ಸುಜ್ಹೋ ಎಂಬ ಸುಲಕ್ಷಣೆ

ಸುಜ್ಹೋ ಎಂಬ ಸುಲಕ್ಷಣೆ

ಸುಜ್ಹೋ ಎಂಬ ಸುಲಕ್ಷಣೆ

                                                            

ಕೆಲ ತಿಂಗಳ ಹಿಂದೆ ಒಂದು ಭಾನುವಾರ ಕಂಪ್ಯೂಟರಿನಲ್ಲಿ ತದೇಕದೃಷ್ಟಿ ನೆಟ್ಟಿದ್ದ ನನ್ನ ಪತಿ ಇದ್ದಕ್ಕಿದ್ದಂತೆಯೇ “ನಾವು ಈ ಬೇಸಗೆರಜೆಯಲ್ಲಿ ಚೀನಾಗೆ ಪ್ರವಾಸ ಹೋಗೋಣವೇ” ಎಂದಾಗ ಉತ್ತರಿಸಲು ಅರೆಕ್ಷಣ ತಡವರಿಸಿದೆ. ವಿದೇಶಪ್ರವಾಸ ಎಂದರೆ ಸಿಂಗಪುರ, ದುಬೈ ಇತ್ಯಾದಿಗಳು,  ಆದರೆ ಚೀನಾ ಕೂಡಾ ಪ್ರವಾಸಿತಾಣವೇ.... ? ಎನಿಸಿತು. ಸುದ್ದಿ ಕೇಳಿದ ನಮ್ಮ ಸಂಬಂಧಿಗಳೂ, ಸ್ನೇಹಿತರೂ ಕೂಡಾ ಚೀನಾಕ್ಕೆ ಯಾಕೆ ಹೋಗುತ್ತೀರಿ? ಎಂದು ಪ್ರಶ್ನಾರ್ಥಕ ನೋಟ ಬೀರಿದರು. ಏನೇ ಇರಲಿ, ನನ್ನ ಕೌಟುಂಬಿಕ ಮಿತ್ರ, ಸುಜ್ಹೋ ನಗರದಲ್ಲಿ ಡೆಲ್ಫೈ ಎಲೆಕ್ಟ್ರಾನಿಕ್ ಕಂಪನಿಯ ಉತ್ಪಾದನಾ ವಿಭಾಗದ ನಿರ್ದೇಶಕರಾಗಿರುವ  ಶ್ರೀ ರವಿ ಫಡ್ಕೆಯವರ ಆಹ್ವಾನದ ಮೇರೆಗೆ ಎಪ್ರಿಲ್ ಕೊನೆಯವಾರದ ಚೀನಾ ಮತ್ತು ಹಾಂಗ್ ಕಾಂಗ್ ಪ್ರವಾಸಕ್ಕೆ ನಮ್ಮಲ್ಲಿದ್ದ ಅಲ್ಪ- ಸ್ವಲ್ಪ ಉಳಿತಾಯದ ಹಣವನ್ನು ತೊಡಗಿಸಿ ತಯಾರಿ ಆರಂಭಿಸಿಯೇ ಬಿಟ್ಟೆವು.

ಚೀನಾದ ಬಗ್ಗೆ ನನಗೆ ಮೊದಲಿನಿಂದಲೂ ಅತೀವ ಕುತೂಹಲ. ನಮ್ಮ ಭಾರತದಂತೆಯೇ ಅಗಾಧ ಜನಸಂಖ್ಯೆಯ, ಶ್ರೀಮಂತ ಪರಂಪರೆಯ ನಾಡಿನ ಇಂದಿನ ಯಶೋಗಾಥೆಯ ಬಗ್ಗೆ  ತಿಳಿಯುವ ಹಂಬಲ. ಹಿಂದೆ ನಾನು ಓದಿದ  ‘ಸ್ಮೋಕ್ಸ್ ಅಂಡ್ ಮಿರರ್ಸ್ - ಪಲ್ಲವಿ ಅಯ್ಯರ್’ ಹಾಗೂ ‘ಮಾವೋನ ಕೊನೆಯ ನರ್ತಕ - ಲೀ ಕುನ್ ಕ್ಸಿಂಗ್ [ಕನ್ನಡಕ್ಕೆ ಜಯಶ್ರೀ ಭಟ್]’ ಎಂಬ ಎರಡು ಅತ್ಯುತ್ತಮ ಕೃತಿಗಳಿಂದ ಅಲ್ಲಿನ ಜನಜೀವನದ ಸ್ಥೂಲಪರಿಚಯವಾಗಿತ್ತಾದರೂ ಈ ರೀತಿಯ ಅಭಿವೃದ್ಧಿ ಹೇಗೆ ಸಾಧ್ಯ? ಸರ್ಕಾರವೆಂಬ ವ್ಯವಸ್ಥೆ ಈ ಮಟ್ಟದಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವೇ? ಇದರಲ್ಲಿ ಉತ್ಪೇಕ್ಷೆ ಎಷ್ಟು? ನೈಜತೆ ಏನು? ಇತ್ಯಾದಿ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ಬೆಂಗಳೂರಿನಿಂದ ಹಾಂಗ್ ಕಾಂಗ್ ಮೂಲಕ ಶಾಂಘೈ ವಿಮಾನ ನಿಲ್ದಾಣದಲ್ಲಿ ಇಳಿದಾಗ ಚಿಕ್ಕ ಕಣ್ಣಿನ ಬಿಗಿ ಮುಖದ ಇಮಿಗ್ರೇಷನ್ ಅಧಿಕಾರಿಯಿಂದ ಅನುಮತಿ ಪಡೆದು ಹೊರಬಂದಾಗ ,ಆತ್ಮೀಯವಾಗಿ ನಮ್ಮನ್ನು ಸ್ವಾಗತಿಸಿದ ರವಿ ಫಡ್ಕೆಯವರಿಂದ ಪ್ರಶ್ನೆಗಳು ಸೂಕ್ತ ಉತ್ತರ ಪಡೆಯಲಾರಂಭಿಸಿದವು. 

ನಮ್ಮ ಪ್ರವಾಸದ ಮೊದಲನೇ ಜಾಗವೇ ಸುಜ್ಹೋ ನಗರ . ಸ್ಥಳೀಯರ ಚೀನೀ ಉಚ್ಚಾರ ಸೂಚೋ . ಪೂರ್ವಚೀನಾದ ಜಿಯಾಂಗ್ ಸು ರಾಜ್ಯದ ರಾಜಧಾನಿ ನಾನ್ ಜಿಂಗ್ ನಿಂದ 200 ಕಿ.ಮೀ ದೂರದಲ್ಲಿರುವ ಈ ಸುಂದರವಾದ ಪಟ್ಟಣ ವರ್ಷವಿಡೀ ಮೈತುಂಬಿಹರಿಯುವ ಯಾಂಗ್ ಜ್ಹಿ ನದಿಯ ದಡದಲ್ಲಿದೆ. ದೇಶದ ವಾಣಿಜ್ಯನಗರ ಶಾಂಘೈನಿಂದ 100 ಕಿಮೀ ದೂರದಲ್ಲಿದ್ದರೆ ರಾಜಧಾನಿ ಬೀಜಿಂಗ್ ಗೆ 1200ಕಿಮೀ ಅಂತರ. ಆದರೆ ಗಂಟೆಗೆ ಮುನ್ನೂರುಕಿ.ಮೀ ವೇಗದಲ್ಲಿ ಸಾಗುವ ಅತಿವೇಗದ ರೈಲಿನಿಂದಾಗಿ, ವಿಶಾಲವಾದ ರಾಷ್ಟೀಯ ಹೆದ್ದಾರಿಗಳಿಂದಾಗಿ ಕಿಲೋಮೀಟರ್ ಗಳು ಇಲ್ಲಿ ಗಂಟೆ-ನಿಮಿಷಗಳಲ್ಲಿ ಪರಿವರ್ತನೆಯಾಗಿವೆ.   ಕಡುಬೇಸಗೆಯಲ್ಲಿ ತಾಪಮಾನ 40 ಡಿಗ್ರಿಸೆ. ಏರುವ , ಚಳಿಗಾಲದಲ್ಲಿ -9 ಡಿಗ್ರಿಗೆ ಇಳಿಯುವ, ಸುಮಾರು 15ಲಕ್ಷ ಜನಸಂಖ್ಯೆಯ ಈ ನಗರಕ್ಕೆ ಎಪ್ರಿಲ್ ನ ಮಧುರವಸಂತಕಾಲದಲ್ಲಿ ಕಾಲಿಡುತ್ತಿದ್ದಂತೆಯೇ ‘ಮೊದಲ ನೋಟದ ಪ್ರೇಮ’ದ ಬಲೆಗೆ ನಾನು ಬಿದ್ದೆ.

 ಈ ಸ್ಥಳಕ್ಕೆ ಸುಮಾರು 2500 ವರ್ಷಗಳ ಸಮೃದ್ಧ ಇತಿಹಾಸವಿದೆ. ಹಾನ್ ವಂಶದ ರಾಜರ ಕಾಲದಲ್ಲಿ ಅಭಿವೃದ್ಧಿಗೊಳ್ಳಲಾರಂಭಿಸಿ ಸಾಂಗ್ ವಂಶಸ್ಥರ ಕಾಲಕ್ಕೆ ರೇಷ್ಮೆ ವ್ಯಾಪಾರದಿಂದಾಗಿ ಪ್ರಮುಖ ವಾಣಿಜ್ಯಕೇಂದ್ರವಾಯಿತು . ಮುಂದೆ ಮಿಂಗ್ ಮತ್ತು ಕ್ಯುಂಗ್ ಅರಸರು ಸುಂದರವಾದ ಉದ್ಯಾನಗಳನ್ನು, ಕಾಲುವೆಗಳನ್ನು , ರಂಗಮಂದಿರಗಳನ್ನು , ದೇವಾಲಯಗಳನ್ನು ನಿರ್ಮಿಸಿ ಸಾಂಸ್ಕೃತಿಕವಾಗಿ ಸುಜ್ಹೋವನ್ನು ಬೆಳೆಸಿದರು . ಹಾಗೆಯೇ ಇದು ನೂರಾರು ಬಾರಿ ಅನ್ಯರಾಜರ ಆಕ್ರಮಣಕ್ಕೂ ತುತ್ತಾಗುತ್ತಾ ಕಾಲಕಾಲಕ್ಕೆ ನವೀಕರಣಗೊಳ್ಳುತ್ತಾ ಹೋಯಿತು. 1937ರ ಜಪಾನೀಯರ ದಾಳಿಯಲ್ಲಿ ಅಕ್ಷರಶ: ನಿರ್ನಾಮವಾಗಿತ್ತು. ಆದರೆ 1949ರ ನಂತರ ನೂತನ ಚೀನಾ ಅಸ್ತಿತ್ವಕ್ಕೆ ಬಂದಾಗ ಚೀನಾದ ವಾಣಿಜ್ಯಕೇಂದ್ರ ಶಾಂಘೈ ನಗರದ ಸೆರಗಿನಲ್ಲೇ ಇರುವ ಈ ಊರಿನ ಸುವರ್ಣಯುಗ ಆರಂಭವಾಯಿತು. 1994 ರ ಮೇ 12 ಸುಜ್ಹೋವಿನ ಇತಿಹಾಸದಲ್ಲಿ ಮಹತ್ತ್ವದ ದಿನ. ಚೀನಾ- ಸಿಂಗಪುರ ಸರಕಾರಗಳ ಜಂಟಿ ಸಹಯೋಗದಲ್ಲಿ, ಜಿಂಜಿ ಸರೋವರದ ತಟದಲ್ಲಿ  ಸುಜ್ಹೋ  ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಾಣಕ್ಕೆ  ಅಂದು ಸಹಿ ಬೀಳುತ್ತಿದ್ದಂತೆಯೇ ಸುಜ್ಹೋ ಸುಂದರಿ ಸರ್ವಾಲಂಕಾರಭೂಷಿತೆಯಾಗಿ ಕಂಗೊಳಿಸಲಾರಂಭಿಸಿದಳು.

ನಮ್ಮ ಮಿತ್ರರು ನಿಮ್ಮ ಪ್ರಯಾಣದ ಆಯಾಸವನ್ನು ಕಳೆಯಲು ಪ್ರಶಾಂತ ದೇವಾಲಯವೊಂದಕ್ಕೆ ಕರೆದೊಯ್ಯುತ್ತೇನೆ ಎಂದಾಗ ಅಯ್ಯೋ ! ಕಮ್ಯುನಿಸ್ಟ್ ಚೀನಾಕ್ಕೂ ದೇವಸ್ಥಾನಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯಾ? ಎನಿಸಿತು. ನನಗೆ ನಮ್ಮಲ್ಲಿನ ಯಾವುದೇ ದೇಗುಲಕ್ಕೆ ಭೇಟಿ ಕೊಟ್ಟಾಗ, ಆಡಂಬರ, ಡಾಂಭಿಕತೆಯ ಪ್ರದರ್ಶನ ಮಳಿಗೆಗಳಾಗಿರುವ , ಶಾಂತಿ- ನೆಮ್ಮದಿಗಳ ಸುಳಿವೇ ಇಲ್ಲದ ಈ ಜಾಗಗಳಿಗೆ ಜನ ಏಕೆ ಬರುತ್ತಾರೆ ಎಂಬ ಪ್ರಶ್ನೆ ಸದಾ ಕಾಡುತ್ತದೆ. ಸರಿ.. ಇಲ್ಲಿನ ಭಕ್ತಿಯ ವೈಖರಿಯನ್ನೂ ನೋಡೋಣ ಎಂದುಕೊಂಡು ಅರೆ ಮನಸ್ಸಿನಿಂದಲೇ ಹೊರಟೆ. ನಗರದ ಮಧ್ಯದಲ್ಲೇ ಇರುವ ಚೋಂಗ್ ಯುವಾನ್  ಬುದ್ಧನ ದೇವಾಲಯವದು. 1500 ವರ್ಷಗಳಷ್ಟು ಪುರಾತನವಾದ ಇದು 1970ರ ಸಾಂಸ್ಕೃತಿಕ ಕ್ರಾಂತಿಯ ಕಾಲದಲ್ಲಿ ಅವಸಾನದ ಅಂಚಿಗೆ ಬಂದಿತ್ತು. ನಂತರದ ವರ್ಷಗಳಲ್ಲಿ, ಧರ್ಮ ಕೂಡಾ ಜನರ ಮೂಲಭೂತ ಅವಶ್ಯಕತೆ ಎಂದು ಸರಕಾರಕ್ಕೆ ಮನವರಿಕೆ ಆಗುತ್ತಿದ್ದಂತೆಯೇ ಆಸ್ಥೆಯಿಂದ ನವೀಕರಣ ಆರಂಭವಾಯಿತು. ಮುಖ್ಯದ್ವಾರವನ್ನು ದಾಟಿ ಪ್ರವೇಶಿಸುತ್ತಿದ್ದಂತೆಯೇ ಗ್ರಂದಿಗೆ ಅಂಗಡಿಗಳು ಗಮನ ಸೆಳೆದವು. ಸುಮಾರು 3 ಅಡಿ ಉದ್ದದ ದಪ್ಪನೆಯ ಊದುಬತ್ತಿಗಳು, ಮೇಣದಬತ್ತಿಗಳನ್ನು ನೋಡಿ ಒಮ್ಮೆ ಹಚ್ಚಿದರೆ ಮೂರುದಿನ ಉರಿಯಬಹುದು ಎನಿಸಿತು! ಯಾಂಗ್ ಚೆಂಗ್ ಸರೋವರದ ಮಧ್ಯದಲ್ಲಿರುವ ದೇವಾಲಯಕ್ಕೆ ಸೇತುವೆಯ ಮೇಲೆ ಹೋದೆವು. ಇಡೀ ದೇವಾಲಯದ ಸಂಕೀರ್ಣ ಕಮಲದ ದಳಗಳ ಆಕೃತಿಯಲ್ಲಿದೆ. ಕಮಲದ ಹೂವಿನ ಮೇಲೆ ದೇವಾಲಯ ಕುಳಿತಂತೆ ಭಾಸವಾಗುತ್ತದೆ [ ನಮ್ಮ ಲಕ್ಷ್ಮಿದೇವಿ ಕಮಲದ ಮೇಲೆ ಕುಳಿತಂತೆ]. ಆ ಕೆಲವು ಪಕಳೆಗಳಲ್ಲಿ ನೀರು ತುಂಬಿ ಬಣ್ಣ ಬಣ್ಣದ ಮೀನುಗಳನ್ನು ಬಿಟ್ಟಿದ್ದಾರೆ. ಭಕ್ತರು ಮೀನುಗಳಿಗೆ ಆಹಾರ ಎಸೆಯುತ್ತಾರೆ. ವಿಶಾಲವಾದ ಮರದ ಕಟ್ಟಡವನ್ನು ಪ್ರವೇಶಿಸುತ್ತಿದ್ದಂತೆ ಸುಮಾರು 60 ಅಡಿ ಎತ್ತರದ 88 ಟನ್ ಭಾರದ ಕಂಚಿನಪ್ರತಿಮೆ ವರ್ಣಮಯ ಲೇಪನದಿಂದ ಮಿಂಚುತ್ತಿತ್ತು. ದೇವಾಲಯ ಪ್ರವೇಶಿಸಲು ಚಪ್ಪಲಿ ಕಳಚಿಡಬೇಕಿಲ್ಲ.ಅರ್ಚಕರ ಏರುದನಿಯ ಮಂತ್ರಗಳಿಲ್ಲ.ದುಡ್ಡಿಗನುಗುಣವಾದ ಸೇವೆಗಳಿಲ್ಲ! ಮಂಗಳಾರತಿಯ ಗೋಜಿಲ್ಲ.ಬುದ್ಧನ ವಿಗ್ರಹಕ್ಕೆ ಎಂದೆಂದಿಗೂ ಬಾಡದ ಹೂಗಳ[ಪ್ಲಾಸ್ಟಿಕ್] ಸಿಂಗಾರ!.ಎಲ್ಲೆಲ್ಲೂ ಮೌನ ಸಾಮ್ರಾಜ್ಯ. ದೇಶದ ಅತಿದೊಡ್ಡ ಒಳಾಂಗಣದ ಬುದ್ಧಪ್ರತಿಮೆಯೆಂಬ ಹಿರಿಮೆಯಿರುವ ಈ ವಿಗ್ರಹರೂಪದಲ್ಲಿ ಬುದ್ಧ  ಕರುಣಾಮೂರ್ತಿಯೆಂದು ಕರೆಯಲ್ಪಡುತ್ತಾನೆ. ಇಲ್ಲಿ ಮೂರು ಅಂತಸ್ತುಗಳಲ್ಲಿ ಬುದ್ಧನ ದೇಹದುದ್ದಕ್ಕೂ ಸಾಗಿ ಸಮೀಪದಿಂದ ದರ್ಶನ ಪಡೆಯಬಹುದು.  ಮುಂದಿನ ಮೆಟ್ಟಲುಗಳನ್ನು ಹತ್ತಿ ಕಟ್ಟಡದ ಟೆರೇಸ್ ಗೆ ಬಂದೆವು. ಆಹಾ... ಎಂಥ ರಮ್ಯ , ಅದ್ಭುತ ನೋಟ! ಸುತ್ತಲೂ ಸರೋವರದ ಶುಭ್ರವಾದ ನೀರು,  ದೂರದಲ್ಲಿ ಕಾಣುತ್ತಿರುವ ನಗರ. ಕೆಳಗೆ ಕಮಲದಳಾಕೃತಿಯ ಸಂಕೀರ್ಣ, ಹಿತವಾಗಿ ಬೀಸುತ್ತಿರುವ ತಂಗಾಳಿ. ಆ 90 ಅಡಿ ಎತ್ತರದಲ್ಲಿ ನಮ್ಮೆಲ್ಲ ಆಯಾಸ, ಚಿಂತೆ, ದುಗುಡಗಳು ದೂರವಾಗಿ ದೇಹ ಹಗುರವಾದಂತೆ ಭಾಸವಾಯಿತು. ಚಪ್ಪಲಿ ಹಾಕಿದ ಕಾಲಲ್ಲೇ ದೇಗುಲದೊಳಗೆ ಪ್ರವೇಶ, ದೀಪ, ಕರ್ಪೂರ, ಮಂತ್ರಗಳಿಲ್ಲದ, ಪ್ಲಾಸ್ಟಿಕ್ ಹೂಗಳ ಪೂಜೆಯಿಂದ ಕಸಿವಿಸಿಗೊಂಡಿದ್ದ ನನ್ನ ಭಾರತೀಯ ಮನಸ್ಸು ಶಾಂತವಾಯಿತು. ದೇವರ ಸಾನಿಧ್ಯದ ಅನುಭವವಾಯಿತು.  ಬಹುಶ: ಬುದ್ಧಪ್ರಜ್ಞೆಯೆಂದರೆ ಈ ಮನ:ಶಾಂತಿಯೇ ಇರಬಹುದು ಅಂದುಕೊಂಡೆ.

ದೇವಾಲಯದ ಬಲಭಾಗದಲ್ಲಿ ಬೌದ್ಧಭಿಕ್ಷುಗಳ ವಸತಿನಿಲಯಗಳೂ, ಪ್ರಾರ್ಥನಾಮಂದಿರಗಳೂ ಇವೆ. ಸಾಯಂಕಾಲದ ಪ್ರಾರ್ಥನೆಯಲ್ಲಿ ನಾವೂ ಭಾಗಿಗಳಾದೆವು. ಸುಮಾರು 100 ಭಿಕ್ಷುಗಳು ಮೊಣಕಾಲೂರಿ ಪಾಲಿಭಾಷೆಯಲ್ಲಿ ರಾಗವಾಗಿ ಹಾಡುತ್ತಿದ್ದರು. ಭಿಕ್ಷುವೊಬ್ಬ ಮರದಡೋಲನ್ನು ಬಾರಿಸುತ್ತಿದ್ದನು. ಆ ತನ್ಮಯತೆಯಲ್ಲಿಯೂ ಕೆಲವು ಯುವ ಭಿಕ್ಷುಗಳ ದೃಷ್ಟಿ ಪ್ರವಾಸಿಗರೆಡೆ ಹರಿಯುತ್ತಿದುದು, ಅವರನ್ನು ಹಿರಿಯಭಿಕ್ಷುಗಳು ಕಣ್ಣಿನಲ್ಲೇ ಗದರಿಸುತ್ತಿದುದು ನೋಡಿ ನಗು ಬಂತು.

ಚೋಂಗ್- ಯುವಾನ್ ಬುದ್ಧ ದೇವಾಲಯದ ಮಹಡಿಯಿಂದ ಕಾಣುವ ವಿಹಂಗಮ ನೋಟ

ಚೋಂಗ್ ಯುವಾನ್ [Chong yuan ] ಬುದ್ಧ

Comments