ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4
ಹೆಜ್ಜೆ 16:
"ನಮ್ಮ ಅಸ್ತಿತ್ವ ಅನ್ನುವುದು ಎಲ್ಲಕ್ಕಿಂತಲೂ ದೊಡ್ಡದು, ಅದಿರುವುದರಿಂದಲೇ ಜಗತ್ತಿನ ಎಲ್ಲಾ ಸಂಗತಿಗಳಿಗೆ ಅರ್ಥ ಬಂದಿರುವುದು ಎಂಬುದನ್ನು ತಿಳಿದೆವು. ಈ ಅಸ್ತಿತ್ವಕ್ಕಿಂತಲೂ ದೊಡ್ಡ ಸಂಗತಿ ಇದೆಯೇ?"
"ಒಂದಕ್ಕಿಂತ ಮತ್ತೊಂದು ದೊಡ್ಡದು ಇದ್ದೇ ಇರುತ್ತದೆ. ಹಾಗೆಯೇ ಅಸ್ತಿತ್ವಕ್ಕೆ ಕಾರಣವಾದ ಅಂಶ ಅಸ್ತಿತ್ವಕ್ಕಿಂತಲೂ ದೊಡ್ಡದು. ಈ ಅಸ್ತಿತ್ವ ಅನ್ನುವುದು ತನ್ನಿಂದ ತಾನೇ ಪರಿಪೂರ್ಣವಲ್ಲ. ಅಸ್ತಿತ್ವದಲ್ಲಿರುವ ಬಯಕೆ ಅದಕ್ಕೂ ಮೊದಲು ಇರುವುದಾಗಿದ್ದು ಅಸ್ತಿತ್ವ ಅದನ್ನು ಅವಲಂಬಿಸಿದೆ. ನಾವು ಒಂದು ರೀತಿಯ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ 'ಆಸೆ'ಯೇ ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ 'ಆಸೆ'! ಇಂದು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ. ಇದು ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ.
ಸಾಯಬಯಸುವ ಯಾವುದೇ ಜೀವಿ -ಅದು ಮಾನವನಿರಬಹುದು, ಪ್ರಾಣಿಯಿರಬಹುದು, ಕ್ರಿಮಿ-ಕೀಟವಿರಬಹುದು, ಗಿಡ-ಮರಗಳಿರಬಹುದು- ಇದೆಯೇ? ಆತ್ಮಹತ್ಯೆ ಮಾಡಿಕೊಳ್ಳುವವರು ಇರುತ್ತಾರೆ ಎಂದು ಹೇಳಬಹುದು. ಅವರು ಸಾಯುವುದೂ, ಸಾಯಬಯಸುವುದೂ 'ಬದುಕಲಿಕ್ಕಾಗಿಯೇ' ಆಗಿರುತ್ತದೆ. ಎಷ್ಟು ದೀರ್ಘಕಾಲದವರೆಗೆ ಬದುಕಲು ಸಾಧ್ಯವೋ ಅಷ್ಟೂ ಕಾಲ ಜನರು ಬದುಕಿರಬಯಸುತ್ತಾರೆ. ಒಳಾಂತರಂಗದಲ್ಲಿ ಅಡಗಿದ ಬಯಕೆಯೆಂದರೆ ಅಸ್ತಿತ್ವದ ಮಹತ್ವವನ್ನು ಚಿರವಾಗಿ ಇರುವಂತೆ ಮಾಡುವುದೇ ಆಗಿದೆ! ಶರೀರದ ಮೂಲಕ ಹೊಂದಿರುವ ಅಸ್ತಿತ್ವವನ್ನೇ ನಮ್ಮ ಅಸ್ತಿತ್ವ ಎಂದು ತಪ್ಪಾಗಿ ಗುರುತಿಸಿಕೊಂಡರೂ, ಶಾರೀರಿಕ ಅಸ್ತಿತ್ವಕ್ಕೂ ಮೀರಿ ಮುಂದುವರೆಯುವ ಸೂಕ್ಷ್ಮ ತುಡಿತ ಅಲ್ಲಿರುತ್ತದೆ.. ಈ ಕಾರಣದಿಂದಲೇ ಹೆಚ್ಚು ಹೆಚ್ಚು ಬಯಸುತ್ತಾ ಹೋಗುವುದು, ಸಂಗ್ರಹಿಸುತ್ತಾ ಹೋಗುವುದು ಮತ್ತು ಅಸ್ತಿತ್ವವನ್ನು ಬಾಹ್ಯವಾಗಿ ವಿಸ್ತರಿಸಿಕೊಳ್ಳುತ್ತಾ ಹೋಗುವುದು! ಇದನ್ನು ಅನುಭವಿಸುವ ಸಲುವಾಗಿಯೇ ದೀರ್ಘಾಯಸ್ಸು ಕೋರುವುದು! ನಮ್ಮ ಪ್ರಾಪ್ತಿಯನ್ನು ಮತ್ತು ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಬಯಸುವುದೇ ನಮ್ಮ ಆಸೆಯಾಗಿದೆ. ಇದಕ್ಕಾಗಿಯೇ ಎಲ್ಲಾ ಚಟುವಟಿಕೆಗಳು! ಇರುವುದಕ್ಕಿಂತಲೂ ಹೆಚ್ಚಿನದನ್ನು ಎಲ್ಲಾ ಸಾಧ್ಯ ಮಾರ್ಗಗಳಿಂದ ಪಡೆಯಬಯಸುತ್ತೇವೆ. ಈಗಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ನಾಡಿದ್ದು, ಹೀಗೆಯೇ ಮುಂದುವರೆದು ಅನಂತಕಾಲದವರೆಗೆ ಇಡೀ ವಿಶ್ವವೇ ನಮ್ಮದಾಗಬೇಕೆಂಬುವವರೆಗೆ ಈ ಆಸೆ ಅನ್ನುವುದು ಅಪ್ರಜ್ಞಾತ್ಮಕವಾಗಿ ಸುಪ್ತವಾಗಿರುತ್ತದೆ. ಬದುಕುವ ಆಸೆ ಜೀವಿಯನ್ನು ಬದುಕಿಸಿದೆ, ಬದುಕಿಸುತ್ತಿದೆ."
ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ
ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |
ಹಿಂದಕೋ ಮುಂದಕೋ ಬಂಡಿ ಸಾಗುವುದು
ನಶಿಸಿದರೆ ಏರುವೆ ಹೊಸಬಂಡಿ ಮೂಢ ||
ಹೆಜ್ಜೆ 17:
"ಬದುಕಿರುವುದು ದೊಡ್ಡದು, ಅದಕ್ಕಿಂತಲೂ ದೊಡ್ಡದು ಬದುಕುವ ಆಸೆ ಎಂಬುದನ್ನು ಅರ್ಥ ಮಾಡಿಸಿದಿರಿ. ಇದಕ್ಕಿಂತಲೂ ಮಹತ್ವದ ಸಂಗತಿ ಕುರಿತು ಹೇಳುವಿರಾ?"
"ಬದುಕಿರುವುದಕ್ಕೆ ಕಾರಣವಾದ ಸಂಗತಿ ಅದಕ್ಕಿಂತಲೂ ದೊಡ್ಡದಾಗಿರಲೇಬೇಕಲ್ಲವೇ? ಅದೇ 'ಪ್ರಾಣ' ಅಥವ 'ಜೀವ'! ಇದು ನಿಗೂಢವಾಗಿದ್ದು, ಅದರೊಂದಿಗೇ ಇದ್ದರೂ ಅದನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಪ್ರಾರಂಭವಾದೊಡನೆ ಅಂತ್ಯದೆಡೆಗೆ ಸಾಗುವ, ಅಂತ್ಯವಾದೊಡನೆ ಪ್ರಾರಂಭದೆಡೆಗೆ ಧಾವಿಸುವ, ಅಂತ ಮತ್ತು ಅನಂತದ ಸಂಗಮ ಸ್ಥಳದಲ್ಲಿ ಇರುವುದೇ ಈ ಜೀವ! ಇದು ಅಂತವನ್ನೂ ಪ್ರತಿನಿಧಿಸುತ್ತದೆ ಮತ್ತು ಅನಂತವನ್ನೂ ಪ್ರತಿನಿಧಿಸುತ್ತದೆ.
'ಅವರು ನಮ್ಮ ತಂದೆ/ತಾಯಿ', 'ಇವನು ನನ್ನ ಅಣ್ಣ/ತಮ್ಮ', ಇತ್ಯಾದಿ ಹೇಳುತ್ತೇವಲ್ಲಾ ಹೀಗಂದರೆ ಏನು? ಅವರುಗಳ ಶರೀರವನ್ನು ತಂದೆ, ತಾಯಿ, ಅಣ್ಣ, ತಮ್ಮ, ಇತ್ಯಾದಿ ಭಾವಿಸುತ್ತೇವೆಯೇ? ಅವರುಗಳಲ್ಲಿ ಇರುವ ಏನೋ ಒಂದನ್ನು ನಾವು ತಂದೆ, ತಾಯಿ, ಇತ್ಯಾದಿಯಾಗಿ ಕಾಣುತ್ತೇವೆ. ಉಪನಿಷತ್ತು ಹೇಳುತ್ತದೆ: 'ಪ್ರಾಣವೇ ತಂದೆ, ಪ್ರಾಣವೇ ತಾಯಿ, ಪ್ರಾಣವೇ ಸೋದರ, ಪ್ರಾಣವೇ ಉಸಿರು, ಪ್ರಾಣವೇ ಗುರು, ಪ್ರಾಣವೇ ಬ್ರಹ್ಮ'! ಒಂದು ಚಕ್ರದ ಕೀಲುಗಳು ಹೇಗೆ ಅದರ ಮಧ್ಯಭಾಗದಲ್ಲಿ ಜೋಡಿಸಲ್ಪಟ್ಟಿವೆಯೋ, ಹಾಗೆ ಪ್ರತಿಯೊಂದು ಸಂಗತಿಯೂ ಸಹ ಜೀವತತ್ತ್ವಕ್ಕೆ ಪೋಣಿಸಲ್ಪಟ್ಟಿವೆ. ಪ್ರಾಣವಿರದಿದ್ದರೆ ಯಾವುದಕ್ಕೂ ಅರ್ಥವೇ ಇರುವುದಿಲ್ಲ. ಬದುಕಿರುವವರೆಗೆ ಮಾತ್ರ ಬೆಲೆ. ಪ್ರಾಣವಿರದಾಗ ನಾವು ಏನೂ ಅಲ್ಲ. ಬದುಕಿದ್ದಾಗ ನಮ್ಮ ಶರೀರವನ್ನು 'ನಾವು' ಎಂದು ಅಂದುಕೊಂಡಿರುತ್ತೇವಲ್ಲಾ ಅದು ವಾಸ್ತವವಾಗಿ 'ನಾವು' ಆಗಿರುವುದಿಲ್ಲ, ಅದು 'ಪ್ರಾಣ'ವೇ ಆಗಿರುತ್ತದೆ.
'ಜನರನ್ನು ನೋಯಿಸಬೇಡಿ' ಎನ್ನುತ್ತೇವಲ್ಲಾ, ಈ 'ಜನರು' ಅಂದರೆ ಯಾರು? 'ನೋಯಿಸುವುದು' ಅಂದರೆ ಏನು? ಜನರು ಅಂದರೆ ಖಂಡಿತ ಶರೀರಗಳಂತೂ ಅಲ್ಲ! ಅಸಭ್ಯ ವ್ಯಕ್ತಿಯಿಂದ ಯಾರಿಗಾದರೂ ನೋವಾಗುತ್ತದೆ ಎಂದರೆ ಅವನ ಪ್ರಾಣತತ್ತ್ವಕ್ಕೆ ಘಾಸಿಯಾಗಿದೆ ಎಂದರ್ಥ. ಬಿಡಿಸಿ ಹೇಳಬೇಕೆಂದರೆ ವ್ಯಕ್ತಿಯೆಂದರೆ ಆತನು ಹೊಂದಿರುವ ಶರೀರವಲ್ಲ, ಅವನಲ್ಲಿರುವ 'ಪ್ರಾಣ'ವೇ ಹೊರತು ಬೇರೆ ಅಲ್ಲ. ತಂದೆ, ತಾಯಿ, ಹಿರಿಯರನ್ನು ಅಗೌರವಿಸಿದರೆ ಅವರುಗಳು ಹೊಂದಿರುವ ಶರೀರವನ್ನು ಅಗೌರವಿಸಿದಂತೆ ಅಲ್ಲ, ಅವರಲ್ಲಿರುವ ಪ್ರಾಣತತ್ತ್ವವನ್ನು ಅಗೌರವಿಸಿದಂತೆ! ಅವರುಗಳ ಶರೀರಗಳಲ್ಲಿರುವ ಆ ಪ್ರಾಣತತ್ವ ಹೊರಟುಹೋದಾಗ ಎಲ್ಲವೂ ಬದಲಾಗಿಬಿಡುತ್ತದೆ. ತಂದೆ ಎಂದು ಗೌರವಿಸಲ್ಪಡುತ್ತಿದ್ದ ವ್ಯಕ್ತಿ ಸತ್ತರೆ ಅವನ ಮಗ ತಂದೆಯ ದೇಹವನ್ನು ಚಿತೆಯಲ್ಲಿರಿಸಿ ಸುಡುತ್ತಾನೆ ಅಥವ ತನ್ನ ಸಂಪ್ರದಾಯದಂತೆ ಹೂಳುವುದೋ ಮತ್ತೇನನ್ನೋ ಮಾಡುತ್ತಾನೆ. ಆಗ ಯಾರೂ 'ತಂದೆಯನ್ನೇ ಸುಡುತ್ತಿದ್ದಾನೆ/ಹೂಳುತ್ತಿದ್ದಾನೆ' ಎಂದು ಆಕ್ಷೇಪಿಸುವುದಿಲ್ಲ. ಕೆಲವೇ ಘಂಟೆಗಳ ಹಿಂದೆ ಬದುಕಿದ್ದಾಗ ಇದ್ದ ಮಹತ್ವ ಸತ್ತ ಕೂಡಲೇ ಇಲ್ಲವಾಗುತ್ತದೆ. ಅದು ಪ್ರೀತಿಪಾತ್ರರಾದ ಯಾರೇ ಆಗಬಹುದು, ಗುರು ಆಗಬಹುದು, ಸಾಮಾಜಿಕ ನಾಯಕನಾಗಿರಬಹುದು, ಚಕ್ರವರ್ತಿಯೇ ಇರಬಹುದು. ಅದರಲ್ಲಿ ಏನೂ ವ್ಯತ್ಯಾಸವಾಗದು. ಅವರನ್ನು ಸುಡುವುದೋ, ಹೂಳುವುದೋ, ಮತ್ತೊಂದೇನನ್ನೋ ಮಾಡುತ್ತೇವೆ. ಜನ ಏನೆನ್ನುತ್ತಾರೆ? "ಉತ್ತಮ ರೀತಿಯಲ್ಲಿ ಸಂಸ್ಕಾರ ಮಾಡಿ ಒಳ್ಳೆಯ ಕೆಲಸ ಮಾಡಿದೆ" ಅನ್ನುತ್ತಾರೆ! ಬದುಕಿದ್ದಾಗ ಹೀಗೆ ಮಾಡಿದರೆ? ಕೊಲೆ ಅನ್ನುತ್ತಾರೆ, ಹೀನಕೃತ್ಯ ಅನ್ನುತ್ತಾರೆ! ಇದೇ ವ್ಯತ್ಯಾಸ! ನಾವು ಗೌರವಿಸಬೇಕಿರುವುದು ಶರೀರಗಳನ್ನಲ್ಲ, ಶರೀರದೊಳಗಿನ ಪ್ರಾಣತತ್ವಗಳನ್ನು!"
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮನೇ ನೀನು
ನೀನಲ್ಲ ತನುವೆಂಬುದರಿಯೋ ಮೂಢ||
ಹೆಜ್ಜೆ 18:
"ನಾವು ಎಂದರೆ ಶರೀರವಲ್ಲ, ನಮ್ಮೊಳಗಿನ ಜೀವ ಎಂಬುದು ಸರಿ. ಮುಂದಿನ ವಿಷಯದ ಬಗ್ಗೆ ತಿಳಿಯಲು ಕುತೂಹಲವಿದೆ. ತಿಳಿಸಬಹುದೇ?"
"ಬದುಕಿನ ಉದ್ದೇಶ, ಮಹತ್ವ ಅರಿಯುವುದೇ ಮುಂದಿನ ಹೆಜ್ಜೆಯಾಗಿದೆ. ಈ ಹೆಜ್ಜೆಯನ್ನು ಇಡಲು ನಮ್ಮ ಜೀವನವೆಂಬ ಪಾಠಶಾಲೆ ಕಲಿಸಿದ, ಕಲಿಸುವ ಪಾಠಗಳೇ ಅರ್ಥಾತ್ ಅನುಭವಗಳೇ ಮಾರ್ಗದರ್ಶಿಯಾಗಿವೆ. ಬದುಕುವ ಆಸೆ ನಮ್ಮನ್ನು ಬದುಕಿಸುತ್ತದೆ, ಈಗಿನ ಸ್ಥಿತಿಗಿಂತ ಉನ್ನತ ಸ್ಥಿತಿಗೆ ಏರುತ್ತೇವೆಂಬ ಒಳ ಆಸೆ ನಮ್ಮಲ್ಲಿ ಜಾಗೃತವಾಗಿದ್ದು ಬದುಕಿಗೆ ಪ್ರೇರಿಸುತ್ತದೆ ಎಂಬ ಸತ್ಯವನ್ನು ಅರಿತೆವಲ್ಲವೇ? ಇದರ ಮುಂದುವರೆದ ಸ್ಥಿತಿಯೇ ಆತ್ಮನನ್ನು, ಪರಮಾತ್ಮನನ್ನು ಅರಿಯುವ ಕ್ರಿಯೆಯಾಗಿದ್ದು, ಇದು ಸುಪ್ತವಾಗಿರುತ್ತದೆ. ಇದೇ ಸತ್ಯಾನ್ವೇಷಣೆ. ಇದು ಒಬ್ಬೊಬ್ಬರಲ್ಲಿ ಒಂದೊಂದು ಪ್ರಮಾಣದಲ್ಲಿದ್ದು ಅವರವರ ಸಾಧನೆ ಅನುಸರಿಸಿ ಮುನ್ನಡೆಯುತ್ತಿರುತ್ತದೆ. ಇದು ನಿರಂತರ ಕ್ರಿಯೆಯಾಗಿದೆ. ಈ ದೇವರನ್ನು ಕಾಣುವ, ಕಾಣಬೇಕೆನ್ನಿಸುವ, ಅರಿಯಬೇಕೆನ್ನಿಸುವ, ಸತ್ಯ ತಿಳಿಯಬೇಕೆನ್ನುವ ವಿಚಾರವನ್ನು ನಮ್ಮ ತಲೆಯಲ್ಲಿ ತುರುಕಿದವರು ಯಾರು? ಈ ವಿಷಯದಲ್ಲಿ ಅನೇಕ ಮಹಾಮಹಿಮರು, ಸಾಧು-ಸಂತರು, ದಾರ್ಶನಿಕರು, ಧಾರ್ಮಿಕರು ಅನೇಕ ರೀತಿಯ ಮಾರ್ಗದರ್ಶನಗಳು, ವಿಚಾರಗಳನ್ನು ನೀಡಿದ್ದಾರೆ, ನೀಡುತ್ತಿರುತ್ತಾರೆ. ಸಾಧಕರು ಇವೆಲ್ಲವನ್ನೂ ಜ್ಞಾನ ಗಳಿಸುವ ಸಲುವಾಗಿ ತಿಳಿದುಕೊಳ್ಳುತ್ತಾರೆ, ಮನನ ಮಾಡಿಕೊಳ್ಳುತ್ತಾರೆ, ಮಥಿಸುತ್ತಾರೆ, ಧ್ಯಾನಿಸುತ್ತಾರೆ, ಅಂತಿಮವಾಗಿ ಸತ್ಯವನ್ನು ಕಂಡುಕೊಳ್ಳುತ್ತಾರೆ. ಲೋಕದಲ್ಲಿ ಎಲ್ಲಾ ರೀತಿಯ ಜನರಿರುತ್ತಾರೆ. ತಿಳಿದಷ್ಟಕ್ಕೇ ಸಾಕು ಅಂದುಕೊಳ್ಳುವವರು, ತಿಳಿದದ್ದೇ ಸತ್ಯ ಎಂದ ವಾದಿಸುವವರು, 'ನಮ್ಮ ಗುರುಗಳು ಹೇಳಿದ್ದಾರಲ್ಲಾ, ಅವರು ಹೇಳಿದ ಮೇಲೆ ಮುಗಿಯಿತು, ಅದು ಸತ್ಯವೇ' ಎಂದು ವಿಚಾರ ಮಾಡದಿರುವವರು, ತಿಳಿಯುವ ಕುತೂಹಲವನ್ನೇ ತೋರದವರು, ಎಲ್ಲಾ ಸುಳ್ಳು ಅನ್ನುವವರು, ತಿಳಿಯಲು ಇಚ್ಛಿಸದವರು, ಹೀಗೆ ವಿವಿಧ ವಿಚಾರಿಗಳಿರುತ್ತಾರೆ. ಆದರೆ, ಒಂದಂತೂ ನಿಜ, ಯಾವ ಪ್ರಮಾಣದಲ್ಲೇ ಆಗಲಿ, 'ಇದು ಏನು?' ಎಂದು ತಿಳಿಯುವ ಕುತೂಹಲವಂತೂ ಸುಪ್ತವಾಗಿ ವಿವಿಧ ಪ್ರಮಾಣಗಳಲ್ಲಿ ಅಂತರ್ಗತವಾಗಿರುವುದಂತೂ ಸತ್ಯ. ಈ ಸತ್ಯಾನ್ವೇಷಣೆ ಅನ್ನುವುದು ಬಹಳ ದೊಡ್ಡ ವಿಷಯವಾಗಿದ್ದು ಸುದೀರ್ಘವಾಗಿ ಚರ್ಚಿಸಬಹುದಾದ, ಚರ್ಚಿಸಬೇಕಾದ ಸಂಗತಿಯಾಗಿದೆ. ತರ್ಕದ ಎಳೆಯನ್ನು ಬಿಡಿಸುತ್ತಾ ಹೋದಂತೆ ನಮಗೆ ಸತ್ಯದ ಅರಿವಾಗುತ್ತಾ ಹೋಗುತ್ತದೆ. ವೇದಗಳು ಹೇಳುವುದೂ ಇದನ್ನೇ! 'ಸತ್ಯವನ್ನು ಕಂಡುಕೊಳ್ಳಿರಿ, ಸತ್ಯವನ್ನು ಆವಿಷ್ಕರಿಸಿರಿ, ಅಸತ್ಯವೆಂದು ಕಂಡುದನ್ನು ಕಿತ್ತೆಸೆಯಿರಿ.' (ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || -ಋಕ್.೧.೮೬.೯) ಯಾವುದನ್ನೂ ಕಣ್ಣು ಮುಚ್ಚಿ ಒಪ್ಪಬೇಕಿಲ್ಲ, ಯಾರೋ ಹೇಳಿದರೆಂದು ಕೇಳಬೇಕಿಲ್ಲ, ಕೇಳಿರಿ, ತಿಳಿಯಿರಿ, ವಿಚಾರ ಮಾಡಿರಿ, ಚರ್ಚಿಸಿರಿ, ಅಂತರಂಗಕ್ಕೆ ಒಪ್ಪಿಗೆಯಾದರೆ ಸ್ವೀಕರಿಸಿ, ಸತ್ಯವನ್ನು ನೀವೇ ಕಂಡುಕೊಳ್ಳಿ ಎಂಬ ಮಾತು ವೈಚಾರಿಕ ಪ್ರಜ್ಞೆ ಇರಬೇಕೆಂಬುದನ್ನು ಒತ್ತಿ ಹೇಳುತ್ತದೆ."
ಮುಂದಿನ ಹೆಜ್ಜೆಗಳು:
"ನಿಮ್ಮವೇ ಆಗಿವೆ. ಸಾಕಷ್ಟು ಹೆಜ್ಜೆಗಳನ್ನಿಟ್ಟಿದ್ದೀರಿ. ಮುಂದುವರೆಯಬಲ್ಲಿರಿ. ಹೆಜ್ಜೆಗಳನ್ನಿಡುವ ಮೊದಲು ನಿಲ್ಲಿರಿ, ಸುತ್ತಲೂ ಅವಲೋಕಿಸಿರಿ, ಮುಂದುವರೆಯಿರಿ."
-ಕ.ವೆಂ.ನಾಗರಾಜ್.
Comments
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4
ಒಟ್ಟಾರೆ ಸತ್ಯಾನ್ವೇಷಣೆಯೆನ್ನುವ ನಿರಂತರ ಶೋಧನೆಯೆ ಮುಂದಿನ ಹೆಜ್ಜೆಗಳನ್ನು ಬಿಡಿಸಿಡುವ ಮಾರ್ಗದರ್ಶಿ. . ವೇದಗಳು ಹೇಳುವ ವೈಚಾರಿಕ ಪ್ರಜ್ಞೆಯ ಸಂದೇಶವೂ ಅಷ್ಟೆ ಅರ್ಥಪೂರ್ಣ; 'ಸತ್ಯವನ್ನು ಕಂಡುಕೊಳ್ಳಿರಿ, ಸತ್ಯವನ್ನು ಆವಿಷ್ಕರಿಸಿರಿ, ಅಸತ್ಯವೆಂದು ಕಂಡುದನ್ನು ಕಿತ್ತೆಸೆಯಿರಿ' - ಎನ್ನುತ್ತಲೆ ನಿಮ್ಮದೆ ಮಾತಿನಲ್ಲಿ ಮುಂದಿನ ಹೆಜ್ಜೆಗಳ ಹಾದಿಯ ಅನಾವರಣದ ಸೂತ್ರ ಮರುದನಿಸುತ್ತೇನೆ :
"ಮುಂದಿನ ಹೆಜ್ಜೆಗಳು ನಿಮ್ಮವೇ ಆಗಿವೆ. ಸಾಕಷ್ಟು ಹೆಜ್ಜೆಗಳನ್ನಿಟ್ಟಿದ್ದೀರಿ. ಮುಂದುವರೆಯಬಲ್ಲಿರಿ. ಹೆಜ್ಜೆಗಳನ್ನಿಡುವ ಮೊದಲು ನಿಲ್ಲಿರಿ, ಸುತ್ತಲೂ ಅವಲೋಕಿಸಿರಿ, ಮುಂದುವರೆಯಿರಿ"
In reply to ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4 by nageshamysore
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4
ವಂದನೆಗಳು, ನಾಗೇಶರೇ.
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4
ಮುಂದೆ ಹೆಜ್ಜೆ ಇಟ್ಟಷ್ಟು ಬದುಕಿನ ಹೊಸ ರಹಸ್ಯಗಳು ತಿಳಿಯುತ್ತಲೇ ಹೋಗುತ್ತದೆ ಅನ್ನುವಿರಿ,
ಹಾಗಾಗೆ ಸತ್ಯ ಎಂಬುದುಂದು ಒಂದು ಮಿಥ್ಯೆ ಅನ್ನಬಹುದು ಅಲ್ಲವೇ
ಇಂದು ನಾವು ತಿಳಿಸ ಸತ್ಯ ನಾಳೆ ಮಿಥ್ಯೆ ಅನ್ನಿಸಬಹುದು!
ಹೇಗಾದರು ಸರಿ ಮುಂದಿನ ಹೆಜ್ಜೆ ಇಡುತ್ತಲೇ ಮುಂದುವರೆಯೋಣ! ಅದೇ ಬದುಕು
ಎಂದು ದೇಹ ಮನಸುಗಳು ಜಡವಾಗುವುದೋ ಅಂದೆ ಸಾವು !
In reply to ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4 by partha1059
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4
ಪ್ರತಿಕ್ರಿಯೆಗೆ ವಂದನೆಗಳು, ಪಾರ್ಥರೇ. ಸತ್ಯ ಎಂದರೇನು ಎಂಬ ನಮ್ಮ ಭಾವನೆಯ ಮೇಲೆ ಅದು ಸತ್ಯವೋ, ಮಿಥ್ಯವೋ ಅನ್ನುವುದು ಅವಲಂಬಿಸಿದೆ. ಗುರುತ್ವಾಕರ್ಷಣ ನಿಯಮ ಕಂಡು ಹಿಡಿಯುವ ಮೊದಲೂ ಅದು ಇತ್ತು, ಈಗಲೂ ಇದೆ, ಮುಂದೂ ಇರುತ್ತದೆ. ನಮಗೆ ಗೊತ್ತಾದ ವಿಷಯವದು. ಸತ್ಯವೂ ಹಾಗೆಯೇ! ನಮಗೆ ಗೊತ್ತಿಲ್ಲದಿದ್ದ್ದರೂ, ಗೊತ್ತಾದರೂ, ಗೊತ್ತಾಗದಿದ್ದರೂ ಅದು ಇರುತ್ತದೆ. ಮುಂದಿನ ಹೆಜ್ಜೆಯಿಡುತ್ತಿರುವುದೇ ಪ್ರಗತಿ. ಹೆಜ್ಜೆಯಿಡೋಣ, ನಿಮ್ಮಂತಹವರು ಜೊತೆಗಿದ್ದರೆ ಹಿತಕರ ಪ್ರಯಾಣವೂ ಆಗುತ್ತದೆ.
In reply to ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4 by kavinagaraj
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4
ನಮ್ಮಗೆ ಸತ್ಯ ಅನಿಸಿದು ಬೇರೆಯವರಿಗೆ ಮಿಥ್ಯ ಅನಿಸಬಹುದು ಸರ್.ಸತ್ಯವು,ಮಿಥ್ಯವು ಅವರವರ ಯೋಚನೆ ಮೇಲೆ ಅವಲಂಬಿತ್ತವಾಗಿದೆ.
In reply to ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4 by Nagaraj Bhadra
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4
:) ಧನ್ಯವಾದ, ನಾಗರಾಜ್ ಭದ್ರರವರೇ.
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4
ಕವಿ ನಾಗರಾಜರವರಿಗೆ ವಂದನೆಗಳು
’ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ’ ಪುರಂದರದಾಸರ ಕೀರ್ತನೆಯೊಂದರ ಸಾಲಿನ ಮೂಲಕ ಬದುಕಿನ ಒಳಪುಟಗಳನ್ನು ತೆರೆಯುತ್ತ ಜೀವನದ ದರ್ಶನ ಮಾಡಿಸುತ್ತ ಸಾಗುತ್ತಿರುವ ಲೇಖನ ಮಾಲೆಗಳು ಚೆನ್ನಾಗಿವೆ, ಅವನ್ನು ಓದಿದಂತೆ ಒಂದು ತರಹದ ನಿರಾಳ ಭಾವ ಮನದ ತುಂಬ ಆವರಿಸಿ ಬದುಕನ್ನು ಯೋಚಿಸುವಂತೆ ಮಾಡುತ್ತಿದೆ, ಅದ್ಬುತವಾದ ಆದ್ಯಾತ್ಮಿಕ ಸರಣಿ ಲೇಖನಗಳು, ಧನ್ಯವಾದಗಳು.
In reply to ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4 by H A Patil
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4
ಧನ್ಯವಾದಗಳು, ಪಾಟೀಲರೇ. ಒಂದು ಲೇಖನಕ್ಕೆ ಇದಕ್ಕಿಂತ ಹೆಚ್ಚಿನ ಸಾರ್ಥಕತೆ ಮತ್ತೆ ಯಾವುದಿದೆ? ಧನ್ಯ.
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4
ಕವಿ ನಾಗರಾಜ್ ಅವರಿಗೆ ನಮಸ್ಕಾರಗಳು,
ನಿಮ್ಮ ರಚಿತ ಹೆಜ್ಜೆಯ ಮೇಲೆ ಹಜ್ಜೆಯನಿಕ್ಕುತ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ, ಪ್ರತಿಯೊಬ್ಬರೂ ನೀವು ವಿವರಿಸಿದ ಪ್ರತಿಹೆಜ್ಜೆಗಳನ್ನು ಎಲ್ಲರೂ ದಾಟಿಯೇ ಬಂದಿರುತ್ತಾರೆ ಆದರೆ ಅದರ ಬಗ್ಗೆ ಅಷ್ಟೊಂದು ಲಕ್ಷ್ಯ ಕೊಡುವದದಿಲ್ಲ ನಿಮ್ಮ ಲೇಖನ ಓದಿದವರು ಖಂಡಿತವಾಗಿಯೂ ನಿಮ್ಮ್ ಈ ಹೆಜ್ಜೆಗಳ ಬಗ್ಗೆ ಲಕ್ಷ್ಯಗೊಡುತ್ತಾರೆ ....................:)
ಧನ್ಯವಾದಗಳು.
In reply to ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4 by ravindra n angadi
ಉ: ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ . . . -4
ವಂದನೆಗಳು, ರವೀಂದ್ರ ಎನ್ ಅಂಗಡಿಯವರೇ.