ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 3/3)
ಆಮೇಲಾಮೇಲೆ ಆ ಹೊಸ ಮುದುಕಿಯೂ ಅಲ್ಲಿ ದಿನ ನಿತ್ಯವೂ ನಿಲ್ಲುವ ಪರಿಪಾಠ ಆರಂಭವಾದಾಗ, ಯಾಕೊ ಗಂಭೀರನಿಗೆ ಅವಳನ್ನು ನಿರ್ಲಕ್ಷಿಸಿ ಹಳೆಯ ವೃದ್ಧೆಗೆ ಮಾತ್ರ ಹಣ ತೆತ್ತು ಖರೀದಿಸಲು ಒಂದು ಬಗೆಯ ಮುಜುಗರವೆನಿಸಿತ್ತು. ಆ ಮುಜುಗರದಿಂದ ತಪ್ಪಿಸಿಕೊಳ್ಳಲು ತಿಣುಕುತ್ತಿದ್ದಾಗ, ಅದಕ್ಕೊಂದು ಸರಳ ಉಪಾಯವೂ ಹೊಳೆದುಬಿಟ್ಟಿತ್ತವನಿಗೆ; ಅದರಂತೆ ಪ್ರತಿ ಬಾರಿಯೂ ಸಿಕ್ಕ ಚಿಲ್ಲರೆಯಲ್ಲಿ, ಪೂರ್ತಿ ಡಾಲರನ್ನು ಆ ವೃದ್ಧೆಗಿತ್ತರೆ ಮಿಕ್ಕ ಪುಡಿ ಚಿಲ್ಲರೆಗಾಸನ್ನು ಮಾತ್ರ ಹೊಸ ಮುದುಕಿಗೆ ನೀಡತೊಡಗಿದ. ಒಂದೆರಡು ದಿನ ಇವನನ್ನೆ ಗಮನಿಸಿದ ಆ ಹೊಸ ಮುದುಕಿ, ನಂತರ ಇದ್ದಕ್ಕಿದ್ದಂತೆ ಬರಿಯ ಕಾಸನ್ನು ಮಾತ್ರ ಸ್ವೀಕರಿಸುತ್ತಿದ್ದಳೆ ಹೊರತು ಕೈಲಿದ್ದ ಟಿಶ್ಯೂ ಪೇಪರಿನ ಕಟ್ಟನ್ನು ಮಾತ್ರ ರವಾನಿಸುತ್ತಿರಲಿಲ್ಲ. 'ಅರೆ! ಬಲವಂತದಿಂದ ಕಾಸು ಕೀಳುವ ಇವಳ ಪೊಗರು ನೋಡು?' ಎಂದುಕೊಂಡೆ ಅವಳ ಕೈಯಿಂದ ಒಂದು ಪೊಟ್ಟಣವನ್ನಾದರು ತೆಗೆದುಕೊಳ್ಳಬೇಕೆಂದು ತಾನೆ ಬಲವಂತದಿಂದ ಅವಳ ಕೈಯಲ್ಲಿದ್ದ ಕಟ್ಟನ್ನು ಹಿಡಿದು ಸೆಳೆದುಕೊಳ್ಳಲು ಹೋದರೂ ಅವಳ ಬಲವಾದ ಬಿಗಿ ಹಿಡಿತ, ಅದನ್ನು ಸುಲಭದಲ್ಲಿ ಬಿಡದೆ, ತೀರಾ ಇಷ್ಟವಿರದಿದ್ದರು ನೀಡಬೇಕಲ್ಲ ಎನ್ನುವ ಸಂಕಟದ ರೂಪದಲ್ಲಿ ವ್ಯಕ್ತವಾಗುತ್ತಿತ್ತು. ಅವಳ ಆ ಹತಾಶ ಧಾರ್ಷ್ಟ್ಯಕ್ಕೆ ಬೇಸತ್ತು ತಾನೆ ಕೈ ಬಿಟ್ಟು ಹೋಗಿ ಬಿಡುತ್ತಿದ್ದ ಗಂಭೀರ. ನಂತರ ಸಿಕ್ಕುವ ವೃದ್ಧೆಯದು ಮಾತ್ರ, ಅದೇ ನಗೆ , ಅದೇ ಸ್ವಭಾವ, ಅದೇ ಪ್ರತಿಕ್ರಿಯೆ. ಅವಳೊಂದು ರೀತಿಯಲ್ಲಿ ಸಹಜ ಸ್ವಾಭಾವಿಕ ಮೌಲ್ಯದ ನಿರ್ದಿಷ್ಠ ಪ್ರತೀಕವಾಗಿ ಕಾಣತೊಡಗಿದರೆ, ಹೊಸ ಮುದುಕಿ ಮೌಲ್ಯಗಳನ್ನು ಗಣಿಸದ ಕೃತಿಮ ಲೆಕ್ಕಾಚಾರದ ಮೌಲ್ಯಹೀನ ವ್ಯಕ್ತಿತ್ವದ ಕುರುಹಾಗಿ ಕಾಣತೊಡಗಿದ್ದಳು. ಮೌಲ್ಯದ ಅಪಮೌಲ್ಯವೆ ಅವಳೇನೊ ಅನಿಸತೊಡಗಿತ್ತು ಗಂಭೀರನಿಗೆ. ಆ ನಂತರ ಗಂಭೀರನಿಗೆ ಹಳೆಯ ಪ್ರಶ್ನೆಗಳಿಗೆ ಉತ್ತರವೂ ದೊರಕತೊಡಗಿತ್ತು... ಆ ಹಳೆಯ ವೃದ್ಧೆಯ ಜತೆಗಿನ ವ್ಯವಹಾರದ ಸಂತೃಪ್ತಿಗೆ ಕಾರಣ, ಅವಳೆ ನೈಜ ಮೌಲ್ಯಗಳ ಸ್ಪಷ್ಟ ಪ್ರತೀಕವಾಗಿ ಕಾಣಿಸಿಕೊಳ್ಳತೊಡಗಿದ್ದು. ಮೌಲ್ಯಾಧಾರಿತ ನಾಯಕತ್ವಕ್ಕೆ ಆಕರ್ಷಿತವಾಗುವ ಸಹಜ ಪರಿಯಿಂದಾಗಿಯೆ ಆ ಹೇಳಿಕೊಳ್ಳಲಾಗದ ತೃಪ್ತ ಭಾವನೆ ಮೂಡಿತ್ತೆಂದು ಆಗರಿವಾಗಿತ್ತು. ಆ ಅರಿವಿಗೆ ಕಾರಣಳಾದಳಲ್ಲ ಎಂದು ಆ ಹೊಸ ಮುದುಕಿಯನ್ನು ಕಡೆಗಣಿಸದೆ, ಇನ್ನು ಅಷ್ಟಿಷ್ಟು ನೀಡುತ್ತಲೆ ಇದ್ದ ಗಂಭೀರ - ಅವಳು ಟಿಶ್ಯೂ ಪೇಪರು ಕೊಡಲಿ, ಬಿಡಲಿ..!
ದಿನಚರಿಯೇನೊ ಮುಂದುವರೆದರು ಯಾಕೊ ಅಲ್ಲಿಂದಾಚೆಗೆ ಒಂದು ರೀತಿಯ ಅಳುಕು, ಚಂಚಲತೆ, ಅನ್ಯಾಯ ಮಾಡುತ್ತಿರುವ ಭಾವನೆ ಉದ್ಭವಿಸಿಕೊಂಡುಬಿಟ್ಟಿತ್ತು ಗಂಭೀರನ ಮನದಲ್ಲಿ. ಆ ಮುದುಕಿಯ ಮನೋಭಾವ ಸರಿಯಿರದಿದ್ದರು ಅದನ್ನು ಸುಖಾಸುಮ್ಮನೆ ಒಪ್ಪಿಕೊಂಡು ಅದನ್ನು ಪರೋಕ್ಷವಾಗಿ ಪ್ರೊತ್ಸಾಹಿಸುತ್ತ ನಡೆಯುವುದು ಒಂದು ವಿಧದಲ್ಲಿ ಆ ಪ್ರೌಢ ವೃದ್ಧೆಗೆ ಮಾಡಿದ ಅನ್ಯಾಯವಲ್ಲವೆ ? ಎಂಬ ಆಲೋಚನೆಯುದಿಸಿ ದಿನೇ ದಿನೇ ಗಾಢವಾಗತೊಡಗಿತು. ತಾನು ಕೊಡುವ ಹಣಕ್ಕಿಂತ ಹೆಚ್ಚಾಗಿ, ಆ ಕ್ರಿಯೆಯಿಂದ ಪ್ರೋತ್ಸಾಹಿಸಲ್ಪಡುವ ಅವರವರು ಪ್ರತಿನಿಧಿಸುವ ಮೌಲ್ಯಗಳಿಗೆ, ತಾನು ಕುಮ್ಮುಕ್ಕು ಕೊಟ್ಟಂತಾಗುತ್ತಿರುವ ಕಾರಣವೆ ಅವನನ್ನು ಹೆಚ್ಚು ಭಾದಿಸತೊಡಗಿತು. ಆಫೀಸಿನ ಕೆಲಸದಲ್ಲು ಎಷ್ಟೊ ಬಾರಿ, ನಿಯತ್ತಿನಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದರು ಅದರ ಸೂಕ್ತ ಫಲ ದೊರಕದೆ ತೊಳಲಾಡುವ ಮಂದಿಯ ಮನಸ್ಥಿತಿ ಗಂಭೀರನಿಗೆ ಚೆನಾಗಿ ಗೊತ್ತಿತ್ತು - ಅವನೆ ಸಾಕಷ್ಟು ಬಾರಿ ಅದರ ಬಲಿಪಶುವಾಗಿದ್ದ ಕಾರಣ. ಆಗೆಲ್ಲ ವ್ಯವಸ್ಥೆಯನ್ನು, ಅದನ್ನು ಪೋಷಿಸುವ ಅಥವಾ ಬದಲಿಸಲೆತ್ನಿಸದೆ ನಿರ್ಲಕ್ಷಿಸುವ ಮೇಲಿನ ಜನರನ್ನು ಮನದಲ್ಲೆ ಶಪಿಸುತ್ತಿದ್ದ ಗಂಭೀರನಿಗೆ ಈ ಪರಿಸ್ಥಿತಿಯಲ್ಲಿ ತಾನು ಮಾಡುತ್ತಿರುವುದು ಸಹ ಅವರದ್ದಕ್ಕಿಂತ ವಿಭಿನ್ನವೇನು ಅಲ್ಲವೆಂದು ಅನಿಸಿ 'ಗಿಲ್ಟಿ'ಯ ಫೀಲಿಂಗ್ ಬಲವಾಗತೊಡಗಿತು. ಹೆಸರು, ಗುರುತು, ಊರು, ಕೇರಿ ಗೊತ್ತಿರದವಳ ನಡುವಳಿಕೆಯನ್ನು ಖಂಡಿಸುವ ಬದಲು ಪರೋಕ್ಷ ಪ್ರೋತ್ಸಾಹಿಸುವ ಹಾದಿ ಹಿಡಿದ ತಾನು, ಅದೇ ರಣನೀತಿ ಅನುಸರಿಸುವ ಬಾಸುಗಳ ಕುರಿತು ದೂರಾಡುವುದು ನ್ಯಾಯಸಮ್ಮತವಲ್ಲವೆಂದು ಅನಿಸಿ ಅದನ್ನು ವಿರೋಧಿಸುವ ಧಾರ್ಷ್ಟ್ಯ, ಎದೆಗಾರಿಕೆ ತನ್ನಲ್ಲಿರದ್ದಕ್ಕಾಗಿ ಖೇದಿಸತೊಡಗಿತು ಗಂಭೀರನ ಪ್ರಕ್ಷುಬ್ದ ಮನಸು. ಮೌಲ್ಯಗಳ ಕುರಿತು ಮಾತಾಡುವ ತಾನೆ ಅದರ ಅಪಮೌಲ್ಯದ ಹರಿಕಾರನಾಗುವ ಸಂಭವ ತನ್ನ ದೌರ್ಬಲ್ಯದ ಸಂಕೇತವೆಂದೆ ಅನಿಸತೊಡಗಿತ್ತು. ಅಲ್ಲಿಂದಾಚೆಗೆ ಆ ತಾಪವನ್ನು ಅಷ್ಟಿಷಾದರು ಶಮನಗೊಳಿಸಲು, ವೃದ್ಧೆಗೆ ನೀಡುವ ಹಣ ಆ ಮುದುಕಿಗೆ ದಕ್ಕುವುದಕ್ಕಿಂತ ಹೆಚ್ಚಿರಬೇಕೆಂದು ಜಾಗೃತವಾಗಿಯೆ ನೋಡಿಕೊಳ್ಳತೊಡಗಿದ. ಒಮ್ಮೊಮ್ಮೆ ರಜೆ ಹಾಕಿದಂತೆ ಆ ಮುದುಕಿ ಕಾಣಿಸದಿದ್ದರೆ ಇಬ್ಬರ ಪಾಲನ್ನು ಆ ಹಳೆಯ ವೃದ್ಧೆಗೆ ನೀಡಿ ಖುಷಿಯಿಂದ ನಡೆಯುತ್ತಿದ್ದ. ಅದೇ ವೃದ್ಧೆಯ ರಜೆಯಿದ್ದ ದಿನ ಮಾತ್ರ ಮುದುಕಿಗೆ ಸಲ್ಲುತ್ತಿದ್ದಷ್ಟೆ ಕೊಟ್ಟು, ಅವಳಿಂದೇನನ್ನು ಪಡೆಯದೆ ಮುಂದೆ ಸಾಗುತ್ತಿದ್ದ. ಒಂದು ವಿಧದಲ್ಲಿ ಪ್ರತಿಫಲಾಪೇಕ್ಷೆಯಿರದೆ ನಿನ್ನ ಕರ್ಮ ಮಾಡಿಕೊಂಡು ಹೋಗೆನ್ನುವ ಕರ್ಮ ಸಿದ್ದಾಂತವನ್ನು ಪಾಲಿಸುತ್ತ, ಯಾವುದೊ ಋಣಭಾದೆಯಿಂದ ಮುಕ್ತನಾಗುವವನಂತೆ ನಡೆದಿತ್ತು ಅವನ ಚರ್ಯೆ.
ಇದೆಲ್ಲದರ ಮಧ್ಯೆಯೂ ಆ ವೃದ್ಧೆಗೆ ನೀಡುತ್ತಿರುವ ಸಹಾಯ ಸಕಾರಾತ್ಮಕ ಮೌಲ್ಯಗಳಿಗೆ ನೀಡುತ್ತಿರುವ ಮನ್ನಣೆ ಮತ್ತು ಪ್ರೋತ್ಸಾಹ ತಾನೆ ಎಂಬ ಅರಿವು ತುಸು ಸಮಾಧಾನ ನೀಡಿ, ಹೊಸ ಮುದುಕಿಯ ಅಪಮೌಲ್ಯದ ಪರಿಗಣನೆಯನ್ನು ತುಸು ಶಾಂತವಾಗಿಸಿದ್ದಷ್ಟೆ ಅಲ್ಲದೆ ಒಂದು ರೀತಿಯ ಅದರದೆ ಆದ ಸಂತುಲಿತ ಸ್ಥಿತಿಯನ್ನು ಸೃಜಿಸಿಕೊಂಡು ಸಾಗತೊಡಗಿತ್ತು. ಆದರೆ ನಿಸರ್ಗ ನಿಯಮದಲ್ಲಿ ಯಾವುದು ನಿರಂತರವಲ್ಲ, ಶಾಶ್ವತವೂ ಅಲ್ಲವೆನ್ನುವ ಸತ್ಯವನ್ನು ಮನದಟ್ಟಾಗಿಸುವ ಮತ್ತೊಂದು ಬೆಳವಣಿಗೆ ಆ ಸಮತೋಲಿತ ಸ್ಥಿತಿಯನ್ನು ಮತ್ತೆ ಏರುಪೇರಾಗಿಸುವ ಹಾಗೆ ಚಿಗುರೊಡೆಯತೊಡಗಿತು. ಅದಕ್ಕೆ ಕಾರಣವಾದದ್ದು ಇವರಾರು ಅಲ್ಲದೆ, ಅವರಾರಿಗು ಸಂಬಂಧಿಸದ ಚರ್ಚ್ ಎನ್ನುವುದು ಮಾತ್ರ ವಿಪರ್ಯಾಸಕರವಾಗಿತ್ತು. ಯಾವುದೆ ಸಂತುಲಿತ ಸ್ಥಿತಿಯೂ ತನ್ನಂತಾನೆ ಸಂಪೂರ್ಣ ಎಂದು ಬೀಗುತ್ತಿದ್ದರು, ಅದಕ್ಕೆ ನೇರ ಸಂಬಂಧಿಸದ ಸುತ್ತಲ ಪರಿಸರ ಹೇಗೆ ತನ್ನ ಪ್ರಭಾವ ಬೀರಿ ಇಡಿ ಸಮಸ್ಥಿತಿಯನ್ನು ಅಲ್ಲೋಲಕಲ್ಲೋಲವಾಗಿಸಬಹುದೆನ್ನುವ ಸ್ಪಷ್ಟ ಕಲ್ಪನೆಯಿರದ ಗಂಭೀರನಿಗೆ ಆ ಬೆಳವಣಿಗೆ ಒಂದು ಮಹತ್ತರ ಜೀವನ ಪಾಠವಾಗುವುದೆಂಬ ಸ್ಥೂಲ ಕಲ್ಪನೆಯೂ ಇರಲಿಲ್ಲ.
ಎಲ್ಲವು ಶುರುವಾದದ್ದು ಒಂದು ದಿನ ತಾನು ನಡೆವ ಹಾದಿಯಲ್ಲಿ ಇದ್ದಕ್ಕಿದ್ದಂತೆ ಕಂಡು ಬಂದ ಅಡ್ಡಗಟ್ಟೆಯೊಂದರ ಮೂಲಕ. ಮಾಮೂಲಿ ಹಾದಿಗೆ ತಡೆ ಹಾಕಿ, ಬದಲಿ ತಾತ್ಕಾಲಿಕ ಹಾದಿಯತ್ತ ನಡೆಸುವ ಹಾಗೆ ಮರದ ಹಲಗೆಗಳನ್ನು ಹಾಸಿ ಮಾರ್ಗ ಚಿಹ್ನೆಗಳನ್ನು ಅಂಟಿಸಿಬಿಟ್ಟಿದ್ದರು. ಜತೆಗೆ ಅದುವರೆವಿಗು ದೃಷ್ಟಿಗೆ ನಿಲುಕುತ್ತಿದ್ದ ಚರ್ಚು ಮತ್ತದರ ವಿಶಾಲ ಸುತ್ತಾವರಣವನ್ನು ಪೂರ್ಣ ಮರೆ ಮಾಚುವಂತೆ ಎತ್ತರದ ಜಂಕ್ ಶೀಟಿನ ಗೋಡೆಗಳು ಎದ್ದು ನಿಂತಿದ್ದವು - ಅದರ ಹಿಂದೆ ಏನೊ ಕಟ್ಟುವ, ದುರಸ್ತಿ ಮಾಡುವ ಕಾರ್ಯ ಆರಂಭವಾಗಿದೆಯೆಂದು ಸೂಚಿಸುತ್ತ. ಹಾಗೆ ನಡೆದು ಅವರಿಬ್ಬರು ನಿಲ್ಲುತ್ತಿದ್ದ ಮೆಟ್ಟಿಲ ಹತ್ತಿರ ಬಂದರೆ ಮೊದಲ ಮೂರ್ನಾಲ್ಕು ಮೆಟ್ಟಿಲು ಬಿಟ್ಟು ಮಿಕ್ಕೆಲ್ಲ ಆ ಹೊಸ ಜಂಕ್ ಶೀಟಿನ ಗೋಡೆಯೊಳಗಡೆ ಸೇರಿಕೊಂಡುಬಿಟ್ಟಿತ್ತು.. ಅರ್ಥಾತ್ ಇನ್ನು ಮುಂದೆ ಅಲ್ಲಿಂದ ಜನ ಹೋಗುವುದಾಗಲಿ, ಬರುವುದಾಗಲಿ ಸಾಧ್ಯವೇ ಇರಲಿಲ್ಲ - ಕನಿಷ್ಠ ದುರಸ್ತಿ ಕಾರ್ಯ ಮುಗಿಯುವವರೆಗೆ. ಆ ದಿನ ಅಚ್ಚರಿಯೆಂಬಂತೆ ಆ ಹೊಸ ಮುದುಕಿ ತಟ್ಟನೆ ಮಾಯವಾಗಿಬಿಟ್ಟಿದ್ದಳು - ಜನರಿಲ್ಲದ ಕಡೆ ತನ್ನ ವ್ಯಾಪಾರ ಕುದುರುವುದು ಕಷ್ಟ ಎಂದು ಗ್ರಹಿಸಿ ಚಾಣಾಕ್ಷತೆಯಿಂದ ಕೂಡಲೆ ಜಾಗ ಬದಲಿಸಿಬಿಟ್ಟಿರಬೇಕು ಆ ಅವಕಾಶವಾದಿ ಮುದುಕಿ! ಆ ಹಳೆಯ ವೃದ್ಧೆ ಮಾತ್ರ ಹಾಗೆ ನಿಂತಿದ್ದಳು - ರಸ್ತೆಯಲ್ಲಿ ಬರುವ ಗಿರಾಕಿಗಳಾದರು ಕೊಳ್ಳುವರೇನೊ ಎನ್ನುವಂತೆ. ಆ ಮುಖದಲ್ಲಿರುತ್ತಿದ್ದ ಎಂದಿನ ನಗೆ ಮಾತ್ರ ಮಾಯವಾಗಿಹೋಗಿತ್ತು... ಅದೇ ಮೊದಲ ಬಾರಿಗೆ ಅವಳು ಗಂಭೀರನೊಡನೆ ಒಂದೆರಡು ಮಾತು ನುಡಿದದ್ದು ಸಹ - ' ಸುತ್ತಲು ಹೊಸ ಕಾಂಪೌಂಡ್ ಹಾಕುವರಂತೆ.. ಇನ್ನು ಮುಂದೆ ಇಲ್ಲಿ ನಿಲ್ಲುವ ಹಾಗಿಲ್ಲ.. ಮೇನ್ ಗೇಟಿನ ಬಳಿ ನಿಲ್ಲಲು ಬಿಡುವುದಿಲ್ಲ... ಎಲ್ಲಿ ಹೋಗಬೇಕೊ ಗೊತ್ತಾಗುತ್ತಿಲ್ಲ...' ಎಂದಿದ್ದಳು ಖೇದ, ವಿಷಾದ, ಆತಂಕದ ದನಿಯಲ್ಲಿ. ಬಡಜನರಿಗೆ, ಬಲಹೀನರಿಗೆ ಆಸರೆಯಾಗುವ ಇಂತಹ ಧಾರ್ಮಿಕ ತಾಣಗಳೂ, ಈ ಅಪರೂಪದ ಸಂಧರ್ಭದಲ್ಲಿ ತೊಡಕಾಗುವ ಪರಿ ಗಂಭೀರನಿಗು ವಿಚಿತ್ರವೆನಿಸಿತು. ಅದೇ ಕೊನೆಯ ಬಾರಿ - ಆ ನಂತರ ಆ ಗೌರವಾನ್ವಿತ ವೃದ್ಧೆಯೂ ಆ ಜಾಗದಲ್ಲಿ ಮತ್ತೆಂದು ಕಾಣಿಸಿಕೊಳ್ಳಲಿಲ್ಲ ಗಂಭೀರನಿಗೆ. ಕಳೆದುಹೋದ ಮೌಲ್ಯಗಳ ಹಾಗೆ ತಟ್ಟನೆ ಏಕಾಏಕಿ ಮಾಯವಾಗಿಬಿಟ್ಟಿದ್ದಳು! ಗಂಭೀರನಿಗೆ ಅದಕ್ಕಿಂತಲು ಹೆಚ್ಚು ಖೇದವೆನಿಸಿದ್ದು ಆ ಮಾಯವಾಗಿದ್ದ ಮುದುಕಿ ಮುಂದೊಂದು ದಿನ ತಟ್ಟನೆ ಫರ್ಲಾಂಗು ದೂರದಲಿದ್ದ ಬಸ್ಟಾಪಿನಲ್ಲಿ ದಿಢೀರನೆ ಪ್ರತ್ಯಕ್ಷವಾದಾಗ.. ಕೈಯೊಡ್ಡಿ ನಿಂತವಳ ಕೈಲಿ ಟಿಶ್ಯೂ ಪೇಪರು ಇರದಿದ್ದರು ಅದೇ ಒಣಮೊಗದ ಹಕ್ಕೊತ್ತಾಯದ ಭಾವ. ಅವಳು ಪ್ರತಿನಿಧಿಸುವ ಅಪಮೌಲ್ಯದ ಹಾಗೆ, ನೈತಿಕಾನೈತಿಕ ಪರಿಗಣನೆಯಿರದೆ ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ನುಸುಳಿ ಹೇಗೊ ಪ್ರಸ್ತುತವಾಗಿಬಿಡುವ ಛಾತಿ ಅಂತಹವರಿಗೆ ಮಾತ್ರವೆ ಸಾಧ್ಯವೇನೊ ಅಂದುಕೊಂಡ. ಅಥವಾ ಅಪಮೌಲ್ಯಗಳ ಸಮಷ್ಟಿ ಮೊತ್ತ ದಬ್ಬಾಳಿಕೆಯಿಂದ ರಾಜ್ಯವಾಳುವ ಪರಿಯೆ ಕಲಿಯುಗದ ಮಹಿಮೆಯಿರಬಹುದೆಂದುಕೊಂಡು ನಿಟ್ಟುಸಿರಿಟ್ಟ. ಅಲ್ಲಿಯ ವಾತಾವರಣದಲ್ಲಿ ಆ ವೃದ್ಧೆಯಂತಹ ಸಜ್ಜನರಿಗೆ, ಅವಳು ಪ್ರತಿನಿಧಿಸುವ ಸಚ್ಚರಿತ ಮೌಲ್ಯಗಳಿಗೆ ತಾವೆ ಇರದು ಎನಿಸಿ ವಿಷಾದವೂ ಆಯ್ತು.
ಈಗಲೂ ಎಂದಿನಂತೆ ತನ್ನ ವಾಕಿಂಗ್ ಮುಂದುವರೆಸಿರುವ ಗಂಭೀರನಿಗೆ ಯಾಕೊ ಆ ಹಾದಿಯಲ್ಲಿ ಜೀವವಿರುವಂತೆಯೆ ಕಾಣುವುದಿಲ್ಲ. ಕೊಟ್ಟು ಕಳೆದುಕೊಳ್ಳುವುದರಲ್ಲಿದ್ದ ಸುಖ ಮಾಯವಾಗಿ ಅದರಿಂದಾಗುತ್ತಿದ್ದ ಋಣ ಪರಿಹಾರಕ್ಕೆ ದೊಡ್ಡ ಏಟು ಬಿತ್ತೇನೊ ಎಂಬ ಕರ್ಮಾಧೀನ ಜಿಜ್ಞಾಸೆಯೂ ಬಾಧಿಸತೊಡಗಿದೆ. ಮೊದಲಿಗೆ ಪ್ರತಿದಿನವಿರುತ್ತಿದ್ದ ಪ್ರಕ್ರಿಯೆ ಈಗ ವಾರಕ್ಕೊಮ್ಮೆಯೊ, ಎರಡು ಬಾರಿಯೊ ಎನ್ನುವಂತಾಗಿ ಇನ್ನೇನು ಅದೂ ನಿಂತುಹೋಗಬಹುದೆನ್ನುವ ಅನಿಸಿಕೆ ಕಾಡತೊಡಗಿದ್ದಾಗ, ತಟ್ಟನೆ ಬದಲಾದ ದೈನಂದಿನ ಕ್ರಿಯೆಯೊಂದು ಅದರ ಬದಲಿ ಮಾರ್ಗ ತೋರಿಸಿತು - ಹೊಸದಾಗಿ ಸ್ಕೂಲಿಗೆ ಸೇರಿದ ಮಗಳ ದಿನಚರಿಯ ದೆಸೆಯಿಂದ. ಮನೆಗು ಆಫೀಸಿಗು ನಡುವೆಯಿದ್ದ ಸ್ಕೂಲಿಗೆ ನೇರ ಬಸ್ಸಿರದ ಕಾರಣ ಬೆಳಿಗ್ಗೆ ಅವಳನ್ನು ಕರೆದೊಯ್ದು ಸ್ಕೂಲಿಗೆ ಬಿಟ್ಟು ನಂತರ ಬಸ್ಸು ಹಿಡಿದು ಆಫೀಸಿನ ಹತ್ತಿರದ ಸ್ಟೇಷನ್ನೊಂದನ್ನು ತಲುಪಬೇಕು. ಅಲ್ಲಿಂದ ಸುಮಾರು ಇಪ್ಪತ್ತು ನಿಮಿಷ ಕಾಲುಹಾದಿಯಲ್ಲಿ ನಡೆದರೆ ಚೇತೋಹಾರಿಯೆನಿಸುವ ಉದ್ಯಾನದ ಮೂಲಕ ಸಾಗಿ ಆಫೀಸಿಗೆ ತಲುಪಬಹುದು. ಈ ಹೊಸ ದಿನಚರಿಯಿಂದ ಸಂಜೆಯ ವಾಕಿಂಗು ಬೆಳಗಿಗೆ ಬದಲಾಗಿ ಹೊಸದೊಂದು ಸಮತೋಲನವನ್ನು ಸೃಜಿಸುವ ಹಾಗೆ ರೂಪುಗೊಳ್ಳತೊಡಗಿತ್ತು. ಒಂದೆರಡು ದಿನ ಆ ದಾರಿಯಲ್ಲಿ ಅಡ್ಡಾಡಿದವನಿಗೆ ಒಮ್ಮೆ ಸ್ಟೇಷನ್ನಿನ ಮಾಮೂಲಿ ದ್ವಾರದ ಬದಲು ಮತ್ತೊಂದು ಬದಲಿ ದ್ವಾರದ ಮೂಲಕ ಹೊರಬಂದಾಗ ಅಲ್ಲೊಂದು ದೊಡ್ಡ ಮಾರ್ಕೆಟ್ಟು, ರೆಸ್ಟೋರೆಂಟು ಮತ್ತು ಅಂಗಡಿಗಳ ದೊಡ್ಡ ಸಾಲೆ ಇರುವುದು ಕಂಡಿತ್ತು. 'ಪರವಾಗಿಲ್ಲವೆ.. ಆಗೀಗೊಮ್ಮೆ ಶಾಪಿಂಗಿಗೆ ಅನುಕೂಲವಾಗಿದೆ' ಎಂದುಕೊಂಡು ತಿರುಗ ಹೊದವನಿಗೆ ತಟ್ಟನೆ ಎದುರಿಗೆ ನಿಂತಿದ್ದ ಬೊಚ್ಚು ಬಾಯಿನ ಎಂಭತ್ತರ ಹರೆಯದ ವೃದ್ದೆಯೊಬ್ಬಳು ಪೂರ್ತಿ ಬಾಯಿ ತೆರೆದುಕೊಂಡು ನಗುತ್ತ ನಿಂತಿರುವುದು ಕಣ್ಣಿಗೆ ಬಿತ್ತು.. ಅವಳ ಕೈಯಲ್ಲು ಅದೇ ಟಿಶ್ಯೂ ಪೇಪರಿನ ಕಟ್ಟುಗಳು, ಬಗಲಿನ ಚೀಲ, ಸುಕ್ಕು ಹಿಡಿದ ನಡುಗುವ ಕೈಗಳು...!
ಏನನಿಸಿತೊ ಏನೊ, ಪರ್ಸಿನೊಳಗಿದ್ದ ಚಿಲ್ಲರೆಯನ್ನೆಲ್ಲ ತೆಗೆದು ಅವಳ ಹಸ್ತಕ್ಕೆ ತುಂಬಿಸಿಬಿಟ್ಟವನೆ, ಅವಳ ಕೈಯಿಂದ ಒಂದೆ ಒಂದು ಕಟ್ಟನ್ನು ಮಾತ್ರ ಸಾಂಕೇತಿಕವಾಗಿಯೆಂಬಂತೆ ಕೈಗೆತ್ತಿಕೊಂಡ ಗಂಭೀರ. ಇದ್ದಕ್ಕಿದ್ದಂತೆ ಅವನಿಗೆ ಮೌಲ್ಯಗಳು ಏಕಾಏಕಿ ಎಲ್ಲಿಗೂ ಕಳುವಾಗುವುದಿಲ್ಲ ಎನಿಸಿತು.. ಬದಲಿಗೆ ಉಸಿರುಗಟ್ಟುವ ವಾತಾವರಣ ತೊರೆದು ಸಹನೀಯವೆನಿಸುವ ಕಡೆಗೆ ವಲಸೆ ಹೋಗಿಬಿಡುತ್ತವೊ ಏನೊ.. ಹೀಗಾಗಿ ನಾವಿದ್ದಲ್ಲೆ ಅದನ್ನು ಹುಡುಕುತ್ತ ನಾವೂ ಕಳುವಾಗುವ ಬದಲು, ಅವು ಹೋದತ್ತ ನಾವೆ ಹುಡುಕಿಕೊಂಡು ಹೋಗಬೇಕಷ್ಟೆ.. ಅಥವಾ ಹೊಸದಾಗೆಲ್ಲೊ ಎದುರಾದಾಗ ಗುರುತಿಸುವ ಛಾತಿಯಾದರು ಇರಬೇಕು.. ಬಹುಶಃ ಇದೆ ಬದಲಾವಣೆಯ ರಹಸ್ಯ ನಿಯಮ. ನಿಂತ ನೀರಾಗದೆ ಹರಿವ ಜರಿಯಾಗುತ್ತ, ಸೂಕ್ತ ಎಡೆಯಲ್ಲಿ ಬೇರೂರುತ್ತ ಹೋದರೆ ಅಲ್ಲೆ ಹೊಸ ಮೌಲ್ಯದ ಮತ್ತೊಂದು ಪ್ರಪಂಚದ ಸ್ಥಾಪನೆಯಾಗುತ್ತದೆ - ಅದನ್ನು ಕಲುಷಿತವಾಗಿಸಿ ಹಾಳುಗೆಡವುವ ಛೇಧಕಗಳು ಬಂದು ಅತಿಕ್ರಮಿಸುವತನಕ. ಹೀಗೆ ಈ ಮೌಲ್ಯದ ಹೋರಾಟ - ನಿರಂತರ ಕದನ, ಆ ವೃದ್ಧೆ - ಮುದುಕಿಯರ ಬದುಕಿನ ಹೋರಾಟದಂತೆ. ಇಲ್ಲಿ ಯಾರದು ಗೆಲವು, ಯಾರದು ಸೋಲು ಎನ್ನುವುದು ಮುಖ್ಯವಲ್ಲ. ಯಾರ ತಾಳಿಕೊಳ್ಳುವ ಶಕ್ತಿ, ಬಲ ಹೆಚ್ಚಿನದೆನ್ನುವ ಜಿಜ್ಞಾಸೆಯಷ್ಟೆ ಪ್ರಸ್ತುತ. ಈ ಹೊಸ ವೃದ್ಧೆಯ ವಯಸ್ಸನ್ನು ಗಮನಿಸಿದರೆ ಎಲ್ಲಾ ಅಡೆತಡೆ ಒತ್ತಡಗಳ ನಡುವೆಯೂ ಮೌಲ್ಯಗಳು ಜೀವಂತವಾಗಿರುವುದರಲ್ಲಿ ಸಂದೇಹವೇನೂ ಇಲ್ಲ... ಆ ವೃದ್ಧೆಯೂ ಇಂತದ್ದೆ ಮತ್ತೊಂದು ತಾಣವನ್ನು ಕಂಡುಕೊಳ್ಳುತ್ತಾಳೆ, ತನ್ನಂತಹವರೆ ಮತ್ತೊಂದಷ್ಟು ಮಂದಿ ಗಿರಾಕಿಗಳಾಗಿ ಆಧಾರ ನೀಡುತ್ತಾರೆ - ತಮ್ಮ ಸರದಿ ಮುಗಿಯುವತನಕ. ನಿರಂತರ ಚಕ್ರದಂತೆ ನಿಲದೆ ಸಾಗುತ್ತದೆ ಈ ಬದುಕಿನ, ಮೌಲ್ಯದ ಆವರ್ತನ ಪ್ರಕ್ರಿಯೆ..
ಯಾವುದೊ ನಿರಾಳ ಭಾವದಿಂದ ಮನಸೆಲ್ಲ ಹಗುರಾದಂತೆನಿಸಿ, ಮತ್ತದೆ ಹಳೆಯ ಹರ್ಷಭಾವದಿಂದ ಆಫೀಸಿನತ್ತ ನಡೆಯತೊಡಗಿದ ಗಂಭೀರ, ಆ ಪ್ರೌಢ ವೃದ್ಧೆಯ ನಗುವನ್ನೆ ಮನದೆ ನೆನೆಯುತ್ತ. ಅವಳ ಮೌಲ್ಯಕ್ಕು ಎಲ್ಲೊ ಒಂದೆಡೆ ಹೊಸ ಜಾಗ, ಹೊಸ ಗಿರಾಕಿ ಖಂಡಿತ ಸಿಕ್ಕಿರಬಹುದೆಂಬ ಅನಿಸಿಕೆಯೆ ಸಮಾಧಾನದ ಭಾವ ಮೂಡಿಸಿ, ತನ್ನರಿವಿಲ್ಲದೆ ತನಗೆ ಪ್ರಿಯವಾದ ಹಾಡಿನ ಸಾಲೊಂದನ್ನು ಗುನುಗುತ್ತ ಹೆಜ್ಜೆಯನ್ನು ಬಿರುಸಾಗಿಸಿದ, ತನ್ನ ಗಂಭೀರ ಮೊಗದಲ್ಲಿ ಮುಗುಳ್ನಗೆಯನ್ನು ಅರಳಿಸುತ್ತ...
(ಮುಕ್ತಾಯ)
Comments
ಉ: ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ...
ನಾಗೇಶ ಮೈಸೂರುರವರಿಗೆ ವಂದನೆಗಳು
’ಟಿಸ್ಯೂ ಪೆಪರ್...’ ಕಥಾನಕದ ಸರಣಿ ಸೋಗಸಾಗಿ ಮೂಡಿ ಬರುತ್ತಿದೆ, ಬಿನ್ನಹುಟ ಪರಿಸರದಲ್ಲಿ ಬಿಚ್ಚಿಕೊಳ್ಳುವ ಕಥಾನಕ ಮನ ಮುಟ್ಟುವಂತೆ ನಿರೂಪಿಸುತ್ತಿದ್ದೀರಿ, ಕುತೂಹಲ ಹುಟ್ಟಿಸುವ ಕಥಾನಕದ ಸರಣಿ ಮುಂದಿನ ಭಾಗದ ನಿರೀಕ್ಷೆಯಲ್ಲಿ ಧನ್ಯವಾದಗಳು
In reply to ಉ: ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ... by H A Patil
ಉ: ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ...
ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ಈ ಸಣ್ಣ ಕಥೆಯ ಹಿನ್ನಲೆ / ಸ್ಪೂರ್ತಿ ನಾನು ನಿಜ ಜೀವನದಲ್ಲಿ ಕಂಡ ಅದೇ ಪಾತ್ರಗಳು. ಮಾನವೀಯ ಮೌಲ್ಯಗಳ ತುಲನೆಯಲ್ಲಿ, ಅದರ ಜಾಗ ಪರಿಸರಗಳು ಬೇರೆಬೇರೆಯಾದರು ಅವುಗಳು ಅನಾವರಣವಾಗುವ ಪ್ರಕ್ರಿಯೆ, ಪ್ರತಿಕ್ರಿಯಿಸುವ ಪರಿ, ಆಂತರ್ಯದ ಭಾವ - ವಿಚಾರಗಳ ತಳಹದಿ ಹೆಚ್ಚುಕಡಿಮೆ ಒಂದೆ ಮೂಸೆಯಿಂದೆದ್ದು ಬಂದ ಸರಕುಗಳು ಎಂಬುದು ನನ್ನ ಅನುಭವದ ಕಾಣ್ಕೆ. ಅದಕ್ಕೆ ಪ್ರತಿಯೊಂದು ಮನದಲ್ಲಾಗಬಹುದಾದ ಮೌಲ್ಯದ ತಾಕಲಾಟ, ಹೊಯ್ದಾಟದ ಸಂಯೋಜನೆ ಮಾಡಿ ಎರಡರ ನಡುವಿನ ದ್ವಂದ್ವಕ್ಕೊಂದು ಕಥೆಯ ರೂಪ ನೀಡಲು ಯತ್ನಿಸಿದ್ದೇನೆ. ಅಂತಿಮವಾಗಿ ನೈತಿಕ ಮೌಲ್ಯ ಯಾವುದಾದರೊಂದು ರೂಪದಲ್ಲಿ ಪ್ರಸ್ತುತವಾಗಿರುತ್ತದೆ ಎನ್ನುವುದರ ಜತೆಗೆ, ಅದರ ವಿರುದ್ಧಾರ್ಥಕ ಶಕ್ತಿಯ ಜತೆಗಿನ ಹೋರಾಟವೂ ನಿರಂತರ ಎನ್ನುವುದು ಕತೆಯಲ್ಲಿ ಬಿಂಬಿತವಾದ ಮತ್ತೊಂದು ವಿಪರ್ಯಾಸ. ಸಣ್ಣ ಕಥೆಯಾದ ಕಾರಣ ಮೂರನೆ ಕಂತಿಗೆ ಮುಗಿಸಿದ್ದೇನೆ - ಆದರೆ ಭಿನ್ನ ಪರಿಸರದ ಅನುಭವವನ್ನು ಹಂಚಿಕೊಳ್ಳುವ ಮತ್ತಷ್ಟು ಕಥೆಗಳನ್ನು ಹೆಣೆಯುವ ಆಲೋಚನೆ ಇದೆ. ನಿಮ್ಮನಿಸಿಕೆ, ಆಶಯದಂತೆ ಆ ಮೂಲಕ ಮುಂದುವರೆಸುತ್ತೇನೆ :-)
ಉ: ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ...
ಮೂರೂ ಕಂತುಗಳನ್ನು ಒಟ್ಟಿಗೇ ಓದಿದೆ. ಮಾನವೀಯ ಮೌಲ್ಯಗಳು, ರೂಢಿಗತ ಅಭ್ಯಾಸಗಳು, ಮನಸ್ಸು ಹಗುರಗೊಳಿಸುವ ಕ್ಷಣಗಳು, ಇತ್ಯಾದಿಗಳನ್ನು ವಿವರಿಸಿರುವ ರೀತಿ ಮನಸ್ಸಿಗೆ ಹಿಡಿಸಿತು. ನೋಡುವ ನೋಟಗಳು , ಅದರಲ್ಲಿನ ವಿಭಿನ್ನತೆಗಳು ನೋಡುವವರ ನೋಟದ ರೀತಿಯಲ್ಲಿರುತ್ತದೆ. ಅಭಿನಂದನೆಗಳು, ನಾಗೇಶರೇ.
In reply to ಉ: ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ... by kavinagaraj
ಉ: ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ...
ಕವಿಗಳೆ ನಿಮ್ಮ ಮಾತು ನಿಜ. ಪ್ರತಿಯೊಂದು ಸನ್ನಿವೇಶವೂ ನೋಡುಗರ ದೃಷ್ಟಿಕೋನದಿಂದ ಪ್ರಕಟವಾಗುವ ಪರಿ ಸಾಮಾನ್ಯ ಮನೋಭಾವದ ಸಹಜ ಪ್ರಕಿಯೆ. ಸೂಕ್ಷ್ಮಜ್ಞತೆಯ ಆಳಕ್ಕಿಳಿದರೆ ಸಹಸ್ರಾಕ್ಷವಾಗುವ ಚಿಂತನೆ, ಸ್ಥೂಲತೆಯ ಪರಿಧಿಯಲ್ಲಿ ಏನೂ ಅಲ್ಲದ ತೀರಾ ಸಾಮಾನ್ಯ ಸನ್ನಿವೇಶವಾಗುವುದು, ಆ ದ್ವಂದ್ವದ ಎರಡು ತುದಿಯಲ್ಲಿರುವ ಖಚಿತ ಅಸ್ತಿತ್ವಗಳು ಎಂಬುದು ನನ್ನ ನಂಬಿಕೆ. ಹೀಗಾಗಿಯೆ ನೋಡುವವರ ಮನಸ್ಥಿತಿ ಆ ದ್ವಂದ್ವದಳತೆ ಪಟ್ಟಿಯ ಯಾವ ಕಡೆಗೆ ಹೆಚ್ಚು ವಾಲಿದೆಯೆನ್ನುವುದರ ಮೇಲೆ, ಅವರು ಕಾಣುವ ಚಿತ್ರಣವೂ ಅವಲಂಬಿತವಾಗಿರುತ್ತದೆ. ಅದರ ಜತೆಗೆ ಅವರದೆ ಆದ ನಂಬಿಕೆಗಳು, ಪರಿಸರರದ ಪರಿಕರಗಳು ಸೇರಿ ಪ್ರಭಾವ ಬೀರಿದರೆ ಮತ್ತೊಂದು ಬಗೆಯ ಹೊಸರುಚಿಗೆ ಸೂಕ್ತ ವೇದಿಗೆಯಾದಂತೆ ಲೆಕ್ಕ. ಆದರೆ ಆ ಹೊಸರುಚಿ ರುಚಿಗಟ್ಟಾದ ನಳಪಾಕವಾಗುವುದೊ ಅಥವಾ ಭ್ರಮನಿರಸನಗೊಳಿಸುವ ಪೇಲವ ತಿನಿಸಾಗುವುದೊ ಎನ್ನುವುದು ಪಾಕಿಗನನ್ನು ಮೀರಿದ ವಿಚಾರ. ಉದಾಹರಣೆಗೆ ಈ ಕಥೆಯ ಕಥಾನಾಯಕನ ವಿಚಾರಧಾರೆಯ ದ್ವಂದ್ವವನ್ನೆ ನೋಡಿ - ಒಂದೆಡೆ 'ಮೌಲ್ಯದ ಪ್ರತೀಕ'ದಂತಿರುವ ವೃದ್ಧೆಯೊಬ್ಬಳಿಗೆ ದುಡ್ಡು ಹೆಚ್ಚಾದರು ಸರಿ, ಕೊಂಡು ಸಹಾಯ ಮಾಡಬೇಕೆಂಬ ಹಂಬಲ ಕಾಣಿಸಿಕೊಂಡರೆ, ಮತ್ತೊಂದೆಡೆ ಅದನ್ನೆ ಋಣಭಾರ ತೀರಿಸುವ, ಕರ್ಮಫಲದ ಬಾಕಿಗೆ ಸಮೀಕರಿಸುವ ಸ್ವಾರ್ಥವೂ ಕಾಣಿಸಿಕೊಳ್ಳುತ್ತದೆ. ಮತ್ತೊಂದೆಡೆ ಹೇಗು ಬಸ್ಸಿಗೊ ಟ್ರೈನಿಗೊ ಕೊಡುತ್ತಿದ್ದ ಹಣ ತಾನೆ? ಎನ್ನುವ ಲೌಕಿಕ, ವ್ಯಾಪಾರಿ ಧೋರಣೆಯೂ ಇಣುಕುತ್ತದೆ. ವಾಸ್ತವದಲ್ಲಿ ಎಲ್ಲರ ಮನದಲ್ಲೂ ನಡೆವ ಈ ಕಲಸುಮೇಲೋಗರ ದ್ವಂದ್ವಗಳು ಒಮ್ಮೆ ಒಳ್ಳೆತನದ ಒಂದು ಬದಿಗೆ ಜಗ್ಗಿದರೆ ಮತ್ತೊಮ್ಮೆ ಅದರ ವಿರುದ್ಧದತ್ತಲೂ ದೂಕಬಹುದು. ಅದೆಲ್ಲವನ್ನು ಯಾವುದೆ ನಾಟಕೀಯ ವೈಭವತೆಯಿಲ್ಲದೆ ಹಾಗೆಯೆ ದಾಖಲಿಸಲು ಯತ್ನಿಸಿದ ಕಥಾನಕವಿದು. ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು :-)