ರಾಜಸ್ಥಾನವೆಂಬ ಸ್ವರ್ಗದ ತುಣುಕು-8 ಬೇಡಿದ ವರ ನೀಡುವ ಅತೀಂದ್ರಿಯ ಶಕ್ತಿ - ಲಕ್ಷ್ಮೀಕಾಂತ ಇಟ್ನಾಳ

ರಾಜಸ್ಥಾನವೆಂಬ ಸ್ವರ್ಗದ ತುಣುಕು-8 ಬೇಡಿದ ವರ ನೀಡುವ ಅತೀಂದ್ರಿಯ ಶಕ್ತಿ - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ರಾಜಸ್ಥಾನವೆಂಬ ಸ್ವರ್ಗದ ತುಣುಕು-8 ಬೇಡಿದ ವರ ನೀಡುವ ಅತೀಂದ್ರಿಯ ಶಕ್ತಿ - ಲಕ್ಷ್ಮೀಕಾಂತ ಇಟ್ನಾಳ

      ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಕುಚಮನ್ ಹವೇಲಿಯ ಹೋಟೆಲ್‍ನಲ್ಲಿ ಬೆಳಗಿನ ತಿಂಡಿಗಾಗಿ ಕೆಳಗಿಳಿದೆವು. ಅದು ಅಂದಿನ ಮಂತ್ರಿಯೊಬ್ಬರ ಹವೇಲಿ ಇದ್ದುದರಿಂದ ಎಲ್ಲೆಡೆಯೂ ಅದ್ದೂರಿಯಾಗಿತ್ತು, ಕಟ್ಟಡದ ಒಳಗೇ ಕಾರಂಜಿಗಳು. ದೊಡ್ಡ ಜಾಲರಿಗಳ ಕಿಟಕಿಗಳು, ಪರದೆಗಳು, ಸುಮ್ಮನೆ ಒಂದೇ ಪದದಲ್ಲಿ ಅದು ಅರಮನೆ.. ಬಹುತೇಕ ವಿದೇಶೀಯರಿಂದಲೇ ತುಂಬಿತ್ತು,. ಹತ್ತಾರು ವಿದೇಶೀಯರು ಅಲ್ಲಿಯೇ ಒಂದೆಡೆ ಇಡಲಾಗಿದ್ದ, ಬ್ರೆಡ್‍ನ ತುಣುಕುಗಳನ್ನು ತಾವೇ ಅಲ್ಲಿರುವ ಟೋಸ್ಟರುಗಳಲ್ಲಿ ಟೋಸ್ಟ್ ಮಾಡಿಕೊಂಡು ಅಮುಲ್ ಬೆಣ್ಣಿ, ..ಸಾಸ್‍ಗಳು ಮತ್ತಿತರ ಸ್ಯಾಸೆಗಳಿಂದ ತಮ್ಮ ಉಪಾಹಾರ ತಯಾರಿಸಿಕೊಳ್ಳುತ್ತ ಹರಟುತ್ತ ಕುಳಿತಿದ್ದರು, ಸ್ಕ್ಯಾಂಡಿನೇವಿಯನ್ ಸ್ಪ್ಯಾನಿಷ್ ಜನ.ಅವರು.... ಹಿಂದಿನ ದಿನ ನನಗೆ ಪರಿಚಿತರಾಗಿದ್ದರು,

     ಹಿಂದಿನ ದಿನ ರಾತ್ರಿ ಮದುವೆ ಸಮಾರಂಭದ ಅದ್ದೂರಿ ಮೆರವಣಿಗೆಯೊಂದು ನಮ್ಮ ಹವೇಲಿ ಮುಂದಿನ ರಸ್ತೆಯಲ್ಲಿ ಹೊರಟಿತ್ತು. ....ಅದರಲ್ಲಿ ಕುಣಿಯುವ ಯುವಕರು , ಹಿರಿಯರಾದಿಯಾಗಿ, ಲಲನೆಯರ ದಂಡುಗಳೆಲ್ಲ ಗುಂಪು ಗುಂಪುಗಳಲ್ಲಿ ತುಂಬ ಅತ್ಯಾಕರ್ಷಕವಾಗಿ ಸಂಗೀತಕ್ಕೆ ತಕ್ಕಂತೆ ಹೆಜ್ಜೆಹಾಕುತ್ತ, ಕೈಕುಣಿಸುತ್ತ ಮೈಕುಣಿಸುತ್ತ ಕುಣಿಯುತ್ತಿದ್ದುದನ್ನು ನಾವೂ ಅವರೂ ನೋಡಿ ಖುಷಿ ಪಟ್ಟಿದ್ದೆವು. ಅವರು ನಾವು ಆ ಮದುವೆಗೆ ಬಂದ ಅತಿಥಿಯರೆಂದು ತಿಳಿದು, ನನ್ನತ್ತ ಬಂದು, ಅಲ್ಲಿ ಕುಣಿಯಲು ಅವಕಾಶವಿದೆಯೇ, ನನಗೂ ಹೆಜ್ಜೆ ಹೇಳಿಕೊಡಿ ಎಂದರು ಆ ದಂಪತಿ. . ನಕ್ಕು, ನಾವೂ ಕೂಡ ಪ್ರವಾಸಿಗರು ಎಂದು ಹೇಳಿ, ನಮಗೆ ಕುಣಿಯಲು ಬರುವುದಿಲ್ಲ ಎಂದೆ. ಅವರಿಗೆ ಆ ಮೆರವಣಿಗೆಯಲ್ಲಿ ಹೋಗಿ ಅಲ್ಲಿ ತಾವು ಕುಣಿಯಲು ಯಾವ ಅಡ್ಡಿಯೂ ಇಲ್ಲ ಎಂದೆ. ನಗುತ್ತ . 'ಇಫ್ ಯು ಆರ್ ಇಂಟರೆಸ್ಟೆಡ್ ಗೋ ಆಂಡ್ ಜಾಯಿನ್ ಸರ್, ಎಂದೆ. ನಮ್ಮ ಸಂಸ್ಕøತಿಯಿಂದ ಬಲು ಪ್ರಭಾವಿತರಾಗಿದ್ದರು . ಅದರತ್ತ ಇನ್ನಷ್ಟು ಕುತೂಹಲದಿಂದ ಹತ್ತಿರಹೋಗಿ ಮೆರವಣಿಗೆಯಲ್ಲಿ ಒಂದಾಗಿ ಮಿಳಿತವಾಗಿಬಿಟ್ಟರು. ಅವರು ತಮ್ಮ ನಗುವ ಬಾಯಿ ಮುಚ್ಚಿದ್ದನ್ನು ನಾನು ನೋಡಲೇ ಇಲ್ಲ. ನಗುಮೊಗದ ಬೆರಗುಗಣ್ಣಿನ ಯಕ್ಷರು...

     ಹವೇಲಿಯಲ್ಲಿ ಬೆಳಗಿನ ತಿಂಡಿ ಆಲು ಪರಾಟಾ ಮೊಸರು ಸವಿದೆವು. ಜೋಧಪುರದ ಆ ರಸ್ತೆಯ ಇಕ್ಕೆಲಗಳಲ್ಲಿನ ಆಕಾಶದ ತೆಳುನೀಲಿಯಿಂದ ಗಾಢ ನೀಲವರ್ಣಗಳ ಕಟ್ಟಡಗಳ ಮಧ್ಯದಲ್ಲಿ ಈಗ ನಾವು ಉಮೇದ ಭವನ ದೆಡೆಗೆ ತೆರಳುತ್ತಿದ್ದೆವು. ಅಲ್ಲಲ್ಲಿ ನಮ್ಮ ಪಕ್ಕಗಳಲ್ಲಿ ವ್ಯಾಪಾರಿ ಲಗೇಜುಗಳನ್ನು ತುಂಬಿಕೊಂಡು ಒಂಟೆಗಳ ಚಕ್ಕಡಿಗಳು ಕಾಣುತ್ತಿದ್ದವು. ಬಣ್ಣದ ಪೇಟಾಗಳಲ್ಲಿ, ಧಿರಿಸಿನಲ್ಲಿ ಅದರ ಸವಾರ ಚಿತ್ರದ ಗೊಂಬೆಯಂತೆ ಕಾಣುತ್ತಿದ್ದರು, ಅವರಿಗೆ ಹೊಟ್ಟೆಪಾಡಿನ ಉದ್ಯೋಗ, ನಮಗೆ ಕವಿಮನದ ಸುಯೋಗ. ಜೋಧಪುರದಲ್ಲಿ ನಾವು ಎಲ್ಲೆಲ್ಲಿ ಹೋಗುತ್ತಿದ್ದೇವೋ ಅಲ್ಲಿ ಪ್ರವಾಸಿ ಸ್ಪ್ಯಾನಿಷ್ ದಂಡೂ ಇರುತ್ತಿತ್ತು. ಮತ್ತೊಂದು ವಿಶೇಷವೆಂದರೆ ಭಾರತೀಯ ಪ್ರವಾಸವು ಅವರಿಗೊಂದು ಪುರಾತನವಾದ ಹಾಗೂ ಅಷ್ಟೆ ಆಪ್ಯಾಯಮಾನವಾದ ಈ ನೆಲದ ಸಂಸ್ಕøತಿವೊಂದರ ಇತಿಹಾಸದ ಪರಿಚಯವನ್ನು ಅವರ ಭಾಷೆಯಲ್ಲಿಯೇ ನುರಿತ ಗೈಡ್‍ಗಳಿಂದ ವಿವರಿಸಲ್ಪಡುತ್ತಿದ್ದುದರಿಂದ ಈ ನೆಲದ ಸಂಪೂರ್ಣ ಮಾಹಿತಿ ಅವರಿಗೆ ಲಭಿಸುತ್ತಿತ್ತು. ಗೈಡ್ ವಿವರಿಸುತ್ತಿದ್ದರೆ, ತದೇಕವಾಗಿ ಆಲಿಸುತ್ತಿದ್ದ, ತಂಡ ಅವನ ನಗೆಚಟಾಕಿಯೊಂದಕ್ಕೆ ಒಮ್ಮೊಮ್ಮೆ ಇಡೀ ಗುಂಪು ಇಡಿ ಇಡಿಯಾಗಿ ಖೊಳ್ಳನೆ ನಗುತ್ತಿದ್ದ ಆ ಕ್ಷಣಗಳು ಬಲು ಮಜಾ ಅನಿಸುತ್ತಿದ್ದವು. ತಿನಿಸೊಂದರಲ್ಲಿ ಏಲಕ್ಕಿ ಕಡಿದಂತೆ, ...ನಮಗೂ ಒಂತರಹದ ಖುಷಿ ಎನಿಸುತ್ತಿತ್ತು, ಮನಪ್ರಸನ್ನಿಸುತ್ತಿತ್ತು..... ಗೈಡ್ ಏನು ಹೇಳುತ್ತಿದ್ದನೋ, ಇವರು ಏನು ಕೇಳಿ ನಗುತ್ತಿದ್ದರೋ, ನಮಗೆ ಒಂದೂ ಅರಿವಾಗದಿದ್ದರೂ, ಆ ಮಾಹೋಲು ನಮಗೊಂದು ಮಧುರವಾದ ನಂಟನ್ನು ಆ ಗುಂಪಿನೊಂದಿಗೆ ಜೋಡಿಸಿಬಿಟ್ಟಿತ್ತು. . ಆ ನಗು ಸಿಂಚನ ಮತ್ಯಾವಾಗ ಆಗುತ್ತದೋ ಎಂಬ ವಿಚಿತ್ರ ಕುತೂಹಲ ಮೂಡುತ್ತಲಿತ್ತು,

    ಈ ಉಮೇದ್ ಭವನವನ್ನು ಜೋಧಪುರದ ಹೊರವಲಯದಲ್ಲಿ ಅತ್ಯಾಧುನಿಕವಾಗಿ ಕಟ್ಟಲಾಗಿದೆ. ಇದನ್ನು 1929 ರಲ್ಲಿ ಮಹಾರಾಜಾ ಉಮೇದ್ ಸಿಂಗ್ ಕಟ್ಟಿಸಿದ್ದು, ಅಂದಿನ ಕಾಲದಲ್ಲಿ ಪದೇ ಪದೇ ಬೀಳುತ್ತಿದ್ದ ಬರಗಾಲಗಳಲ್ಲಿ ಜನಸಮುದಾಯಕ್ಕೆ ಉದ್ಯೋಗ ಒದಗಿಸುವ ಸಲುವಾಗಿಯೂ ಕೂಡ ಇದರ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಹೀಗೆ ಸುಮಾರು 5000 ಕಾರ್ಮಿಕರನ್ನು ಬಳಸಿ, ಕಟ್ಟಲ್ಪಟ್ಟ ಸದನ 1943 ರಲ್ಲಿ ಪೂರ್ಣಗೊಂಡಾಗ ಜಗತ್ತಿನ ಅತಿ ದೊಡ್ಡ ಖಾಸಗಿ ವಾಸದ ಮಹಲೆಂಬ ಖ್ಯಾತಿ ಪಡೆದಿತ್ತು. ಇದನ್ನು ಕಟುವ ಸಮಯದಲ್ಲಿ ಇದಕ್ಕೆ ಚಿತ್ತರ್ ಪ್ಯಾಲೇಸ್ ಎನ್ನುತ್ತಿದ್ದರು, ಚಿತ್ತರ ಎಂಬ ಶಿಲಾ ಬೆಟ್ಟದಲ್ಲಿ ಹಾಗೂ ಅಲ್ಲಿ ದೊರಕುವ ಚಿತ್ತರ ಎಂಬ ವಿಶಿಷ್ಟ ಕಲ್ಲಿನಿಂದ ನಿರ್ಮಿಸುತ್ತಿದ್ದುದರಿಂದ ಆ ಹೆಸರಿನಿಂದ ಕರೆಯುತ್ತಿದ್ದರು. ಇದರಲ್ಲಿ 347 ಕೋಣೆಗಳು, ಸಭಾಭವನಗಳು, ಹಜಾರುಗಳಿವೆ. ಇದನ್ನು ಸಿಮೆಂಟ್ ಗಾರೆಯನ್ನು ಬಳಸದೇ ಕಲ್ಲಿನಲ್ಲಿಯೇ ಒಂದಕ್ಕೊಂದು ಜೋಡಣೆಯಾಗುವ ಹಾಗೆ ಕಲ್ಲನ್ನು ಕೊರೆದು ಒಂದಕ್ಕೊಂದು ಕೂಡುವ ಹಾಗೆ ಜೋಡಿಸಿ ನಿರ್ಮಿಸಲಾಗಿದೆ ಎಂದು ಗೈಡ್ ವಿವರಿಸಿದ. ಮಹಾರಾಜಾ ಉಮೇದ್ ಸಿಂಗ್ ಈ ಅರಮನೆಯ ಒಳಾಲಂಕಾರಕ್ಕಾಗಿ ಒಂದು ದೊಡ್ಡ ಹಡಗಿನಲ್ಲಿ ಇಂಗ್ಲಂಡಿನಿಂದ ಒಳ ಅಲಂಕಾರಿಕ ಸಾಮಗ್ರಿಗಳನ್ನು ತರಿಸುತ್ತಿರುವಾಗ ಜರ್ಮನಿ ಸೈನ್ಯ ಆ ಹಡಗಿನ ಮೇಲೆ ಆಕ್ರಮಣ ಮಾಡಿ ಅದನ್ನು ಮುಳುಗಿಸಿಬಿಟ್ಟಿತು. ಹೀಗಾಗಿ ಸ್ಟೀಫನ್ ನಾರ್ಬಲಿಯನ್ ಎಂಬ ಪೋಲೆಂಡಿನ ಇಂಟೀರಿಯರ್ ಡಿಜೈನರ್‍ನನ್ನು ನೇಮಿಸಿ ಒಳ ಅಲಂಕಾರಗಳನ್ನು ಮಾಡಿಸಿದನೆಂಬ ಮಾಹಿತಿ ಸಿಕ್ಕಿತು. ಮುಕುಟಗಳಂತಿರುವ ಗುಮ್ಮಟಗಳು ಇದನ್ನೊಂದು ಅದ್ದೂರಿಯ ಅಲಂಕಾರಿಕ, ವಿಶಿಷ್ಟ ಭವನವನ್ನಾಗಿಸಿವೆ. ಭಾರತದಲ್ಲಿ ಕಟ್ಟಿದ ಕೊನೆಯ ಅರಮನೆಯೆಂಬ ಖ್ಯಾತಿಯೂ ಇದೇ ಅರಮನೆಗಿದೆ.

    1972 ರಿಂದ ಅದರ ಒಂದು ಭಾಗದಲ್ಲಿ ತಾಜ್ ಗ್ರುಪ್ ಹೊಟಲ್‍ನ ಫೈವ್ ಸ್ಟಾರ್ ಹೊಟಲ್ ಇದೆ. ಇನ್ನೊಂದು ಭಾಗದಲ್ಲಿ ಮಹಾರಾಜಾ ಉಮೇದಸಿಂಗ್‍ರ ಮೊಮ್ಮಗ ರಾಜಾ ಗಜ್‍ಸಿಂಗ್‍ರ ರಾಯಲ್ ರಾಜ ಪರವಾರ ವಾಸವಾಗಿದೆ. ಹಾಗೂ ಮಹಲಿನ ತುಸು ಭಾಗದಲ್ಲಿ ಮ್ಯುಜಿಯಂವೊಂದನ್ನು ಮಾಡಿ, ಅದರಲ್ಲಿ ಶಾಹೀ ಒಡೆತನಕ್ಕೆ ಸಂಬಂಧಿಸಿದ , ಇತಿಹಾಸದ ದಾಖಲೆಗಳು, ಚಿತ್ರಗಳು, ಆಯುಧಗಳು, ಧಿರಿಸುಗಳು, ರಾಜರುಗಳ ಅಪರೂಪದ ನಿಲುವಿನ ಚಿತ್ರಗಳಿವೆ. ಅಂದಿನ ಕಾಲದ ರಾಜಕೀಯದ ಅಪರೂಪದ ಚಿತ್ರವೊಂದರಲ್ಲಿ ಇಂದಿರಾಜಿ, ನೆಹರೂ ಹಾಗೂ ಮಹಾರಾಜಾ ಉಮೇದ ಸಿಂಗ್ ಇರುವ ಚಿತ್ರ ಗಮನಿಸಿದೆ. ಇನ್ನೊಂದು ಕಟ್ಟಡದಲ್ಲಿ ರಾಜಪರಿವಾರ ಉಪಯೋಗಿಸುತ್ತಿದ್ದ, ಹತ್ತಾರು ವಿಂಟೇಜ್ ಕಾರುಗಳ ಮ್ಯೂಜಿಯಂ ಇದೆ. ರಾಜರಿಗೆಂದೇ ತಯಾರಿಸಿದ ವಿಶಿಷ್ಟ ಓಪನ್ ಕಾರುಗಳಿವೆ. ಕೀ ಹಾಕಿದರೆ ಈಗಲೂ ಓಡುವ ಸ್ಥಿತಿಯಲ್ಲಿವೆ. ಅಂತಹ ವಿಂಟೇಜ್ ಕಾರುಗಳ ಹೆಸರನ್ನಷ್ಟೇ ಕೇಳಿದ್ದೆವು. ಈಗ ಕಣ್ಣಾರೆ ನೋಡಿದ ಹಾಗಾಯಿತು.

    ಇಲ್ಲಿಂದ ನಾವು ಉದಯಪುರದತ್ತ ತೆರಳಿದೆವು. ಜೋಧಪುರದಿಂದ ಉದಯಪುರಕ್ಕೆ sಸುಮಾರು 300 ಕಿಮೀನಷ್ಟು ದೂರ. ಜೋಧಪುರದಿಂದ ಹೊರಟ ನಮಗೆ ಸರಮನ್ ನಮ್ಮೊಂದಿಗೆ ತುಸು ವಿಚಿತ್ರವಾಗಿ ಮಾತನಾಡುತ್ತಿದ್ದಾನೆಂದು ಅನಿಸಹತ್ತಿತು. ಸರವನ್ ಹೇಳುತ್ತಿದ್ದ, ' ನಾವು ನೀವೆಲ್ಲ ಫಿಸಿಕ್ಷ್ ಓದಿದ್ದೇವೆ. 'ನ್ಯೂಟನ್ ಲಾ' ಗಳನ್ನು ಓದಿದ್ದೇವೆ, ಈಗ ಒಂದು ವಸ್ತುವೊಂದನ್ನು ನೀವು ಎಲ್ಲಿಯೋ ತೆಗೆದು ಇಡುತ್ತೀರಿ ಎಂದಿಟ್ಟುಕೊಳ್ಳಿ. ಅದರ ಮೇಲೆ ಹೊರಗಿನ ಇನ್ನೊಂದು ಒತ್ತಡ ಆಗುವ ತನಕ ಅಲ್ಲಿಯೇ ಇರಬೇಕು ತಾನೇ? ಅಥವಾ ಅದು ಚಲಿಸುತ್ತಿದ್ದರೆ, ಅದಕ್ಕೆ ಯಾವುದೇ ಫ್ರಿಕ್ಷನ್( ವಿರುದ್ಧ ಒತ್ತಡ) ಅದನ್ನು ತಡೆಯದೇ ಹೋದರೆ ಅದು ಚಲಿಸುತ್ತಿರಲೇ ಬೇಕು,. ಇದು ನ್ಯೂಟನ್ನನ ನಿಯಮಗಳ ಸಾರ. ಮತ್ತೆ ಗುರುತ್ವ ಶಕ್ತಿಯ ಕುರಿತು ಅವನು ಹೇಳಿದ್ದಾನೆ. ನಾನೊಂದು ವಿಷಯ ಹೇಳುತ್ತೇವೆ. ನೀವು ಒಂದು ವಾಹನವನ್ನು ತೆಗೆದುಕೊಂಡು ಹೋಗುತ್ತಿರುವಿರಿ,. ನಿಮ್ಮ ಪ್ರಯಾಣ ಮುಗಿದು ನೀವು ಅದನ್ನು ನಿಮ್ಮ ಗ್ಯಾರೇಜ್‍ನಲ್ಲಿ ನಿಲ್ಲಿಸಿ ಲಾಕ್ ಮಾಡಿ, ಗ್ಯಾರೇಜ್‍ಗೆ ಚಿಲಕ ಹಾಕಿ ಕೀಲಿ ಹಾಕುತ್ತೀರಿ ಅಂತಿಟ್ಟುಕೊಳ್ಳಿ. ಮರುದಿನ ನೀವು ಆಫೀಸ್‍ಗೆ ಹೋಗಬೇಕಾದಾಗ ಮತ್ತೆ ಗ್ಯಾರೇಜ್‍ಗೆ ಬರುತ್ತೀರಿ, ಕೀಲಿ ತೆಗೆದು ನಿಮ್ಮ ಕಾರು ಹೊರತೆಗೆದು ಅದನ್ನು ತಮ್ಮ ಆಫೀಸಿಗೆ ಒಯ್ಯುತ್ತೀರಿ. ಅಂದರೆ ರಾತ್ರಿ ನಿಮ್ಮ ಕಾರು ನಿಮ್ಮ ಗ್ಯಾರೇಜ್‍ನಲ್ಲಿಯೇ ಇದ್ದಂತಾಯಿತಲ್ಲವೇ? '' ಹೌದು ಎಂದೆವು. ಮತ್ತೆ ಮುಂದುವರೆಸಿದ, 'ಈಗ ಯಾವುದೋ ಒಂದು ಗಾಡಿ ಆಕ್ಷಿಡೆಂಟ್ ಆಗುತ್ತದೆ ಅಂತಿಟ್ಟುಕೊಳ್ಳಿ, ಅದನ್ನು ಪೋಲೀಸರು ಪಂಚನಾಮೆ ಮಾಡಿ, ಸ್ಟೇಶನ್‍ಗೆ ಒಯ್ದು ನಿಲ್ಲಿಸಿಕೊಳ್ಳುತ್ತಾರೆ, ಹೌದೋ ಅಲ್ಲವೋ,' ಎಂದು ಕೇಳಿದ, ಹೌದು ಎಂದೆವು. ಆದರೆ ಹೀಗೆ ಒಯ್ದ ಗಾಡಿ ಅಲ್ಲಿಂದ ತನ್ನಿಂದ ತಾನೇ ಯಾರೂ ಮುಟ್ಟದೇ ಮಾಯವಾಗಿ ಅದೇ ಆಕ್ಷಿಡೆಂಟ್ ಸ್ಥಳಕ್ಕೆ ಬರುತ್ತದೆಂದು ನಾನು ಹೇಳುತ್ತೇನೆ. ನೀವು ನಂಬುವಿರಾ? ಎಂದ. 'ಇಲ್ಲ, ಹೇಗೆ ಸಾಧ್ಯ',ಎಂದೆ.

    ಸರ್ ನೀವು ನಂಬಲೇಬೇಕು ಎಂದು , ನೀವು ಕಲಿತ ಎಲ್ಲ ತರ್ಕಗಳನ್ನು, ನಿಯಮಗಳನ್ನು ಸ್ವಲ್ಪ ಬದಿಗೆ ಇಡಿರಿ., ನಾನೊಂದು ಘಟನೆ ಹೇಳುತ್ತೇನೆ. ಎಂದು ಮುಂದುವರೆಸಿದ,' ಅದು ತೀರ ಇತ್ತೀಚೆಗೆ ಅಂದರೆ, 2 ನೆಯ ಡಿಶೆಂಬರ್ 1988, ಒಂದು ದಿನ ಓಂ ಸಿಂಗ್ ರಾಠೋಡ್ ಎಂಬ ರಜಪೂತ ಯುವಕ ತನ್ನ ಮೋಟರ್ ಸೈಕಲ್‍ನಲ್ಲಿ ಸಮೀಪದ ಬಾಂಗಡಿ ಪಟ್ಟಣದಿಂದ ಪಾಲಿ ಜಿಲ್ಲೆಯ ಚೋತಿಲಾ ಎಂಬ ಹಳ್ಳಿಗೆ ತನ್ನ 350 ಸಿಸಿ ಎನ್‍ಫೀಲ್ಡ್ ಮೋಟರ್ ಸೈಕಲ್‍ನಲ್ಲಿ ತೆರಳುತ್ತಿದ್ದ. ದಾರಿ ಮಧ್ಯದಲ್ಲಿ ಅಡ್ಡಬಂದ ಹಸುವೊಂದನ್ನು ಉಳಿಸಲು ಹೋಗಿ ರಸ್ತೆಯ ಬದಿಯ ಮರವೊಂದಕ್ಕೆ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟ. ಎನ್‍ಫೀಲ್ಡ್ ಸಮೀಪದಲ್ಲೇ ಹೋಗಿ ಬಿತ್ತು. ಸರಿ. ಪೋಲೀಸರು ಬಂದರು, ಪಂಚನಾಮೆ , ಮತ್ತಿತರ ಎಫ್‍ಆಯ್‍ಆರ್ ಎಲ್ಲಾ ಆಗಿ, ಆ ಬುಲೆಟ್‍ನ್ನು ಸ್ಟೇಶನ್‍ಗೆ ತಂದು ನಿಲ್ಲಿಸಿಕೊಂಡರು. ಮರುದಿನ ಬೆಳಿಗ್ಗೆ, ಆ ಬುಲೆಟ್ ಅಲ್ಲಿ ಕಾಣಲಿಲ್ಲ. ಸರಿ, ಅಲ್ಲಿ ಇಲ್ಲಿ ಹುಡುಕಲು ಶುರು. ಹೀಗೆ ಹುಡುಕುತ್ತಿರುವಾಗ ಪೋಲೀಸರಿಗೆ ಅದು ಆ ಆಕ್ಷಿಡೆಂಟ್ ಆಗಿದ್ದ ಜಾಗದಲ್ಲಿಯೇ ಇದೆ ಎಂದು ಗೊತ್ತಾಯಿತು. ಯಾರೋ ಕಿಡಿಗೇಡಿಗಳು ಅದನ್ನು ಅಲ್ಲಿಗೆ ತಂದು ನಿಲ್ಲಿಸಿರಬಹುದೆಂದು ಅದನ್ನು ಮತ್ತೆ ಸ್ಟೇಶನ್‍ಗೆ ಒಯ್ದು , ಅದರಲ್ಲಿನ ಪೆಟ್ರೋಲ್ ಖಾಲಿ ಮಾಡಿ, ಅದನ್ನು ಲಾಕ್ ಮಾಡಿ ಅದಕ್ಕೆ ಚೈನ್ ಹಾಕಿ ಕೀಲಿ ಜಡಿದು. ಸ್ಟೇಶನ್ ಒಳಗೆ ಎತ್ತಿಟ್ಟುಕೊಂಡರು.

    ಮರುದಿನ ಬೆಳಿಗ್ಗೆ ಬಾಗಿಲು ತೆಗೆದು ಒಳನೋಡಿದಾಗ ಆ ಬುಲೆಟ್ ಕಾಣೆಯಾಗಿತ್ತು. ಮತ್ತೆ ಹೋಗಿ ನೋಡಲಾಗಿ ಅದು ಮತ್ತೆ ಆಕ್ಷಿಡೆಂಟ್ ಆದ ಜಾಗಕ್ಕೆ ಬಂದು ನಿಂತಿತ್ತು. ಪೋಲೀಸರು ಅಷ್ಟೆ ಅಲ್ಲ ಜನರೂ ತಬ್ಬಿಬ್ಬಾದರು. ಮತ್ತೆ ಅದನ್ನು ಪೋಲೀಸ್ ಸ್ಟೇಶನ್‍ನಲ್ಲಿ ಇಟ್ಟುಕೊಳ್ಳುವ ಇನ್ನಷ್ಟು ಪ್ರಯತ್ನಗಳು ಯಶ ಕಾಣಲಿಲ್ಲ. ಕೊನೆಗೆ ಅದನ್ನು ಆಕ್ಷಿಡೆಂಟ್ ಆಗಿದ್ದ, ಅದೇ ಸ್ಥಳದಲ್ಲೇ ಇರಲು ಬಿಟ್ಟುಬಿಟ್ಟರು. ಸುದ್ದಿ ಕಾಳ್ಗಿಚ್ಚಿನಂತೆ ಹರಡಿ, ಅದನ್ನು ತಂಡೋಪತಂಡವಾಗಿ ಬಂದು ಆರಾಧಿಸುವ ಪರಿಪಾಠ ಬೆಳೆದು ಈಗ ಅದುವೊಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಈ ಹೈವೇಯಲ್ಲಿ ಎಲ್ಲ ವೆಹಿಕಲ್‍ಗಳು ಇಲ್ಲಿ ನಿಂತೇ ಮುಂದೆ ಚಲಿಸುತ್ತವೆ, ಎಂದು ಹೇಳುತ್ತ, ಬಂತು ನೋಡಿ ಎಂದು ಕಾರನ್ನು ಪಕ್ಕಕ್ಕೆ ನಿಲ್ಲಿಸಿದ.

    ಜೋಧಪುರದಿಂದ ಸುಮಾರು ಐವತ್ತು ಕಿಲೋಮೀಟರು ದೂರದಲ್ಲಿ, ಜೋಧಪುರ ಉದಯಪುರ ಹೈವೇಯಲ್ಲಿ ಈ ಯಾತ್ರಾ ಸ್ಥಳವಿದೆ. ರಜಪೂತರಲ್ಲಿ ಮದುವೆ ವಯಸಿಗೆ ಬಂದ ಯುವಕರನ್ನು , 'ಬನ್ನಾ' ಅಥವಾ 'ಬನಾ' ಎಂದು ಕರೆಯುವರು. ಓಂ ಸಿಂಗ್ ರಾಠೋಡ್ ಹೆಸರಿನ ಓಂ ಹಾಗೂ ಬನ್ನಾ ಸೇರಿ ಕ್ಷೇತ್ರಕ್ಕೆ 'ಓಂ ಬನ್ನಾ' ಎನ್ನುವ ಹೆಸರು ಬಂದಿದೆ. ಆ ಬುಲೆಟ್ ಅಲ್ಲಿಯೇ ಇದ್ದು, ಇದಕ್ಕೆ ' ಬುಲೆಟ್ ಬಾಬಾ 'ಎಂತಲೂ ಕರೆಯುವರು. ಅಲ್ಲಿ ಓಂ ಬನ್ನಾ ಆಕ್ಷಿಡೆಂಟ್ ಆದ ಮರಕ್ಕೆ ಭಕ್ತರು ತಮ್ಮ ಹರಕೆಗಳನ್ನು ಕಟ್ಟಿದ್ದು, , ಓಂ ಬನ್ನಾ ಮಂದಿರವೆಲ್ಲ ಎಲ್ಲಿ ಬೇಕೆಂದರಲ್ಲಿ ಕೆಂಪು ದಾರಗಳು, ಹಾಗೂ ಹರಕೆಗಾಗಿ ಕಟ್ಟಿದ ಬಳೆಗಳಿಂದ ತುಂಬಿಹೋಗಿದೆ. ಅಜ್ಜಿಯೊಬ್ಬರ ಕನಸಿನಲ್ಲಿ ಬಂದು ಅಲ್ಲಿ ತನ್ನ ಮೂರ್ತಿ ಸ್ಥಾಪಿಸಬೇಕೆಂದು ಓಂ ಬನ್ನಾ ಬಂದು ಹೇಳಿದ್ದರಿಂದ, ಭಕ್ತರು ಬನ್ನಾನ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಿ ಅದಕ್ಕೊಂದು ಕಟ್ಟೆಕಟ್ಟಿ ಅಲ್ಲಿ ಅವನ ಫೋಟೋ ಇಟ್ಟು ಅದಕ್ಕೆ ನಿತ್ಯವೂ ಪೂಜೆ ಸಲ್ಲಿಸಲಾಗುತ್ತದೆ. ಈ ಹೈವೇಯಲ್ಲಿ ಚಲಿಸುವ ಬಹುತೇಕ ಎಲ್ಲ ವಾಹನಗಳೂ ನಿಂತು ಬಾಬಾನ ದರ್ಶನ ತೆಗೆದುಕೊಂಡೇ ಮುಂದೆ ಚಲಿಸುತ್ತವೆ. ಅಲ್ಲಿ ಬಾಬಾನ ಭಕ್ತಿಗಾಯನವನ್ನೂ ಹಾಡಲಾಗುತ್ತದೆ. ಮಂಗಳಾರತಿ ಸಮಯದಲ್ಲಿ ಇವುಗಳನ್ನು ಭಜಿಸಲಾಗುತ್ತದೆ. ಅಲ್ಲಿ ಬಾಬಾನಿಗೆ ಪ್ರೀತಿಯ ನೈವೇದ್ಯೆ ಏನು ಗೊತ್ತೇ? ಹಣ್ಣು ಕಾಯಿ ಕರ್ಪೂರಗಳೊಂದಿಗೆ ಸುರಾಪಾನದ ಅಭಿಷೇಕ ನಿತ್ಯವೂ....

    . ತಮ್ಮ ಹರಕೆ ಪೂರೈಸಿಕೊಂಡ ಭಕ್ತರು ಅನೇಕರು ಸಾಲು ಸಾಲು ಬಂದು ಪ್ರತ್ಯೇಕ ಸಾಲಿನಲ್ಲಿ ನಿಂತು ಹರಕೆ ತೀರಿಸುತ್ತಿದ್ದರು. ಸುಮಾರು ಹತ್ತಿಪ್ಪತ್ತು ಜನ ಹರಕೆ ತೀರಿಸುವ ಸಾಲಿನಲ್ಲಿ ಕಾಯುತ್ತಿದ್ದರು. ಕೆಲವರ ಕೈಯಲ್ಲಂತೂ ಸುರೆಯ ಬಾಟಲಿಗಳು ಕಂಡವು. ನಾವೂ ಓಂ ಬನ್ನಾನ ಮೂರ್ತಿಗೆ ಹಣ್ಣುಕಾಯಿ ನೈವೇದ್ಯೆ ನೀಡಿ, ದರ್ಶನ ಮಾಡಿಕೊಂಡು ಹರಕೆ ಹೊತ್ತು ಬಂದಿದ್ದೇವೆ. ನೋಡೋಣ. ದೇವರು ನಾನಂದುಕೊಂಡದ್ದನ್ನು ನೆರವೇರಿಸಲಿ ಎಂದು ನನ್ನದೂ ಬೇಡಿಕೆಯನ್ನು ಪ್ರೀತಿಯಿಂದ ಇಟ್ಟು ಬಂದಿದ್ದೇನೆ. ಆ ಬುಲೆಟ್‍ಬಾಬಾ ಅಲ್ಲಿಯೇ ಕಟ್ಟೆಗೆ ಹೊಂದಿಕೊಂಡೇ ಇದ್ದು, ಭಕ್ತರು ಬನ್ನಾನ ಕಟ್ಟೆಯ ಜೊತೆಗೆ ಇದರ ಸುತ್ತಲೂ ಭಕ್ತಿಯಿಂದ ನಮಿಸುತ್ತಿರುವುದನ್ನು ಕಂಡೆ.

   ಸರವನ್ ಹೇಳುತ್ತಿದ್ದ, 'ಹರಕೆ ಎಂದರೆ, ನೀವು ನಿಮ್ಮ ಮಕ್ಕಳ ಮದುವೆಯ ಬಗ್ಗೆ ಹರಕೆ ಹೊರುತ್ತಿದ್ದೀರೆಂದು ಇಟ್ಟುಕೊಳ್ಳೋಣ. ಹುಟ್ಟಿದ ಮೇಲೆ ಮದುವೆ ಮುಂಜಿವೆ ಇತ್ಯಾದಿ ಇದ್ದದ್ದೇ, ಆದರೆ ಇಂತಿಷ್ಟು ಸಮಯದೊಳಗೆ ಆದರೆ ಅದಕ್ಕೆ ಬೆಲೆ ಹೌದಲ್ಲವೇ? ತಾವೂ ಕೂಡ ಹಾಗೆಯೇ ಹರಕೆ ಕೇಳಿಕೊಳ್ಳಬಹುದು, ಅದು ನಿಗದಿತ ಅಥವಾ ಒಪ್ಪಬಹುದಾದ ಸಮಯಾವಕಾಶದಲ್ಲಿ ಈಡೇರಿದರೆ ಮಾತ್ರ ಅದನ್ನು ಮಾನ್ಯ ಮಾಡಿ. ನನ್ನ ಲೆಖ್ಖದಲ್ಲಿ ತಮ್ಮ ಹರಕೆ ಈಡೇರುತ್ತದೆ. ಇಲ್ಲಿಗೆ ಬಂದಾಗಲೊಮ್ಮೆ ಅನೇಕ ಹರಕೆ ತೀರಿಸುವವರನ್ನು ಕಂಡೇ ಕಾಣುತ್ತೇನೆ ತಮ್ಮ ಹರಕೆಯೂ ಈಡೇರಲಿ ಸರ್. ಮತ್ತು ಈಡೇರಿದಲ್ಲಿ ಹರಕೆ ತೀರಿಸಲು ಮರೆಯಬೇಡಿ ಎಂದಿದ್ದ, ಕಾರು ಇಳಿಯುವಾಗ ನೋಡೋಣ ಎಂದಿದ್ದೆ.

    . (ಈಗ ಇದನ್ನು ಬರೆಯುವಾಗ ನಿಮಗೆ ಹಂಚಿಕೊಳ್ಳಲೇಬೇಕೆನಿಸುತ್ತಿದೆ. ಕಳೆದ ನಾಲ್ಕು ವರುಷಗಳಿಂದ ಮನೆಯವರ ಒತ್ತಾಯಕ್ಕೆ ಸಾಧ್ಯವಾಗದ್ದು, ಈಗ ತಾನೇ ತಾನಾಗಿ ಒದಗಿ ಬಂದದ್ದು ಖುಷಿ ಮನೆಮಂದಿಗೆಲ್ಲ. 'ನಾನೀಗ ಓಂ ಬನಾಗೆ ಹೋಗಲೇಬೇಕಾದಂತಹ ಬೆಳವಣಿಗೆ ನಡೆಯಿತು. ಆಶ್ಚರ್ಯ. ಕಾಕತಾಳೀಯವೋ, ಹೇಗೋ ಅರಿಯೆ. ವಿಚಿತ್ರವೆನಿಸುತ್ತದೆ. ಹೋಗದಿದ್ದರೆ, ನಾನು ನನ್ನನ್ನೇ ವಂಚಿಸಿಕೊಂಡಂತೆ ಎನಿಸುತ್ತಿದೆ. ನಿಜಕ್ಕೂ ವಿಚಿತ್ರವೆನಿಸುತ್ತಿದೆ! ನಿಮಗೆಲ್ಲಾ ಆಮಂತ್ರಣ ಬರಲಿದೆ!)

    ಈಗಲೂ ಅಲ್ಲಿ ರಾತ್ರಿಯಲ್ಲಿ ಅಲ್ಲಿಗೆ ಬಂದ ಭಕ್ತರನೇಕರಿಗೆ ಬುಲೆಟ್ ಹೋಗುವುದು ಬರುವುದು ಕೇಳುತ್ತದಂತೆ. ಕೆಲವು ಸಂಗತಿಗಳು ತರ್ಕಕ್ಕೆ ನಿಲುಕುವುದಿಲ್ಲ ಎನ್ನುವರು. ಇದು ಸತ್ಯವಿದ್ದರೂ ಇದ್ದೀತು. ಆದರೂ ಒಂದು ರೀತಿಯ ದ್ವಂದ್ವ. ನನಗೆ ಇನ್ನೂ ನಂಬಲಾಗುತ್ತಿಲ್ಲ, . ನಾನು ಕಲಿತ ವಿಜ್ಞಾನ ನನಗೆ ನಂಬಲು ಬಿಡುತ್ತಿಲ್ಲ. ವಿಚಿತ್ರ, ವಿಚಿತ್ರ. ಯಾವುದೇ ಒಂದು ಘಟನೆಗೆ ರೆಕ್ಕೆ ಪುಕ್ಕ ಹಚ್ಚಿ 'ರೂಮರ್'ಗಳು ಹರಡುತ್ತವೆ, ಎಕ್ಸಾಗರೇಶನ್ ಆಗಿದ್ದರೂ ಇಲ್ಲೇನೋ ಇರಲೇಬೇಕು ಅನ್ನಿಸಿಬಿಟ್ಟಿತು ನನ್ನ ಸೈಂಟಿಫಿಕ್ ಮನಸ್ಸಿಗೂ....ಅತೀಂದ್ರಿಯ . ಅತೀತ ಸಂಗತಿಗಳನ್ನು ಅಲ್ಲಿ ಇಲ್ಲಿ ಕೇಳಿದ್ದರೂ, ಸಂಶಯಿಸುತ್ತಲೇ ನೋಡುತ್ತದೆ ಮನಸ್ಸು.

    ನಾನು ಓದಿದ ಒಂದು ಪುಸ್ತಕದ ಕುರಿತು ಹೇಳಲೇಬೇಕು. 'ಲಿವಿಂಗ್ ವಿಥ್ ದಿ ಹಿಮಾಲಯನ್ ಮಾಸ್ಟರ್ಸ' ಹಿಮಾಲಯದ ಸನ್ಯಾಸಿ, ಸ್ವಾಮಿ ರಾಮರು ಬರೆದ ಹಿಮಾಲಯ ಮಹಾತ್ಮರೊಂದಿಗೆ ಒಡನಾಡಿದ, ಸ್ವಾನುಭವದ ಪುಸ್ತಕದಲ್ಲಿ ಅತೀಂದ್ರಿಯ ಶಕ್ತಿಯ ಬಾಬಾಗಳ ಪವಾಡಗಳನ್ನು ನೂರಾರು ಸಂಖ್ಯೆಯಲ್ಲಿ ಅದರಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಈ ಕ್ಷಣಕ್ಕೆ ನೆನಪಿಗೆ ಬರುತ್ತಿರುವುದು ಯಾವುದೆಂದರೆ, ಸ್ವಾಮಿ ರಾಮ ಹಾಗೂ ಇನ್ನಿತರ ಶಿಷ್ಯರನ್ನು ಪುಷ್ಪ ಕಣಿವೆಯೊಂದರಲ್ಲಿ ಕಂಬಲ್ ಬಾಬಾ ಎಂಬ ಸಾಧು ಕರೆದುಕೊಂಡು ಹೋಗುತ್ತಿದ್ದಾಗ, ಜಪಾನೀ ಶಿಷ್ಯನೊಬ್ಬನು ಮನದಲ್ಲಿ ಅಲೋಚಿಸುತ್ತ, 'ಇವನೆಂತಹ ಹುಚ್ಚನಂತಿರುವ ಈ ಸಾಧುವನ್ನು ನಾವು ಒಳೆ ಬೆನ್ನು ಹತ್ತಿರುವೆವಲ್ಲ, ಇವನೆಂಥ ಸಾಧು.' ಎಂಬಿತ್ಯಾದಿ ಸಂಶಯ ಪಟ್ಟು ಯೋಚಿಸುತ್ತಿದ್ದುದು, ಬಾಬಾಗೆ ಗೊತ್ತಾಗಿ ನೀನು ಹೀಗೆ ಯೋಚಿಸುತ್ತಿರುವೆ, ಎಂದು ಹೇಳಿ, ನಿನಗೆ ಈ ಕಂಬಳಿ ನಡುಗುವಂತಹ ಚಳಿ ಬರಲಿ ಎಂದು ತನ್ನ ಕಂಬಳಿಯನ್ನು ಮೇಲೆ ಎಸೆಯುತ್ತಲೇ ಕಂಬಳಿ ಮೇಲೆಯೇ ನಿಂತು ನಡುಗತೊಡಗುತ್ತದೆ, ಅದು ನಡುಗಿದಂತೆ ಜಪಾನೀ ಶಿಷ್ಯನಿಗೆ ವಿಪರೀತ ನಡುಕ ಶುರುವಾಗಿ ಒದ್ದಾಡತೊಡಗುತ್ತಾನೆ ಮುಟ್ಟಿ ನೋಡಿದರೆ ಅವನ ಮೈ ಬೆಂಕಿಯಂತೆ ಸುಡಲಾರಂಭಿಸಿತಂತೆ, ಮತ್ತೆ ಗುರುಗಳನ್ನು ಪರಿಪರಿಯಾಗಿ ಅವನ ಪರವಾಗಿ ಪ್ರಾರ್ಥಿಸಿಕೊಂಡ ನಂತರ ಅವರು ಕಂಬಳಿಯನ್ನು ಹಿಂತೆಗೆದುಕೊಂಡರಂತೆ! ಈ ಕಂಬಲ್ ಬಾಬಾನ ಆಶ್ರಮ ಹೃಷಿಕೇಶದಲ್ಲಿದೆ. ಹರಿದ್ವಾರ ಹೃಷಿಕೇಶ ಕಡೆಗೆ ನಾನು ಮತ್ತೊಮ್ಮೆ ಭೇಟಿ ನೀಡಿದ್ದಾಗ, ಲಕ್ಷ್ಮಣಝೂಲಾ ದಾಟಿ ಹೋಗಿ ಆ ಆಶ್ರಮಕ್ಕೆ ಭೇಟಿನೀಡಿ ಪುಣೀತನಾಗಿದ್ದೆ.

    ಇನ್ನೊಂದು ಘಟನೆಯಲ್ಲಿ ಬಹುದೊಡ್ಡ ಹಾವೊಂದು ಸ್ವಾಮಿ ರಾಮರನ್ನು ಕಡಿಯಲು ಬಂದ ಸಂದರ್ಭದಲ್ಲಿ ಅವರ ಗುರುಗಳು ತಕ್ಷಣ ಪ್ರತ್ಯಕ್ಷರಾಗಿ ಇವರನ್ನು ಎತ್ತಿಕೊಂಡು ಕಾಪಾಡಿದ್ದು, ಆಶ್ರಮಕೆ ಹೋದ ನಂತರ ಗುರುಗಳು ಅಲ್ಲಿ ನಿರಂತರ ಉಪನ್ಯಾಸಗಳನ್ನು ನೀಡುತ್ತಿದ್ದುದು ಇವರ ಗಮನಕ್ಕೆ ಬಂದು ಆಶ್ಷರ್ಯಚಕಿತರಾಗಿದ್ದರು. ಹಾಗೂ ಗುರುಗಳು ಏಕಕಾಲಕ್ಕೆ ಎರಡೂ ಕಡೆಗಿದ್ದರು ಎಂಬ ಸಂಗತಿಯನ್ನು ನಮ್ಮೊಡನೆ ಹಂಚಿಕೊಳ್ಳುತ್ತಾರೆ.

   ಗಂಗೆಯಲ್ಲಿ ತೇಲಿಹೋಗುತ್ತಿರುವ ಗೋಣಿಚೀಲದಂತಹುದನ್ನು ನೋಡಿ, ಅದರಲ್ಲಿ ಇಂತಹ ರಾಜ ವಂಶದ ಮನುಷ್ಯನೊಂಬ್ಬನಿದ್ದು, ಹೋಗಿ ಆ ಚೀಲವನ್ನು ಹಿಡಿದು ತರಲು ಗುರುಗಳು ಹೇಳುವುದು, ಅದನ್ನು ತಂದಾಗ ಅದು ನಿಜವಾಗಿದ್ದು, ಬಲು ವಿಚಿತ್ರ., ವಿಚಿತ್ರ..... ಸ್ವಾಮಿ ರಾಮರು ಹಿಮಾಲಯದಲ್ಲೇ ಹುಟ್ಟಿ ಸಾಧುಗಳ ಹತ್ತಿರವೇ ಬೆಳೆದು ಬನಾರಸ್ ವಿಶ್ವವಿದ್ಯಾಲಯದಿಂದ ಪಿ ಹೆಚ್ ಡಿ ಪಡೆದವರು. ಈ ಸಂಗತಿಗಳನ್ನು ಸ್ವಾಮಿ ರಾಮರವರು ಹೇಳುತ್ತಿದ್ದುದಕ್ಕೆ ನಂಬಬೇಕಾಗಿದೆ ಎಂದು ಶಿವರಾಮ್ ಕಾರಂತರು ಇಂತಹ ಘಟನೆಗಳ ಕುರಿತು ಅದೇ ಪುಸ್ತಕದ ಬೆನ್ನುಡಿ (ಬ್ಲರ್ಬ)ಯಲ್ಲಿ ಬರೆದಂತೆ ನೆನಪು.

   ಓಂ ಬನ್ನಾ ದಲ್ಲಿ ನನಗೂ ತಕ್ಷಣ ಸ್ವಾಮಿ ರಾಮ ಅವರ ನೆನಪು ಬಂದು, ಹೀಗೆ ಅತೀಂದ್ರಿಯ ಶಕ್ತಿ ಎಂಬುದು ಈ ಸ್ಥಳದಲ್ಲಿ ಇದೆ , ಇದು ತರ್ಕಕ್ಕೆ ನಿಲುಕದ್ದು ಎಂದು ಆ ಕ್ಷಣದಲ್ಲಿ ಅನ್ನಿಸಿದ್ದು ಸುಳ್ಳಲ್ಲ. ಒಮ್ಮೊಮ್ಮೆ ಎಲ್ಲವನ್ನೂ ಸಾರಾ ಸಗಟಾಗಿ ತಿರಸ್ಕರಿಸಲು ಸಾಧ್ಯವಾಗದು. ನಮ್ಮ ಅರಿವಿಗೆ ನಿಲುಕದಿದ್ದರೂ ಎಂದೆನ್ನಿಸಿತ್ತು.

   ಸರಿ, ...ಇಲ್ಲಿಂದ ಮುಂದುವರೆಯಿತು ಸವಾರಿ. ಈಗ ನಾವು ಹೋಗುತ್ತಿದ್ದುದೆಲ್ಲ ಪಾಲಿ ಜಿಲ್ಲೆ.. ಇಲ್ಲಿ ಒಂದು ದೊಡ್ಡ ಹಳ್ಳದಂತಹ ತೊರೆ ಹರಿಯುತ್ತದೆ. ಅದರ ಇಕ್ಕೆಲಗಳಲ್ಲಿ ಎರಡೂ ಬದಿಗಳಲ್ಲಿ ಬಟ್ಟೆಗೆ ಬಣ್ಣ ಒದಗಿಸುವ, ಮುದ್ರಿತ ಅಚ್ಚಿನ ಬಣ್ಣವನ್ನು ಲೇಪಿಸುವ ನೂರಾರು ದೊಡ್ಡ ದೊಡ್ಡ ಫ್ಯಾಕ್ಟರಿಗಳಿವೆ. ಕಿಮೀಗಳ ಗುಂಟ ಎಡಕ್ಕೂ ಬಲಕ್ಕೂ ಅವೇ ಫ್ಯಾಕ್ಟರಿಗಳು. ಕೇವಲ ತುಸುವೇ ನೀರು ಲಭ್ಯವಿದ್ದಲ್ಲಿ ಈ ರೀತಿ ನೂರಾರು ಬಟ್ಟೆಗಳಿಗೆ ಬಣ್ಣ ಹಾಕುವ ಕಾರ್ಖಾನೆಗಳು ಇದ್ದದ್ದು ಆಶ್ಚರ್ಯ ಉಂಟುಮಾಡಿತು. ನಮ್ಮಲ್ಲಿ ಸಣ್ಣವು ದೊಡ್ಡವು ಎಂದು ಕನಿಷ್ಠ ನೂರು ಡ್ಯಾಮುಗಳಿವೆ, ನೂರು ನದಿಗಳಿವೆ. ಯಾವ ನದಿಯ ಗುಂಟವೂ ಇಷ್ಟೊಂದು ಪ್ರಮಾಣದಲ್ಲಿ ಕಾರ್ಖಾನೆಗಳನ್ನು ನಾನು ನಮ್ಮಲ್ಲಿ ನೋಡಿಲ್ಲ. ಇರುವುದೂ ಬೇಡ ಬಿಡಿ. ಅದರಿಂದ ಪರಿಸರ ಸಮಸ್ಯೆ ಕೂಡ ವಿಪರೀತವಾಗಿ ಬೆಳೆಯುತ್ತವೆ. ಒಂದಕ್ಕೂ ಸರಿಯಾಗಿ ಪರಿಹಾರ ಕಂಡುಕೊಳ್ಳುುವುದಿಲ್ಲ ನಾವು. . ಅದರಿಂದ ಅನಾಹುತಗಳೇ ಹೆಚ್ಚು.

    ಪಾಲಿ ಜಿಲ್ಲೆ ಎಂದ ತಕ್ಷಣ ಮತ್ತೆ ಮನಸ್ಸು ಜೈಸಲ್ಮೇರ್ ಕಡೆಗೆ ಓಡಿತು. ಅಲ್ಲಿ ಗೈಡ್ ಹೇಳುತ್ತಿದ್ದ ಮಾತು. ಇಲ್ಲಿಯ ಕಾಲಬೇಲಿಯನ್ ಬುಡಕಟ್ಟಿನ ನೃತ್ಯಗಾರರು, ಮೂಲತ: ಪಾಲಿ ಜಿಲ್ಲೆಯವರು . ಇದೆ ಜಿಲ್ಲಿಯ ಮೂಲನಿವಾಸಿಗಳು. ಈ ಪಂಗಡದ ಇವರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದ ಮಾತು ನೆನಪಿಗೆ ಬಂತು. ಇಲ್ಲಿಂದಲೇ ರಾಜ್ಯದ ನಾನಾ ಕಡೆಗೆ ವಲಸೆ ಹೋಗಿರುವರು, ಅಲೆಮಾರಿ ಪಂಗಡಗಳ ಬದುಕುಗಳು. ಕುಣಿಯುವ ಹೆಜ್ಜೆ ಗೆಜ್ಜೆಗಳೊಂದಿಗೆ..

    ಅಲ್ಲಲ್ಲಿ ಬರುವ ಗ್ರಾಮಗಳಲ್ಲಿ ಗ್ರಾಮ ಪಂಚಯಾತ್ ಇಲೆಕ್ಷನ್ ನಡೆದೇ ಇತ್ತು. ಕಾರ್ಯಕರ್ತರು, ಹೆಂಗಳೆಯರು, ಮುದುಕರಾದಿಯಾಗಿ ಶಾಂತರೀತಿಯಲ್ಲಿ ಮತದಾನ ಜರುಗುತ್ತಿತ್ತು. ಅವರ ಪೇಟಾಗಳು ಬಹಳ ಚಂದ ಅಂದರೆ ಚಂದ....ಮತ್ತೆ ಹೆಂಗಳೆಯರ 'ಘೂಂಘಟ್ ಕಾರವಾಂ' ಎಲ್ಲೆಲ್ಲೂ!! ಮತದಾನಕ್ಕಾಗಿ ಜಮಾಯಿಸಿ ನಿಲ್ಲುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದರೂ, ಪ್ರತಿಸಾರಿಯೂ ವಿನೂತನವೆನಿಸುತ್ತಿತ್ತು ರಾನಕಪುರಕ್ಕೆ ಇನ್ನೇನು ಸಮೀಪವೆಂದಾಗ ಮಧ್ಯಾಹ್ನದ 2,30 ಗಂಟೆಯಾಗುತ್ತಲಿತ್ತು. ಅಲ್ಲಿಯೇ ದಾರಿಯಲ್ಲಿ ರೆಸಾರ್ಟ (ಧಾಬಾ) ಒಂದರಲ್ಲಿ ಊಟಕ್ಕೆ ನಿಂತೆವು. ಮಾಲೀಕರೇ ಆರ್ಡರ್ ತೆಗೆದುಕೊಳ್ಳಲು ಬಂದಾಗ ಸುಮ್ಮನೆ ಹೆಸರು ಕೇಳಿದೆ, ಅವರ ಹೆಸರು ಜೋಷಿ. ಹೀಗೆ ಕೇಳುತ್ತಿದ್ದೇನೆಂದು ತಪ್ಪು ಭಾವಿಸಬಾರದು, ಸುಮ್ಮನೆ ಕುತೂಹಲದಿಂದ ಕೇಳುತ್ತಿದ್ದೇನೆ. ನೀವು ಬ್ರಾಹ್ಮಣರು, ಜೋಷಿಗಳು. ಜೋತಿಷ್ಯ, ಪೂಜೆ, ಪುನಸ್ಕಾರಗಳು, ನೌಕರಿಯಲ್ಲಿರುತ್ತೀರಿ. ಈ ಚಾಕರಿ ನಿಮ್ಮ ಉದ್ಯೋಗವಲ್ಲವಲ್ಲ... ತಾವು ಹೋಟಲ್ ನಡೆಸುತ್ತಿದ್ದೀರಲ್ಲ? ಎಂದು ತುಸು ಕುತೂಹಲದಿಂದ ಕೇಳಿದೆ. ಇಲ್ಲಿ ಬ್ರಾಹ್ಮಣರು ಎಲ್ಲಾ ತರಹದ ಉದ್ಯೋಗವನ್ನೂ ಮಾಡುತ್ತೇವೆ. ಕೃಷಿ, ಹೋಟಲ್, ಕಿರಾಣಿ ಮತ್ತಿತರ ಬಹುತೇಕ ಉದ್ಯೋಗಗಳನ್ನೂ ಮಾಡುತ್ತೇವೆ. ಮಂದಿರಗಳ ಪೂಜಾರಿಕೆಯನ್ನೂ ಮಾಡುತ್ತೇವೆ. ಅನೇಕರು ಟ್ರಾವೆಲ್ ಬಿಸಿನೆಸ್ ನಡೆಸುತ್ತಾರೆ, ಇಂತಹುದೆ ಎಂದೇನಿಲ್ಲ .ನಮಗೆ ಹಳೆಯ ಕಾಲದಲ್ಲಿದ್ದ ರಾಜಾಶ್ರಯ ತಪ್ಪಿದ ಮೇಲೆ, ಇದು ಇಲ್ಲಿಯ ಸಂಪ್ರದಾಯವೇ ಆಗಿದೆ. ' ಕೈಸೆ ಭೀ ಜೀನಾ ಹೈ ನ ಸರ್'. ಎಂದು ವಿವರಿಸಿದರು. ಅಲ್ಲಿಯೇ ಪಕ್ಕದಲ್ಲಿ ಅವರದೇ ಹೊಲ. ಹೊಲದಲ್ಲಿ ತರಕಾರೀ ಬೆಳೆಯುತ್ತಾರೆ, ಹಾಗೂ ತೆಂಗು, ಬಾಜರಾ ಇತ್ಯಾದಿ..... ಅಲ್ಲಿಯೇ ಹೊಲದಲ್ಲಿ ಬೆಳೆ ಬೆಳೆದು ಅದನ್ನೇ ತಮ್ಮ ಹೋಟಲ್‍ಗೂ ಬಳಸುತ್ತಾರೆ, ಸರ್, ಇದು ನಮ್ಮದೇ ಹೊಲದ ತರಕಾರಿ ಮತ್ತು ಬಾಜರಾ ಎಂದು ನಮಗೆ ನೀಡಿದ ಭೋಜನ ಸರ್ವ ಮಾಡುತ್ತ ನಕ್ಕ, ಸ್ಫುರದ್ರೂಪಿ ಯುವಕ..

   ಉತ್ತಮ ವ್ಯಕ್ತಿ . ಓದಿಕೊಂಡವರು. ಸ್ವಾತಂತ್ರ್ಯಾನಂತರ ಕಾಲದಲ್ಲಿ ತನ್ನನ್ನು ಮರು ಹೊಂದಿಸಿಕೊಳ್ಳುತ್ತ ಬದುಕುತ್ತಿರುವ ಮಂದಿ ಎಂದೆನಿಸಿತು. ಶುಚಿ ರುಚಿ ಭೋಜನ ಸವಿದು, ಒಳ್ಳೆಯದಾಗಲಿ ಎಂದು ಹಾರೈಸಿ ಹೊರಬಂದೆವು. ಅಲ್ಲಿಯೇ ರೆಸಾರ್ಟ ಗೆ ಹೊಂದಿಕೊಂಡೇ ಅವರ ಮನೆ.. ಅಲ್ಲಿಂದಲೇ ಭೋಜನವು ಸರ್ವ ಆಗುತ್ತಿತ್ತು.' ಸರ್ ಯಾರೇ ಈ ಕಡೆಗೆ ತಮ್ಮ ಬೆಂಗಳೂರಿನ ಗೆಳೆಯರು ಬಂದರೆ ದಯವಿಟ್ಟು ಇಲ್ಲಿ ತಂಗುವ ವ್ಯವಸ್ಥೆ ಇದೆ. ನಿಮ್ಮ ಗೆಳೆಯರು ಅಥವಾ ನೀವು ಮತ್ತೊಮ್ಮೆ ಬಂದರೆ, ಇಲ್ಲಿಯೇ ತಂಗಲು ಕೇಳಿಕೊಳ್ಳುವೆ. ಅವರಿಗೆ ದಯವಿಟ್ಟು ಹೇಳಿ, ನಾನೂ ಬದುಕುತ್ತೇನೆ ಎಂದು ಕಾರಿನ ವರೆಗೂ ಕಳುಹಿಸಲು ಬಂದರು.

   ಇಲ್ಲಿಂದ ರಾನಕ್‍ಪುರ ಕೇವಲ ಹತ್ತು ಕಿಮೀಗಳಷ್ಟು. ಇಲ್ಲಿ ಂದ ಅರಾವಳಿ ಬೆಟ್ಟ ಕಾಡು ಹರಡಿದೆ. ಎತ್ತರ ಬೆಟ್ಟಗಳ ಕಾಡುಗಳು ರಾಜಸ್ಥಾನದಲ್ಲಿ ಕಂಡು ಬಲು ಖುಷಿ. ಇದುವರೆಗೆ ಮರಳು, ಬಂಜರು ಭೂಮಿಯನ್ನೇ ನೋಡಿದ್ದ ನಮಗೆ ಇಲ್ಲಿ ಮಾತ್ರ ಅರಾವಳಿ ಪರ್ವತ ಶ್ರೇಣಿ ಮುಖಾಮುಖಿಯಾಗಿತ್ತು.. ನಮ್ಮ ಕರಾವಳಿ ಘಟ್ಟಗಳ ರಸ್ತೆಗಳಂತೆ ಬೆಟ್ಟ ಸುತ್ತುತ್ತ ಏರುವ ರಸ್ತೆಗಳು. ಕಾಡಿನಲ್ಲಿ ತೀರ ಹತ್ತಿರ ಹೋಗುವವರೆಗೂ ಮಂದಿರ ಕಾಣುವುದೇ ಇಲ್ಲ.

    ಸಂಪೂರ್ಣ ಸಂಗಮರಮರ ಕಲ್ಲುಗಳಲ್ಲಿ ನಿರ್ಮಿಸಿದ ಸುಂದರ ಜೈನ್ ಮಂದಿರವಿದು... ಅರಾವಳಿ ಪರ್ವತವೊಂದರ ಇಳಿಜಾರಿನಲ್ಲಿ ಇದನ್ನು ನಿರ್ಮಿಸಲಾಗಿದೆ. ಚೌಮುಖವಾಗಿ ಚೌಕಾಕಾರದಲ್ಲಿ ನಿರ್ಮಿಸಿದ್ದು, ನಾಲ್ಕೂ ಕಡೆಗೂ ದ್ವಾರಗಳನ್ನು ಹೊಂದಿದೆ. ಮುಖ್ಯದ್ವಾರವು ಪಶ್ಷಿಮಕ್ಕೆ ಮುಖಮಾಡಿದೆ. ಹದಿನೈದನೆಯ ಶತಮಾನದಲ್ಲಿ ನಿರ್ಮಿಸಿದ ಮಂದಿರವಿದು. ಸುಮಾರು 1400 ಕಲಾಶಿಲ್ಪ ಕಂಬಗಳ ಮೇಲೆ ಮೂರು ಅಂತಸ್ತುಗಳಲ್ಲಿ, ಎಂಭತ್ತು ಗುಮ್ಮಟಗಳಿಂದ ಕಂಗೊಳಿಸುತ್ತ ನಿಂತಿದೆ. ಇದು 48000 ಚದರ ಅಡಿಗಳಷ್ಟು ವಿಸ್ತಾರವಿದೆ. ಒಂದೊಂದು ಕಂಬವೂ ಅತ್ಯಂತ ಸುಂದರ ಶಿಲ್ಪಕಲೆಯ ಗೂಡು. ಒಂದು ಕಂಬವು ಇನ್ನೊಂದು ಕಂಬದಂತಿಲ್ಲ, ಒಂದಕ್ಕಿಂತ ಒಂದು ಸುಂದರ. ಇಲ್ಲಿಯ ಶಿಲ್ಪಕಲೆಯು ಜಗತ್ತಿನ ಶ್ರೇಷ್ಠ ಶಿಲ್ಪಕಲೆಯಲ್ಲಿ ತೂಗುತ್ತದೆ. ಸೂರ್ಯನ ಬೆಳಕಿನಲ್ಲಿ ಪ್ರತಿಗಂಟೆಯೂ ಈ ಮಂದಿರದ ಕಂಬಗಳು ಸ್ವರ್ಣರಂಗಿನಿಂದ ತಿಳಿನೀಲಿ ಬಣ್ಣದವರೆಗೂ ವರ್ಣ ಬದಲಾಯಿಸುತ್ತವೆ. ಮುಖ್ಯವಾಗಿ ಜೈನಧರ್ಮದ ಮೊದಲ ತೀರ್ಥಂಕರ ಆದಿನಾಥರ ಪ್ರತಿಮೆಯು ಮುಖ್ಯ ಗರ್ಭಗುಡಿಯಲ್ಲಿದ್ದರೆ, ಉಳಿದಂತೆ, ಚತುರ್ಮುಖ ಮಂದಿರ, ಪಾಶ್ವನಾಥ ಮಂದಿರ ಹಾಗೂ ಅಂಬಾ ಮಾತಾ ಮಂದಿರಗಳಿವೆ. ಎಲ್ಲವೂ ಆದಿನಾಥ ದೇವಸ್ಥಾನದ ಮಂದಿರಕ್ಕೆ ಕರೆದೊಯ್ಯುತ್ತವೆ. ಬಹುದೊಡ್ಡ ಮಂದಿರಗಳ ಸಮುಚ್ಛಯವಿದು. ಅದರ ಕಂಬಗಳ ಮೇಲಿನ ಕೆತ್ತನೆಗಳಂತೂ ಅಭೂತಪೂರ್ವ ಹಾಗೂ ಉತ್ಕøಷ್ಟವಾಗಿವೆ. ಕ್ಯಾಮರಾಗಳನ್ನು ಮಂದಿರದ ಒಳಗೆ ಒಯ್ಯಲು ಅನುಮತಿ ಇಲ್ಲ. ಹೀಗಾಗಿ ಹೊರಗಿನಿಂದಲೇ ಕ್ಲಿಕ್ಕಿಸುವ ಅನಿವಾರ್ಯತೆ.

   ರಾಜಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಭೇಟಿ ನೀಡಲೇ ಬೇಕಾದ ಉತ್ಕಷ್ಟ ಜೈನ ದೇವಾಲಯವಿದು. ದೇವಾಲಯದ ದರ್ಶನ ಮಾಡಿಕೊಂಡು ಮತ್ತೆ ಉದಯಪುರದತ್ತ ತೆರಳಲು ಅರಾವಳಿಯ ತಿರುವುಗಳಲ್ಲಿ ಬೆಟ್ಟ ಏರಿಳಿಯುತ್ತ ಅದರೊಂದಿಗೆ ಒಂದಾಗಿ ಬಿಟ್ಟೆವು. .....

Rating
No votes yet

Comments

Submitted by swara kamath Fri, 07/10/2015 - 20:08

ಆತ್ಮೀಯ ಇಟ್ನಾಳ ಸರ್
ತಮ್ಮ ರಾಜಸ್ಥಾನದ ಪ್ರವಾಸದ ಸರಣಿ ಲೇಖನಗಳನ್ನು ಓದುತ್ತಿದ್ದರೆ ಮುಂದಿನ ಕಂತಿ ಗಾಗಿ ನಾನು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.ಅಷ್ಟೊಂದು ಗಾಢ ವಾಗಿದೆ ಲೇಖನದ ತಿರುಳು,ಬರೆದ ಶೈಲಿ.ನಾವೇ ನಿಮ್ಮ ಜೊತೆಗೆ ಪ್ರವಾಸದಲ್ಲಿದ್ದೇವೊ ಎಂಬಂಥಹ ಮನೋಭಾವ. ಬಿಡಿ ಸರ್ ನೀವು ಬಾಳ ಮಸ್ತ ಇದೀರ ;))
ವಂದನೆಗಳು . ರಮೇಶ ಕಾಮತ್

ರಮೇಶ ಕಾಮತ್ ಸರ್, ನಮಸ್ಕಾರ., ತಮ್ಮಂತಹ ಮಹಾನ್ ಓದುಗರ ಸಹೃದಯತೆಗೆ ಒಂದಂಶವೂ ಸಾಟಿಯಲ್ಲ ಬಿಡಿ ಸರ್ ನಾನು. ....ಸುಮ್ಮನೆ ತಮ್ಮಂತಹ ಕುತೂಹಲಗಳೆಡೆಗೆ ಕಿವಿಯೊಡ್ಡುವ ಶ್ರೋತೃ ನಾನೂ ಕೂಡ... ಹೆಚ್ಚುಗಾರಿಕೆ ಏನೂ ಇಲ್ಲ. ಪ್ರವಾಸದಲ್ಲಿ ಅಲ್ಲಿ ಇಲ್ಲಿ, ಬೆರಗುಗಂಗಳಿಗೆ ಕಂಡದ್ದು, ಮೈಮನಗಳಿಗೆ ತಾಕಿದ್ದು, ಅಲ್ಲಿನ ಮರಳು, ಅರಮನೆಗಳೊಂದಿಗೆ ಸಂಭಾಷಿಸಿದ್ದು, ನಾನವುಗಳಿಗೆ ಕೇಳಿದ್ದು, ಅವು ನನಗೆ ಹೇಳಿದ್ದು, ಬರೆಯುವಾಗ ಹೊಳೆಯುವ ಹಾಡಿನ ಸಾಲುಗಳು, ಓದಿದ ಘಟನೆಗಳು, ಉಸಿರಿಗೆ ತಾಕುವ ಪರಿಮಳಗಳು, ಕಿವಿಗೆ ಬೀಳುವ ಸಂಗೀತಗಳು, ಸುತ್ತ ಬದುಕು, ರೈತ, ಒಂಟೆ, ನೀರಿನ ಕೊಡಗಳ ಹೊತ್ತ ಹೆಂಗಳೆಯರ ದಂಡು, ಇವೇ ನನ್ನ ಪ್ರವಾಸದ ಸಂಗಾತಿಗಳು, ಅವು ನನ್ನಾಳದ ತುಡಿತಗಳೂ ಹೌದು. ಒಳನೋಟಗಳಿಗೆ ತಟ್ಟಿದ್ದಷ್ಟನ್ನು,, ನನ್ನ ಆತ್ಮದನುಭೂತಿಗೆ ನಿಲುಕಿದಷ್ಟನ್ನು ಮಾತ್ರ ಪ್ರಾಮಾಣಿಕವಾಗಿ ದಾಖಲಿಸುವ ಗಳಿಗೆಯಲ್ಲಿ ಹೊಳೆದಂತೆ, ಹಂಚಿಕೊಂಡಿದ್ದೇನೆ,. ಅದರಲ್ಲಿ ಭಾವಗಳನ್ನು ತುಂಬಲು ಸಾಧ್ಯವಾಗದೇ ಸೋತಿದ್ದೇನೆ ಎನಿಸುತ್ತದೆ ಕೆಲವೊಮ್ಮೆ. ಆದರೂ ಅವೆಲ್ಲವನ್ನೂ ಕಡೆಗಣಿಸಿ, ಒಳ್ಳೆಯ ಅಂಶವನ್ನು ಪ್ರೀತಿಯಿಂದ ಓದುತ್ತ, ಹುರಿದುಂಬಿಸುವ ಮನದ ತಾವು ತಮ್ಮಂತಹ ಹಿರಿಯ ಓದುಗರ ಪ್ರೀತಿದುಂಬಿದ ನುಡಿಗಳಿಗೆ ಮನಸಾರೆ ವಂದಿಸುತ್ತೇನೆ. ನಮಿಸುತ್ತೇನೆ. ತಾವೂ ಕೂಡ ವಿಚಾರಗಳನ್ನು ಸಂಪದಿಗರೊಂದಿಗೆ ಹಂಚಿಕೊಳ್ಳುತ್ತಿರಿ ಎಂಬ ಕೋರಿಕೆಗಳೊಂದಿಗೆ, ಮತ್ತೊಮ್ಮೆ ವಂದನೆಗಳು ಸರ್,

Submitted by nageshamysore Sat, 07/11/2015 - 04:26

ರುಚಿಕಟ್ಟಾದ ಪ್ರವಾಸ ಕಥನದ ಜತೆಗೆ 'ಓಂ ಬನ'ದ ಹೊಸ 'ಸಸ್ಪೆನ್ಸ್ ಥ್ರಿಲ್ಲರ್' ಬೇರೆ ಸೇರಿಸಿ ಮತ್ತಷ್ಟು ಕುತೂಹಲಕ್ಕೆ ನಾಂದಿ ಹಾಕಿಬಿಟ್ಟಿದ್ದೀರ. ಅದರದು ಒಂದು ಬರಹ ಮೂಡಿಬರಲಿ !

ಓಹೋ ನಾಗೇಶ್ ಜಿ...ನಮಸ್ಕಾರ ಸರ್, ಸರಿಯಾಗಿ ಗುರುತಿಸಿರುವಿರಿ. ಹೌದು,ಹೌದು. ಅದೊಂದು ವಿಚಿತ್ರವಾದರೂ ಸತ್ಯ. . ಬೇಡಿಕೊಂಡ ಕೇವಲ ಕೆಲದಿನಗಳಲ್ಲೇ ತನ್ನಿಂದ ತಾನೇ ತಾನಾಗಿ, ಪಾಲಕರ ಆಶಯವೊಂದು ಈ ರೀತಿ ಆಶಯವನ್ನೂ ಮೀರಿ, ಬೇಡಿಕೆಗಿಂತ ಹೆಚ್ಚು ಈಡೇರುವುದೆಂದರೆ, ಪವಾಡ ಸದೃಶ ಘಟನಾವಳಿ, ಹುಡುಕುವ ಬಳ್ಳಿ ಹುಡುಕಿ ಬಂದಂತೆ, ಬದುಕು ಅದೆಷ್ಟೊಂದು ವಿಸ್ಮಯವಲ್ಲವೇ. ಈ ಘಟನೆ ಬರೆಯುವುದಕ್ಕಿಂತ ಮೊದಲು ತಾವು ತಮ್ಮ ಕುಟುಂಬ ಸಹಿತವಾಗಿ, ಸಂಪದಿಗ ಮಿತ್ರರು ಖಂಡಿತ ಬರಬೇಕು ಎಂದು ಈಗಲೇ ಪ್ರೀತಿಯಿಂದ ಹಕ್ಕೊತ್ತಾಯ ಆತಂತ್ರಣ ನೀಡುತ್ತೇನೆ. ಈ ಸಂದರ್ಭದಲ್ಲಿ ನಾವೆಲ್ಲ ಪರಸ್ಪರ ಭೇಟಿಯಾಗೋಣವೆಂದು ಪ್ರೀತಿಪೂರ್ವಕ ಆಗ್ರಹವೊಂದನ್ನು ಈಗಲೇ ಬಿತ್ತುತ್ತಿದ್ದೇನೆ. ತಪ್ಪಿಸಬಾರದು, ತಾವು ನಿಲುಕುವ ನೆಲೆಯಲ್ಲಿದ್ದರೆ, ತಮ್ಮಲ್ಲಿಗೂ ಖುದ್ದು ಬಂದು ಆಮಂತ್ರಿಸುವೆ.. ಇನ್ನೂ ಬಹಳ ಬಂಧುಗಳಿಗೆ ಹೇಳಬೇಕಿದೆ, ಕೆಲವರ ಅನುಮತಿ ಪಡೆಯಬೇಕಿದೆ, ಇದು ಹಾಗಲ್ಲ, ಹೀಗೆ ಎಂದು ಒಪ್ಪಿಸಬೇಕಿದೆ,,.. ಕೆಲವರ ನಂಬಿಕೆ ಬುಡಮೇಲು ಮಾಡಬೇಕಿದೆ...ನಾವಿನ್ನೂ ತುಂಬ ಬ್ರಾಡ್ ಆಗಬೇಕಿದೆ ಎಂದು ಆಗ್ರಹಿಸಿಬೇಕಿದೆ...ಒಟ್ಟಾರೆ ಎಲ್ಲರನ್ನೂ ಒಳಗೊಳಿಸಿ, ಪ್ರೀತಿಯ ಸಮ್ಮಿಲನ ಏರ್ಪಡಿಸಬೇಕಿದೆ,.. ಎಲ್ಲವೂ ಅಂದುಕೊಂಡಂತಾಗಲೆಂಬ ಹಾರೈಕೆ ನನಗೂ...ಬೇಗ ಸೇರೋಣ ಸರ್, ವಂದನೆಗಳು, ...ನಮಸ್ಕಾರ. ಇನ್ನೂ ಬಾಳ ...ಕೆಲಸಗಳಿವೆ.. .ಹ ಹ ಹ..

Submitted by H A Patil 1 Sat, 07/11/2015 - 11:25

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ರಾಜಸ್ಥಾನದ ಪ್ರವಾಸ ಕಥನ ಅದ್ಭುತವಾಗಿ ಮೂಡಿ ಬರುತ್ತಿದೆ. ರಮೇಶ ಕಾಮತ ಮತ್ತು ಇತರರ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ಮನ ಮಿಡಿವ ಮಾರ್ಮಿಕ ಪ್ರವಾಸ ಕಥನವನ್ನು ಉಣ ಬಡಿಸುತ್ತಿದ್ದೀರಿ ದನ್ಯವಾದಗಳು.

ಹಿರಿಯರಾದ ಹನುಮಂತ ಅನಂತ ಪಾಟೀಲ ಸರ್, ನಮಸ್ಕಾರ. ತಮ್ಮ ಸದಾಶಯದ ಪ್ರೀತಿಯ ಪ್ರೋತ್ಲಾಹಕರ ಶುಭನುಡಿಗೆ ಶರಣು ಸರ್, ವಂದನೆಗಳು ಮತ್ತೊಮ್ಮೆ ಸರ್.

Submitted by kavinagaraj Fri, 07/17/2015 - 13:31

ಮುದಗೊಳಿಸುವ ನಿರೂಪಣೆ ಸುಂದರ ಪ್ರವಾಸಕಥನವನ್ನು ಓದಿಸಿಕೊಂಡು ಹೋಗುತ್ತದೆ. ಓಂ ಬನ್ನಾನ ಕಥೆ ಕುತೂಹಲಕರವಾಗಿದೆ. ಅಭಿನಂದನೆಗಳು, ಇಟ್ನಾಳರೇ.

ಹಿರಿಯ ಬರಹಗಾರ, ಚಿಂತಕ ಕವಿ ನಾಗರಾಜ್ ಸರ್, ನಮಸ್ಕಾರ,.ತಮ್ಮ ಮೆಚ್ಚುಗೆಗೆ ವಂದನೆಗಳು ಸರ್, ಹೌದು ಓಂ ಬನ್ನಾ ನನಗೂ ವಿಚಿತ್ರವೆನಿಸಿತು. ಕೆಲ ವಿಷಯಗಳು ತರ್ಕಕ್ಕೆ ನಿಲುಕವೇನೋ! ಪುರಾಣೇತಿಹಾಸಗಳಲ್ಲೂ ಪುಷ್ಪಕ ವಿಮಾನಗಳು, ಬ್ರಹ್ಮಾಸ್ತ್ರಗಳು, ಪಾಶು ಪತಾಸ್ತ್ರ, ಅಂತರ್ಧಾನವಾಗುವುದು, ಪರಕಾಯಗಳು ಇನ್ನೂ ಅನೇಕ ವಿಷಯಗಳು, ಆಧುನಿಕ ಸಿನಿಕ ಮನಗಳಿಗೆ ಇನ್ನೂ ಒಗ್ಗದ ವಿಷಯಗಳೇ,, ನಮ್ಮ ಮೂಗಿನ ನೇರಕ್ಕೆ, ಸಾಕ್ಷಿಗೆ ಮಾತ್ರ ಒಪ್ಪುತ್ತೇವೆ, ಕೆಲವೊಂದಕ್ಕೆ ಅವುಗಳ ಹಂಗಿಲ್ಲವೆಂದು ಕಾಣುತ್ತದೆ.