" ನದಿ ಮತ್ತು ಮರುಳ "

" ನದಿ ಮತ್ತು ಮರುಳ "

ಚಿತ್ರ

 

ದಟ್ಟ ಕಾನನದ ವಿಶಾಲ ಹರವು

ಗಗನಚುಂಬಿ ವೃಕ್ಷಗಳ ಗಿರಿ ಶಿಖರಗಳು

ಭಯ ಹುಟ್ಟಿಸುವ ಆಳ ಪ್ರಪಾತದ

ಕಣಿವೆಗಳು ಮೇಲೆ ವಿಸ್ತಾರಕೆ

ಹೊದಿಸಿದಂತಿರುವ ನೀಲಾಕಾಶ

ಇನ್ನೂ ನಾಗರಿಕ ಪ್ರಪಂಚಕ್ಕೆ

ತೆರೆದು ಕೊಂಡಿಲ್ಲದ ‘ನಿಗೂಢ ಪ್ರಪಂಚ’

 

ದಟ್ಟ ಕಾನನದ ಅಗೋಚರ ನೆಲೆಯಿಂದ

ಸ್ವಚ್ಛಂದದಲಿ ಬಾಗುತ್ತ ಬಳಕುತ್ತ

ಹರಿದು ಬರುತ್ತಿದೆಯೊಂದು ನದಿ

ಅವನೊಬ್ಬ ಮರುಳ ಬರುತ್ತಿದ್ದಾನಲ್ಲಿಗೆ

ಮನಕೆ ತೋಚಿದಾಗ ಅವನದು

ನದಿಯೊಡನೆ ಆತ್ಮೀಯ ಸಲ್ಲಾಪ

ನದಿಯನ್ನು ಪ್ರಶ್ನಿಸುತ್ತಾನೆ ಎಂದಿನಿಂದ

ಹರಿಯುತ್ತಿರುವೆ ?ಅವಳ ಕೊಂಕು ಉತ್ತರ

ನನಗೇನು ಗೊತ್ತು !

ಇರಬೇಕು ಕೋಟ್ಯಾಂತರ ವರ್ಷಗಳು

 

ಮತ್ತೆ ಕೇಳುತ್ತಾನೆ ಏನು ನೀರೆ

ಯಾರು ನೀನು ? ನಿನ್ನ ಹುಟ್ಟೂರು ಯಾವುದು

ಎಲ್ಲಿಗೆ ಹೊರಟಿರುವೆ ?

ಕಿಲ ಕಿಲ ನಿನಾದಗೈಯುತ್ತ  ಬಿಂಕ

ಬಿಗುಮಾನ ಬಡಿವಾರ ತೋರುತ್ತ

ಉತ್ತ ರಿಸದೆ ಹರಿದು ಹೋಗುತ್ತಿದ್ದಾಳೆ ನದಿ

ಸಿಟ್ಟಿಗೆದ್ದ ಮರುಳ ಗೊಣಗಿಕೊಂಡ

ಎಲಾ ಹೆಣ್ಣೆ ಎಷ್ಟು ಸೊಕ್ಕು ನಿನಗೆ !

ಕನಲಿದ ಆಕೆ ಉತ್ತರಿಸುತ್ತಾಳೆ ಅದೆಲ್ಲ ನಿನಗೇಕೆ?

 

ಅವರಿಬ್ಬರದು ನಿರಂತರ ಭೇಟಿ ಒಮ್ಮೊಮ್ಮೆ ಆತ

ಬರದೆ ಇದ್ದಾಗ ಗೊಣಗಿಕೊಳ್ಳುತ್ತಾಳೆ

ಮನದೊಳಗೆ ಯಾಕೆ ಮರೂಳ ಬರಲಿಲ್ಲ

ಅವರಿಬ್ಬರದು ಅಂತರಂಗ ಬೆಸೆದ ಭಾವ

ಆಗಾಗ ಬರುತ್ತಿರುತ್ತಾನೆ ನದಿಯ ಸಾನಿಧ್ಯಕ್ಕೆ

ಮಗುವಾಗುತ್ತಾನೆ ಮನದುಂಬಿ ಸಾಗಿ ಹೋಗುತ್ತಾನೆ

ಅವನೆಲ್ಲಿಯವ ಎಲ್ಲಿಂದ ಬರುತ್ತಾನೆ

ಎಲ್ಲಿಗೆ ತೆರಳುತ್ತಾನೆ ಆಗಮನದ ಉದ್ದೇಶವೇನು ?

ಬರಿ ಕುತೂಹಲ ಉತ್ತರಿಸಲಾಗದ ಪ್ರಶ್ನೆ !

 

ಶ್ರಾವಣದ ಜಡಿ  ಮಳೆ ಧೋ ! ಎಂದು

ಸುರಿಯುತಿದೆ ಅಂದೂ ಬಂದಿದ್ದಾನೆ ಎಂದಿನಂತೆ

ನದಿ ಜೋರಾಗಿ ರಭಸದಿಂದ

ಹರಿಯುತ್ತಿದ್ದಾಳೆ ದಿಟ್ಟಿಸುತ್ತಿದ್ದಾನೆ ಹರಿವ

ನೀರೆಯನ್ನ ಆಕೆಯ ಹರಿವ ರಭಸಕ್ಕೆ ನಿಂತಿರುವ

ಬೆಟ್ಟವೂ ಸರದಿ ಹೋಗುತ್ತಿರುವ ಭಾವ

ಮುನಿದು ಚಂಡಿಯಾಗಿರುವ ಆಕೆ

ಎದುರಾದುದೆಲ್ಲವನೂ  ನುಂಗುತ್ತ

ಅರಗಿಸಿಕೊಳ್ಳುತ್ತ ಆ ದಡ ಈ ದಡ

ತಟ್ಟುತ್ತ ಕೊಚ್ಚುತ್ತ ಸಾಗಿ ಹೋಗುತ್ತಿದ್ದಾಳೆ

 

ಬೆರಗಿನಲಿ ನೋಡುತಲಿರುವ ಮರುಳನನು 

ಕರೆಯುತ್ತಾಳೆ ಬಾ ! ನನ್ನೊಳೊಂದಾಗು

ಆಕೆಯ ಸ್ವಚ್ಛಂದಕೆ ಹರಿವ ರಭಸಕ್ಕೆ ಬೆಚ್ಚಿ

ನುಡಿಯುತ್ತಾನೆ ನಿನ್ನೊಳಗೆ ಧುಮುಕಿದರೆ

ಕರಗಿ ನೀರಾಗಿ ಬಿಡುತ್ತೇನೆ ! ಕರಗಿದರೆ

ಏನಾಯ್ತು ? ಕರಗುವುದು

ನನ್ನೊಳೊಂದಾಗುವುದು ಏಕತೆಯ ಸಂಕೇತ !

ಸುಮ್ಮನೆ ಅಹಂ ತೊರೆದು ಬಾ ನಿನ್ನಂತಹ

ಅಗಣಿತ ಜನ ನನ್ನಲಿ ಐಕ್ಯವಾಗಿದ್ದಾರೆ

ಅವರಿಗೆ ನಾನು ಮೋಕ್ಷ ಕರುಣಿಸಿದ್ದೇನೆ ಗೊತ್ತಾ !

 

ಹೌದು ನೀನೇನೊ ಕರೆಯುತ್ತಿ ಸಂಗಮದ

ನಂತರ ಅಸ್ತಿತ್ವವಿಲ್ಲವಾಗುವ ನಿನ್ನೊಳಗೆ

ನಾನೇಕೆ ಒಂದಾಗಬೇಕು? ಸಂಗಮದ ಸಂತಸ

ನಿನಗೇನು ಗೊತ್ತು ಅದೊಂದು

ನಾನೋ ನಿಮಗಿಂತ ಭಿನ್ಯ

ನೀವು ಹಳ್ಳ ಕೊಳ್ಳ ಝರಿ ತೊರೆ ನದಿಗಳೆಲ್ಲ

ಸಂಗಮಿಸಿ ಒಂದಾಗಿ ಬಿಡುತ್ತೀರಿ ನೀವು ಸಮಾನರು

ನಾನೋ ನಿಮಗಿಂತ ಭಿನ್ನ

ಸ್ವಂತಿಕೆ ಬಿಟ್ಟು ಒಂದಾಗುವುದರಲ್ಲಿ ಅರ್ಥವಿಲ್ಲ

ಆ ಕ್ಷಣಕೆ ನಾ ಕಣ್ಮರೆಯಾದರೂ  ಮತ್ತೆ

ಮತ್ತೆ ಪಡೆಯಬೇಕು ಮೂಲ ಜನ್ಮ

 

ಸುರಿವ ಮಳೆ ಹನಿಗಳಿಗೆ ಹರಿವ ನದಿ

ಎಂದೂ ವಿಚಲಿತವಾಗುವುದಿಲ್ಲ ನೀರ ಮೇಲೆ  

ತರಂಗಗಳ ಮೂಡಿಸುವುದಿಲ್ಲ

ಹಾಗೆಯೆ ಮನ ಕೂಡ ಹರಿವ ನದಿಯಾಗಬೇಕು

ಶಾಂತತೆ ಅದೊಂದು ಘನಘೋರ ಆಳ

ಕಳೆದು ಹೋಗುವ ಭಯ  ಆ ಭಯ

ನೀಗುವಿಕೆಯೆ ಓಟ ನದಿಯ ರಭಸ ಹರಿಯುವಿಕೆ

ಕೊಚ್ಚಿ ಹೋಗುವ ಹುಮ್ಮಸು ಓಡುವ ಆಟ

ನೋಡುವ ನೋಟ ಬರಿ ಸ್ಥಿರವಲ್ಲ ಚರವಲ್ಲ

ಎಲ್ಲವೂ ಅಚರಾಚರ !

 

ಪ್ರಶಾಂತ ಜಲಸಾಗರ ಅರಳುವ ಕೆಂದಾವರೆ

ನೀರ ಕನ್ನಡಿಯಲ್ಲಿ ನಭದ ಬಿಂಬ

ತೇಲುವ ಮೋಡಗಳು ಹಾರುವ ಬಾನಾಡಿಗಳು

ನಿಂತ ನೀರಿನ ಆಳದ ನಿಗೂಢತೆ

ಹರಿವ ನೀರಿಗೋ ಉದ್ವೇಗ ಅಪಾರ ಸೆಳವು

ಸುಳಿ ಒಳಸುಳಿ ಚಕ್ರಸುಳಿ ಮುಳುಗಿ

ಕರಗುವ ತವಕ ಆಳದ ಮೂಲ ಅರಿವಾಸೆ

ದಡದಗುಂಟ ಅಲೆದು ಹೋಗುವ ಆಶೆ

 

ಕಾಡುವ ಒಂದು ಸಂಶಯ

ಕತ್ತಲಲಿ ನದಿ ಹರಿಯುತ್ತಾ ಓಡುತ್ತಾ

ಮಲಗುತ್ತಾ ವಿಶ್ರಮಿಸುತ್ತಾ

ಹರಿವ ನದಿ ಒಂದು ಕುತೂಹಲ

ಹೊಯಿಗೆಯನು ತಂದು ದಡಕ್ಕೆ ಸುರಿಯುತ್ತ

ಒಡಲೊಳಗಿನ ಕಲ್ಲುಗಳ

ಹೊಳಪು ಗೊಳಿಸುತ್ತ ಬಿದಿರು ಮೆಳೆಗಳ

ಸವರಿ ಗಾಯ ಮಾಡಿಕೊಳ್ಳುತ್ತ

ಹರಿವ ರಭಸದಲಿ ಹಕ್ಕಿ ಗೂಡುಗಳ

ಸ್ವಾಹಾ ಮಾಡುತ್ತ ಅರ್ಥವಾಗದ

ವಿಚಿತ್ರ ಮನಸ್ಥಿತಿ ಈ ನದಿಯದು !

 

ಮರುಳನ ಒಂದು ಅನಿಸಿಕೆ ಇದು

ಇದೊಂದು ಹುಚ್ಚು ನದಿ ಇದಕೊಂದು ಭ್ರಮೆ

ಕಡಲು ತನ್ನ ಮಿಲನಕ್ಕಾಗಿ

ಹಾತೊರೆಯುತ್ತಿದೆಯೆಂದು ಕಡಲ

ಲಂಪಟತನ ಇದಕೆ ತಿಳಿದಿಲ್ಲ ಈ ನದಿಯನ್ನು

ಕಡಲು ತನ್ನೊಳಗೆ ಸುಲಭವಾಗಿ

ಬಿಟ್ಟು ಕೊಳ್ಳುವುದಿಲ್ಲ ಬಹು ವಿಸ್ತಾರಕೆ ಹರಡಿ

ಹಿನ್ನೀರಾಗಿ ಯೋಜನಗಳ ದೂರ

ನಿಂತು ಕಾಯಬೇಕು ಆತನ ಕೃಪಾ ಕಟಾಕ್ಷಕ್ಕೆ

ನಿಧಾನಕ್ಕೆ  ಅವಳ ಬಣ್ಣಗೆಡಿಸುತ್ತ  ರಭಸ

ಸೊಕ್ಕು ಅಹಂ ಎಲ್ಲವನು ಕರಗಿಸುತ್ತ

ಸ್ವಲ್ಪ ಸ್ವಲ್ಪವೆ ಒಳಗೊಳ್ಳುತ್ತ

ಆವರಿಸಿಕೊಂಡು ಬಿಡುತ್ತಾನೆ ಮತ್ತೆ ಮೂಲ

ನೆಲೆಗೆ ನದಿ ಮರಳದಂತೆ

ಈ ದೀನ ಸ್ಥಿತಿ ಬೇಕಿತ್ತಾ ನಿನಗೆ ?

ಹರಿವ ನದಿಗೆ ಮರಳನ ಮರಳು ಪ್ರಶ್ನೆ

               *

ಚಿತ್ರಕೃಪೆ :ಅಂತರ್ ಜಾಲ

Rating
Average: 5 (1 vote)

Comments

Submitted by lpitnal Sat, 07/11/2015 - 12:08

ಹಿರಿಯರಾದ ಹನುಮಂತ ಅನಂತ ಪಾಟೀಲ ಸರ್, ತಮ್ಮ ಪ್ರೀತಿದುಂಬಿದ ನುಡಿಗಳಿಗೆ ಹೃತ್ಪೂರ್ವಕ ಮನದ ನಮನಗಳು

Submitted by lpitnal Sat, 07/11/2015 - 12:13

In reply to by lpitnal

ಮಾತು ಅರ್ಧವಾಯಿತು. ಮರುಳನೆಂಬ ಮುಗ್ಧ ನದಿಯೊಂದಿಗೆ ಸಂವಾದಿಸುವ ಪರಿ ಅದ್ಭುತ. ನದಿಗೂ ಅವನನ್ನು ತನ್ನೊಳಗೆ ಕರೆದುಕೊಳ್ಳುವ ಹಂಬಲ. ಪ್ರಕೃತಿಯೊಂದಿಗೆ ಬೆಸೆಯುವ, ಸುಂದರ ಕವನ ಸರ್, ವಂದನೆಗಳು.ಸರ್.

Submitted by H A Patil 1 Sat, 07/11/2015 - 12:30

In reply to by lpitnal

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ಪ್ರಕೃತಿಯ ವಿಸ್ಮಯ ಮತ್ತು ಅಗಮ್ಯ ಚೇತನಗಳಾದ ಪಂಚ ಮಹಾಭೂತಗಳು ಇಂದಿಗೂ ನನ್ನನ್ನು ಕಾಡುತ್ತಿರುವಂತಹವು. ನದಿಯ ಹುಟ್ಟು ಹರಿವು ಮತ್ತು ಅದರ ಪಾತ್ರಗಳು ನನ್ನನ್ನು ಬೆರಗು ಗೊಳಿಸಿವೆ ಅದರ ಫಲವೆ ನದಿಯೊಂದಿಗಿನ ಈ ಮಾತುಕತೆ ಪ್ರತಿಕ್ರಿಯೆಗೆ ದನ್ಯವಾದಗಳು

Submitted by nageshamysore Sat, 07/11/2015 - 13:55

ಪಾಟೀಲರೆ ನಮಸ್ಕಾರ , ನಿಸರ್ಗದ ನಿಗೂಢತೆಯನ್ನು ವಿಸ್ಮಯದಷ್ಟೆ ಧಾರ್ಷ್ಟ್ಯದಿಂದ ದಿಟ್ಟಿಸುತ್ತ, ಆಲಂಗಿಸುತ್ತ, ಅವಲಂಬಿಸುತ್ತ ಸಂವಾದಕಿಳಿವ ಪರಿ ಅದ್ಭುತ. ನಿಸರ್ಗದ ಅಪರಿಮಿತ ಕಸುವನ್ನು ಮೀರಿ ನಿಲ್ಲುವ ಮನುಜ ಚೇತನದ ಬಯಕೆ ಕವನದ ಉದ್ದಕ್ಕೂ ವ್ಯಕ್ತವಾಗಿದೆ. ಪ್ರಕೃತಿಯನ್ನಧಿಗಮಿಸುವುದು ಅಸಾಧ್ಯವೆ ಆದರು, ಆ ಪ್ರಕೃತಿಯನ್ನು ಮೀರಿಸುವ ಮಹಾನ್ ಪ್ರಕೃತಿ ನಿಸರ್ಗದಲ್ಲೆ ಅಂತರ್ಗತವಾಗಿರುವ ಸೋಜಿಗ ಮರಕ್ಕೆ ಮೀರಿದ ಮರ ಇದ್ದೆ ಇರುತ್ತದೆಯೆನ್ನುವುದರ ದ್ಯೋತಕವೂ ಹೌದೇನೊ (ನದಿಯನ್ನಧಿಗಮಿಸೊ ಸಾಗರದಂತೆ):-)

Submitted by H A Patil 1 Sat, 07/11/2015 - 20:50

In reply to by nageshamysore

ನಾಗೇಶ ಮೈಸೂರುರವರಿಗೆ ವಂದನೆಗಳು
ಕವನವನ್ನು ನೀವು ಅರ್ಥೈಸಿದ ಮತ್ತು ಪ್ರತಿಕ್ರಿಯಿಸಿದ ರೀತಿ ಸಂತಸ ನೀಡಿತು ನಿಮ್ಮ ಅಲೋಚನಾ ಕ್ರಮಕ್ಕೆ ನನ್ನ ಸಹಮತವಿದೆ ಧನ್ಯವಾದಗಳು.

Submitted by kavinagaraj Sat, 07/18/2015 - 14:35

ಭಾವಸಂಗಮದಲ್ಲಿ ಸುಖ ಸಿಕ್ಕೀತು, ಅನುಭಾವಿಗೆ!! ನದಿ ಮತ್ತು ಮರುಳರ ಸಂಭಾಷಣೆಯ ಪರಿ ಚೆನ್ನಾಗಿದೆ.

Submitted by ಗಣೇಶ Sun, 07/19/2015 - 22:20

ಪಾಟೀಲರೆ, ನದಿ/ಕವನ ಸಾಗುತ್ತಿದ್ದಂತೆ ಮರುಳನೇ ಬುದ್ಧಿವಂತ ಅನಿಸಿತು. ಕೊನೆ ಬಹಳ ಚೆನ್ನಾಗಿತ್ತು.

Submitted by H A Patil Tue, 07/21/2015 - 18:52

In reply to by ಗಣೇಶ

ಗಣೇಶ ರವರಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆ ಓದಿ ಸಂತಸವಾಯಿತು ಇತ್ತೀಚೆಗೆ ಸಂಪದಕ್ಕೆ ಅಪರೂಪವಾಗಿದ್ದೀರಿ, ನದಿ ಮತ್ತು ಮನುಷ್ಯನ ಒಡನಾಟ ಬಹಳ ಪುರಾತನವಾದುದು ಹರಿವ ನದಿ ಯಾವತ್ತಿಗೂ ಜೀವಂತಿಕೆಯ ಪ್ರತೀಕ ಆ ಭಾವನೆ ತೀವರಗೊಂಡಾಗ ಹುಟ್ಟಿದ ಕವನವಿದು ಧನ್ಯವಾದಗಳು.