ಲಿಸ್ಟ್ ಮ್ಯಾನೇಜರು! (ಲಘು ಹಾಸ್ಯ)

ಲಿಸ್ಟ್ ಮ್ಯಾನೇಜರು! (ಲಘು ಹಾಸ್ಯ)

ನಮ್ಮ ಬಹುತೇಕ ಜನರ ಬದುಕಿನಲ್ಲಿ ಈ ಲಿಸ್ಟ್ ಮ್ಯಾನೇಜರುಗಳ ಪಾತ್ರ ಅನಿವಾರ್ಯವೆಂದು ಕಾಣುತ್ತದೆ. ಯಾಕೆಂದರೆ, ಮನೆವಾರ್ತೆಯ ಜವಾಬ್ದಾರಿ ಹೊತ್ತವರು ಅದನ್ನು ನಿಭಾಯಿಸಲು ಬೇಕಾದ ಸರಕಿನ ಪಟ್ಟಿ ತಯಾರಿಸುವುದು ನಮ್ಮಲ್ಲಿ ಎಂದಿನಿಂದಲೊ ನಡೆದುಬಂದ ಅಭ್ಯಾಸ. ಅದರಲ್ಲು ಗಂಡನೆಂಬ ಪ್ರಾಣಿಯ ನೆನಪಿನ ಶಕ್ತಿಯ ಮೇಲೆ ಅಪಾರ ಅನುಮಾನ, ಅಪನಂಬಿಕೆಗಳಿರುವ ಸತೀ ಮಣಿಗಳಿಗಂತು ಇದು ತುರ್ತಾದ ಅಗತ್ಯ. ಈಗಿನ ಆಧುನಿಕ ಯುಗದಲ್ಲಿ ಇಬ್ಬರೂ ಕೆಲಸ ಮಾಡಿಕೊಂಡು, ಇಬ್ಬರು ಹೊಣೆಗಾರಿಕೆ ಹಂಚಿಕೊಳ್ಳುವುದು ಸಹಜವಾದ ಕಾರಣ ಇದರ ಹೊಣೆ ಒಬ್ಬರ ಪಾಲಿಗೆ ಹೊರಿಸಲ್ಪಡದಿದ್ದರು, ಇಬ್ಬರಲ್ಲಿ ಯಾರಿಗೆ ಅದಕ್ಕೆ ಬೇಕಾದ ಚಾತುರ್ಯ, ಚತುರತೆ ಇರುವುದೊ ಅವರ ಪಾಲಿಗೆ ವಹಿಸಲ್ಪಡುವುದು ಅಪರೂಪವೇನಲ್ಲ. ಹೀಗಾಗಿ ತರಕಾರಿ, ದಿನಸಿಯಿಂದ ಹಿಡಿದು ಮಿಕ್ಕೆಲ್ಲಾ ತರದ ಕೆಲಸಗಳಿಗು ವಾರದ ಕೊನೆಯ 'ಚೆಕ್ ಲಿಸ್ಟ್' ಹಾಕಿಕೊಂಡು ಅಲೆದಾಡುವ ಮಂದಿ ಆಗಲೂ ಇದ್ದಂತೆ ಈಗಲೂ ಇದ್ದಾರೆ - ಕೈಲಿರುವ ಟ್ಯಾಬು ಮೊಬೈಲುಗಳೆ ಚೆಕ್ ಲಿಸ್ಟುಗಳಾಗುವ ಅಲ್ಪ ವ್ಯತ್ಯಾಸ ಬಿಟ್ಟರೆ. 

ತುಸು ಹಳತಿನ ಕಾಲದ ಗೃಹಿಣಿಯರ ಪೇಪರ್ ಚೆಕ್ ಲಿಸ್ಟ್ ಮ್ಯಾನೇಜ್ಮೆಂಟು - ಸಾಧಾರಣ ತಿಂಗಳಿಗೊಮ್ಮೆಯ ವ್ಯವಹಾರ. ತದನಂತರದ್ದು ಏನಿದ್ದರು ದೈನಂದಿನ ಸಣ್ಣಪುಟ್ಟ ಸರಕುಗಳ ನಿಭಾವಣೆಯಷ್ಟೆ. ಆದರೆ ಎಲ್ಲರೂ ನಿಷ್ಠೆಯಿಂದ ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ ತಮ್ಮ ತಿಂಗಳ ಲಿಸ್ಟ್ ತಯಾರಿಸುವುದಿಲ್ಲ. ಕೆಲವರಂತು ಗಳಿಗೆಗೊಮ್ಮೆ, ಗಂಟೆಗೊಮ್ಮೆ ಮನಸಿಗೆ ಬಂದದ್ದನ್ನು ಬರೆದು ಗಂಡನೆಂಬ ಪ್ರಾಣಿ ಯಾವಾಗ ಹೊರಗೆ ಹೊರಟೀತೊ? ಎಂದು ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ - ಲಿಸ್ಟನ್ನು ಕೈಗಿತ್ತು ಕೈ ತೊಳೆದುಕೊಳ್ಳಲು...! ಪಾಪ ವಾಕಿಂಗೊ, ವಾಯು ವಿಹಾರವೊ, ಗೆಳೆಯರ ಜತೆ ಭೇಟಿಯೊ ಎಂದು ಹೊರಟವರಿಗೆ ಅವರ ಸ್ವಾತಂತ್ರವನ್ನು ನಿರ್ಬಂಧಿಸಿ, ಯೋಜನೆಯೆಲ್ಲವನ್ನು ಬುಡಮೇಲಾಗಿಸುವ ಈ ಕಿರು ಪಟ್ಟಿಗಳೆಂದರೆ ವಿಪರೀತ ಕೋಪ, ಅಲರ್ಜಿ; ಒಂದೆ ಬಾರಿಗೆ ಕೊಟ್ಟು ಮುಗಿಸಬಾರದೆ ಎನ್ನುವ ರೋಷವೆ ಅದರರ್ಧದಷ್ಟಿರುತ್ತದೆ! ಸಾಲದ್ದಕ್ಕೆ ನಡುದಾರಿಯಲ್ಲಿ ಸೇರ್ಪಡೆಯಾಗುವ ಮತ್ತಷ್ಟು ಐಟಂಮುಗಳು - ಹಾಳು ಮೊಬೈಲು ದೆಸೆಯಿಂದಾಗಿ...! ಅಷ್ಟಾದರೂ ಮನೆಗೆ ಬಂದ ಮೇಲೆ ಮರೆತುಬಿಟ್ಟ ಮತ್ತಷ್ಟು ಸಾಮಾನುಗಳ ಪಟ್ಟಿಯ ಗೊಣಗಾಟ.. ಹೀಗಾಗಿ ಈ ಲಿಸ್ಟ್ ಮ್ಯಾನೇಜರುಗಳ ಉದ್ದೇಶವೆ ತಮ್ಮ ಮನಶ್ಯಾಂತಿ, ಯೋಜನಾಬದ್ದ ಕ್ರಮವನ್ನು ಹಾಳುಗೆಡವಿ ಅಲ್ಲೊಲ್ಲಕಲ್ಲೊಲವಾಗಿಸುವುದೆ ಇರಬೇಕೆಂಬ ಗುಮಾನಿ ಮೂಡಿಸಿ ಅವರ ಮೇಲಿನ ವಿಪರೀತ, ಅಘೋಷಿತ ರೋಷವಾಗಿ ಬದಲಾಗುವುದು ಸಹಜವೆ. ಆದರೆ ಅನ್ನದೆ ಅನುಭವಿಸಬೇಕಾದ ಅನಿವಾರ್ಯಗಳಲ್ಲಿ ಇದೂ ಒಂದಾಗಿಬಿಡುತ್ತದೆ - ಸುಮ್ಮನೆ ಪರಸ್ಪರ ದೋಷಾರೋಪಣೆ, ಚರ್ಚೆಗಿಳಿಯುವ ಮನಸಾಗದೆ. ಅಂತಹ ಲಿಸ್ಟ್ ಮ್ಯಾನೇಜರಿಕೆಯೊಂದರ 'ಸ್ನಾಪ್ ಶಾಟ್' ಈ ಕವನ. ನಿಮ್ಮ ಮನೆಯಲ್ಲೂ ಇಂತಹ ಲಿಸ್ಟ್ ಮ್ಯಾನೇಜರುಗಳಿರಬಹುದು - ಓದಿ ಆನಂದಿಸುವುದು ಮಾತ್ರವಲ್ಲದೆ, ಅವರಿಗೆ ಕೇಳಿಸಿಯೂ ಆನಂದಿಸಬಹುದು - ಸೂಕ್ತ ರಕ್ಷಾಕವಚದ ಸುರಕ್ಷೆಯೊಡನೆ :-)

ಲಿಸ್ಟ್ ಮ್ಯಾನೇಜರು!  
___________________

ಮನೆಯಲೊಂದು ನಿತ್ಯ ಪ್ರೆಷರ್ರು ಕುಕ್ಕರು
ಸರ್ವದಾ ಸಿದ್ದ ಲಿಸ್ಟು ಮ್ಯಾನೇಜರು
ಗಳಿಗೆಗೊಂದು ಗಂಡಾಂತರ ಸರಕು
ನೆನಪಾದಂತೆಲ್ಲ ಉರುಳಿ ಧಿಮಾಕು ||

ವಾಕಿಂಗೊ ವಾಯು ಸೇವನೆಗೊ
ಪಾರ್ಕಿಗೊ ಸಮಸ್ಕರ ಜತೆ ಭೇಟಿಗೊ
ಸುಳಿವು ಸಿಕ್ಕರೆ ಸಾಕು ಹೊರಡೊ ಸಿದ್ದತೆ
ಸದ್ದಿಲ್ಲದೆ ಉಸುರುತ ಸಾಮಾನಿನ ಕಂತೆ ||

ಮಾತ ಬಿನ್ನಾಣ, ಆದರೆ ತನ್ನಿ ಅನ್ನೋಣ
ಬೆಣ್ಣೆಯ ಕೂದಲು, ಬೀಳದಂತೆ ಹೆಣ
ಮೊದಲ ಸಾಲಲ್ಲುದುರಿ ಒಂದೆರಡು
ಕೇಳಿಯೂ ಕೇಳಿಸದಂತೆ ಜತೆಗ್ಹನ್ನೆರಡು ||

ಹಾಳಾಗಲಿ ಅಸ್ತವ್ಯಸ್ತ ಪಥ ಯೋಜನೆ
ಗತವಾಗಿ ಸಿದ್ದತೆ ಕಾರ್ಯಗತವಾಗದ ಬವಣೆ
ಸರಕಂಗಡಿ ಬೀದಿ ಸೇವಿಸಲೆಲ್ಲಿ ಮೋದ
ಹಾಳು ಪೆಟ್ರೋಲು ಇಂಗಾಲದಿಬ್ಬನಿ ಶೋಧ ||

ಹಣೆಬರಹ, ಗೊಣಗಿ ಸುಖವಿಲ್ಲ - ಅನುಭವ
ಕೈ ಚೀಲ ಹಿಡಿದು ನಡೆವಲ್ಲೆ ಕುಸಿದ ಭಾವ
ಹೇಗೊ ಎಂತೊ ಮುಗಿಸಿ ಒಪ್ಪಿಸಿರೆ ಚೀಲ
ಹೇಳಲೆ ಮರೆತೆ ಎಂದು ಮತ್ತೆರಡರ ಬಾಲ! ||

-------------------------------------------------------------------------------------
ನಾಗೇಶ ಮೈಸೂರು,
 

Comments

Submitted by ಗಣೇಶ Sun, 07/19/2015 - 23:39

ಬೆಂಗಳೂರಲ್ಲಿ ಈಗ ಬಿಟ್ಟು ಬಿಟ್ಟು ಮಳೆ ಬರುತ್ತಿದೆ. ರವಿವಾರದ ರಜೆ ಬೇರೆ. ಎಲ್ಲೂ ಹೋಗಲು ಮನಸ್ಸಿಲ್ಲದೇ ಟಿ.ವಿ ಎದುರು ಹಾಯಾಗಿದ್ದೆ. ವಾಕಿಂಗ್ ಹೋಗುವುದಿಲ್ಲವಾ ಎಂದು ಮನೆಯಾಕೆ ಕೇಳುವಾಗ ಅಂದಾಜಾಯಿತು..
ಕೆಲವೊಮ್ಮೆ ಆಫೀಸ್‌ಗೆ ಮೀಟಿಂಗ್‌ನಲ್ಲಿರುವಾಗಲೇ ಫೋನ್ ಬರುವುದು- ನಿಮ್ಮ ಇಷ್ಟದ ಪಲಾವ್ ಮಾಡಿರುವೆ..ಬರುವಾಗ...ಸಲಾಡ್‌ಗೆ ಮೊಸರು......ಲಿಸ್ಟ್...
ಲಿಸ್ಟ್ ಮ್ಯಾನೆಜರ್ ಕವನ... ಸೂಪರ್ ನಾಗೇಶರೆ.

Submitted by nageshamysore Mon, 07/20/2015 - 18:49

In reply to by ಗಣೇಶ

ಗಣೇಶ್ ಜಿ,

ನಮ್ಮ ಊರುಗಳಲ್ಲಿ ಪರವಾಗಿಲ್ಲ - ಏನೊ ಮರೆತರು ಬೈದುಕೊಂಡೆ ಹೋಗಿ ತರುವ ಸಾಧ್ಯತೆಯಾದರು ಉಂಟು. ನಾನು ಯೂರೋಪಿನಲ್ಲಿದ್ದಾಗ ಅದರ ಕಥೆ ಬೇಡ; ಎಲ್ಲ ಅಂಗಡಿಗಳು ಸಂಜೆಗೆ ಮುಚ್ಚಿಬಿಡುತ್ತಿದ್ದವು ( ಜರ್ಮನಿಯಲ್ಲಿ ಎಂಟಕ್ಕಾದರೆ, ನೆದರ್ಲ್ಯಾಂಡಿನಲ್ಲಿ ಐದಕ್ಕೆ!). ನಾನು ಆಫೀಸಿನಿಂದ ಮನೆಗೆ ಬರುವ ಹೊತ್ತಿಗೆ ತೆರೆದ ಅಂಗಡಿ ಇರುತ್ತಿದ್ದುದೆ ಅಪರೂಪ. ಹೀಗಾಗಿ ಎಲ್ಲಾ ಸಾಮಾನು ಶನಿವಾರವೆ ಖರೀದಿಸಬೇಕಿತ್ತು - ಅದೂ ಮಧ್ಯಾಹ್ನ ಒಂದೂವರೆಗೆ ಮುನ್ನವೆ. ಆ ನಂತರ ಅಂಗಡಿಗಳೆಲ್ಲ ಬಂದ್ - ಕಾನೂನಿನನುಸಾರ (ನೆದರ್ಲ್ಯಾಂಡಿನಲ್ಲಾದರೆ ಗುರುವಾರ ಸಂಜೆ ಐದರಿಂದ ಒಂಭತ್ತರ ಒಳಗೆ ಮಾತ್ರ!). ಭಾನುವಾರವೂ ತೆರೆಯುವಂತಿಲ್ಲ. ಹೀಗಾಗಿ ಏನಾದರು ಮರೆತ ಐಟಂ ನೆನಪಾದರೆ ಮೊದಲು ಬರುತ್ತಿದ್ದ ಉದ್ಗಾರ - 'ಅಯ್ಯಯ್ಯೊ'! ಎಂದೆ. ಆದರೆ ಆ ಒದ್ದಾಟದಲ್ಲೂ ಒಂದು ಸಂತಸವಿರುತ್ತಿತ್ತು ನೋಡಿ - ಯಾವ ಐಟಂ ಮರೆತಿದ್ದರು ಮತ್ತೆ ಹೋಗಿ ತರುವ ಅಗತ್ಯವಿರಲಿಲ್ಲ - ಯಾವ ಅಂಗಡಿಯೂ ತೆರೆದಿರುತ್ತಿರಲಿಲ್ಲವಲ್ಲ?

ಅಂದ ಹಾಗೆ ನಿಮ್ಮವರ ಛಾತಿ ಮೆಚ್ಚಲೇಬೇಕು - ಪಲಾವಿನ ಗಿಲಾವ್ ಹಾಕಿ ಲಿಸ್ಟ್ ರವಾನಿಸುವ ಜಾಣತನ ಕಡಿಮೆಯದೇನಲ್ಲ ಬಿಡಿ !

Submitted by H A Patil Tue, 07/21/2015 - 18:46

ನಾಗೇಶ ಮೈಸೂರು ರವರಿಗೆ ವಂದನೆಗಳು
ಲಿಸ್ಟ್‌ ಮ್ಯಾನೇಜರ್‌ ಲೇಖನ ಸೊಗಸಾಗಿದೆ ನಾನು ವೃತ್ತಿಗೆ ಸೇರಿದಂದಿನಿಂದ ನನ್ನ ಅಮ್ಮತಾನು ಹಾಸಿಗೆ ಹಿಡಿಯುವ ವರೆಗೂ ನನ್ನ ಸಂಬಳವಾಯಿತೆಂದರೆ ಒಂದು ಲಿಸ್ಟ್‌ ಕೊಡುತ್ತಿದ್ದರು ಆ ತಿಂಗಳ ರೇಶನ್‌ ನಲ್ಲಿಯೆ ಆಕೆ ಕುಟುಂಬ ಸಾಗಿಸುತ್ತಿದ್ದರು. ಒಮ್ಮೆಯೂ ಒಂದು ಸಾಮಾನನ್ನು ತರಲು ನನಗೆ ಹೇಳಲಿಲ್ಲ, ನಿಮ್ಮ ಲೇಖನ ಅದನ್ನೆಲ್ಲ ನೆನಪಿಸಿತು ಧನ್ಯವಾದಗಳು.

Submitted by nageshamysore Wed, 07/22/2015 - 03:29

In reply to by H A Patil

ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ನೀವು ಹೇಳಿರುವಂತಹ ಉತ್ತಮ ಲಿಸ್ಟ್ ಮ್ಯಾನೇಜರುಗಳು ಎಲ್ಲಾ ಕಡೆ ಸಿಗುವುದಿಲ್ಲ - ಅಪರೂಪವೆಂದೆ ಹೇಳಬೇಕು. ಬಹುಶ ಹಳೆ ಕಾಲದವರಲ್ಲಿರುತ್ತಿದ್ದ ಒಂದು ಬಗೆಯ ಸರಳ ಶಿಸ್ತು ಮತ್ತು ಪರಿಮಿತಿಗಳ ಪರಿಧಿಯಲ್ಲೆ ಬದುಕು ನಿಭಾಯಿಸುತ್ತಿದ್ದ ಛಾತಿ ಅವರಲ್ಲಿ ಈ ಬಗೆಯ ನೈಪುಣ್ಯತೆಯನ್ನು ಸಹಜವಾಗಿಯೆ ಆರೋಪಿಸುತ್ತಿತ್ತೊ ಏನೊ.. ಈಗೆಲ್ಲ ವಸ್ತು ವಿಷಯಕ್ಕಿಂತ ಅಡಂಬರ, ವೈಭೋಗಕ್ಕೆ ಹೆಚ್ಚು ಬೆಲೆ..

Submitted by kavinagaraj Wed, 07/22/2015 - 12:37

ಲಿಸ್ಟ್ ಮಹಿಮೆ ಚೆನ್ನಾಗಿದೆ. ಈ ಲಿಸ್ಟುಗಳು ಮನೆಗಷ್ಟೇ ಸೀಮಿತವಲ್ಲ. ಆಡಳಿತದಲ್ಲೂ ಇರುತ್ತದೆ. ಕಛೇರಿ ತಪಾಸಣೆ, ಅಧೀನ ಸಿಬ್ಬಂದಿ ತಪಾಸಣೆ, ತನಿಖೆ, ಇತ್ಯಾದಿಗಳಲ್ಲೂ ಯಾವುದೂ ಮರೆಯಬಾರದೆಂದು ಚೆಕ್ ಲಿಸ್ಟಿನ ನಮೂನೆಯೇ ಇರುತ್ತದೆ. ಅದನ್ನು ಸೂಕ್ತಾನುಸಾರ ಭರ್ತಿ ಮಾಡಿದರಾಯಿತು. ನಮ್ಮ ಮನೆಯಲ್ಲಂತೂ ಲಿಸ್ಟುಗಳು ಅಂಗಡಿಗೇ ನೇರವಾಗಿ ಹೋಗುತ್ತವೆ, ಅಂಗಡಿಯವನು ತಂದುಕೊಡುತ್ತಾನೆ, ಜೇಬಿಗೆ ಕೈ ಹಾಗಿ ಕೊಡುವಾಗಷ್ಟೇ ನನ್ನಿಂದ 'ಇಷ್ಟೊಂದಾ?' ಎಂಬ ಉದ್ಗಾರ ಹೊರಡುವುದು!!

Submitted by nageshamysore Wed, 07/22/2015 - 18:42

In reply to by kavinagaraj

ಆಫೀಸುಗಳಲ್ಲಿ ಅದರಲ್ಲೂ ಆಡಿಟ್ಟುಗಳಲ್ಲಿ, ಪ್ರಾಜೆಕ್ಟುಗಳಲ್ಲಿ ಚೆಕ್ ಲಿಸ್ಟುಗಳೆ ಜೀವಾಳವೆನ್ನಬಹುದು. ಅಲ್ಲಾದರೆ ಈ ಲಿಸ್ಟುಗಳು ಸಾಧಾರಣ ಒಂದು ನಿಶ್ಚಿತ ರೂಪದಲ್ಲಿರುತ್ತದೆ - ಪದೇಪದೇ ಬದಲಾಗುವ , ಏರುಪೇರಾಗುವ ಸಾಧ್ಯತೆ ಕಡಿಮೆ. ಮನೆ ಲಿಸ್ಟುಗಳದು ಹಾಗಲ್ಲ - ವೈವಿಧ್ಯಮಯವಾಗಿ ವಿವಿದಾವತಾರ ತಾಳುವುದರ ಜತೆಗೆ ಅರಿವಿಗೆ ಬರದ ಹಾಗೆ ಕೊನೆಯಲ್ಲಿ (ಬಿಲ್ ಬಂದಾಗ) ಬೆಚ್ಚಿ ಬೀಳಿಸುವುದು ಅದರ ವಿಶೇಷ ಗುಣ. ಆ ಲಿಸ್ಟುಗಳು ವ್ಯವಸ್ಥಿತವಾಗಿರದಿದ್ದರೆ ಇನ್ನೂ ಹೆಚ್ಚಿನ ತ್ರಾಸ..!

Submitted by nageshamysore Fri, 07/24/2015 - 19:01

In reply to by santhosha shastry

ಶಾಸ್ತ್ರಿಗಳೆ ನಿಮ್ಮ ಪ್ರತಿಕ್ರಿಯೆಗೆ ಮತ್ತು ಮುನಿಸಿಕೊಳ್ಳದೆ ಪದೇಪದೇ ಅಂಗಡಿಗೆ ಎಡತಾಕಿ ನಿಭಾಯಿಸುವ ಸಹನಾಶೀಲತೆಗೆ ನಮಸ್ಕಾರಗಳು. ಆ ನಿಮ್ಮ ಅನುಭವ ವಾಗ್ಯುದ್ಧ, ಜಗಳಾಟದ ಮಟ್ಟಕ್ಕೆ ಹೋಗದೆ ಹಾಗೆಯೆ ಸುಖಕರವಾಗಿ ಬರಿ ಲಿಸ್ಟಿನ ಮಟ್ಟದಲ್ಲೆ ಮುಂದುವರೆಯುತ್ತಿರುವುದನ್ನು ನೆನೆದರೆ - ಆ ನಿಭಾವಣೆ ಚಾತುರ್ಯಕ್ಕೆ ನಿಮ್ಮನ್ನು ಅಭಿನಂದಿಸಲೆಬೇಕು ಬಿಡಿ !