿ ತನ್ನ ಧರ್ಮ ಸಹಿಸ್ಣುತೆ, ಪ್ರೀತಿ ತತ್ಪರತೆ ಮೆರೆದ. ಅದೇ ರಾಜಪೂತ ಯುವಕ, ಮುಂದೆ ಅಲ್ಲಿಂದ ಮರಳುವಾಗ ರಾಜಪೂತ ಗೂಢಚಾರರೊಂದಿಗೆ ಬೆರೆತು, ಸಂಪ್ರದಾಯದಂತೆ ದೀಪಾವಳಿ ಹಬ್ಬದಲ್ಲಿ ನಿಶ್ಯಸ್ತ್ರರಾಗಿ ಪಿತೃ ತರ್ಪಣ ಬಿಡುತ್ತಿರುವ ಸಮಯದಲ್ಲಿ, ಹೊಂಚುಹಾಕಿ, ಮೀನಾ ಜನಾಂಗದ ರಾಜಸಹಿತರಾಗಿ ಎಲ್ಲರನ್ನೂ ಕೊಂದು ಆ ಸರೋವರವನ್ನೆಲ್ಲಾ ಶವಗಳಿಂದ ತುಂಬಿ ಬಿಟ್ಟಿಬಿಟ್ಟಿದ್ದು, ಅಸಹಾಯಕರ ಮೇಲೆ ನಂಬಿಕೆ ದ್ರೋಹ ಮಾಡಿದ, ಮಾನವತೆಯ ಮೇಲೆ ಮಾಡಿದ ಅತ್ಯಂತ ಹೇಯ ಹಾಗೂ ಹೇಡಿತನದ ಕೃತ್ಯವಾಗಿ ಅಳಿಸಲಾಗದೊಂದು ಕಪ್ಪುಚುಕ್ಕೆಯಾಗಿ ಇತಿಹಾಸದಲ್ಲಿ ದಾಖಲಾಗಿದೆ. ಎಂತಹ ನೀಚ ಕೃತ್ಯವಲ್ಲವೇ ಆ ರಾಜ ಹಾವನ್ನೇ ಸಾಕಿ, ಹಾಲೆರೆದಂತಾಯಿತೆಂದು ಮನಸ್ಸು ಮರುಗಿತು.
ಇದನ್ನು ಕೇಳುತ್ತಲೇ ಮನಸ್ಸು ಎಲ್ಲೆಲ್ಲೊ ಲಂಗುಲಗಾಮಿಲ್ಲದೇ ಹರಿದಾಡತೊಡಗಿತು. ಹೌದು, ಇದು ಇಲ್ಲಿಗೇ ನಿಲ್ಲುವುದಿಲ್ಲ. ಇತಿಹಾಸವನ್ನು ಹೆಕ್ಕಿದರೆ ಎಲ್ಲಿ ಅಧಿಕಾರವಿದೆಯೋ ಅಲ್ಲೆಲ್ಲ ಇದು ಅದರ ಜೊತೆ ಜೊತೆಗೇ ಸಂಭವಿಸುತ್ತಲೇ ಬಂದಿದೆ. ಜಗತ್ತಿಗೇ ಶಾಂತಿ ಮಂತ್ರದ ಸಂದೇಶವನ್ನು ನೀಡಿದ ದೇಶವಿದು. ವೇದ ಉಪನಿಷತ್ತುಗಳನ್ನು ನೀಡಿದ ಪುಣ್ಯಭೂಮಿಯಲ್ಲಿಯೇ ಏಕೆ ಇಷ್ಟೊಂದು ವೈರುಧ್ಯ. ಹಾಗಾದರೆ ಅಂದಿನಿಂದ ಸಮಾಜವನ್ನು ಸಚ್ಛಾರಿತ್ರಕ್ಕೆ ಹಚ್ಚಬೇಕಾದ, ನಮ್ಮ ವೇದ ಉಪನಿಷತ್ಗಳು, ಗುರುಗಳು, ಪೂಜ್ಯರುಗಳು, ಗುರುಮಠಗಳು, ಸ್ವಾಮಿಗಳು, ರಾಜರ್ಷಿಗಳು ಏನು ಮಾಡಿದರು. ಅವರಿಗೂ ಕೂಡ ಇಂತಹ ಕುತಂತ್ರಗಳನ್ನು ತಡೆಯದು ಸಾಧ್ಯವಾಗಲಿಲ್ಲವೋ, ಅಥವಾ ರಾಜನಿಗೆ ಈ ಧವರ್iಪತಿಗಳು ತಮ್ಮದೇ ಕಾರಣಗಳಿಗಾಗಿ, ಪ್ರಭಾವವನ್ನು ಬೀರಲಾರದಾದರೋ. ಯಾವುದು ಎಷ್ಟು, ಹೆಚ್ಚು ಸರಿ? ಗೊಂದಲದಲ್ಲಿ ಮನ ರಾಡಿಯಾಗಿತ್ತು.
ಔರಂಗಜೇಬನ ಕಥೆಯೂ ಇದನ್ನೇ ಹೇಳುತ್ತದಲ್ಲವೇ, ತಂದೆ ಶಹಾಜಹಾನ್ ತನ್ನ ಹಿರಿಯ ಪುತ್ತ ದಾರಾ ಶಿಖೋಗೆ ಪಟ್ಟವನ್ನು ನಿಗದಿ ಮಾಡಿಯಾಗಿತ್ತು. ಇದನ್ನು ಮನಗಂಡ ಔರಂಗಜೇಬ, ತನ್ನ ಸಹೋದರರನ್ನೇ ಕೊಲ್ಲಿಸಿ, ಉಳಿದಿಬ್ಬರನ್ನು ಸೆರೆಗೆ ತಳ್ಳಿ, ಮುಪ್ಪಿನ ತಂದೆ ಶಹಾಜಹಾನ್ನನ್ನು ಕಾರಾಗ್ರಹÀಕ್ಕಟ್ಟಿದ್ದು,......ಅಧಿಕಾರದ ದುರಾಸೆ ನೋಡಿ, .....ಏನೆಲ್ಲ ಮಾಡಿಸುತ್ತದೆ. ರಾಜಾ ಮಯೂರವರ್ಮ ಕೂಡ ಇಂತಹ ಷಡ್ಯಂತ್ರಗಳನ್ನೇ ಸದೆಬಡಿದನಲ್ಲವೇ. ಕೃಷ್ಣದೇವರಾಯನ ಮಗನನ್ನು ಉದ್ಯಾಣದಲ್ಲಿ ಆಡುವಾಗ ಅಪಹರಿಸಿ ಕೊಲ್ಲಲಾಯಿತಲ್ಲವೇ. ಎಲ್ಲವೂ ಒಳ ಕಾರಸ್ಥಾನಗಳೇ, ಹೋಗಲಿ, ರಾಮಾಯಣ ಮಹಾಭಾರತಗಳು ಹುಟ್ಟಿದ್ದೇ ಷಡ್ಯಂತ್ರಗಳ ಹಂದರಗಳ ಕಥೆಗಳ ಮೇಲಲ್ಲವೇ, ಕೈಕೇಯಿಗೆ ತನ್ನ ಮಗ, ಭರತನ ಪಟ್ಟದಾಸೆಯಿಂದ....... ಅಷ್ಟೆಲ್ಲಾ ಅಲ್ವೇ?. ಇನ್ನು ಮಹಾಭಾರತದ ಪುಟ ಪುಟಗಳಲ್ಲಿ ದುಷ್ಟ-ಶಿಷ್ಟ ಕಾಳಗಗಳೇ ಬಾಲ್ಯದಿಂದಲೂ,.. ವ್ಯಾಸರು ಕೌರವರು ಪಾಂಡವರಿಗೆ ಬಾಲ್ಯವನ್ನು ಅನುಭವಿಸಿಲೂ ಆಗದಂತೆ ಕಥೆ ಹೆಣೆಯುವ ಅವಶ್ಯಕತೆ ಏನಿತ್ತು?,,ಏನೋ ಇದ್ದಿರಬಹುದು ಬಿಡಿ, ಆ ಒಗಟು ಬಿಡಿಸಬೇಕಷ್ಟೆ. ಅಥವಾ ಅಂದಿನ ದಿನಮಾನಗಳು ಅದೇ ಸಹಜವೆನ್ನಿಸುವಷ್ಟು ಹಾಗಿದ್ದವೇ? ಮಹಾಭಾರತದ ವಾಕ್ಯ,' ಯದಾ ಯದಾ ಹೀ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಆಭ್ಯುತ್ಥಾನಮ್ ಅಧರ್ಮಸ್ಯ, ತದಾತ್ಮಾನಾಮ್ ಸೃಜಾಮ್ಯಹಂ, ಪರಿತ್ರಾಣಾಯ ಸಾಧುನಾಂ, ವಿನಾಶಾಯ ಚಾ ದುಷ್ಕøತಮ್, ಧರ್ಮಸಂಸ್ಥಾಪನಾರ್ಥಾಯ, ಸಂಭವಾಮಿ ಯುಗೇ ಯುಗೇ' ಕೃಷ್ಣನ ಭಗವದ್ಗೀತೆಯ ಮಾತು, ದುಷ್ಟ ಶಿಕ್ಷೆ, ಶಿಷ್ಟ ರಕ್ಷಣೆಯನ್ನೇ ಹೇಳುತ್ತದಲ್ಲವೇ. ಅಂದರೆ ಎಂದಿಗೂ ದುಷ್ಟತನವೆಂಬುದು ಮನುಷ್ಯನ ಬದುಕಿನೊಂದಿಗೆ ಹಾಸು ಹೊಕ್ಕಾಗಿ ಅನಾದಿ ಕಾಲದಿಂದಲೂ ಇದ್ದೇ ಇದೆ ನೋಡಿ.
ಭಾರತವಷ್ಟೇ ಏಕೆ, ಜಗತ್ತಿನ ಎಲ್ಲಾ ಇತಿಹಾಸಗಳೂ ಇದನ್ನೇ ಹೇಳುತ್ತವೆ ಅಲ್ಲವೇ. ಈ ಅಲೆಕ್ಷಾಂಡರ್ ದಿ ಗ್ರೇಟ್, ಬ್ರಿಟಿಶರು, ವಸಾಹತು ವಿಸ್ತರಣೆದಾರರು, ಇವರೆಲ್ಲರದು, ಇದ್ದವರನ್ನು ಲೂಟಿಮಾಡಿ, ತಮ್ಮ ಅಧಿಕಾರ ಸ್ಥಾಪಿಸುವ ಹುನ್ನಾರದ, ಮೂಲಭೂತ ದಬ್ಬಾಳಿಕೆಯ ಮಂತ್ರವಲ್ಲವೇ. ಹಿಟ್ಲರನೊಬ್ಬನ ಉದಾಹರಣೆ ಸಾಕು. ಕೋಟಿ ಉದಾಹರಣೆ ಕೊಟ್ಟಂತೆ! ಯಾಕೆ ಮನುಷ್ಯನಲ್ಲಿ ಈ ತಾಮಸ ಗುಣ ಇಷ್ಟೊಂದು ಆಳವಾಗಿ ಬೇರುಬಿಟ್ಟಿದೆ...ಒಬ್ಬರ ಏಳ್ಗೆಯನ್ನು ಇನ್ನೊಬ್ಬರು ಬಿಡಿ, ಒಡಹುಟ್ಟಿದವರೇ ಸಹಿಸದ, ಹೋಗಲಿ ಒಂದು ಹಂತ ದಾಟಿದ ಮೇಲೆ ತಾಯಿ ಮಕ್ಕಳನ್ನೂ ಬಿಡದಿದು. ಅರೆ,...ತಾಮಸವೇ ಹೀಗೇಕೆ ನೀನು, ನಿನ್ನ ಗುಣವು ಎನ್ನೋಣವೇ? ....ನಿಲ್ಲದ ಲಗಾಮು ಇಲ್ಲದ ಯೋಚನೆಗಳು. 'ನೀನೇ ಸಾಕಿದಾ ಗಿಣಿ, ನಿನ್ನಾ ಮುದ್ದಿನಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ' ಪುಟ್ಟಣ್ಣನವರ ಹಾಡು, ಇಂತಹ ಕಾರಣಗಳಿಗಾಗಿಯೇ ಅಮರತ್ವ ಪಡೆಯುತ್ತದೆ. ಯಾವ ಆಯಾಮದಿಂದ ನೋಡಿದರೂ ಅದರಲ್ಲಿರುವ ಸಂದೇಶ, ಎಲ್ಲ ಆಯಾಮಕ್ಕೂ ಸರಿಹೊಂದುವುದು. ಈ ಸಂದರ್ಭದಲ್ಲಿ ಗುಲಾಮ್ ಅಲಿಯ ಗಜಲ್ವೊಂದರ ಸಾಲುಗಳು, ಎಷ್ಟು ಸುಂದರವಾಗಿವೆ ನೋಡಿ, ‘ನಫ್ರತೋಂ ಕೆ ತೀರ್ ಖಾ ಕರ್ ದೋಸ್ತೋಂ ಕೆ ಶಹರ್ ಮೇಂ, ಹಮ್ನೆ ಕಿಸ್ ಕಿಸ್ ಕೋ ಪುಕಾರಾ , ಏ ಕಹಾನೀ ಫಿರ್ ಸಹೀ’ ‘ ಸ್ನೇಹಿತರೇ ತುಂಬಿದ ಊರು ನಂಬಿ ಬಂದೆ, ... ತಿರಸ್ಕಾರಗಳ ಬಾಣದಿಂದ ನಿಂದೆ....ನೋವು ತಿಂದೆ...... ಯಾಚಿಸಿದಲ್ಲೆಲ್ಲ ಮತ್ತೆ ಮತ್ತೆ ಎರಗಿ ಬಂದು, ಮತ್ತವೇ ನೋವು ನಿಂದೆ'' ಇತಿಹಾಸದುದ್ದಕ್ಕೂ ನಮಗೆ ಈ ಮೀರಸಾಧಕರು, ಬ್ರುಟಸ್ಗಳು, ಮಲ್ಲಪ್ಪ ಶೆಟ್ಟಿಯಂಥ ಚೂರಿಯಿರಿಯುವ ವ್ಯಕ್ತಿಗಳು ಹೇರಳವಾಗಿ ಸಿಕ್ಕೇ ಸಿಗುತ್ತಾರೆ. ಹಾಗೆ ನೋಡಿದರೆ ನಮ್ಮ ಸುತ್ತಮುತ್ತ ನಿತ್ಯವೂ ಸಿಗುತ್ತಾರೆ. ನಮ್ಮ ಟೀವಿಗಳಲ್ಲಿ ದಿನನಿತ್ಯ ಇಪ್ಪತ್ನಾಲ್ಕು ತಾಸು ಬರುವ ಧಾರಾವಾಹಿಗಳಿಗೆ ಇದೇ ಷಡ್ಯಂತ್ರಗಳೇ ನಿತ್ಯ ಹೂರಣಗಳಲ್ಲವೇ.
ಇರಲಿ, ಈ ಆಮೇರ್ ಕೋಟೆಯನ್ನು ರಾಜಾ ಮಾನಸಿಂಗ್ ವಶಪಡಿಸಿಕೊಂಡು ಕೋಟೆ ಮತ್ತು ಅರಮನೆಗಳನ್ನು ವಿಸ್ತರಿಸಿದನು. ಇದರಲ್ಲಿ ದೀವಾನ್ ಎ ಆಮ್, ದೀವಾನ್ ಎ ಖಾಸ್, ಶೀಶ್ ಮಹಲ್, ಹಾಗೂ ಸುಖ ನಿವಾಸ ಎಂಬ ಪ್ರತ್ಯೇಕ ಸಭಾ ಭವನಗಳು ಇದರ ಸುಂದರ ವಿನ್ಯಾಸಗಳ ಮೂಲಕ ಇದರ ಅಗಾಧತೆಯನ್ನು ಗಮನಿಸಬಹುದು. ಅದರ ಹೆಸರುಗಳಲ್ಲಿಯೇ ಅವುಗಳ ಉಪಯೋಗಿ ಕೆಲಸಗಳನ್ನು ಗುರುತಿಸಬಹುದು. 2013 ರಲ್ಲಿ ಯುನೆಸ್ಕೋದಿಂದ ಈ ಕೋಟೆಯೊಳಗೊಂಡು, ಜೈಘರ, ನಹರಘರ ಕೋಟೆಗಳನ್ನೂ ಸಹ ಯುನೆಸ್ಕೋ ವಲ್ರ್ಡ್ ಹೆರಿಟೇಜ್ ಮಾನುಮೆಂಟ್ಸ್ಗಳೆಂದು ಘೋಷಿಸಿದೆ... 1727 ರಲ್ಲಿ ರಾಜಾ ಸವಾಯಿ ಜೈಸಿಂಗ್ನು ಇದರ ರಾಜಧಾನಿಯನ್ನು ಜೈಪುರಕ್ಕೆ ಸ್ಥಳಾಂತರಿಸಿದನು. ಹೀಗಾಗಿ 1036 ರಲ್ಲಿ ವಶಪಡಿಸಿಕೊಳ್ಳುವದಕ್ಕಿಂತ ಮೊದಲು ಇದನ್ನು ಮೀನಾಗಳು ನಿರ್ಮಿಸಿ ಆಳುತ್ತಿದ್ದರು. ಹೀಗೆ ಸ್ಥಾಪಿಸಿದ ರಾಜಪೂತ ರಾಜಾಡಳಿತ ಸುಮಾರು ಏಳು ಶತಮಾನದ ವರೆಗೂ ಅದರ ಎಲ್ಲಾ ಕುರುಹುಗಳನ್ನು, ತನ್ನ ಮಡಿಲಲ್ಲಿ ಇಂದಿಗೂ ಇಟ್ಟುಕೊಂಡಿದೆ ಈ ಕೋಟೆ ಮತ್ತು ಈ ಮಹಲು.
ಈ ಮೊದಲು ಅರಮನೆಯನ್ನು ಪ್ರತಿ ತಲೆಮಾರಿನ ರಾಜರೂ ಇನ್ನಷ್ಟು ಉತ್ತಮಪಡಿಸಿಕೊಳ್ಳುತ್ತ ಬಂದಿದ್ದು ತಿಳಿಯಿತು , ಮೊದಲು ಈಗಿನ ಜೈಘರ ಫೋರ್ಟನಲ್ಲಿ ಇದ್ದ ಅರಮನೆಯನ್ನು ಅದರಲ್ಲೂ ಕ್ರಿಶ 1600 ರಲ್ಲಿ ರಾಜಾ ಮಾನ ಸಿಂಗ್ ಈಗಿನ ಆಮೇರ್ನಲ್ಲಿ ವಿಸ್ತರಿಸಿದ. ಎರಡೂ ಕೋಟೆಗಳು ಒಂದಕ್ಕೊಂದು ಅಕ್ಕಪಕ್ಕದಲ್ಲಿಯೇ ಇದ್ದು, ರಾಜಾ ಮಾನಸಿಂಗ್ನ ಆಡಳಿತದಲ್ಲಿ ಜೈಘರ್ ಕೋಟೆಯನ್ನು ಸೈನ್ಯವಿರಿಸಲು ಉಪಯೋಗಿಸಲಾಯಿತು. ಮಾನಸಿಂಗ್ ಈ ಅರಮನೆಯ ಬಹಳಷ್ಟು ಭಾಗಗಳನ್ನು ನಿರ್ಮಿಸಿದ. ಎಷ್ಟೊಂದು ಷಡ್ಯಂತ್ರಗಳು, ಕುತಂತ್ರಗಳು ಹುದುಗಿವೆಯೋ ಒಂದೊಂದು ಕೋಟೆಯ ಹೃದಯದಲ್ಲಿ. ಈ ಮಹಾರಾಜರ, ಅರಮನೆಗಳ ಜೀವನ ನಾಟಕಗಳಲ್ಲಿ ಈ ಷಡ್ಯಂತ್ರಗಳು ಕೂಡ ಹಾಸುಹೊಕ್ಕಾದ ಜೀವಂತ ಪಾತ್ರಗಳೇ ಎಂಬುದು ಆ ಕಥೆಗಳ ಪುಟಪುಟಗಳಲ್ಲಿ ಅರಿವಿಗೆ ಬರುವುದು. ಎಷ್ಟೊಂದು ಅಮಾಯಕ ಜೀವಗಳ ಬದುಕುಗಳನ್ನು ಬಲಿಪಡೆದು ತನ್ನ ಹಾಡು ರೂಪಿಸಿಕೊಂಡಹವೋ ಈ ಕೋಟೆಗಳು. ಅದರ ಕಲ್ಲು ಕಲ್ಲುಗಳಿಗೆ ಕಿವಿಯಾಣಿಸಿದರೆ, ಉಜ್ಜಯಿನಿಯ ಭೋಜರಾಜನ ಸಿಂಹಾಸನದ ಒಂಭತ್ತು ಗೊಂಬೆಗಳಂತೆ ನೂರೆಂಟು ರೌದ್ರಮಯ ಕಥೆ ಉಪಕಥೆಗಳನ್ನು ಹೇಳಿಯಾವು, ಮ್ಯೂಜಿಯಂನಲ್ಲಿನ ಚಿತ್ರದಲ್ಲಿ, ಹೆಣ್ಣೊಂದು ರಾಜನನ್ನು ಕೊಲ್ಲುವ ಷಡ್ಯಂತ್ರದ ತೈಲಚಿತ್ರವೊಂದಿದೆ, ಮನುಷ್ಯನ ತಾಮಸ ಗುಣವನ್ನು ಹೇಗೆ ಹಿಡಿದಿಟ್ಟಿದೆ ನೋಡಿ, ಈ ಚಿತ್ರವೂ ಆ ಅರಮನೆಯ ಇತಿಹಾಸದ ಘಟನೆಯೊಂದನ್ನೇ ಹೇಳುತ್ತಿದೆ. ರಾಜನ ಮಂಚವು ನೆಲದಿಂದ ಆರೇ ಇಂಚಷ್ಟೆ ಎತ್ತರವೇಕೆ ಎಂದು ಕೇಳಿದ್ದಕ್ಕೆ, ಷಡ್ಯಂತ್ರಕ್ಕಾಗಿ, ಯಾರೂ ಮಂಚದ ಕೆಳಗೆ ನುಸುಳಬಾರದು ಎಂಬ ಎಚ್ಚರವಂತೆ! ವಾಹ್ ಬದುಕೇ ವಾಹ್ ! ' ಯೆ ಭೀ ಕೋಯೀ ಜೀನಾ ಹೈ? ಯಾ ಮರನೇ ಕೀ ತರೀಕಾ ಹೈ........
ಇಲ್ಲಿಂದ ಮುಂದೆ ಜೈಪುರದ ಸುಪ್ರಸಿದ್ಧ ಜಂತರ್ ಮಂತರ್ಗೆ ತೆರಳಿದೆವು.. ಸವಾಯಿ ಜೈ ಸಿಂಗ್, ಈ ನಕ್ಷತ್ರ ಮಂಡಲ, ಹಾಗೂ ಸಮಯದ ಕಾಲಯಂತ್ರವನ್ನು ಸ್ಥಾಪಿಸಿದ್ದು , ಒಟ್ಟಾರೆ ಐದು ಕಡೆಗಳಲ್ಲಿರುವ ಆಬ್ಸರ್ವೇಟರಿಗಳಲ್ಲಿ ಇದೇ ಇಂದಿಗೂ ಸುಸ್ಥಿತಿಯಲ್ಲಿದೆ. ಜಂತರ್ ಮಂತರ್ಗಳು ಉಜ್ಜೈನಿ, ಮಥುರಾ ಹಾಗು ದೆಹಲಿಗಳಲ್ಲಿವೆ. ಇನ್ನೊಂದು ಬಹುಶ: ಗ್ವಾಲಿಯರ್? ಹೌದೇನೊ..ಈ ಆಬ್ಸರ್ವೇಟರಿಯಲ್ಲಿ 14 ಮುಖ್ಯವಾದ ಕಲ್ಲು ಇಟ್ಟಿಗೆಗಳಿಂದ ನಿರ್ಮಿಸಿದ ಂiÀiಂತ್ರವಾಸ್ತುಗಳಿವೆ. ಇದರಲ್ಲಿ ಗ್ರಹಣ, ಸಮಯವನ್ನು ನಿಖರವಾಗಿ ಅಳೆಯಬಹುದು. ಇಲ್ಲಾ ರಾಶಿಚಕ್ರಗಳನ್ನೂ ಅದೇ ಕೋನದಲ್ಲಿ ಕಟ್ಟಿ, ಇದರ ನಕ್ಷತ್ರಗಳ ಚಲವನಲನಗಳನ್ನು ಅಭ್ಯಸಿಸಬಹುದು. 1901 ರಲ್ಲಿ ಇದನ್ನು ನವೀಕರಣಗೊಳಿಸಲಾಯಿತು, ಹಾಗೂ 1948 ರಲ್ಲಿ ನ್ಯಾಶನಲ್ ಮಾನ್ಯುಮೆಂಟ್ ಎಂದು ಘೋಷಿಸಲಾಗಿದೆ. ಸಮ್ರಾಟ್ ಯಂತ್ರ, ಅಥವಾ ಸೂರ್ಯಯಂತ್ರವು 27 ಮೀಟರು ಎತ್ತರವಿದ್ದು, ಇದರಿಂದ ಸಮಯವನ್ನು ನಿಖರವಾಗಿ ಅಳೆಯಬಹುದು. ಈ ಯಂತ್ರದ ನೆರಳು ಒಂದು ಸೆಕೆಂಡಿಗೆ ಒಂದು ಮಿಲೀಮೀಟರು ಚಲಿಸುವುದನ್ನು ಬರಿಗಣ್ಣಿಂದಲೇ ನೋಡಬಹುದು. ಒಂದು ನಿಮಿಷದಲ್ಲಿ ಅಂಗೈಯಗಲ (6 ಸೆಂ. ಮೀ) ಚಲಿಸುವುದನ್ನು ಗೈಡ್ ತೋರಿಸಿ, ಆಶ್ಚರ್ಯಪಡಿಸಿದ. ಹಾಗೆಯೇ ಇಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವಾರು ಉಪನ್ಯಾಸ ಶಿಬಿರಗಳು ಜರುಗುವವು ಎಂಬುದಾಗಿ ಗೊತ್ತಾಗುತ್ತಿದ್ದಂತೆಯೇ, ಖಗೋಳ ವೀಕ್ಷಣೆಯ ಅಭ್ಯಸಕ್ಕೇನೋ ಸರಿ,, ಆದರೆ ಜ್ಯೋತಿಷ್ಯವೆಂದ ಕ್ಷಣ ಶೇಕ್ಷಪಿಯರನ ಮಾತು ಜ್ಞಾಪಕಕ್ಕೆ ಬಂತು, ' it is not in the stars to hold our destiny but in ourselves' ದೈವÀಕ್ಕಿಂತ ಸ್ವಂತ ಪರಿಶ್ರಮಕ್ಕೆ ಯೋಗ್ಯತೆ ಹೆಚ್ಚು ಅನ್ನುವುದೇ ಹೆಚ್ಚು ಸೂಕ್ತವೇನೋ ಎಂದಿತು ಮನ.
ಚಿತ್ರಕೃಪೆ: ಇಂಟರ್ನೆಟ್
Comments
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ...
ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ತಮ್ಮ ರಾಜಸ್ಥಾನ ಪ್ರವಾಸದ ಎರಡನೆ ಕಂತನ್ನು ನೋಡಿದೆ ತಮ್ಮ ಪ್ರವಾಸದ ಅನುಭವದ ಗ್ರಹಿಕೆಯಲ್ಲಿ ಸುಲಲಿತವಾಗಿ ತೆರೆದುಕೊಳ್ಳುತ್ತ ನಮ್ಮನ್ನು ರಂಜಿಸುವುದರ ಜೊತೆಗೆ ಯೋಚನೆಗೆ ಹಚ್ಚುತ್ತ ದಟ್ಟವಾದ ವಿವರಗಳೊಂದಿಗೆ ಓದುಗರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಅಲ್ಲಿನ ಶಿಲ್ಪಗ್ರಾಮದ ವಿವರಗಳು ತಮ್ಮ ನಮ್ಮ ರಾಜ್ಯದ ಗುಡಿ ಕೈಗಾರಿಕೆಗಳ ಕುರಿತ ತಮ್ಮ ಯೋಚನಾ ಲಹರಿ ಮನ ಮುಟ್ಟುವಂತೆ ರೂಪದಳೆದಿದೆ, ಸೊಗಸಾದ ಪ್ರವಾಸ ಕಥನ ದನ್ಯವಾದಗಳು.
In reply to ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ... by H A Patil 1
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ...
ಆಕರ್ಷಕ ನಿರೂಪಣೆ, ಉತ್ತಮ ಮಾಹಿತಿ, ಪೂರಕ ಚಿತ್ರಗಳು ಇದನ್ನು ಒಳ್ಳೆಯ ಪ್ರವಾಸಕಥನವಾಗಿಸಿವೆ, ಅಭಿನಂದನೆಗಳು.
In reply to ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ... by kavinagaraj
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ...
ಚಿಂತಕ, ವಾಗ್ಮಿ, ಕವಿನಾಗರಾಜ್ ಸರ್, ತಮ್ಮ ಮೆಚ್ಚುಗೆಗೆ ತುಂಬು ಮನದಿಂದ ವಂದಿಸುವೆ ಸರ್
In reply to ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ... by H A Patil 1
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ...
ಮಾನನೀಯ ಹೆಚ್ ಎ ಪಾಟೀಲ ಸರ್ ತಮ್ಮ ತುಂಬು ಹೃದಯದ ಮೆಚ್ಚುಗೆಗೆ ಧನ್ಯತೆಯೊಂದಿಗೆ ನಮಿಸುವೆ ಸರ್