ಗೊಲ್ಲನಲ್ಲದ ಗೊಲ್ಲ..

ಗೊಲ್ಲನಲ್ಲದ ಗೊಲ್ಲ..

ಚಿತ್ರ ಕೃಪೆ / Picture courtesy (Wikipedia) : https://en.m.wikipedia.org/wiki/File:Illustrations_from_the_Barddhaman_e...(6).jpg

ಚಿಕ್ಕವರಿದ್ದಾಗ ಕೃಷ್ಣ ಜಯಂತಿ ಬಂತೆಂದರೆ ನಮಗೆ ಯಾವುದೊ ಸಂಭ್ರಮಕ್ಕೆ ಹಾಡಿದ ನಾಂದಿಯ ಹಾಗೆ; ಅದಕ್ಕೆ ಮುಖ್ಯ ಕಾರಣ ಅದನ್ನು ಹರಿಕಥೆ, ನಾಟಕ, ನೃತ್ಯ, ವಾದ್ಯಗೋಷ್ಟಿಗಳ ಸಮೇತ ವಾರ ಪೂರ್ತಿ ವೈಭವದಿಂದ ಆಚರಿಸುವ ಪದ್ದತಿ. ಮನೆಯ ಹತ್ತಿರದಲ್ಲಿಯೆ ಇದ್ದ ಆ ಆಚರಣೆಯ ಜಾಗದಲ್ಲಿ ಒಂದು ದಿನ ಬೆಳಗಿನ ಐದುವರೆ ಗಂಟೆಗೆ ಇದ್ದಕ್ಕಿದ್ದಂತೆ 'ಶುಕ್ಲಾಂ ಭರದರಂ ವಿಷ್ಣುಂ..' ಎಂದು ಲೌಡ್ ಸ್ಪೀಕರಿನಲ್ಲಿ ಮೊಳಗತೊಡಗಿತೆಂದರೆ, ಸಕ್ಕರೆ ನಿದ್ದೆಯಿಂದ ಬಡಿದೆಬ್ಬಿಸಿದವರಂತೆ ಎದ್ದು ಕೂರುತ್ತಿದ್ದೆವು, ಯಾವುದೊ ಬಗೆಯ ರೋಮಾಂಚನದಿಂದ. ಅಲ್ಲಿಂದ ಮುಂದೆ ಗಣೇಶನನ್ನಿಟ್ಟು ಪೂಜಿಸುವ ಆಚರಣೆಯ ಪೆಂಡಾಲುಗಳಿಗೆಲ್ಲ ಇದು ಮುನ್ನುಡಿಯಂತೆ ಭಾಸವಾಗಿ, ನಮಗೆ ಎಲ್ಲಿಲ್ಲದ ಉತ್ಸಾಹ ತಂದು ಬಿಟ್ಟಿರುತ್ತಿತ್ತು. ಮುಖ ಮೂತಿಯನ್ನು ತೊಳೆಯದೆ ಎದ್ದು ಓಡಿಹೋಗಿ, ಕಟ್ಟುತ್ತಿದ್ದ ದೈತ್ಯ ಮೈಕಾಸುರಗಳನ್ನು, ಚಪ್ಪರ, ಶಾಮಿಯಾನಗಳನ್ನು, ಆ ಕಾರ್ಯಕ್ರಮದ ರಂಗಮಂಚವಾಗುವ ವೇದಿಕೆಗಳ ನಿರ್ಮಾಣ ಕಾರ್ಯವನ್ನು ನೋಡುತ್ತ ನಿಂತುಕೊಂಡರೆ ವೇಳೆಯ ಪರಿವೆಯೆ ಇರುತ್ತಿರಲಿಲ್ಲ - ಸ್ಕೂಲಿಗೆ ತಡವಾಯಿತೆಂದು ಹುಡುಕಿಕೊಂಡು ಬಂದ ಮನೆಯವರು ಹಿಂದಿನಿಂದ ಕೋಲಿನಲ್ಲೊಮ್ಮೆ ಬಾರಿಸುವ ತನಕ..!

ದೊಡ್ಡವರಾದಂತೆ ಆ ಉತ್ಸಾಹ ಕುತೂಹಲವಾಗಿ, ಕೃಷ್ಣಲೀಲೆಯದೆ ತರಹದ ಪುರಾಣ ದಂತ ಕಥೆಗಳನ್ನು ಓದುವ - ಆಲಿಸುವ ಚಟವಾಗಿಬಿಟ್ಟಿತು. ಅದರಿಂದಲೆ ಅರ್ಧ ಓದುವ ಹವ್ಯಾಸದ ರುಚಿ, ಗೀಳು ಅಂಟಿಕೊಂಡಿದ್ದು. ಅದರಿಂದಾಚೆಗೆ ಅದರಲ್ಲಿ ಉತ್ಪ್ರೇಕ್ಷೆಯ ಪಾಲೆಷ್ಟು, ನೈಜತೆಯ ಪಾಲೆಷ್ಟು ಎನ್ನುವ ವೈಜ್ಞಾನಿಕ ಜಿಜ್ಞಾಸೆಯ ತಾಕಲಾಟಗಳು ಕಾಡಿದ್ದುಂಟು. ಇದೆಲ್ಲಾ ತರದ ಸಾರ್ವಕಾಲಿಕ ಆಸಕ್ತಿ, ತುಮುಲಗಳ ನಡುವೆಯೆ ಕೃಷ್ಣ ಜನ್ಮಾಷ್ಟಮಿ ಕಾಲಿಕ್ಕುತ್ತಿರುವ ಹೊತ್ತಲಿ ಈ ಗೊಲ್ಲನ ಜೀವನ ಲೀಲೆಯ ತುಣುಕುಗಳು ಲೇಖನ ಬರಹಗಳಾಗಿಯೊ, ಕವನಗಳಾಗಿಯೊ, ಭಕ್ತಿ ಭಜನೆಯ ಶ್ರಾವ್ಯ ಮಾಧ್ಯಮದ ಗುನುಗುಗಳಾಗಿಯೊ ಇಣುಕುವುದು ಸಾಮಾನ್ಯ. ಈ ಬಾರಿ ಈ ಹೊತ್ತಿನಲ್ಲಿ ಹೊಳೆದ ಅನಿಸಿಕೆ - ಗೊಲ್ಲನಲ್ಲದವನು ಗೊಲ್ಲನೆನಿಸಿಕೊಂಡು ನಡೆಸಿದ ಲೀಲೆಯ ವೈಚಿತ್ರ. ಬಹುಶಃ ಅವನಿಗೊಂದು ನಿಖರವಾದ ನಿರ್ದಿಷ್ಠ 'ಗುರುತಿನ ಚೀಟಿ (ಐಡೆಂಟಿಟಿ)'ಯನ್ನು ಕೊಡುವ ಕಾರ್ಯವೆ ಗೊಂದಲದ ಮೊದಲ ಹಂತವಾಗಿಬಿಡುತ್ತದೆ. ದೇವನೊ, ಮಾನವನೊ, ದೇವ ಮಾನವನೊ, ಗೊಲ್ಲನೊ, ಗೊಲ್ಲನಲ್ಲದವನೊ - ಎನ್ನುತ್ತ ವಾದಿಸಿಕೊಂಡೆ ಹೋಗಬಹುದು, ಮುಗಿಯದ ಚರ್ಚೆಯಂತೆ. 

ಅಂತಹ ಗೊಲ್ಲನಲ್ಲದ ಗೊಲ್ಲನ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹೆಣೆದ ಈ ಕೆಳಗಿನ ಪದ್ಯ ಹೆಚ್ಚು-ಕಡಿಮೆ ಆ ಚಿತ್ರಣವನ್ನೆ ಬಿಂಬಿಸುವಂತಿದೆಯೇನೊ ?

ಗೊಲ್ಲನಲ್ಲದವನ ವೈಭವ 
___________________________

ಗೊಲ್ಲನವನೊಬ್ಬ ಸಲ್ಲುವ ಸಲುವಾಗಿ
ಗೆಲುವ ಗೆಲ್ಲುವ ಸಿದ್ಧಿ ಜಗದ ವರವಾಗಿ ||

ಗೋವುಗಳ ಕಾದ ಗೋಪಾಲನಲ್ಲನವ
ಮುರುಳಿ ನಿನಾದಕೆ ಗೋಪಿಗು ನಲ್ಲನವ ||

ಕಾದದ್ದುಂಟೆ ಕಾವಲೆಂದಾದರು ಚಳಕ
ಸುತ್ತ ನೆರೆದು ಕಾದವಲ್ಲ ಏನಂಥ ಪುಳಕ ||

ಕಣ್ತಪ್ಪಿಸಿ ಏಮಾರಿಸಿ ಕಾಲಹರಣಕೆ ಚೋರ
ಕದ್ದದ್ದು ಬೆಣ್ಣೆ ಮೊಸರೊ ನಾರಿ ಮನ ಪೂರ ||

ಯಮುನೆ ಕಾಳಿಂದಿ ನೆಪ ಜಲಕ್ರೀಡೆ ಜಳಕ
ಜಗದ ಕೊಳೆಗೆ ಮಜ್ಜನ ತೊಳೆದೆಲ್ಲ ಸೂತಕ ||

ಯಾರು ಬರೆದರೊ ಜಾತಕ ಬದುಕೆಲ್ಲ ತವಕ
ನವನೀತ ಗುನುಗುತ್ತ ನಡೆದವನ ನಗೆ ಲೋಕ ||

ಕೊಂದನೊ ಕೊಲಿಸಿದನೊ ಭಾರ ಬಲುವಾಗಿ
ನಿಂದನೆಗು ಸಹನೆ ಭೂ ಭಾರದ ಸಲುವಾಗಿ ||

ಪಕ್ಷ ವಹಿಸುತ ಲಕ್ಷ್ಯ ಪಕ್ಷಪಾತಿಯ ದೂರು
ಆರೋಪ ದೂಷಣೆ ಸನ್ಮತಿಯದೆ ತಕರಾರು ||

ಸಖರೊ ದುರ್ಮುಖರೊ ತೋರಿಕೊಟ್ಟ ದಾರಿ
ಯುದ್ಧಭೂಮಿ ಕರ್ಮ ಕರ್ತವ್ಯ ಗೊಂದಲ ಜಾರಿ ||

ಬೇಕಿತ್ತೊ ಬೇಡಿತ್ತೊ ಬೇಡನ ಬಾಣ ಮೊನೆಚು
ತಗುಲೆ ಕಾರ್ಯಾಕಾರಣ ಬಿಟ್ಟನೀ ಜಗದಂಚು ||

-------------------------------------------
ನಾಗೇಶ ಮೈಸೂರು
-------------------------------------------

 

Comments

Submitted by kavinagaraj Thu, 09/03/2015 - 16:26

ಕೃಷ್ಣ - ಆದರ್ಶಪ್ರಾಯ ವ್ಯಕ್ತಿತ್ವ. ನೀವು ಹೇಳಿದಂತೆ ಶತ್ರುನಿಗ್ರಹ ಮಾಡಿ ಭೂಭಾರ ಇಳಿಸಿದಾತ, ಶಾಂತಿ, ನ್ಯಾಯ, ನೀತಿ, ಧರ್ಮಗಳನ್ನು ಎತ್ತಿ ಹಿಡಿದಾತ! ಆಶ್ರಿತರಿಗೆ ದೇವರೆನಿಸಿದಾತ! ಇಂದಿಗೂ ಪ್ರಸ್ತುತನೀತ!!! ನಿಮಗೂ, ಸಂಪದಿಗರಿಗೂ ಗೋಕಲಾಷ್ಟಮಿ ಶುಭಾಶಯಗಳು.

Submitted by nageshamysore Thu, 09/03/2015 - 17:54

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ನಿಮಗೂ ಗೋಕುಲಾಷ್ಟಮಿಯ ಶುಭಾಶಯಗಳು. ಕೃಷ್ಣನ ವ್ಯಕ್ತಿತ್ವ ಎಷ್ಟು ವರ್ಣ ರಂಜಿತವೊ, ಅಷ್ಟೆ ನೀತಿ ಬೋಧಕವೂ ಸಹ ಆಗಿರುವುದರಿಂದ ಅವನ ಪಾತ್ರದ ಕುರಿತಾದ ಕುತೂಹಲ , ಜಿಜ್ಞಾಸೆ ನಿರಂತರವಾಗಿರುತ್ತದೆನ್ನಬಹುದು.

Submitted by santhosha shastry Thu, 09/03/2015 - 23:53

ನಮ್ಮ‌ ಮಕ್ಕಳ ಬಗ್ಗೆ ಹೇಗೆ ಎಷ್ಟು ಹೇಳಿಕೊಂಡ್ರೂ ಸಾಕಾಗಲ್ವೋ ಅದೇ ರೀತಿ ಕಿಟ್ಟಿಯನ್ನು ಎಷ್ಟು ಕೊಂಡಾಡಿದ್ರೂ ಮನಸ್ಸಿಗೆ ಸಾಕಾಗಾದು. ಅಲ್ವೇ? ರಾಯರ‌ ಕವನ‌ ಬಹಳ‌ ಚೆನ್ನಾಗಿದೆ.

Submitted by nageshamysore Fri, 09/04/2015 - 02:18

In reply to by santhosha shastry

ಕಿಟ್ಟಿದು ತುಂಬಾ ಚೇಷ್ಟೆ, ತುಂಟಾಟದ ಕೆಟ್ಟ ಬುದ್ಧಿ ಅಂತ ಗೊತ್ತಾದ್ರು - ಆ ಬುದ್ದಿನೆ ಇಷ್ಟ ಆಗೋದು ಆವನ ಸ್ಪೆಷಾಲಿಟಿ ಅನ್ನಬಹುದು. ಎಂಥ ಭರ್ಜರಿ ಹೋಲಿಕೆ ಕೊಟ್ಟುಬಿಟ್ರಿ ಶಾಸ್ತ್ರಿಗಳೆ! ಮಕ್ಕಳ ಬಗ್ಗೆ ಹೇಳಿಕೊಳ್ಳೊ ಹಾಗೆ ಅವನ ಗುಣಗಾನನೂ ಅನ್ನೋ ಮಾತಿನ ಅರ್ಥ ವ್ಯಾಪ್ತಿ ನನ್ನ ಕವನದ ಅಳತೆನೂ ಮೀರಿ ಆಚೆ ಹೋಗೊವಂತದ್ದು. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು.