ಸುಜ್ಹೋ ಎಂಬ ಸುಲಕ್ಷಣೆ ೨ -







ಮಾರನೇದಿನ ಉಪಾಹಾರ ಮುಗಿಸಿ ‘ಲಿಂಗ್ ಶಾನ್’ ಬುದ್ಧನ ದರ್ಶನಕ್ಕೆ ಹೋದೆವು. ಉಶಿ [wuxi]ಎಂಬಲ್ಲಿನ ಲಾಂಗ್ ಶನ್ ಪರ್ವತಗಳ ನಡುವೆ ಬಿಸಿಲು, ಮಳೆ, ಚಳಿಗೆ ಬೆದರದೆ ಕೃಪಾದೃಷ್ಟಿ ಬೀರುತ್ತಿದ್ದಾನೆ ಈ ಮಹಾತ್ಮ. 88ಮೀಟರ್ ಎತ್ತರದ 700 ಟನ್ ಭಾರದ ತಾಮ್ರದ ಪ್ರತಿಮೆಯಿದು. ಸುತ್ತಲಿನ ಸುಮಾರು 50 ಎಕರೆಗಳ ಆವರಣವನ್ನು ಥೀಮ್ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿರುವುದು ಚೀನೀಯರ ಉದ್ಯಮಶೀಲತೆಯ ಸಂಕೇತದಂತೆ ಕಂಡಿತು. ಇಡೀ ಪ್ರದೇಶ ದೇಶೀ- ವಿದೇಶೀ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು.ಅನೇಕ ಸ್ಥಳೀಯರು ತಮ್ಮ ವಯಸ್ಸಾದ ತಂದೆ ತಾಯಿಯರನ್ನು ಕೈ ಹಿಡಿದು ಅಥವಾ ತಳ್ಳುಕುರ್ಚಿಯಲ್ಲಿ ಕರೆತಂದಿದ್ದ ದೃಶ್ಯ ನೋಡಿ ಸಂತೋಷವಾಯಿತು. ಇಲ್ಲಿ ದಿನಕ್ಕೆರಡು ಬಾರಿ ನಡೆಯುವ ಬಾಲಬುದ್ಧನ ವಿಗ್ರಹದ ಅಭಿಷೇಕ ಕಣ್ಮನ ಸೆಳೆಯುತ್ತದೆ.ಪ್ರವೇಶದ್ವಾರ ದಾಟುತ್ತಿದ್ದಂತೆಯೇ ವಿಶಾಲವಾದ ಬಯಲು ರಂಗಮಂದಿರದ ಮಧ್ಯೆ 40 ಅಡಿ ಎತ್ತರದ ಲೋಹದ ಕಮಲಸ್ತಂಭವೊಂದು ಕಾಣುತ್ತದೆ.ನಾವು ಹೋದ ಕೆಲಹೊತ್ತಿನಲ್ಲೇ ಸ್ತಂಭದ ಸುತ್ತಲೂ ಸಂಗೀತಕಾರಂಜಿಗಳು ಚಿಮ್ಮಲಾರಂಭಿಸಿದವು. ನೋಡನೋಡುತ್ತಿದ್ದಂತೆಯೇ ಸ್ತಂಭದ ತುದಿಯಲ್ಲಿರುವ ಕಮಲ ನಿಧಾನವಾಗಿ ಅರಳಲಾರಂಭಿಸಿ, ಬಾಲಬುದ್ಧನ ಪ್ರತಿಮೆಯೊಂದು ಉದ್ಭವಿಸಿ ಇಂಚಿಂಚಾಗಿ ಮೇಲೆ ಬಂತು. ಅಗೋ.. ... ಆಗ ನಾಲ್ಕೂ ಕಡೆಗಳಿಂದ ಕಾರಂಜಿಗಳು ಬುದ್ಧನ ಪ್ರತಿಮೆಗೆ ಅಭಿಷೇಕಗೈದವು. ಪ್ರತಿಮೆ ನಿಧಾನವಾಗಿ ತನ್ನ ಅಕ್ಷದಲ್ಲೇ ಒಂದು ಸುತ್ತು ಬಂದು ಸುತ್ತಲೂ ಕಿಕ್ಕಿರಿದು ತುಂಬಿದ್ದ ಜನರಿಗೆ ಅಭಯಹಸ್ತ ತೋರಿಸಿ ಮತ್ತೆ ಕಮಲದೊಳಗೆ ಅಂತರ್ಧಾನವಾಯಿತು. ಕಮಲ ತನ್ನ ದಳಗಳನ್ನು ಮುಚ್ಚುತ್ತಿದ್ದಂತೆಯೇ ಜನರು ಆನಂದಾನುಭೂತಿಯಲ್ಲಿ ಮಿಂದೆದ್ದರು. ಧಾರ್ಮಿಕತೆಗೆ ತಾಂತ್ರಿಕತೆಯ ಸ್ಪರ್ಶವನ್ನು ಕೊಡುವ ,ದಿನಕ್ಕೆರಡು ಬಾರಿ ನಡೆಯುವ ಈ ರಮಣೀಯ ಪ್ರದರ್ಶನ ಇಲ್ಲಿನ ಪ್ರಮುಖ ಆಕರ್ಷಣೆ.
ಬುದ್ಧನಿಗೆ ಅಭಿಷೇಕ ಚಿತ್ರ 1
ಮುಂದೆ ಸಾಗುತ್ತಿದ್ದಂತೆಯೇ ಏನಾಶ್ಚರ್ಯ! ಅರೆ... ನಮ್ಮ ಅಶೋಕಪಿಲ್ಲರ್ ಇಲ್ಲಿ ಹೇಗೆ ಬಂತಪ್ಪಾ ಅಂದೆ. 16 ಮೀ. ಎತ್ತರ 1.8ಮೀ ವ್ಯಾಸದ 180 ಟನ್ ಭಾರದ ಗ್ರಾನೈಟ್ನಿಂದ ತಯಾರಿಸಿದ ಏಕಶಿಲಾ ಅಶೋಕಸ್ತಂಭ ತಲೆಯೆತ್ತಿ ಭಾರತದ ಹಿರಿಮೆಯನ್ನು ಸಾರುತ್ತಾ ನಿಂತಿತ್ತು. ಸ್ತಂಭದ ಆಚೀಚೆಯಲ್ಲಿ ಸಂಸ್ಕೃತ ಹಾಗೂ ಚೀನೀ ಭಾಷೆಯಲ್ಲಿ ಚಿನ್ನದ ಅಕ್ಷರಗಳಲ್ಲಿ‘ಅಶೋಕ’ ಎಂದು ಕೆತ್ತಲಾಗಿದೆ. ಪರ್ವತದಂಚಿನಲ್ಲಿನ ಬುದ್ಧ, ಸ್ತಂಭದ ಹಿಂದುಗಡೆಯಿಂದ ಇಣುಕುತ್ತಿದ್ದ! ಆ ಮಹಾಸಾಮ್ರಾಟನನ್ನು ನೆನೆಯುತ್ತಾ ಮುಂದೆ ಸಾಗಿದೆವು. ಅಲ್ಲಿ ಬುದ್ಧನ ತಾಮ್ರದ ಬೃಹತ್ ಹಸ್ತವಿದೆ. ಪ್ರವಾಸಿಗಳು ಅದರ ಸುತ್ತಲೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮೇಣದ ಬತ್ತಿ, ಊದುಬತ್ತಿಗಳನ್ನು ಹಚ್ಚುತ್ತಾರೆ. ಊದುಬತ್ತಿ ಹಚ್ಚಲು ಅಗಲವಾದ ತಾಮ್ರದ ಹಂಡೆಯಿದ್ದರೆ ಮೇಣದ ಬತ್ತಿಗೆ ವಿಶೇಷ ವ್ಯವಸ್ಥೆ. ಬತ್ತಿಯನ್ನು ಅಂಟಿಸಲು ಉದ್ದನೆ ಕೋಲುಗಳ ಸ್ಟಾಂಡ್ ನ ಕೆಳಗೆ ನೀರಿನ ತೊಟ್ಟಿಯಿದೆ. ಉರಿದು ತೊಟ್ಟಿಕ್ಕುವ ಮೇಣ ಒಂದು ತೊಟ್ಟೂ ವ್ಯರ್ಥವಾಗದೆ ಅಚ್ಚುಕಟ್ಟಾಗಿ ಆ ನೀರಿನಲ್ಲಿ ಸಂಗ್ರಹವಾಗಿತ್ತದೆ . ದಿನದ ಕೊನೆಗೆ ಅದನ್ನು ತೆಗೆದು ಪುನರ್ಬಳಕೆ ಮಾಡುತ್ತಾರೆ.
ಅಶೋಕಸ್ತಂಭ ಚಿತ್ರ 2
ಹಸ್ತದ ಬಲಭಾಗದಲ್ಲಿ ‘ನಗುವ ಬುದ್ಧ’ನೆಂದು ಪ್ರಸಿದ್ಧನಾದ ಮೈತ್ರೇಯನ ತಾಮ್ರದ ವಿಗ್ರಹವಿದೆ. ಮೈತ್ರೇಯನ ಸ್ಥೂಲದೇಹದ ಮೇಲೆ 100 ಬಾಲಕರು ತಮಗಿಷ್ಟ ಬಂದಂತೆ ಕುಣಿಯುತ್ತಿದ್ದಾರೆ. ಅವನನ್ನು ಛೇಡಿಸುತ್ತಿದ್ದಾರೆ. ಯಾರು ಏನೇಅಂದರೂ ಅಗಾಧ ಗಾತ್ರದ , ನೆಲಕ್ಕೆ ಒಂದು ಕೈಯಾನಿಸಿ ಮಲಗಿರುವ ಮೈತ್ರೇಯ ಆನಂದದಿಂದ ನಗುತ್ತಿದ್ದಾನೆ. ಸಂತೋಷ, ನೆಮ್ಮದಿಗಳೆಂಬ ಬೆಲೆ ಕಟ್ಟಲಾಗದ ಸಂಪತ್ತುಗಳು ತೆರೆದ ಮನಸ್ಸಿನ ಮನುಷ್ಯನಿಗೆ ಮಾತ್ರ ಲಭ್ಯ. ಕಷ್ಟ, ಟೀಕೆ, ಹೀಗಳಿಕೆಗಳಿಗೆ, ಕುಗ್ಗದೆ ನಗುತ್ತಾ ಬದುಕಿ ಎಂಬ ಅದ್ಭುತವಾದ ಜೀವನಮೌಲ್ಯವನ್ನು ಮೈತ್ರೇಯ ಶತಮಾನಗಳಿಂದ ಪ್ರತಿಪಾದಿಸುತ್ತಲೇ ಇದ್ದಾನೆ.
ನಗುತ್ತಿರುವ ಮೈತ್ರೇಯ ಚಿತ್ರ 3
ಅಲ್ಲಿಂದ ಮುಂದೆ ಬಂದಾಗ ನಾವು ‘ಲಿಂಗ್ ಶಾನ್’ ಬುದ್ಧನ ಸಮೀಪಕ್ಕೆ ಬಂದೆವು. ನೆಲದಿಂದ ಪರ್ವತದ ತುದಿಗೆ ಹೋಗಲು 217 ಮೆಟ್ಟಲುಗಳನ್ನು ಹತ್ತಬೇಕು. ಬುದ್ಧನ ಪದತಲದ ಕೆಳಗೆ ಪ್ರಾರ್ಥನಾ ಮಂದಿರವೂ, ವಸ್ತುಸಂಗ್ರಹಾಲಯವೂ ಇದೆ. ಇಲ್ಲಿನ ಗೋಡೆಗಳ ಮೇಲೆ ಬುದ್ಧನಜೀವನಕ್ಕೆ ಸಂಬಂಧಿಸಿದ ವಿವರಗಳನ್ನು ಚೀನೀ ಭಾಷೆಯಲ್ಲಿ ಚಿನ್ನದ ಉಬ್ಬು ಅಕ್ಷರಗಳಲ್ಲಿ ಕೆತ್ತಲಾಗಿದೆ.ಅಲ್ಲದೇ ಅನೇಕ ಪ್ರತಿಮೆಗಳೂ, ಬರಹಗಳೂ ಕಾಣಸಿಗುತ್ತವೆ. ಇದನ್ನೆಲ್ಲ ದಾಟಿ ಒಂದು ಕಿರುದಾರಿಯಲ್ಲಿ ಬಂದು ಆ ಬೃಹತ್ ಬುದ್ಧನ ಪ್ರತಿಮೆಯನ್ನು ಮುಟ್ಟಿದಾಗ ಧನ್ಯತೆಯ ಭಾವ ಮೂಡಿ ಬಂತು. ಬುದ್ಧನಿಗೊಂದು ಪ್ರದಕ್ಷಿಣೆ ಹಾಕುತ್ತಾ ಸುತ್ತಲಿನ ಗುಡ್ಡಗಳಲ್ಲಿನ ಹಸಿರು, ಸುಂದರವಾದ ಉದ್ಯಾನಗಳು,ನಾವು ದಾಟಿ ಬಂದ ಜಾಗಗಳು ಕಣ್ಣು ತುಂಬಿದವು. ಅಲ್ಲಿ ಸ್ವಲ್ಪ ಹೊತ್ತು ಕಳೆದು ಈ ಆವರಣದ ಇನ್ನೊಂದು ಮೂಲೆಯಲ್ಲಿರುವ ‘ಬ್ರಹ್ಮ ಪಾಲೇಸ್’ ಎಂಬ ಭವ್ಯವಾದ ಆಧುನಿಕ ಕಟ್ಟಡಕ್ಕೆ ಬಂದೆವು. ಪಾರಂಪರಿಕ ಬೌದ್ಧಶೈಲಿಯಲ್ಲಿ , ಅಮೃತಶಿಲೆಯಿಂದ ಕಟ್ಟಿರುವ ಈ ಕಟ್ಟಡದ ಒಂದು ಭಾಗದಲ್ಲಿ ಮನೋಹರವಾದ ಬುದ್ಧಮಂದಿರವಿದ್ದರೆ, ಉಳಿದ ಕಡೆ ರಂಗಮಂದಿರಗಳೂ,ಬೃಹತ್ ಹಜಾರಗಳೂ ಇವೆ. ಇಲ್ಲಿ ಪ್ರವೇಶದ್ವಾರದಲ್ಲಿ ಚಪ್ಪಲಿ ತೆಗೆದಿಡುವ ಬದಲು ಚಪ್ಪಲಿಗೇ ಹೊದಿಕೆ ಹಾಕಿಕೊಂಡು ಹೋಗುವ ರೀತಿ ನೋಡಿ ಅಚ್ಚರಿಯಾಯಿತು. ಕೈ ಗ್ಲೌಸ್ ಮಾದರಿಯಲ್ಲಿ ಕಾಲು ಗ್ಲೌಸ್!! ಕೊನೆಗೆ ಹೊರಗೆ ಹೋಗುವಾಗ ಬುಟ್ಟಿಯಲ್ಲಿ ಕಾಲು ಗ್ಲೌಸ್ ಕಳಚಿ ಹಾಕಿ ನಡೆಯಿರಿ. ಬುದ್ಧಮಂದಿರದ ವಿಶಾಲ ಸಭಾಂಗಣದ ಮೇಲ್ಭಾಗದಲ್ಲಿ ಸುಂದರವಾದ ಚಿತ್ರಗಳಿವೆ. ಇಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುವ ಬೆಳಕಿನ ಬಣ್ಣಗಳು ಬೇರೊಂದು ಶ್ರೀಮಂತ ಲೋಕಕ್ಕೆ ನಮ್ಮನ್ನು ಒಯ್ಯುತ್ತವೆ.
ಲಿಂಗ್ ಶಾನ್ ಬುದ್ಧ ಚಿತ್ರ4
ಮಾರನೇ ದಿನ ನಾವು ನೋಡಿದ ಸ್ಥಳ‘ಟೈಗರ್ ಹಿಲ್’.ಇಲ್ಲಿ ಅತ್ಯಂತ ಪುರಾತನವಾದ ‘ಯುನ್ ಯಾನ್ ಸಿ ಪಗೋಡಾ’ಇದೆ. ಇದರ ಪ್ರಾಚೀನ ಹೆಸರು ಹುಕು ಪರ್ವತ ಎಂದು. ಹಿಂದೆ ಫುಚೈ ಎಂಬ ಅರಸ ತನ್ನ ತಂದೆ ‘ಹೆಲು’ವನ್ನು ಇಲ್ಲಿ ಸಮಾಧಿ ಮಾಡಿದನು. ಮೂರು ದಿನಗಳ ನಂತರ ಬಿಳಿ ಹುಲಿಯೊಂದು ಸಮಾಧಿಯ ಮೇಲೆ ಗರ್ಜಿಸುತ್ತಾ ಇತ್ತು.ಅಂದಿನಿಂದ ಇಲ್ಲಿಗೆ ಹುಲಿಬೆಟ್ಟವೆಂಬ ಹೆಸರೇ ಖಾಯಂ ಆಯಿತು.ಅಲ್ಲದೇ ಸಮಾಧಿಯ ಆಕೃತಿಯೂ ಹುಲಿಯ ಆಕಾರದಲ್ಲೇ ಇದೆ. ನಂತರದ ಎಲ್ಲ ರಾಜರೂ ಇಲ್ಲಿ ಕಟ್ಟಡಗಳನ್ನೂ ಉದ್ಯಾನಗಳನ್ನೂ ನಿರ್ಮಿಸುತ್ತಲೇ ಹೋದರು. ಸುಮಾರ 2500 ವರ್ಷಗಳ ಇತಿಹಾಸವಿರುವ ಈ ಸ್ಥಳ ನಯನಮನೋಹರವಾಗಿದೆ. ಎತ್ತ ನೋಡಿದರೂ ಬಣ್ಣ ಬಣ್ಣದ ಹೂಗಳು ಮನಸ್ಸಿಗೆ ಮುದನೀಡುತ್ತವೆ. ಇಲ್ಲಿನ ಯಾವ ಮೂಲೆಯಲ್ಲಿ ಕುಳಿತರೂ ಸಾಮಾನ್ಯ ವ್ಯಕ್ತಿಯೂ ಕೂಡಾ ಕವಿಯಾಗುತ್ತಾನೆ ಎಂಬ ಹಿರಿಮೆ ಈ ಬೆಟ್ಟಕ್ಕೆ. ಸಾಂಗ್ ವಂಶದ ಕವಿ ಸು ಶಿ ಹೇಳುವಂತೆ ಸುಜೋಗೆ ಬಂದು ಟೈಗರ್ ಹಿಲ್ ಗೆ ಭೇಟಿ ಕೊಡದಿದ್ದರೆ ಅದಕ್ಕಿಂತ ದುರಂತ ಮತ್ತೊಂದಿಲ್ಲ! ಕ್ರಿ. ಶ. 916ರಲ್ಲಿ ಸಾಂಗ್ ವಂಶಸ್ಥರಿಂದ ಬೆಟ್ಟದ ಮೇಲೆ ‘ಯುನ್ ಯಾನ್ ಸಿ ಪಗೋಡಾ’ ದ ನಿರ್ಮಾಣವಾಯಿತು. 154 ಅಡಿ ಎತ್ತರದ 7 ಮಹಡಿಗಳ ಈ ಗೋಪುರ ಕಾಲನ ಹೊಡೆತಕ್ಕೆ ಸಿಕ್ಕು ಮೂರು ಡಿಗ್ರಿಗಳಷ್ಟು ಬಾಗಿತ್ತು. ಚೀನಾದ ವಾಲು ಗೋಪುರ ಎಂಬ [ಕು]ಖ್ಯಾತಿಗೂ ಪಾತ್ರವಾಯಿತು. ಈಗ ಗೋಪುರದ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ.
ಟೈಗರ್ ಹಿಲ್ ನ ಹೂದಾರಿ ಚಿತ್ರ5
ಟಿಕೆಟ್ ಪಡೆದು ಬೆಟ್ಟ ಹತ್ತಲು ಆರಂಭಿಸಿದ ನಮಗೆ ಅಪರೂಪದ ಬಣ್ಣಗಳ, ವಿವಿಧ ಹೂಗಳ ಸ್ವಾಗತ ದೊರಕಿತು. ಈ ಹೂಗಳ ರಾಶಿಯ ಮಧ್ಯೆ ಚೀನೀ ಜಾನಪದ ನೃತ್ಯದ ಪ್ರದರ್ಶನ ಮನಸ್ಸಿಗೆ ಮುದ ನೀಡಿತು. ವಿವಿಧ ವಿನ್ಯಾಸಗಳ ಹಜಾರಗಳು,ಕಿಟಿಕಿಗಳು, ಮರದ ಕುರ್ಚಿ- ಮೇಜುಗಳು, ಗೂಡುದೀಪಗಳು ನಮ್ಮ ಮಲೆನಾಡಿನ ಮನೆಗಳನ್ನು ನೆನಪಿಸಿದವು. ದಾರಿಯಲ್ಲಿ ಕಂಡ ಖಡ್ಗಪರೀಕ್ಷೆಯ ಕಲ್ಲುಗಳು ವಿಶಿಷ್ಟವಾಗಿದ್ದವು. ಹಿಂದೆ ಹೊಸ ಖಡ್ಗಗಳನ್ನು ಇಲ್ಲಿನ ಕಲ್ಲುಗಳಿಗೆ ಹೊಡೆದು ಪರೀಕ್ಷಿಸುವ ಪದ್ಧತಿ ಇತ್ತಂತೆ. ಒಂದೇ ಏಟಿಗೆ ಕಲ್ಲು ಇಬ್ಭಾಗವಾದರೆ ಖಡ್ಗ ಪರೀಕ್ಷೆಯಲ್ಲಿ ಪಾಸ್.. ಕಲ್ಲನ್ನೇ ಸೀಳುವ ಆ ಖಡ್ಗದ ಹರಿತ ಹೇಗಿರಬಹುದು? ನೆನೆದು ಮೈ ಜುಂ ಎಂದಿತು.
ಖಡ್ಗಪರೀಕ್ಷೆಯ ಕಲ್ಲು ಚಿತ್ರ 6
ಟೈಗರ್ ಹಿಲ್ ನ ಪ್ರಮುಖ ಆಕರ್ಷಣೆಯೆಂದರೆ ಬೆಟ್ಟದ ಮೇಲಿರುವ ಬೊನ್ಸಾಯ್ ಉದ್ಯಾನ. ಓಹ್... .. ಆ ಕುಬ್ಜಸುಂದರಿಯರ ಸೊಬಗು, ಒನಪು, ವೈಯಾರಗಳು ಅಮೋಘ..ಅದ್ಭುತ. ‘ವಾನ್ ಚಿಲನ್ ವಿಲ್ಲಾ’ ಎಂದು ಕರೆಯಲಾಗುವ ಈ ಉದ್ಯಾನದಲ್ಲಿ ಸಾವಿರಕ್ಕೂ ಅಧಿಕ ಬೊನ್ಸಾಯ್ ಮರಗಳಿವೆ. ನೂರಾರು ವರ್ಷ ಹಳೆಯದಾದ ಈ ಮರಗಳ ಅಗಲವಾದ ಕಾಂಡ ಪುಟ್ಟಕುಂಡದಲ್ಲಿ ಬಂದಿ. ಮೈತುಂಬಾ ಚಿಗುರೆಲೆಗಳು. ವೈಯಕ್ತಿಕವಾಗಿ ನನಗೆ ಬೊನ್ಸಾಯ್ ವೃಕ್ಷಗಳನ್ನು ಕಂಡರೆ ಸಂಕಟವಾಗುತ್ತದೆ. ವಿಶಾಲವಾಗಿ ಮೈಚಾಚಿ ಬೆಳೆಯಲಪೇಕ್ಷಿಸುವ ಮರಕ್ಕೆ ಈ ರೀತಿ ಚಿತ್ರಹಿಂಸೆ ಕೊಡುವುದು ಸರಿಯೇ? ಎಂಬ ಜಿಜ್ಞಾಸೆ ನನ್ನನ್ನು ಕಾಡುತ್ತದೆ.ಅದರ ಪಕ್ಕದಲ್ಲಿಯೇ ಕಲ್ಲಿನ ಉದ್ಯಾನ ಕೂಡಾ ಇದೆ. ಕಲ್ಲನ್ನು ವಿವಿಧ ಮಾದರಿಯಲ್ಲಿ ಕತ್ತರಿಸಿ ಪುಟಾಣಿ ಬೆಟ್ಟಗಳನ್ನು ಸೃಷ್ಟಿಸಿ ಅದರ ಮಧ್ಯೆ ಬೊನ್ಸಾಯ್ ಮರಗಳನ್ನು ಬೆಳೆಸಿದ್ದಾರೆ. ಹುಲಿಬೆಟ್ಟದಲ್ಲಿ ಇಲಿಬೆಟ್ಟಗಳು ! ಪ್ರಕೃತಿಯನ್ನು ತನ್ನ ಮುಷ್ಟಿಯೊಳಗೆ ಬಂಧಿಸುವ ಚೀನೀದಾಹಕ್ಕೆ ಸಾಕ್ಷಿ ಈ ರಚನೆಗಳು! ಕೊಂಚ ಮುದುಡಿದ ಮನದಿಂದಲೇ ಬೆಟ್ಟವಿಳಿದ ನನಗೆ ಹಿಂತಿರುಗುವ ದಾರಿಯಲ್ಲಿ ಮತ್ತೆ ಎದುರಾದ ಹೂಬೆಟ್ಟ ಹಿತನೀಡಿತು.
ಬೊನ್ಸಾಯ್ ಉದ್ಯಾನ ಚಿತ್ರ 7
ನಮ್ಮ ಭಾರತೀಯತೆಯ ಒಂದು ಪ್ರಮುಖ [ಅವ]ಲಕ್ಷಣವೆಂದರೆ ಎಲ್ಲಿ ಏನೇ ನೋಡಿದರೂ, ಇದೇನ್ ಮಹಾ...? ನಮ್ಮಲ್ಲಿಲ್ಲದ್ದು ಇಲ್ಲೇನಿದೆ? ನಮ್ಮ ಪರಂಪರೆಗೆ ಸರಿಸಾಟಿ ಯಾರು? ಎಂಬ ಅನಿಸಿಕೆ. ನಿಜ.. ನಮ್ಮ ಬೇಲೂರು, ಹಳೇಬೀಡು, ತಮಿಳುನಾಡಿನ ದೇವಾಲಯಗಳ ಶಿಲ್ಪವೈಭವಕ್ಕೆ, ಮಹಾಬಲಿಪುರಂ, ಕೋನಾರ್ಕ, ಅಜಂತಾ- ಎಲ್ಲೋರಾ, ಮೌಂಟ್ ಅಬುಗಳ ಬೆರಗಿಗೆ ಸರಿಸಾಟಿ ಇನ್ನೊಂದಿಲ್ಲ.ಆದರೆ ನಮ್ಮ ಸಂಪತ್ತನ್ನು ಜೋಪಾನವಾಗಿ ಕಾಪಿಡುವಲ್ಲಿ ,ಸೂಕ್ತವಾಗಿ ಪ್ರಸ್ತುತಪಡಿಸುವಲ್ಲಿ ನಾವು ಸೋತಿದ್ದೇವೆ ಎಂಬ ಕಹಿಭಾವನೆ ಮನಸ್ಸಿನಲ್ಲಿ ಸುಳಿಯಿತು. ಇರಲಿ.. ಮುಂದೆ ಚೀನಾದ ಇತರ ಅದ್ಭುತಸ್ಥಳಗಳನ್ನು ನೋಡಿದರೂ ಈ ಸುಜೋ ಎಂಬ ಚೆಲುವೆಯ ಮುಂದೆ ಅವೆಲ್ಲ ಸಪ್ಪೆ ಎನಿಸಿತು.ಪ್ರಾಚೀನತೆ , ತಾಂತ್ರಿಕತೆ ಹಾಗೂ ಆಧುನಿಕತೆಯ ಅಪೂರ್ವ ಸಂಗಮವಾದ ಈ ಜಾಗ ನಮ್ಮ ನಗರ ನಿರ್ಮಾತೃಗಳಿಗೂ ಮಾದರಿಯಾಗಬಲ್ಲುದು.
Comments
ಉ: ಸುಜ್ಹೋ ಎಂಬ ಸುಲಕ್ಷಣೆ ೨ -
ವೇದಾ ಮೇಡಂ ನಮಸ್ಕಾರ. ಕಾಲಿನ ಶೂ ಬಿಚ್ಚದೆ ಪ್ಲಾಸ್ಟಿಕ್ಕಿನ 'ಗ್ಲೌಸ್' ಹಾಕಿಕೊಂಡು ನಡೆಯುವ ಪರಿಪಾಠವನ್ನು ಸುಮಾರು ಕಡೆ ಅಳವಡಿಸಿಕೊಂಡಿದ್ದಾರೆ. ನಾನೊಂದು ಮಕ್ಕಳ ಶಾಲೆಯ ಒಳಗೆ ಮೀಟಿಂಗೊಂದಕ್ಕೆ ಹೋಗಬೇಕಿತ್ತು - ಅಲ್ಲಿ ಒಳಗಿದ್ದವರೆಲ್ಲ ಬರಿಗಾಲಲ್ಲೆ ಇದ್ದರು. ಆದರೆ ಭೇಟಿಗೆ ಬಂದವರಿಗೆ ಆ ಶೂ ಬಿಚ್ಚುವ-ಹಾಕುವ ತಾಪತ್ರಯ ಬೇಡವೆಂದೊ ಅಥವಾ ಮಕ್ಕಳ ವಾತಾವರಣದ ರಕ್ಷಣಾ ದೃಷ್ಟಿಯಿಂದಲೊ ನಮಗೆ 'ಕಾಲು ಗ್ಲೌಸು' ತೊಡಲು ಹೇಳಿದರು. ಆ ಒಳಗಿನ ನುಣುಪು ನೆಲದಲ್ಲಿ ಪ್ಲಾಸ್ಟಿಕ್ಕು ಚೀಲ ತೊಟ್ಟು ಜಾರದಂತೆ ನಡೆಯುವುದು ಒಂದು ಸಾಹಸವೆ ಆಯ್ತೆನ್ನಿ, ಅದು ಬೇರೆ ವಿಷಯ :-)
In reply to ಉ: ಸುಜ್ಹೋ ಎಂಬ ಸುಲಕ್ಷಣೆ ೨ - by nageshamysore
ಉ: ಸುಜ್ಹೋ ಎಂಬ ಸುಲಕ್ಷಣೆ ೨ -
ಒಹ್ ಹೌದೇ, ನಾನಂತೂ ಮೊಟ್ಟ ಮೊದಲು ಇಂಥದ್ದನ್ನು ನೋಡಿದ್ದು. ಆದ್ದರಿಂದ ತಮಾಶೆ ಎನಿಸಿತು. ಆದರೆ ಅನುಕೂಲವೂ ಅನಿಸಿತು
ಉ: ಸುಜ್ಹೋ ಎಂಬ ಸುಲಕ್ಷಣೆ ೨ -
ವೇದಾ ಅವರೆ,
ಸುಜೋ (Suzhou) ಸುಂದರಿ ಬಗ್ಗೆ ಪ್ರವಾಸ ಕಥನ ಸೂಪರ್..
ನೀವು ನೋಡಿದ ಚೀನಾದ ಇತರ ಅದ್ಭುತ ಸ್ಥಳಗಳ ಬಗ್ಗೆಯೂ ಸಮಯವಾದಾಗ ಬರೆಯಿರಿ.
In reply to ಉ: ಸುಜ್ಹೋ ಎಂಬ ಸುಲಕ್ಷಣೆ ೨ - by ಗಣೇಶ
ಉ: ಸುಜ್ಹೋ ಎಂಬ ಸುಲಕ್ಷಣೆ ೨ -
ಧನ್ಯವಾದಗಳು. ಶೀಘ್ರದಲ್ಲೇ ಇತರ ಸ್ಥಳಗಳ ಬಗ್ಗೆಯೂ ಬರೆಯುತ್ತೇನೆ
ಉ: ಸುಜ್ಹೋ ಎಂಬ ಸುಲಕ್ಷಣೆ ೨ -
ವೇದಾ ಜಿ, ನಮಸ್ತೆ, ಸುಜ್ಹೋ ಪ್ರವಾಸ ಡೈರಿ ತುಂಬ ಚನ್ನಾಗಿ ಮೂಡಿ, ಅದ್ಭುತ ಮಾಹಿತಿ ಒಳಗೊಂಡು, ಅದರೊಡನೆ ತಾವಂದ ಮಾತು ನಮ್ಮ ಸೊತ್ತುಗಳನ್ನು ಕಾಪಿಡುವಲ್ಲಿ, ಕಾಪಾಡುವಲ್ಲಿ ನಾವು ಸೋತಿದ್ದು, ನಿಜಕ್ಕೂ ಚಿಂತನೀಯ. ಪ್ರವಾಸ ಮುಂದುವರೆಯಲಿ,, ವಂದನೆಗಳು.
ಉ: ಸುಜ್ಹೋ ಎಂಬ ಸುಲಕ್ಷಣೆ ೨ -
ಆಶ್ಚರ್ಯಕರ ಪ್ರವಾಸಿ ಸ್ಥಳಗಳ ಸುಂದರ ವರ್ಣನೆ ಬೆರಗಾಗಿಸುತ್ತದೆ. ಧನ್ಯವಾದಗಳು.