ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ ಕೊಟ್ಟ ಜೀವಕೆ.. - ಲಕ್ಷ್ಮೀಕಾಂತ ಇಟ್ನಾಳ
ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ ಕೊಟ್ಟ ಜೀವಕೆ...
.. ಪುಷ್ಕರದ ಬ್ರಹ್ಮ ಮಂದಿರದಲ್ಲಿ
ಹಜರತ್ ಖ್ವಾಜಾ ಮೊಯಿನುದ್ದೀನರ ಶಿಷ್ಯನಾದ ಕುತ್ಬುದ್ದೀನ್ ಬಕ್ತಿಯಾರ್ ಕಾಕಿ ಒಮ್ಮೆ 1235 ರಲ್ಲಿ ಒಂದು ದಿನ ಸಮಾ (ಕವ್ವಾಲಿಯ ಮೊದಲಿನ ಹೆಸರು) ಮೆಹಫಿಲ್‍ದಲ್ಲಿ ಶೇಖ್ ಅಹ್ಮದ ಜಾಮ್‍ನ ಪರ್ಸಿಯನ್ ಕವ್ವಾಲಿಯ ದ್ವಿಪದಿಯೊಂದನ್ನು ಸುಶ್ರಾವ್ಯ ಹಾಡುಗಾರನೊಬ್ಬನ ಕಂಠದಲ್ಲಿ ತದೇಕವಾಗಿ ಆಲಿಸುತ್ತ ಧ್ಯಾನದಲ್ಲಿ ಲೀನವಾಗಿಬಿಟ್ಟರು. ಅಖಂಡ ನಾಲ್ಕುದಿನಗಳವೆರೆಗೆ ಧ್ಯಾನಸ್ಥ (ಟ್ರಾನ್ಸ್) ಸ್ಥಿತಿಯಲ್ಲಿಯೇ ಇದ್ದು, ಅದೇ ಧ್ಯಾನದಲ್ಲಿಯೇ ಕೊನೆಯುಸಿರೆಳೆದದ್ದು, ಸಂಗೀತಕ್ಕಿರುವ ಅಗಾಧ ಶಕ್ತಿ ಹಾಗೂ ಭಕ್ತಿಗೊಂದು ಉತ್ಕಟ ಉದಾಹರಣೆಯಾಗಿ ನಿಲ್ಲುತ್ತದೆ ಈ ಘಟನೆ. ಅದೇ ಸಂಗೀತವಿಂದು ಸೂಫಿ ಸಂಗೀತವೆಂದು ಜನಾನುರಾಗಿ.
ಆ ಸಾಲುಗಳು ಇಲ್ಲಿವೆ:
ಕುಶ್‍ತಗಾಂ- ಎ -ಖಂಜರ್- ಎ -ತಸ್ಲೀಮ್ ರಾ
ಹರ್ ಜಮಾನಾ ಅಜ್ ಘೆಬ್ ಜಾನ್ -ಎ- ದೀಗರ ಅಸ್ತ್
ಪ್ರೀತಿಯ ಕತ್ತಿಯಲಗಿಗೆ ಜೀವಕೊಟ್ಟ ಜೀವಕೆ
ಕ್ಷಣಕ್ಷಣವೂ ಮರುಜೀವ ಕೊಡುತ ಸಲಹುವನು ದೇವನು
ಈ ಘಟನೆಯನ್ನೇ ನೆನೆಯುತ್ತ ಸಂಗೀತಕ್ಕಿರುವ ಸೆಳೆತ, ಆಳ ವಿಸ್ತಾರದ ಬಗ್ಗೆ ಚರ್ಚಿಸುತ್ತ ಅಜ್ಮೇರ್‍ನಿಂದ ನಾವು ನೇರವಾಗಿ ಪುಷ್ಕರದತ್ತ ಪಯಣಿಸಿದೆವು.
ಪುಷ್ಕರ್... ಇದೊಂದು ಅತೀ ಪುರಾತನ ಪಟ್ಟಣ. ಇದನ್ನು ಯಾವಾಗ ಸ್ಥಾಪಿಸಲಾಯಿತೆಂಬ ಮಾಹಿತಿ ಇಲ್ಲದಿದ್ದರೂ, ಇದು ಬ್ರಹ್ಮನಿಂದ ಸ್ಥಾಪಿತವಾದ ಯಜ್ಞ ನಗರಿ ಎಂದು ಪುರಾಣಗಳು ಹೇಳುತ್ತವೆ. ಪುಷ್ಕರವೆಂದರೆ ನೀಲ ಕಮಲ ಪುಷ್ಪ ಎಂದರ್ಥ. ಮಹಾಭಾರತದಲ್ಲಿ ಮಹಾರಾಜಾ ಯುಧಿಷ್ಠಿರನು ಪುಣ್ಯಸ್ನಾಣ ಮಾಡಿದ ಪವಿತ್ರ ಪುಷ್ಕರಣಿ ಇರುವುದು ಇಲ್ಲೇ ಪುಷ್ಕರದಲ್ಲಿಯೇ. ವಾಮನ ಪುರಾಣದಲ್ಲಿ ಪ್ರಹ್ಲಾದನು ಈ ಪುಷ್ಕರಣಿಗಳ ಸ್ಥಳಕ್ಕೆ ಯಾತ್ರೆಗೈದಿದ್ದು ಇಲ್ಲಿ ಉಲ್ಲೇಖಿಸಲ್ಪಟ್ಟಿದೆ. ಭರತಖಂಡದ ಪವಿತ್ರ ಚಾರಧಾಮಗಳ ನಂತರ ಐದನೇ ಧಾಮವೇ ಪುಷ್ಕರ. ಇಲ್ಲಿ ಪೂಜೆಗೊಳ್ಳದಿದ್ದರೆ ಆ ನಾಲ್ಕೂ ಧಾಮಗಳ ಚಾರಣಕ್ಕೆ ಅಂತ್ಯವಿಲ್ಲ ಎನ್ನುವ ನಂಬಿಕೆ ಇದೆ. ಅಷ್ಟೊಂದು ಪವಿತ್ರ ಪುಣ್ಯ ಕ್ಷೇತ್ರವಿದು.
ಸ್ವತ: ಬ್ರಹ್ಮನಿಂದ ನಾಮಕರಣಗೊಳಿಸಲ್ಪಟ್ಟು ಪ್ರಸಿದ್ಧಿ ಪಡೆದ ಈ ಪುಷ್ಕರದಲ್ಲಿ ಬ್ರಹ್ಮ ಮಂದಿರವನ್ನು 14ನೇ ಶತಮಾನದಲ್ಲಿ ಸ್ಥಾಪಿಸಲಾಯಿತೆಂದು ಹೇಳಲಾದರೂ ಇನ್ನೊಂದು ಮೂಲದಿಂದ ಈ ಮಂದಿರವು 2000 ವರ್ಷಗಳಷ್ಟು ಹಳೆಯದೆಂದು ನಂಬಲಾಗಿದೆ. ಮಂಡೋದರದ ರಾಜ ನಹದರ್ವನು 7ನೇ ಶತಮಾನದಲ್ಲಿ ಈ ಪುಷ್ಕರಣಿಗಳನ್ನು ಪುನರುಜ್ಜೀವನಗೊಳಿಸಿದ ಹಾಗೂ ಲೂನಿ ನದಿಗೆ ಅಡ್ಡಲಾಗಿ ಒಡ್ಡು ಹಾಕಿ ಅನೇಕ ಘಾಟಿಗಳನ್ನು ಹಾಗೂ ಅನೇಕ ಧರ್ಮಶಾಲೆಗಳನ್ನು ನಿರ್ಮಿಸಿದ. ಪುರಾಣಗಳ ಪ್ರಕಾರ ಬ್ರಹ್ಮನೊಮ್ಮೆ ಮಹಾಯಾಗ ಮಾಡಬೇಕೆಂದಾಗ ಭೂಲೋಕದಲ್ಲಿ ಸೂಕ್ತ ಸ್ಥಳಕ್ಕಾಗಿ ಹಂಸವನ್ನು ಬಿಟ್ಟು ಹುಡುಕುತ್ತಿರುವಾಗ, ಈ ಜಾಗವು ಸೂಕ್ತವೆನಿಸುತ್ತದೆ, ಆದರೆ ಇಲ್ಲಿ ವಜ್ರನಾಶನೆಂಬ ರಕ್ಕಸ ಇಲ್ಲಿ ಜನಪದಕ್ಕೆ ಲೋಕಕಂಟಕನಾಗಿ ಕಾಡುತ್ತಿರುವುದನ್ನು ಕಂಡು, ತನ್ನ ಕಮಲ ಪುಷ್ಪಕ್ಕೆ ಮಂತ್ರ ಪ್ರೋಕ್ಷಿಸಿ ಅವನನ್ನು ಸಂಹರಿಸಲು ಕಳುಹಿಸಿದಾಗ ಭಯಂಕರ ಯುದ್ಧ ನಡೆದು, ಆ ಯುದ್ಧದಲ್ಲಿ ವಜ್ರನಾಶ ಹತನಾದರೂ, ಆ ಕಮಲದ ಮೂರು ದಳಗಳು ಉದುರುತ್ತವೆ. ಅವೇ ಜೇಷ್ಠ , ಮಧ್ಯಮ, ಹಾಗೂ ಕನಿಷ್ಠ ಪುಷ್ಕರಗಳಾಗಿ ಮಾರ್ಪಟ್ಟವು ಎಂಬುದು ಪುರಾಣ.
ಮುಂದೆ ಬ್ರಹ್ಮ ಇಲ್ಲಿ ಯಜ್ಞ ಕೈಗೊಂಡು ಯಜ್ಞಕ್ಕೆ ಆಹುತಿ ನೀಡಲು ಅವನು ಪತ್ನಿ ಸಮೇತನಾಗಿ ಅದನ್ನು ನೀಡಬೇಕಾಗಿದ್ದು, ಸರಸ್ವತಿಯು ಆಗ ಲಕ್ಷ್ಮಿ, ಪಾರ್ವತಿ ಇಂದ್ರಾಣಿಯರ ಬರುವಿಗಾಗಿ ಕಾಯುತ್ತಿದ್ದಳು, ಆದರೆ ಯಜ್ಞದ ಸಂದರ್ಭದಲ್ಲಿ ಯಜ್ಞಕ್ಕೆ ಆಹುತಿ ನೀಡಬೇಕಾದ ಸಂದರ್ಭದಲ್ಲಿ ಸರಸ್ವತಿಯು ಇನ್ನೂ ದೂರದಲ್ಲಿದ್ದುದರಿಂದ, ಆಹುತಿಯನ್ನು ದಂಪತಿ ಸಮೇತ ನೀಡಬೇಕಾದುದರಿಂದ ಅದೇ ಸಂದರ್ಭದಲ್ಲಿ ಗಾಯಿತ್ರಿ ಎಂಬ ಗುರ್ಜರ ಕನ್ಯೆಯು ಆ ಅಮೃತ ಕಲಶವನ್ನು ತಲೆಮೇಲೆ ಹೊತ್ತು ಅಲ್ಲಿಯೇ ಪಕ್ಕದಲ್ಲಿ ಕಾಯುತ್ತಿದ್ದು, ಅವಳನ್ನೇ ವಿವಾಹವಾಗಿ ಯಜ್ಞಕ್ಕೆ ನೀಡಬೇಕಾದ ಆಹುತಿ ನೀಡಿ ಸಾಂಗಗೊಳಿಸುತ್ತಾನೆ. ಇದು ಸರಸ್ವತಿ (ಸಾವಿತ್ರಿ)ಗೆ ನಂತರ ಗೊತ್ತಾಗಿ ಬ್ರಹ್ಮನು ಕೇವಲ ಆ ಸ್ಥಳದಲ್ಲಿ ಅಂದರೆ ಪುಷ್ಕರದಲ್ಲಿ ಮಾತ್ರ ಪೂಜಿಸಲ್ಪಡಲಿ ಎಂದು ಶಾಪ ಹಾಕಿಬಿಡುತ್ತಾಳೆ. ಯಾಕೆ ಈ ಬ್ರಹ್ಮನ ಮಂದಿರಕ್ಕೆ ಇಷ್ಟೊಂದು ವಿಶೇಷತೆ ಎಂದರೆ ಇಲ್ಲಿ ಪೂಜೆ ಸಲ್ಲಿಸುವುದರಿಂದ ಮಾತ್ರ ಬ್ರಹ್ಮನಿಗೆ ಬೇಡಿಕೆಗಳು ಕೇಳಿಸುತ್ತವೆ ಹಾಗೂ ಈಡೇರುತ್ತವೆ ಎಂದಾಯಿತು. ಇಲ್ಲಿಂದ ಮಾತ್ರ ಆತ ತನ್ನ ಭಕ್ತರಿಗೆ ವರ ದಯಪಾಲಿಸಬಲ್ಲ ಎಂದಂತಾಯಿತಲ್ಲವೇ.
ಹಾಗೆಯೇ ಇದು ಪರಾಶರ ಮುನಿಯ ಜನ್ಮಭೂಮಿಯೂ ಹೌದು. ಅವರ ಅನುಯಾಯಿಗಳಾದ ಪರಾಶರ ಬ್ರಾಹ್ಮಣರು ಇಲ್ಲಿ ಈಗಲೂ ಸುತ್ತಲೂ ನೆಲೆಸಿದ್ದಾರೆ. ಇಲ್ಲಿ ಇವರ ಕುಲದೇವತೆ ಜಿನಮಾತಾ ಮಂದಿರವು ಕಳೆದ ಸುಮಾರು ಸಾವಿರ ವರ್ಷಗಳಿಂದಲೂ ಆರಾಧನೆಯಲ್ಲಿದೆ. ಅಲ್ಲದೇ ಮೂಲವಾಗಿ ಈ ಜಾಗವನ್ನು ಆಳುತ್ತಿದ್ದ, ಗುರ್ಜರ ಪಂಗಡದ ಸಂಪ್ರದಾಯದ ಪೂಜಾರಿಗಳೂ, ಆರಾಧಕರು ಕೂಡ ಈಗಲೂ ಇಲ್ಲಿ ಕಾಣಸಿಗುತ್ತಾರೆ. ಗೌತಮ ಮುನಿಯ ಮಂದಿರವೂ ಇಲ್ಲಿದೆ.
ಪ್ರತಿವರ್ಷವೂ ಇಂಗ್ಲೀಷ ಕ್ಯಾಲೆಂಡರಿನ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಬರುವ ಕಾರ್ತಿಕ ಮಾಸದ ನವಮಿಯಿಂದ ಪೂರ್ಣಿಮೆಯವರೆಗೆ ಪುಷ್ಕರ ಮೇಳಾ ಜರುಗುತ್ತದೆ. ಒಂಟೆಗಳ ಮೇಳಾ ಎಂದೆ ಜಗತ್ಪ್ಡಸಿದ್ಧ ಇದು. ಒಂಟೆಗಳ ಪ್ರದರ್ಶನ ಖರೀದಿ ಬಲು ಜೋರು ಈ ಜಾತ್ರೆಯಲ್ಲಿ. ತಮ್ಮ ತಮ್ಮ ಒಂಟೆಗಳನ್ನು ಸಜಾಯಿಸಿ, ಶೃಂಗರಿಸಿ ಕರೆತರಲಾಗುತ್ತದೆ, ಇಲ್ಲಿ ಆಭರಣ ಮತ್ತೆ ಕುಶಲಕಲೆಗಳ ಅಂಗಡಿಗಳ ಸಾಲುಗಳೇ ಬಂದಿರುತ್ತವೆ, ನಮ್ಮ ಸಲುವಾಗಿ ಎಂದು ತಿಳಿದುಬಿಟ್ಟೀರಿ ಮತ್ತೆ, .... ಅಲ್ಲ ಅಲ್ಲ ಅವು ಒಂಟೆಗಳಿಗಾಗಿ ತೆರೆದ ಅಂಗಡಿಗಳು ಮಾತ್ರ.. ......ನಮಗೂ ಇರುತ್ತವೆ ಬಿಡಿ ಅದು ಬೇರೆ ಮಾತು. ತಮ್ಮ ತಮ್ಮ ಒಂಟೆಗಳಿಗೆ ಬೆಳ್ಳಿಯ ಗೆಜ್ಜೆಗಳು, ಕಂಕಣಗಳು, ಬೆಲ್ಟಗಳನ್ನು ಯಥೇಚ್ಛವಾಗಿ ತೊಡಿಸುತ್ತ, ತರ ತರಹದ ರೂಪಗಳಲ್ಲಿ ಅದರ ಕೇಶ ಶೃಂಗಾರ ನೋಡುವಂತಿರುತ್ತದೆ. ಅವುಗಳ ಧಿರಿಸುಗಳ ಬಹುದೊಡ್ಡ ಬಾಜಾರ ಇರುತ್ತದೆ ಅಲ್ಲಿ. ಕುದುರೆ ರೇಸ್, ಒಂಟೆಗಳ ರೇಸ್ ಗಳನ್ನು ಏರ್ಪಡಿಸಿ ಗೆದ್ದ ಒಂಟೆ, ಕುದುರೆಗಳಿಗೆ, ಅದರ ಮಾಲೀಕರಿಗೆ ಆದರಿಸಿ ಬಹುಮಾನಿಸಲಾಗುತ್ತದೆ, ಈ ಜಾತ್ರೆಯಲ್ಲಿ ಕನಿಷ್ಠ 50 ರಿಂದ 60 ಸಾವಿರದಷ್ಟು ಒಂಟೆಗಳ ತಲೆಗಳು ಈ ಹದಿನೈದು ದಿನಗಳಲ್ಲಿ ಕೈ ಬದಲಿಸುತ್ತವೆ ಎಂದರೆ ಇದರ ಅಗಾಧತೆ ಅರಿಯಬಹುದು.
ಜಾತ್ರೆಗೆ ಸೇರುವ ಇಡೀ ಸಮುದಾಯ ಪವಿತ್ರ ಪುಷ್ಕರಗಳಲ್ಲಿ ಮಿಂದು ಬ್ರಹ್ಮನ ದರ್ಶನಗೈಯ್ಯುತ್ತಾರೆ. ಈ ಸಂದರ್ಭದಲ್ಲಿ ರಾಜಸ್ಥಾನೀ ಲೋಕಸಂಗೀತ, ನೃತ್ಯ, ಕುಣಿತಗಳನ್ನು ಯಥೇಚ್ಛವಾಗಿ ಆಯೋಜಿಸಲಾಗುತ್ತದೆ, ಪ್ರತಿಯೊಬ್ಬರು ಈ ದಿನಗಳಿಗಾಗಿ ಎದುರು ನೋಡುವ ಸುಂದರ ಸೊಗಡಿನ ತಾಣವಿದು ಆಗ, ಎಲ್ಲ ಸ್ಥಳೀಯರನ್ನೊಳಗೊಂಡಂತೆ ಪ್ರವಾಸಿಗರೂ ಕೂಡ ಆ ಮಾಹೋಲನ್ನು ಮನಪೂರ್ತಿ ಅನುಭವಿಸಿ ಆನಂದಿಸುತ್ತಾರೆ,. ಈ ತರಹದ ಮೇಳ ಮತ್ತೊಂದು ಇಲ್ಲವೇ ಇಲ್ಲ ಎಂದೇ ಹೇಳಬಹುದು. ಅದಕ್ಕಾಗಿಯೇ ಆ ಸಂದರ್ಭದಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖೆಯೂ ಲಕ್ಷಗಳನ್ನು ಮೀರುತ್ತದೆ. ಉಳಿದ ದಿನಗಳಲ್ಲಿ ಈ ಸಂಖ್ಯೆ ಐದಾರು ಸಾವಿರದಷ್ಟು ಇರುವುದೆಂದು ತಿಳಿಯಿತು. ಇದೇ ಸಂದರ್ಭದಲ್ಲಿ ಒಂಟೆ ಸಫಾರಿಗಳನ್ನೂ ಆಯೋಜಿಸಲಾಗುತ್ತದೆ, ಪ್ರವಾಸಿಗರು ಮರಳಿನ ಸ್ಯಾಡ್ ಡ್ಯೂನ್‍ಗಳಲ್ಲಿ ಏರಿಳಿದು ಅದರ ಮಜಾ ಸವಿಯಬಹುದು.
ಈಗ ನಾವು ಪುಷ್ಕರದಲ್ಲಿದ್ದೆವು. ರಾತ್ರಿ ಪುಷ್ಕರಗೆ ತೆರಳಿ ನಮಗೆ ನಿಗದಿ ಪಡಿಸಿದ ಲಾಡ್ಜ್‍ನಲ್ಲಿ ತಂಗಿದೆವು. ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಬ್ರಹ್ಮನ ದರ್ಶನಕ್ಕೆ ತೆರಳಿದೆವು. ಅಲ್ಲಿಯೇ ಪುಷ್ಕರಣಿಯ ದಂಡೆಯ ಮೇಲೆ ಆಗಲೇ ನೂರಾರು ಭಕ್ತರು ನೆರೆದು ತಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ಕೋರಿ, ಪೂಜಾರಿಗಳಿಂದ ಮಂತ್ರ ಪಠಣಗಳ ಆಚರಣೆಗಳನ್ನು ಕೈಗೊಳ್ಳುತ್ತಿದ್ದುದು ಕಣ್ಣಿಗೆ ಬೀಳುತ್ತಲೇ ನಮಗೂ ಒಬ್ಬ ಆಚಾರರÀ ಪುಷ್ಕರದ ದಂಡೆಯ ಘಾಟಿಯ ಪಾವಟಿಗೆಗಳ ಮೇಲೆ ಕುಳಿತು ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಕೋರುವ ಪೂಜೆಯನ್ನು ನಮ್ಮಿಂದ ಮಾಡಿಸಿದರು. ನಾವು ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ ಒಮ್ಮಲೇ ಮೋಡದ ಮಂಜು ಮುಸುಕಿ ನಮ್ಮ ಅಂಗೈಗಳೇ ಕಾಣದಷ್ಟು ದಟ್ಟ ಮಂಜು ನಮ್ಮನ್ನು ಪುಷ್ಕರವನ್ನು ಕಾಣದಂತೆ ಆವರಿಸಿಬಿಟ್ಟಿತು, ಬಹುಹೊತ್ತಿನ ವರೆಗೆ. . ಅದೊಂದು ಅಭೂತಪೂರ್ವ ಸನ್ನಿವೇಷ..
ತಟ್ಟನೆ ಗುಲ್ಜಾರರ ಬಹು ಜನಪ್ರಿಯ 'ರೂಹ್ ದೇಖೀ ಹೈ ಕಭೀ' ಕವನ ನೆನಪಾಯಿತು.
ರೂಹ್ ದೇಖೀ ಹೈ, ಕಭೀ ರೂಹ್ ಕೋ ಮಹಸೂಸ್ ಕಿಯಾ ಹೈ?
ಜಗತೇ-ಜೀತೇ ಹುಯೇ ದೂಧಿಯಾ ಕೊಹರೇ ಸೆ ಲಿಪಟ್‍ಕರ್
ಸಾಂಸ್ ಲೇತೇ ಹುಯೇ ಇಸ್ ಕೊಹರೇ ಕೋ ಮಹಸೂಸ್ ಕಿಯಾ ಹೈ?
(ನೋಡಿರುವೆಯಾ ಎಂದಾದರೂ, ಆತ್ಮವನ್ನು,
ಬಂದಿದೆಯಾ ಎಂದಾದರೂ, ಅನುಭಾವಕ್ಕೆ
ಜೀವಂತ ಜಾಗೃತ ಮಿಡಿವಾತ್ಮವು ಈ ಶ್ವೇತ ಮಂಜನ್ನು ತಬ್ಬಿ ಉಸಿರೆಳೆವುದನ್ನು,)
ಹೌದು ಈ ಪುಷ್ಕರದಲ್ಲಿ ಪುಣ್ಯಸ್ನಾಣ ಗೈಯ್ಯಲು ಮಹಾಭಾರತದ ಧರ್ಮರಾಜ ಅಂದರೆ ಹಸ್ತಿನಾವತಿಯ ಯುಧಿಷ್ಠಿರನೆಂಬ ಜೇಷ್ಠ ಪಾಂಡವನಿಲ್ಲಿ ಬಂದಿದ್ದನಲ್ಲವೇ? ನಂತರ ಕೇವಲ ಒಬ್ಬಂಟಿಯಾಗಿ ಅರ್ಜುನ , ಭೀಮ ನಕುಲ ಸಹದೇವರಾದಿಯಾಗಿ ಎಲ್ಲಾ ಅಣ್ಣ ತಮ್ಮಂದಿರನ್ನು,, ಸೈನ್ಯಬಲವನ್ನು, ಸಂಪತ್ತನ್ನು ಸಕಲ ಬದುಕಿನ ಮಹಾಭಾರತ ಜಾತ್ರೆಯನ್ನು ಈ ಧರೆಯಿಂದ ಒಂದೊಂದಾಗಿ, ಒಬ್ಬೊಬ್ಬರನ್ನಾಗಿ ಹಿಂಬಿಡುತ್ತ, ಸ್ವರ್ಗಕ್ಕೆ ನಡೆದಿದ್ದನಲ್ಲವೇ ಏಕಾಂತವಾಗಿ, ಒಬ್ಬಂಟಿಯಾಗಿ, ಒಂದೊಂದೇ ಹೆಜ್ಜೆಗಳನ್ನು ಊರುತ್ತ ಸ್ವರ್ಗದ ದಾರಿಯಲ್ಲಿ ಏರಿದ್ದನಲ್ಲವೇ..... ಹರಿದ್ವಾರ ಋಷಿಕೇಶಗಳ ಮೂಲಕ ಸ್ವರ್ಗಾರೋಹಣದ ದಾರಿಯಲ್ಲಿ. ಒಬ್ಬರೆಂದರೆ ಒಬ್ಬ ಮನುಷ್ಯನೂ ಅವನ ಜೊತೆಯಾಗಲಿಲ್ಲವಲ್ಲ, ಆ ಪಯಣದಲ್ಲಿ, ಕೇವಲ ಒಂದೇ ಒಂದು ನಾಯಿ ಮಾತ್ರ ಅವನ ಜೊತೆಯ ಪಥಿಕ. ...... 'ಚಲ್ ಅಕೇಲಾ ಚಲ್ ಅಕೇಲಾ ಚಲ್ ಅಕೇಲಾ, ತೇರಾ ಮೇಲಾ ಪೀಛೇ ಛೂಟಾ ರಾಹೀ ಚಲ್ ಅಕೇಲಾ'..ನಮ್ಮ ಸಿಪಾಯಿ ರಾಮುವಿನ 'ಎಲ್ಲಿಗೆ ಪಯಣ ಯಾವದೋ ದಾರಿ, ಏಕಾಂಗಿ ಸಂಚಾರಿ....ನಡೆದಿದೆಯಲ್ಲೋ ಅಂಧನ ರೀತಿ...''. ಮನುಷ್ಯನ ಒಂಟಿತನವನ್ನೇ ಹೇಳುತ್ತದಲ್ಲವೇ,..ಕೆಲವೊಂದು ಸಂದರ್ಭದಲ್ಲಿ ಮನುಷ್ಯ ಒಂಟಿಯಾಗಲೇ ಬೇಕಲ್ಲವೇ! ಇದೇ ವಿಚಾರ ಹೊತ್ತು ನನ್ನೊಳಗೆ ನಾನು ಒಂಟಿಯಾಗಿ ಒಳಪ್ರಯಾಣದಲ್ಲಿದ್ದೆ ಈಗ...
ಈ ದಟ್ಟ ಮಂಜಿನಲ್ಲಿ ಅದೇ ಧರ್ಮಜನ ಒಂದಲ್ಲ ಅನೇಕ ಆಕಾರಗಳು ಕಂಡಂತಾಗುತ್ತಿದ್ದವು. ಅದೇ ಶ್ವಾನವನ್ನು ಹುಡುಕುತ್ತಿದ್ದೆ ನಾನೂ ಕೂಡ ಆ ನೆರಳುಗಳಲ್ಲಿ. ಅದು ಕಂಡರೆ ಧರ್ಮಜ ಕಂಡಂತೆಯೇ ಅಲ್ಲವೇ?, ಅವೆಲ್ಲ ನೆರಳುಗಳು ಶ್ವೇತವಸ್ತ್ರಧಾರಿಗಳಾಗಿ ಅಲ್ಲಿ ಕಣ್ಣಮುಂದಿನ ಬಹುದೊಡ್ಡ ಗಾವುದ ವ್ಯಾಪ್ತಿಯ ಪುಷ್ಕರದಲ್ಲಿ ಚಲಿಸಿ ಮಂಜನ್ನು ತಬ್ಬಿದಂತೆನಿಸುತ್ತಿತ್ತು. ನಮ್ಮ ಪೂರ್ವಜ ಅಜ್ಜ ಮುತ್ತಾತರೆಲ್ಲರೂ ಬಂದು ಬಂದು ನಮ್ಮೆಡೆ ನೋಡಿದಂತೆನಿಸುತ್ತಿತ್ತು.. ಆ ಶ್ವೇತ ಮಂಜು ನನ್ನ ಗದ್ದ ಗಲ್ಲಗಳನ್ನು ನೇವರಿಸಿ ಅತ್ತಿತ್ತ ಹಾರಾಡುತ್ತಿತ್ತು ತಂಪುತಂಪಾದ ಅನುಭವವನ್ನು ಧಾರೆ ಎರೆಯುತ್ತಿತ್ತು. ನಾನು ಹೊದ್ದ ಟಾವೆಲ್‍ನ್ನು ಅತ್ತಿತ್ತ ಸರಿಸುತ್ತಿತ್ತು. ಆಚಾರರ ಮಂತ್ರ ಪಠಣ ಅನೂಚಾನವಾಗಿ ನಡೆದಿದ್ದರೂ, ಇದೆಲ್ಲ ಆಗ ನನ್ನ ಸುತ್ತ ನಡೆಯುತ್ತಲೇ ಇತ್ತು. ಮನೆಯ ಹಿರಿಯರಾದಿಯಾಗಿ ಎಲ್ಲಾ ಆತ್ಮಗಳಿಗೆ ಶಾಂತಿ ಕೋರುವ ಪೂಜಾ ವಿಧಾನ ಮುಗಿದಾಗ, ಎಲ್ಲರಿಗು ಶಾಂತಿ ಕೋರಿ ಪುಷ್ಕರಕ್ಕೆ ಪ್ರಾರ್ಥಿಸಿದೆ. ಈಗ ನಿರಾಳವಾಯಿತು ಮನ.
ಹಗುರ ಮನದೊಂದಿಗೆ ಈಗ ಆ ಎಲ್ಲಾ ಆತ್ಮಗಳೊಂದಿಗೆ ಮಂದಿರದೆಡೆಗೆ ತೆರಳಿದೆವು. ಮಂದಿರದ ದಾರಿಯ ಬದಿಗಳಲ್ಲಿ ಅಂಗಡಿ ಮುಂಗಟ್ಟುಗಳ ಸಾಲು. ಎಲ್ಲವೂ ಮಂದಿರಕ್ಕೆ ಬೇಕಾದ ಸಾಮಗ್ರಿಗಳನ್ನು ಮಾರುವ ಅಂಗಡಿಗಳೇ. ಅಂಗಡಿಯೊಂದರಲ್ಲಿ ಕಾಯಿ ಕರ್ಪೂರಗಳನ್ನು ಕೊಂಡು ಬ್ರಹ್ಮದೇವನ ದರ್ಶನಗೈದೆವು. ಮಂದಿರವನ್ನು ಶ್ವೇತ ಸಂಗಮರಮರಿ ಹಾಗು ಕುಸುರಿ ಕೆತ್ತನೆಯ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಬ್ರಹ್ಮನ ಮೂರ್ತಿಯನ್ನು ಸುಂದರವಾಗಿ ಅಲಂಕಾರಗೊಳಿಸಿದ್ದು, ಭಾವಪರವಶರಾಗಿ ದರ್ಶನ ಪಡೆದೆವು. ನನ್ನ ಎಲ್ಲಾ ಹಿರಿಯರ ಆತ್ಮಗಳಿಗೆ ಶಾಂತಿ ಕೋರಿದೆ. ನನ್ನ ಇನ್ನಿತರ ಕೋರಿಕೆಗಳನ್ನು ಬ್ರಹ್ಮನಲ್ಲಿ ಪ್ರಾರ್ಥಿಸಿದೆ. ಜಗತ್ತಿನಲ್ಲಿಯೇ ಏಕಮೇವಾದ್ವಿತೀಯ ಬ್ರಹ್ಮನ ಮಂದಿರದಲ್ಲಿ ಕುಳಿತು ಅವನ ಉಪಾಸನೆ ಮಾಡುತ್ತಿದ್ದೆವು ನಾವೀಗ.
ರಾಜೇಂದ್ರ ಕೃಷ್ಣರ 'ಖುದಾ ಭೀ ಆಸಮಾಂ ಸೆ ಜಬ್ ಜಮೀಂ ಪರ್ ದೇಖತಾ ಹೋಗಾ
ಮೇರೇ ಮೆಹಬೂಬ್ ಕೊ ಕಿಸನೇ ಬನಾಯಾ ಸೋಚತಾ ಹೋಗಾ'
ಹಾಡನ್ನು ನನ್ನ ಮಗ ಗುಣಿಗುಣಿಸುವಂತಾಗಲಿ ಎಂದು ಸುಂದರ ಕವನದಂತಹ ಹೂ ಮನಸಿನ ಕನ್ಯೆಯೊಂದನ್ನು ನನ್ನ ಮಗನಿಗೆ ದಯಪಾಲಿಸಪ್ಪ ದೇವರೇ ಎಂದು ಕೋರಿದೆ...ಹಾಗೆಯೇ ಮಗಳಿಗೊಂದು ಸೂಕ್ತ ವರ.......ದೇವರು ತಥಾಸ್ತು ಎಂದನೇ?
ಮಂದಿರದ ಆವರಣದಲ್ಲಿ ಇನ್ನೂ ಅನೇಕ ಸಣ್ಣ ಸಣ್ಣ ದೇವಾಲಯಗಳು ಸಮುಚ್ಛಯದಲ್ಲಿವೆ. ಅಲ್ಲಿರುವ ದೇವಗಣಗಳ ದರುಶನ ಪಡೆದು ಪುಣೀತರಾದೆವು. ಬ್ರಹ್ಮನ ಮಂದಿರದ ಶಿಖರ ಗೋಪುರಕ್ಕೆ ಕೆಂಪು ಬಣ್ಣ ಬಳಿಯಲಾಗಿದೆ. ತುಂಬ ಭಕ್ತಿಮಯ ವಾತಾವರಣ ಸುತ್ತ ಮುತ್ತಲೂ. ಜಗತ್ಪಿತಾ ಬ್ರಹ್ಮದೇವರ ದರ್ಶನ ಪಡೆದು ಅಲ್ಲಿಯೇ ಎಡಬಲಗಳ ಸಾಲು ಸಾಲು ಅಂಗಡಿಗಳಲ್ಲಿ ಮಾರುವ ಪೂಜಾ ಮೂರ್ತಿಗಳು, ಪೂಜಾ ಸಲಕರಣೆಗಳ ಅಂಗಡಿಗಳಲ್ಲಿ ಕುಬೇರ, ಗಜಾನನ ಮೂರ್ತಿಗಳನ್ನು ಮನೆಯಲ್ಲಿಯ ಪೂಜೆಗಾಗಿ ಖರೀದಿಸಿದೆವು. ಅಲ್ಲಿಯ ಗುಲ್ ಕಂದ ಬಲು ಪ್ರಸಿದ್ಧವಂತೆ ಹೀಗಾಗಿ ರೋಜವಾಟರ್ ಹಾಗೂ ಗುಲ್ ಕಂದ ಕೂಡ ನಮ್ಮ ಕೈಚೀಲ ಸೇರಿದವು. ರಜಪೂತ ಮದುವೆಗಳಲ್ಲಿ ವರನ ಕೈಯಲ್ಲಿ ಖಡ್ಗವೊಂದನ್ನು ಹಿಡಿದುಕೊಳ್ಳಲು ನೀಡಲಾಗುತ್ತದೆ. ಈ ಖಡ್ಗಗಳು ಇಲ್ಲಿ ತರತರಹದ ಅಲಂಕಾರಗಳು, ಕುಸುರಿ ಕಲೆಗಳೊಂದಿಗೆ ಅವುಗಳ ಮಾರಾಟ ಮಳಿಗೆಗಳೇ ಇರುತ್ತವೆ. ನಾವೂ ಕೂಡ ಒಂದು ಕುಸುರಿ ಕೆತ್ತನೆ ಹೊಂದಿದ ಸಣ್ಣ ಖಡ್ಗವೊಂದನ್ನು ದಸರೆಯ ಖಂಡೇ ಪೂಜೆಯಲ್ಲಿ ಪೂಜಿಸಲು ಕೊಂಡೆವು. ಇನ್ನು ಹೆಚ್ಚೇನೂ ನೋಡುವುದು ಇಲ್ಲದ್ದರಿಂದ ಭಕ್ತಿಯಿಂದ ಜಗತ್ಪಿತಾ ಬ್ರಹ್ಮನಿಗೆ ಮತ್ತೊಮ್ಮೆ ನಮಿಸಿ ಜಯಪುರದೆಡೆಗೆ ಪಯಣಿಸಲು ಅಣಿಯಾದೆವು.
ಅಲ್ಲಿ ಒಂದೆಡೆ ಧಾಬಾದಲ್ಲಿ ಚಹ ಕುಡಿಯಲು ತುಸು ಹೊತ್ತು ನಿಂತೆವು. ಚಹವನ್ನು ಸಣ್ಣ ಸಣ್ಣ ಮಣ್ಣಿನ ಕುಡಿಕೆಗಳಲ್ಲಿ ನೀಡುತ್ತಿರುವುದು ಖುಷಿ ತಂದಿತು. ಸ್ಥಳೀಯ ಕುಂಬಾರರ ಖುಷಿಯಿಂದ ನಗುವ ಕಣ್ಣುಗಳು ಕಣ್ಣಮುಂದೆ ಬಂದಂತಾಯಿತು. ಧಾಬಾದಲ್ಲಿ ಕಿವಿಯಲ್ಲಿ ಸುಂದರವಾಗಿ ಬಂಗಾರದ ಲೋಲಕಗಳನ್ನು ಹಾಕಿಕೊಂಡ ಸ್ಥಳೀಯರು ಮಾತಿಗೆ ಸಿಕ್ಕರು. ವಯಸ್ಸಾದ ಅಜ್ಜಿಯೊಂದು ಏನಾದರೂ ನೀಡಲು ಕೈಚಾಚಿ ನಿಂತಿತು. ಅವಳಿಗೂ ಚಹ ಕೊಡಲು ಹೇಳಿ, ತುಸು ಕಾಸು ನೀಡಿ ಕಳುಹಿದೆ. 'ಜೀತೆ ರಹೋ ಬೇಟಾ' ಅಂದು ಮಂದಹಾಸದಿಂದ ಮುಂದೆ ಸಾಗಿತು. ಬ್ರಹ್ಮನೇ ಬರೆಯುತ್ತಾನಲ್ಲವೇ ಎಲ್ಲರ ಹಣೆಬರಹಗಳನ್ನು. ಅವಳ ಬದುಕನ್ನು ಹೇಗೆ ಬರೆದಿದ್ದಾನೆಯೋ!, ಆದರೆ ಅವಳ ಬದುಕಿನ ಆ ಒಂದು ಕ್ಷಣದ, ಅವಳ ಮುಖದ ಮೇಲಿನ ಆ ಕ್ಷಣದ ನಗುವನ್ನುಮಾತ್ರ ನಾನು ಬರೆದೆನೆ!, ಅಥವಾ ಬ್ರಹ್ಮ ನನ್ನ ಕೈಯಿಂದ ಬರೆಯಿಸಿದನೋ ಅರಿಯೆ, ಹಾಗೊಂದು ಯೋಚನೆ ಹೊಳೆಯುತ್ತಲೇ ಮನಸ್ಸು ಬದುಕಿನ ಸಂಕೀರ್ಣತೆಯ ಬಗ್ಗೆ ಆಲೋಚಿಸ ಒಳಹೊಕ್ಕಿತು. ಹೌದು ಬದುಕು ಕೂಡ ಬಲು ವಿಚಿತ್ರವಲ್ಲವೇ. ಅರಿತಷ್ಟು ಆಳಕ್ಕೆ ಕರೆದೊಯ್ಯುತ್ತದೆ. ನುರಿತಷ್ಟು ಅನುಭವವನ್ನು ನೀಡುತ್ತದೆ. ಇದೇ ವಿಚಾರದಲ್ಲಿ ಮುಳುಗಿದವನಿಗೆ ಆನಂದದ 'ಜಿಂದಗೀ ಕೈಸೀ ಹೈ ಪಹೇಲಿ ಹಾಯೇ, ಕಭೀ ತೊ ಹಸಾಯೆ, ಕಭೀ ಯೆ ರುಲಾಯೆ' (ಎಂಥ ಬದುಕಿನ ಪರೀಕ್ಷೆಯಿದು, ಕೆಲವೊಮ್ಮೆ ನಗಿಸಿ, ಇನ್ನೊಮ್ಮೆ ಅಳಿಸಿಬಿಡುತ್ತದಲ್ಲ') ಯೋಗೇಶರ ಅರ್ಥಗರ್ಭಿತ ಹಾಡೊಂದು ಗುಣಿಗುಣಿಸಿಕೊಳ್ಳತೊಡಗಿತು ಮನದಲ್ಲಿ.
ಹೌದು ಇದೇ ತರಹದ ಹಾಡೊಂದು ಇನ್ನೊಂದು ಇದೆಯಲ್ಲವೇ? , 'ಜಿಂದಗೀ ಕಾ ಸಫರ್ ಹೈ ಯೆ ಕೈಸಾ ಸಫರ, ಕೋಯೀ ಸಮಝಾ ನಹೀಂ, ಕೋಯೀ ಜಾನಾ ನಹೀಂ' ಇಂದೀವರ್ ನ ಸಾಲುಗಳು. ಬದುಕು ಹೇಗೆ ಕರೆದೊಯ್ಯುವುದೋ ಯಾರೂ ಅರಿಯರಲ್ಲವೇ. ಇದನ್ನು ಅರಿತವರಾರೂ ಇಲ್ಲ, ಅಥೈಸಿಕೊಂಡವರೂ ಇಲ್ಲ. ಎಲ್ಲರೂ ಸುಮ್ಮನೆ ಗಮ್ಯದತ್ತ ನಡೆಯುವವರೇ! ವಿಚಿತ್ರವಲ್ಲವೇ ಈ ಬದುಕೆಂಬ ಬಂಡಿ. ದೊರೆತ ಕಾಲದ ಕ್ಷಣಗಳಲ್ಲಿಯೇ ಬದುಕೊಂದನ್ನು ರೂಪಿಸಿಕೊಳ್ಳುವುದೇ ನಮಗೊದಗಿದ ಅವಕಾಶವಷ್ಟೆ. 'ಛೋಟಾ ಸಾ ಸಾಯಾ ಥಾ, ಆಂಖೋಂ ಮೇ ಆಯಾ ಥಾ, ಹಮ್ ನೆ ಭೀ ದೋ ಬೂಂದೋಂ ಸೆ ಮನ್ ಭರಲಿಯಾ' ಎಂಥಾ ಸಾಲುಗಳು. ಕೆಲವೇ ಅಕ್ಷರಗಳಲ್ಲಿ ಇಡೀ ಬದುಕನ್ನು ದೊರೆತ ಎರಡು ಹನಿಗಳಲ್ಲಿಯೇ ರೂಪಿಸುವ ರೂಪಕದ ವ್ಯಾಖ್ಯೆಯನ್ನು ಹಿಡಿದಿಟ್ಟುಬಿಟ್ಟಿದ್ದಾರಲ್ಲವೇ ಗುಲ್ಜಾರರು, ಹ್ಯಾಟ್ಸ್ ಆಫ್ ಸರ್, ನಿಮಗೆ ನೀವೇ ಸಾಟಿ ಎಂದಿತು ಮನ.
ಇದೇ ಯೋಚನೆಯಲ್ಲಿ ಮುಳುಗಿದವನಿಗೆ ಜೈಪುರ ಬಂದಿದ್ದು ಗೊತ್ತಾಗಲೇ ಇಲ್ಲ. ಜೈಪುರ ತಲುಪುತ್ತಲೇ ಅಲ್ಲಿ ನಮಗಾಗಿ ವಿಶೇಷ ಆತಿಥ್ಯವೊಂದನ್ನು ನಮಗೆ, ನಮ್ಮ ಟ್ರಾವೆಲ್ ಎಜೆನ್ಸಿಯ ಮಾಲೀಕರಾದ ಝಾಕೀರ್ ನೀಡಿದರು. ತರತರಹದ ಜೈಪುರಿ ವಿಶೇಷವಾದ ದಾಲ ಭಾಟಿ ಚೂರ್ಮ ಭೋಜನ ಸವಿದು, ಅವರಿಗೆ ವಿಶೇಷ ಆತಿಥ್ಯಕ್ಕಾಗಿ ವಂದಿಸಿದೆವು ಹಾಗೂ ಜಾವೇದ್‍ನಿಂದ ಹೃತ್ಪೂರ್ವಕವಾಗಿ ಬೀಳ್ಕೊಂಡು ಅಲ್ಲಿಯೇ ಸಮೀಪದಲ್ಲಿಯೇ ಇದ್ದ ಮಾಲ್ ಒಂದಕ್ಕೆ ಭೇಟಿ ನೀಡಿದೆವು. ದಾರಿಯಲ್ಲಿ ಅಲ್ಲಲ್ಲಿ ಒಂದರ ಮೇಲೊಂದು ಇರುವ ಸಾಕಷ್ಟು ಫ್ಲೈ ಓವರ್‍ಗಳು ಗಮನಸೆಳೆದವು.
ಅಲ್ಲಿಂದ ಸುಮಾರು ನಾಲ್ಕೈದು ಕಿಮೀಗಳ ದೂರದಲ್ಲಿರುವ ಜೈಪುರ ಹೊರವಲಯದ ಗ್ರಾಮದಲ್ಲಿ ಬಟ್ಟೆಗಳಿಗೆ ಅಚ್ಚು ಹಾಕಿ ಪ್ರದರ್ಶಿಸಿ ತೋರುವ, ಅವುಗಳನ್ನು ತಯಾರಿಸುವ ಫ್ಯಾಕ್ಟರಿಗೆ ಕರೆದೊಯ್ದರು. ಅಲ್ಲಿ ನುರಿತ ಕಾರ್ಮಿಕರಿಂದ ಸೀರೆಗಳಿಗೆ ಅಚ್ಚು ಹಾಕುವ ಕೆಲಸ ನಡೆದಿತ್ತು. ಇದಕ್ಕೆ ಬ್ಲಾಕ್ ಪ್ರಿಂಟಿಂಗ್ ಎನ್ನುವರು. ಅಲ್ಲಿ ‘ಬಾಂದಣಿ’ ಎಂಬ ಸ್ಥಳೀಯ ಜನಪ್ರಿಯ ಸೀರೆ ಹಾಗೂ ಜಮಖಾನೆಗಳನ್ನು ಕೊಂಡು ಅಲ್ಲಿಂದ ಸಿಂಗಾನೇರ್ ಏರ್‍ಪೋರ್ಟನತ್ತ ನಡೆದೆವು. ಗೆಳೆಯನಂತಾಗಿದ್ದ, ಸರವನ್ ಗೆ ವಂದಿಸಿ, ವಿದಾಯ ಹೇಳಿ, ಪುಟ್ಟ ಖುಷಿಯೊಂದನ್ನು ನೀಡಿ, ಧನ್ಯತೆಯ ಮನದಲ್ಲಿ ಏರ್ ಪೋರ್ಟ ಒಳಹೋದೆವು. ತಿರುಗಿ ನೋಡಿದೆ ಸುಮ್ಮನೊಮ್ಮೆ, ಸರವನ್ ಕಣ್ಣಾಲಿಗಳನ್ನು ತುಂಬಿ ನಿಂದು ತದೇಕವಾಗಿ ನಮ್ಮನ್ನೇ ನೋಡುತ್ತಿದ್ದ,.ಮರಳಿ ಅವನತ್ತ ಹೋಗಿ, ಅವನಿಗೆ ಇನ್ನೊಮ್ಮೆ ಅಪ್ಪಿ, ವಿದಾಯ ಹೇಳಿದೆ.. ಭಾರ ಹೃದಯದಲ್ಲಿ ಮರಳಿದನೆಂದು ಕಾಣುತ್ತದೆ. ಏರ್‍ಪೋರ್ಟನಲ್ಲಿ ನಮ್ಮ ಲಗೇಜ್‍ಗಳನ್ನು ಒಳಹಾಕಿ, ನಮ್ಮ ಕರೆಗಾಗಿ ದಾರಿಗಣ್ನಾಗಿ ಕುಳಿತೆವು. ಮುಂದಿನ ಬೆಂಚಿನ ಪ್ರಯಾಣಿಕನ ಮೋಬೈಲ್‍ನಲ್ಲಿ ಹಾಡೊಂದು ಕೇಳಿಸುತ್ತಿತ್ತು, 'ಸಜನರೆ ಝೂಟ್ ಮತಬೋಲೋ, ಖುದಾ ಕೆ ಪಾಸ್ ಜಾನಾ ಹೈ, ನ ಹಾಥೀ ಹೈ ನ ಘೋಡಾ ಹೈ, ವಹಾಂ ಪೈದಲ್ ಹೀ ಜಾನಾ ಹೈ'' ಎಂತಹ ಹಾಡು, ಹಾಡೆಂದರೆ ಇದು, ಎಲ್ಲಾ ಧರ್ಮಗಳ ಸಾರ ಸಂಗ್ರಹಗಳ ತಿರುಳು ಎಂದಿತು ಮನ. ಧರ್ಮಜನೇ ಹಾಡಿದಂತಿತ್ತು.....
ರಾಜಸ್ಥಾನದ ಸಂಸ್ಕೃತಿಯ ಬೇರುಗಳು ಬಹುವಿಶಾಲವಾಗಿ ಪಸರಿಸಿ, ಬಹು ಆಳಕ್ಕಿಳಿದಿವೆ, ಹೆಜ್ಜೆ ಹೆಜ್ಜೆಗೂ ಅಲ್ಲಿ ಪ್ರವಾಸಿಗರು ನೋಡುವಂತಹ ಇನ್ನೂ ಅನೇಕ ಪ್ರವಾಸಿ ತಾಣಗಳಿವೆ. ಈ ಪ್ರವಾಸದಲ್ಲಿ ನಾವೆಷ್ಟು ನೋಡಿದ್ದೆವೆಯೋ ಅಷ್ಟನ್ನು ತಮಗೆ ಕಟ್ಟಿಕೊಡಲು ಪ್ರಯತ್ನಿಸಿರುವೆ. ಇನ್ನೂ ಅನೇಕ ಪ್ರವಾಸಿಗರು, ಓದುಗರು ಅತ್ತ ಹೋದರೆ ಅವುಗಳ ಅನುಭವಗಳನ್ನು ಕಟ್ಟಿಕೊಡಲು ಕೋರುವೆ. ರಾಜಸ್ಥಾನದ ಆ ಮರಳ ಆತ್ಮದ ನವಿರು, ಆ ಗಳಿಗೆಗಳು ಮತ್ತೆ ಮತ್ತೆ ಅನುರಣಿಸಿ, ಕುಂಚವಾಗಿ ಚಿತ್ರವೊಂದನ್ನು ಪಟಲದಲ್ಲಿ ಬಿಡಿಸುತ್ತಿದ್ದವು. 'ಲಗಜಾ ಗಲೇ ತೊ ಫಿರ್ ಯೆ ಹಸೀಂ ಪಲ್ ಹೋ ನ ಹೋ, ಶಾಯದ್ ಫಿರ್ ಇಸ್ ಜನಮ್ ಮೆಂ ಮುಲಾಕಾತ್ ಹೋ ನ ಹೋ' ನಾನು ಹಾಡುತ್ತಿದ್ದೆನೋ, ಅದು ಹಾಡುತ್ತಿತ್ತೋ ಅರಿಯ! ,ನೆನಪು ಮಾತ್ರ ಮತ್ತೆ ಮತ್ತೆ ಬಂದು, ಮನ ತಪ್ತವಾಗಿ, ಕಣ್ಣಾಲಿಗಳು ತುಂಬಿ ಬಂದವು. ಬಿಟ್ಟು ಬರಲು ಯಾರಿಗೂ ಮನಸ್ಸಿಂದಂತಿರಲಿಲ್ಲ. ಅಷ್ಟೊಂದು ಗಾಢವಾಗಿ ನಮ್ಮನ್ನು ಸೆಳೆದುಬಿಟ್ಟಿತ್ತು, ಆ ರಾಜಸ್ಥಾನವೆಂಬ ಸೂಫಿ ಹಾಡಿನ ಮಿಟ್ಟಿಯ ಸೆಳೆತ, ಬಕ್ತಿಯಾರ್ ಕಾಕಿ ತರಹ. ನಾನೂ ಈಗ ಅದೇ ಟ್ರಾನ್ಸ್ ನಲ್ಲಿ ತೇಲುತ್ತಿದ್ದೆ, ನಮ್ಮ ಫ್ಲೈಟ್ ನ ಹೊರಡುವ ಸಮಯದ ವರೆಗೂ..ಇವಳು ಎಚ್ಚರಿಸುವ ವರೆಗೂ....
. ಹಾರುಹಕ್ಕಿಯ ತೆಕ್ಕೆಯಲ್ಲಿ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನಲ್ಲಿದ್ದೆವು. ಅಲ್ಲಿಂದ ಊರು ಮತ್ತೆ.... ಮನೆ. .. ರಾಜಸ್ಥಾನವೆಂಬ ಸ್ವರ್ಗದ ತುಣುಕೊಂದನ್ನು ನಾವೆಲ್ಲ ಜೀವಂತವಾಗಿಯೇ ನೋಡಿ ಆನಂದಿಸಿ, ಮರೆಯಲಾರದ ಅನುಭವಗಳನ್ನು ನೀಡಿದ ಆ ನೆಲಕ್ಕೆ, ಆ ಸ್ವರ್ಗಸದೃಶ ಮರುಭೂಮಿಗೆ ವಿಶೇಷವಾಗಿ, ಮತ್ತೆ ಮತ್ತೆ ವಂದಿಸಿ. ರಾಜಸ್ಥಾನ ಇದೋ ನಿನಗೊಂದು ನಮನ, ಇದೋ ನಿನಗೊಂದು ಸಲಾಮ್ ಎಂದು ಮತ್ತೆ ಮತ್ತೆ ಹೇಳಿತು ಮನ.
(ಸಧ್ಯಕ್ಕೆ .....ಮುಗಿಯಿತು)
Comments
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ...
ಇಟ್ನಾಳರೆ ನಮಸ್ಕಾರ. ಬಾಹ್ಯ ಜಗದ ಭೌತಿಕ ಯಾತ್ರೆಯ ಜತೆಗೆ ಕವಿಯ ಮನಸಿನ ಚೈತ್ರ ಯಾತ್ರೆಯೂ ಸೇರಿಕೊಂಡರೆ ಎಂತಹ ರಸದೌತಣದ ಅನುಭವಾಗುತ್ತದೆನ್ನುವುದಕ್ಕೆ ಉದಾಹರಣೆ ನಿಮ್ಮ ಈ ಪ್ರವಾಸ ಸರಣಿ. ಈ ಮೊದಲೆ ಹೇಳಿದಂತೆ ನೀರಸ ವರದಿಯಾಗಬಹುದಾಗಿದ್ದ ಅನುಭವವನ್ನು ಒಂದು ಸುಂದರ ಅನುಭೂತಿಯನ್ನು ಚೆಲ್ಲುತ್ತಾ ನಡೆಯುವ ಮಹಾಕಾವ್ಯದ ಮಟ್ಟಕ್ಕೇರಿಸಿಬಿಟ್ಟಿದೆ ನಿಮ್ಮ ಶೈಲಿ, ನಿಮ್ಮನ್ನು ನೀವು ಪ್ರವಾಸ ಮತ್ತದರ ಬರೆಯುವಿಕೆಯಲ್ಲಿ ಒಳಪಡಿಸಿಕೊಂಡ ರೀತಿ, ಆಗುಂಟಾದ ಅನುಭವ - ಅನುಭೂತಿಗಳೆಲ್ಲವನ್ನು ವಿಸ್ಮಯ, ಕುತೂಹಲ, ಪ್ರೀತಿಗಳೊಂದಿಗೆ ತೆರೆದಿಟ್ಟ ರೀತಿ ಇತ್ಯಾದಿ. ಅದೇನು ನೆನಪಿನ ಶಕ್ತಿಯಿಂದಲೆ ಹೆಕ್ಕಿ ಬರೆದಿರೊ ಅಥವಾ ನೋಟ್ಸ್ ಮಾಡಿಕೊಳ್ಳುತ್ತಿದ್ದಿರೊ - ಆಳವಾದ ವಿವರಗಳನ್ನು ಮನದ ಸೂಕ್ಷ್ಮಜ್ಞತೆಯೊಂದಿಗೆ ಹದವಾಗಿ ಬೆರೆಸಿ ಕಟ್ಟಿಕೊಟ್ಟಿದ್ದೀರಾ, ನಾವೆ ನೋಡುತ್ತಿದ್ದೇವೇನೊ ಎಂದು ಅನಿಸುವಷ್ಟು. ಇಂತದ್ದೊಂದು ವಿಶಿಷ್ಠ ಪ್ರವಾಸಿ ಅನುಭವ ಕಥನ ನೀಡಿದ್ದಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು :-)
In reply to ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ... by nageshamysore
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ...
ಆತ್ಮೀಯ ನಾಗೇಶ ಜಿ, ತಮ್ಮ ಮನದುಂಬಿದ ಪ್ರೀತಿ ಪೂರ್ವಕ ಸದಾಶಯ ನುಡಿಗಳಿಗೆ ವಂದನೆ ಸರ್, ನನಗೆ ಹೊಳೆದ ಹಾಗೆ ಹಂಚಿಕೊಂಡ ವಿಚಾರಗಳಿಗೆ ತುಂಬ ಮಹತ್ತರ ಬೆಲೆ ನೀಡಿರುತ್ತೀರಿ ಸರ್. ನಾನು ಪಾಮರ ಮಾತ್ರ. ಸುಮ್ಮನೆ ಸಹಜ ಅನಿಸಿಕೆಗಳನ್ನು, ನೆನಪಿನಾಳದಲ್ಲಿ ಹೊಕ್ಕಂತೆ ಬರೆದಿದ್ದನ್ನು ತಮ್ಮ ಮೆಚ್ಚುಗೆಯ ನುಡಿಗಳು ಇನ್ನಷ್ಟು ಮೇಲಕ್ಕೆ ಒಯ್ದಿವೆ ಸರ್, ತಮ್ಮ ಅನಿಸಿಕೆಗಳಿಗೆ ತುಂಬ ಮನದ ನಮನಗಳು ಮತ್ತೊಮ್ಮೆ..
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ...
ದೇಶ ಸುತ್ತಿ, ಕೋಶ ಓದಿ ಅರಿವನ್ನು ಹಂಚುತ್ತಿರುವ ಇಟ್ನಾಳರೇ, ಶುಭವಾಗಲಿ. ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು.
In reply to ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ... by kavinagaraj
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ...
ಹಿರಿಯ ಚಿಂತಕ ಬರಹಗಾರ ಕವಿನಾಗರಾಜ್ ಸರ್, ತಮಗೂ ಗುರುಪೂರ್ಣಿಮೆಯ ಶುಭಾಶಯಗಳು ಸರ್, ತಮ್ಮ ಸಹೃದಯತೆಯ ಶುಭಕಾಮನೆಗಳು ವಂದನೆಗಳು ಸರ್.
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ...
ಆತ್ಮೀಯ ಇಟ್ನಾಳ ಸರ್ ತಮಗೆ ಅಭಿಮಾನ ಪೂರ್ವಕ ನಮಸ್ಕಾರ.ತುಂಬ ತುಂಬಾ ಸುಂದರವಾಗಿ ಹೊರಹೊಮ್ಮಲ್ಪ್ ಟ್ಟ ಈ
' ರಾಜಸ್ಥಾನವೆಂಬ ಸ್ವರ್ಗದ ತುಣುಕು 'ಓದುಗರ ಮನಸ್ಸು ಸುರೆಗೈದುದು ಸುಳ್ಳಲ್ಲ.ಹನ್ನೊಂದು ಕಂತುಗಳಲ್ಲಿ ಬರೆದ ಈ ಪ್ರವಾಸ ಲೇಖನ ಓದುಗರಿಗೆ ಮರುಓದಿನ ಬಯಕೆ ಬರಿಸುವುದಂತೂ ಖಂಡಿತ.ಸಂಪದಿಗರ ಬಯಕೆಯಂತೆ ಲೇಖನ ವನ್ನ ಪುಸ್ತಕದ ರೂಪದಲ್ಲಿ ಅಚ್ಚು ಹಾಕಿಸಿ ಒಂದು ಶುಭದಿನದಂದು ಬಿಡುಗಡೆ ಆಗಲೆಂಬುದೇ ನಮ್ಮೆಲ್ಲರ ಹಾರೈಕೆ.
ವಂದನೆಗಳು ಇಟ್ನಾಳರೆ............ರಮೇಶ ಕಾಮತ್.
In reply to ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ... by swara kamath
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ...
ಆತ್ಮೀಯ ರಮೇಶ ಕಾಮತ್ ಸರ್, ತಮ್ಮ ಪ್ರತಿಕ್ರಿಯೆಗೆ ಕೃತಜ್ಞ. ಸಾಧ್ಯವಾದಲ್ಲಿ ತಾವು ಕೋರಿದಂತೆ, ಈ ಬರಹಗಳ ಪುಸ್ತಕ ತರಲು ಪ್ರಯತ್ನಿಸುವೆ ಸರ್. ಹಾಗೊಂದು ವೇಳೆ ಇದು ಸಾಧ್ಯವಾದರೆ, ಎಲ್ಲ ಕೂಡಿ ಬಿಡುಗಡೆಗೊಳಿಸೋಣ. ವಂದನೆಗಳು ಸರ್.
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ...
>>( .....ಮುಗಿಯಿತು)
-ಈ ಶಬ್ದ ಮಾತ್ರ ಇಷ್ಟವಾಗಲಿಲ್ಲ...:)
ಬಾಕಿ ಉಳಿದ ಸರಣಿ ಲೇಖನ, ಕ್ಷಮಿಸಿ ಕಾವ್ಯ ಪೂರ್ತಿ ಓದಿದೆ. ಇಟ್ನಾಳರೆ, "ರಾಜಸ್ಥಾನ ಅಲ್ಲೇನಿದೆ, ಒಂದೆರಡು ಅರಮನೆ ಬಿಟ್ಟರೆ ಮರುಭೂಮಿ" ಎಂದಿದ್ದೆ, ಮಗಳು ಕೆಲವರ್ಷ ಹಿಂದೆ ಸ್ಕೂಲ್ ಟ್ರಿಪ್ ಹೋಗುವಾಗ....;ಮುಗಿಸಿ ಬಂದವಳೇ ಫೋಟೋಗಳನ್ನು ತೋರಿಸುತ್ತಾ "ನೀವೂ ಒಮ್ಮೆ ಹೋಗಿ ನೋಡಿ, ಹೊಗಳಲು ಶಬ್ದ ಸಿಗುವುದಿಲ್ಲ ನನಗೆ" ಎಂದಿದ್ದಳು. ನಿಮ್ಮ ಕಾವ್ಯ ಓದಿದ ಮೇಲೆ ರಾಜಸ್ಥಾನಕ್ಕೆ ಒಮ್ಮೆ ಹೋಗಲೇ ಬೇಕು ಎಂದು ತೀರ್ಮಾನಿಸಿರುವೆ.
ಪ್ರತೀ ವರ್ಷ ಇಂತಹ ಪ್ರವಾಸ ಮಾಡಿ, ನಮಗೂ ನಿಮ್ಮ ಕಾವ್ಯದ ಮೂಲಕ ಪ್ರವಾಸ ಮಾಡಿಸಿ.
In reply to ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ... by ಗಣೇಶ
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ...
ಆತ್ಮೀಯ ಗಣೇಶ ಜಿ, ತಮ್ಮ ಅಭಿಮಾನಪೂರ್ವಕ ಹೊಗಳಿಕೆಗೆ ಮೂಕನಾನು. ಧನ್ಯನೆಂದರೆ, ಕೃತಜ್ಞವೆಂದರೆ ಕ್ಲೀಷೆಯಾಗುತ್ತದೆ, ಇಂತಹ ತೆರೆದ ಮನಗಳ ಹೃದಯವಂತ ಸಂಪದಿಗರಿಗಾಗಿ ಬರೆದ ನನಗೆ ಧನ್ಯತೆ ಒಡಮೂಡಿ ಕಡಲಾಗಿ ಹರಿಯುತ್ತಿದೆ ಎದೆಯಲ್ಲಿ, ನಮ್ರ ನಾನು ತಮ್ಮ ಮಾತಿಗೆ ಸರ್, ವಂದನೆಗಳು...