ಸಿಗರೇಟಿನ ವರ್ಣಾಶ್ರಮ..!

ಸಿಗರೇಟಿನ ವರ್ಣಾಶ್ರಮ..!

ಚಿತ್ರ ಕೃಪೆ : ವಿಕಿಪೀಡಿಯಾ

ನೋಡಬೇಕೆಂದು ಹೊರಟರೆ ಪ್ರಪಂಚದಲ್ಲಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ನಿಖರವಾಗಿ, ಸರ್ವಸಮ್ಮತವೆನಿಸುವಂತೆ ಗುರ್ತಿಸುವುದು ಕಷ್ಟ. ಯಾವ ಕ್ರಿಯೆಯ ಹಿನ್ನಲೆಯನ್ನೆ ನೋಡಲಿ ಅದರ ಕಾರ್ಯ-ಕಾರಣ ಸಮಷ್ಟಿತ ಸ್ಥಿತಿಯಲ್ಲಿ, ಪ್ರತಿಯೊಂದರ ಆಗುವಿಕೆಯನ್ನು ವಿವರಿಸಲು ಸಾಧ್ಯವಾಗುವುದರಿಂದ ಒಳಿತನ್ನಾಗಲಿ, ಕೆಡುಕನ್ನಾಗಲಿ ಸಂಧರ್ಭಕ್ಕೆ ತಕ್ಕ ಹಾಗೆ ಬಣ್ಣ ಹಾಕಿ ರೂಪಾಂತರಿಸಿಬಿಡಬಹುದು. ಅದೇ ರೀತಿಯಲ್ಲಿ ಬರಿ ಕೆಡುಕಿನದೆಂದೆ ಪರಿಭಾವಿಸುವ ವಿಷಯದಲ್ಲಿ ಒಳಿತಿನ ಮನೋಧರ್ಮವನ್ನು ಹುಡುಕುವುದು ಸಾಧ್ಯ; ಒಳಿತಿನಲ್ಲಿ ಕೆಡುಕನ್ನು ಸಹ.

ಸಿಗರೇಟು ಸೇವನೆ ಕೆಡುಕಿನ ಗುಂಪಿನಲ್ಲಿ ಆಯಾಚಿತವಾಗಿ ಸೇರುವ ವಿಷಯ. ಸೇದುವವರು ಮತ್ತು ಸೇದದವರು, ಇಬ್ಬರೂ ಒಪ್ಪುವ ಅಂಶವಿದು. ಆ ಸಿಗರೇಟಿನ ಮನೋಧರ್ಮದಲ್ಲು ಏನಾದರು ಒಳಿತು ಕಾಣಬಹುದೆ ? ಎಂದು ಆಲೋಚಿಸುತ್ತಿದ್ದಾಗ ಅದಕ್ಕು ಚತುರ್ವರ್ಣಾಶ್ರಮದ ಪ್ರಕ್ರಿಯೆಗು ಒಂದು ರೀತಿಯ ಸಂಬಂಧ ಕಲ್ಪಿಸಬಹುದೆನಿಸಿತು. ಆ ಅಲೋಚನೆಯ ಫಲಿತವೆ ಈ 'ಸಿಗರೇಟಿನ ವೇದಜ್ಞಾನ' ಕವನ.

ಸಾರಾಂಶದಲ್ಲಿ ಹೇಳುವುದಾದರೆ, ಸಿಗರೇಟು ಮತ್ತದರ ಸೇದುವಿಕೆಯ ಹವ್ಯಾಸ - ನೀತಿ ಪಾಠ ಹೇಳುವ ಬ್ರಾಹ್ಮಣನ ಪಾತ್ರ ವಹಿಸಲೂ ಸೈ; ಅಂತೆಯೆ ಭಂಡತನದಲ್ಲಿ ಕ್ಷತ್ರಿಯನ ಅವತಾರಕ್ಕೂ ಸರಿಯೆ. ವಾಣಿಜ್ಯದಲ್ಲಿ ಯಾವ ವೈಣಿಕನಿಗೂ ಕಡಿಮೆಯಿರದ ವ್ಯವಹಾರ ಜ್ಞಾನ ಪ್ರದರ್ಶಿಸಿದರೆ, ತನ್ನನ್ನು ಸೇದುವವರ ಸರ್ವನಾಶ ಮಾಡಲು ದುಡಿವ ತರದಲ್ಲಿ ಯಾವ ಶೂದ್ರ ಗಣವೂ, ಅದರ ಮುಂದೆ ನಾಚಿ ತಲೆ ತಗ್ಗಿಸಬೇಕು. ಇಷ್ಟೆಲ್ಲ ವರ್ಣಾಶ್ರಮದ ಕೀಟಲೆ ಬುದ್ಧಿ ತೋರುವ ಸಿಗರೇಟು, ಜಾತಿ ವರ್ಗದ ಬೇಧವಿಲ್ಲದೆ ಎಲ್ಲರಿಂದಲು ಸೇದಿಸಿಕೊಂಡು 'ಜೈ' ಅನಿಸಿಕೊಳ್ಳುವ ಜಾತ್ಯಾತೀತ ಅನ್ನುವ ವಿಪರ್ಯಾಸವಿನ್ನೊಂದು ಕಡೆ. 

ಈ ಕವನವನ್ನು ಸಿಗರೇಟಿನ ಗುಣಗಾನವೆಂದು ಪರಿಗಣಿಸದೆ, ಅದರ ಕುರಿತಾದ ಒಂದು ವಿಭಿನ್ನ ಆಲೋಚನೆಯನ್ನು, ಅದಕ್ಕೊಂದು ವಿಭಿನ್ನ ವ್ಯಕ್ತಿತ್ವವನ್ನು ಆರೋಪಿಸಿದ ಬಗೆಯೆಂದು ಸ್ವೀಕರಿಸುವುದು ಒಳಿತು. ಹಿಂದೆಲ್ಲ ನುಡಿದಿರುವಂತೆ - ಇದು ಸಿಗರೇಟು ಸೇದುವುದನ್ನು ಪ್ರೋತ್ಸಾಹಿಸುವುದಕ್ಕಲ್ಲ. ಪರೋಕ್ಷವಾಗಿ ಅದರ ನಿಲುಗಡೆಯನ್ನು ಪ್ರೇರೇಪಿಸುವುದಕ್ಕೆ. ಹೀಗಾಗಿ ಬರಿಯ ಕವನದ ಚೌಕಟ್ಟಲಷ್ಟೆ ಇದನ್ನು ಸ್ವೀಕರಿಸಿ ಎನ್ನುವ ವಿನಮ್ರ ಕೋರಿಕೆಯೊಂದಿಗೆ - ಇದೋ, ಕವನದ ಸಾಲುಗಳು ನಿಮಗಾಗಿ..!

ಸಿಗರೇಟಿನ ವೇದಜ್ಞಾನ
____________________

ತನ್ನನು ತಾನೆ ಬೆಂಕಿಗಿಟ್ಟು  
ತ್ಯಾಗಿಯ ಹೊದಿಕೆಯುಟ್ಟು
ಬಿಟ್ಟುಕೊಡದಾ ಒಳಗುಟ್ಟು
ನಿಧಾನ ವಿಷವೆ ಸಿಗರೇಟು! ||

ಸುಟ್ಟು ಕೊಂಡೇ ವೇದಾಂತ
ಹೇಳುವ ಮುನಿಗಳ ತಾತ
ವರ್ಣಭೇಧವಿಲ್ಲದ ಸಮತ
ಸಿಗರೇಟಿಗರೆಲ್ಲ ಒಂದೆ ಮತ! ||

ನೀತಿಪಾಠ ಹೇಳೊ ಬ್ರಾಹ್ಮಣ
ಅವನಾ ತಪ್ಪೇನಿಲ್ಲದ ಕಾರಣ
ಹುಸಿ ವಿಶ್ವಾಸದಲೆ ಆತ್ಮರಕ್ಷಣೆ
ಕ್ಷತ್ರಿಯ ಗುಣವಲ್ಲವೆ ಅವನೆಣೆ! ||

ವೃತ್ತಿಯಲಿ ವ್ಯಾಪಾರಿಯ ಗುಣ
ಪ್ರವೃತಿಯೆ ಬೆಲೆಯೇರಿಸಿ ಮಣ
ಸುಟ್ಟೆ ಧೂಮ ಹೋದರು ಪ್ರಾಣ
ತನು ಕಾಡೆ ದುಡಿ ಶೂದ್ರ ಜಾಣ! ||

ವೇದಾಶ್ರಮ ಕಟ್ಟುಪಾಡಲ್ಹಿಡಿದವ 
ಅವನಲ್ಲವೆ ವರ್ಣಗಳೆಲ್ಲಾ ಬಲ್ಲವ 
ಅವನನರಿತರೆ ನಿಜ ವೇಧಾಧ್ಯಾಯಿ 
ಬಿಟ್ಟರವನೆನ್ನುವ ನನ್ನಪ್ಪುತ ಸಾಯಿ! ||

Thanks and best regards,
Nagesha MN

Comments

Submitted by kavinagaraj Fri, 07/31/2015 - 08:32

ಸಿಗರೇಟಿನ ಕೆಡುಕು ತರುವ ಹುಟ್ಟುಗುಣ ಸುಟ್ಟರೂ ಹೋಗದು! ಹೊಸ ರೀತಿಯ ಅನ್ವೇಷಣೆ ಚೆನ್ನಾಗಿದೆ, ನಾಗೇಶರೇ.

Submitted by nageshamysore Fri, 07/31/2015 - 17:06

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಕೆಡುಕು ತರುವುದು ಸಿಗರೇಟಿನ ಹುಟ್ಟುಗುಣ, ಅದು ತನ್ನನ್ನೆಂದು ಬದಲಿಸಿಕೊಳ್ಳುವುದಿಲ್ಲ. ಆದರೆ ಮಾನವರದೆ ಎಡವಟ್ಟು; ನಮ್ಮ ಗುಣ,ಸ್ವಭಾವಗಳನ್ನು ಬೇಕಾದಂತೆ ಬದಲಿಸಿಕೊಳ್ಳುವುದು ನಮಗೆ ನೀರು ಕುಡಿದಷ್ಟೆ ಸಲೀಸು. ನೋಡಿ ಅದರಲ್ಲೂ ಸಿಗರೇಟೆ ನಮಗಿಂತ ವಾಸಿ !

Submitted by venkatb83 Sat, 08/01/2015 - 19:32

In reply to by kavinagaraj

ಧೂಮ ಲೀಲೆ ಬಗ್ಗೆ ಎಸ್ಟು ಬರೆದರೂ ಕಡಿಮೆಯೇ,,,!! ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ದೇಶದ ಎಲ್ಲೆಡೆ ಸಾರ್ವಜನಿಕವಾಗಿ ಧೂಮಪಾನ ಮಾಡುವವ್ರು ಕಡಿಮೆ ಆಗಿದ್ದಾರೆ..! ಆದರೆ ವಿದ್ಯಾವಂತ ಜನರೇ ಹೊಗೆ ಬಿಡುತ್ತಾ ಹಾದಿ ಬೀದೀಲಿ ನಿಂತು-ಓಡಾಡುವವರಿಗೆ ತೊಂದ್ರೆ ಕೊಡೋದು ಎಂ ಜಿ ರೋಡು ಕೋರಮಂಗಲ ಇತ್ಯಾದಿ ಸ್ಥಳಗಳಲ್ಲಿ ಕಾಣಬಹುದು :((( ಹುಡುಗರು ಹುಡುಗಿಯರು ಗುಂಪು ಗುಂಪಾಗಿ ಬಿಂದಾಸ್ ಆಗಿ ಹೊಗೆ ಬಿಟ್ಟಾಗ ಅಲ್ಲಿ ಒಂದು ಡೀಸೆಲ್ ಟ್ರೇನ್ ಹೋದ ಹಾಗೆ ಅನ್ಸುತ್ತೆ...!! ಅದರಲ್ಲೂ ವಿವಿಧ ಸುವಾಸನೆ ಬೀರುವ -ವಿವಿಧ ವರ್ಣಗಳ ಸಿಗರೇಟುಗಳು...ಈ ಹಿಂದೆಯೂ ಬಿಟ್ಟು ಬಿಡಿ ಸಿಗರೇಟು ಅಂತ ಒಂದು ಬರಹ ನೀವ್ ಬರೆದಿದ್ದೀರಿ..! ಅದೊಮ್ಮೆ ಬೀಡಿ ಪುರಾಣ ..!
http://bit.ly/1UeMp31
ಈಗ ಸರ್ವ ವ್ಯಾಪಿ-ಸರ್ವ ಜನ -ಮತದ ಕೈನಲ್ಲಿರುವ ಜ್ಯಾತ್ಯಾತೀತ ಸಿಗರೇಟು ಬಗ್ಗೆ....
ಸಿಗರೇಟು ಧೂಮಪಾನದ ಬಗ್ಗೆ ನೆಟ್‌ನಲ್ಲಿ ಭಲೇ ಜೋಕುಗಳಿವೆ ನೋಡಿ
http://bit.ly/1DhRy63

ಶುಭವಾಗಲಿ

ನನ್ನಿ

\|/

Submitted by nageshamysore Sun, 08/02/2015 - 03:52

In reply to by venkatb83

ಸಪ್ತಗಿರಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನಿಜ - ಧೂಮ ಲೀಲೆಯ ಕಥನ ಒಂದಲ್ಲ ಒಂದು ರೀತಿಯಲ್ಲಿ ನಿರಂತರ ಯಾನ. ಪೀಳಿಗೆಗಳ ಜತೆಗೆ ಹೊಸಬರ ಪ್ರವೇಶ ಆಗುತ್ತಲೆ ಇರುವುದರಿಂದ ಅದಕ್ಕೆ ಹೊಸ ಗಿರಾಕಿಗಳು ಸಿಗುತ್ತಿರುತ್ತಾರೆ - ನೀವು ಉದಾಹರಿಸಿದ ಹುಡುಗ - ಹುಡುಗಿಯರ ಗುಂಪಿನ ಹಾಗೆ. ಅದಕ್ಕೆ ಹೊಸಹೊಸದು ಬರೆಯುತ್ತಿರಬೇಕು - ಆದರೆ ಆ ಗುಂಪಿನವರು ಅದನ್ನು ಓದುತ್ತಾರೆ ಎನ್ನುವುದು ಅನುಮಾನವೆ :-)

ಆದರೆ ಒಂದಂತು ನಿಜ - ಈ ಚಟಗಳಿಗೆ ಮಾತ್ರ ಜಾತ್ಯಾತೀತತೆ ಎನ್ನುವುದು ಹುಟ್ಟುಗುಣವಿದ್ದಂತೆ ಕಾಣುತ್ತದೆ ನೋಡಿ. ಯಾವ ಬೇಧವೂ ಇಲ್ಲದೆ ಎಲ್ಲರನ್ನು ಸಮಾನವಾಗಿ ಪೀಡಿಸುತ್ತದೆ ; ಚಟ ಹಿಡಿದವರೆಲ್ಲರೂ ಬೇಧಭಾವ ಮರೆತು ಒಂದೆ ರೀತಿಯಲ್ಲಿ ಅದನ್ನು ಪರಿಗ್ರಹಿಸುತ್ತಾರೆ. ಕೆಟ್ಟ ಚಟ ಎನ್ನುವ ಹಣೆಪಟ್ಟಿಯಿರದಿದ್ದರೆ ಬಹುಶಃ ರಾಜಕೀಯ ಪಕ್ಷಗಳಿಗೆ ಇದೇ ಒಂದು ಸೂಕ್ತ ಚಿಹ್ನೆಯಾಗಿಬಿಡುತ್ತಿತ್ತೊ ಏನೊ ? :-)

Submitted by Nagaraj Bhadra Fri, 07/31/2015 - 09:40

ನಾಗೇಶ ಸರ್ ಅವರಿಗೆ ನಮಸ್ಕಾರಗಳು.ಸಿಗರೇಟು ತನ್ನನ್ನು ಬೆಂಕಿಗಿಟ್ಟು ಸೇದುವರ ಜೀವನವನ್ನು ಬೆಂಕಿಗಿಟ್ಟುತ್ತದೆ.ಸಿಗರೇಟಿನ ಬಗ್ಗೆ ಹೊಸ ರೀತಿಯಲ್ಲಿ ವಿಷಲೇಶನೆ ಮಾಡಿದಿರಿ. ಚೆನ್ನಾಗಿದೆ ಸರ್.

Submitted by nageshamysore Fri, 07/31/2015 - 17:00

In reply to by Nagaraj Bhadra

ನಾಗರಾಜ ಭಧ್ರರೆ ನಮಸ್ಕಾರ ಮತ್ತು ಧನ್ಯವಾದಗಳು. ನಿಮ್ಮ ಮಾತು ನಿಜ ತಾನು ಬೆಂದು ತನ್ನುಂಡವರನ್ನು ಕೊಂದು ಮುಗಿಸುವ ಹುನ್ನಾರ ನೋಡಿದರೆ ಈ 'ಆತ್ಮಹತ್ಯಾ ದಳ' ಗಳ 'ಸ್ವಯಂನಾಶಕ' ಪ್ರವೃತ್ತಿಗೆ ಬಹುಶಃ ಸಿಗರೇಟೆ ಸ್ಪೂರ್ತಿಯೆನಿಸುತ್ತದೆ. ಅದರಿಂದ ದೂರವಿದ್ದಷ್ಟು ಶ್ರೇಯಸ್ಕರ !