ಸ್ವತಂತ್ರ ದಿನಾಚರಣೆಯ ಹರಕೆ

ಸ್ವತಂತ್ರ ದಿನಾಚರಣೆಯ ಹರಕೆ

ಮತ್ತೆ ಸ್ವತಂತ್ರ ದಿನಾಚರಣೆ ಕಾಲಿಡುತ್ತಿದೆ ವಾರದ ಕೊನೆಯಲ್ಲಿ. ಶ್ರಾವಣ ಮಾಸದ ಜತೆಗೆ ಬರುವ ಹಬ್ಬಗಳ ಸಡಗರದ ಜತೆ ಜತೆಗೆ ಕಾಲಿಡುತ್ತಿರುವ ಈ ದಿನ ಸಾಂಕೇತಿಕವಾಗಿ, ಅದರ ಸಲುವಾಗಿ ಹೋರಾಡಿ, ಎಲ್ಲಾ ತರಹದ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ನೆನೆದು ನಮಿಸುವ ದಿನ. ಅವರು ನೆತ್ತರು ಸುರಿಸಿ ಗಳಿಸಿಕೊಟ್ಟ ಸಂಪತ್ತನ್ನು ಕೈ ಬಿಟ್ಟು ಹೋಗದಂತೆ ಕಾಪಾಡಿಕೊಂಡು, ಪೋಷಿಸಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮೆಲ್ಲರದು. ಅದನ್ನು ನೆನಪಿಸುವ ಸಲುವಾಗಿ ಎರಡು ಕವನಗಳು ಈ ಕೆಳಗೆ - ಸರ್ವರಿಗು ಸ್ವಾತಂತ್ರ ದಿನದ ಶುಭಾಶಯಗಳೊಂದಿಗೆ.

ಸ್ವಾತಂತ್ರ ದಿನದ ನೆನಪಿಗೆ...
_______________________

ಸ್ವಾತಂತ್ರ
ಬರುವುದಿಲ್ಲ ಸುಮ್ಮನೆ
ಕಳೆದುಕೊಳ್ಳದ ಹೊರತು
ಐಷಾರಾಮಿ ಉದಾಸ ಭಾವ.. ||

ಇಲ್ಲದಾಗ
ಎದ್ದು ಬಿದ್ದೆಲ್ಲ ಗದ್ದಲ್ಲ
ಪಡೆವತನಕ ಸ್ವಾಭಿಮಾನ
ಬಿಡದಭಿಮಾನ ಜೀವ ತೆರುವ ||

ಇದ್ದಾಗೇಕೊ
ಆಲಸಿಕೆ ಉಢಾಫೆ ?
ಅನುಭವಿಸೆ ಬೇಕು ಹೊಣೆ
ಜವಾಬ್ದಾರಿ ಯಾಕೊ ಹಿನ್ನಲೆಗೆ ||

ಕಳುವಾಗದೆ
ಅರಿವಾಗದೆನೆ ದಡ್ಡ
ಅರಿವ ಮೊದಲೆ ಮಾಯ
ಕೆಡವಿ ಖೆಡ್ಡದ ಹೋರಾಟ ಮತ್ತೆ ||

ಸ್ವಾತಂತ್ರ
ಸುಲಭದ ಸರಕಲ್ಲ
ಸ್ವೇಚ್ಛೆಯಾಗದಂತೆ ಎಚ್ಚರ
ಕೈ ಜಾರಿ ಹೋಗದಂತೆ ಸೌರಭ ||

-------------------------------------------------------------------------------------
ನಾಗೇಶ ಮೈಸೂರು, ೧೨. ಆಗಸ್ಟ್. ೨೦೧೫, ಶಾಂಘೈ
-------------------------------------------------------------------------------------

ಹೋರಾಡಿದ ಕಲಾವಿದರು..
______________________

ಅದ್ಭುತಗಳ ಚಿತ್ರ
ಕಲಾಕೃತಿಯ ವಿಸ್ತಾರ
ಕುಂಚ ಕಲಾವಿದರಲ್ಲ
ಕೋವಿಗೆದೆಯೊಡ್ಡಿ ಬರೆದರು ||

ಯಾರು ನೀಡಲಿಲ್ಲ ಬಣ್ಣ
ಕಪ್ಪು ಬಿಳುಪಿಗು ಬರ
ಕೊನೆಗದ್ದುತ ನೆತ್ತರಲಿ
ಸ್ವಾಭಿಮಾನದ ಕುಂಚದಲಿ ||

ಆಳುವ ಫಿರಂಗಿ ತುಪಾಕಿ
ಸದ್ದಡಗಿಸಿದ್ದೆಷ್ಟೊ ಬಾರಿ
ರಕ್ತ ಬೀಜಾಸುರ ಪುಟಿದನೆ
ಅಧಿಗಮಿಸುತ ಪ್ರತಿ ಬಾರಿ ||

ನೆನೆದವರಾದರು ಯಾರು ?
ಹಿಂಸೆಗೆ ಎದುರಾಯುಧ
ಅಹಿಂಸೆಯ ಖಾದಿ ಮಣ್ಣುಪ್ಪು
ಬಗ್ಗಿಸಿ ಸಾಮ್ರಾಜ್ಯದ ಬೆನ್ನ ||

ಹೋರಾಡಿ ಬರೆದರಂದು
ಅಳಿಸದಿರೆ ಹೋರಾಟವೀಗ
ನೆನೆದರಷ್ಟೆ ಸಾಕೆ ಬಲಿದಾನ ?
ಕಾಪಿಡಬೇಕು ಸ್ವಾತ್ಯಂತ್ರ ಸತತ ||

-------------------------------------------------------------------------------------
ನಾಗೇಶ ಮೈಸೂರು,
 

Comments

Submitted by santhosha shastry Fri, 08/14/2015 - 22:22

ನಾಗೇಶರಾಯರೇ ಕವನ‌ ಬಹಳ‌ ಚೆನ್ನಾಗಿದೆ. ಸ್ವೇಚ್ಛಾಚಾರವೇ ಸ್ವಾತಂತ್ರ್ಯ‌ ಅಂತ‌ ತಿಳಿಯುವವರಿರುವವ‌ರೆಗೂ ಸ್ವಾತಂತ್ರ್ಯಕ್ಕೆ ಬೆಲೆಯಿರದು.

Submitted by nageshamysore Sat, 08/15/2015 - 21:19

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯೆರಡರ ನಡುವಿನ ಸೂಕ್ಷ್ಮ ತೆಳು ಗೆರೆಯನ್ನರ್ಥ ಮಾಡಿಕೊಂಡು ಮುನ್ನಡೆದರೆ, ಹೊಣೆಗಾರಿಕೆಯಿಂದ ನಿಭಾಯಿಸುವುದಷ್ಟೆ ಅಲ್ಲದೆ ಆ ಸ್ವಾತಂತ್ರ್ಯದ ಸಿಹಿಯನ್ನು ಅನುಭವಿಸಲು ಸಾಧ್ಯ.