ಅವಳು - ಸಣ್ಣ ಕಥೆ

ಅವಳು - ಸಣ್ಣ ಕಥೆ

ರಾಜೇಶ ಟಾಕ್ಸಿಯನ್ನು ಮನೆಯ ಬಳಿ ನಿಲ್ಲಿಸುತ್ತಿದ್ದಂತೆಯೇ, ರಮ್ಯ ಕಾರಿನಿಂದ ಸರ್ರನೆ ಇಳಿದು ಮನೆಯ ಮುಂಬಾಗಿಲ ಬಳಿಗೆ ದಾಪುಗಾಲು ಹಾಕಿದಳು.

ಟಾಕ್ಸಿ ಡ್ರೈವರ್ ಗೆ ದುಡ್ಡು ಕೊಡುತ್ತಿದ್ದ ರಾಜೇಶ ಒಳಗೆ ಹೋದ ರಮ್ಯಳನ್ನೇ ದಿಟ್ಟಿಸಿ ನೋಡುತ್ತಾ ಹುಬ್ಬುಗಳನ್ನೇರಿಸಿ, ತಲೆಯನ್ನು ಅಡ್ಡಡ್ಡವಾಗಿ ಆಡಿಸಿ ನಿಟ್ಟುಸಿರೆಳೆದ.

ಮಗ-ಸೊಸೆ ಮಾಲ್ಡೀವ್ಸ್ ನಿಂದ ಹನಿಮೂನ್ ಮುಗಿಸಿ ಮನೆಗೆ ಬರುತ್ತಿದ್ದಾರೆ ಎಂದು ಮೊದಲೇ ತಿಳಿದಿದ್ದ ಸಾವಿತ್ರಮ್ಮ, ಕಾಲಿಂಗ್ ಬೆಲ್ ಕರೆಗೆ ಖುಷಿಯಿಂದ ಬಾಗಿಲು ತೆರೆದರು. ಸಾವಿತ್ರಮ್ಮನಿಗೆ ಮೂವತ್ತು ವರ್ಷದ ಹಿಂದೆ ಹೋಗಿದ್ದ ಊಟಿಯ ನೆನಪಾಗಿ ಕೊಂಚ ನಾಚಿಕೆಯಾದರೂ, ರಮ್ಯಳನ್ನು ಕೆಣಕುವ ರೀತಿ ಕೇಳಿದರು "ಏನಮ್ಮ...ಇಬ್ರೂ ಚೆನ್ನಾಗಿ ಎಂಜಾಯ್ ಮಾಡಿದಿರಾ...?"

ಚಪ್ಪಲಿ ಬಿಟ್ಟ ರಮ್ಯ ಸಾವಿತ್ರಮ್ಮನನ್ನು ನೋಡಿಯೂ ನೋಡದಂತೆ ತಲೆಯನ್ನು ಬೇರೆಡೆ ತಿರುಗಿಸಿ "ಹೂಂ ಅತ್ತೆ...", ಎಂದು ಹೆಚ್ಚು ಮಾತನ್ನಾಡದೇ ಸರ್ರನೆ ರೂಮಿನೊಳಗೆ ಸೇರಿಕೊಂಡಳು. ರಾಜೇಶ್-ರಮ್ಯರ ಮದುವೆಯಾಗಿ ಕೆಲವೇ ದಿನಗಳಾಗಿದ್ದರೂ, ಸಾವಿತ್ರಮ್ಮನವರಿಗೆ ರಮ್ಯಳ ಪರಿಚಯ ಎರಡು ವರ್ಷಗಳಿಗೂ ಹೆಚ್ಚು. ಹಾಗಾಗಿ ರಮ್ಯಳ ಈ ನಡವಳಿಕೆ ಕಂಡು ಆಶ್ಚರ್ಯ ಮತ್ತು ಯೋಚನೆ ಉಂಟಾಯಿತು.

***

ಎರಡು ವರ್ಷಗಳ ಹಿಂದೆ, ಶಾಲೆಯ ನೆಚ್ಚಿನ ಗೆಳತಿ ಮತ್ತು ದೂರದ ಸಂಬಂಧಿ ಸುಶೀಲಳನ್ನು ಆಕಸ್ಮಿಕವಾಗಿ ಭೇಟಿಯಾದಾಗ ಸಾವಿತ್ರಮ್ಮನಿಗಾದ ಸಂತೋಷ ಅಷ್ಟಿಷ್ಟಲ್ಲ!  
ಆಗಲೇ ಸುಶೀಲಳ ಮಗಳು, ರಮ್ಯಳನ್ನು ಮೊದಲು ನೋಡಿದ್ದು. ಬಹು ಸುಂದರವಾಗಿದ್ದ ರಮ್ಯಳನ್ನು ನೋಡಿದೊಡನೆಯೇ ಸೊಸೆಯಾಗಿ ತಂದುಕೊಳ್ಳಬೇಕೆನಿಸಿತ್ತು ಆಕೆಗೆ. ಆಗಾಗ ಸುಶೀಲಳ ಮನೆಗೆ ಸಾವಿತ್ರಮ್ಮನ ಜೊತೆ ರಾಜೇಶ ಬರುತ್ತಿದ್ದನಾದರೂ, ರಾಜೇಶ ರಮ್ಯಳನ್ನು ಎಂದಿಗೂ ಹೆಚ್ಚಾಗಿ ಮಾತನಾಡಿಸುತ್ತಿರಲಿಲ್ಲ.
ರಾಜೇಶ ಚಿಕ್ಕಂದಿನಿಂದಲೂ ಹಾಗೆ, ಯಾರೊಡನೆಯೂ ಹೆಚ್ಚಾಗಿ ಮಾತನಾಡುವವನಲ್ಲ. ತಾನಾಯಿತು, ತನ್ನ ಲೋಕವಾಯಿತು ಎನ್ನುವ ಗಿರಾಕಿ. ಶಾಲೆ-ಕಾಲೇಜುಗಳಲ್ಲಿ ಓದುವಾಗ ರೂಮಿಗೆ ಓದಲೆಂದು ಸೇರಿದರೆ ಸಾಕು, ಊಟಕ್ಕೆ-ತಿಂಡಿಗೆ ಬಾ ಎಂದು ಅಮ್ಮನೇ ನೆನಪಿಸಬೇಕು! ತಂದೆಯಿಲ್ಲದ ರಾಜೇಶನನ್ನು ಬಹಳ ಪ್ರೀತಿಯಿಂದ ಬೆಳಸಿದ್ದರು ಸಾವಿತ್ರಮ್ಮ. ಕೆಲಸಕ್ಕೆ ಸೇರಿದ ಮೇಲೂ, ಸಾಮಾನ್ಯವಾಗಿ ಮನೆಗೆ ತಡವಾಗೇ ಬರುತ್ತಿದ್ದ. ಸಾವಿತ್ರಮ್ಮ ಒಮ್ಮೊಮ್ಮೆ ರಾಜೇಶನನ್ನು ’ಏನೋ? ಯಾವುದಾದರೂ ಹುಡುಗಿಯ ಜೊತೆ ಸುತ್ತುತಿದ್ದೀಯೇನೋ? ಹೇಳೋ...", ಎಂದು ರೇಗಿಸಿದ್ದುಂಟು. ಆಗೆಲ್ಲ ರಾಜೇಶ ’ಹಾಗೇನೂ ಇಲ್ಲಮ್ಮ." ಎಂದಷ್ಟೇ ಉತ್ತರಿಸಿ ಸುಮ್ಮನಿದ್ದುಬಿಡುತ್ತಿದ್ದ.

ಇದಾಗಿ ವರ್ಷದ ನಂತರ, ಸಾವಿತ್ರಮ್ಮನೇ, ರಾಜೇಶನ ಬಳಿ ರಮ್ಯಳ ಜೊತೆ ಮದುವೆಯ ವಿಚಾರವಾಗಿ ಕೇಳಿದ್ದರು. ರಾಜೇಶ ಒಪ್ಪಿದ ನಂತರ, ಅವರೇ ಮುಂದುವರಿದು ಸುಶೀಲಳ ಮನೆಯಲ್ಲೂ ಮಾತನಾಡಿ ಇಬ್ಬರ ನಡುವೆ ಮದುವೆಯನ್ನು ಕಳೆದ ವಾರವಷ್ಟೇ ಸುಸೂತ್ರವಾಗಿ ನೆರವೇರಿಸಿದ್ದರು.

ರಮ್ಯ ಬಾಯಿಗೆ ಬಿಡುವು ಕೊಡದೆ ಪಟಪಟನೆ ಮಾತನಾಡುವ ಹುಡುಗಿ. ಕೇಳುವವರಿಗೆ ಬೇಕೋ ಬೇಡವೋ ಊರಿನ ಪುರಾಣವೆಲ್ಲ ಊದುವಾಕೆ ಅವಳು.
ಹಾಗಾಗಿ, ಇಂದು ರಮ್ಯ ಸರಿಯಾಗಿ ಮುಖಕ್ಕೆ ಮುಖ ಕೊಡದೆ ಮೊಟುಕಾದ ಉತ್ತರ ನೀಡಿ ರೂಮಿಗೆ ಸರಸರನೆ ಹೋದದ್ದನ್ನು ನೋಡಿ, ಏನೋ ಎಡವಟ್ಟಾಗಿದೆ ಎಂದು ಅನಿಸಿತು ಸಾವಿತ್ರಮ್ಮನಿಗೆ. ರಾಜೇಶ ಒಳಗೆ ಬರುತ್ತಿದ್ದಂತೆಯೇ, "ಏನಾಯ್ತೋ? ತೊಂದರೆ ಏನೂ ಆಗಲಿಲ್ಲ ತಾನೇ?" ಎಂದು ಕೇಳಿದರು. "ಇಲ್ಲಮ್ಮ. ಏನು ಇಲ್ಲ ಬಿಡು", ಎಂದವನೇ ರೂಮಿನ ಕಡೆಗೆ ಮೆಲ್ಲನೆ ನಡೆದ ರಾಜೇಶ.

ರೂಮಿಗೆ ಬಿರಬಿರನೆ ಬಂದ ರಮ್ಯ ಹಾಸಿಗೆಯ ಮೇಲೆ ಸರಕ್ಕನೆ ಹಾರಿದಳು. ತಲೆಯನ್ನು ಬೇಕೆಂತಲೇ ಕಿಟಕಿಯ ಕಡೆಗಿರಿಸಿ ದಿಂಬಿಗಾನಿಸಿದಳು. ಅವಳ ಕಣ್ಣಲ್ಲಿ ತುಂಬಿದ್ದ ಕಣ್ಣೀರು ಜಾರಿಳಿದು ಬಂದು ದಿಂಬಿನ ಮೇಲೆ ಚಿತ್ತಾರ ಬಿಡಿಸಲಾರಂಭಿಸಿತು. ಮಲಗಿದ ಜಾಗದಿಂದಲೇ ಕಿಟಕಿಯಾಚೆ ನೋಡುತ್ತಿದ್ದವಳ ಮನಸ್ಸು ಅಮ್ಮನನ್ನು ಮತ್ತು ಅಮ್ಮನ ಮನೆಯನ್ನು ಹಂಬಲಿಸತೊಡಗಿತು. ಅಮ್ಮನನ್ನು ನೆನೆಯುತ್ತಿದ್ದಂತೆಯೇ ಅವಳ ದು:ಖ ಇಮ್ಮಡಿಯಾಗಿ, ದಿಂಬು ಇನ್ನಷ್ಟು ತೊಯ್ದು ಹೋಯ್ತು. ರಮ್ಯಳನ್ನು ರೂಮಿನ ತನಕ ಹಿಂಬಾಲಿಸಿದ್ದ, ರಾಜೇಶನಿಗೆ ರೂಮಿನ ಒಳಗೆ ಬರಲೂ ಹಿಂಜರಿಕೆ. ಅವಳಿಗೆ ಏನು ಹೇಳುವುದೆಂದು ತೋಚದೇ ಬಾಗಿಲಲ್ಲೇ ನಿಂತ. ರಮ್ಯ ಅಳುತ್ತಿದ್ದಾಳೆಂದು ಅವನಿಗೆ ತಿಳಿದಿತ್ತು. ತಾನು ಏನು ತಪ್ಪು ಮಾಡಿದ್ದೇನೆಂದೂ ರಾಜೇಶನಿಗೆ ತಿಳಿದಿದ್ದರಿಂದ ದಿಕ್ಕು ತೋಚದೇ ಹಾಗೇ ನಿಂತ. ಒಂದೆರಡು ನಿಮಿಷ ರಮ್ಯಳನ್ನು ಹಾಗೇ ನೋಡುತ್ತಾ ಮೆಲ್ಲನೆ ಬಂದು ಮಂಚದ ತುದಿಯಲ್ಲಿ ಕುಳಿತು ಹೇಳಿದ. "ರಮ್ಮು...ಸಾರಿ ಕಣೇ...". ರಮ್ಯ ರಾಜೇಶನ ಮಾತುಗಳನ್ನು ಕೇಳಿಯೂ ಕೇಳದಂತೆ ನಿರ್ಲಕ್ಷಿಸಿದಳು. ಮತ್ತೊಮ್ಮೆ ರಾಜೇಶ ಮೆಲ್ಲನೆ ನುಡಿದ, "ನನ್ನಿಂದ ತಪ್ಪಾಗಿದೆಯೇ...ಈಗ ಏನು ಮಾಡಲಿ ಹೇಳು..."

ತಲೆಕೂದಲ ಕ್ಲಿಪ್ ತೆಗೆದು ಮೂಲೆಗೆಸೆದು ಅವನ ವಿರುದ್ಧವಾಗಿ ನೋಡುತ್ತಾ ಕೇಳಿದಳು, "ನಿಮ್ಮ ಜೀವನದಲ್ಲಿ ಮೊದಲೇ ಇನ್ನೊಬ್ಬಳು ಇದ್ದಾಳೆ ಅಂತನ್ನೋವಾಗ ನನ್ನನ್ನು ಯಾಕ್ರೀ ಮದುವೆ ಆದ್ರೀ...?". ರಾಜೇಶ ರಮ್ಯಳಿಗೆ ಸಮಾಧಾನ ಮಾಡುವುದು ಹೇಗೆ ಎಂದು ಯೋಚಿಸುತ್ತಾ, "ಅಲ್ಲ ಕಣೇ..." ಅಂದ. "ನೋಡಿ...ನೀವೇ ನಿರ್ಧಾರ ಮಾಡಿ ನಿಮಗೆ ಅವಳು ಮುಖ್ಯನೋ ಇಲ್ಲ ನಾನೋ...". "ಅವಳೇ ಮುಖ್ಯ ಅನ್ನೋ ಹಾಗಿದ್ರೆ ನನ್ನನ್ನ...." ಎಂದವಳು ಮುಂದಿನ ಮಾತುಗಳನ್ನು ಮನಸ್ಸಿನಲ್ಲೇ ನುಂಗಿ ಸುಮ್ಮನಾದಳು.

ರಾಜೇಶ ಮೆಲ್ಲನೆ ಹತ್ತಿರ ಬಂದ, "ಅದು ಹಾಗಲ್ಲ ಕಣೇ...ಹೋಗಲಿ ಬಿಡು ಆದದ್ದು ಆಯ್ತು...ಈಗ ಅದನ್ನೆಲ್ಲ ಮರೆತು ಬಿಡು ಆಯ್ತಾ? ಮುಂದೆ ಹೀಗೆ ಆಗಲ್ಲ...". ರಮ್ಯ ಮುನಿಸಿಕೊಂಡೇ ಇರುವುದನ್ನು ನೋಡಿದ ರಾಜೇಶನಿಗೆ ಏನು ಮಾಡುವುದು ಎಂದು ತಿಳಿಯಲಿಲ್ಲ. ಸುಮ್ಮನೆ ಹಾಗೇ ಕುಳಿತ. 

ರೂಮಿನಲ್ಲಿ ಮೌನ ಆವರಿಸಿತು. 

ಕೆಲ ನಿಮಿಷಗಳಾದ ಮೇಲೆ, ಮತ್ತೆ ರಾಜೇಶ - "ಸಾರಿ ಕಣೇ...ಸಾರಿ...ಆಯ್ತಾ?" ಎಂದ. ರಮ್ಯ ಉತ್ತರಿಸಲಿಲ್ಲ. ರಾಜೇಶ ಮೆಲ್ಲನೆ ಬಳಿ ಬಂದು ಅವಳ ಭುಜದ ಮೇಲೆ ಕೈಯಿರಿಸಿದ. ರಮ್ಯ ರಾಜೇಶನ ಸ್ಪರ್ಶದಿಂದ ತಪ್ಪಿಸಿಕೊಳ್ಳುವಂತೆ ಪಕ್ಕಕ್ಕೆ ಜರುಗಿದಳು. ಕೆಲ ಕ್ಷಣಗಳ ನಂತರ, ರಮ್ಯ ಕೋಪದಲ್ಲೇ ನುಡಿದಳು "ನೋಡಿ ನೀವು ಇನ್ನು ಯಾವತ್ತೂ ಅವಳನ್ನ ಹತ್ತಿರ ಸೇರಿಸಬಾರದು...ಪ್ರಾಮಿಸ್?". ಇದಕ್ಕೆ ರಾಜೇಶ ಮಾನಸಿಕವಾಗಿ ಸಿದ್ಧನಾಗಿಲ್ಲದಿದ್ದರೂ, ಅವನಿಗೆ ಬೇರೆ ವಿಧಿಯಿರಲಿಲ್ಲ.
"ಸರಿ ಕಣೇ...ನೀನು ಹೇಳಿದ ಹಾಗೇ ಆಗಲಿ...ಅಯ್ತಾ? ಅಮ್ಮ ಬಂದಾಗಿನಿಂದ ಏನಾಯ್ತೋ ಅಂತ ಯೋಚಿಸ್ತಿದ್ದಾರೆ ಬಾ..." ಎಂದ. ಅತ್ತೆಯ ಬಗ್ಗೆ ಯೋಚಿಸಿದ ರಮ್ಯ ಮೆಲ್ಲನೆ ಎದ್ದು ಮುಖ ತೊಳೆದುಕೊಳ್ಳಲು ಹೋದಳು.

ರಾಜೇಶ-ರಮ್ಯ ಇಬ್ಬರೂ ಮುಖ ತೊಳೆದುಕೊಂಡು ಬಂದು ಹಾಲಿನಲ್ಲಿರುವ ಸೋಫ ಮೇಲೆ ಕುಳಿತರು. ಇಬ್ಬರೂ ಹೊರಗೆ ಬಂದದ್ದನ್ನು ಗಮನಿಸಿದ ಸಾವಿತ್ರಮ್ಮ ಕಾಫಿ ತಂದರು .ಅತ್ತದ್ದರಿಂದ ರಮ್ಯಳ ಕಣ್ಣುಗಳು ಕೆಂಪಾಗಿದ್ದನ್ನು ಗಮನಿಸಿದ ಸಾವಿತ್ರಮ್ಮ ಕೇಳಿದರು. "ಏನಾಯ್ತು ಅಂತ ಇಬ್ಬರಲ್ಲಿ ಒಬ್ಬರಾದ್ರೂ ಹೇಳ್ತೀರಾ? ಹೊಸ ಜೋಡಿ ಈ ರೀತಿ ಮುನಿಸಿಕೊಂಡರೇ ಹೇಗೆ?". ರಮ್ಯ ಫಟ್ಟನೆ ಹೇಳಿದಳು - "ಅತ್ತೇ...ನೀವು ಈ ರೀತಿ ನನ್ನ ಜೊತೆ ಅನ್ಯಾಯ ಮಾಡ್ತೀರಾ ಅಂತ ಅಂದುಕೊಂಡಿರಲಿಲ್ಲ...". ಈ ರೀತಿ ಉತ್ತರವನ್ನು ಅಪೇಕ್ಷಿಸದಿದ್ದ ಸಾವಿತ್ರಮ್ಮ ಅವಕ್ಕಾಗಿ, "ಅಯ್ಯೋ ರಾಮ...ನಾನೇನಮ್ಮ ಮಾಡಿದೇ ಈಗ! ಏನಾಯ್ತೂ ಅಂತ ಕೇಳಿದ್ರೆ ನನ್ನ ಮೇಲೆ ಗೂಬೆ ಕೂಡಿಸ್ತಿದ್ದೀಯಲ್ಲ!" ಎಂದರು. "ಹೂಂ ಅತ್ತೆ...ನೀವೇ ನಮ್ಮಿಬ್ಬರ ಮದುವೆಯನ್ನ ಆಸೆಯಿಂದ ಮಾಡಿದ್ದು ಅಂತ ಮೊನ್ನೆ ರಾಜೇಶ್ ಹೇಳ್ತಿದ್ರು. ಆದ್ರೆ ರಾಜೇಶ್ ಗೆ ಈಗಾಗ್ಲೇ ಮದುವೆ ಆಗಿದೆ ಅಂತ ಹೇಳೇ ಇರಲಿಲ್ಲ !??" ಎಂದಳು ರಮ್ಯ. ಈ ಮಾತು ಕೇಳುತ್ತಿದ್ದಂತೆಯೇ, ಸಾವಿತ್ರಮ್ಮನಿಗೆ ಸೊಸೆ ಏನು ಹೇಳುತ್ತಿದ್ದಾಳೆ, ಯಾರ ಬಗ್ಗೆ ಹೇಳುತ್ತಿದ್ದಾಳೆ ಎಂಬುದೇ ತಿಳಿಯಲಿಲ್ಲ. "ಇದು ಏನಮ್ಮ ಇದು...ಏನೇನೋ ಹೇಳ್ತಿದ್ದೀಯಾ...ನಮ್ಮ ರಾಜೇಶನಿಗೆ ಈಗಾಗ್ಲೇ ಮದುವೆ ಆಗಿದೆಯಾ? ಏನೋ ರಾಜೇಶ??? ಏನೇನೋ ಹೇಳ್ತಾಳಲ್ಲೋ ರಮ್ಯ" ಎಂದು ಚಿಂತೆಯಿಂದ ರಾಜೇಶನ ಕಡೆಗೆ ತಿರುಗಿದರು. ಕಾಫಿ ಕುಡಿಯುತ್ತಿದ್ದ ರಾಜೇಶ, "ರಮ್ಯಾ! ಅಮ್ಮನಿಗೆ ಹೀಗಾ ಹೇಳೋದು...ಪಾಪ ಟೆನ್ಶನ್ ಮಾಡ್ಕೊಳಲ್ವ ಅವರು" ಎಂದ. "ರಾಜೂ, ಏನೂಂತ ಸರಿಯಾಗಿ ನೀನಾದ್ರೂ ಹೇಳೋ" ಎಂದು ಚಡಪಡಿಸಿದರು ಸಾವಿತ್ರಮ್ಮ.
"ಅಯ್ಯೋ...ಏನಿಲ್ಲಮ್ಮ. ನಿನಗೆ ಗೊತ್ತಲ್ಲ ನನಗೆ ಫೋಟೋ ತೆಗೆಯೋ ಹುಚ್ಚು ಅಂತ. ಈಗ ಮಾಲ್ಡೀವ್ಸ್ ನಲ್ಲೂ ಹಾಗೇ ಮಾಡಿದೆ. ಇವತ್ತು ಬರೋವಾಗ ತಮಾಷೆಗೆ ಅಂತ ಕ್ಯಾಮರಾ ನನ್ನ ಮೊದಲನೇ ಹೆಂಡತಿ. ನೀನು ಎರಡನೆ ಹೆಂಡತಿ ಅಂತ ಹೇಳ್ಬಿಟ್ಟೆ, ಅಷ್ಟಕ್ಕೇ ಇಷ್ಟೆಲ್ಲಾ ರಾಮಾಯಣ!". "ಈಗ ಕ್ಯಾಮರಾ ಮುಟ್ಟಬಾರದೂ ಅಂತ ಪ್ರಾಮಿಸ್ ಮಾಡಿಸ್ಕೊಂಡಿದ್ದಾಳೆ" ಎಂದ. ರಾಜೇಶನ ಮಾತುಗಳನ್ನು ಕೇಳುತ್ತಿದ್ದಂತೆ, ಸಧ್ಯ ಅನಾಹುತವೇನೂ ಆಗಿಲ್ಲವಲ್ಲ ಎಂದು ನಿಟ್ಟುಸಿರುಬಿಟ್ಟು, ರಮ್ಯಳನ್ನು ನೋಡಿ "ನಾನೂ ನೋಡೇ ಬಿಡ್ತೀನಿ... ರಾಜೇಶ ಮೊದಲನೇ ಹೆಂಡತಿ ಬಿಟ್ಟು ಎಷ್ಟು ದಿನ ಇರ್ತಾನೆ ಅಂತ" ಎನ್ನುತ್ತ ನಗುತ್ತಾ ಒಳಗೆ ನಡೆದರು ಸಾವಿತ್ರಮ್ಮ.

Comments