ಮನದ ಗುಟ್ಟಿನ ವಿಷಯ...
ಬದುಕು ಕಟ್ಟಿ ಕೊಡುವ ಅನೇಕ ಭಾವ ಸಂಗಮಗಳಲ್ಲಿ, ನಿರಂತರ ಕಾಡುವ ವಿಷಾದ, ಖೇದದ ಭಾವ ಬಲು ಸಾಮಾನ್ಯವಾಗಿ ಕಾಣ ಸಿಗುವಂತದ್ದು. ಅದರಲ್ಲೂ ಈ ಭಾವ ಜನನದ ಮೂಲ ಮೊದಲ ಪ್ರೇಮವಾಗಿದ್ದರಂತೂ, ಜೀವನವಿಡಿ ಕಾಡುವ ಸಿಹಿನೋವಾಗಿ ಉಳಿದುಬಿಡುವ ಸಾಮರ್ಥ್ಯವುಳ್ಳದ್ದು. ಇನ್ನು ಆ ಪ್ರೇಮ ಹೂವಾಗರಳದೆ, ಕೇವಲ ಮನದ ಗುಟ್ಟಿನ ವಿಷಯವಾಗಿ ಉಳಿದು ಹೋಗಿದ್ದರಂತು, ಅದೊಂದು ನಿತ್ಯ ನೂತನ ಕೊರಗಾಗಿ ಜೀವನವಿಡಿ ಸತಾಯಿಸಿಕೊಂಡೆ ಬರುತ್ತದಂತೆ. ಪ್ರೇಮ ಬಯಲಾಗಿ ಸಾಫಲ್ಯ ಪಡೆಯದಿದ್ದರೇನಂತೆ ? ಒಡ್ಡೊಡೆದು ಪ್ರವಹಿಸುವ ಮನದ ಭಾವನೆಗಳಿಗೆ ತಡೆಗೋಡೆ ಹಾಕಲು ಸಾಧ್ಯವೆ ? ಆದರೆ ಆ ಸಂಧರ್ಭದಲ್ಲೂ ತನ್ನ ಮನದ ಪ್ರೇಮಿಯ ಒಳಿತನ್ನೆ ಬಯಸುತ್ತ, ಮತ್ತೊಂದೆಡೆ ತನ್ನ ಹೇಳಿಕೊಳ್ಳಲಾಗದ ಇಚ್ಛೆಯನ್ನರಿಯದೇ ಹೋದ ಕಾರಣಕ್ಕೆ ದೂರುತ್ತ, ದುಮ್ಮಾನ ಪಡುತ್ತ ದಿನ ದೂಡುವ ಅಮರ ಪ್ರೇಮಿಗಳಿಗೇನು ಕೊರತೆಯಿಲ್ಲ. ಕೊನೆಗದು ಮಂಕಾಗಿಸಿ ಮರುಳು ಹಿಡಿಸುವ ಮನೋವ್ಯಾಧಿಯಾಗಬಹುದು; ಅಥವಾ ಒಳಗಿನ ವೇದನೆಯನ್ನೆ ನಿವೇದನೆಯಾಗಿಸಿ, ನಿರಂತರ ಸ್ಪೂರ್ತಿಯ ಚಿಲುಮೆಯಾಗಿಸಿ ಯಾವುದಾದರೊಂದು ಕ್ರಿಯಾತ್ಮಕ ಹೊದಿಕೆಯಡಿ ವಿಜೃಂಭಿಸಿ, ಅದರ ಪಲ್ಲವ, ತಲ್ಲಣಗಳ ಪ್ರಕಟ ರೂಪವಾಗಿ ಸ್ರವಿಸಬಹುದು - ಕಥೆ, ಕಾವ್ಯ, ಕವನಗಳಂತೆ. ಅದು ಅಣೆಕಟ್ಟು ಹಾಕಿಟ್ಟ ಮನದ ಗುಟ್ಟುಗಳಿಗೆ, ಮತ್ತದದರ ಮೇಲೆ ಬೇರೂರಿದ ಕಲ್ಪನೆ, ಊಹೆಗಳ ವಿಸ್ತರಣೆಗಳಿಗೆ ಮೂರ್ತರೂಪ ನೀಡುತ್ತ, ಕಾಲ ಕಳೆದಂತೆ ಮಾಗಿದ ಗಾಯದಾಳದಿಂದಲೆ ಪಕ್ವತೆ, ಪ್ರಬುದ್ಧತೆಯೊಂದು ತುಣುಕಾಗಿ ಹೊರಹೊಮ್ಮುವುದು ಅಸಹಜವೇನಲ್ಲ. ಅಂತೆಯೆ ಆ ವ್ಯವಹಾರದ ನಡುವಲ್ಲೂ ಆಗಾಗ್ಗೆ ಭೇಟಿಯಿತ್ತು, ನೆನಪಿನ ರೂಪದಲ್ಲಿ ರುಜು ಹಾಕಿ ಹೋಗುವ ಆ ಮನದಳದ ಗುಟ್ಟುಗಳೂ ಅಪರೂಪವಲ್ಲ. ಬದಲಿಗೆ ಅವೇ ಸ್ಪೂರ್ತಿಯ ಮೂಲವಾಗಿ, ಗುಟ್ಟನ್ನು ಇಷ್ಟಿಷ್ಟೆ ಬಯಲಾಗಿಸುವಂತೆ ಮತ್ತೊಂದು ರೂಪದಲ್ಲಿ ಬಿಚ್ಚಿಕೊಳ್ಳುವುದು ಉಂಟು. ಆಗಳು ಒಳಿತನ್ನೆ ಬಯಸುವ ಹಿತೈಷಿಯ ಭಾವ ಈ ಕೆಳಗಿನ ಕವನದ ಮೂಲ ಸರಕು.
ಮನದ ಗುಟ್ಟಿನ ವಿಷಯ...
__________________________
ಚಳಿಗಾಲದ ರಾತ್ರಿ
ನೀ ಕಾಡುವುದು ಖಾತ್ರಿ
ಹೇಳದೆ ಓಡಿದೆಯೇಕೆ ಹೆಸರ ಕೊಟ್ಟು?
ಹಗಲಿರುಳು ಬಿಡದೆ ಕಾಡೆ
ನಿನ್ನ ಹಾಡ ಹಗಲ ದರೋಡೆ
ಸವರಿ ಹೋದೆಯ ತಲೆಯೊಳ್ಹೆಸರ ಬಿಟ್ಟು? ||
ನೀ ಬಿಟ್ಟ ಹುಳು ಕೀಟ
ಕೊರೆದಿದೆ ನಿಲ್ಲದೆ ಸತತ
ನೀ ದಾಟಿದನಂತಗಳ ದೂರ ತಳ್ಳಿ ಬದಿಗೆ;
ಯಾವ ಪಯಣದ ಬಂಡಿ
ಹಿಡಿದು, ಬಂದವೊ ಮೈ ಗಿಂಡಿ
ಹುಳಿ ಹಿಂಡಿ ಕುಣಿಯುತಿವೆ, ಎದೆಯ ಒಳಗೆ ||
ಅಲ್ಲೆಲ್ಲೊ ಸುಖದಲಿಹ ಭ್ರಮೆ
ಆಶಿಸುತಲೆ ಮನದಾಳ ದಿಗ್ಭ್ರಮೆ
ಹರಸಿದ ಕಾಮನೆ, ಸುಖ ದುಃಖ ಗೊಂದಲದಲ್ಲಿ ;
ಸುಖಿಸೆಂದು ಬಯಸುತಲೆ
ದುಃಖವಿರೆ ನೆನಪಾಗೊ ತೆವಲೆ
ನಿನ್ನ ಹರ್ಷಕು ತಳುಕು ಹಾಕೊ, ಮಿಡಿತ ನಿಲದಿಲ್ಲಿ ||
ತಣ್ಣಗಿರು ನೀನೆಂದೆ, ಚಳಿಗಲ್ಲ
ಬೆಚ್ಚಗಿರು ಎಂದಾಗ, ಬಿಸಿಲೂ ಅಲ್ಲ
ಕಟ್ಟಿಕೊಟ್ಟ ನೆನಪ ಭಂಡಾರ, ಮನ ಗ್ರಂಥಾಲಯ
ಏಕಾಂತದಲಿ ಹೊಕ್ಕು ಕೂತೆ ;
ಬಿಚ್ಚುತ ಪುಟಪುಟಗಳ ಮಾತೆ !
ಕವಿತೆಯಾಗಿಸುತ ಮನದಾ, ಗುಟ್ಟಿನ ವಿಷಯ! ||
--------------------------------------------------
ನಾಗೇಶ ಮೈಸೂರು
---------------------------------------------------
Comments
ಉ: ಮನದ ಗುಟ್ಟಿನ ವಿಷಯ...
ರಾಯರೇ ಶೈಲಿ ಬಹಳ ಸೊಗಸಾಗಿದೆ. ಹಳೇ girl friend ನೆನಪಾಗಿದ್ದಲ್ಲಿ ಗುಟ್ಟಾಗಿ ನನ್ನ ಕಿವಿಯಲ್ಲಿ ಹೇಳ್ಬಿಡಿ. ಯಾರಿಗೂ ಹೇಳಲ್ಲ. (ನಂದೇ ಎಷ್ಟೋ ಇದ್ದಾಗ......!!)
In reply to ಉ: ಮನದ ಗುಟ್ಟಿನ ವಿಷಯ... by santhosha shastry
ಉ: ಮನದ ಗುಟ್ಟಿನ ವಿಷಯ...
ಶಾಸ್ತ್ರಿಗಳೆ, ಸದ್ಯ ಸಹಾಯಕ್ಯಾರು ಇಲ್ಲಾಂತ ಒದ್ದಾಡ್ತಿದ್ದೆ, ನೀವಾದ್ರೂ ಸಿಕ್ಕಿದ್ರಲ್ಲ ! ನಿಮ್ಮ ಕಿವೀಲಿ ಮಾತ್ರ ಗುಟ್ಟಲ್ಲಿ ಕೇಳಿಸ್ಕೊಳ್ಳಿ - {ಅವಳೇನಾದ್ರೂ ಸಿಕ್ಕಿದ್ರೆ, ಅವಳ ಕಿವಿಗೂ ವಿಷಯ ಹಾಕ್ಬಿಡಿ; ಅವಳಲ್ದೆ ಬೇರೆ ಯಾರಾದ್ರು 'ನಾನೆ' ಅಂತ ಮುಂದೆ ಬಂದ್ರೆ, ಅವರಿಗು ಹೇಳಿ ಬಿಡಿ - ಸಂಪದದಲ್ಲಿ ನಿಮಗೊಂದು ಸೀಕ್ರೇಟ್ ಲೆಟರ್ ಇದೆ, ನೋಡಿಅಂತ ! } - ಆದರೆ, ನಾನು ಹೇಳ್ದೆ ಅಂತ ಮಾತ್ರ ಹೇಳ್ಬೇಡಿ, ನೋಡಿ :-)
ಉ: ಮನದ ಗುಟ್ಟಿನ ವಿಷಯ...
ಗುಟ್ಟು ರಟ್ಟು ಮಾಡಿದ ಪರಿ ಚೆನ್ನಾಗಿದೆ, ನಾಗೇಶರೇ.
In reply to ಉ: ಮನದ ಗುಟ್ಟಿನ ವಿಷಯ... by kavinagaraj
ಉ: ಮನದ ಗುಟ್ಟಿನ ವಿಷಯ...
ಕವಿಗಳೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಯಾರಿಗೊ ಸಂಬಂಧಿಸಿದ ಗುಟ್ಟು ರಟ್ಟು ಮಾಡಿದ್ದು ನಿಜವೆ ಆದರು, ಇದು 'ಯಾರ' ಗುಟ್ಟು ಎನ್ನುವುದನ್ನು ಮಾತ್ರ ಬಹಿರಂಗಪಡಿಸುವುದಿಲ್ಲ ಕವಿಗಳೆ ! ಅದು ಪೂರ್ತಿ ಗುಟ್ಟಾಗಿಯೆ ಉಳಿದುಬಿಡಲಿ ! ಅದಕ್ಕೆ ಸಂಬಂಧಿಸಿದವರಿಬ್ಬರು ಅಕಸ್ಮಾತಾಗಿ ಓದಿ ಇದು ತಮ್ಮದೆ ಗುಟ್ಟೆಂದು ಅಂದುಕೊಂಡು ಅನುಮಾನ ಪಟ್ಟುಕೊಂಡರು ಚಿಂತೆಯಿಲ್ಲ..:-)
In reply to ಉ: ಮನದ ಗುಟ್ಟಿನ ವಿಷಯ... by nageshamysore
ಉ: ಮನದ ಗುಟ್ಟಿನ ವಿಷಯ...
:)
ಉ: ಮನದ ಗುಟ್ಟಿನ ವಿಷಯ...
ನಾಗೇಶ ಮೈಸೂರುರವರಿಗೆ ವಂದನೆಗಳು
’ಮನದ ಗುಟ್ಟಿನ ವಿಷಯ’ ಹೀಗೆ ರಟ್ಟು ಮಾಡುವುದೆ ನಿಮ್ಮ ಗೃಹ ಖಾತೆಯವರಿಗೆ ಈ ವಿಷಯ ತಿಳಿದರೆ ..ನಿಮ್ಮ ಪರಿಸ್ತಿತಿಯ ಯೋಚನೆ ನನಗೆ ...ಬಹಳ ರೋಚಕವಾಗಿ ಬರೆಯುತ್ತಿರುವಿರಿ ಸಂತಸದ ಸಂಗತಿ ಮುಂದುವರಿಯಲಿ ರಸಾಭಿವ್ಯಕ್ತಿಯ ಬರವಣಿಗೆಗೆ ದನ್ಯವಾದಗಳು.
In reply to ಉ: ಮನದ ಗುಟ್ಟಿನ ವಿಷಯ... by H A Patil
ಉ: ಮನದ ಗುಟ್ಟಿನ ವಿಷಯ...
ಪಾಟೀಲರೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ತೆರೆದ ಪುಸ್ತಕದ ಬದುಕು ಬಾಳಬೇಕೆಂದುಕೊಂಡವರು ಗುಟ್ಟಿನ ಗೊಡವೆ ಮೀರಿ ರಟ್ಟಾಗಿಸುವ ಧೈರ್ಯ ಮಾಡಬಲ್ಲರಂತೆ. ನಮ್ಮಂತಹ ಸಾಮಾನ್ಯರಿಗೆ ಅಂತಹ ಮನೋಬಲ, ಸ್ಥೈರ್ಯ ಬರುವುದೆ ಎನ್ನುವುದು ಅನುಮಾನವೆ ಬಿಡಿ! ಅದೆಂತೆ ಇದ್ದರು ಗೃಹ ಖಾತೆಯವರ 'ಖಾತೆ' ಯಲ್ಲು ಇದು ಬರಿಯ ಕಾವ್ಯ ರಸಾಯನ ಮಾತ್ರ ಎಂಬ ಸ್ಪಷ್ಟ ಅರಿವಿದ್ದರೆ ಯಾವ ತೊಡಕು ಉಂಟಾಗದು ಎನ್ನುತ್ತಾರಂತೆ ಅನುಭವಿಗಳು :-)
ಹಾಸ್ಯದ ಹೊರತಾಗಿಯೂ ಅದರೊಳಗಿನ ರಸಾಭಿವ್ಯಕ್ತಿಯ ಪತ್ತೆ ಹಚ್ಚುವ ನಿಮ್ಮ ನಿಷ್ಣಾತತೆಗೆ ಮತ್ತೊಂದಷ್ಟು ನಮನಗಳು !
ಉ: ಮನದ ಗುಟ್ಟಿನ ವಿಷಯ...
:-).......
In reply to ಉ: ಮನದ ಗುಟ್ಟಿನ ವಿಷಯ... by sriprasad82
ಉ: ಮನದ ಗುಟ್ಟಿನ ವಿಷಯ...
ನಮಸ್ಕಾರ ಮತ್ತು ಧನ್ಯವಾದಗಳು ಶ್ರೀ ಪ್ರಸಾದ್, ಗುಟ್ಟಿನ ಕವಿತೆಗೆ ಬಲು 'ಗುಟ್ಟಿ'ನ ರೀತಿಯಲ್ಲೆ ಪ್ರತಿಕ್ರಿಯಿಸಿದ್ದೀರ. ಅಂತು ಎಲ್ಲ ಗುಟ್ಟುಗುಟ್ಟಲ್ಲೆ ನಡೆದಾಗ ಏನೊ ಒಂದು ತರ ಥ್ರಿಲ್ಲು ಅಂತ ಕಾಣುತ್ತೆ:-)