ಪೋಲ್ ಸ್ಟಾರ್ (ಹರಟೆ)
ಮನೆಯಲ್ಲಿ ಹೀಗೆ ಸುಮ್ಮನೆ ಕುಳಿತಿದ್ದೆ.
ಸುಮ್ಮನೆ ಅಂದರೆ ಸುಮ್ಮನೆ ಯಾರು ಕುಳಿತಿರುತ್ತಾರೆ ಹೇಳಿ?,
ಮೊಬೈಲ್ ಕೈಯಲ್ಲಿ ಹಿಡಿದು, ಪೇಸ್ ಬುಕ್ಕನಲ್ಲಿ ಬರೆದ ಸ್ಟೇಟಸ್ ಗಳಿಗೆ ಲೈಕ್ ಒತ್ತುತ್ತಿದ್ದೆ. ಅಲ್ಲ ಪಾಪ ಎಷ್ಟೊಂದು ಜನ ಬೆಳಗ್ಗೆ ಬೆಳಗ್ಗೆ ಏನೆಲ್ಲ ಕಷ್ಟಬಿದ್ದು ಬರೆದಿರುತ್ತಾರೆ, ನಾನು ಒಂದಿಷ್ಟು ಲೈಕ್ ಒತ್ತಿದ್ದರೆ ಎಷ್ಟೋ ಜನರಿಗೆ ಆತ್ಮತೃಪ್ತಿ. ಹಿಂದೆಲ್ಲ ಹೇಳುತ್ತಿದ್ದರು ಅನ್ನದಾನವೇ ಶ್ರೇಷ್ಠ ಅಂತ ಈಗ ದಾನ ದಾನಗಳಲ್ಲಿ ’ಲೈಕ್ ದಾನವೆ’ ಶ್ರೇಷ್ಠ ಎಂದು ನನ್ನ ಅಭಿಮತ.
ಈ ಲೈಕ್ ದಾನದ ಮಹಾಯಜ್ಞದ ನಡುವೆ ಮನೆಯ ಹಿಂದಿನಿಂದ ನಮ್ಮ ಮನೆಯಾಕೆಯ ದ್ವನಿ
’ರೀ ಸ್ವಲ್ಪ ಮೋಟರ್ ಆನ್ ಮಾಡುತ್ತೀರ?"
ಹಿಂದೆಲ್ಲ ಬಾವಿಯಿಂದ ನೀರು ತರುವುದೇ ಒಂದು ಕೆಲಸ ಈಗ ಅದೆಲ್ಲಿ ಒಂದು ಬಟನ್ ಒತ್ತಿದ್ದರೆ ಆಯ್ತು, ಮನೆಯ ಮೇಲಿನ ನೀರಿನ ಟ್ಯಾಂಕ್ ಬರ್ತಿ ಮತ್ತೆ ಮೋಟರ್ ಆಫ್ ಮಾಡುವುದು ಮರೆತರೆ ? ಎದುರು ಮನೆಯವರು ಪೋನ್ ಮಾಡಿ ಹೇಳ್ತಾರೆ ಬಿಡಿ, ಮೇಲಿನ ಟ್ಯಾಂಕ್ ನಿಂದ ನೀರು ಹೋಗುತ್ತಿದೆ ಎಂದು
ಸರಿ ಮೋಟಾರ್ ಆನ್ ಮಾಡೋಣ ಎಂದು ನಿರ್ಧರಿಸಿ, ಮೊಬೈಲ್ ನಿಂದ ಕಣ್ಣೆತ್ತಿದೆ,
ಮಹದಾನಂದ!!
ಕರೆಂಟ್ ಇಲ್ಲ. ಮತ್ತೆ ಮೋಟರ್ ಆನ್ ಮಾಡುವ ಕೆಲಸವು ಇಲ್ಲ.
’ಕರೆಂಟ್ ಇಲ್ಲವೇ ಮೋಟಾರ್ ಆನ್ ಆಗಲ್ಲ’ ಎಂದು ಕುಳಿತಲ್ಲೆ ತಿಳಿಸಿದೆ.
ಬಟ್ಟೆ ಒಗೆಯಲು ಹಿಂದೆ ಇದ್ದ ಅವಳು ಸುಮ್ಮನಾದಳು ಅನ್ನಿಸುತ್ತೆ.
ಮತ್ತೆ ಮೊಬೈಲ್.... ಲೈಕ್ ಯಜ್ಞ...
’ಈಗ ಕರೆಂಟ್ ಬಂದಿದೆ ನೋಡಿ’
ಹಿಂದಿನಿಂದ ಮತ್ತೆ ’ಹಿತ್ತಲವಾಣಿ’
’ಎರಡು ನಿಮಿಷವೂ ಆಗಿಲ್ಲ, ಕರೆಂಟ್ ಎಲ್ಲಿ ಬರುತ್ತೆ” ಎನ್ನುತ್ತ ತಲೆ ಎತ್ತಿದರೆ, ಕರೆಂಟ್ ಬಂದಿದೆ !! ಸರಿ ಎದ್ದು ಮೋಟರ್ ಆನ್ ಮಾಡಿದೆ.
ತಲೆಗೆ ಅದೇನೊ ಯೋಚನೆ ಬಂದಿತು , ಅಲ್ಲ ಇವಳು ಮನೆಯ ಹಿಂದೆ ಒಗೆಯುವ ಬಂಡೆಯ ಹತ್ತಿರ ನಿಂತೆ ಕರೆಂಟ್ ಬಂದಿದೆ ಎಂದು ಹೇಗೆ ಹೇಳುವಳು. ಇದೇನು ಮೊದಲ ಸಲವಲ್ಲ ಹೀಗೆ ಆಗಿರುವುದು ಅನ್ನಿಸಿತು. ಯೋಚಿಸುತ್ತಿರುವಾಗ, ಬಟ್ಟೆ ಒಗೆದು ಮುಗಿಸಿ ಒಳಗೆ ಬಂದಳು ಅನ್ನಿಸುತ್ತೆ. ಸರಿ ಈದಿನ ಹಿಂದೆ ಹೋಗಿ ಪರೀಕ್ಷೆ ಮಾಡಿಯೇ ಬಿಡೋಣ, ಇವಳಿಗೆ ಕರೆಂಟ್ ಬಂದಿತು ಎಂದು ಗೊತ್ತಾಗುವ ವಿಧಾನ ಹೇಗೆ ಎಂದು ಹೊರಟೆ.
ಇರಿ ಮುಂದೆ ಏನಾಯಿತು ಎಂದು ಹೇಳುವ ಮೊದಲು ಒಂದು ಸಣ್ಣ ಕತೆ ಹೇಳಿಬಿಡುವೆ. . .
.
.
ಕಡೂರಿನ ಬಸ್ ಸ್ತಾಂಡ್ ಅಂತ ಓದಿದ ನೆನಪು, ಬಸ್ ಸ್ಟಾಂಡಿನ ಜಗಲಿ ಮೇಲೆ ಸೋಮಾರಿಯೊಬ್ಬ ಮಲಗಿದ್ದ, ಅವನ ಮುಂದು ಕತ್ತೆಯೊಂದು ನಿಂತಿತ್ತು.
ಪಾಪ ಚಿಕ್ಕಮಂಗಳೂರಿಗೆ ಹೋಗುವ ಬಸ್ ಕಾಯುತ್ತ ನಿಂತಿದ್ದ ಹಳ್ಳಿಯ ರೈತನೊಬ್ಬ. ಕಾದು ಕಾದು ಬೇಸರವಾಗಿ, ಕಟ್ಟೆಯಲ್ಲಿ ಪವಡಿಸಿದ್ದ ಸೋಮಾರಿಯನ್ನು ಪ್ರಶ್ನಿಸಿದ
’ಏನಪ್ಪ ಚಿಕ್ಕಮಂಗಳೂರಿಗೆ ಹೋಗುವ ಬಸ್ ಎಷ್ಟು ಹೊತ್ತಿಗೆ ಬರುತ್ತೆ’
ಮಲಗಿದ್ದವ ಕಣ್ಣು ಬಿಟ್ಟು ನುಡಿದ
’ಹತ್ತು ಗಂಟೆ ಬರುತ್ತೆ’
’ಹೌದೇ , ಈಗ ಗಂಟೆ ಎಷ್ಟಾಯಿತು" ಮತ್ತೆ ಪ್ರಶ್ನಿಸಿದ.
ಸೋಮರಿ ಮಲಗಿದ್ದಂತೆ ಪಕ್ಕತ್ತೆ ತಿರುಗಿದ, ಪಕ್ಕದಲ್ಲಿ ಕೋಲೊಂದು ಬಿದ್ದಿತ್ತು, ಕೋಲನ್ನು ತೆಗೆದು ಹಿಡಿದು, ಕೈ ಚಾಚಿ, ಕತ್ತೆಯ ಬಾಲ ಸ್ವಲ್ಪ ಮೇಲೆ ಎತ್ತಿದ್ದ
’ಈಗ ಇನ್ನು ಒಂಬತ್ತುವರೆ ಆಗಿದೆ, ಇನ್ನೂ ಅರ್ಧಗಂಟೆ ಕಾಯಿ’ ಎಂದು ತಿಳಿಸಿ ಮತ್ತೆ ಕಣ್ಣು ಮುಚ್ಚಿದ.
ಪಾಪ ರೈತ ಎಷ್ಟು ಹೊತ್ತೊ ಕಾದ ಬಸ್ ಬರಲೇ ಇಲ್ಲ ,
ಮತ್ತೆ ಕೇಳಿದ
’ಏನಪ್ಪ ಬಸ್ ಬರಲೇ ಇಲ್ಲ, ಹತ್ತು ಗಂಟೆ ಆಯಿತ?"
ಮತ್ತೆ ಅದೇ ಕೆಲಸ ಕೋಲಿನಿಂದ ಕತ್ತೆ ಬಾಲ ಸ್ವಲ್ಪ ಎತ್ತಿ, ನುಡಿದ ಸೋಮಾರಿ,
’ಹತ್ತು ಗಂಟೆಗೆ ಇನ್ನೂ ಐದು ನಿಮಿಶ ಇದೇ ರೀ ಏಕೆ ಪದೆಪದೆ ಕೇಳ್ತೀರ’ ,
ಹಳ್ಳಿಯಾತನಿಗೆ ಕುತೂಹಲ ಕೆರಳಿತು,
’ಸಾರ್ ಈ ಕತ್ತೆ ನನಗೆ ಕೊಡ್ತೀರ’ ,
ಸೋಮಾರಿ ಇವನನ್ನು ಪಿಳಿ ಪಿಳಿ ನೋಡಿ ನುಡಿದ
’ದಾರಾಳ ತೆಗೆದುಕೊಂಡು ಹೋಗು, ಅದೇನು ನನ್ನದಲ್ಲ, ನನ್ನ ರೀತಿಯೆ ಕೆಲಸವಿಲ್ಲದೆ ಬಸ್ ಸ್ಟಾಂಡಿನಲ್ಲಿ ಬಂದು ನಿಂತಿದೆ ಅಷ್ಟೆ. ಅದು ಸರಿ , ಈ ಕತ್ತೆ ನಿನಗೆ ಏಕೆ ಬೇಕು’
ಹಳ್ಳಿಯ ರೈತ ನುಡಿದ
’ಹಂಗಲ್ಲಣ್ಣ, ನೀನು ಅದರ ಬಾಲ ಎತ್ತಿ ನೋಡಿ ಸರಿಯಾಗಿ ಸಮಯ ಏಳ್ತೀಯಲ್ಲ ಅದು ಹೆಂಗೆ, ಅದಕ್ಕೆ ನನಗೆ ಕತ್ತೆ ಬೇಕು ಅಂದೆ" ಎಂದ
ಸೋಮಾರಿ ನಕ್ಕ,
’ಅಯ್ಯೋ ದಡ್ಡ, ಅದು ಹಾಗಲ್ಲ, ಇಲ್ಲಿ ಮಲಗಿದರೆ ಸರಿಯಾಗಿ ಕಣ್ಣ ನೇರಕ್ಕೆ ಎದುರು ಮನೆಯ ವರಾಂಡದಲ್ಲಿ ಹಾಕಿರುವ ಗೋಡೆ ಗಡಿಯಾರ ಕಾಣುತ್ತೆ, ಇವತ್ತು ಈ ಕತ್ತೆ ಅಡ್ಡ ಬಂದು ನಿಂತಿದೆ. ಅದರ ಬಾಲ ಸರಿಯಾಗಿ ನನ್ನ ಕಣ್ಣ ನೇರಕ್ಕಿದೆ, ಆ ಬಾಲ ಎತ್ತಿದರೆ ಎದುರು ಮನೆಯ ಗಡಿಯಾರ ಕಣ್ಣಿಸುತ್ತೆ ಅಷ್ಟೆ’
ಎಂದವನು ಪುನಃ ಮಲಗಿದ ... ...
ಸರಿ ಕತೆ ಆಯಿತು ಬಿಡಿ,
...
ಹಿಂದೆ ಹೋದ ನಾನು ಬಟ್ಟೆ ಒಗೆಯುವ ಬಂಡೆಯ ಹತ್ತಿರ ನಿಂತು ಸುತ್ತಲೂ ನೊಡಿದೆ, ಏನು ಕಾಣದು, ಬೀದಿಯ ದೀಪ ಈ ಸಮಯದಲ್ಲಿ ಉರಿಯುವದಿಲ್ಲ, ನಮ್ಮ ಮನೆಯ ಹಿಂದಿನ ಲೈಟ್ ಸಹ ಹಾಕಿಲ್ಲ, ಮತ್ತೆ ’ಎಲ್ಲಿ ಯೋಚನೆಯೊ ಅಲ್ಲಿ’ ಎನ್ನುತ್ತ ಯೋಚನಾಗೃಹ ಅಂದರೆ ಲೆಟ್ರೀನ್ ಕಡೆ ನೋಡಿದೆ ಅಲ್ಲಿ ಸಹ ದೀಪ ಉರಿಯುತ್ತಿಲ್ಲ. ಇನ್ನು ಮನೆಯೊಳಗೆ ಬಂದು ಫ್ರೀಜ್ ಕಡೆ ನೋಡ್ತಾಳ ಅಂದು ಕೊಂಡೆ ಅದು ಸಾದ್ಯವಿಲ್ಲ.
ಮತ್ತೆ ಏನಿರಬಹುದು ಕರೆಂಟ್ ಬಂತು, ಹೋಯ್ತು ಎಂದು ತಿಳಿಯುವ ಇವಳ ರಹಸ್ಯ ಎನ್ನುತ್ತ ಚಿಂತಿಸುತ್ತ ಇರುವಾಗ, ನನ್ನ ಹೆಂಡತಿಯೆ ಹಿಂದೆ ಬಂದಳು.
’ಏನು ಸುತ್ತಲೂ ನೋಡುತ್ತಿರುವಿರಿ’ ಎಂದು ಅನುಮಾನದಿಂದ ಪ್ರಶ್ನಿಸಿದಳು.
ಸರಿ ನೇರವಾಗಿಯೆ ಕೇಳಿದರಾಯ್ತು, ಅನ್ನುತ್ತ
’ಅಲ್ಲವೆ ನಿನಗೆ ಹಿಂದೆ ಇಲ್ಲಿದ್ದಾಗಲು ಕರೆಂಟು ಬಂದಿದ್ದು ಹೇಗೆ ತಿಳಿಯುತ್ತೆ ’ ಎಂದೆ
’ಅಷ್ಟೇನಾ ಪಕ್ಕದಲ್ಲಿರುವ ಗ್ರಿಲ್ ಒಳಗೆ ನೋಡಿ’
ನೋಡಿದೆ, ಪಕ್ಕದ ಮನೆಯ ಗೋಡೆ, ಅಲ್ಲೇನಿದೆ
’ಏ.... ಅಲ್ಲಿ ಮೀಟರ್ ಭೋರ್ಡ್ ಕಾಣಿಸುತ್ತಿಲ್ಲವೆ"
’ಕಾಣಿಸುತ್ತಿದೆ’
’ಅಲ್ಲಿ ಮೈನ್ ಸ್ವಿಚ್ ನಲ್ಲಿ ಮಿಣಕ್ ಮಿಣಕ್ ಎಂದು ಸಣ್ಣ ಕೆಂಪು ದೀಪ ಉರಿಯುತ್ತಿದೆ ನೋಡಿ’
’......................’
ಈಗ ತಿಳಿಯಿತು ಇವಳ ರಹಸ್ಯ,
ಪಕ್ಕದ ಮನೆಯವರ ಮೀಟರ್ ಭೋರ್ಡಿನ, ಎಮ್ ಸಿ ಬಿ ಇಂಡಿಕೇಟರ್ ಇವಳಿಗೆ ದಾರಿ ತೋರುವ ಪೋಲ್ ಸ್ಟಾರ್ !!!
ನೋಡುತ್ತಿರುವಂತೆ ಆ ಇಂಡಿಕೇಟರ್ ಆರಿ ಹೋಯಿತು,
ಮತ್ತೆ ಹೇಳಿದಳು
’ನೋಡಿ ಮತ್ತೆ ಕರೆಂಟ್ ಹೋಯಿತು, ಹಾಳು ಕೆ.ಇ.ಬಿ’ ಎಂದಳು.
ಈಗ ಕೆ.ಇ.ಬಿ ಎಲ್ಲಿದೆಯೆ ಅನ್ನಲು ಹೋದವನು, ಬೇಡ ಅಂದುಕೊಂಡು ರಹಸ್ಯ ತಿಳಿದ ಸಂತಸದಲ್ಲಿ ಒಳಗೆ ಬಂದೆ
Comments
ಉ: ಪೋಲ್ ಸ್ಟಾರ್ (ಹರಟೆ)
ಪಾರ್ಥಾರೆ, ಇಂತದ್ದೆಲ್ಲ ಸೂಕ್ಷ್ಮ ಗ್ರಹಿಕೆಗೆ ಯಾವ ಪೋಲ್ ಸ್ಟಾರೂ ಬೇಕಿಲ್ಲ, ಬರಿ ಅವರ ಆರನೇ ಇಂದ್ರೀಯ ಪ್ರಜ್ಞೆಯೆ ಸಾಕು ಅನ್ನುತ್ತಾರೆ..! ಅದರ ಜತೆಗೆ ಸ್ವಲ್ಪ ಸಾಮಾನ್ಯ ಜ್ಞಾನವೂ ಸೇರಿಕೊಂಡುಬಿಟ್ಟಿದ್ದರೆ ಅದು 'ಘರ್ ಘರ್ ಕಿ ಶರ್ಲಾಕ್ ಹೋಂ' ಗಳನ್ನು ಸೃಜಿಸುವುದರಲ್ಲಿ ಅಚ್ಚರಿಯೇನೂ ಇಲ್ಲ ಬಿಡಿ. ಅಂದ ಹಾಗೆ ಗುಟ್ಟು ಸರಳವಿದ್ದರು, ಅದನ್ನು ತಿಳಿದಾಗ ನಿಜಕ್ಕು ಮನಸಿಗೆ ನಿರಾಳತೆ.
In reply to ಉ: ಪೋಲ್ ಸ್ಟಾರ್ (ಹರಟೆ) by nageshamysore
ಉ: ಪೋಲ್ ಸ್ಟಾರ್ (ಹರಟೆ)
ನಾಗೇಶ ಮೈಸೂರು
ನಿಜ ಘರ್ ಘರ್ ಕಿ ಶರ್ಲಾಕ್ ಹೋಂ ... ಕೆಲಸ ಆಸಕ್ತಿದ್ಯಾಯಕವಾಗಿರುತ್ತೆ , ಕಡೆಯಲ್ಲಿ ಕೆಲವೊಮ್ಮೆ ಪರಿಣಾಮ ಮಾತ್ರ ನಿಮಗೆ ವಿರುದ್ದವಾಗಿದ್ದಲ್ಲಿ ಅಚ್ಚರಿಪಡಬೇಡಿ .. :)
ಪಾರ್ಥಸಾರಥಿ
ಉ: ಪೋಲ್ ಸ್ಟಾರ್ (ಹರಟೆ)
ಪಾರ್ಥಸಾರಥಿ ಯವರಿಗೆ ವಂದನೆಗಳು.
’ಪೋಲ್ ಸ್ಟಾರ್’ ಬಹಳ ಸೊಗಸಾಗಿದೆ ಬರಹದ ಧಾಟಿ ಸರಳ ನಿರೂಪಣೆಗಳುಲೇಖನ ಓದಿ ಮುಗಿಸಿದ್ದೆ ಗೊತ್ತಾಗುವುದಿಲ್ಲ. ನಿಮ್ಮಮನ ಲೈಕ್ ದಾನದ ನಿರೀಕ್ಷೆಯಲ್ಲಿ ಅನೇಕ ಬರಹಗಾರರು ಇರುತ್ತಾರೆ ಆ ಪೈಕಿ ನಾನೂ ಒಬ್ಬ ಮನ ಹಗುರಗೊಳಿಸಿದ ಬರಹ ಧನ್ಯವಾಗಳು.
In reply to ಉ: ಪೋಲ್ ಸ್ಟಾರ್ (ಹರಟೆ) by H A Patil
ಉ: ಪೋಲ್ ಸ್ಟಾರ್ (ಹರಟೆ)
ಪಾಟೀಲರೆ ತಮ್ಮ ಪ್ರತಿಕ್ರಿಯೆಗೆ ವಂದನೆಗಳು
ನಿಮ್ಮ ಬರಹಗಳನ್ನು ನಾನು ಡಿಪಾಲ್ಟ್ ... ಲೈಕ್ ಮಾಡುತ್ತೇನೆ, ಏಕೆಂದರೆ ನಿರೂಪಣೆ ಚೆನ್ನಾಗಿರುತ್ತೆ :)
ಮನ ಹಗುರವಾಯಿತು ಅಂದರೆ ಬರಹ ತನ್ನ ಸಾರ್ಥಕತೆ ಕಂಡುಕೊಂಡಿತು
ಪಾರ್ಥಸಾರಥಿ
ಉ: ಪೋಲ್ ಸ್ಟಾರ್ (ಹರಟೆ)
ನಿಮ್ಮ ಲಘುಹಾಸ್ಯಬರಹಕ್ಕೆ ನನ್ನದೊಂದು ಧಾರಾಳವಾದ ಲೈಕ್ ದಾನ ಮಾಡುತ್ತಿರುವೆ. :))
In reply to ಉ: ಪೋಲ್ ಸ್ಟಾರ್ (ಹರಟೆ) by kavinagaraj
ಉ: ಪೋಲ್ ಸ್ಟಾರ್ (ಹರಟೆ)
ನಾಗರಾಜರೆ ಲೈಕ್ ದಾನ ಸ್ವೀಕ್ಱುತ ! ತಮಗೆ ಕಾಮೆಂಟ್ ಎಂಬ ಸ್ವರ್ಗ ದೊರಕಲಿ !
ಉ: ಪೋಲ್ ಸ್ಟಾರ್ (ಹರಟೆ)
" ಎದುರು ಮನೆಯವರು ಪೋನ್ ಮಾಡಿ ಹೇಳ್ತಾರೆ ಬಿಡಿ, ಮೇಲಿನ ಟ್ಯಾಂಕ್ ನಿಂದ ನೀರು ಹೋಗುತ್ತಿದೆ ಎಂದು"
ಇಡೀ ಬರಹದಲ್ಲಿ ಇದು ಹೈ ಲೈಟ್ ವಾಕ್ಯ..ಅದು ಸರಳ ವಾಸ್ತವಿಕ ಕಟು ಸತ್ಯ..
ಅಕ್ಕ ಪಕ್ಕದ ನೆರೆ ಹೊರೆ ಸಂಬಂಧ ಈಗ ಸಂಕೀರ್ಣ ಆಗಿದೆ.. ಸದಾ ಮುಚ್ಚಿದ ಗೇಟು ಅದ್ಕೊನ್ದು ನಾಯಿ-ಗಂಟಿಕಿದ ಮುಖ..!! ಆದ್ರೂ ಈ ತರ್ಹದ ಸನ್ನಿವೇಶ್ಗಳಲ್ಲಿ ಕಾಲ್ ಮಾಡಿ ಹೇಳುವರಲ್ಲಾ..!
ಗುರುಗಳೇ- ನೀವ್ ಹೇಳಿದ ಕತ್ತೆ ಮತ್ತು ಸಮಯ ಕಥೆ- ಕನ್ನಡದ ಒಂದು ಚಲನಚಿತ್ರದಲ್ಲಿದೆ ಅದರಲ್ಲಿ ಬಹುಶ ಹಸು ಅಥವಾ ಎಮ್ಮೆ ಇರ್ಬೇಕು -ಹಾಸ್ಯ ಕಲಾವಿದ(??) ಸಾಧು ಕೋಕಿಲ ಆ ಬಾಲ ಎತ್ತಿ ಸಮಯ ನೋಡುವ ಪಾತ್ರಧಾರಿ.
ನೀವು ಇದರಲ್ಲಿ ಉಪ ಕಥೆ ಶುರು ಮಾಡುವ ಮುಂಚೆ -ನಾ ಅಂದುಕೊಂಡಿದ್ದು-ಬಹುಶ ಅಕ್ಕ ಪಕ್ಕದ ಮನೆಯವ್ರು ಟಿ ವಿ ಹಾಕಿದ್ರ ಅಂತ..!! ಆದರೆ ಬಹುತೇಕರ ಹಾಗೆ ಇಲ್ಲಿ ಅಂತ್ಯ -ಬೆಸ್ಕಾಂನವರ ಮೀಟರ್ ಬೋರ್ಡ್ ಡಿಜಿಟಲ್ ಮಿಣಕ್ ಮಿಣಕ್ ಆಯ್ತು...!!
ಲೈಕಾಯಣ ಬಗ್ಗೆ ಹೇಳೋದಾದ್ರೆ ಅದೇ ಒಂದು ರಾಮಾಯಣ ಆಗಬಹುದು..ಅದೊಂತರ ನೀ ನನಗಾದ್ರೆ ನಾ ನಿನಗೆ ಎಂದ ಹಾಗೆ ..>!!
ಶುಭವಾಗಲಿ
\|/
In reply to ಉ: ಪೋಲ್ ಸ್ಟಾರ್ (ಹರಟೆ) by venkatb83
ಉ: ಪೋಲ್ ಸ್ಟಾರ್ (ಹರಟೆ)
ಸಪ್ತರಿಗಿರಿಯವರೆ
ಬಹಲ ದಿನಗಳ ನಂತರ ನಿಮ್ಮ ವಿಮರ್ಶ್ಹೆ ನೋಡಿದೆ
ನಿಜ ಈಗೆಲ್ಲ ಅಕ್ಕಪಕ್ಕದ ಮನೆ ಅಂದರೆ ಅಷ್ಟೆ ! ನಮ್ಮ ಮನೆ ಹತ್ತಿರ ಪರವಾಗಿಲ್ಲ
ನಿಮಗೂ ಶುಭವಾಗಲಿ!
ಮದುವೆ ಊಟಕ್ಕೆ ನಾವೆಲ್ಲ ಕಾದಿದ್ದೆ ಬಂತು! :(
In reply to ಉ: ಪೋಲ್ ಸ್ಟಾರ್ (ಹರಟೆ) by partha1059
ಉ: ಪೋಲ್ ಸ್ಟಾರ್ (ಹರಟೆ)
ಗುರುಗಳೇ ಅಂದ್ ಹಾಗೆ -
ಹಾ ಹೇಳೋಕೆ ಮರ್ತಿದ್ದೆ..!
ನಿಮ್ ಈ ಬರಹ್ದ ಶೀರ್ಷಿಕೆ ನೋಡಿ ಇದು ಮೊನ್ನೆ ನಡೆದ ಗ್ರಾಮ ಪಂಚಾಯ್ತ್ ಚುನಾವಣೆ ಬಗ್ಗೆ ಬರಹ ಎಂದುಕೊಂಡಿದ್ದೆ. ಹಿಂದೆ ಒಮ್ಮೆ ನಿಮ್ಮ್ ವ್ಯಾಪ್ತಿಯ ಅಭ್ಯರ್ಥಿಗೆ ಮತ ಹಾಕಿ ಅವ್ರು ಸೋತದ್ದು ನೆನಪಿಗೆ ಬಂತು...!!
ನಿಶ್ಚಿತಾರ್ಥವೇ ಇನ್ನೂ ಆಗಿಲ್ಲ ..!! ಮದ್ವೆ ಇನ್ನೂ ಒಂದು ವರ್ಷ ..!!
ಎರಡಕ್ಕೂ ಸಂಪದ ಹಿರಿಯರು ಹಿತೈಷಿಗಳು ಹಾಜರ್ ಇರ್ಬೇಕು ಅನ್ನೋ ಮಹದಾಸೆ. ಹಾಗೆ ಅಲ್ಲೊಂದು ಪುಟ್ಟ ಸಂಪದ ಸಮ್ಮಿಲನ ಆಗಲಿ ಎನ್ನುವ ಆಶೆ..
ಆದ್ರೆ ಮದ್ವೆ ನಮ್ಮೂರು ಬಿಸಿಲು ನಾಡಲ್ಲಿ ಆದರೆ ಎಸ್ಟು ಜನ ಹಾಜರಾತಿ ಹಾಕಬಹುದೋ ಎನ್ನುವ ಅಳುಕು..
ನೋಡುವ..
ಆ ಬಗ್ಗೆ ಮುಂಚಿತವಾಗಿಯೇ ತಿಳಿಸುವೆ..
ಶುಭವಾಗಲಿ
\\\||||||///