ದೇವರೊಡನೆ ಸಂದರ್ಶನ - 2

ದೇವರೊಡನೆ ಸಂದರ್ಶನ - 2

     ಮರುದಿನ ಎಂದಿನಂತೆ ಬೆಳಿಗ್ಗೆ ಐದು ಘಂಟೆಗೆ ಎದ್ದ ಗಣೇಶರಿಗೆ ಹಿಂದಿನ ದಿನದ ಸಂಭಾಷಣೆ ನೆನಪಾಯಿತು. 'ಎಂತಹ ಕನಸು' ಎಂದು ನಗು ಬಂತು. 'ಹೇಗಾದರೂ ಇರಲಿ. ಇವತ್ತು ವಾಕಿಂಗಿಗೆ ಸ್ಟೇಡಿಯಮ್ಮಿಗೆ ಹೋಗುವ ಬದಲಿಗೆ ರತ್ನಗಿರಿ ಬೋರೆಯ ಕಡೆಗೇ ಹೊಗೋಣ' ಎಂದುಕೊಳ್ಳುತ್ತಾ ಮನೆ ಬಿಟ್ಟಾಗ ಐದೂ ಮುವ್ವತ್ತಾಗಿತ್ತು. ಬೋರೆಯ ಮೇಲಿನ ಕಲ್ಲುಮಂಟಪದ ಕಲ್ಲಬೆಂಚಿನ ಮೇಲೆ ಕುಳಿತಾಗ ಹಿತವೆನಿಸಿತ್ತು. ದೂರದಲ್ಲಿ ಸೂರ್ಯ ಕೆಂಪು ಕಿರಣಗಳನ್ನು ಸೂಸುತ್ತಾ ಮೂಡತೊಡಗಿದ್ದ. "ಹೇಳಿದ್ದ ಸಮಯಕ್ಕೇ ಬಂದಿದ್ದೀಯಲ್ಲಾ! ಪರವಾಗಿಲ್ಲ" ಎಂಬ ಧ್ವನಿ ಕೇಳಿ ಬೆಚ್ಚಿಬಿದ್ದು ಗಣೇಶರು ತನ್ನ ಕೈಯನ್ನು ಚಿವುಟಿಕೊಂಡು, ಕನಸಲ್ಲವೆಂದು ಖಚಿತಪಡಿಸಿಕೊಂಡರು. ಹತ್ತಿರದಲ್ಲಿ ಯಾರೂ ಇರಲಿಲ್ಲ. ದೂರದಲ್ಲಿ ಯಾರೋ ಇಬ್ಬರು ವಾಕಿಂಗ್ ಮಾಡುತ್ತಿದ್ದರು. 'ದೆವ್ವ ಆದರೆ ಹೆದರಬೇಕು. ದೇವರಿಗೆ ಯಾಕೆ ಹೆದರಬೇಕು?' ಎಂದು ಮನಸ್ಸಿಗೆ ಧೈರ್ಯ ತಂದುಕೊಂಡರು.

     "ನೀನು ಅಂದುಕೊಂಡಿದ್ದು ಸರಿಯಾಗಿದೆ. ದೆವ್ವ ಆದರೆ ಹೆದರಬೇಕು. ದೇವರಿಗೆ ಯಾಕೆ ಹೆದರಬೇಕು? ಸರಿ, ಏನೋ ಕೇಳಬೇಕು, ಸಂದರ್ಶನ ಮಾಡಬೇಕು ಅಂತಿದ್ದೆಯಲ್ಲಾ, ಕೇಳು."

     'ನಾನು ಮನಸ್ಸಿನಲ್ಲಿ ಅಂದುಕೊಂಡದ್ದು ಹೇಗೆ ಗೊತ್ತಾಯಿತು? ಓಹೋ, ದೇವರಲ್ಲವಾ, ಅದಕ್ಕೇ ಗೊತ್ತಾಗಿದೆ' ಎಂದುಕೊಂಡ ಗಣೇಶರಿಗೆ ಏನು ಮಾತನಾಡಬೇಕು, ಎಲ್ಲಿಂದ ಪ್ರಾರಂಭಿಸಬೇಕು ಎಂದು ಗೊತ್ತಾಗಲಿಲ್ಲ. ಜೇಬಿನಲ್ಲಿದ್ದ ಸಣ್ಣ ನೋಟುಪುಸ್ತಕ, ಪೆನ್ನು ತೆಗೆದುಕೊಂಡವರೇ, ತೊದಲುತ್ತಾ, "ದೇವರೇ, ನೀನು ಯಾರು?" ಎಂದು ಮೊದಲ ಪ್ರಶ್ನೆ ಹೊರಗೆಸೆದರು.

    ಸಶಬ್ದವಾಗಿ ನಗು ಅಲೆ ಅಲೆಯಾಗಿ ಕೇಳಿಬಂತು. ಗಣೇಶರಿಗೆ ಆ ನಗು ಹೊರಗಿನಿಂದ ಬರುತ್ತಿದೆಯೋ, ತನ್ನ ಒಳಗಿನಿಂದ ಬರುತ್ತಿದೆಯೋ ಎಂದು ಅನುಮಾನ ಮೂಡುತ್ತಿದ್ದ ಹಾಗೇ, ಮೃದು ಮಧುರ ವಾಣಿ ಉಲಿಯಿತು:

ದೇವರು: ನನ್ನ ಪ್ರಶ್ನೆಗೆ ಉತ್ತರ ಕೊಟ್ಟರೆ ನಿನಗೆ ನಿನ್ನ ಪ್ರಶ್ನೆಗೆ ಉತ್ತರ ಸಿಗುತ್ತದೆ. ಹೇಳು, ನೀನು ಯಾರು?

ಗಣೇಶ: ನಾನು ಗಣೇಶ.

ದೇವರು: ಗಣೇಶ ಅಂದರೆ? ನಿನ್ನ ಶರೀರಾನಾ? ಅಥವ ಮತ್ತೊಂದೇನಾದರೂನಾ?

ಗಣೇಶ: ಅರ್ಥವಾಗಲಿಲ್ಲ.

ದೇವರು: ಹೋಗಲಿ ಬಿಡು. ನಿನ್ನ ದೇಹ, ಆಕಾರ ನೋಡಿ ಎಲ್ಲರೂ ನಿನ್ನನ್ನು ಗಣೇಶ ಅಂತಾರೆ. ಗಣೇಶ ಅಂದರೆ ನಿನ್ನ ದೇಹಾನಾ? ನೀನು ಈ ಶರೀರ ಆದರೆ, ಅದು ನೀನು ಹೇಳಿದ ಹಾಗೆ ಕೇಳುತ್ತಾ? ನೀನು ಉಸಿರಾಡೋದು, ನಿನ್ನ ಮೈಯಲ್ಲಿ ರಕ್ತ ಹರಿದಾಡೋದು, ನಿನ್ನ ಹೃದಯ ಬಡಿದುಕೊಳ್ಳೋದು, ಇವೆಲ್ಲಾ ನೀನು ಇಷ್ಟ ಪಡುವಂತೆ ಆಗುತ್ತಿದೆಯೋ, ಅದಾಗಿಯೇ ಆಗುತ್ತಿದೆಯೋ? ಅದಾಗಿಯೇ ಆಗುತ್ತಿದೆ ಅಂದರೆ ಹಾಗೆ ಯಾಕೆ ಆಗುತ್ತಿದೆ? ಅದನ್ನು ಮಾಡಿಸುತ್ತಿರೋರು ಯಾರು? ನೋಡು, ಇವೆಲ್ಲಾ ನೀನು ಹೇಳಿದಂತೆ ಆಗುತ್ತಿಲ್ಲ ಅಂದ ಮೇಲೆ, ನಿನ್ನ ಶರೀರದ ಮೇಲೆ ನಿನಗೇ ಕಂಟ್ರೋಲಿಲ್ಲ ಅಂತಾಯಿತು. ಹಾಗಾದರೆ ಅಂತಹ ಶರೀರವನ್ನು ನಿನ್ನದು, ನೀನು ಅಂತ ಹೇಗೆ ಹೇಳ್ತೀಯಾ? ಹಾಗಾದರೆ ಗಣೇಶ ಅಂದರೆ ಯಾರು?

     ಗಣೇಶರಿಗೆ ಮೈ ಉರಿದುಹೋಯಿತು. ಎದ್ದು ನಿಂತವರೇ ಗಡುಸಾಗಿ ಗದರಿದರು:

ಗಣೇಶ: ಸಂದರ್ಶನ ಮಾಡುತ್ತಿರುವುದು ನಾನೋ? ನೀನೋ? ಪ್ರಶ್ನೆ ಕೇಳಲು ಬಂದವನನ್ನೇ ಪ್ರಶ್ನೆ ಕೇಳುವುದು ಸರೀನಾ?

ದೇವರು: ಉತ್ತರ ಕೊಡಲು ಕಷ್ಟವಾದ ಪ್ರಶ್ನೆ ಕೇಳಿದ್ದಕ್ಕೆ ನಿನಗೆ ಸಿಟ್ಟು ಬಂದಿದೆ. ಸಮಾಧಾನವಿರಲಿ. ನಿನ್ನ ಪ್ರಶ್ನೆಗೆ ನನ್ನ ಮರುಪ್ರಶ್ನೆಯಲ್ಲೇ ಉತ್ತರ ಇದೆ. ನೀನು ಯಾರು ಎಂದು ತಿಳಿದುಕೊಂಡರೆ ನಿನಗೆ ನಾನು ಯಾರು ಎಂದು ಗೊತ್ತಾಗುತ್ತದೆ. ನೀನು ಅಂದರೆ ನೀನು ಅಂದುಕೊಂಡಿರುವ ನೀನಲ್ಲ. ಹಾಗೆಯೇ ನಾನೂ ಸಹ ನೀನು ಅಂದುಕೊಂಡಿರುವ ನಾನಲ್ಲ.

ಗಣೇಶ: ನೀನು ಯಾರು ಎಂದು ಕೇಳಿದರೆ ಪ್ರಶ್ನೆ ಸರಿಯಾಗುವುದಿಲ್ಲ. ಈಗ ಹೇಳು, ನೀನು ಅಂದರೆ ರಾಮನೋ, ಕೃಷ್ಣನೋ, ಮಾರಮ್ಮನೋ, ಬೀರಮ್ಮನೋ, ಅಲ್ಲಾನೋ, ಏಸುನೋ, ಬುದ್ಧನೋ, ಸಾಯಿಬಾಬಾನೋ, ಯಾರು ನೀನು? ಅದನ್ನು ಹೇಳಿ ಪುಣ್ಯ ಕಟ್ಟಿಕೋ.

ದೇವರು: (ನಗುತ್ತಾ) ಪಾಪ, ಪುಣ್ಯ ಎಲ್ಲಾ ನಿಮಗೆ! ನನಗೆ ಯಾವ ಭಾವವೂ ಇಲ್ಲ. ನಾನು ಆಗಲೇ ಹೇಳಲಿಲ್ಲವಾ? ನಾನು ನೀವುಗಳು ಅಂದುಕೊಂಡ ನಾನಲ್ಲ. ಹೀಗೆ ತಿಳಿದುಕೋ, ನಾನು ರಾಮ ಅಂದರೆ ರಾಮ, ಕೃಷ್ಣ ಅಂದರೆ ಕೃಷ್ಣ, ಅಲ್ಲಾ ಅಂದರೆ ಅಲ್ಲಾ, ಏಸು ಅಂದರೆ ಏಸು! ನೀವು ಏನು ತಿಳಿದುಕೊಳ್ಳುತ್ತೀರೋ ಹಾಗೆ ನಾನು!

ಗಣೇಶ: ರಾಜಕಾರಣಿಗಳ ತರಹದ ಉತ್ತರ ನನಗೆ ಬೇಡ. ಇವರುಗಳ ಪೈಕಿ ನೀನು ಯಾರು? ಅಥವ ಬೇರೆ ಇನ್ನು ಯಾರೋ ಅಗಿದ್ದರೆ ಯಾರು?

ದೇವರು: ನಾನು ಎಲ್ಲವೂ ಆಗಿದ್ದೇನೆ, ಯಾವುದೂ ಆಗಿಲ್ಲ. ಈ ಉತ್ತರವೂ ನಿನಗೆ ಒಪ್ಪಿಗೆಯಾಗುವುದಿಲ್ಲ ಅಥವ ಅರ್ಥವಾಗುವುದಿಲ್ಲ. ಹಿಮಾಲಯ ಪರ್ವತ ಪೂರ್ಣವಾಗಿ ನೋಡಲು ನಿನಗೆ ಆಗುತ್ತದೆಯೇ? ಸಾಗರವನ್ನು ಪೂರ್ಣ ರೀತಿಯಲ್ಲಿ ಹೇಗಿದೆಯೆಂದು ನೋಡಿ ತಿಳಿಯಲು ನಿನಗೆ ಆಗುತ್ತದೆಯೇ? ನೀನು ನೋಡಿದಷ್ಟನ್ನು ನೋಡಿ ಅದು ಹೀಗಿದೆಯೆಂದು ಅಂದುಕೊಳ್ಳುತ್ತೀಯಲ್ಲವೇ? ಹಾಗೆಯೇ ನಿಮ್ಮ ಪುಟ್ಟ ಮೆದುಳುಗಳಲ್ಲಿ ಎಷ್ಟು ಮತ್ತು ಏನನ್ನು ಗ್ರಹಿಸಲು ಸಾಧ್ಯವೋ ಅಷ್ಟು ನಾನಾಗಿದ್ದೇನೆ.

ಗಣೇಶ: ನೀನು ಯಾರೋ ಗೊತ್ತಿಲ್ಲ. ನೀನು ನನಗೆ ಕಾಣಿಸುತ್ತಲೂ ಇಲ್ಲ. ನೀನು ಮಾತನಾಡುತ್ತಿರುವುದು ನನಗೆ ಕೇಳಿಸುತ್ತಿದೆ. ಇದು ನನ್ನ ಭ್ರಮೆಯೂ ಇರಬಹುದೇನೋ! ನೀನು ಇಲ್ಲವೆಂದು ನನಗೆ ಅನ್ನಿಸುತ್ತಿದೆ.

ದೇವರು: (ನಗುತ್ತಾ) ಇಲ್ಲ ಅಂದುಕೊಂಡರೆ ಇಲ್ಲ. ಮೆದುಳು ಗ್ರಹಿಸುವಷ್ಟನ್ನು ಮಾತ್ರ ನಂಬುವುದು ಒಳ್ಳೆಯದೇ. ಗ್ರಹಿಕೆಗೆ ಮೀರಿದ ವಿಷಯದಲ್ಲಿ ಕಲ್ಪನೆ ಅನ್ನುವುದು ವಾಸ್ತವಕ್ಕಿಂತ ಬೇರೆಯೇ ಆಗಿರುತ್ತದೆ.

ಗಣೇಶ: ನನ್ನ ಪ್ರಶ್ನೆಗೂ ನಿನ್ನ ಉತ್ತರಕ್ಕೂ ಭೂಮಿ-ಆಕಾಶದಷ್ಟು ಅಂತರ ಇದೆ. ಭೂಮಿ ಆಕಾಶ ಒಂದಾಗಲು ಸಾಧ್ಯವೇ ಇಲ್ಲ.

ದೇವರು: ಏನೆಂದೆ? ಭೂಮಿ-ಆಕಾಶದಷ್ಟು ಅಂತರ ಅಂದೆಯಾ? ನಿನ್ನ ದೃಷ್ಟಿಯಲ್ಲಿ ಭೂಮಿ ಕೆಳಗಿದೆ, ಆಕಾಶ ಮೇಲಿದೆ, ಎರಡೂ ದೂರ ದೂರ ಅಲ್ಲವಾ? ನಿಜವಾಗಿ ಆಕಾಶ ಅನ್ನುವುದು ಎಲ್ಲೆಲ್ಲೂ ಇದೆ. ಅದು ಇಲ್ಲದ ಜಾಗವೇ ಇಲ್ಲ. ಒಂದು ರೀತಿಯಲ್ಲಿ ಅದು ನನ್ನಂತೆಯೇ ಇದೆ. ಅದು ಭೂಮಿಗೆ ಹೊಂದಿಕೊಂಡೇ ಇದೆ. ಒಳಗೂ ಇದೆ, ಹೊರಗೂ ಇದೆ. ಅಷ್ಟೇ ಏಕೆ, ನಿನ್ನ ಶರೀರ ಇದೆಯಲ್ಲಾ ಅದೂ ಪಂಚಭೂತಗಳಿಂದ, ಆಕಾಶವೂ ಸೇರಿದಂತೆ, ಆಗಿದೆ. ನಿನ್ನ ಒಳಗೂ ಆಕಾಶ ಇದೆ, ಹೊರಗೂ ಇದೆ. ನೀನು ಬಂದಿದ್ದೂ ಆಕಾಶದಿಂದಲೇ, ಹೋಗುವುದೂ ಆಕಾಶಕ್ಕೇ! ಹೀಗಾಗಿ ನಿನ್ನ ಪ್ರಶ್ನೆಗೂ ನನ್ನ ಉತ್ತರಕ್ಕೂ ಅಂತರವೇ ಉಳಿಯುವುದಿಲ್ಲ. ನೋಡು, ನನ್ನ ಬಗ್ಗೆ ಎಷ್ಟು ಪ್ರಶ್ನೆಗಳನ್ನು ಕೇಳಿ ಎಷ್ಟು ಉತ್ತರಗಳನ್ನೂ ಪಡೆದರೂ, ಕೊನೆಯಲ್ಲಿ ಮತ್ತೊಂದು ಪ್ರಶ್ನೆ, ಮತ್ತೊಂದು ಸಂದೇಹ ಉಳಿದೇ ಉಳಿಯುತ್ತದೆ. ಹೀಗಾಗಿ ನನಗೆ 'ಸಂಪ್ರಶ್ನ' ಎಂಬ ಅಡ್ಡ ಹೆಸರನ್ನೂ ನಿಮ್ಮಂತಹವರು ನನಗೆ ಕೊಟ್ಟಿದ್ದಾರೆ.

ಗಣೇಶ: ನೀನೇ ಹೀಗೆ ಹೇಳಿದ ಮೇಲೆ ನಾನು ಪ್ರಶ್ನೆ ಹೇಗೆ ಮಾಡಲಿ? ಪ್ರಶ್ನೆ ಮಾಡುವುದರಲ್ಲಿ ಅರ್ಥವೇ ಇಲ್ಲ.

ದೇವರು: ಪ್ರಶ್ನೆ ಮಾಡಲೇಬೇಕು, ಉತ್ತರ ತಿಳಿಯಲು ಪ್ರಯತ್ನಿಸುತ್ತಲೇ ಇರಬೇಕು. ಹಾಗೆ ಮಾಡಿದರೆ ಮಾತ್ರವೇ ನೀವು ಜ್ಞಾನಿಗಳಾಗುವುದು. ಕೇಳುವವರ ಅರಿಯುವ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತರ ಸಿಕ್ಕೇ ಸಿಕ್ಕುತ್ತದೆ.

ಗಣೇಶ: ನಾನು ಕೆಲಸಕ್ಕೆ ಹೊರಡಲು ಸಮಯವಾಗುತ್ತದೆ. ಯಾವ ಯಾವ ಪ್ರಶ್ನೆಗಳನ್ನು ಕೇಳಬೇಕು ಎಂಬುದನ್ನು ಪಟ್ಟಿ ಮಾಡಿಕೊಂಡು ಬರುತ್ತೇನೆ. ಸಂದರ್ಶನವನ್ನು ನಾಳೆಗೆ ಮುಂದುವರೆಸಬಹುದೇ?

ದೇವರು: ತಥಾಸ್ತು. ಶುಭವಾಗಲಿ. ಹೋಗಿಬಾ.

     "ಏನ್ರೀ ಇದು? ವಾಕಿಂಗಿಗೆ ಹೋಗಲಿಲ್ಲವಾ? ಟ್ರಿಮ್ಮಾಗಿ ರೆಡಿಯಾಗಿಬಿಟ್ಟು, ಇಲ್ಲೇ ಕುರ್ಚಿ ಮೇಲೆ ಭದ್ರವಾಗಿ ಬೇರು ಬಿಟ್ಟಿದ್ದೀರಲ್ಲಾ" ಎಂದು ಗಣೇಶರ ಮಡದೀಮಣಿ ಕೇಳಿದಾಗ, ಬೆಚ್ಚಿ ಬಿದ್ದವರಂತೆ, "ಹೋಗಿ ಬಂದೆನಲ್ಲೇ! ಸ್ಟೇಡಿಯಂ ಕಡೆಗೆ ಹೋಗಲಿಲ್ಲ, ರತ್ನಗಿರಿಬೋರೆ ಕಡೆಗೆ ಹೋಗಿ ಬಂದೆ" ಎಂದು ಉತ್ತರಿಸಿದರು. ಅವರನ್ನು ವಿಚಿತ್ರವಾಗಿ ನೋಡಿದ ಪತ್ನಿ ಮಾತನಾಡದೇ ಅವರ ಮುಂದೆ ಹಾರ್ಲಿಕ್ಸ್ ಬಿಸ್ಕತ್ತಿನ ಪ್ಯಾಕೆಟ್ ಮತ್ತು ಒಂದು ಮಗ್ ಟೀ ಕುಕ್ಕಿ ವಾಪಸಾದರು. . . .              (ಮುಂದುವರೆಯುವುದು).

-ಕ.ವೆಂ.ನಾಗರಾಜ್.

Comments

Submitted by Nagaraj Bhadra Fri, 08/07/2015 - 21:34

ಕವಿ ನಾಗರಾಜ ಸರ್ ಅವರಿಗೆ ನಮಸ್ಕಾರಗಳು.ನಮ್ಮ ಜೀವನವೇ ದೇವರ ಜೊತೆ ಮಾಡುತ್ತಿರುವ ಒಂದು ಸಂದರ್ಶನ .ಪ್ರತಿ ದಿನವು ದೇವರ ಜೊತೆ ವಾದ ವಿವಾದಗಳು ನಡೆಯುತ್ತಿರುತ್ತವೆ. ಈ ಸೃಷ್ಟಿಯ ಎಲ್ಲಾ ಪ್ರಶ್ನೆಗಳ ಉತ್ತರ ದೇವರ ಹತ್ತಿರ ಮಾತ್ರವಿದೆ.ಸಂದರ್ಶನ ಮುಂದುವರೆಯಲ್ಲಿ ಸರ್.

Submitted by nageshamysore Sat, 08/08/2015 - 04:41

ಇದುವರೆಗು ಚೆನ್ನಾಗಿ ದಬಾಯಿಸಿಕೊಂಡು (ನಿಭಾತಿಸಿಕೊಂಡು) ಬಂದಿದ್ದಾರೆ ಗಣೇಶರು - ಒಳ್ಳೆ ಫೈಟು!

Submitted by ಗಣೇಶ Tue, 08/11/2015 - 08:24

ಇತ್ತೀಚಿನ ವರದಿಯಂತೆ ಪಾರ್ಥರು ದಿನಾ ರಾತ್ರಿ ಬೋಂಡಾ ತಿಂದುಕೊಂಡು, "ಹೀಗೂ ಉಂಟೆ" ಯನ್ನು ಟಿ.ವಿಯಲ್ಲಿ ನೋಡುತ್ತಾ, ೫ ಕೆ.ಜಿ. ಹೆಚ್ಚಿಸಿಕೊಂಡಿದ್ದಾರಂತೆ.
"ದೇವರ ದರ್ಶನ ಸಿಕ್ಕಿದಾಗ ನಿಮಗಾಗಿ ಏನೂ ಕೇಳಿಕೊಳ್ಳಲಿಲ್ಲವಾ?" ಎಂದು ಸಪ್ತಗಿರಿ ವಿಚಾರಿಸಿದ್ದರು- ದೇವರು ಧರ್ಮಾರ್ಥ ಸಿಕ್ಕಿರುವಾಗ ನಾನು ಹಾಗೇ ಬಿಟ್ಟೇನಾ? ನಿಜ ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಕವಿನಾಗರಾಜರು, "ಸರ್ವರಿಗೆ ಉಪಯೋಗವಾಗುವಂತಹದ್ದು ಮಾತ್ರ ತಿಳಿಸು, ನಿನ್ನ ತೀರಾ ವೈಯಕ್ತಿಕ ವಿಷ್ಯ ಇಲ್ಲಿ ಬೇಡ" ಎಂದಿದ್ದರು. ಆದರೆ ನನ್ನ ಗೆಳೆಯರ ಬಳಿ ವಿಷಯ ಹೇಳದಿದ್ದರೆ ನನಗೆ ಸಮಾಧಾನವಾಗದು. ಅದಕ್ಕೆ ಹೇಳ್ತಾ ಇದ್ದೀನಿ-
ಸರಕಾರದಿಂದ ನಮ್ಮ ಕೆಲಸ ಹೇಗಾದರೂ ಮಾಡಿಸಬಹುದು, ಈ ದೇವರು ಎದುರಿಗೆ ಸಿಕ್ಕರೂ ಏನೂ ಸಿಗದು.. ಜನಸಾಮಾನ್ಯನಾದ ನಾನು ಕೇಳಿದರೆ ಏನು ಕೇಳಿಯೇನು...ಸ್ವಲ್ಪ ಕಾಸು...ಅದನ್ನೇ - " ವರ್ಷದಲ್ಲಿ ಕೆಲ ತಿಂಗಳು ಬ್ಯಾಟು ಬೀಸುವವರಿಗೆ ೧೦-೧೪ ಕೋಟಿ ಸಿಗುವಾಗ, ದಿನಾ ಚೈನೀಸ್ ಬ್ಯಾಟು ಬೀಸಿ ೪-೬ ಹೊಡೆಯುವ ನನಗೆ ಮಿನಿಮಮ್ ೩ ಕೋಟಿ ಕರುಣಿಸು" ಎಂದು ಭಕ್ತಿಯಿಂದ ಕೇಳಿದೆ..
"ತಥಾಸ್ತು!!"...
ನಿರೀಕ್ಷಿಸಿದ್ದೆ........................ಬದಲಿಗೆ ಒಂದು ಘಂಟೆ ಉಪದೇಶ ಸಿಕ್ಕಿತು. :(
ಸ್ವಾರ್ಥ ಬದಿಗಿಟ್ಟು ಮಗಳಿಗೆ ವರ, ಮನೆಯಾಕೆಗೆ ಸರ..ಕೇಳಿದೆ. ಮಿನಿಮಮ್!
"ತಥಾಸ್ತು!!!"
ಎನ್ನಲಿಲ್ಲ :(
ಕೇಳಿಯೇಬಿಟ್ಟೆ-"ಹಿಂದೆಲ್ಲಾ ಕೇಳಿದ ಕೂಡಲೇ ತಥಾಸ್ತು ಎನ್ನುತ್ತಿದ್ದೆ..ಈಗ ಮರೆತು ಹೋಗಿದೆಯಾ ಭಗವಂತಾ?"
"ಅವರೆಲ್ಲಾ ಸಾವಿರಾರು ವರ್ಷ ಏಕ ನಿಷ್ಟೆಯಿಂದ ತಪಸ್ಸು ಮಾಡುತ್ತಿದ್ದರು. ನಿನಗೆ ನನ್ನ ದರ್ಶನ ಸಿಕ್ಕಿದ್ದೇ ಭಾಗ್ಯ!" ಎಂದರು. ಪುನಃ ಒಂದು ಘಂಟೆ ಭಾಷಣ. ಅದಕ್ಕೇ ಹೇಳ್ತಾ ಇದ್ದೇನೆ ಗೆಳೆಯರೆ-" ನಿಮಗೆ ಇಷ್ಟ ಇತ್ತು, ಪೂಜೆ ಗೀಜೆ ಮಾಡಿ. ಏನೋ ನಿರೀಕ್ಷೆ ಇಟ್ಟರೆ ನಿರಾಶೆಯೇ ಸಿಗುವುದು.

Submitted by kavinagaraj Tue, 08/11/2015 - 15:00

In reply to by ಗಣೇಶ

:)) ನಮಸ್ತೆ, ಗಣೇಶರೇ. ನೀವು ಹೇಳಿರುವುದು ಸರಿ. ನಿರೀಕ್ಷೆ ಇಟ್ಟುಕೊಂಡರೆ ನಿರಾಸೆಯೇ ಗತಿ. ನನಗೆ ನಿಮ್ಮ ಸಂದರ್ಶನದ ಸುದ್ದಿ ತಿಳಿಸುತ್ತಿರುವವರು ಯಾರು ಎಂಬುದನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. ಸುದ್ದಿಯಂತೂ ಸಿಗುತ್ತಿದೆ. ದೇವರೊಡನೆ ಮಾತನಾಡಿದ ಹೆಚ್ಚಿನ ವಿವರಗಳು ನಿಮ್ಮಿಂದ ತಿಳಿದ ಸಂತೋಷವಾಯಿತು. ಪಾರ್ಥರು ನಿಮ್ಮೊಂಡನೆ ಪೈಪೋಟಿಗೆ ಇಳಿದಿರುವ ವಿಷಯ ತಿಳಿದು ಆಶ್ಚರ್ಯವಾಯಿತು. ಇಬ್ಬರಿಗೂ ಶುಭವಾಗಲಿ.

Submitted by partha1059 Tue, 08/11/2015 - 17:18

In reply to by kavinagaraj

ನಮಸ್ತೆ ಗಣೇಶ ಹಾಗು ನಾಗರಾಜ ಸರ್ಸ್
ನನ್ನ ಮೇಲೆ ಸಲ್ಲದ ಅಪವಾದ ಹೊರಸಲಾಗಿದೆ
ನಾನು ಬೋಂಡ ತಿನ್ನುವುದು ಹಾಗಿರಲಿ
ಬಾಯಲ್ಲಿ ಬೊ.. ಅಂದರು ಸಹ ಗ್ಯಾಸ್ಟ್ರಿಕ್ ಜಾಸ್ತಿಯಾಗಿ ಮಾತ್ರೆ ನುಂಗುವ ಸ್ಥಿತಿ :-(
ಹಾಗಿರಲು ಗಣೇಶರು ನನಗೆ ಬೋಂಡ ತಿನ್ನಿಸುವ ಹಾಗಿದ್ದರೆ,
ಬೊಂಡದ ನಡುವೆ ಆಲುಗೆಡ್ಡೆ ಬದಲು ’omez' ಟ್ಯಾಬ್ಲೆಟ್ ಇಟ್ಟು ಎಣ್ಣೆಯಲ್ಲಿ ಕರೆಯಬೇಕಿರುತ್ತೆ :-)

ಜೈ ಗಣೇಶ

- ಪಾರ್ಥಸಾರಥಿ

Submitted by kavinagaraj Tue, 08/11/2015 - 18:49

In reply to by partha1059

:)) ಗಣೇಶರು ದೇವರೊಂದಿಗೆ ಮಾತನಾಡಿದ ರೀತಿಯಲ್ಲೇ ಪಾರ್ಥರು ಬೋಂಡ ತಿಂದಿದ್ದರೆ?? ಯಾವುದಕ್ಕೂ ಮೂರನೆಯವರು ತನಿಖೆ ಮಾಡಿದರೆ ಸತ್ಯ ತಿಳಿದೀತು!!

Submitted by venkatb83 Fri, 08/14/2015 - 14:56

In reply to by ಗಣೇಶ

ಹಿರಿಯರೇ -
ಮನೆಯಲ್ಲೇ ಕುಳಿತು ದೇವರನ್ನು ಕಂಡು ಮಾತಾಡಿದ ಗಣೇಶಣ್ಣ ಅವರೇ ಧನ್ಯರು ...
ದೇವರು ಎಲ್ಲೆಡೆಯೂ ಇರುವನು-ಮತ್ತೆ ರುಜು ಆಯ್ತು .

ಗಣೇಶಣ್ಣ ಅವರ ಪ್ರಶ್ನಾಸ್ತ್ರ ಗಮನಿಸಿದರೆ ಹಲವು ಆಂಗ್ಲ ಹಿಂದಿ ಚಾನೆಲ್ಲುಗಳ ಚರ್ಚೆ ನೆನಪಿಗೆ ಬರುತ್ತಿದೆ...!!
ಭಾದ್ರಪದಕ್ಕೆ ಗಣೇಶ ಮೂರ್ತಿಗಳು ಸಜ್ಜಾಗಿ ಮುಖ್ಯ ರಸ್ತೆಗಳಲ್ಲಿ ಕೂರುತ್ತಿವೆ-
ಅವು ನೋಡುವಾಗಲೆಲ್ಲ ಗಣೇಶಣ್ಣ ನೆನಪಿಗೆ ಬರುವರು...
ಶುಭವಾಗಲಿ

\\\|||||||//