ನಾನು, ಮಂಥರೆ ಮಾತನಾಡುತ್ತಿದ್ದೇನೆ....
ಪ್ರಿಯ ಓದುಗ,
ಆದಿ ಕವಿಗಳು, ಕವಿಕುಲ ತಿಲಕರು, ಧೀಮಂತರೆಲ್ಲ ರಾಮಚರಿತೆಯ ಖಳ ನಾಯಕಿಯಾಗಿ ನನ್ನನ್ನು ರೂಪಿಸಿದ ಕಥೆಯನ್ನೋದಿ ನಿಮ್ಮ ಮನದೊಳಗೆ ಮಂಥರೆಯ ಅದಾವ ರೂಪ ನೆಲೆ ನಿಂತಿದೆ ಎಂಬುದನ್ನು ನಾನು ಬಲ್ಲೆ. ಒಂದು ವಿಷಯ ತಿಳಿದುಕೊಳ್ಳಿ, ಕಥೆಗಳೆಲ್ಲ ವಾಸ್ತವವಾಗಿರುವುದಿಲ್ಲ, ಅಲ್ಲೆಲ್ಲ ತುಂಬಿರುವುದು ಕಲ್ಪನೆ, ಉತ್ಪ್ರೇಕ್ಷೆಗಳೇ ! ಇದು ಮಂಥರೆಯ ಆತ್ಮಕಥೆಯೆನ್ನುವುದಕ್ಕಿಂತಲೂ ಆತ್ಮನಿವೇದನೆ ಎನ್ನಬಹುದೇನೋ? ಈ ಕಥೆಗೆ ಮನ್ನಣೆ, ಹೊಗಳುವಿಕೆ, ಪಾರಿತೋಷಕಗಳು, ಬಹುಮಾನಗಳು ಬೇಕಿಲ್ಲ. ಈ ಕಥೆಯಲ್ಲಿ ರಾಮಚರಿತೆಯಲ್ಲಿ ನೀವು ಪ್ರೀತಿಸಿದ ಪಾತ್ರಗಳೂ ಬರಬಹುದು, ಅಲ್ಲ ಬಂದೇ ಬರುತ್ತವೆ. ಮಂಥರೆಯ ಅಂತರಂಗವನ್ನು ಅರಿತ ಮೇಲೆ ನಿಮಗವು ಒಂದಿಷ್ಟು ಮಸುಕಾಗಿ ಕಾಣಲೂ ಬಹುದು. ಪ್ರಮಾಣ ಮಾಡಿ ಹೇಳುತ್ತೇನೆ, ಈ ಮುದುಕಿ ಸತ್ಯವನ್ನೇ ಹೇಳುತ್ತಾಳೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ! ಕೊನೆಯ ಕಾಲದಲ್ಲಿ ಸುಳ್ಳನ್ನು ಹೇಳಿ ನಾನಾವ ನರಕಕ್ಕೆ ಹೋಗಬೇಕು ಹೇಳಿ? ಈಗ ಹೇಳಿ, ಎಲ್ಲಿಂದ ಪ್ರಾರಂಭಿಸೋಣ..?
ಬದುಕು ಪ್ರಾರಂಭವಾಗುವುದು ಹುಟ್ಟಿನಿಂದಲೇ ತಾನೆ? ಅಲ್ಲಿಂದಲೇ ಪ್ರಾರಂಭಿಸೋಣ. ಪ್ರತಿಯೊಬ್ಬರಿಗೂ ಅವರ ಹುಟ್ಟಿನ ಕುರಿತಂತೆ ಹೇಳುವುದು ಬಹಳಷ್ಟು ಇರುತ್ತದೆ. ಹುಟ್ಟಿಸಿದ ತಂದೆ ತಾಯಿ, ಹುಟ್ಟಿದ ವಂಶ, ಒಡಹುಟ್ಟಿದವರು, ಕುಲಗೌರವ, ಶ್ರೀಮಂತಿಕೆ ಇತ್ಯಾದಿತ್ಯಾದಿಯಾಗಿ. ಹೇಳಿಕೊಳ್ಳುವುದಕ್ಕೆ ಅದ್ಯಾವುದು ನನಗಿರಲಿಲ್ಲ. ಕಾಡಲ್ಲಿ ಅಲೆಮಾರಿಗಳಾಗಿ ಅಲೆಯುತ್ತಿದ 'ದಸ್ಯು' ಕುಲದ ಯಾವುದೋ ಗಂಡು ಹೆಣ್ಣಿನ ಮಿಲನದ ಫಲ ನಾನು. ಹೆತ್ತ ತಾಯಿ ಮಮತೆಯ ಆಗರ, ಕರುಣಾಮಯಿ, ಏನೆಲ್ಲ ಕಷ್ಟಗಳು ಬಂದರೂ ತಾನು ಹೆತ್ತ ಮಗುವನ್ನು ಸಾಕುತ್ತಾಳೆ ಎಂದೆಲ್ಲ ಕಥೆಗಳಲ್ಲಿ ಓದಿದ ನೆನಪು. ನನ್ನ ಪಾಲಿಗೆ ಅದ್ಯಾವುದು ಸಂಭವಿಸಲಿಲ್ಲ. ನವಮಾಸಗಳಲ್ಲಿ ನನ್ನನ್ನು ಹೊತ್ತ ನಾನು ಕಾಣದ ನನ್ನವ್ವೆ ಕಾಡಲ್ಲಿ ಬಿದ್ದ ತರಗೆಲೆಗಳ ಮಧ್ಯೆ ನನ್ನ ಎಸೆದು ಹೋದಳು. ಹಸಿಯ ಮಾಂಸ ಪಿಂಡಕ್ಕೆ ಮುತ್ತಿದ ಇರುವೆಗಳು. ಅಳುವುದರ ಹೊರತಾಗಿ ನನಗೇನೂ ತಿಳಿದಿರಲಿಲ್ಲ. ನನ್ನ ಕ್ಷೀಣ ದನಿಯ ಆಕ್ರಂದನ ಯಾರಿಗೆ ಕೇಳಿಸಬೇಕು ಹೇಳಿ? ಆದರೆ ಅದು ವಿಧಿಗೆ ಕೇಳಿಸಿತು!
ಕುದುರೆಗಳ ಹೇಶಾರವ, ಕಾಲಿನ ಖರಪುಟ ಸದ್ದು. ಬಲೆ ಬೀಸಿ, ಹಿಡಿಯಿರಿ, ಕೊಲ್ಲಿ ಎಂಬ ಕೂಗು. ಹೌದು, ಕೇಕಯರಾಜನ ಪರಿವಾರ ಬೇಟೆಗೆ ಬಂದಿತ್ತು. ಕುದುರೆಗಳ ಕಾಲ್ತುಳಿತಕ್ಕೆ ಈ ಮಾಂಸಪಿಂಡ ಛಿದ್ರವಾಗಿ ಹೋಗಿದ್ದರೂ ಅಚ್ಚರಿಯೇನಿರಲಿಲ್ಲ. ನಿಲ್ಲಿ, ಕೇಕಯರಾಜ ತನ್ನ ಪರಿವಾರಕ್ಕೆ ಆಜ್ಞಾಪಿಸಿದ, ಕುದುರೆಯಿಂದಿಳಿದ, ನನ್ನ ಕ್ಷೀಣ ರೋದನವನ್ನು ಕೇಳಿ ನನ್ನೆಡೆಗೆ ಬಂದ. ತರಗೆಲೆಗಳ ಸರಿಸಿರೆಂದು ಸೇವಕರಿಗೆ ಆಜ್ಞೆಯಿತ್ತ. ಕಾಣದ ಕರುಣೆಯ ಕೈಯ್ಯೊಂದು ನನ್ನನೆತ್ತಿಕೊಂಡಿತು. ಏನನಿಸಿತೋ ಏನೊ, ಬೇಟೆ ಸಾಕು ನಡೆಯಿರಿ ಅರಮನೆಗೆ ಎಂದ. ಯಾವುದೋ ಮುದುಕಿಗೆ ಈ ಪಿಂಡವನ್ನು ಸಾಕಿ ಸಲಹು ಎಂದ. ಹೆಣ್ಣಾಗಿರುವ ನನ್ನನ್ನು ಗುರುತಿಸುವುದಕ್ಕೊಂದು ಹೆಸರು ಬೇಕಲ್ಲ! ಆಕೆ ನನ್ನನ್ನು 'ಮಂಥರೆ'ಯೆಂದು ಕರೆದಳು. ನನ್ನ ಸಲುಹಿದ ಮುದುಕಿ ಅವಳ ಕೊನೆಗಾಲದಲ್ಲಿ ನನ್ನನ್ನು ಕೇಕಯ ರಾಜನ ಅಂತಃಪುರದಲ್ಲಿ ಚಾಕರಿಗೆ ಸೇರಿಸಿದಳು. ಹೀಗೆ ನಾನೂ ಅಂತಃಪುರದವಳಾದೆ.
ಅರಮನೆಯ ತೊತ್ತನ್ನ ನನ್ನ ಮೈಗೆ ಹಿಡಿಸಿತು, ನಾನು ಷೋಡಶಿಯಾದೆ. ಹೆಣ್ತನ ನನ್ನಲ್ಲೂ ಅರಳಿ ನಿಂತಿತು. ಆದರೆ ನಾನು ಎಲ್ಲ ಹೆಣ್ಣುಗಳಂತಲ್ಲ. ಅರಮನೆಯ ನನ್ನ ಓರಗೆಯ ಸೇವಕಿಯರು ರಾಣಿಯರ ಅಂತಃಪುರದಲ್ಲಿನ ಕನ್ನಡಿಗಳಲ್ಲಿ ಕದ್ದುಮುಚ್ಚಿ ತಮ್ಮ ಸ್ವರೂಪ ದರ್ಶನ ಮಾಡಿಕೊಳ್ಳುವುದು, ತುಂಬಿನಿಂತ ತಮ್ಮ ಯೌವನವನ್ನು ಎವೆಯಿಕ್ಕದೆ ನೋಡುವುದು, ಪ್ರೇಮಿಗಳ ಕುರಿತಂತೆ ಕನಸು ಕಾಣುವುದನ್ನು, ಮಾತನಾಡುವುದನ್ನು ಕೇಳಿದ್ದೆ. ಆದರೆ ನಾನು ಅವರೆಲ್ಲರಿಗಿಂತ ಭಿಮನ್ನಳಾಗಿದ್ದೆ. ಅಂತಃಪುರದ ಆಳೆತ್ತರದ ಕನ್ನಡಿಯಲ್ಲಿ ನನ್ನನ್ನು ನಾನು ನೋಡಿಕೊಳ್ಳುವುದಕ್ಕೆ ಹೆದರುತ್ತಿದ್ದೆ. ಕೆಲವೊಮ್ಮೆ ಅಂತಃಪುರದ ಎಲ್ಲ ಕನ್ನಡಿಗಳನ್ನು ಒಡೆದು ಹಾಕೋಣವೆ ಎನಿಸುತ್ತಿತ್ತು ನನಗೆ. ದೇವರು ನನಗೆ ಹೆಣ್ತನವನ್ನೇನೊ ಕೊಟ್ಟ, ಆದರೆ ರೂಪದ ವಿಷಯದಲ್ಲಿ ನನಗೆ ಅನ್ಯಾಯವೆಸಗಿದ. ನಾನು ಅಷ್ಟೊಂದು ಕುರೂಪಿಯಾಗಿದ್ದೆ, ಜತೆಯಲ್ಲಿ ನಾನು ಹುಟ್ಟಿನಂದಿನಿಂದಲೇ ಗೂನಿ ಕೂಡ!
ಕುರೂಪಿಯಾದರೇನಂತೆ, ಯೌವನಕ್ಕೆ ಕರುಣೆಯಿರಲಿಲ್ಲ. ನಾನೂ ಷೋಡಶಿಯಾದೆ. ಅದು ರೂಪವಂತರನ್ನು, ಕುರೂಪಿಗಳನ್ನು ಒಂದಿನಿತು ಭೇದವಿಲ್ಲದೆ ಆಕ್ರಮಿಸುತ್ತದೆ. ನನ್ನ ವಿಷಯದಲ್ಲೂ ಅದು ಕರುಣೆ ತೋರಲಿಲ್ಲ. ಅದು ನನ್ನನ್ನೂ ಕಾಡಿತು. ನಿಮ್ಮ ಮುಂದೆ ನಾಚಿಕೆಬಿಟ್ಟು ಹೇಳುತ್ತಿದ್ದೇನೆ, ನನ್ನ ಯೌವ್ವನಕ್ಕೆ ಕಿಚ್ಚಿಡುವುದಕ್ಕೆ ನನಗೊಬ್ಬ ಜತೆಗಾರ ಬೇಕಾಗಿತ್ತು. ನನ್ನ ಕಣ್ಣುಗಳು ಜವ್ವನಿಗರ ಮೇಲೆ ಹರಿದವು. ಒಂದಷ್ಟು ಮಂದಿಯಲ್ಲಿ ಲಜ್ಜೆಗೆಟ್ಟು ಕೇಳಿದೆ. ನನ್ನ ಕೈಹಿಡಿಯುವಿರೇನು? ನನಗೆ ಬದುಕು ಕೊಡುವಿರೇನು? ನನ್ನ ಮದುವೆಯಾಗುವಿರೇನು? ಬಂದ ಉತ್ತರ, ಅದು ಸಾಧ್ಯವಿಲ್ಲ, ಮೊದಲು ಹೋಗಿ ಕನ್ನಡಿಯಲ್ಲಿ ನಿನ್ನ ಮುಖವನ್ನು ನೋಡಿಕೋ! ರಾತ್ರಿಯ ವೇಳೆ ಅರಮನೆಯ ವ್ಯವಹಾರಗಳೆಲ್ಲ ಸ್ಥಬ್ಧಗೊಂಡ ಮೇಲೆ ಪಲ್ಲಂಗದ ಮೇಲಿನ ಅರೆ ಹೊತ್ತಿನ ಕತ್ತಲಿನಾಟಕ್ಕೆ ಬರುತ್ತಿಯೇನು? ಆಗಲೇ ಅರ್ಥೈಸಿಕೊಂಡೆ, ಓ ನೀಚ ಗಂಡಸೆ. ನಿನಗೆ, ಹೆಣ್ಣಿಗೆ ರೂಪ ಬೇಕಾಗಿರುವುದು ಬೆಳಕಿನಲ್ಲಿ ಅವರಿವರ ಮುಂದೆ ನನ್ನ ಹೆಂಡತಿ ಚೆಲುವೆಯೆಂದು ಬೀಗುವುದಕ್ಕೆ, ನಿನ್ನ ಪ್ರತಿಷ್ಠೆಗೆ, ಪ್ರದರ್ಶನಕ್ಕೆ. ನಿನ್ನ ಕಾಮದಾಟಕ್ಕೆ ಬೇಕಾದ್ದು ಹೆಣ್ಣಿನ ಮಾಂಸಲ ಸ್ಪರ್ಶ ಮಾತ್ರ! ಅಂದಿನಿಂದಲೇ ನಾನು ಗಂಡು ಜಾತಿಯನ್ನು ದ್ವೇಷಿಸಲು ಪ್ರಾರಂಭಿಸಿದೆ.
ಬಿಡಿ, ಕಳೆದು ಹೋದುದರ ಬಗೆಗೆ ಮಾತೇಕೀಗ? ನನ್ನ ಒಂಟಿತನವನ್ನು ನೀಗುವುದಕ್ಕೆ, ಕುರೂಪಿಯಾದ ನನ್ನನ್ನೂ ಪ್ರೀತಿಸುವುದಕ್ಕೆ ಜೀವವೊಂದು ಈ ಧರೆಗೆ ಇಳಿದು ಬಂತು, ಅದು ಕೇಕಯ ರಾಜನ ಪುತ್ರಿಯ ರೂಪದಲ್ಲಿ. ಆಕೆಯೇ ಕೈಕೇಯಿ, ಕೇಕಯ ರಾಜನ ಮಗಳು. ಅದಾವ ಜನ್ಮದ ಋಣಾನುಬಂಧವೋ ಕಾಣೆ. ಪುಟ್ಟ ಮಗು ಹೆತ್ತಮ್ಮನಿಗಿಂತಲೂ ಹೆಚ್ಚಾಗಿ ನನ್ನನ್ನು ಬಳಸಿಕೊಂಡಿತು. ಆಟಪಾಟಕ್ಕೆ, ನೋವಿಗೆ, ನಲಿವಿಗೆ ಎಲ್ಲದಕ್ಕೂ ಆಕೆಗೆ ಮಂಥರೆ ಅನಿವಾರ್ಯವಾದಳು. 'ನೀನೆಷ್ಟು ಚಂದವಾಗಿದ್ದಿ ಮಂಥರೆ..' ಎಂಬ ಪುಟ್ಟ ಬಾಲೆಯ ತೊದಲು ನುಡಿಗೆ ನಾನು ತಬ್ಬಿಬ್ಬಾಗಿದ್ದೆ. ಇದು ಕುಹಕವೋ, ವ್ಯಂಗವೋ, ತಮಾಶೆಯೋ ನಾನು ಗಲಿಬಿಲಿಗೊಂಡೆ. ಬಾಲೆ ಬೆಳೆದಂತೆಲ್ಲ ಮಂಥರೆಯ ಬಗೆಗಿನ ಅವಳ ಕಕ್ಕುಲತೆ ಬದಲಾಗಬಹುದು ಅಂದುಕೊಂಡಿದ್ದೆ. ಹಾಗಾಗಲಿಲ್ಲ,
ಕೈಕೆಯಿ ಮಂಥರೆಗೆ ಬದುಕಿನ ಪ್ರೀತಿಯನ್ನು ಮೊಗೆಮೊಗೆದು ಉಣಿಸಿದಳು. ಆಕೆ ಅಪ್ರತಿಮ ಸುಂದರಿ, ನಾನಾದರೊ ಕುರೂಪಿ. ಹೀಗಿದ್ದರೂ ನಮ್ಮೀರ್ವರ ಮಧ್ಯದಲ್ಲಿ ರೂಪಕುರೂಪಗಳ ಪ್ರಶ್ನೆಯೇ ಉದ್ಭವಿಸಲಿಲ್ಲ. ತಾನು ರಾಜಕುಮಾರಿ, ನಾನು ದಾಸಿ ಎಂಬ ಭಾವ ಅವಳಲ್ಲಿ ಒಂದಿನಿತು ಇರಲಿಲ್ಲ. ಆಕೆ ನನಗಿತ್ತದ್ದು ನೀರ್ವಾಜ್ಯ ಪ್ರೇಮ, ಸ್ನೇಹ. ಕೈಕೆಯಿಗೆ ಹದಿನಾರು ತುಂಬಿತು. ಬ್ರಹ್ಮ ತನ್ನಲ್ಲಿದ್ದ ಚೆಲುವನ್ನೆಲ್ಲ ಅವಳಿಗೆ ಧಾರೆಯೆರೆದು ಖಾಲಿ ಮಾಡಿಕೊಂಡನೋ ಎನ್ನುವಷ್ಟು ಚೆಲುವು ಆಕೆಯದು. ಕೆಲವೊಂದು ಸಲ ಹೆಣ್ಣಿಗೆ ಅವಳ ಚೆಲುವೇ ವೈರಿಯಾಗುತ್ತದಂತೆ. ಕೈಕೆಯಿಯ ವಿಷಯದಲ್ಲಿ ಹಾಗೆಯೇ ಆಯಿತು.
ಕೋಸಲದಿಂದ ಕೇಕಯ ಮಹಾರಾಜನಿಗೆ ದಶರಥ ಚಕ್ರವರ್ತಿಯ ಓಲೆ ಬಂತು. ನಿನ್ನ ಮಗಳು ಕೈಕೇಯಿ ಅಪ್ರತಿಮ ಸುಂದರಿಯೆಂದು ಕೇಳಿದ್ದೇನೆ. ಅವಳು ನನ್ನವಳಾಗಬೇಕು. ಅವಳನ್ನು ನನಗೆ ಧಾರೆಯೆರೆದು ಕೊಡು. ಆತ ಚಕ್ರವರ್ತಿ, ಈಗಾಗಲೆ ಎರಡು ಮದುವೆಯಾಗಿದೆ. ಮಕ್ಕಳಿಲ್ಲ ಆತನಿಗೆ. ಯಾರೊ ಸಲಹೆ ಕೊಟ್ಟರಂತೆ ಹದಿನಾರರ ಹರೆಯದವಳನ್ನು ಮದುವೆಯಾಗು, ಮಕ್ಕಳಾಗುತ್ತವೆ. ನನ್ನೊಡೆಯ ಕೇಕಯರಾಜ ಗಲಿಬಿಲಿಗೊಂಡ. ಕೋಸಲದ ಚಕ್ರವರ್ತಿಯನ್ನು ಎದುರು ಹಾಕಿಕೊಳ್ಳುವುದೇ? ಕೈಕೇಯಿಗಿನ್ನು ಹದಿನಾರು, ತನ್ನ ಬಾಳ ಸಂಗಾತಿಯಾಗುವವನ ವಿಷಯದಲ್ಲಿ ಆಕೆ ಏನು ನಿರ್ಣಯ ತೆಗೆದುಕೊಂಡಾಳು? ಮೇಲಾಗಿ ಕೋಸಲದ ವೈಭವ, ಸಿರಿಸಂಪತ್ತುಗಳ ಬಗೆಗೆ ತಿಳಿದುಕೊಂಡ ಆಕೆಗೆ ಈ ಮದುವೆ ತನ್ನ ಅದೃಷ್ಟದ ಬಾಗಿಲನ್ನು ತೆರೆಯಬಹುದು ಎಂಬ ಭ್ರಮೆಯಿತ್ತು! ಕೇಕಯ ಬಹಳಷ್ಟು ದಿನ ಉತ್ತರಿಸಲೇ ಇಲ್ಲ, ದಶರಥ ದಿಬ್ಬಣದೊಡಗೂಡಿ ಬಂದ, ಒಂದಿಷ್ಟು ಸೈನ್ಯವನ್ನು ಹಿಂದಿಟ್ಟುಕೊಂಡು. ಕೇಕಯ ತನ್ನ ಉಳಿವಿಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ತನ್ನ ಮುದ್ದಿನ ಮಗಳು ಕೈಕೇಯಿಯನ್ನು ನರೆಗೂದಲಿನ ದಶರಥ ಚಕ್ರವರ್ತಿಗೆ ಧಾರೆಯೆರೆದ. ಧಾರೆಯೆರೆದ ಜಲದಲ್ಲಿ ಹೆತ್ತವರ ಕಣ್ಣೀರು ಬಿದ್ದುದನ್ನು ಯಾರೂ ಗಮನಿಸಲೇ ಇಲ್ಲ. ಕೈಕೆಯಿಯನ್ನು ದಿಬ್ಬಣದೊಂದಿಗೆ ಕೋಸಲಕ್ಕೆ ಕಳುಹಿಸುವಾಗ ಕೇಕಯ ಕೇಳಿದ ಏನು ಬೇಕು ಮಗು ನಿನಗೆ? ವಜ್ರ,ವೈಡೂರ್ಯ, ಮುತ್ತು, ಮಾಣಿಕ್ಯ, ಬಂಗಾರ ಎಷ್ಟು ಬೇಕು ಹೇಳು..? ಇಲ್ಲ, ಅವೆಲ್ಲ ನನಗೇನೂ ಬೇಡ, ನಾನು ಕೇಳಿದ್ದನ್ನು ಕೊಡುವೆಯಾ,,? ಏನು ಬೇಕು ಹೇಳು ಮಗಳೇ ? ಕೈಕೆಯಿ ನನ್ನೆಡೆಗೆ ಬೆರಳು ತೋರಿದಳು. ಯಾವುದೀ ಋಣಾನುಬಂಧ..? ಏತಕಿಂಥ ಮೋಹ..? ನಾನೊಂದು ಅರಿಯದಾದೆ. ನಾನು ಕೈಕೆಯಿಯನ್ನು ಹಿಂಬಾಲಿಸಿದೆ ಕೋಸಲ ರಾಜ್ಯದೆಡೆಗೆ.
ನನಗೂ, ಕೈಕೇಯಿಗೂ ಕೊಸಲದಲ್ಲಿ ಎಲ್ಲವೂ ಹೊಸತು. ರಾಜಪರಿವಾರದಲ್ಲಿ ಹೊಂದಿಕೊಳ್ಳಲು ಒಂದಷ್ಟು ದಿನಗಳು ಬೇಕಾದವು. ಒಂದು ದಿನ ಕೈಕೇಯಿಗೆ ಕೇಳಿದೆ ಹೇಗೆನಿಸುತ್ತಿದೆ, ಎಲ್ಲವೂ ಸರಿ ಇದೆ ತಾನೆ? ಮಾತಿಗೆ ನೂರು ಅರ್ಥವಿತ್ತು! ಮದುವೆಯಾಗಿ ಹೋದ ಹೊಸತರಲ್ಲಿ ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳಿಗೆ ಎಲ್ಲ ಅಮ್ಮಂದಿರು ಕೇಳುವ ಮಾತನ್ನು ನಾನೂ ಕೇಳಿದ್ದೆ ಅವಳಿಗೆ. ಕಾರಣವಿರದಿರಲಿಲ್ಲ, ದಿಬ್ಬಣ ಹೊರಡುವ ಮುನ್ನ ಕೈಕೇಯಿಯ ತಾಯಿ ನನ್ನ ಕೈಹಿಡಿದು ಹೇಳಿದ್ದಳು, ಹುಡುಗಿ ಇನ್ನು ಸಣ್ಣವಳು, ನೀನೆಲ್ಲವನ್ನು ಅವಳಿಗೆ ತಿಳಿಹೇಳಬೇಕು, ತಾಯಿಯ ಸ್ಥಾನದಲ್ಲಿ ನಿಂತು. ಆಕ್ಷಣದಲ್ಲಿ ನನಗೆ ನನ್ನ ಬದುಕು ಸಾರ್ಥಕವೆನಿಸಿತು. ಕೇಳಿದ ಪ್ರಶ್ನೆಗೆ ನಾಚಿ ಕೆಂಪಾದಳಾಕೆ. ತಿಂಗಳುಗಳುರುಳಿದವು. ಮತ್ತೊಮ್ಮೆ ಕೇಳಿದೆ ಎಷ್ಟು ದಿನಕ್ಕೊಮ್ಮೆ ಬರುತ್ತಾನೆ ಮುದುಕ! ದಿನವೂ ..., ಉತ್ತರಿಸಿದಳಾಕೆ ನಾಚಿ ನೀರಾಗಿ. ನನಗೂ ಒಂದು ಆಸೆಯಿತ್ತು ನನ್ನ ಮುದ್ದಿನ ಕೈಕೆಯಿಯ ಒಡಲು ತುಂಬಬೇಕು. ಮಿಕ್ಕೀರ್ವ ಸವತಿಯರು ಕೊಡದುದನ್ನು ಅವಳು ದಶರಥನಿಗೆ ಕೊಡಬೇಕು. ನಮಗೀರ್ವರಿಗೂ ನಿರಾಸೆ ಕಾಡಿತ್ತು. ಕೂಡುವ ಲೆಕ್ಕದಲ್ಲಿ ಪ್ರತಿಯೊಂದು ಸಲವು ಶೂನ್ಯ ಸಂಪಾದನೆಯಾದರೆ, ಕೊಡುವ ಭಾಗ್ಯ ಎಲ್ಲಿಂದ ಬರಬೇಕು? ಪ್ರತಿಯೊಂದು ಮಾಸದಲ್ಲಿಯೂ ಕೈಕೇಯಿಯ ನಿಟ್ಟುಸಿರು, ಋತುಚಕ್ರ ತನ್ನ ಗತಿಯನ್ನು ನಿಲ್ಲಿಸಲೇ ಇಲ್ಲ! ಕೊನೆಗೂ ನನ್ನ ಮುದ್ದಿನ ಕೈಕೇಯಿಗೆ ಬಂಜೆಯೆಂಬ ಪಟ್ಟ. ಸವತಿಯರಿಬ್ಬರೂ ಖುಶಿ ಪಟ್ಟಿರಬೇಕು, ನನಗದು ಅಚ್ಚರಿಯೆನಿಸಲಿಲ್ಲ.ಈ ರಾಜಮನೆತನದ ಹೆಣ್ಣುಮಕ್ಕಳ ಎದೆಯಲ್ಲಿ ನೆಲೆನಿಂತ ಮಾತ್ಸರ್ಯದ ಆಳವೆಷ್ಟೆಂಬುದುದನ್ನು ನಾನು ಬಲ್ಲೆ. ಇನ್ನು ನೂರು ಮಂದಿಯನ್ನು ಕರೆತಂದರೂ ಈ ಮುದುಕನಿಗೆ ಮಕ್ಕಳಾಗುವುದಿಲ್ಲ! ಮುದುಕನಿಗೂ ಅನಿಸಿರಬೇಕು, ಇದು ತನ್ನಿಂದಾಗದ ಕೆಲಸವೆಂದು. ಆತ ರಾಜಗುರು ವಸಿಷ್ಟರನ್ನು ಕರೆಸಿದ. ತನ್ನ ಅಳಲನ್ನು ತೋಡಿಕೊಂಡ. ಪುತ್ರಕಾಮೇಷ್ಟಿಯ ಪರಿಹಾರವಿತ್ತು ವಸಿಷ್ಠರಲ್ಲಿ. ಮುಂದಿನ ಕಥೆ ನಿಮಗೆ ಗೊತ್ತೇ ಇದೆ.
ಬಿಮ್ಮನಸಿಯ ಬಯಕೆಗಳು, ಬಾಣಂತಿಯ ಆರೈಕೆಗಳಲ್ಲಿ, ಮಕ್ಕಳ ಆಟಪಾಟಗಳಲ್ಲಿ ವರುಷಗಳುರುಳಿದ್ದೆ ಗೊತ್ತಾಗಲಿಲ್ಲ. ಅರಮನೆಯಲ್ಲೀಗ ನಾಲ್ಕು ಮಕ್ಕಳು. ಒಂದು ದಿನ, ಅದು ಹುಣ್ಣಿಮೆಯ ದಿನ. ಮಗು ರಾಮ ಹಟಮಾಡಿದ, ಕಾಡಿದ ಕೌಸಲ್ಯೆಯನ್ನು, ತನಗೆ ಆಗಸದಲ್ಲಿರುವ ಪೂರ್ಣಚಂದ್ರ ಬೇಕು. ಮಕ್ಕಳೆಂದರೆ ಹಾಗೆ, ಯಾವಾಗ ಏನು ಕೇಳಿಯಾರು ಎಂದು ಊಹಿಸಲಾಗುವುದಿಲ್ಲ. ಕೌಸಲ್ಯೆಯ ಪರದಾಟ ಹೇಳತೀರದು. ಯಾರ ಮಗುವಾದರೆ ಏನಂತೆ, ಮಕ್ಕಳು ಅಳುವುದನ್ನು ನನ್ನಿಂದ ನೋಡಲಾಗುತ್ತಿರಲಿಲ್ಲ. ನಾನು ಮಗು ರಾಮನ ಬಳಿ ಸಾರಿದೆ, ಅವನನ್ನೆತ್ತಿಕೊಂಡೆ. ನನ್ನ ಬಳಿಯಿದ್ದ ಪುಟ್ಟ ಕನ್ನಡಿಯೊಂದನ್ನು ರಾಮನಿಗಿತ್ತೆ. ನೋಡು ಮಗು, ಈ ಪುಟ್ಟ ಕನ್ನಡಿಯಲ್ಲಿ ನಿನ್ನ ಚಂದಮಾಮನನ್ನು! ಮಗು ರಾಮ ಕೇಕೆ ಹಾಕಿದ, ಚಪ್ಪಾಳೆ ತಟ್ಟಿದ, ನನ್ನನಪ್ಪಿಕೊಂಡ, ತೊದಲು ನುಡಿಯಲ್ಲಿ 'ಮಂಥಯೆ' ಎಂದ. ಆ ಕ್ಷಣಕ್ಕೆ ನನಗೆ ನನ್ನ ಬದುಕಿನ ನೋವು, ಮಾನಾಪಮಾನಗಳೆಲ್ಲ ಮರೆತು ಹೋದವು, ಬದುಕು ಸಾರ್ಥಕವಾದಂತೆನಿಸಿತು. ಎಲ್ಲಿದ್ದಳೊ ಮಹಾರಾಣಿ ಕೌಸಲ್ಯೆ, ಬಿರುಗಾಳಿಯಂತೆ ಬಂದವಳು ನನ್ನ ತೆಕ್ಕೆಯಲ್ಲಿದ್ದ ರಾಮನನ್ನು ಸೆಳೆದಳು. ತೊಲಗು ದರಿದ್ರ ಮುಖದವಳೇ, ಮಗು ಹೆದರಿಕೊಂಡೀತು..! ನನ್ನ ಶರೀರವೆಲ್ಲ ಕಂಪಿಸಿತು, ನಾನು ಅವಮಾನದಿಂದ ಕುಗ್ಗಿದೆ, ಕೈಕೇಯಿಯ ಅರಮನೆಗೆ ಓಡಿದೆ. ನನ್ನ ರೂಪವನ್ನು, ದರಿದ್ರ ಮುಖವನ್ನು ಶಪಿಸಿದೆ. ಆಗಲೇ..ಮಂಥರೆಯ ಎದೆಯಲ್ಲಿ ಅವಮಾನದ ಸೇಡನ್ನು ತೀರಿಸಿಕೊಳ್ಳಲು ಮಿಡಿ ನಾಗರವೊಂದು ಹೆಡೆಯೆತ್ತಿ ನಿಂತದ್ದು!
ಹ್ಞಾ, ಇನ್ನೊಂದು ವಿಷಯ ಹೇಳಲು ಮರೆತೆ. ನಾನು ದಾಸಿಯಾದರೇನಂತೆ, ನನಗೆ ಚಿಕ್ಕಂದಿನಿಂದಲೂ ರಾಜಭವನಗಳ ನಂಟು. ರಾಜಭವನದ ಅಮೃತ ಶಿಲೆಯ ನುಣುಪು ಗೋಡೆಗಳ ಮೇಲೆ ಕೈಯ್ಯಾಡಿಸುವುದು, ಆ ಗೋಡೆಗಳಿಗೆ ಕಿವಿಯಾನಿಸಿ ಅದರ ತಂಪನ್ನು ಅನುಭವಿಸುವುದು ನನಗೊಂದು ಆಟವಾಗಿತ್ತು. ಈ ಆಟದಲ್ಲಿಯೇ ಕೋಣೆಯೊಳಗಿಂದ ಕೇಳಿಬರುವ ಪಿಸುಮಾತುಗಳ ಬಗೆಗೂ ನನಗೆ ಇನ್ನಿಲ್ಲದ ಕುತೂಹಲ. ನಿಜ ಹೇಳುತ್ತೇನೆ, ನಾನು ಬೆಳೆದಂತೆ ನನಗೆ ಇದೊಂದು ಚಟವಾಯಿತು. ದಿನಕ್ಕೊಂದು ಸಲವಾದರೂ ರಾಜಭವನದ ಗೋಡೆಗೆ ಕಿವಿಯಾನಿಸದೆ ನನಗೆ ನಿದ್ದೆ ಬರುತ್ತಿರಲಿಲ್ಲ. ಹೀಗೆ ಕಿವಿಗೊಡುವುದರಿಂದ ರಾಜಮಂದಿರದ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ವಿದ್ಯಮಾನಗಳನ್ನು ನಾನು ಅರಿತುಕೊಳ್ಳಲು ಪ್ರಾರಂಭಿಸಿದೆ. ನಾನು ಅಂದುಕೊಂಡ ಹಾಗೆ ಎಲ್ಲವೂ ಇಲ್ಲ ಎಂಬುದು ನನ್ನ ಅರಿವಿಗೆ ಬಂತು. ಈ ರಾಜಮಂದಿರದ ಏಕಾಂತ ಮಂದಿರಗಳೊಳಗೆ ನಡೆಯುವ ಶೃಂಗಾರ ಶಯ್ಯೆಯ ಪಿಸು ಮಾತುಗಳು, ರಾಜಕೀಯಗಳು, ಗಹಗಹಿಸುವಿಕೆಗಳು, ಚೀರಾಟಗಳು, ಬಿಕ್ಕುವಿಕೆಗಳು ನಾನು ನೋಡಲಾಗದ, ಕೇಳಲಾಗದ ಕಥೆಗಳನ್ನು ನನಗೆ ಹೇಳುತ್ತಿದ್ದವು. ಹಲವೊಂದು ಸಲ ಅನಿಸಿದ್ದಿದೆ, ಬದುಕೆ ನೀನೆಷ್ಟು ಕ್ರೂರಿ ಎಂದು. ಹಲವೊಂದು ಸಲ ಗೋಡೆಗಳಿಗೆ ಕಿವಿಯಾನಿಸುವ ನನ್ನ ಚಟದ ಬಗೆಗೆ ನಾನು ಹೇಸಿಕೊಳ್ಳುತ್ತಿದೆ. ಆದರೆ ಈ ಚಟದಿಂದ ನನ್ನನ್ನು ಬಿಡಿಸಿಕೊಳ್ಳಲಾಗುತ್ತಿರಲಿಲ್ಲ. ಈಗನಿಸುತ್ತಿದೆ ಆದದ್ದೆಲ್ಲವೂ ಒಳಿತಿಗೆ ಎಂದು.
ನಿನ್ನೆಯಷ್ಟೆ ರಾಜಭವನದ ಮಂತ್ರಾಲೋಚನೆಯ ಕೋಣೆಯ ಗೋಡೆಗೆ ಕಿವಿಯಾನಿಸಿದ್ದೆ. ಮೊದಮೊದಲು ಮೆಲುದನಿಯ ಆ ಮಾತುಗಳು ನನಗೆ ಆರ್ಥವಾಗಲಿಲ್ಲ. ಅದರೆ ವಸಿಷ್ಟರಾಡಿದ ಮಾತು 'ಶುಭಸ್ಯ ಶೀಘ್ರಂ, ನಾಳೆಯೇ ಮುಹೂರ್ತವಿದೆ, ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿಸಿಬಿಡು, ಕಾಲಕಳೆದಂತೆ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳಬಹುದು ಮುಂತಾಗಿ. ಬರಿಯ ಧ್ವನಿಗಳಿಂದಲೇ ನಾನವರನ್ನು ಗುರುತಿಸಿದೆ, ಅವರು ಬೇರಾರು ಅಲ್ಲ. ಗಡ್ಡ ನೆರೆತ ತ್ರಿಮೂರ್ತಿಗಳು. ಚಕ್ರವರ್ತಿ ದಶರಥ, ಮಹಾಮಂತ್ರಿ ಸುಮಂತ ಮತ್ತು ರಾಜಗುರು ವಸಿಷ್ಠ, ಮೂವರು ಮುದುಕರ ದು(ದೂ)ರಾಲೋಚನೆಯಿದು. ಕೇಳಿಯೇ ನಾನು ಬೆವತು ಹೋದೆ! ಏನವಸರವಿತ್ತು. ಭರತನಿಲ್ಲದ ವೇಳೆಯಲ್ಲಿ ಇಂತಹ ಒಂದು ನಿರ್ಣಯದ ಅವಶ್ಯಕತೆಯೇನಿತ್ತು. ರಾಮನಿಗೆ ಪಟ್ಟಾಭಿಷೇಕ. ಆತನೇ ಇನ್ನು ಮುಂದೆ ಕೋಸಲೇಂದ್ರ. ಸೀತೆ ಮಹಾರಾಣಿ, ಮುದಿ ಕೌಸಲ್ಯೆ ರಾಜಮಾತೆ. ಏನಿದೆ ನನ್ನ ಕೈಕೇಯಿಗೆ? ಅಧಿಕಾರವೇ? ಸ್ಥಾನ ಮಾನವೇ? ಭರತನಿಗೆ...? ಆ ಮುದಿ ಕೌಸಲ್ಯೆ, ನನ್ನ ಜರೆದಾಕೆ ರಾಜಮಾತೆಯೇ? ಮನದಲ್ಲೇ ಅಂದುಕೊಂಡೆ ಯಾರಿಗೆ ಪಟ್ಟ, ಯಾವ ಮುಹೂರ್ತ, ಕೋಸಲಕ್ಕೆ ದೊರೆ ಯಾರು ಎಂದು ನಿಶ್ಚಯಿಸುವವಳು ನಾನು, ಮಂಥರೆ. ಅಷ್ಟೊಂದು ಆತ್ಮವಿಶ್ವಾಸ ಮತ್ತು ತಂತ್ರಗಾರಿಕೆ ನನ್ನಲ್ಲಿತ್ತು. ಯಾವ ನಡೆಗೆ ಯಾವ ದಾಳವನ್ನು ಎದುರಿಡಬೇಕೆಂಬುದು ನನಗೆ ತಿಳಿದಿತ್ತು.
ಸಮಯವಿರಲಿಲ್ಲ, ಒಂದಿನಿತು ತಡಮಾಡದೆ ಕೈಕೇಯಿಯ ಭವನಕ್ಕೆ ನಡೆದೆ. ಕೈಕೇಯಿಯ ದರ್ಶನಕ್ಕೆ ಮಂಥರೆಯನ್ನು ತಡೆವವರಾರೂ ಅಲ್ಲಿಲ್ಲ!ನಸು ನಗುತ್ತಲೇ ಬಾಗಿಲು ತೆರೆದಳು. ಏನಿದು ಏದುಸಿರು, ಯಾವನಾದರೂ ಮುದುಕ ಹಿಂದೆ ಬಿದ್ದನೇನು? ಇಂತಹ ತಮಾಷೆಯಾಡುವಷ್ಟು ಸಲಿಗೆ ಅವಳಿಗೆ ನನ್ನ ಮೇಲೆ. ಮುದುಕ ಬಿದ್ದದ್ದು ನಿನ್ನ ಹಿಂದೆ, ನನ್ನ ಹಿಂದಲ್ಲ, ಕಟಕಿಯಾಡಿದೆ! ಕೋಪ ಬಂತೆ ನನ್ನ ಮುದ್ದು ಮುದುಕಿಗೆ, ಅನುನಯದ ಮಾತನಾಡಿದಳು. ಬಾ ಇಲ್ಲಿ, ಕೈ ಹಿಡಿದೆಳೆದೆ. ವಿನೋದಕ್ಕೆ ಇದು ಸಮಯವಲ್ಲ, ವಿಷಯ ಗಂಭಿರವಿದೆ. ಏನದು, ಕೇಳಿದಳು ಕೈಕೆ. ವಿಷಯವೆಲ್ಲವನ್ನು ಅರುಹಿದೆ. ಆಕೆಯ ಮುಖವರಳಿತು. ಕೊರಳಲ್ಲಿದ್ದ ಮುತ್ತಿನ ಹಾರವನ್ನು ತೆಗೆದು ಕೈಗಿತ್ತಳು. ತೆಗೆದುಕೊ ಶಕುನದ ಹಕ್ಕಿ, ಶುಭದ ನುಡಿಯ ಅರುಹಿದ್ದಕ್ಕಾಗಿ! ಕೋಸಲದ ತೊತ್ತನ್ನ, ಕೈಕೇಯಿ ಮಹಾರಾಣಿ, ನಾನವಳ ದಾಸಿ ಎಂಬ ವಿವೇಚನೆಯನ್ನು ಮರೆತೆ. ಯಾರಿಗೆ ಏನು ಮಾಡುತ್ತಿದ್ದೇನೆ ಎಂಬ ಪರಿವೆಯಿರದೆ, ಭಯವಿರದೆ ಕೈಯ್ಯಲ್ಲಿದ್ದ ಮುತ್ತಿನ ಹಾರವನ್ನು ಕೈಕೇಯಿಯ ಮುಖಕ್ಕೆ ರಾಚಿದೆ. ಏಟು ಜೋರಾಗಿಯೇ ಇತ್ತು, ಆಕೆಯ ಕಣ್ಣುಗಳು ಕೆಂಡದುಂಡೆಗಳಾದವು, ಹೊಡೆಯಲು ಎತ್ತಿದ ಆಕೆಯ ಕೈಯ್ಯನ್ನು ಹಿಡಿದು ಹೇಳಿದೆ. ಇದೇ ಕೊನೆ, ನನ್ನ ನಿನ್ನ ಋಣಾನುಬಂಧ ಮುಗಿಯಿತು. ಎಷ್ಟಾದರೂ ನಾನು ದಾಸಿ, ನೀನು ಮಹಾರಾಣಿ! ನಿನಗಾದ ಅವಮಾನಕ್ಕಾಗಿ ಬಹಳವೆಂದರೆ ನೀನೇನು ಮಾಡಬಹುದು? ನನ್ನನ್ನು, ಗಲ್ಲಿಗೇರಿಸಬಹುದು, ಅಷ್ಟೆ ತಾನೇ? ಅದಕ್ಕೂ ಸಿದ್ಧಳಾಗಿಯೇ ಬಂದಿದ್ದೇನೆ. ನಿನ್ನ ವಿವೇಚನೆಯ ಮೇಲೆ ಅರಮನೆಯ ಸುಖದ ಸುಪ್ಪತ್ತಿಗೆಯ ಅಮಲು ಕವಿದಿದೆ. ಹಾಳಾಗಿ ಹೋಗು. ನಾನಿನ್ನು ಬರುತ್ತೇನೆ. ಅಲ್ಲಿಂದ ಸರಸರನೆ ನಡೆದೆ. ಕೈಕೇಯಿಯ ಮನದಾಳವನ್ನು ಘಾಸಿಗೊಳಿಸಿದ್ದೆ. ಹದಗೊಳಿಸಿದ್ದೆ ಕ್ಷೇತ್ರವನ್ನು. ವಿಷಬೀಜವನ್ನು ಬಿತ್ತಬೇಕಾಗಿತ್ತು ಅಷ್ಟೆ. ಸಮಯಕ್ಕಾಗಿ ಕಾದೆ.
ಅಲ್ಲಿಂದ ಹೊರಟು ಬಂದ ಅರೆಗಳಿಗೆಯಲ್ಲಿ ದಾಸಿಯೋರ್ವಳು ಬಂದು ತಿಳಿಸಿದಳು. ಮಹಾರಾಣಿಯವರು ನಿನ್ನನ್ನು ನೋಡಬೇಕಂತೆ. ನಡೆದೆ ಕೈಕೇಯಿಯ ಭವನಕ್ಕೆ, ಬಾಗಿಲು ತೆರೆದಿತ್ತು! ಕುಳಿತುಕೊ ಎನ್ನುವಂತೆ ಬೆರಳು ತೋರಿದಳು ಕೈಕೆ. ಮುಖ ಊದಿಸಿಕೊಂಡಿದ್ದಳು. ಒಂದಷ್ಟು ಹೊತ್ತು ಮಾತಿಲ್ಲ, ಬರಿಯ ಮೌನ, ಮಾತನ್ನಾರಂಭಿಸುವುದರಲ್ಲಿ ಇಬ್ಬರಿಗೂ ಬಿಗುಮಾನ. ನಾನೇಕೆ ಮಾತನಾಡಲಿ..? ನಾನು ಹೇಳುವುದನ್ನೆಲ್ಲ ಹೇಳಿಯಾಗಿದೆ. ಮಾತನಾಡಬೇಕು ಅವಳು. ಕೊನೆಗೂ ಮಾತು ಹೊರಬಿತ್ತು ಕೈಕೆಯ ಬಾಯಿಯಿಂದ ' ಎನೇ ಮುದುಕಿ ಅದು, ನಿನ್ನ ಗೋಳು? ನಾನಂದೆ, ಈ ಗೋಳು ನಿನ್ನ ಬದುಕು ಹಸನಾಗಬೇಕೆಂದು. ಇದು ನಿರ್ಣಯವನ್ನು ಕೈಗೊಳ್ಳುವ ಸಮಯ, ಇಲ್ಲಿ ಭಾವುಕತೆಗೆ ಅವಕಾಶವಿಲ್ಲ. ನಿನ್ನ ಬದುಕು ಬೇರೆಯವರ ನಿರ್ಣಯವಾಗಬಾರದು, ಏನು ಕೊರತೆಯಿದೆ ನನಗೆ ಇಲ್ಲಿ, ಅಧಿಕಾರ, ಸಂಪತ್ತು, ಸ್ಥಾನಮಾನ, ಗೌರವ ಎಲ್ಲವೂ ಇದೆಯಲ್ಲ? ರಾಮ ರಾಜನಾದರೇನಂತೆ ಈಗ? ಆ ಕ್ಷಣಕ್ಕೆ ನನಗೆ ಕನಿಕರವೆನಿಸಿತು ಕೈಕೆಯ ಮನೋಸ್ಥಿತಿಯ ಕುರಿತಂತೆ. ಹುಡುಗಿ ಮುಗ್ಧೆ, ಸ್ತ್ರೀ ಸಹಜವಾದ ನಿರ್ಣಯಗಳವು. ಹೆಣ್ಣೆಂದರೆ ಹೀಗೆ, ವಸ್ತು ವಿಷಯಗಳ ಸಂಗ್ರಹ, ನಾಲ್ಕು ಗೋಡೆಗಳ ಮಧ್ಯೆ ತಾನು ಚಲಾಯಿಸುವ ಅಧಿಕಾರ, ಮಕ್ಕಳ ಲಾಲನೆ ಪಾಲನೆ. ಇದನ್ನು ಮೀರಿ ಆಕೆಯ ಚಿಂತನೆಯಿಲ್ಲ. ನಾನು ಕೈಕೆಗೆ ಮರು ಸವಾಲೆಸೆದೆ, ಮುಂದೆಯೂ ಹೀಗೆಯೇ ಇರುತ್ತದೆಂದು ಬಲ್ಲವರಾರು? ಮಂಥರೆಯ ನಂತರ ಕೋಸಲದ ದಾಸಿಯಾಗಬೇಕೆಂದು ನೀನು ನಿರ್ಣಯಿಸಿದಂತಿದೆ! ವ್ಯಂಗ್ಯವಿತ್ತು ನನ್ನ ಮಾತಲ್ಲಿ, ಅವಳ ಎದೆಯಾಳಕ್ಕೆ ಕೈ ಹಾಕಿದ್ದೆ.
ಒಂದಷ್ಟು ಹೊತ್ತು ಏನೂ ತೋಚದವಳಂತೆ, ಮಂಕುಬಡಿದವಳಂತೆ ಇದ್ದವಳು ನನ್ನ ಬಳಿ ಬಂದು ಕೈಹಿಡಿದು ಕೇಳಿದಳು, ಮುಂದೆಯೂ ಹೀಗೆ ಇರಲಾರದು ಎನ್ನುತ್ತಿಯೇನು? ನನಗೆ ಗೊತ್ತಿಲ್ಲ, ನಾನೇನು ತ್ರಿಕಾಲ ಜ್ಞಾನಿಯಲ್ಲ! ಸಂಭವನೀಯತೆಯ ಕುರಿತಂತೆ ಮಾತ್ರ ನನ್ನ ಊಹೆ. ತನ್ನ ಬೆಳೆಯನ್ನು ಉಳಿಸಿಕೊಳ್ಳಬೇಕಾದ ರೈತ ಹೊಲಕ್ಕೆ ಬೇಲಿ ಹಾಕಬೇಕು, ತಪ್ಪು ಎನ್ನುತ್ತಿಯೇನು? ಮಗು ಈ ರಾಜಭವನದಲ್ಲಿ ನಿನ್ನ ಬದುಕು ನಿನ್ನ ಬದುಕಲ್ಲ. ಅದು ದಶರಥನ ನಿರ್ಣಯ. ನಿನ್ನ ಮದುವೆಯನ್ನೇ ಜ್ಞಾಪಿಸಿಕೊ. ನಿನ್ನಪ್ಪನ ನಿರ್ಣಯಕ್ಕೆ ಬೆಲೆಯಿತ್ತೇ? ನೀನೊಂದು ದಾಳವಾದೆ. ನಿನ್ನ ಅಪ್ಪ, ತನ್ನ ರಾಜ್ಯ, ಅಧಿಕಾರಗಳನ್ನು ಉಳಿಸಿಕೊಳ್ಳಲೋಸುಗ ಈ ಮುದುಕನಿಗೆ ಹೆದರಿ ನಿನ್ನನ್ನು ಅವನಿಗೆ ಧಾರೆಯಿತ್ತ. ಏಲ್ಲಿತ್ತು ಆಗ ಮಗಳೆಂಬ ಮಮಕಾರ? ಮಗು ಈ ಪ್ರಪಂಚದಲ್ಲಿ ನಡೆಯುವುದೆಲ್ಲ ಹೀಗೆ. ತನ್ನ ಕಾಲಬುಡಕ್ಕೆ ಬಂದಾಗ ಸಂಬಂಧ, ಪ್ರೀತಿ, ಪ್ರೇಮ ಕಕ್ಕುಲತೆಗಳೆಲ್ಲ ಮಾಯ. ಆಗ ನಿಶಿಥ ಸ್ವಾರ್ಥವೊಂದೇ ಪರಮ. ರಾಜಕೀಯದಲ್ಲಿ ಸಂಬಂಧಗಳೆಲ್ಲ ದಾಳಗಳು ಮಗು. ಅಧಿಕಾರವಿದ್ದವರು ತಮ್ಮ ಉಳಿವಿಗಾಗಿ ಈ ಸಂಬಂಧಗಳನ್ನು ಪಣಕ್ಕಿಡುತ್ತಾರೆ, ನಿನ್ನ ವಿಷಯದಲ್ಲೂ ನಿನ್ನ ತಂದೆ ಕನಿಕರವನ್ನೇನೂ ತೋರಿಲ್ಲ. ಆತನಿಗೆ ಅವನ ಉಳಿವು ಮುಖ್ಯವಾಗಿತ್ತು, ಯೋಚಿಸಿ ನೋಡು. ಮಗು ದಶರಥ ನಿನ್ನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಾನೆ ಎಂದೆಯಲ್ಲ. ಇತ್ತೀಚಿನ ಅವನ ನಡವಳಿಕೆಯನ್ನು ಗಮನಿಸಿದ್ದಿಯೇನು? ಮೈಯ್ಯಲ್ಲಿ ಕಸುವಿಲ್ಲ, ನಿಜ ಹೇಳು ಎಷ್ಡು ದಿನವಾಯಿತು ನೀನವನನ್ನು ಕೂಡಿ? ಅವನಿಗೀಗ ನೀವೂ ಮೂವರು ಒಂದೇ. ಹೆಗ್ಗಳಿಕೆಗೆ, ನನಗೆ ಮೂವರಿದ್ದಾರೆ ಎಂದು ಹೇಳಿಕೊಳ್ಳುವುದಕ್ಕೆ!
ಈಗಾಗಲೇ ನಿನಗೆ ತಿಳಿಸಿದ್ದೇನೆ ರಾಮನಿಗೆ ಪಟ್ಟ, ಸೀತೆ ಮಹಾರಾಣಿ, ಕೌಸಲ್ಯೆ ರಾಜಮಾತೆ. ಕೈಕೇಯಿ, ಮುಂದಿನ ಮಂಥರೆ. ಹಲವು ಮಾತುಗಳೇಕೆ ಒಂದೇ ವಾಕ್ಯದಲ್ಲಿ ವಿವರಿಸುತ್ತೇನೆ, ಇನ್ನು ಮುಂದೆ ಕೋಸಲದಲ್ಲಿ ಕೈಕೆ ಏನೂ ಅಲ್ಲ, ಏನೇನೂ ಅಲ್ಲ! ನನ್ನ ಮಾತುಗಳನ್ನು ಕೇಳಿ ಹುಡುಗಿ ಕುಸಿದಳು, ಬಿಕ್ಕಿ ಬಿಕ್ಕಿ ಅಳುವುದಕ್ಕೆ ಪ್ರಾರಂಭಿಸಿದಳು, ನನಗೆ ಮೋಸವಾಯಿತು ಎಂದಳು. ಅಲ್ಲಿಗೆ ನನ್ನ ಕೆಲಸ ಮುಗಿಯಿತು. ಮುಂದಿನದು ನಿಮಗೆಲ್ಲ ಗೊತ್ತೇ ಇದೆ. ಈಗ ಹೇಳಿ. ಮಂಥರೆಯ ತಪ್ಪೇನಿದೆ ಇದರಲ್ಲಿ?
ಮುಂದೆ ದಾರಿಯೇನು ಮುದುಕಿ, ಕೈಕೆ ಅಂಗಲಾಚಿದಳು. ಇದೆ ದಾರಿ ಅಂದೆ ನಾನು. ಏನದು? ಕೇಳಿದಳಾಕೆ.
ಎಲ್ಲಿ ನಿನ್ನ ಬಲಗೈಯ್ಯ ತೋರ್ಬೆರಳನ್ನು ತೋರಿಸು...! ಕೈಕೆ ನನ್ನತ್ತ ಆಕೆಯ ಬಲಗೈಯ್ಯ ತೋರ್ಬೆರಳನ್ನು ಚಾಚಿದಳು. ನಾನು ಅವಳ ಘಾಸಿಗೊಂಡ ತೋರ್ಬೆರಳನ್ನು ಸವರುತ್ತ ಹೇಳಿದೆ..ಇದೆ...ಇದೇ ತೋರ್ಬೆರಳು ಹಿಂದೊಮ್ಮೆ ದೇವಾಸುರರ ಯುದ್ಧದಲ್ಲಿ, ನಿನ್ನ ಪತಿ ದಶರಥ ದೇವೇಂದ್ರನಿಗೆ ನೆರವೀಯುವ ಸಂದರ್ಭದಲ್ಲಿ, ರಥದ ಗಾಲಿಯ ಕೀಲು ಕಳಚಿ ಬೀಳುವ ಸಂದರ್ಭದಲ್ಲಿ ರಥದ ಗಾಲಿಗೆ ಕೀಲಾಗಿ, ದಶರಥನನ್ನು, ದೇವೇಂದ್ರನನ್ನು ಉಳಿಸಿತ್ತಲ್ಲ ಆ ಬೆರಳಿನ ಕಥೆ ಜ್ಞಾಪಿಸಿಕೊ. ಈ ಬೆರಳಿಗೆ ಆಗ ವರಗಳೆರಡು ದೊರಕಿದ್ದುವಲ್ಲ. ಆ ವರಗಳೇ ನಿನ್ನನ್ನೀಗ ಕಾಯುತ್ತವೆ.
ಹೇಗೆಂದು ಅರ್ಥವಾಗಲಿಲ್ಲ...? ಕೈಕೆ ನುಡಿದಳು. ಈ ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಹೊರಳುವ ಹೆಣ್ಣುಮಕ್ಕಳೇ ಹೀಗೆ, ಸುಖ ಭೋಗಗಳಾಚೆ ಬದುಕೊಂದಿದೆ ಎನ್ನುವ ಸೂಕ್ಷ್ಮತೆ ಅವರಿಗಿರುವುದಿಲ್ಲ! ನಾನವಳಿಗೆ ತಿಳಿಯ ಹೇಳಿದೆ, ಈ ವರಗಳನ್ನು ಅಸ್ತ್ರಗಳನ್ನಾಗಿಸು, ದಶರಥನನ್ನು ಜರ್ಜರಗೊಳಿಸು. ಈ ಸೂರ್ಯವಂಶೀಯರೆಲ್ಲ ವಚನಕ್ಕೆ ಕಟ್ಟು ಬೀಳುವವರು. ನಿನ್ನ ಕೆಲಸ ಈಡೇರುತ್ತದೆ. ಇನ್ನು ಉಳಿದಂತೆಲ್ಲವೂ ನಿನಗೆ ಬಿಟ್ಟ ವಿಚಾರ.
ನಾನು ಕೈಕೇ ಯಿಯ ಅಂತಃಪುರದಿಂದ ಹೊರಬಿದ್ದೆ. ಇದೀಗ ತಾನೆ ಬಂದ ಸುದ್ದಿ. ಶ್ರೀರಾಮ ಸೀತಾ ಲಕ್ಷ್ಮಣ ಸಮೇತನಾಗಿ ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಹೊರಟಿದ್ದಾನಂತೆ. ಜಾಣೆ ಕೈಕೇಯಿ, ನಾ ನುಡಿದಂತೆ ನಡೆದಿದ್ದಾಳೆ. ನೋಡೋಣ ಇನ್ನೂ ಹದಿನಾಲ್ಕು ವರ್ಷಗಳಿವೆಯಲ್ಲ, ದಾಳಗಳನ್ನುರುಳಿಸಲು.
ವಾಲ್ಮೀಕಿ ಚಡಪಡಿಸುತ್ತಿದ್ದ , ಕಥೆ ಮುಂದುವರಿಯುತ್ತಿಲ್ಲ, ರಾಮಾಯಣ ಮುಂದುವರಿಯಲು ವಿಶಿಷ್ಠ ಪಾತ್ರವೊಂದರ ಪ್ರವೇಶವಾಗಬೇಕಿದೆ! ಅದ್ಯಾರು ತಿಳಿಸಿದರೊ ಗೊತ್ತಿಲ್ಲ, ಇದೆಲ್ಲ ಮಂಥರೆಯ ಆಟವೆಂದು. ಮುಂದುವರಿಯಲಿ ರಾಮಾಯಣ ನನಗೇನಂತೆ? ಆದರೂ ಒಂದು ವಿಷಯ ಹೇಳುತ್ತೇನೆ...ಕವಿ ವಾಲ್ಮೀಕಿಗೆ ಕೃತಜ್ಞತೆಯಿಲ್ಲ, ಕೊನೆಯ ಪಕ್ಷ ಈ ಮುದುಕಿ ಮಂಥರೆಗೆ ಆತ ಕೃತಜ್ಞನಾಗಬೇಕಿತ್ತು. ನೀವೇನ್ನುತ್ತಿರೊ...?
Comments
ಉ: ನಾನು, ಮಂಥರೆ ಮಾತನಾಡುತ್ತಿದ್ದೇನೆ....
ದಿವಾಕರರೇ, ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ. ಪ್ರತಿ ವಿಚಾರಕ್ಕೂ ವಿಭಿನ್ನ ದೃಷ್ಟಿಕೋನವಿರುತ್ತದೆಯೆನ್ನುವುದಕ್ಕೆ ಈ ಲೇಖನ ಸಾಕ್ಶಿಯಾಗಿದೆ.
ತಪ್ಪು ತಿಳಿಯದಿದ್ದರೆ ಒಂದು ಮಾತು, ಮಂಥರೆ ಮೇಲಣ ಪ್ರೀತಿಯಿಂದ ಎರಡು ಸಲ ಹಾಕಿದ್ದೀರಾ?
In reply to ಉ: ನಾನು, ಮಂಥರೆ ಮಾತನಾಡುತ್ತಿದ್ದೇನೆ.... by santhosha shastry
ಉ: ನಾನು, ಮಂಥರೆ ಮಾತನಾಡುತ್ತಿದ್ದೇನೆ....
ಪ್ರಿಯ ಸಂತೋಷ ಶಾಸ್ತ್ರೀಜಿ,
ಲೇಖನವನ್ನು ಓದಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.
ಈ ರೀತಿಯ ಪ್ರಕಟಣೆಯ ತಾಂತ್ರಿಕತೆಯ ಕುರಿತು ಬಹಳಷ್ಟು ತಿಳಿದಿಲ್ಲವಾದುದರಿಂದ ಈ ಪ್ರಮಾದವಾಗಿದೆ. ವಂದನೆಗಳು.
ಉ: ನಾನು, ಮಂಥರೆ ಮಾತನಾಡುತ್ತಿದ್ದೇನೆ....
ಮಂಥರೆಯ ಪಾತ್ರದ ಸಮಗ್ರ ಚಿತ್ರಣ, ಅದರಲ್ಲು ಅವಳ ಹುಟ್ಟಿನ ಹಿನ್ನಲೆಯಿಂದ ಕೈಕೆಯ ಸಖ್ಯ, ಒಡನಾಟದತನಕ ಪಾತ್ರ ಬೆಳೆಸಿಕೊಂಡು ಬಂದ ರೀತಿ ಚೆನ್ನಾಗಿ ಮೂಡಿಬಂದಿದೆ. ಅವಳ ಯೋಜನೆ, ತರ್ಕದಲ್ಲಿ ಯಾವುದೆ ದೋಷ ಹುಡುಕಲು ಆಗದ ರೀತಿ ಕಥೆ ಕಟ್ಟಿದ ಬಗೆ ಮೆಚ್ಚಿಗೆಯಾಯ್ತು :-)
In reply to ಉ: ನಾನು, ಮಂಥರೆ ಮಾತನಾಡುತ್ತಿದ್ದೇನೆ.... by nageshamysore
ಉ: ನಾನು, ಮಂಥರೆ ಮಾತನಾಡುತ್ತಿದ್ದೇನೆ....
ಪ್ರಿಯ ನಾಗೇಶ್ ಅವರಿಗೆ,
ಪುರಾಣ ಪಾತ್ರಗಳ ಒಳತೋಟಿಯನ್ನು ನನ್ನದೇ ಆದ ಶೈಲಿಯಲ್ಲಿ ಪ್ರಸ್ತುತ ಪಡಿಸುವಲ್ಲಿ ಕೇಳುಗನಾಗಿ ಯಕ್ಷಗಾನದ 'ತಾಳಮದ್ದಲೆ'ಯಿಂದ ನಾನು ಬಹಳಷ್ಟನ್ನು ಪಡೆದಿದ್ದೇನೆ. ಲೇಖನವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿರುವುದಕ್ಕಾಗಿ ಧನ್ಯವಾದಗಳು.
ಉ: ನಾನು, ಮಂಥರೆ ಮಾತನಾಡುತ್ತಿದ್ದೇನೆ....
ಚೆನ್ನಾಗಿದೆ.