00324.'ಹೋಮ್ ಸ್ವೀಟ್ ಹೋಮ್..!'
ಜಗದೆಲ್ಲೆಡೆ ಸುತ್ತಿ ಬಂದರು ಕೊನೆಯಲ್ಲಿ ಮನೆಯನ್ನು ಬಿಟ್ಟರಿಲ್ಲ ಎನ್ನುವುದು ಸತ್ಯದ ಮಾತೆ. ಅದರಲ್ಲೂ ವ್ಯವಹಾರ ನಿಮಿತ್ತ ಊರೆಲ್ಲ ಸುತ್ತುವ ಹಣೆಬರಹದವರಿಗೆ ಊರಿಗೊಂದೆಂಬಂತೆ ಹೋಟೆಲು ರೂಮಿನಲ್ಲಿ ತಂಗುವ ಅನಿವಾರ್ಯದಿಂದಾಗಿ ಮನೆಯ ತಪನೆ ಇನ್ನೂ ಹೆಚ್ಚು ಕಾಡುವುದು ಸಾಮಾನ್ಯ ವಿಷಯವೆ. ವಿಚಿತ್ರವೆಂದರೆ ಈ ಹೋಟೆಲು ತಂಗುವಿಕೆಯಲ್ಲಿ ಮಾಮೂಲಿ ಮನೆಯಲ್ಲಿರುವುದಕ್ಕಿಂತ ಹೆಚ್ಚು ಸೌಕರ್ಯ, ಐಷಾರಾಮಿ ವೈಭೋಗಗಳು, ಶಿಸ್ತು, ಅಚ್ಚುಕಟ್ಟುಗಳ ಜತೆಗೆ ಮೇಳೈಸಿಕೊಂಡು ಒಂದು ರೀತಿಯ ರಾಜೋಪಚಾರ ಸಿಕ್ಕುವುದರಿಂದ ಮನಸಿಗೆ ಹೆಚ್ಚು ಪ್ರಿಯವಾಗಬೇಕು. ಸಾಲದ್ದಕ್ಕೆ ಗುಡಿಸಬೇಕಿಲ್ಲ, ತೊಳೆದು ಬೆಳಗುವ ಗೋಜಿಲ್ಲ, ಅಡುಗೆ ಮಾಡಬೇಕೆನ್ನುವ ತಪನೆಯಿಲ್ಲ ಎಂಬೆಲ್ಲ ಕಾರಣಕ್ಕೆ ಆತ್ಮೀಯವಾಗಬೇಕು. ಆದರೆ ಆ ಅದ್ದೂರಿತನ, ವೈಭವದ 'ವಾಹ್' ಅನುಭೂತಿ ಕೇವಲ ಮೊದಮೊದಲಷ್ಟೆ ಪ್ರಸ್ತುತ. ನಿಧಾನವಾಗಿ ಆ ನಾಲ್ಕು ಗೋಡೆಯ ಯಾಂತ್ರಿಕತೆ ಆವರಿಸಿಕೊಂಡು , ಅದು ಮೊದಲ ನೋಟದಲುಂಟುಮಾಡಿದ್ದ ಮಾಂತ್ರಿಕತೆಯ ಉನ್ಮೇಷವನ್ನಳಿಸಿ ಮನವನ್ನು ಜಡ್ಡುಗಟ್ಟಿಸತೊಡಗುತ್ತದೆ. ಆ ಶಿಸ್ತು, ವ್ಯವಸ್ಥಿತ ರೀತಿಯೆ ಬೋರು ಹೊಡೆಸುವ ದೈನಂದಿನ ಪ್ರಕ್ರಿಯೆಯಾದಾಗ ನೆನಪಾಗುವುದು - ಬಿಟ್ಟು ಬಂದ ಮನೆಯ ಚಿತ್ರ. ಆ ಅಸ್ತವ್ಯಸ್ತ ಚೆಲ್ಲಾಡಿದ ವಸ್ತುಗಳ ನಡುವೆ ಸೋಮಾರಿತನದಿಂದ ಮುಸುಕೊದ್ದು ಮಲಗುವ ನಿರುಪಯೋಗಿ ಕೆಲಸವೆ ಎಷ್ಟೊ ಪ್ರಿಯವಾದ, ಆತ್ಮೀಯವಾದ ಅಪ್ಯಾಯತೆಯೆನಿಸಿ ಮನ ಮನೆಯತ್ತ ತುಡಿಯತೊಡಗುತ್ತದೆ. ಪಯಣ ಮುಗಿಸಿ ಹಿಂದಿರುಗಿ ಆ ಅರೆಬರೆ ಅಚ್ಚುಕಟ್ಟಿನ ಒಳಗೆ ಕಾಲಿಡುತ್ತಿದ್ದಂತೆ ನಿರಾಳತೆಯ ಭಾವ; ಪರಿಚಿತ ವಾತಾವರಣದಲ್ಲಿ ಏನೊ ಹಾಯೆನಿಸುವ ಅನುಭವ. ಬಹುಶಃ ಸ್ವತಃ ಪರಿಪೂರ್ಣ - ಪರಿಪಕ್ವವಲ್ಲದ ಮನಕ್ಕೆ ಅರೆಬರೆ ಪಕ್ವ ವಾತಾವರಣವೆ ಆತ್ಮಸಖನೇನೊ? ಮಿಕ್ಕೆಲ್ಲಾ ಕೇವಲ ಕ್ಷಣಿಕ ಚಿತ್ತ ಚಾಂಚಲ್ಯಗಳಷ್ಟೆ. ಅದೆ ಭಾವವನ್ನು ಬಿಂಬಿಸುವ, ಪ್ರಸ್ತಾವಿತ ಕವನ 'ಅಚ್ಚುಕಟ್ಟು - ಅಸ್ತವ್ಯಸ್ತ'
ಅಚ್ಚುಕಟ್ಟು - ಅಸ್ತವ್ಯಸ್ತ
______________________________
ಯಾರು ಬದುಕುತ್ತಾರಪ್ಪ ಪ್ರತಿದಿನ
ಈ ಅಚ್ಚುಕಟ್ಟಿನ ಉಸಿರುಗಟ್ಟುವ ಜಾಗ
ಹತ್ತಡಿಯುದ್ದ ಅಗಲದ ಸ್ವಚ್ಚ ಶುದ್ಧ
ಕೊಠಡಿಯೊಳಗಿನದೆಲ್ಲ ಫಳಫಳ.. ||
ಯಾರೊ ಬಂದೆ ಬರುತ್ತಾರೆ ದಿನವೂ
ಗಿರಾಕಿಗಳೆ ಬದಲಾಗುವ ಖದರು
ಬರುವ ಮುನ್ನ ಬಂದಾಗ ತದನಂತರ
ದಂಡು ದಂಡಾಗಿ ಬೆಳಗಿ ತೊಳೆವ ಆಟ ||
ಸುಸ್ತಾಗಿ ಬಂದವರೆ ಸುಸ್ತು ಹೊಡೆದು
ಬೆಕ್ಕಸ ಬೆರಗಾಗುತ ಅಂದ ಚಂದಕೆ
ತಲೆದೂಗೊ ಪರಿ ಮೊದಲೆರಡು ದಿನ
ಬೋರಾಗುವ ಚಿತ್ರ ಮಿಕ್ಕೆಲ್ಲ ಅನುಮಾನ ||
ಮುಖವಾಡ ಲೇಪನ ಶೃಂಗರಿತ ಪರಿ
ಕೃತಕತೆಯ ಹೆಗ್ಗಳಿಕೆ ಮರುಕಳಿಸುತ್ತ
ಸಹಜಕೆ ತೊಡಿಸಿದ ಬೇಡಿ ಮುಜುಗರ
ನಮ್ಮನೆ ಮೀರಿದ ಪಕ್ವತೆ ಅಳುಕಿನ ಭಾರ ||
ಅಲ್ಲಲ್ಲಿ ಚೆಲ್ಲಾಡಿ ಬಿದ್ದ ಬಟ್ಟೆ ಬರೆ ಪುಸ್ತಕ
ಮಡಿಸಿ ಗುಡಿಸಲು ಕಾದ ಹೊದಿಕೆ ನೆಲ
ಮಿಕ್ಕ ಸೋಮಾರಿತನ ತುಸು ಅಸ್ತವ್ಯಸ್ತ
ಮನೆಯೆ ವಾಸಿ, ಭಾರಿ ಹೋಟೆಲಿಗಿಂತ! ||
Comments
ಉ: 00324.'ಹೋಮ್ ಸ್ವೀಟ್ ಹೋಮ್..!'
ನಾಗೇಶ ಮೈಸೂರುರವರಿಗೆ ವಂದನೆಗಳು
ಹೋಮ್ ಸ್ವೀಟ್ ಹೋಮ್ ಸರಳವಾಗಿ ಮನೆಯ ಅರ್ಥ ಮತ್ತು ಮಹತ್ವವನ್ನು ಸಾರುವ ನಮ್ಮ ನೈಜ ಬದುಕಿಗೆ ಹತ್ತಿರದ ಅನಿವಾರ್ಯತೆ ಜೊತೆಗೆ ಅರ್ಥಪೂರ್ಣತೆಯನ್ನು ನಿರೂಪಿಸುವ ಸರಳ ಆದರೆ ಗಾಢ ಅರ್ಥವನ್ನು ಬಿಂಬಿಸುವ ಬರಹ ದನ್ಯವಾದಗಳು.
In reply to ಉ: 00324.'ಹೋಮ್ ಸ್ವೀಟ್ ಹೋಮ್..!' by H A Patil 1
ಉ: 00324.'ಹೋಮ್ ಸ್ವೀಟ್ ಹೋಮ್..!'
ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ನಿಮ್ಮಮಾತು ನಿಜ - ಮನೆಯೆಂಬ ಮಾಯಾಮೋಹಿನಿಯ ಜಾಲದಿಂದ ದೂರವಿರಲು ಯಾರಿಗೂ ಸಾಧ್ಯವಿಲ್ಲ. ಕ್ಷಣಿಕವಾಗಿ ಬೆರಗಾಗಿಸುವ ಅದ್ದೂರಿತನವೂ ಕ್ರಮೇಣ ಪೇಲವವೆನಿಸತೊಡಗಿ ಪರಿಚಿತ ಪರಿಸರಕ್ಕೆ ಹಾತೊರೆಯುವ ನಡುವಳಿಕೆಯ ಮೂಲ, ಆ ಮನೆಯ ಮೇಲಿನ ವ್ಯಾಮೋಹವೆ ತಾನೆ?
ಉ: 00324.'ಹೋಮ್ ಸ್ವೀಟ್ ಹೋಮ್..!'
ಆತ್ಮೀಯ ನಾಗೇಶ ಮೈಸೂರು ರವರಿಗೆ, ನಮಸ್ಕಾರ ಸರ್, ಮನೆಯಂಬ ಮನೆಯ ಸಂವೇದನೆ ಎಲ್ಲಿದ್ದರೂ, ಹೇಗಿದ್ದರೂ, ಸೆಳೆತವಿದ್ದೇ ಇರುತ್ತದೆ. ಅರಮನೆಯಲ್ಲಿದ್ದರೂ, ಅದು ಕ್ಷಣಿಕ. ಕೃತಕವಾದ ಬದುಕು ಹೊರಗಿನ ಹೊಳಪಿನದು, ಅಂತರಂಗದ ಆತ್ಮ ಮನೆ. ಮನೆಯಂತಹ ಸೌಭಾಗ್ಯ, ಎಲ್ಲರಿಗೂ ದಕ್ಕುವುದಿಲ್ಲ. ಅದಕ್ಕೆ ಹೇಳಬೆಕೆನಿಸುತ್ತದೆ, ' ಎ ಹೌಸ್ ಕಾಂಟ್ ಬಿಕಮ್ ಎ ಹೋಮ್', ಅಂಟಿಲ್ ಇಟ್ ಹ್ಯಾಸ್ ಸೋಲ್' , ಏನಿದ್ದರೂ, ಮನೆಯಂತಹ ಮತ್ತೊಂದಿಲ್ಲ. ಅದಕ್ಕೆ ಮೈಸೂರು ಅನಂತಸ್ವಾಮಿಯವರ ಸಾಲು, 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ಅದುವೇ ಕೋಟಿ ರೂಪಾಯಿ', ಒಂದೊಂದು ರೂಪಾಯಿ ಇಲ್ಲಿ ನಮ್ಮದೇ. ಹೊರಗೆ ಹಾಗಲ್ಲವಲ್ಲ. ಸುಂದರ ಕವನಕ್ಕೆ ಧನ್ಯವಾದಗಳು ಸರ್,
In reply to ಉ: 00324.'ಹೋಮ್ ಸ್ವೀಟ್ ಹೋಮ್..!' by lpitnal
ಉ: 00324.'ಹೋಮ್ ಸ್ವೀಟ್ ಹೋಮ್..!'
ಇಟ್ನಾಳರೆ ನಮಸ್ಕಾರ ಮತ್ತು ಧನ್ಯವಾದಗಳು. ನಿಮ್ಮ ಅನುಭವದ ಮಾತು ಮನೆಯೆಂಬ ನಿರ್ಜೀವ ಅಸ್ತಿತ್ವಕ್ಕೆ ಜೀವಂತಿಕೆ ತುಂಬಿ ಅಚರದಿಂದ ಚರದ ಸ್ತರಕ್ಕೇರಿಸಿಬಿಟ್ಟಿತು. ಮನೆಯಲಾವರಿಸಿರುವ ಅದೃಶ್ಯಾತ್ಮದ ಅಸ್ತಿತ್ವವೆ ಬಹುಶಃ ನಮ್ಮನ್ನಲ್ಲೆಳೆದುಕೊಳ್ಳುವ ಕೊಂಡಿಯೊ ಏನೊ ?
ಉ: 00324.'ಹೋಮ್ ಸ್ವೀಟ್ ಹೋಮ್..!'
ಹೋಮ್ ಸಿಕ್ ಆದವರಿಗೆ ಅದು ಸ್ವೀಟಾಗಿರುತ್ತದೆ, ಹೋಮು ಸಿಕ್ಕು ಸಿಕ್ಕಾದರೆ, ಏಕಾದರೂ ಸಿಕ್ಕಿಬಿದ್ದೆನೋ ಎಂತಲೂ ಅನ್ನಿಸುತ್ತದೆ. ಆದರೂ ಹೋಮು ಹೋಮೇ!!
In reply to ಉ: 00324.'ಹೋಮ್ ಸ್ವೀಟ್ ಹೋಮ್..!' by kavinagaraj
ಉ: 00324.'ಹೋಮ್ ಸ್ವೀಟ್ ಹೋಮ್..!'
ಎಷ್ಟು ಅರ್ಥಗರ್ಭಿತ ಮಾತು ಕವಿಗಳೆ! ಎಷ್ಟೆ ಸಿಕ್ಕು ಸಿಕ್ಕಾಗಿದ್ದರು, ಬಿಟ್ಟೇ ಹೋಗುವೆನೆಂದು ಹೊರಟರು ಆವೇಶವಿಳಿದಂತೆ ಮತ್ತೆ ಬರಸೆಳೆದು ಮಡಿಲಿಗೆ ಚೆಲ್ಲಿಕೊಳ್ಳುವ ಶಕ್ತಿ ಇರುವುದು ಈ 'ಮನೆ'ಗೆ ಮಾತ್ರ. ಯಾಕೆಂದರೆ ಎಲ್ಲಾ ಮುಗಿದ ಮೇಲೆ ಮನ ತುಡಿಯುವುದು ಮನೆಯತ್ತ, ಅದರೊಡನೆ ಮಿಳಿತವಾಗಿರುವ ಭಾವ ಬಂಧಗಳ ಸುತ್ತ.. 'ಮನ'ಸಿನ ಭಾಗವೂ 'ಮನೆ'ಯ ಹೆಸರಲ್ಲಿರುವುದು ಅದೇ ಕಾರಣಕ್ಕಿರಬಹುದು !
ಮನೆಯ ಹೆಸರಲ್ಲೆ
ಮನಸಿಗೊಂದು ನೆಲೆ
ಅಲೆದಾಟ ತನುವಲ್ಲೆ
ಮರಳಿ ಮನ ಗೂಡಲ್ಲೆ ||
ಧನ್ಯವಾದಗಳು..:-)