ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯ ಮನದಾಳದ ಆಸೆ, ಆಶಯ, ಕನಸು - ಸುಂದರ, ನೆಮ್ಮದಿ ಸುಖದ ಸಂಸಾರ. ಬಾಲ್ಯದ ಮೆಟ್ಟಿಲು ದಾಟಿ, ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು ಜವಾಬ್ದಾರಿಯ ನೊಗಕೆ ಹೆಗಲ್ಗೊಡುವ ಹೊತ್ತಿಗೆ ಮಾನಸಿಕ ಹಾಗೂ ಆರ್ಥಿಕ ಸ್ವಾತ್ಯಂತ್ರದ ಗರಿಯೂ ಬಿಚ್ಚುತ್ತಾ ಹೋಗಿ ಸುಂದರ ಬದುಕಿನ ಆಸೆಯ ಹಕ್ಕಿಯೂ ನಿಧಾನವಾಗಿ ನೆಲದಿಂದ ಮೇಲೆದ್ದು ಹಾರಾಡತೊಡಗುತ್ತದೆ. ಸುಂದರ ಬದುಕು ಒಂದು ಕೈನ ಚಪ್ಪಾಳೆಯಿಂದ ಸಾಧ್ಯವಾಗುವುದಿಲ್ಲವಲ್ಲ? ತಾವಾಗಿ ಹುಡುಕಿದ್ದೊ ಅಥವಾ ಮನೆಯವರಿಂದ ಆರೋಪಿಸಿದ್ದೊ - ಸಾಂಗತ್ಯವೊಂದರ ಜತೆಗಾಗಿ ಮನದಲ್ಲಿ ತಹತಹನೆ, ಕುತೂಹಲ; ಭವಿಷ್ಯದತ್ತ ಆಸೆ ತುಂಬಿದ ಆಶಾವಾದ ಚಿಗುರಿ ಗಿಡವಾಗಿ ಹೂಬಿಡತೊಡಗಿ ಮೈ ಮನವೆಲ್ಲ ಹೂವಂತೆ ಅರಳುವ ಹೊತ್ತು.
ಒಟ್ಟಾರೆ ನಾಟಕೀಯತೆಯ ಜತೆಗೊ ಅಥವಾ ಮಾಮೂಲಿನ ಸದ್ದುಗದ್ದಲವಿಲ್ಲದ ತರದಲ್ಲೊ ಗಂಡು ಹೆಣ್ಣುಗಳೆರಡರ ಜತೆ ಸೇರಿ ಸಂಸಾರವೆನ್ನುವ ಚಕ್ರಕ್ಕೆ ಚಾಲನೆ ಸಿಕ್ಕಾಗ ಹೊಸ ಬದುಕಿನ ಆರಂಭ. ಹೊಸತಲ್ಲಿ ಎಲ್ಲವೂ ಸುಂದರವೆ ಆದರೂ ನಿಜವಾದ ಹೂರಣ ಹೊರ ಬೀಳಲು ಕೊಂಚ ಹೊತ್ತು ಹಿಡಿಯುತ್ತದೆ. ಕೃತಕ ಧನಾತ್ಮಕ ವೇಷಧಾರಣೆಗಳೆಲ್ಲ ಕಳಚಿ, ಸ್ವಾಭಾವಿಕ ಧನ - ಋಣಾತ್ಮಕ ಅಂಶಗಳ ನೈಜ್ಯ ಚಿತ್ರ ಅನಾವರಣೆಗೊಳ್ಳುತ್ತಾ ಹೋಗುತ್ತದೆ. ಈ ಸಮಯವೆ ಬಂಧಗಳನ್ನು ಕಟ್ಟುವ ಅಥವಾ ಉರುಳಿಸುವ ಸಂದಿಗ್ದ ಕಾಲ. ಸುಖಿ- ಅಸುಖಿ ಭವಿತ ಸಂಸಾರದ ನಿಜವಾದ ಬುನಾದಿ ಬೀಳುವುದು ಇಲ್ಲಿಂದಲೆ. ಕೆಲವು ಅದೃಷ್ಟಶಾಲಿಗಳಿಗೆ ಹಾಲು ಜೇನು ಬೆರೆತಂತೆ ಹೊಂದಾಣಿಕೆ ತಂತಾನೆ ಪ್ರಸ್ತುತಗೊಳ್ಳುತ್ತ, ಗಟ್ಟಿಯಾಗುತ್ತ ಹೋಗುತ್ತದೆ. ಮತ್ತೆ ಕೆಲವರಲ್ಲಿ ಸಣ್ಣಪುಟ್ಟ ಏರುಪೇರುಗಳಿದ್ದರೂ, ಹೆಚ್ಚು ಕಡಿಮೆ ಸಹನೀಯ ಶೃತಿಲಯದಲ್ಲಿ ಸಾಗುತ್ತದೆ ಜೀವನ. ಆದರೆ ನಿಜವಾದ ಬಿಕ್ಕಟ್ಟು ಬರುವುದು ಈ ಹೊಂದಾಣಿಕೆ ಕಾಣಿಸದ ಜೋಡಿಗಳಲ್ಲಿ. ಅಲ್ಲಿ ಸಣ್ಣ ಪುಟ್ಟ ವಿಷಯಗಳೆ ದೊಡ್ಡವಾಗಿ ಅಸಹನೀಯ ಹೊಂದಾಣಿಕೆಗಳೊಡನೆ ದಿನದೂಡುವುದೊ ಅಥವಾ ವಾಗ್ಯುದ್ಧ, ವೈರುಧ್ಯಗಳ ನರಕದಲ್ಲಿ ಬಿದ್ದು ಪ್ರತಿದಿನ ಜೀವನದಲ್ಲಿ ಹೆಣಗುತ್ತಲೆ ಸಾಗುವುದೊ ಆಗುತ್ತದೆ. ಸರ್ವ ಸಂಪೂರ್ಣ ಪಕ್ವತೆಯುಳ್ಳ ಸಂಸಾರಗಳು ಇಲ್ಲವೆ ಇಲ್ಲವೆನ್ನುವಷ್ಟು ಅಪರೂಪವಾದರೂ ಸರಾಸರಿ ಲೆಕ್ಕದಲ್ಲಿ ಸಹನೀಯತೆ-ಅಸಹನಿಯತೆಯ ಅಂದಾಜು ಮಟ್ಟದ ಅಕ್ಕಪಕ್ಕದಲ್ಲೆ ಜೋತಾಡುವುದು ಸಾಮಾನ್ಯವಾಗಿ ಕಾಣುವ ಚಿತ್ರಣ.
ಸಹನೀಯ ಹಿತಕರ ವ್ಯಾಪ್ತಿಯೊಳಗಿನ ಪುಣ್ಯವಂತ ಗಂಡಸರ ಯಶಸ್ಸಿನ ಹಿಂದೆ ಆ ಹೆಂಡತಿಯರ ಪಾತ್ರ ಕಂಡೂ ಕಾಣದ ಮಹತ್ತರವೆಂದೆ ಹೇಳಬೇಕು. ಅಂತಹ ಯಶಸ್ವಿ ಗಂಡು ಮನ "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪ್ಪಾಯಿ..." ಎಂದು ಹಾಡಿ, ಕುಣಿದು ಕೃತಾರ್ಥರಾಗುತ್ತಾರೆ. ಆದರೆ ಆ ಭಾಗ್ಯವಿಲ್ಲದ ಗಂಡಸರ ಪಾಡೇನು? ಕಾಟ ಕೊಟ್ಟು ಕಾಡುವ ಹೆಂಡತಿಗಳ ಕೈಲಿ ಸಿಕ್ಕಿ ಒದ್ದಾಡುವವರಿಗೆ ಯಾರು ಹಾಡಬೇಕು? (ಅವರಾಗಿಯೆ ಹಾಡುವಂತ ಮನಸ್ಥಿತಿಯಿರುವುದು ಅನುಮಾನ, ಮತ್ತು ಅಪರೂಪ ಬಿಡಿ!).
ಈಗಾಗಾಲೆ ಹಾಡಿದ್ದಾರೊ ಇಲ್ಲವೊ ಗೊತ್ತಿಲ್ಲ - ಬಹುಶಃ ಕೆಲವು ನೊಂದವರು ಬಾತ್ರೂಮುಗಳಲ್ಲಿ ಹಾಡಿಕೊಂಡಿರಬಹುದೊ ಏನೊ. ಏನಾದರಾಗಲಿ ಅಂತಹವರಿಗೆ ಸುಲಭವಾಗಲೆಂದು ಇಲ್ಲೊಂದು ಹಾಡಿದೆ - ಅನಂತಸ್ವಾಮಿಯವರ "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.." ರಾಗದಲ್ಲೆ ಹಾಡಿಕೊಂಡು ಆನಂದಿಸಿ!
ಕೊ.ಕೊ: ಈ ರೀತಿ ಕಾಟ ಕೊಡುವ ಹೆಂಗಸರು ಕನ್ನಡನಾಡಿನವರಲ್ಲ - ಬೇರೆ ಕಾಲ, ದೇಶ, ಪ್ರಾಂತ್ಯಕ್ಕೆ ಸೇರಿದವರು. ನಮ್ಮ ಕನ್ನಡದ ಹೆಣ್ಣುಗಳು ಅಪ್ಪಟ ಬಂಗಾರ. ಆದ ಕಾರಣ ಕನ್ನಡದ ಹೆಣ್ಣು ಮಕ್ಕಳು ಹಾಡನ್ನು ಓದಿ ತಮ್ಮ ಮೇಲೆ ಆರೋಪಿಸಿಕೊಂಡು , ತಪ್ಪಾಗಿ ಅರ್ಥೈಸಿಕೊಂಡು ಕೋಪಿಸಿಕೊಳ್ಳಬಾರದೆಂದು ಕೋರಿಕೆ!
ಕಾಡುವ ಹೆಂಡತಿ ಮನೆಯೊಳಗಿದ್ದರೆ...
_________________________
ಕಾಡುವ ಹೆಂಡತಿ ಮನೆಯೊಳಗಿದ್ದರೆ
ಕರಗದಿರುವುದೆ ಕೋಟಿ ರುಪಾಯಿ
ಅಂಥ ಹೆಂಡತಿಯೊಬ್ಬಳು ಹತ್ತಿರವಿದ್ದರೆ
ಲೂಟಿ ಶಾಂತಿ, ಮನಸೆ ಬಡಪಾಯಿ || ಕಾಡುವ ||
ದಿನ ಹಗಲೆ ಇರುಳೆ ಯಾರಿಗೆ ಲೆಕ್ಕ
ಸಾಲಂಕೃತ ಕೋಟಲೆ ದುಃಖ
ಒಂದೆ ಸಮ ಜತೆ ಕಾಡುವ ಕಾಟ
ಸಹಿಸಿ ಬಾಳುವುದಲ್ಲ ಹುಡುಗಾಟ || ಕಾಡುವ ||
ಬೇಡವೆಂದರೂ ದೂರ ತಳ್ಳುವಂತಿಲ್ಲ
ಕಟ್ಟಿಕೊಂಡ ಜನ್ಮಗಳ ಪಾಪ
ದೂರ ತಳ್ಳಲೆಲ್ಲಿ ದೂರ ಹೇಳಲೆ ಕಷ್ಟ
ಸಿಡಿದು ಸಿಗಿಯುವ ಘನ ಕೋಪ || ಕಾಡುವ ||
ಛೀಮಾರಿಗೆಲ್ಲ ಏಮಾರೊ ಸರಕಲ್ಲ
ನಿರ್ದಯೆ ನಿರ್ದಾಕ್ಷಿಣ್ಯತೆ ಒಡವೆ
ಗಂಡನೆನ್ನುವ ಪ್ರಾಣಿ ಯಾವ ಲೆಕ್ಕಕಿಲ್ಲ
ಕೇಡ ಮಾಡಲೇಕವನ ಗೊಡವೆ || ಕಾಡುವ ||
ಹಬ್ಬ ಹರಿದಿನ ಹುಣ್ಣಿಮೆ ಹೋಳಿಗೆಗಿಂತ
ಬೈಗುಳದಡಿಗೆಯೆ ಪ್ರಚಂಡ
ಮಾಡದಿದ್ದರು ಸದ್ಯ ಕಾಡದಿದ್ದರೆ ಸಾಕು
ಎಂದು ಮೌನ ತಬ್ಬಿದವ ಗಂಡ || ಕಾಡುವ ||
ಅಪ್ಪಿ ತಪ್ಪಿ ಎಂದೊ ಮಾಡಿದ ಅಡಿಗೆ
ಪಾತ್ರೆ ಪಗಡಿಯೆಲ್ಲ ಚೆಲ್ಲಾಪಿಲ್ಲಿ
ವಾರಗಟ್ಟಲೆ ಪೇರಿಸಿದ ಮುಸುರೆಗಳೆ
ಗಂಡ ತೊಳೆಯದೆ ಆಗದೆ ಖಾಲಿ || ಕಾಡುವ ||
ಮನೆಗೊಬ್ಬಳೆ ಗೃಹಿಣಿ ಬೇರಿಲ್ಲದ ಕಾಟ
ಟೀವಿ ಧಾರವಾಹಿಗಳೆ ಪ್ರಖರ
ಕೂತ ಸೋಫಾವೆ ಹಾಸಿಗೆ, ಮೆತ್ತೆಗೆ ದಿಂಬೆ
ಊಟಕೆ ಹೊತ್ತಾದರು ಒಲೆಗೆ ಚೌರ || ಕಾಡುವ ||
ಇಂಥ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಬದುಕೆಲ್ಲ ಪೂರ್ತಿ ನರಕಾನೆ
ಹುಲಿಯಂತ ಗಂಡು ಇಲಿಯಾಗಿಬಿಡುವ
ಜೀವಂತ ಶವವಾಗುತ ತಾನೆ || ಕಾಡುವ ||
------------------------------------------------------------------------------------
ನಾಗೇಶ ಮೈಸೂರು, ಸಿಂಗಪುರ
-------------------------------------------------------------------------------------
Comments
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ಆತ್ಮೀಯ ನಾಗೇಶ ಜಿ , ವಂದನೆಗಳು. ಮನೆಯೊಳಗಿನ ಹೆಂಡತಿ ಹೀಗಿರುವುದು ಬೇಡ ಮಾರಾಯರೆ, ಬೇರೆಯವರು ಮನೆಯಲ್ಲಿರಲಿ ಬೇಕಾದರೆ, ಹ ಹ ಹ ...ಸುಂದರ ಲಘು ಹಾಸ್ಯದ ಕವನ ಮೆಚ್ಚುಗೆಯಾಯಿತು. ಧನ್ಯವಾದಗಳು ಸರ್
In reply to ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ) by lpitnal
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ಇಟ್ನಾಳರೆ ನಮಸ್ಕಾರ ಮತ್ತು ಧನ್ಯವಾದಗಳು. ನಿಮ್ಮ ಮಾತು ನಿಜ - ಯಾರೂ ಇಂಥ ಸಂಗಾತಿಯಿರಲೆಂದು ಬಯಸುವುದಿಲ್ಲ. ಆದರೆ ಒಂದು ವೇಳೆ ಹಾಗಾದಾಗ ನಿಭಾಯಿಸದೆ ವಿಧಿಯೂ ಇಲ್ಲ. ಅಲ್ಲದೆ ಇಂತಹವರಿದ್ದರೆ ತಾನೆ ಹೋಲಿಕೆ ಸುಲಭವಾಗಿ ಒಳ್ಳೆಯ ಸಂಗಾತಿಗಳ ಮೌಲ್ಯವೂ ಹೆಚ್ಚುವುದು ? ಒಟ್ಟಾರೆ ಎಲ್ಲಾ ಅವರವರು ಪಡೆದು ಬಂದದ್ದು, ಜನ್ಮಾಂತರ ಕರ್ಮ ಎನ್ನುವುದೆ ಸುಲಭವೇನೊ ? :-)
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ಓದಿ ಮನಸ್ಸು ಹಗುರವಾಯಿತು. ದೊಡ್ಡಕ್ಕೆ ಹೇಳಲಾಗದ್ದನ್ನು ಕೇಳಿ ಖುಷಿಯಾಯಿತು!!!!
ರಾಯರೇ ಹಾಸ್ಯದ ಧಾಟಿ ತುಂಬಾನೇ ಚೆನ್ನಾಗಿದೆ.
In reply to ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ) by santhosha shastry
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ಸಂತೋಷ ಶಾಸ್ತ್ರಿಗಳೆ ನಮಸ್ಕಾರ ಮತ್ತು ಧನ್ಯವಾದಗಳು! ದೊಡ್ಡಕ್ಕೆ 'ಪಬ್ಲಿಕ್ಕಾಗಿ' ಹೇಳೊಕಾಗದ್ದನ್ನ ಸೂಚ್ಯವಾಗಿ, ಸಾಂಕೇತಿಕವಾಗಿ ಹೇಳಲೆಂದೆ ಈ ಪದ್ಯ, ಕವಿತೆ, ಗೀತೆಗಳು ಹುಟ್ಟಿಕೊಂಡವೇನೊ ಅಂತ ನನಗಿನ್ನೂ ಗುಮಾನಿ! ಅದೆಂತೆ ಇರಲಿ, ನಿಮಗೆ ಈ ಲಘು ಹಾಸ್ಯ ಓದಿ ಖುಷಿಯಾಯಿತಲ್ಲ - ಅದು ನನ್ನ ಖುಷಿ ! ಈ ಧಾಟಿಯಲೆ ಇನ್ನಷ್ಟು ಬರೆಯಲು ಸ್ಪೂರ್ತಿ :-)
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ನಾಗೇಶ ಮೈಸೂರುರವರಿಗೆ ವಂದನೆಗಳು
ನಿಮ್ಮ ಈ ಹಾಸ್ಯ ಬರಹ ಚೆನ್ನಾಗಿ ಮೂಡಿ ಬಂದಿದೆ ಸೊಗಸಾದ ಕವನ ನಿಮ್ಮದೆ ಶೈಲಿಯಲ್ಲಿ ಮೂಡಿ ಬಂದಿದೆ ಮನಕ್ಕೆ ಮುದ ನೀಡಿತು ದನ್ಯವಾದಗಳು.
In reply to ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ) by H A Patil 1
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ನಿಮ್ಮ ಗಹನ ಬರಹಗಳೆದುರು ಇದು ಕೇವಲ ಮಕ್ಕಳಾಟಿಕೆಯ ಬಾಲಿಶ ಬರಹವಷ್ಟೆ. ಆದರೂ ಮೆಚ್ಚಿ ಪ್ರತಿಕ್ರಿಯಿಸುವ ನಿಮ್ಮ ಹಿರಿತನಕ್ಕೆ ಶರಣು !
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ನಾಗೇಶರೆ, ನೀವು ಹಾಸ್ಯವಾಗಿ ಕವನ ಬರೆದಿದ್ದರೂ, ಹೆಂಡತಿ ಕಾಟದಿಂದ ಹಲವು ವರ್ಷ ಒದ್ದಾಡಿದಾತನನ್ನು ಕಣ್ಣಾರೆ ನೋಡಿ ಸಂಕಟ ಪಟ್ಟಿರುವೆ. ಕೊನೆಯಲ್ಲಿ ಹೇಳಿರುವ ..."ಬದುಕೆಲ್ಲ ಪೂರ್ತಿ ನರಕಾನೆ
ಹುಲಿಯಂತ ಗಂಡು ಇಲಿಯಾಗಿಬಿಡುವ
ಜೀವಂತ ಶವವಾಗುತ ತಾನೆ " ಹಾಗೇ ಆಗಿತ್ತು. ಅವನ ಪುಣ್ಯಕ್ಕೆ ಡೈವೊರ್ಸ್ ಸಿಕ್ಕಿ ಈಗ ನೆಮ್ಮದಿಯಲ್ಲಿರುವ.
In reply to ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ) by ಗಣೇಶ
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
munjaneyall ಸ ರ ಸ ಮಧ್ಯಾನ್ನ ವಿರಸ ರಾತ್ರಿ ಸಮ ರಸ ವೇ ಜಿವನ ದ ಸಾರ
ಕುನ್ದಾಪುರ ನಾಗೇಷ್ ಪೈ.
In reply to ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ) by nageshpai.k48@…
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ನೀವು ಹೇಳಿದ ಮೂರು ರಸಗಳು ಮುಂಜಾನೆ, ಹಗಲೂ, ಇರುಳು ಇದ್ದರೇನೊ ಸರಿ - ಅನುಕ್ರಮದಲಿರಲಿ, ಬಿಡಲಿ ಸಹನೀಯವಾಗಿಸಿಕೊಂಡು ಬದುಕಬಹುದು. ಆದರೆ ಮೂರು ಹೊತ್ತು 'ರಸ ತತ್ವ'ದ ಬದಲು 'ರಾಕ್ಷಸತ್ವ' ಎಡೆ ಮಾಡಿಕೊಂಡುಬಿಟ್ಟರೆ ಮಾತ್ರ ಇಬ್ಬರಿಗೂ ಕಷ್ಟ - ಗಂಡನಿಗಾಗಲಿ, ಹೆಂಡತಿಗಾಗಲಿ ಪರಿಣಾಮ ಒಂದೆ :-)
In reply to ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ) by ಗಣೇಶ
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ಗಣೇಶ್ ಜಿ ನಮಸ್ಕಾರ. ಇಂತಹ ಬಂಧಗಳು ಅಸಹನೀಯ ಬಂಧನಗಳೆ ಆಗಿಹೋದರು ಹೇಗೊ ಏಗಿಕೊಂಡು, ನಿಭಾಯಿಸಿಕೊಂಡು, ತೂಗಿಸಿಕೊಂಡು ಹೋಗಬೇಕೆನ್ನುವ ಸಿದ್ದಾಂತದ ಸಮಾಜ ನಮ್ಮದು. ಹೀಗಾಗಿ ಸಿಕ್ಕಿ ಬಿದ್ದ ಎಲ್ಲರಿಗು ಡೈವರ್ಸಿನ ಪುಣ್ಯ ಇರಲಾರದು. ಪಾಲಿಗೆ ಬಂದ ಪಂಚಾಮೃತವೆಂದೊ ಅಥವಾ ಸಮಾಜ ಸೇವೆ, ದೇವರ ಕಾರ್ಯ, ಜೂಜು, ಕುಡಿತ, ರೇಸು ಎಂದೊ ಸಿಕ್ಕ ದಾರಿ ಹಿಡಿದು ನಡೆಯುವವರದೆಷ್ಟು ಜನರೊ ? ಆದರೆ ಸರಾಸರಿಯಲ್ಲಿ ಸಹನೀಯ ಜೋಡಿಗಳೆ ಹೆಚ್ಚಾದ ಕಾರಣ - ಇದು ತೀರಾ ವಿಕೋಪದ ಸಾಮಾಜಿಕ ಸಮಸ್ಯೆಯಲ್ಲ ಎಂದು ಹೇಳಬಹುದು :-)
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ಕಾಡುವವರಿರಲಿ, ಕಾದಾಡುವ ಹೆಂಡತಿಯರೂ ಇರುತ್ತಾರೆ! ಕಾಡುವ, ಕಾದಾಡುವ ಹೆಂಡತಿಯಿಂದ ಕಾಪಾಡಪ್ಪಾ ಎಂದು ಗಟ್ಟಿಯಾಗಿ ದ್ವನಿ ಹೊರಡಿಸಲಾಗದವರ ಧ್ವನಿ ನಿಮ್ಮ ಮೂಲಕ ಹೊರಬಂದಿರಬೇಕು!! :))
In reply to ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ) by kavinagaraj
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ಕವಿಗಳೆ ನಿಮ್ಮ ಅನಿಸಿಕೆ ಬಹಳ ನಿಜ. ಮಧುರ ನೆನಪಾಗಿ ಕಾಡುವ ಬದಲು ಕಾದಾಟಕ್ಕೆ ಹವಣಿಸುತ್ತ ಕಾಡುವವರಿಂದ ಮುಕ್ತಿ ಪಡೆಯುವುದು ಸುಲಭದ ಮಾತಲ್ಲ. ಕಾಡುವ ವಿಷಯಕ್ಕೆ ಬಂದರೆ ಅದರ ಮುಂದಿನ ಹಂತ ಅಥವ ಅದರ ಅಭಿವ್ಯಕ್ತಿ ಮಾಧ್ಯಮವೆ ಕಾದಾಟವಲ್ಲವೆ ? 'ಕಾಡಿಸಿಕೊಂಡವರ ಸಂಘ' ಕಟ್ಟಿಕೊಳ್ಳಲು ಧೈರ್ಯವಾಗದ ಕಾಂಪ್ರೊಮೈಸಿನ ಬದುಕದು. ಈ ತರದ 'ಶೋಷಿತರ' ಪಾಲಿಗೆ ದನಿಯಾಗುವ ಕವನವಿದು ಎನ್ನುವುದಕ್ಕಿಂತ ತುಸು ಹಾಸ್ಯ ಲೇಪನದಲ್ಲಿ ಅದನ್ನು ವಿಡಂಬನಾತ್ಮಕಾಗಿ ನೋಡಿದ ಪರಿಯಿದು ಎನ್ನುವುದೆ ಉಚಿತವೇನೊ. ಗಂಡಂದಿರ ದಬ್ಬಾಳಿಕೆಗೆ ಸಿಕ್ಕಿ ಶೋಷಿತರಾಗುವ ಹೆಂಡಂದಿರ ಪಾಡು ನೋಡುತ್ತಲೆ ಇರುತ್ತೇವೆ. ಆದರೆ, ಪುರುಷ ಪ್ರತಿಷ್ಠೆ, ಸ್ವಾಭಿಮಾನ, ಅಭಿಮಾನ, ಸಂಕೋಚ, ನಾಚಿಕೆಗಳ ಫಲವಾಗಿ ಈ ಬಗೆಯ 'ಉಲ್ಟಾ' ಕೇಸುಗಳಲ್ಲಿ ಸಹಿಸಿಕೊಂಡು ಸುಮ್ಮನಿದ್ದುಬಿಡುವವರೆ ಹೆಚ್ಚೆಂದು ಕಾಣುತ್ತದೆ. ಅಲ್ಲದೆ ತೀರಾ ಅಧ್ವಾನಕ್ಕೆ ಹೋಗದ ಸಹನೀಯ ಮಟ್ಟದಲ್ಲಿದ್ದರೆ ಅದೆ ಒಂದು ರೀತಿಯ 'ವೈವಿಧ್ಯತೆ' ನೀಡುತ್ತ ಬದುಕಿನಲ್ಲಿನ ಆಸಕ್ತಿಯನ್ನು ಉಳಿಸಿಕೊಂಡು ಹೋಗುತ್ತದೆಯೇನೊ. ಇದೂ ಒಂದು ರೀತಿ 'ಲೋಕೋಭಿನರುಚಿಃ' ತರಹವೊ ಏನೊ !
In reply to ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ) by nageshamysore
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ಕಾಂಪ್ರೊಮೈಸ್ ಬದುಕಿನವರ ಸಂಘವನ್ನು ಹುಟ್ಟುಹಾಕಿದರೆ ಬಹಳಷ್ಟು ಸದಸ್ಯರ ನೋಂದಾವಣೆ ಆಗಬಹುದು! :))) ಹಾಸ್ಯಲಹರಿ ಚೆನ್ನಾಗಿದೆ.
In reply to ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ) by kavinagaraj
ಉ: ಕಾಡುವ ಹೆಂಡತಿ ಮನೆಯೊಳಗಿದ್ದರೆ...(ಹಾಸ್ಯ)
ನನ್ನನುಮಾನದಲ್ಲಿ 'ಭಾರತೀಯ ಕಾಂಪ್ರಮೈಸಿಗರ ಸಂಘ' ಹುಟ್ಟು ಹಾಕಿದರೆ ಶೇಕಡ 90ಕ್ಕಿಂತಲು ಹೆಚ್ಚು ಭಾಗವೆ ನೊಂದಾವಣೆ ಮಾಡಬೇಕಾಗುತ್ತದೇನೊ! ಪಾಶ್ಚಾತ್ಯರಲ್ಲಿ ಡೈವೋರ್ಸಿನಂತಹ ಸಾಧ್ಯತೆ ಹೆಚ್ಚಿರುವುದರಿಂದ ಅವರಲ್ಲಿ ಈ ಶೇಕಡಾವಾರು ಗಣನೆ ಸ್ವಲ್ಪ ಕಡಿಮೆಯಿರುವ ಸಾಧ್ಯತೆಯಿದೆ...:-). ಅದಕ್ಕೆ ನಮ್ಮ ಹಿರಿಯರು ಜಾಣತನದಿಂದ ಸರಸ-ವಿರಸ-ಸಮರಸ ಎಂದೆಲ್ಲ ಹೇಳುತ್ತ 'ಹೊಂದಾಣಿಕೆಯೆ ಜೀವನ' ಎಂದು ನಂಬಿಸಿಬಿಟ್ಟಿದ್ದಾರೆ ನೋಡಿ!