ಬ್ರಾಹ್ಮಣ ಗುಬ್ಬಿ.
ಲೇ ನಿಶೂ....ಅಲ್ಲೇನೇ ಮಾಡ್ತಿದ್ದೀಯ...? ಒಳಗೆ ಬಾರೇ...ಇದ್ದಕ್ಕಿದ್ದಂತೆ ಈ ಧ್ವನಿ ಕೇಳಿ ಬೆಚ್ಚಿ ಹಿಂದೆ ತಿರುಗಿ ನೋಡಿದೆ. ಇಷ್ಟು ಹೊತ್ತೂ ತದೇಕಚಿತ್ತವಾಗಿ ಅಲ್ಲೇ ನೋಡುತ್ತಿದ್ದ ನನಗೆ ಅಮ್ಮ ಯಾವಾಗ ಬಂದು ನನ್ನ ಹಿಂದೆ ನಿಂತ್ರೋ ಗೊತ್ತಾಗಲೇ ಇಲ್ಲ. ನಿಂಗೆ ಎಷ್ಟು ಸಲ ಹೇಳ್ಬೇಕು, ಇಲ್ಲಿ ಜಾಸ್ತಿ ಬರ್ಬೇಡ ಅಂತ. ತುಂಬಾ ಸಲ ಅಮ್ಮನ ಬಾಯಿಂದ ಈ ಮಾತನ್ನು ಕೇಳಿ ಕೇಳಿ ಸಾಕಾಗಿದ್ದ ನನಗೆ ಅಮ್ಮಾ...ನಾನ್ಯಾಕೆ ಇಲ್ಲಿ ಬರಬಾರದು ಹೇಳಮ್ಮ ಅಂತ ಕೇಳಿದೆ.ನೀನು ಮೊದಲು ಒಳಗೆ ಬಾ, ಆಮೇಲೆ ಹೇಳ್ತೀನಿ ಅಂತ ಅಮ್ಮ ನನ್ನ ಕೈ ಹಿಡಿದುಕೊಂಡು ಒಳಗೆ ಕರೆದುಕೊಂಡು ಹೋದಳು. ಆಗ ನನಗಿನ್ನೂ 7 ವರ್ಷ ವಯಸ್ಸು, ನಮ್ಮ ಮನೆಯ ಹಿತ್ತಲಲ್ಲಿ ಒಂದು ನೀರಿನ ತೊಟ್ಟಿ ಇತ್ತು, ಆ ನೀರಿನ ತೊಟ್ಟಿಗೆ ಅಂಟಿಕೊಂಡಂತೆ ಒಂದು ಗೋಡೆಯಲ್ಲಿ ಒಂದು ಅಟ್ಟ ಇತ್ತು, ಅಲ್ಲಿ ಒಂದು ಜೋಡಿ ಗುಬ್ಬಿಗಳು ಗೂಡು ಮಾಡಿಕೊಂಡು ವಾಸವಾಗಿದ್ದವು,ಅವುಗಳ ಚಿಲಿಪಿಲಿ ಸದ್ದು ಕೇಳಲು ತುಂಬಾ ಇಂಪು, ನನಗೆ ಅವುಗಳನ್ನು ನೋಡಬೇಕೆಂದರೆ ತುಂಬಾ ಇಷ್ಟ. ಅಲ್ಲಿ ನಿಂತು ಅವುಗಳನ್ನು ನೋಡೋದೇ ನನ್ನ ಕೆಲಸವಾಗಿತ್ತು, ಅದೇನೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಆ ಜೋಡಿ ಹಕ್ಕಿಗಳ ಚಿಲಿಪಿಲಿ ಸದ್ದಿನ ಜೊತೆ ಇನ್ನೂ ಮೂರ್ನಾಲ್ಕು ಗುಬ್ಬಚ್ಚಿಗಳ ಸದ್ದು ಜೊತೆಗೂಡಿತ್ತು. ನನಗೆ ತುಂಬಾ ಆಶ್ಚರ್ಯ, ಒಮ್ಮೆ ಅಮ್ಮನನ್ನು ಕೇಳಿದಾಗ ಅಮ್ಮ ಹೇಳಿದಳು ಯಾಕೆ ಅಂದ್ರೆ ಈಗ ಆ ಗುಬ್ಬಿ ಮರಿಗಳಿಗೆ 3 ಮರಿಗುಬ್ಬಿಗಳಿವೆ, ಹಾಗಾಗಿ ಸದ್ದು ಜಾಸ್ತಿಯಾಗಿದೆ,ಹಾಗಾಗಿ ನೀನು ಇನ್ಮೇಲೆ ಇಲ್ಲಿ ಜಾಸ್ತಿ ಬರಬಾರದು, ಅವುಗಳಿಗೆ ತೊಂದರೆ ಕೊಡುವಂತಿಲ್ಲ ಅಂದಳು ನನಗೆ ತಡೆಯಲಾರದಷ್ಟು ಖುಷಿಯಾಯ್ತು, ಹೌದಾ ಅಮ್ಮಾ, ನಿಜಾನಾ ನೀನು ಹೇಳ್ತಾ ಇರೋದು, ಅಮ್ಮಾ ಒಂದುಸಲ ನಾನು ಆ ಗುಬ್ಬಿ ಮರಿಗಳನ್ನ ಮುಟ್ಟಬಹುದಾ..?." ಲೇ ಮಾರಾಯ್ತಿ.. ಆ ಕೆಲ್ಸ ಮಾತ್ರ ಮಾಡಬೇಡ, ನಾವು ಅವನ್ನು ಮುಟ್ಟುವ ಹಾಗಿಲ್ಲ ಅಂದಳು. ಯಾಕಮ್ಮಾ ಅದನ್ನು ನಾವು ಯಾಕೆ ಮುಟ್ಟಬಾರದು ಹೇಳಮ್ಮಾ ಪ್ಲೀಸ್ ಅಂದೆ. ಅದಕ್ಕೆ ಅಮ್ಮ ಹೇಳಿದಳು ನೋಡು ನಿಶೂ... ಅವು ಬ್ರಾಹ್ಮಣ ಗುಬ್ಬಿಗಳು, ನಾವು ಅದನ್ನು ಮುಟ್ಟಬಾರದು, ಅವು ನಮ್ಮನ್ನು ಮುಟ್ಟಿಸಿಕೊಳ್ಳುವುದಿಲ್ಲ, ನೀನೇದರೂ ಒಂದುವೇಳೆ ಆ ಮರಿಗಳನ್ನು ಮುಟ್ಟಿದ್ದೇ ಆದರೆ ನೀನು ಮುಟ್ಟಿದ್ದೀಯ ಅನ್ನೋ ಕಾರಣಕ್ಕೆ ಅದರ ಅಪ್ಪ, ಅಮ್ಮನೇ ಆ ಮರಿಗಳನ್ನ ಕೊಂದು ಹಾಕುತ್ತೆ, ಮರಿಗಳು ಸಾಯೋದು ನಿಂಗೆ ಇಷ್ಟನಾ ಅಂತ ಕೇಳಿದಳು, ಆಗ ಅಮ್ಮ ಏನೇ ಹೇಳಿದರೂ ನಂಬುತ್ತಿದ್ದ ವಯಸ್ಸಾದ್ದರಿಂದ ಅಮ್ಮ ಹೇಳಿದ್ದು ಕೇಳಿ ನನಗೆ ತುಂಬಾ ಭಯವಾಯ್ತು, ಗುಬ್ಬಿಗಳು ಹೀಗೆಲ್ಲ ಮಾಡುತ್ತಾ..? ನಾವೇನಾದರೂ ಮರಿಗಳನ್ನ ಮುಟ್ಟಿದ್ರೆ ಮರಿಗಳನ್ನೇ ಕೊಂದು ಹಾಕುತ್ತಾ...? ಇಲ್ಲಮ್ಮಾ ನಾನು ಮುಟ್ಟಲ್ಲ, ಪಾಪ ಆ ಮರಿಗಳು ಸಾಯಬಾರದು ಅಂತ ಹೇಳಿದೆ. ಆಮೇಲೆ ಅದನ್ನು ಮುಟ್ಟುವ ಆಸೆ ದೂರವಾಯ್ತು, ಆದ್ರೂ ಅಲ್ಲಿ ಹೋಗಿ ನಿಂತು ಅವುಗಳನ್ನು ನೋಡುವುದನ್ನು ಮಾತ್ರ ಬಿಡುತ್ತಿರಲಿಲ್ಲ. ಅಮ್ಮ ಕೈಹಿಡಿದು ಒಳಕರೆತಂದಾಗ ಮುಟ್ಟೋದೇನೋ ತಪ್ಪು ಅಂದೆ, ಆದ್ರೆ ಅಮ್ಮ ನೋಡಿದ್ರೂ ತಪ್ಪಾ ಅಂತ ಕೇಳಿದೆ, ನಿಂಗೆ ಎಷ್ಟು ಸಲ ಹೇಳೋದು ಹೇಳು ಪುಟ್ಟಾ,,, ಅವನ್ನ ಯಾರ ತೊಂದ್ರೇನೂ ಇಲ್ಲದ ಹಾಗೆ ಇರೋಕೆ ಬಿಡು ಅಂದಳು.ಅಮ್ಮ ಎಷ್ಟು ಹೇಳಿದರೂ ಅವುಗಳನ್ನು ನೋಡಬೇಕು ಅನ್ನೋ ಆಸೆ ಕಡಿಮೆ ಆಗ್ತಿರಲಿಲ್ಲ. ಒಂದು ದಿನ ಮನೆಯಲ್ಲಿ ಯಾರೂ ಇರಲಿಲ್ಲ. ಅಮ್ಮ ಸಹ ಅಂಗಡಿಗೆ ಹೋಗಿದ್ರು.ಒಳ್ಳೆ ಸಮಯ ಮನೆಯಲ್ಲಿ ಯಾರೂ ಇಲ್ಲ, ಈಗ ನಾನು ಆ ಮರಿಗಳನ್ನು ನೋಡಬಹುದು ಅಂತ ಆ ನೀರಿನ ತೊಟ್ಟಿ ಹತ್ತಿರ ಹೋದೆ, ಒಂದು ಕುರ್ಚಿಯ ಸಹಾಯದಿಂದ ತೊಟ್ಟಿಯ ಮೇಲೆ ಹತ್ತಿದೆ, ಗೂಡೇನೋ ಕಾಣಿಸುತ್ತಿತ್ತು ಆದ್ರೆ ಮರಿಗಳು ಕಾಣಿಸಲಿಲ್ಲ, ಅವುಗಳ ಚಿಲಿಪಿಲಿ ಸದ್ದು ಮಾತ್ರ ಕೇಳಿಸುತ್ತಿತ್ತು, ಅದರ ಸದ್ದು ಕೇಳಿ ಇನ್ನೂ ಕುತೂಹಲ ಜಾಸ್ತಿಯಾಯ್ತು, ಸ್ವಲ್ಪ ಕಾಲುಗಳನ್ನು ಎಟುಕಿಸಿ ನೋಡಿದೆ, ಅಬ್ಬಾ ಪುಟ್ಟ ಪುಟ್ಟ 3 ಮರಿಗಳು, ಇನ್ನೂ ಅದರ ದೇಹದ ಮೇಲೆ ಪುಕ್ಕಗಳೂ ಸಹ ಬೆಳೆದಿರಲಿಲ್ಲ, ಅವುಗಳು ಕಣ್ಣುಗಳೂ ಸಹ ಬಿಡುತ್ತಿರಲಿಲ್ಲ, ನೋಡೋಕೆ ಮುದ್ದುಮುದ್ದಾಗಿ ಕಾಣಿಸುತ್ತಿರಲಿಲ್ಲವಾದರೂ ನನಗೂ ಸಣ್ಣ ವಯಸ್ಸಾಗಿದ್ದರಿಂದ ನನಗಂತೂ ತುಂಬಾ ಇಷ್ಟವಾಗಿತ್ತು, ಅದರ ಅಪ್ಪ ಅಮ್ಮ ಇರಲಿಲ್ಲ, ನನಗೆ ಇನ್ನೊಂದು ಯೋಚನೆ ಬಂತು, ಹೇಗಿದ್ರೂ ಅದರೆ ಅಪ್ಪ, ಅಮ್ಮ ಇಲ್ಲ ಒಂದೇ ಒಂದು ಸಲ ಮುಟ್ಟಿ ನೋಡ್ತೀನಿ ಯಾರಿಗೂ ಗೊತ್ತಾಗೊಲ್ಲ, ಮರಿಗಳು ಸಾಯೋದೂ ಇಲ್ಲ ಅಂತ ನಿಧಾನವಾಗಿ ಒಂದು ಮರಿನ ಕೈಗೆತ್ತಿಕೊಂಡೆ, ಅದರ ತಲೆಯನ್ನು ನೇವರಿಸಿ ಅದರ ತಲೆಗೆ ಮುತ್ತು ಕೊಟ್ಟೆ,ಇನ್ನೇನು ಅದನ್ನು ಅದರ ಜಾಗದಲ್ಲಿ ಮತ್ತೆ ಇಡಬೇಕು ಅನ್ನುವಷ್ಟರಲ್ಲಿ ಅದೆಲ್ಲಿದ್ದವೋ ಏನೋ ಆ ಮರಿಗಳ ಅಪ್ಪ ಅಮ್ಮ ಬಂದೇ ಬಿಟ್ಟವು, ನಾನು ಅವುಗಳ ಮರಿಗಳನ್ನು ಮುಟ್ಟುತ್ತಿರುವುದನ್ನು ನೋಡಿ ಅವುಗಳು ಒಂದೇ ಸಮನೆ ಚಿಂವ್ ಚಿಂವ್ ಅನ್ನುತ್ತಾ ಅತ್ತಿಂದಿತ್ತಾ ಇತ್ತಿಂದತ್ತ ಹಾರಾಡತೊಡಗಿದವು, ಅವುಗಳ ಕೂಗು ಎಂದಿನಂತೆ ಇರಲಿಲ್ಲ, ಭಯವೋ ಕೋಪವೋ ಆಗ ನನಗೆ ಏನೂ ಗೊತ್ತಾಗಲಿಲ್ಲ, ಅವುಗಳನ್ನು ನೋಡಿ ನನಗೂ ಭಯವಾಗಿ ಸರಸರನೆ ಅಲ್ಲಿಂದ ಜಾಗ ಖಾಲಿ ಮಾಡಿದೆ, ಅಮ್ಮ ಬಂದಳು, ರಾತ್ರಿ ಊಟ ಆಯ್ತು ಎಲ್ಲರೂ ಮಲಗಿದರೂ ನನಗೆ ಮಾತ್ರ ನಿದ್ದೆ ಬಂದಿಲ್ಲ, ಏನೋ ಒಂದು ರೀತಿಯ ಭಯ,ಹೇಗೋ ನಿದ್ದೆ ಮಾಡಿ ಬೆಳಿಗ್ಗೆ ಬೇಗಾನೇ ಎದ್ದೆ, ಎದ್ದ ತಕ್ಷಣ ಹಿತ್ತಲಿಗೆ ಓಡಿದೆ, ಅಲ್ಲಿ ಗುಬ್ಬಿ ಗೂಡನ್ನ ನೋಡಿದೆ, ಶಾಂತವಾಗಿತ್ತು, ಯಾವ ಸದ್ದೂ ಇಲ್ಲ, ಒಂದು ರೀತಿಯ ಸಮಾಧಾನವಾಯ್ತು, ಸದ್ಯ ಏನೂ ಆಗಿಲ್ಲ ಅಂದುಕೊಂಡು ತೊಟ್ಟಿಯ ನೀರಿನಲ್ಲಿ ನನ್ನ ಮುಖ ನೋಡಿಕೊಂಡೆ, ಕೆದರಿದ್ದ ತಲೆ ಕೂದಲು ಸರಿ ಮಾಡಿಕೊಳ್ಳುತ್ತಿದ್ದೆ, ಇದ್ದಕ್ಕಿಂತೆ ಭಯ ನನ್ನನ್ನು ಆವರಿಸಿತು. ಕಣ್ಣಲ್ಲಿ ನೀರು ತುಂಬಿ ಬಂತು .ನೀರಿನಿಂದ ತುಂಬಿದ್ದ ಆ ತೊಟ್ಟಿಯ ತಳದಲ್ಲಿ ಅಲ್ಲೊಂದು ಇಲ್ಲೊಂದು ಅನ್ನುವ ಹಾಗೆ ಆ ಮೂರೂ ಗುಬ್ಬಿ ಮರಿಗಳು ಸತ್ತು ಬಿದ್ದಿದ್ದವು. ಅಳುತ್ತಾ ಅಮ್ಮನ ಬಳಿ ಓಡಿ ವಿಷ್ಯ ತಿಳಿಸಿದೆ, ಅಮ್ಮ ಸಹ ಬಂದು ನೋಡಿ ಬೇಸರಪಟ್ಟಳು, ಆಮೇಲೆ ನನ್ನಿಂದ ನಾನು ಅವುಗಳನ್ನು ಮುಟ್ಟಿದ ವಿಷಯ ತಿಳಿದುಕೊಂಡು ನನ್ನನ್ನು ಚೆನ್ನಾಗಿ ಬೈದಳು, ನಾನು ಅಳುತ್ತಲೇ ಇದ್ದೆ, ಹೌದು ಅಮ್ಮ ಹೇಳಿದ್ದು ನಿಜ, ಅವು ಬ್ರಾಹ್ಮಣ ಗುಬ್ಬಿಗಳು, ನಾನು ಮುಟ್ಟಿದ್ದಕ್ಕೇ ಅವುಗಳನ್ನು ಕೊಂದು ಹಾಕಿ ಬಿಟ್ಟಿತು ಅಂದುಕೊಂಡು ಅಳುತ್ತಲೇ ಇದ್ದೆ.ಆಗೇನೋ ನಾನಿನ್ನು ಚಿಕ್ಕವಳು, ನನಗೇನೂ ಅರ್ಥ ಆಗುತ್ತಿರಲಿಲ್ಲ, ಧರ್ಮ, ಜಾತಿ, ಮತಗಳ ಬಗ್ಗೆ ಏನೂ ಗೊತ್ತಿರಲಿಲ್ಲ, ಅಮ್ಮ ಹೇಳಿದ್ದನ್ನ ನಂಬಿದ್ದೆ. ಆದ್ರೆ ಈಗಲೂ ನನಗೆ ಅರ್ಥವಾಗದ ವಿಷ್ಯ ಅಂದ್ರೆ ಮನುಷ್ಯರೇನೋ ಆ ಧರ್ಮ, ಈ ಧರ್ಮ ಅಂತ ಕಚ್ಚಾಡಿ ಸಾಯ್ತಾರೆ, ಆದ್ರೆ ಈ ಪ್ರಾಣಿ, ಪಕ್ಷಿಗಳೂ ಅವನ್ನೆಲ್ಲಾ ಪಾಲಿಸುತ್ತಾ....? ನಿಜವಾಗ್ಲೂ ಗುಬ್ಬಿಗಳು ಬ್ರಾಹ್ಮಣ ಜಾತಿಗೆ ಸೇರಿದ್ಯಾ...? ಅವುಗಳನ್ನು ನಾನು ಮುಟ್ಟಿದ್ದಕ್ಕೆ ಅದರ ಅಪ್ಪ, ಅಮ್ಮ ಕೊಂದು ಹಾಕಿದ್ವಾ ಅನ್ನೋ ಪ್ರಶ್ನೆ ಈಗ್ಲೂ ನನ್ನನ್ನು ಕಾಡುತ್ತೆ, ನನ್ನಿಂದಾಗಿ 3 ಗುಬ್ಬಿ ಮರಿಗಳು ಪ್ರಾಣ ಬಿಟ್ವಾ ಅನ್ನೋ ಪಾಪಪ್ರಜ್ಞೆ ಈಗ್ಲೂ ಒಮ್ಮೊಮ್ಮೆ ನನ್ನನ್ನು ಕಾಡುತ್ತೆ.
ಒಟ್ಟಿನಲ್ಲಿ ಅಳಿವಿನ ಅಂಚಿನಲ್ಲಿ ಇರುವ ಈ ಗುಬ್ಬಚ್ಚಿಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ....
N....R....
Comments
ಉ: ಬ್ರಾಹ್ಮಣ ಗುಬ್ಬಿ.
ಮೋಬ್ಯಾಲ್ ಸೀಗನಲ್ಸ್ ನಿಂದ ಗುಬ್ಬಚ್ಚಿಗಳು ನಾಶವಾಗಿದ್ದಾವೆ ಮೇಡಂ.
In reply to ಉ: ಬ್ರಾಹ್ಮಣ ಗುಬ್ಬಿ. by Nagaraj Bhadra
ಉ: ಬ್ರಾಹ್ಮಣ ಗುಬ್ಬಿ.
ಹೌದು ನಾಗರಾಜ್ ಭದ್ರ ಸರ್, ಧನ್ಯವಾದಗಳು. ಆದ್ರೆ ನಾನು ಚಿಕ್ಕವಳಾಗಿರುವಾಗ ಯಾವ ಮೊಬೈಲ್ ಸಹ ಇರಲಿಲ್ಲ.
ಉ: ಬ್ರಾಹ್ಮಣ ಗುಬ್ಬಿ.
ನಿಶಾ ಅವರೆ,
"ಬ್ರಾಹ್ಮಣ ಗುಬ್ಬಿ" ಶೀರ್ಷಿಕೆಯೇ ಚೆನ್ನಾಗಿದೆ. :) ಹಾಗೇ ನೀವು ಬರೆದ ಗುಬ್ಬಿ ಚಿತ್ರವೂ ಚಂದವಿದೆ.
>>>ಅವುಗಳನ್ನು ನಾನು ಮುಟ್ಟಿದ್ದಕ್ಕೆ ಅದರ ಅಪ್ಪ, ಅಮ್ಮ ಕೊಂದು ಹಾಕಿದ್ವಾ ಅನ್ನೋ ಪ್ರಶ್ನೆ ಈಗ್ಲೂ ನನ್ನನ್ನು ಕಾಡುತ್ತೆ, ನನ್ನಿಂದಾಗಿ 3 ಗುಬ್ಬಿ ಮರಿಗಳು ಪ್ರಾಣ ಬಿಟ್ವಾ ಅನ್ನೋ ಪಾಪಪ್ರಜ್ಞೆ ಈಗ್ಲೂ ಒಮ್ಮೊಮ್ಮೆ ನನ್ನನ್ನು ಕಾಡುತ್ತೆ...
- ಇದೆಲ್ಲಾ ಹಿಂದಿನ ಕಾಲದವರ ಬುದ್ಧಿವಂತಿಕೆ. ಹಾಗೆ ಹೇಳಿದರೆ ಈ ಚೇಷ್ಟೆಯ ಮಕ್ಕಳು ಹಕ್ಕಿ ಮರಿಯ ಸುದ್ದಿಗೆ ಹೋಗುವುದಿಲ್ಲ. ಬೆಕ್ಕು ನಾಯಿಗಳ ಮರಿಗಳಿಗೆ ಮಕ್ಕಳು ಮಾಡುವ ಕಿರಿಕಿರಿ ನೀವೇ ನೋಡಿರಬಹುದು. ಬೆಕ್ಕಿನ ಮರಿಯನ್ನು ಬಾಲದಲ್ಲಿ ಹಿಡಿದು ನೇತಾಡಿಸಿದಂತೆ ಹಕ್ಕಿ ಮರಿಯನ್ನು ಮಾಡಿದರೆ.....
ತನ್ನ ಹುಟ್ಟುವ ಮರಿಗಾಗಿ ಹಕ್ಕಿಗಳು ಮಾಡುವ ತಯಾರಿ, ಗೂಡು ಕಟ್ಟಲು ಪಡುವ ಶ್ರಮ, ಮರಿಗಳಿಗಾಗಿ ತನ್ನ ಆಹಾರದ ಬಗ್ಗೆಯೂ ಯೋಚಿಸದೇ ಕಾಯುವ ಪರಿ.....ಇಂತಹ ಹಕ್ಕಿಗಳು ಮಾನವ ಮುಟ್ಟಿದ ಎಂಬ ಒಂದೇ ಕಾರಣಕ್ಕೆ ಕ್ರೂರಿಗಳಾಗಲು ಸಾಧ್ಯವೇ ಇಲ್ಲ.. ನೀವು ಮುಟ್ಟಿದ್ದೂ, ಮರಿಗಳ ಸಾವು ಕಾಕತಾಳೀಯ ಅಷ್ಟೆ. ಚಿಂತಿಸದಿರಿ.
In reply to ಉ: ಬ್ರಾಹ್ಮಣ ಗುಬ್ಬಿ. by ಗಣೇಶ
ಉ: ಬ್ರಾಹ್ಮಣ ಗುಬ್ಬಿ.
ಧನ್ಯವಾದಗಳು ಗಣೇಶ್ ಸರ್, ಹೌದು..ಆ ಗುಬ್ಬಿ ಮರಿಗಳು ನೆನಪಿಗೆ ಬಂದ್ರೆ ಸಾಕು, ನಾನು ನಿಜಕ್ಕೂ ಹಿಂದಿನ ಕಾಲದವರ ಹಾಗೆ ಯೋಚನೆ ಮಾಡ್ತೀನಿ. ಯಾಕೆ ಅಂತ ಗೊತ್ತಿಲ್ಲ..
ಉ: ಬ್ರಾಹ್ಮಣ ಗುಬ್ಬಿ.
ನಿಶಾ ಜಿ, ತಮ್ಮ ಪರಿಸರ ಕಾಳಜಿಗೆ ಮೊದಲು ಅಭಿನಂದಿಸುತ್ತೇನೆ. ಪ್ರಾಣಿ, ಪಕ್ಷಿಗಳಿಗೆ ಅವುಗಳದೇ ಒಂದು ಪ್ರಪಂಚ, ಜೀವಿತವಿಧಾನ. ತಮ್ಮ ಗುಂಪಿನಿಂದ ಒಂದು ಮರಿಹಕ್ಕಿ ಅಥವಾ ಬೆಳೆದ ಪಕ್ಷಿ ಇತರೆ ಮನುಷ್ಯರೊಂದಿಗೆ ಬೆರೆತು ಒಡನಾಡಿದಾಗ ಮಾತ್ರ ಅವುಗಳನ್ನು ದೂರಮಾಡುತ್ತವೆ,. ಅದರ ಮೇಲೆ ಆಕ್ರಮಣ ಮಾಡಿ, ಸಾಯಿಸುತ್ತವೆ. ಇದಕ್ಕೆ ಮೂಲ ಕಾರಣ ಪ್ರಕೃತಿ. ಅನ್ಯ ಜೀವಿಗಳಿಂದ ವೈರಸ್ ಬ್ಯಾಕ್ಟೀರಿಯಾ ಸೋಂಕು ತಾಗಿ, ಕೇವಲ ಅತ್ಯಲ್ಪ ಇಮ್ಯೂನ್ ಇರುವ ಇವುಗಳಿಗೆ ಸಣ್ಣ ಸೋಂಕುಗಳು ಇಡೀ ಸುತ್ತಲಿನ ಪಕ್ಷಿ ಸಮುದಾಯವನ್ನೇ ಬಲಿಪಡೆದುಬಿಡುತ್ತದೆ. ಈ ಕಾರಣಕ್ಕೆ ಅವುಗಳು ಬೇರೊಡನೆ ಬೆರೆತ ಹಕ್ಕಿಯ ಮೇಲೆ ಆಕ್ರಮಣ ಮಾಡಲು ಪ್ರಕೃತಿ ಕಲಿಸಿಕೊಟ್ಟಿದೆ ಎಂದು ಓದಿದ ನೆನಪು. ಆದರೆ ಕೆಲವು ಕ್ಷಣ ಒಡನಾಡಿದ ಮಾತ್ರಕ್ಕೆ ಅವು ಆಕ್ರಮಣ ಮಾಡಲಾರವು ಕೂಡ. ತಮ್ಮ ಸಂತತಿಯನ್ನು ಅನ್ಯರ ಕೈಯಿಂದ ಪಾರುಮಾಡಲು ಸುತ್ತಲೂ ಹಾರಾಡುತ್ತವೆ. ಬಹುತೇಕ ಯಶಸ್ಸು ಕಾಣುತ್ತವೆ. ಆದರೆ, ತಮ್ಮ ಗುಂಪಿನಲ್ಲಿ ಅಂಗವಿಕಲ, ಆಶಕ್ತ ಮರಿ ಹುಟ್ಟಿದಾಗ, ನಿಗದಿತ ಬೆಳವಣಿಗೆ ತೋರದ ಹಕ್ಕಿಗಳನ್ನು 'ವೀಕ್ಲಿಂಗ್ಸ್' ಎನ್ನುತ್ತಾರೆ, ಅಂತಹ ಮರಿಗಳನ್ನು ಹಿಂದೆ ಅದರಷ್ಟಕ್ಕೆ ಬಿಟ್ಟು ಗೂಡು ಬದಲಿಸುತ್ತವೆ. ಹಿಂದುಳಿದ ಪಕ್ಷಿ ತನ್ನಷ್ಟಕ್ಕೆ ಹೋರಾಡಿ ಬದುಕಬೇಕು, ಇಲ್ಲಾ ಸಾಯಬೇಕು. ಇದು ನನಗೆ ತಿಳಿದ ತುಸು ಮಾಹಿತಿ, ತಮ್ಮೊಡನೆ ಹಂಚಿಕೊಂಡೆ. ತಮಗೆ ಮತ್ತೊಮ್ಮೆ ವಂದನೆಗಳು. ಬರೆಯುತ್ತಿರಿ ಮೇಡಂ ಜಿ.
In reply to ಉ: ಬ್ರಾಹ್ಮಣ ಗುಬ್ಬಿ. by lpitnal
ಉ: ಬ್ರಾಹ್ಮಣ ಗುಬ್ಬಿ.
ಧನ್ಯವಾದಗಳು ಸರ್...
ಉ: ಬ್ರಾಹ್ಮಣ ಗುಬ್ಬಿ.
ಹಾಗೆಲ್ಲ ಇರಲಾರದು ಮೇಡಂ
ನಿಜಕ್ಕೂ ನೀವನ್ನುವಾಗ ಹಾಗೆ ಭ್ರಾಹ್ಮಣಗುಬ್ಬಿ ಅನ್ನುವ ಹಾಗಿದ್ದಲ್ಲಿ, ಮರಿಗಳಿಗೆ 'ಸ್ನಾನ' ಮಾಡಿಸಿ ಶುದ್ದಿಮಾಡಿ ಬಿಟ್ಟುಬಿಡುತ್ತಿತ್ತು ಹೊರತಾಗಿ ಸಾಯಿಸುವ ಕ್ರೌರ್ಯ ತೋರಿಸುತ್ತಿರಲಿಲ್ಲ :)
ಜೀವ ಜಗತ್ತಿನ ಅನೇಕ ನಿಗೂಡ ನಮಗರ್ಥವಾಗುವದಿಲ್ಲ !
ಗುಬ್ಬಿ ಮರಿ ಸಾಯುತ್ತದೆ, ಬೆಕ್ಕು ಬೆಕ್ಕಿನ ಮರಿಯನ್ನೆ ತಿನ್ನುತ್ತದೆ. ಬೆಳೆದ ಪ್ರಾಣಿಯನ್ನು ಗುಂಪಿನಿಂದ ಹೊರಹಾಕುತ್ತವೆ, ಇಂತಹುದೆಲ್ಲ ನಡೆಯುತ್ತಲೆ ಇರುತ್ತದೆ.
ಮನುಷ್ಯನೊಬ್ಬ (ಅದೂ ಭಾರತದಲ್ಲಿ ಹೆಚ್ಚು) ಹುಟ್ಟಿನಿಂದ ತನ್ನ ಸಾವಿನವರೆಗೂ ತನ್ನ ಮಕ್ಕಳು ತನ್ನ ಜೊತೆಯೆ ಇರಲೆಂದು ಬಯಸುತ್ತಾನೆ ಅಷ್ಟೇ !
In reply to ಉ: ಬ್ರಾಹ್ಮಣ ಗುಬ್ಬಿ. by partha1059
ಉ: ಬ್ರಾಹ್ಮಣ ಗುಬ್ಬಿ.
ಹೌದು ಸರ್...ನೀವು ಹೇಳುವುದು ನಿಜಾನೇ...ಧನ್ಯವಾದಗಳು
ಉ: ಬ್ರಾಹ್ಮಣ ಗುಬ್ಬಿ.
ನಾನೂ ಚಿಕ್ಕಂದಿನಲ್ಲಿ ಗುಬ್ಬಿಯನ್ನು ನಾವು ಮುಟ್ಟಿದರೆ ಇತರ ಗುಬ್ಬಿಗಳು ಆ ಮುಟ್ಟಲ್ಪಟ್ಟ ಗುಬ್ಬಿಯನ್ನು ಹೊರದೂಡುತ್ತವೆ ಎಂದು ಕೇಳಿದ್ದೆ. 'ಬ್ರಾಹ್ಮಣ ಗುಬ್ಬಿ' ಎಂಬ ಪದಬಳಕೆ ಮಡಿವಂತಿಕೆಯನ್ನು ಎತ್ತಿ ತೋರಿಸಲು ಬಳಸಿರಬಹುದು. ನೈಜಾರ್ಥದಲ್ಲಿ ಹೇಳಬೇಕೆಂದರೆ 'ಬ್ರಾಹ್ಮಣ್ಯ' ಬದುಕಿಸುವ ಗುಣ ಹೊಂದಿರುತ್ತದೆ, ಸಾಯಿಸುವುದು ಬ್ರಾಹ್ಮಣಿಕೆಗೆ ಹೊರತಾದುದು. ಏನೇ ಇರಲಿ, ನಿಮ್ಮ ಕಳಕಳಿ, ನಿಮ್ಮಲ್ಲಿದ್ದ ಪಾಪಪ್ರಜ್ಞೆ ಅಭಿನಂದನೀಯ.
In reply to ಉ: ಬ್ರಾಹ್ಮಣ ಗುಬ್ಬಿ. by kavinagaraj
ಉ: ಬ್ರಾಹ್ಮಣ ಗುಬ್ಬಿ.
ಧನ್ಯವಾದಗಳು ಕವಿ ನಾಗರಾಜ್ ಸರ್
ಉ: ಬ್ರಾಹ್ಮಣ ಗುಬ್ಬಿ.
ನಿಶಾ ಶೇಕರ್ ಅವರೆ ತಮ್ಮ ಲೇಖನ ಹಾಗೂ ಪ್ರತಿಕ್ರಿಯೆಗಳನ್ನು ಓದಿದಾಗ ನಮ್ಮ ಮನೆಯಲ್ಲಿ ನಡೆದ ಇಂಥಹ ಒಂದೆರಡು ಘಟನೆಗಳು ಬರೆಯ ಬೇಕೆನಿಸಿತು,
ಮೂರು ವರುಶದ ಹಿಂದೆ ಗುಬ್ಬಿಗಳ ಸಂಖ್ಯೆ ನಮ್ಮ ಮನೆಯ ಹಿತ್ತಲ್ಲಲ್ಲಿ ಸಾಕಸ್ಟಿದ್ದವು.ಹೂಗಿಡಗಳ ಪೊದೆಯಲ್ಲಿ ಅಥವ ಮನೆಮಾಡಿನ ಸಂದಿಯಲ್ಲಿ ಗೂಡನ್ನು ಕಟ್ಟಿ ಮರಿಗಳ ರೆಕ್ಕೆಗಳು ಮೂಡಿ ಅವು ಕೊಂಚ ಬಲಿತು ಹಾರಿ ಹೋಗುವ ತನಕ ಪೋಶಿಸುತ್ತಿದ್ದವು ..ಹಿತ್ತಲಲ್ಲಿ ಓಡಾಡುವ ಬೆಕ್ಕುಗಳು ವಂಚಿಸಿ ಗುಬ್ಬಿಗಳನ್ನು ಬೇಟೆ ಆಡಿ ಚಿನ್ನಾಟ ವಾಡಿ ಕೊಂದಿದ್ದನ್ನು ನಾನು ನೋಡಿದ್ದೆ.ತದನಂತರ ಅವು ಮನೆಯ ಬಾವಿಯ ಕೈಪಿಡಿಯ ಕೆಳಗೆ ಕಲ್ಲು ಸಂದುಗಳಲ್ಲಿ ಗೂಡನ್ನು ಕಟ್ಟಲು ಶುರುಮಾಡಿದವು.ಬಾವಿಯಲ್ಲಿ ಹುಲ್ಲು ಕಸ ಬೀಳುತ್ತಿದ್ದರೂ ನಾವು ಅವುಗಳೊಂದಿಗೆ ಸಹಿಸಿಕೊಂಡಿದ್ದೆವು .ಒಂದು ದಿನ ಮನೆಗೆ ನೀರು ತರುವಾಗ ಹಣಕಿ ನೋಡಿದಾಗ ಗುಬ್ಬಚ್ಚಿಮರಿ ಸತ್ತು ಬಿದ್ದಿತ್ತು. ಎನೊ ಅಕಸ್ಮಿಕವಾಗಿ ಬಿದ್ದು ಸತ್ತು ಹೋಗಿರಬೇಕೆಂದು ಎಣಿಸಿದ್ದೆ. ಗುಬ್ಬಿಗಳು ಬಾವಿಯಲ್ಲಿ ಗೂಡನ್ನು ಕಟ್ಟಿ ವಾಸ ಮಾಡುವ ಪ್ರಕ್ರಿಯೆ ಮುಂದುವರೆಸಿ ಮರಿ ಮಾಡುತ್ತಿದ್ದವು.ಆದರೆ ಹಿಂದಿನಂತೆ ಈಸಲವೂ ಸಹ ಮತ್ತೊಮ್ಮೆ ಮರಿ ನೀರಿಗೆ ಬಿದ್ದು ಸತ್ತು ಹೋಗಿತ್ತು.
ಆನಂತರ ನಾವು ಈ ಗುಬ್ಬಿಯ ಸಾವಿನ ಸರಣಿ ತಪ್ಪಿಸುವ ಸಲುವಾಗಿ ಬಾವಿಗೆ ಜಾಲರಿ ಹಾಕಿಸಿ ಬಾವಿಯ ಕಲ್ಲಿ ನಸಂದಿಯಲ್ಲಿ ಗೂಡನ್ನು ಕಟ್ಟದ ಹಾಗೆ ಮಾಡಿದೆವು
ನನಗನಿಸಿದಂತೆ ಗುಬ್ಬಿಮರಿಗಳು ರೆಕ್ಕೆಗೆ ಬಲ ಬರುವ ಮೊದಲು ಹಾರಲು ಪ್ರಯತ್ನಿಸಿ ನೀರಿಗೆ ಬಿದ್ದು ಸತ್ತು ಹೋಗುತ್ತಿದ್ದವೋ ಏನೊ!. ನೀರಿಲ್ಲದೆ ಖಾಲಿ ಜಾಗ ವಿದ್ದಿದ್ದರೆ ಕೊಂಚ ಸುದಾರಿಸಿಕೊಂಡು ಮತ್ತೊಮ್ಮೆ ಹಾರಲು ಪ್ರಯತ್ನಿಸುತ್ತಿದ್ದರ ಬಹುದು.
ವಂದನೆಗಳು . ರಮೇಶ ಕಾಮತ್
In reply to ಉ: ಬ್ರಾಹ್ಮಣ ಗುಬ್ಬಿ. by swara kamath
ಉ: ಬ್ರಾಹ್ಮಣ ಗುಬ್ಬಿ.
ನನ್ನ ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ರಮೇಶ ಕಾಮತ್ ಸರ್...ನೀವು ಹೇಳುವುದು ಸರಿ, ಆದರೆ ನಾನು ಹೇಳಿದ ಗುಬ್ಬಿ ಮರಿಗಳಿಗೆ ಇನ್ನೂ ರೆಕ್ಕೆ ಪುಕ್ಕಗಳೇನೂ ಬೆಳೆದಿರಲಿಲ್ಲ. ಅವು ಕಣ್ಣು ಸಹ ಸರಿಯಾಗಿ ಬಿಡುತ್ತಿರಲಿಲ್ಲ. ನಾಲ್ಕೈದು ದಿನದ ಮರಿಗಳಷ್ಟೆ. ಮತ್ತೊಮ್ಮೆ ಧನ್ಯವಾದಗಳು.