ದೇವರೊಡನೆ ಸಂದರ್ಶನ - 4
"ನಾನೂ ನೋಡ್ತಾನೇ ಇದೀನಿ. ಮೂರು ನಾಲ್ಕು ದಿನದಿಂದ ನೀವು ಮಾಮೂಲಿನಂತೆ ಇಲ್ಲ. ಒಬ್ಬರೇ ಏನೋ ಗೊಣಗಾಡುತ್ತಾ ಇರುತ್ತೀರಿ. ಸುಮ್ಮ ಸುಮ್ಮನೆ ನಗುತ್ತಿರುತ್ತೀರಿ. ಏನಾಗಿದೆ ನಿಮಗೆ?" ಬೆಳಗಿನ ಟೀ ಮುಂದಿಟ್ಟು ಹೋಗುತ್ತಾ ಪ್ರಶ್ನಿಸಿದ ಪತ್ನಿಗೆ ಗಣೇಶರು ಉತ್ತರಿಸದೆ ಮುಗುಳ್ನಕ್ಕರು. ಗಡಿಯಾರ ನೋಡಿಕೊಂಡ ಅವರು, 'ಓ, ಆಗಲೇ ಐದೂ ಮುಕ್ಕಾಲಾಯಿತು' ಎಂದುಕೊಂಡು ತಲೆಯ ಮೇಲೆ ಮಂಕಿ ಕ್ಯಾಪ್ ಧರಿಸಿ ಲಗುಬಗೆಯಿಂದ ರತ್ನಗಿರಿಬೋರೆ ಕಡೆಗೆ ಹೆಜ್ಜೆ ಹಾಕಿದರು. ಕಲ್ಲುಬೆಂಚಿನ ಮೇಲೆ ಕುಳಿತ ಅವರ ಬಳಿಗೆ ಅಲ್ಲೆ ಅಡ್ಡಾಡುತ್ತಿದ್ದ ನಾಯಿಮರಿಯೊಂದು ಬಾಲ ಅಲ್ಲಾಡಿಸುತ್ತ ಕುಂಯ್ಗುಡುತ್ತ ಬಂದಿತ್ತು. ಅದರ ತಲೆ ಸವರಿದ ಗಣೇಶರು ಏನನ್ನೋ ಜ್ಞಾಪಿಸಿಕೊಂಡಂತೆ ನೆಟ್ಟಗೆ ಕುಳಿತು, "ಸುಪ್ರಭಾತ ದೇವರೇ." ಅಂದರು.
ದೇವರು: ಸುಪ್ರಭಾತ, ಶುಭರಾತ್ರಿಗಳೆಲ್ಲಾ ನಿಮಗೆ. ನನಗೆ ಎಲ್ಲವೂ ಒಂದೇ. ಎಲ್ಲಾ ಕಾಲದಲ್ಲೂ ನನ್ನದು ಒಂದೇ ಸ್ಥಿತಿ. ಇರಲಿ, ಮಾತು ಪ್ರಾರಂಭಿಸಲು ಇದು ನಿನ್ನ ಶಿಷ್ಟಾಚಾರದ ಮಾತೆಂದು ನನಗೆ ಗೊತ್ತು. ಇನ್ನೂ ಏನು ತಿಳಿಯಬೇಕೆಂದಿರುವೆ?
ಗಣೇಶ: ಎಷ್ಟೊಂದು ರೀತಿಯ ಜೀವಿಗಳಿವೆ, ಕ್ರಿಮಿ-ಕೀಟಗಳಿವೆ, ಪಶು-ಪಕ್ಷಿಗಳಿವೆ. ಅವುಗಳು ಯಾವುವೂ ನಮ್ಮ ಹಾಗೆ ದೇವರು-ದಿಂಡರು ಅಂತೆಲ್ಲಾ ತಲೆ ಕೆಡಿಸಿಕೊಳ್ಳೋದಿಲ್ಲ. ನಮಗೆ ಮಾತ್ರ ಈ ತಾಪತ್ರಯ ಏಕೆ?
ದೇವರು: ನಿಮಗೆ ವಿವೇಚನಾಶಕ್ತಿ ಇದೆ. ಅವುಗಳಿಗೆ ಇಲ್ಲ. ಅದೇ ವ್ಯತ್ಯಾಸ. ನೋಡುವುದರಿಂದ, ಕೇಳುವುದರಿಂದ, ಮನೆಯಿಂದ, ಸುತ್ತಮುತ್ತಲಿನ ಪರಿಸರದಿಂದ, ಹಿರಿಯರಿಂದ, ಗುರುಗಳಿಂದ, ಶಿಕ್ಷಣ ಶಾಲೆಗಳಿಂದ ಸಿಗುವ ಜ್ಞಾನ ನಿಮ್ಮಲ್ಲಿ ವಿವೇಚನಾಶಕ್ತಿ ಉಂಟು ಮಾಡುತ್ತದೆ. ಒಬ್ಬೊಬ್ಬರ ವಿವೇಚನಾಶಕ್ತಿ ಒಂದೊಂದು ತರಹ ಇರುವುದರಿಂದ ಒಬ್ಬೊಬ್ಬರು ಒಂದೊಂದು ರೀತಿ ವಿಚಾರ ಮಾಡುತ್ತಾರೆ. ಹಾಗಾಗಿ ನಿಮ್ಮ ಕಲ್ಪನೆಯ ದೇವರು-ದಿಂಡರುಗಳೆಲ್ಲಾ ಬಂದುಬಿಟ್ಟಿದ್ದಾರೆ.
ಗಣೇಶ: ನೀನೂ ಒಬ್ಬ ಕಲ್ಪನೆಯ ದೇವರಾ?
ದೇವರು: (ನಗುತ್ತಾ) ಹೌದು ಎಂದರೆ ಹೌದು, ಅಲ್ಲ ಎಂದರೆ ಅಲ್ಲ. ನಿನ್ನ ಅರಿಯುವ ಶಕ್ತಿಗೆ ತಕ್ಕಂತೆ ನೀನು ನನ್ನನ್ನು ಕಲ್ಪಿಸಿಕೊಳ್ಳಬಹುದಷ್ಟೆ.
ಗಣೇಶ: ಕಲ್ಪನೆಯ ದೇವರ ಬದಲಿಗೆ ನಿಜವಾದ ದೇವರ ಬಗ್ಗೆಯೇ ಎಲ್ಲರಿಗೂ ತಿಳಿಸುತ್ತೇನೆ. ನೀನು ನಿಜವಾಗಿ ಹೇಗಿದ್ದೀಯ ನೀನೇ ಹೇಳಿಬಿಡು.
ದೇವರು: ನೀನು ನಿನಗೆ ತಿಳಿದಂತೆ ಹೇಳಿದರೆ ಅದು ಜನರಿಗೆ ಇನ್ನೊಂದು ಹೊಸ ದೇವರನ್ನು ಪರಿಚಯ ಮಾಡಿಸುತ್ತೆ. ಈಗ ಇರುವ ದೇವರುಗಳೇ ನಿಮಗೆ ಸಾಕು. ಎಲ್ಲಾ ದೇವರುಗಳು ಬಂದಿರುವುದೂ ನಿನ್ನ ಹಾಗೆ ದೇವರನ್ನು ಅವರವರ ಕಲ್ಪನೆಯಂತೆ ತಿಳಿದುಕೊಂಡು ಹೊಗಳಿ ಪೂಜೆ ಮಾಡಲು ಪ್ರಾರಂಭಿಸಿದ್ದರಿಂದ. ಪೂರ್ಣವಾಗಿ ತಿಳಿದುಕೊಳ್ಳಲು ಸಾಧನೆ ಮಾಡಬೇಕು. ಅರೆಬರೆ ಜ್ಞಾನ ಅಪಾಯಕಾರಿ, ನಿನಗೂ ಮತ್ತು ನೀನು ಇರುವ ಸಮಾಜಕ್ಕೂ.
ಗಣೇಶ: ಒಳ್ಳೆಯ ಜ್ಞಾನ ಎಲ್ಲಿ ಸಿಗುತ್ತೆ?
ದೇವರು: ತಿಳಿಯಬೇಕು ಎನ್ನುವ ಹಂಬಲವಿದ್ದರೆ ತಿಳಿಸಬಲ್ಲ ಹಲವರು ಸಿಗುತ್ತಾರೆ. ಜಗತ್ತಿನ ಪ್ರತಿಯೊಂದು ವಸ್ತು, ಸಂಗತಿಗಳಿಂದಲೂ ಕಲಿಯಬೇಕಾದುದು ಇದೆ. ಆ ಹಂಬಲ, ಹಸಿವು ಇದ್ದರೆ ದಾರಿ ತಾನಾಗಿಯೇ ತೋರುತ್ತದೆ.
ಗಣೇಶ: ಅಯ್ಯೋ, ಈಗಾಗಲೇ ಅರ್ಧ ಆಯಸ್ಸು ಮುಗಿಯುತ್ತಾ ಬಂದಿದೆ. ಈಗ ಜ್ಞಾನ, ಗೀನ ಅಂತ ಎಲ್ಲಿ ಹುಡುಕಿಕೊಂಡು ಹೋಗಲಿ. ಸಿಕ್ಕಷ್ಟೇ ಶಿವ ಅಂತ ತಿಳಿದಷ್ಟೇ ತಿಳಿದರಾಯಿತು. ಹೇಗೂ ನೀನೇ ದೇವರು ನನಗೆ ಸಿಕ್ಕಿದ್ದೀಯಾ. ಎಲ್ಲರೂ ನಿನ್ನ ಸಾಕ್ಷಾತ್ಕಾರಕ್ಕೋ, ಮತ್ತೊಂದಕ್ಕೋ ಪರದಾಡುತ್ತಿರುತ್ತಾರೆ. ನೀನೇ ನನಗೆ ದಾರಿ ತೋರಿಸಿಬಿಡು.
ದೇವರು: ಇಲ್ಲಿ ಅಡ್ಡದಾರಿಯಲ್ಲಿ ಹೋಗಿ ಗುರಿ ತಲುಪಲು ಅವಕಾಶವೇ ಇಲ್ಲ. ಅಟ್ಟಕ್ಕೇ ಹಾರಲಾಗದವನಿಗೆ ಬೆಟ್ಟ ಹಾರಲು ಆಗುತ್ತದೆಯೇ? ಒಂದನೆಯ ತರಗತಿ, ಎರಡನೆಯ ತರಗತಿ, ಇತ್ಯಾದಿಗಳಲ್ಲಿ ತೇರ್ಗಡೆಯಾಗಿ ಕೊನೆಗೆ ಪದವಿ ಪರೀಕ್ಷೆಗೆ ಹಾಜರಾಗಬಹುದು. ಕೂಡುವ ಲೆಕ್ಕ, ಕಳೆಯುವ ಲೆಕ್ಕವೇ ಬರದಿದ್ದರೆ ವಿಜ್ಞಾನ, ಗಣಿತದ ಅಭ್ಯಾಸ ಸಾಧ್ಯವೇ? ಒಂದಕ್ಕಿಂತ ಒಂದು ದೊಡ್ಡ ಸಂಗತಿಗಳು ಇವೆ, ಅವುಗಳನ್ನು ಅರಿಯುತ್ತಾ ಹೋದಂತೆ ನೀನು ತಿಳಿಯಬೇಕಾದ ಸಂಗತಿ ತಿಳಿಯುತ್ತಾ ಹೋಗುತ್ತದೆ.
ಗಣೇಶ: ನಮ್ಮಲಿ ಮುಕ್ತ ವಿಶ್ವವಿದ್ಯಾಲಯ ಇದೆ. ನೇರವಾಗಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಕಟ್ಟಬಹುದು, ಕೊನೆಗೆ ಡಿಗ್ರಿ ಪರೀಕ್ಷೆಗೂ ಕಟ್ಟಬಹುದು. ಪರೀಕ್ಷೆಗೇ ಹೋಗದೆ ಡಿಗ್ರಿ ತೆಗೆದುಕೊಂಡವರು, ಡಾಕ್ಟೊರೇಟ್ ತೆಗೆದುಕೊಂಡವರೂ ಇದ್ದಾರೆ. ನನಗೂ ನೀನು ಒಂದು ಛಾನ್ಸ್ ಕೊಟ್ಟರೆ ಪುಣ್ಯ ಸಿಗುತ್ತೆ.
ದೇವರು: ಹೇಳಿದೆನಲ್ಲಾ, ಇಲ್ಲಿ ಅಡ್ಡದಾರಿಗೆ ಅವಕಾಶವೇ ಇಲ್ಲ. ಅಡ್ಡದಾರಿಯಲ್ಲಿ ಹೋದರೆ ಸಿಗುವುದು ಅಡ್ಡಫಲಗಳೇ. ಪ್ರತಿಯೊಬ್ಬರಿಗೂ ಮುಂದೆ ಹೋಗಲು ಅವಕಾಶ ಇದ್ದೇ ಇದೆ. ಸಮಯ ಒಬ್ಬರಿಗೆ ಒಂದು ತರಹ ಮತ್ತೊಬ್ಬರಿಗೆ ಇನ್ನೊಂದು ತರಹ ಇಲ್ಲ. ಉಪಯೋಗಿಸಿಕೊಳ್ಳುವುದು ಬಿಡುವುದು ಅವರವರಿಗೆ ಬಿಟ್ಟದ್ದು.
ಗಣೇಶ: ಹೋಗಲಿ ಬಿಡು. ನನಗೆ ಅಷ್ಟೊಂದು ವ್ಯವಧಾನ ಇಲ್ಲ. ಒಂದಕ್ಕಿಂತ ಒಂದು ದೊಡ್ಡ ಸಂಗತಿ ಇದೆ, ಅವನ್ನು ಅರಿತರೆ ತಿಳಿಯಬೇಕಾದ್ದು ತಿಳಿಯುತ್ತೆ ಅಂದೆಯಲ್ಲಾ. ಎಲ್ಲವನ್ನೂ ತಿಳಿಯುವುದು ನನಗೆ ಸಾಧ್ಯವಿದೆಯೋ ಇಲ್ಲವೋ, ಆದರೆ ಆ ಸಂಗತಿಗಳಾದರೂ ಯಾವುವು ಅನ್ನುವುದನ್ನಾದರೂ ಹೇಳಬಹುದಲ್ಲಾ!
ದೇವರು: ನಿಮ್ಮ ವಿವೇಚನಾಶಕ್ತಿಗೆ ಜ್ಞಾನ ಆಧಾರ ಅಂತ ನಿನಗೆ ಗೊತ್ತಾಯಿತಲ್ಲಾ! ಈ ಜ್ಞಾನ ಬರುವುದಾದರೂ ಹೇಗೆ? ನೀವು ಆಡುವ ಮಾತುಗಳಿಂದ! ಜ್ಞಾನದ ಮೂಲ ಮಾತೇ ಆಗಿದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಮಾತಿನಿಂದಲೇ ಸೃಷ್ಟಿ, ಸ್ಥಿತಿ, ಲಯಗಳಾಗಿವೆ. ಮಾತು ಅನ್ನುವುದು ಅಷ್ಟೊಂದು ಪ್ರಬಲವಾಗಿದೆ. ನೀವುಗಳು ಶ್ರೇಷ್ಠವೆಂದು ಗೌರವಿಸುವ ವೇದ, ಭಗವದ್ಗೀತೆ, ಕುರಾನ್, ಬೈಬಲ್ಲುಗಳೆಲ್ಲವೂ ಮೊದಲು ಮೂಡಿದ್ದು ಮಾತಿನಿಂದಲೇ! ಜ್ಞಾನಕ್ಕಿಂತಲೂ ಮಾತು ದೊಡ್ಡದು ಎಂದು ಅರ್ಥವಾಯಿತೇ?
ಗಣೇಶ: ಅರ್ಥವಾಯಿತು. ಇಂದಿಗೆ ಇಷ್ಟು ಸಾಕು ದೇವರೇ. ನನ್ನ ತಲೆಗೆ ಅಜೀರ್ಣವಾಗಿದೆ. ಆದರೆ ನನ್ನ ಉದರ ಕವಕವ ಅನ್ನುತ್ತಿದೆ. ಇನ್ನೂ ಕೇಳುವುದೋ, ತಿಳಿಯುವುದೋ ಬಹಳವಿದೆ. ನಾಳೆ ಮತ್ತೆ ಬರುತ್ತೇನೆ. ಬರಲಾ?
ದೇವರು: ಹೋಗಿಬಾ. ಶುಭವಾಗಲಿ.
ಮನೆಗೆ ಮರಳಿ ಕುರ್ಚಿಯ ಮೇಲೆ 'ಉಸ್ಸಪ್ಪಾ' ಎನ್ನುತ್ತಾ ಕುಳಿತ ಗಣೇಶರು ಒಳಗಿದ್ದ ಪತ್ನಿಯನ್ನು ಉದ್ದೇಶಿಸಿ "ನಾನು ಬಂದಿದ್ದೇನೆ ಕಣೇ. ವಾಕಿಂಗಿಗೆ ಹೋಗದೆ ಇಲ್ಲೇ ಕುಳಿತಿದ್ದೆ ಅಂತ ಹೇಳಬೇಡ. ಹೊಟ್ಟೆ ಚುರುಗುಟ್ಟುತ್ತಿದೆ. ಟೀ ಜೊತೆಗೆ ಏನಾದರೂ ತಿನ್ನುವುದಕ್ಕೂ ತೆಗೆದುಕೊಂಡು ಬಾ" ಎಂದರು. ತಿಂಡಿ ತಟ್ಟೆಯನ್ನು ಗಣೇಶರ ಮುಂದಿಟ್ಟು ಅವರನ್ನು ಒಂದು ತರಹಾ ನೋಡುತ್ತಾ ಅವರ ಪತ್ನಿ ಮಾತನಾಡದೇ ಮತ್ತೆ ಅಡುಗೆಮನೆಗೆ ಟೀ ಮಾಡಲು ಹೋದರು.
-ಕ.ವೆಂ.ನಾಗರಾಜ್.
Comments
ಉ: ದೇವರೊಡನೆ ಸಂದರ್ಶನ - 4
ಗಣೇಶರು ಭೇಟಿಗೆ ಮೊದಲು ಮತ್ತು ಕೊನೆಯ ಭೇಟಿಯ ನಂತರದ ತೂಕದ ದಾಖಲೆ ಮಾಡಿಕೊಳ್ಳುವುದು ಉಚಿತ - ಪ್ರೊಗ್ರೆಸ್ ರಿಪೋರ್ಟಿನ ಹಾಗೆ... ಬೇರೆಲ್ಲ ಪ್ರಶ್ನೆಗೆ ಉತ್ತರ ಸಿಗಲಿ ಬಿಡಲಿ 'ತನುಮನದ' ನಿಯಮಿತ ವಾಕಿಂಗಿನಿಂದ, ಖಂಡಿತ ಒಳ್ಳೆ ವ್ಯಾಯಾಮ (ಮತ್ತು ಮನಸಿಗೆ ಆಯಾಮ, ಆರಾಮ) ಸಿಗುತ್ತದೆ ! :-)
In reply to ಉ: ದೇವರೊಡನೆ ಸಂದರ್ಶನ - 4 by nageshamysore
ಉ: ದೇವರೊಡನೆ ಸಂದರ್ಶನ - 4
:)) ಕ್ರಮೇಣ ಮೊದಲಿನ ಹಾಗೆಯೇ ಆಗುತ್ತಾರೆಂದು ಪಾರ್ಥರ ಭವಿಷ್ಯವಾಣಿ! ಆದ್ದರಿಂದ ಚಿಂತಿಸಬೇಕಿಲ್ಲ. ಆದರೆ ನಿಮ್ಮ ಅನಿಸಿಕೆಯನ್ನು ಗಮನಿಸಿ ಗಣೇಶರು ಅಭ್ಯಾಸ ಮುಂದುವರೆಸುವ ಸಾಧ್ಯತೆಯೂ ಇರಬಹುದು!
In reply to ಉ: ದೇವರೊಡನೆ ಸಂದರ್ಶನ - 4 by kavinagaraj
ಉ: ದೇವರೊಡನೆ ಸಂದರ್ಶನ - 4
ನಾಗೇಶರೆ, ಕವಿನಾಗರಾಜರೆ,
ತನುಮನದ ನಿಯಮಿತ ವಾಕಿಂಗ್ನಿಂದ ಕಮ್ಮಿಯಾದ ದೇಹದ ತೂಕ, ದೇವರ ಸಂದರ್ಶನದ ವಿಷಯ ತಲೆಯಲ್ಲಿ ತುಂಬಿ ಪುನಃ ಹೆಚ್ಚುತ್ತಿದೆ.. ತಲೆಯಲ್ಲಿ ತುಂಬಿದ ವಿಷಯ ಜೀರ್ಣವಾಗದ್ದಕ್ಕೆ ಅದನ್ನು ಹೊಟ್ಟೆಗೆ ವರ್ಗಾಯಿಸುತ್ತೇನೆ.. ಹೊಟ್ಟೆ ಇನ್ನೂ ದೊಡ್ಡದಾಗಿ ಕಾಣಿಸಿದರೆ ಬೊಜ್ಜೆಂದು ತಿಳಿಯಬೇಡಿ..
In reply to ಉ: ದೇವರೊಡನೆ ಸಂದರ್ಶನ - 4 by ಗಣೇಶ
ಉ: ದೇವರೊಡನೆ ಸಂದರ್ಶನ - 4
@ಗಣೇಶ್ ಜಿ : ಬೊಜ್ಜೊ ಅಲ್ಲವೊ, ಭಗವಂತನ ಪ್ರಸಾದವೆಂದು ಬಾರಿಸಿಬಿಡಿ.. ದೇಹಕ್ಕೆ ಬೇಕಿದ್ದನ್ನು ಇರಿಸಿಕೊಂಡು, ಬೇಡವಾದದ್ದನ್ನು ವರ್ಜಿಸಿಕೊಳ್ಳುವ ಕೆಲಸ ಆ ದೇಹಕ್ಕೆ ಗೊತ್ತಿರುತ್ತದೆಯಂತೆ :-)
In reply to ಉ: ದೇವರೊಡನೆ ಸಂದರ್ಶನ - 4 by nageshamysore
ಉ: ದೇವರೊಡನೆ ಸಂದರ್ಶನ - 4
ಸರಿಯಾಗಿ ಹೇಳಿದಿರಿ, ನಾಗೇಶರೇ.
In reply to ಉ: ದೇವರೊಡನೆ ಸಂದರ್ಶನ - 4 by ಗಣೇಶ
ಉ: ದೇವರೊಡನೆ ಸಂದರ್ಶನ - 4
ಅರಗಿಸುವ ಸಾಧನ ಉದರದಲ್ಲಿರುವುದು ಗೊತ್ತು. ತಲೆಯಲ್ಲಿದ್ದುದನ್ನು ಉದರಕ್ಕೆ ವರ್ಗಾಯಿಸಿ ಅರಗಿಸುವ ವಿಧಾನ ದಯಮಾಡಿ ತಿಳಿಸಿ, ಪುಣ್ಯ ಕಟ್ಟಿಕೊಳ್ಳಿ ಗಣೇಶರೇ. ನನ್ನ ತಲೆಯಲ್ಲಿ ತುಂಬಿಕೊಂಡಿರುವ ಅನುಪಯುಕ್ತ ಸಾಮಗ್ರಿ ಹೆಚ್ಚಾಗಿ ತಲೆ ಭಾರವಾಗಿರುವುದನ್ನು ಹಗುರ ಮಾಡಿಕೊಳ್ಳಲು ಅನುಕೂಲವಾದೀತು.