ಕಾಬೂಲಿವಾಲ
[ಇದು ರವೀಂದ್ರನಾಥ ಟ್ಯಾಗೋರ್ ೧೮೯೨ ರಲ್ಲಿ ರಚಿಸಿದ ಕಥೆ. ಈ ಕಥೆಯನ್ನು ಸಾಕಷ್ಟು ವರ್ಷಗಳ ಕಾಲ ಮತ್ತೆ ಮತ್ತೆ ಓದಿರುವೆನಾದ್ದರಿಂದ, ಇದು ನನ್ನ ಕಥೆಯೇನೋ ಅನ್ನಿಸುತ್ತದೆ. ಇದರ ಕನ್ನಡ ರೂಪಾಂತರದಲ್ಲಿ ತಪ್ಪುಗಳಿದ್ದರೆ, ಅವು ನನ್ನವು. ಮೂಲ ಲೇಖಕರಿಗಿದ್ದ ಭಾಷಾ ಪ್ರೌಢಿಮೆ, ಜೀವನ ಅನುಭವ ಎಲ್ಲರಿಗೂ ದಕ್ಕುವುದಿಲ್ಲ]
ನನ್ನ ಐದು ವರ್ಷದ ಮಗಳು ‘ಮಿನಿ’ಯ ಬಾಯಿ ಯಾವಾಗಲೂ ಚಟ ಪಟ, ಏನಾದರೂ ಮಾತನಾಡದೆ ಅರೆಕ್ಷಣ ಸುಮ್ಮನಿರಲು ಆಕೆಗೆ ಸಾಧ್ಯವಿಲ್ಲ. ಸುಮಾರು ಒಂದು ವರ್ಷದವಳಿದ್ದಾಗ ಆಡಲು ಕಲಿತ ಮಾತನ್ನು. ಮಾತನಾಡದೆ ಇದ್ದರೆ 'ಸಮಯವೇ ವ್ಯರ್ಥ' ಎನ್ನುವಂತೆ ಮುಂದುವರೆಸುಕೊಂಡು ಬಂದಿದ್ದಾಳೆ. ಸಾಕಷ್ಟು ಸಲ ಅವಳ ಅಮ್ಮ ಮಿನಿಯನ್ನು ಸುಮ್ಮನಿರಲು ಹೇಳಿದ್ದಿದೆ. ಆದರೆ ಕೃತಕವಾಗಿ ಅವಳ ಬಾಯಿಯನ್ನು ಮುಚ್ಚಿಸುವುದು ನನ್ನ ಮನಸಿಗೆ ಒಪ್ಪದ ವಿಷಯ. ಅದೇ ಕಾರಣಕ್ಕಾಗಿ ನನ್ನ ಮತ್ತು ಮಿನಿಯ ನಡುವಿನ ಮಾತುಕತೆ ಯಾವಾಗಲೂ ಚೇತೋಹಾರಿ.
ಒಂದು ಬೆಳಿಗ್ಗೆ, ನನ್ನ ಕಾದಂಬರಿಯ ಹದಿನೇಳನೇ ಅಧ್ಯಾಯ ಬರೆಯುತ್ತ ಕೂತಿದ್ದೆ. ಆಗ ಕೋಣೆಯೊಳಗೆ ಬಂದ ಮಿನಿ ಆಕ್ಷೇಪಿಸುವ ಸ್ವರದಲ್ಲಿ ಹೇಳಿದಳು
"'ಅಪ್ಪ, ನಮ್ಮ ರಾಮದಯಾಳು ಕಾಗೆಯನ್ನು 'ಕಾಕಾ' ಅನ್ನದೇ 'ಕವ್ವಾ' ಎಂದು ಕರೆಯುತ್ತಾನೆ. ಅವನಿಗೆ ಏನೂ ಗೊತ್ತಿಲ್ಲ. ಅಲ್ಲಾ?"
ನಾನು ಅದು ಬೇರೆ ಭಾಷೆಯ ಶಬ್ದ ಎಂದು ಹೇಳುವುದಕ್ಕೆ ಮುಂಚೆಯೇ ಅವಳು ಮುಂದಿನ ವಿಷಯಕ್ಕೆ ಹೊಗಾಗಿದೆ. "ನೋಡು ಅಪ್ಪ, ಭೋಲಾ ಹೇಳಿದ. ಆನೆ ಸೊಂಡಿಲಿನಿಂದ ನೀರನ್ನು ತೆಗೆದುಕೊಂಡು ಮೇಲೆ ಚಿಮ್ಮಿಸಿದರೆ ಮಳೆ ಆಗುತ್ತೆ ಅಂತ. ಸುಮ್ನೆ ಏನೇನೋ ಮಾತಾಡ್ತಾನೆ."
ಇದರ ಬಗ್ಗೆ ನನ್ನ ಅಭಿಪ್ರಾಯ ಹೇಳುವದಕ್ಕೆ ಅವಕಾಶ ಕೊಡದೆ ಪ್ರಶ್ನೆ ಹಾಕಿದಳು "ಅಪ್ಪ, ನಿನಗೆ ಅಮ್ಮ ಏನಾಗ್ಬೇಕು?"
'ನಮ್ಮತ್ತೆ' ಎಂದು ಮನಸಿನಲ್ಲಿ ಅಂದುಕೊಂಡೆನಾದರೂ ಅವಳಿಗೆ ಈ ಕಠಿಣ ಪ್ರಶ್ನೆಗೆ ಉತ್ತರಿಸದೇ, ‘ಭೋಲಾ ಜೊತೆ ಹೊರಗೆ ಆಡಿಕೋ, ನನಗೆ ಸ್ವಲ್ಪ ಕೆಲಸ ಇದೆ’ ಎಂದು ಹೇಳಿದೆ. ಅದಕ್ಕವಳು ಹೊರಗೆ ಹೋಗದೆ ನನ್ನ ಕಾಲ ಬುಡದಲ್ಲಿ ಕುಳಿತು ಆಟಕ್ಕೆ ತೊಡಗಿದಳು. ನಾನು ಬರೆಯುತ್ತಿದ್ದ ಕಾದಂಬರಿ ಒಂದು ರೋಚಕ ತಿರುವು ಪಡೆದುಕೊಳ್ಳುತ್ತಿತ್ತು. ಕಗ್ಗತ್ತಲಲ್ಲಿ, ಎತ್ತರದ ಜೈಲು ಗೋಡೆಯಿಂದ ಪ್ರತಾಪ್ ಸಿಂಗ್, ಕಾಂಚನಮಾಲಳ ಜೊತೆ ಕೆಳಗಿನ ನದಿಗೆ ಧುಮುಕುತ್ತಿದ್ದ.
ಆದರೆ ಆಡಿಕೊಂಡಿದ್ದ ಮಿನಿ ಕಿಟಕಿಯತ್ತ ಹೋಗಿ, "ಕಾಬೂಲಿವಾಲ, ಓ ಕಾಬೂಲಿವಾಲಾ" ಎಂದು ಕೂಗುವುದು ಕೇಳಿಸಿ, ರಸ್ತೆಗೆ ಮುಖ ಮಾಡಿಕೊಂಡಿದ್ದ ಕಿಟಕಿಯತ್ತ ಕಣ್ಣು ಹಾಯಿಸಿದೆ. ರಸ್ತೆಯ ಮೇಲೆ ಒಬ್ಬ ಕಾಬೂಲಿವಾಲ ನಿಧಾನವಾಗಿ ನಡೆದು ಹೋಗುತ್ತಿದ್ದ. ಅಫ್ಗನ್ನಿನವರು ಧರಿಸುವ ಸಡಿಲವಾದ ನಿಲುವಂಗಿ, ಬೆನ್ನಿಗೆ ಇಳಿ ಬಿಳುವ ಉದ್ದನೆಯ ಪೇಟ ತೊಟ್ಟು, ಹೆಗಲಲ್ಲಿ ಒಂದು ದೊಡ್ಡ ಚೀಲ ಮತ್ತು ಕೈಯಲ್ಲಿ ಒಣ ದ್ರಾಕ್ಷಿಯ ಪೊಟ್ಟಣಗಳನ್ನು ಹಿಡಿದು ನಡೆದಿದ್ದ. ಮಿನಿಗೆ ಏನನ್ನಿಸಿ ಅವನನ್ನು ಕೂಗಿದಳೋ, ಆದರೆ ಅವನು ಬಂದರೆ ನನ್ನ ಇಂದಿನ ಬರಹ ಮುಂದೆ ಸಾಗುವುದಿಲ್ಲ ಎನ್ನಿಸಿತು. ಕರೆಯನ್ನು ಕೇಳಿಸಿಕೊಂಡ ಕಾಬೂಲಿವಾಲ, ತಿರುಗಿ ನೋಡಿ, ಮುಗುಳ್ನಗುತ್ತ ಮನೆಯತ್ತ ಬಂದ. ಆದರೆ ಭೀತಿಗೆ ಒಳಗಾದ ಮಿನಿ ಮಿಂಚಿನಂತೆ ಒಳ ಹೋಗಿ ಅಡಗಿ ಕೊಂಡಳು. ಅವಳ ಮನಸ್ಸಲ್ಲಿ ಅಡಗಿದ್ದ ಭಯ ಎಂದರೆ, ಈ ಕಾಬೂಲಿವಾಲ ತನ್ನ ಚೀಲದಲ್ಲಿ ಸಣ್ಣ ಮಕ್ಕಳನ್ನು ಕೂಡಿ ಹಾಕಿರಬಹುದು ಎಂದು.
ಮನೆ ಬಾಗಿಲಿಗೆ ತಲುಪಿದ ಕಾಬೂಲಿವಾಲ ಇಸ್ಲಾಂ ಶೈಲಿಯಲ್ಲಿ ನಮಸ್ಕರಿಸಿದ. ನನ್ನ ಕಾದಂಬರಿಯ ಪಾತ್ರಗಳಾದ ಪ್ರತಾಪ್ ಸಿಂಗ್ ಮತ್ತು ಕಾಂಚನಮಾಲ ದಾರುಣ ಸ್ಥಿತಿಯಲ್ಲಿದ್ದರೂ, ಮನೆಗೆ ಕರೆಸಿಕೊಂಡ ಈತನಲ್ಲಿ ಏನಾದರೂ ಕೊಂಡು ಕೊಳ್ಳದೆ ಇರುವುದು ಸಮಂಜಸ ಅಲ್ಲ ಎಂದು ತೋರಿತು.
ಕೆಲ ವಸ್ತುಗಳನ್ನು ಖರೀದಿಸುತ್ತ, ಆತನೊಂದಿಗೆ ಸಂಭಾಷಣೆಗೆ ಇಳಿದೆ. ಕೊನೆಯಲ್ಲಿ ಹೊರಡುವುದಕ್ಕೆ ಮುಂಚೆ ಆತ ಕೇಳಿದ 'ನಿಮ್ಮ ಚಿಕ್ಕ ಹುಡುಗಿ ಎಲ್ಲಿ?'
ಮಿನಿಯ ಭಯ ನಿವಾರಣೆಗೆ ನಾನು ಅವಳನ್ನು ಕೂಗಿ ಕರೆದೆ. ಅವಳು ಭೀತಿಯಿಂದ ಬಂದು ನನ್ನ ಮೈಗೆ ಅಂಟಿಕೊಂಡು ನಿಂತಳು ಮತ್ತು ಸಂಶಯದ ದೃಷ್ಟಿಯಿಂದ ಕಾಬೂಲಿವಾಲನ ಚೀಲದ ಕಡೆಗೆ ನೋಡಿದಳು. ಕಾಬೂಲಿವಾಲ ತನ್ನಲ್ಲಿದ್ದ ದ್ರಾಕ್ಷಿ ಕೊಡಲು ಮುಂದಾದ. ಆದರೆ ಸಂಶಯದಿಂದ ಅದನ್ನು ನಿರಾಕರಿಸಿದ ಮಿನಿ, ನನಗೆ ಅಂಟಿಕೊಂಡೇ ನಿಂತಳು. ಅವರಿಬ್ಬರ ಪ್ರಥಮ ಭೇಟಿ ಹಾಗೆ ಕೊನೆಗೊಂಡಿತು.
ಕೆಲ ದಿನಗಳ ನಂತರ, ಯಾವುದೋ ಕೆಲಸದ ಮೇಲೆ ಮನೆ ಹೊರಗೆ ಹೊರಟಿದ್ದೆ. ಅಲ್ಲಿ ಕಟ್ಟೆಯ ಮೇಲೆ ನನ್ನ ಪುಟ್ಟ ಮಗಳು ಬಿಟ್ಟು ಬಿಡದೆ ಮಾತನಾಡುತ್ತಿರುವುದು ಮತ್ತು ಅವಳ ಕಾಲ ಬುಡದಲ್ಲಿ ಕುಳಿತ ಕಾಬೂಲಿವಾಲ ಹೂಂಗುಡುತ್ತ ಕುಳಿತಿರುವುದು ಕಾಣಿಸಿತು. ಅದುವರೆಗಿನ ಜೀವನದಲ್ಲಿ ಮಿನಿಗೆ, ತನ್ನ ಮಾತುಗಳನ್ನು ಇಷ್ಟು ಶ್ರದ್ಧೆಯಿಂದ ಕೇಳುವರಾರು ಸಿಕ್ಕಿರಲಿಲ್ಲ, ಅವಳ ಅಪ್ಪನ ಹೊರತಾಗಿ. ಹಾಗೆಯೇ ಮಿನಿಯ ಬಟ್ಟೆ ಅಂಚಿನಲ್ಲಿ ಒಣ ದ್ರಾಕ್ಷಿಯ ಚಿಕ್ಕ ಗಂಟನ್ನು ಗಮನಿಸಿದೆ. ಅದನ್ನು ನೋಡಿದ ಮೇಲೆ ಕಾಬೂಲಿವಾಲನಿಗೆ ಹೇಳಿದೆ 'ಅದನ್ನೇಕೆ ಕೊಟ್ಟೆ? ಮತ್ತೆ ಹಾಗೆ ಮಾಡಬೇಡ'. ಹಾಗೆಯೇ ಜೀಬಿನಿಂದ ಐವತ್ತು ಪೈಸೆಯ ನಾಣ್ಯ ತೆಗೆದು ಕೊಟ್ಟೆ. ಯಾವುದೇ ಸಂಕೋಚ ಇಲ್ಲದೆ ಅದನ್ನು ತೆಗೆದುಕೊಂಡ ಕಾಬೂಲಿವಾಲ ತನ್ನ ಚೀಲದಲ್ಲಿ ಹಾಕಿಕೊಂಡ.
ಮನೆಗೆ ವಾಪಾಸ್ಸು ಬಂದಾಗ ಅಲ್ಲಿ ಒಂದು ಚಿಕ್ಕ ರಾದ್ದಾಂತವೇ ನಡೆದಿತ್ತು.
ಹೊಳೆಯುವ ನಾಣ್ಯ ಕೈಯಲ್ಲಿ ಹಿಡಿದುಕೊಂಡ ಮಿನಿಯನ್ನು ಅವಳ ಅಮ್ಮ ಪ್ರಶ್ನಿಸುತ್ತಿದ್ದಳು 'ಇದನ್ನು ಎಲ್ಲಿಂದ ತಂದೆ?'
ಮಿನಿ ಉತ್ತರಿಸಿದಳು 'ಕಾಬೂಲಿವಾಲ ಕೊಟ್ಟ'
ತಾಯಿ ಇನ್ನು ಕೋಪದಿಂದ ಕೇಳಿದಳು 'ಅವನಿಂದ ಯಾಕೆ ತೆಗೆದುಕೊಂಡೆ?'
ಮಿನಿ ಬಿಕ್ಕುತ್ತ ಹೇಳಿದಳು 'ನಾನೇನು ಕೊಡು ಅಂದು ಕೇಳಲಿಲ್ಲ. ಅವನಾಗಿಯೇ ಕೊಟ್ಟಿದ್ದು'
ಆ ಸಮಸ್ಯೆಯಿಂದ ಮಿನಿಯನ್ನು ಪಾರು ಮಾಡಲು, ನಾನು ಮಧ್ಯ ಪ್ರವೇಶಿಸಿ ಅವಳನ್ನು ನನ್ನ ಜೊತೆ ಹೊರಗೆ ಸುತ್ತಲು ಕರೆದುಕೊಂಡು ಹೋದೆ.
ಆಗ ತಿಳಿದು ಬಂತು. ಅದು ಮಿನಿ ಮತ್ತು ಕಾಬೂಲಿವಾಲರ ಎರಡನೇ ಭೇಟಿಯಾಗಿರಲಿಲ್ಲ. ಅವರು ಪ್ರತೀ ದಿನವೂ ಭೇಟಿಯಾಗುತ್ತಿದ್ದರು. ತನ್ನಲ್ಲಿದ ತಿನಿಸುಗಳನ್ನು ಕೊಡುತ್ತ ಕಾಬೂಲಿವಾಲ ಮಿನಿಯ ಮೃದು ಹೃದಯ ಗೆದ್ದು ಬಿಟ್ಟಿದ್ದ.
ಇಬ್ಬರೂ ಗೆಳೆಯರ ಗೆಳೆಯರ ಮಾತು-ನಗೆಗಳಲ್ಲಿ ಪುನರಾವರ್ತನೆಯಾಗುತ್ತಿದ್ದ ಪ್ರಶ್ನೆ-ಉತ್ತರ ಎಂದರೆ, ಮಿನಿ ದೊಡ್ಡ ನಗೆಯೊಂದಿಗೆ ಕೇಳುವುದು 'ಕಾಬೂಲಿವಾಲ, ಓ, ಕಾಬೂಲಿವಾಲ. ನಿನ್ನ ಚೀಲದಲ್ಲಿ ಏನಿದೆ?' ಅದಕ್ಕೆ ಉದ್ಗಾರದೊಂದಿಗೆ ರಹಮತ್ ಉತ್ತರಿಸುತ್ತಿದ್ದ 'ಆನೆ!'
ಇದಾದ ನಂತರ ಇಬ್ಬರೂ ಸ್ನೇಹಿತರು ಗಹ ಗಹಿಸಿ ದೊಡ್ಡ ದನಿಯಲ್ಲಿ ನಗುತ್ತಿದ್ದರು. ಆ ನೋಟ, ಅವರಿಬ್ಬರ ಮುಗ್ಧ ಗೆಳೆತನ, ನನಗೆ ತುಂಬಾ ಅಪ್ಯಾಯಮಾನ ಎನಿಸುತ್ತಿತ್ತು.
ಅವರಿಬ್ಬರ ನಡುವೆ ಪದೇ ಪದೇ ಬರುತ್ತಿದ್ದ ಮತ್ತೊಂದು ಮಾತು ಎಂದರೆ, ರಹಮತ್ ಗಟ್ಟಿಯಾದ ದನಿಯಲ್ಲಿ ಹೇಳುತ್ತಿದ್ದ 'ನೀನು ದೊಡ್ಡವಳಾದ ಮೇಲೆ ಮಾವನ ಮನೆಗೆ ಹೋಗಲೇ ಬಾರದು'. ಎಳೆಯ ವಯಸ್ಸಿನ ಮಿನಿಗೆ 'ಮಾವನ ಮನೆ' ಅಂದರೇನು ಎಂದು ತಿಳಿಯದು. ಆದರೆ ಯಾವುದೇ ಪ್ರಶ್ನೆಗೆ ಉತ್ತರಿಸದೇ ಇರುವ ಜಾಯಮಾನ ಅವಳದಲ್ಲ. ಅವಳು ಅದೇ ಪ್ರಶ್ನೆಯನ್ನು ತನ್ನ ಸ್ನೇಹಿತನಿಗೆ ಹಾಕುತ್ತಿದ್ದಳು 'ನೀನು ಮಾವನ ಮನೆಗೆ ಹೋಗುತ್ತಿಯ?' ಅದಕ್ಕೆ ಉತ್ತರ ಎನ್ನುವಂತೆ, ತನ್ನ ಮುಷ್ಟಿ ಬಿಗಿ ಮಾಡಿ, ಹೊಡೆಯುವ ಹಾಗೆ ಗಾಳಿಯಲ್ಲಿ ಕೈ ಬೀಸುತ್ತ ರಹಮತ್ ಹೇಳುತ್ತಿದ್ದ 'ಅವರಿಗೆ ಸರಿಯಾಗಿ ಏಟು ಕೊಡುತ್ತೀನಿ'. ಅದನ್ನು ಊಹಿಸಕೊಂಡು ಮಿನಿ ನಗೆಯ ಬುಗ್ಗೆಯಾಗುತ್ತಿದ್ದಳು.
ಇದು ಇನ್ನು ಶರತ್ಕಾಲ. ಬಿಸಿಲ ಬೇಗೆ ತಗ್ಗುತ್ತಿದೆಯಾದರೂ, ಮಳೆಗಾಲಕ್ಕೆ ಸಾಕಷ್ಟು ಸಮಯ ಬಾಕಿ ಇದೆ. ಈ ಕಾಲದಲ್ಲಿಯೇ ರಾಜರುಗಳು ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ದಂಡೆತ್ತಿ ಹೋಗುತ್ತಿದ್ದದ್ದು. ನಾನು ಕಲ್ಕತ್ತೆಯಿಂದ ಹೊರಗೆ ಹೊದವನಲ್ಲವಾದರೂ, ನನ್ನ ಮನಸ್ಸು ಮಾತ್ರ ಜಗತ್ತನ್ನು ಸುತ್ತಿ ಬರುತ್ತದೆ. ಯಾವುದೊ ವಿದೇಶದ ಹೆಸರು ಕೇಳಿದಾಗ, ಮನಸ್ಸು ಅಲ್ಲಿಗೆ ಹೋಗಲು ಹಾತೊರೆಯುತ್ತದೆ. ಹಾಗೆಯೇ, ಅಪರಿಚಿತರನ್ನು ಕಂಡಾಗ ಮನದಲ್ಲಿ ಒಂದು ಚಿತ್ರ ಮೂಡುತ್ತದೆ. ಕಾಡಿನ ಮಧ್ಯೆ ಹರಿವ ನದಿ, ಅದರ ದಂಡೆಗೆ ಒಂಟಿ ಗುಡಿಸಲು, ಹೀಗೆ ಸ್ವತಂತ್ರ ಹಾಗೂ ಉಲ್ಲಾಸಭರಿತ ಜೀವನದ ಸೊಗಸಾದ ಕಲ್ಪನೆ ಕಾಣ ತೊಡಗುತ್ತೇನೆ.
ಇಷ್ಟೆಲ್ಲಾ ಆಸೆ ಇದ್ದರೂ, ನನ್ನ ಸೋಮಾರಿತನ ಪ್ರಯಾಣದಿಂದ ದೂರ ಇರುವಂತೆ ಮಾಡುತ್ತದೆ. ಇದೆ ಕಾರಣಕ್ಕೆ ನಾನು ಈ ಕಾಬೂಲ್ ನಿಂದ ಬಂದ ಮನುಷ್ಯನ ಜೊತೆ ಮಾತನಾಡಿ ಜಗತ್ತು ಸುತ್ತುವ ಆಸೆಗಳನ್ನು ಕಡಿಮೆ ಮಾಡಿಕೊಳ್ಳುತ್ತೇನೆ. ಈ ಕಾಬುಲಿವಾಲ ತನ್ನ ತನ್ನ ಮಾತೃ ಭೂಮಿಯ ಕಥೆಗಳನ್ನು ಹೇಳುವಾಗ ನನ್ನ ಕಣ್ಮುಂದೆ ಬರುವುದು - ಎರಡು ಬದಿಯಲ್ಲಿ ಎತ್ತರೆನಯ ಆದರೆ ಎರು-ಪೇರಾದ, ಹತ್ತಲು ಸಾಧ್ಯವಾಗದಂತ ಬೆಟ್ಟಗಳು, ಉರಿ ಬಿಸಿಲು ಮತ್ತು ಬೆವರಿಳಿಸುವ ಸೆಖೆ, ಕಣಿವೆಯಲ್ಲಿ ಸಾಗುತ್ತಿರುವ ಬಂಡಿಗಳು, ಧೂಳು ತುಂಬಿದ ದಾರಿ, ಪೇಟ ಧರಿಸಿದ ವರ್ತಕರು, ಕೆಲವರು ಒಂಟೆಗಳ ಮೇಲೆ ಸಾಗುತ್ತಿರುವುದು ಉಳಿದವವರು ಕಾಲ್ನಡಿಗೆಯಲ್ಲಿ, ಕೆಲವರು ಕೈಯಲ್ಲಿ ಭರ್ಚಿ ಮತ್ತೆ ಇನ್ನು ಕೆಲವರಲ್ಲಿ ಹಳೆ ಕಾಲದ ಕೋವಿಗಳು.
ಮಿನಿಯ ತಾಯಿಯದು ಸಣ್ಣ ಸಣ್ಣದಕ್ಕೂ ಹೆದರುವ ಸ್ವಭಾವ. ಮನ ಹೊರಗಡೆಯ ರಸ್ತೆಯಲ್ಲಿ ಸ್ವಲ್ಪ ಹೆಚ್ಚಿಗೆ ಸದ್ದಾದರೂ, ಊರಿನ ಕುಡುಕರು ಮನೆಯ ಮುಂದೆ ಜಮಾಯಿಸಿದ್ದರೋ ಎಂದು ಆತಂಕ ಪಡುವ ಮನಸ್ಥಿತಿ. ಇಷ್ಟು ವರ್ಷದ ಬದುಕು ಅವಳ ಭೀತಿಯನ್ನು ಕಡಿಮೆ ಮಾಡಲು ಸಾಧ್ಯವಾಗಿರಲಿಲ್ಲ. ಅವಳಿಗೆ ಜಗತ್ತು ಎಂದರೆ ಭಯಾನಕ ಸಮಸ್ಯೆಗಳ ಆಗರ, ಇದರಲ್ಲಿ ತುಂಬಿರೋದು - ಕಳ್ಳರು, ದರೋಡೆಕೋರರು, ಕುಡುಕರು, ಹಾವುಗಳು, ಹುಲಿ, ಮಲೇರಿಯ, ಜಿರಳೆಗಳು, ಹೊರ ದೇಶದ ಸೈನಿಕರು.
ಅವಳಿಗೆ ಈ ಕಾಬೂಲಿವಾಲ ರಹಮತ್ ಮೇಲೆ ಸಂಶಯ ಇರದೇ ಇದ್ದಿಲ್ಲ. ಹಾಗಾಗಿಯೇ ಅವನ ಬಗ್ಗೆ ಜಾಗೃತೆಯಾಗಿರಲು, ನನಗೆ ಪೀಡಿಸುತ್ತಿದ್ದಳು. ಈ ವಿಷಯವನ್ನು ತಮಾಷೆಯಾಗಿಸಿದರೆ, ಅವಳ ಪ್ರಶ್ನೆಗಳು ತೀಕ್ಷ್ಣವಾಗುತ್ತಿದ್ದವು. "ಮಗುವನ್ನು ಹೊತ್ತೊಯ್ದ ಉದಾಹರಣೆಗಳೇ ಇಲ್ಲವೇ? ಜೀತ ವ್ಯಾಪಾರ ಇನ್ನೂ ಜೀವಂತವಾಗಿಲ್ಲವೇ? ಒಬ್ಬ ದೈತ್ಯನಿಗೆ ಸಣ್ಣ ಮಗುವನ್ನು ಹೊತ್ತೊಯ್ಯುವುದು ಸಾಧ್ಯವಾಗದ ಕೆಲಸವೇ?"
ಅವು ಸಾಧ್ಯವಲ್ಲದ ಕೆಲಸಗಳೆನಲ್ಲ ಎನ್ನುವ ವಿಷಯ ಒಪ್ಪುತ್ತೇನಾದರು, ಆದರೆ ಅದರ ಸಾಧ್ಯತೆ ಕಡಿಮೆ ಎನ್ನುವುದು ನನ್ನ ವಿಚಾರ. ಅದೇನೇ ಇರಲಿ, ಸತ್ಯವನ್ನು ಒಪ್ಪಿಕೊಳ್ಳುವ ಸಾಮರ್ಥ್ಯ ಎಲ್ಲರಲ್ಲೂ ಸಮನಾಗಿರುವುದಿಲ್ಲ. ಹಾಗಾಗಿ ನನ್ನ ಪತ್ನಿಯ ಸಂಶಯ ದೂರವಾಗಲಿಲ್ಲವಾದರು, ರಹಮತ್ ನಮ್ಮ ಮನೆಗೆ ಬರುವುದನ್ನು ನಾನು ತಡೆಯುವದಕ್ಕೆ ಹೋಗಲಿಲ್ಲ. ಏಕೆಂದರೆ ಅವನು ಅಂಥಹ ಯಾವ ತಪ್ಪು ಮಾಡಿರಲಿಲ್ಲ.
ಪ್ರತಿ ವರ್ಷ, ಜನವರಿ ಅಥವಾ ಫೆಬ್ರುವರಿ ತಿಂಗಳಲ್ಲಿ, ರಹಮತ್ ತನ್ನ ಕುಟುಂಬವನ್ನು ಭೇಟಿಯಾಗಲು ತಾಯ್ನಾಡಿಗೆ ಹೋಗುತ್ತಿದ್ದ. ಅವನ ಸಾಲ ಕೊಡುವ ವೃತ್ತಿಯಲ್ಲಿ, ತಾನು ಊರಿಗೆ ಹೊರಡುವ ಮುಚಿನ ಸಮಯ, ತನಗೆ ಬರ ಬೇಕಾದ ಬಾಕಿಯನ್ನು ವಸೂಲು ಮಾಡುವುದರಲ್ಲಿ ಕಳೆದು ಹೊಗುತ್ತಿತ್ತು. ಆ ಸಮಯದ ಒತ್ತಡದಲ್ಲೂ, ಅವನು ಮಿನಿಯನ್ನು ಬಂದು ಕಾಣುತ್ತಿದ್ದ. ಅವರಿಬ್ಬರೂ ಯಾವುದೊ ಹಂಚಿಕೆಯಲ್ಲಿ ತೊಡಗಿದಂತೆ ಕಾಣುತ್ತಿತ್ತು. ಬೆಳಿಗ್ಗೆ ಬರಲು ಸಾಧ್ಯವಾಗದಿದ್ದ ದಿನ, ಸಾಯಂಕಾಲ ಬರುತ್ತಿದ್ದ. ಅಂತಹ ದೈತ್ಯನೊಬ್ಬ ಮನೆಯ ಮೂಲೆಯಲ್ಲಿ ಕುಳಿತಿರುವುದು ಒಂದು ಅವ್ಯಕ್ತ ಭಯ ಉಂಟು ಮಾಡುತ್ತಿತ್ತು. ಆದರೆ ಮಿನಿ ಓಡಿ ಬಂದು ತನ್ನ ಸ್ನೇಹಿತನ ಜೊತೆ ಸರಾಗವಾಗಿ ಆಟ ಆಡುವುದು, ಅವರ ನಿಷ್ಕಲ್ಮಶ ಸ್ನೇಹ ಮತ್ತು ಮುಗ್ಧ ನಗು, ಹೃದಯದಲ್ಲಿ ಸಂತೋಷ ತುಂಬುತ್ತಿತ್ತು.
ಒಂದು ದಿನ ನನ್ನ ಕೋಣೆಯಲ್ಲಿ ನನ್ನ ಬರಹಗಳನ್ನು ತಿದ್ದುತ್ತ ಕೂತಿದ್ದೆ. ಅವು ಚಳಿಗಾಲದ ಕೊನೆಯ ದಿನಗಳು. ಋತು ಬದಲಾಗುವುದಕ್ಕೆ ಮುಂಚಿನ ಹೆಪ್ಪುಗಟ್ಟಿಸುವ ಚಳಿ ಅಸಹನೀಯವಾಗಿತ್ತು. ಬೆಳಿಗ್ಗೆ ಹೊತ್ತು ಹಿತವಾಗಿ ಕಿಟಕಿಯಲ್ಲಿ ಬರುವ ಬಿಸಿಲು ಪಾದಗಳನ್ನು ಕಾಯಿಸುತ್ತಿತ್ತು. ಬೆಳಿಗ್ಗೆ ಎಂಟರ ಸಮಯ. ಆಗ ರಸ್ತೆಯಲ್ಲಿ ಅಸಹಜ ಎನ್ನಿಸುವ ಗದ್ದಲ ಕೇಳಿಸಿತು. ನೋಡಿದರೆ ರಹಮತ್ ನ ಕೈಗೆ ಕೊಳ ಬಿಗಿದು ಪೊಲೀಸರು ಕರೆದುಕೊಂಡು ಹೊರಟಿದ್ದರು. ಅವರನ್ನು ಚಿಕ್ಕ ಮಕ್ಕಳ ಗುಂಪೊಂದು ಹಿಂಬಾಲಿಸುತ್ತಿತ್ತು. ರಹಮತ್ ನ ಬಟ್ಟೆಯ ಮೇಲೆ ರಕ್ತದ ಕಲೆಗಳಿದ್ದವು. ಪೊಲೀಸನೊಬ್ಬ ಕೈಯಲ್ಲಿ ರಕ್ತದಲ್ಲಿ ತೊಯ್ದ ಚಾಕು ಕಾಣಿಸಿತು. ನಾನು ಹೊರ ಬಂದು ಪೊಲಿಸನೊಬ್ಬನ ಹತ್ತಿರ ವಿಚಾರಿಸಿದೆ. ಅವರಿಂದ ತಿಳಿದು ಬಂದ ಮಾಹಿತಿ ಎಂದರೆ ರಹಮತ್ ನ ಹತ್ತಿರ ಸಾಲ ತೆಗೆದು ಕೊಂಡ ವ್ಯಕ್ತಿಯೊಬ್ಬ ಅದನ್ನು ಹಿಂತುರಿಗಿಸದಿದ್ದಾಗ ಜಗಳ ಹುಟ್ಟಿ, ಆವೇಶದಲ್ಲಿ ರಹಮತ್ ಅವನಿಗೆ ಚಾಕು ವಿನಿಂದ ಇರಿದು ಬಿಟ್ಟಿದ್ದ.
ರಹಮತ್ ತನ್ನ ಸಾಲ ಹಿಂತುರಿಗಿಸದವನ ಮೇಲೆ ಇನ್ನೂ ಬೈಗುಳ ನಿಲ್ಲಿಸಲಿರಲಿಲ್ಲ. ಆಗ ಮಿನಿ ಕೂಗುತ್ತ ಮನೆಯಿಂದ ಹೊರಗೆ ಬಂದಳು "ಕಾಬೂಲಿವಾಲ, ಓ ಕಾಬೂಲಿವಾಲಾ". ಒಂದು ಕ್ಷಣದಲ್ಲಿ, ರಹಮತ್ ನ ಮುಖ ಭಾವದಲ್ಲಿ ಒಳ್ಳೆಯ ಬದಲಾವಣೆ ಕಂಡು ಬಂತು. ಅವನ ಹೆಗಲಲ್ಲಿ ಚೀಲ ಇಲ್ಲದಿದ್ದ ಕಾರಣ, ಅದು ಅವರ ಪ್ರತಿ ದಿನದ ಭೇಟಿಯಂತೆ ಮುಂದುವರೆಯಲಿಲ್ಲ. ಮಿನಿ ನೇರವಾಗಿ ಕೇಳಿದಳು 'ಮಾವನ ಮನೆಗೆ ಹೊಗುತ್ತಿದ್ದಿಯ?'
'ಹೌದು, ಅಲ್ಲಿಗೇ ಹೋಗುತ್ತಿರುವುದು' ರಹಮತ್ ನಗು ಮುಖದಲ್ಲಿ ಉತ್ತರಿಸಿದ.
ಅದು ಮಿನಿಯಲ್ಲಿ ನಗೆ ಹುಟ್ಟಿಸದೆ ಇದ್ದದಕ್ಕೆ, ತನ್ನ ಕೈ ತೋರಿಸುತ್ತ ಹೇಳಿದ 'ನನ್ನ ಮಾವನಿಗೆ ಸರಿಯಾಗಿ ಹೊಡೆಯುತ್ತಿದ್ದೆ. ಆದರೇನು ಮಾಡುವುದು ನನ್ನ ಕೈಗಳನ್ನು ಕಟ್ಟಿ ಬಿಟ್ಟಿದ್ದಾರೆ.'
ತನ್ನ ತಪ್ಪಿಗೆ ಶಿಕ್ಷೆಯಾಗಿ, ರಹಮತ್ ಗೆ ಎಷ್ಟೋ ವರ್ಷಗಳವರೆಗೆ ಜೈಲು ಸೇರಿದ.
ಅವನು ನಮ್ಮ ನೆನಪಿನಿಂದ ಮರೆಯಾಗಿ ಹೋದ. ನೆಮ್ಮದಿಯಿಂದ ಮನೆಯಲ್ಲಿ ಜೀವನ ಕಳೆವ ನಮಗೆ, ಆ ಬೆಟ್ಟ ಪ್ರದೇಶದ ಸ್ವತಂತ್ರ ಜೀವಿ ಜೈಲಿನಲ್ಲಿ ಹೇಗೆ ಕಾಲ ಕಳೆಯುತ್ತಿರಬಹುದು ಎನ್ನುವ ವಿಚಾರವೂ ನಮಗೆ ಮೂಡಲಿಲ್ಲ. ಮಿನಿಯು ತನ್ನ ಹಳೆಯ ಸ್ನೇಹಿತನನ್ನು ಮರೆತು ಹೊಸ ಸ್ನೇಹಿತರೊಡನೆ ಬೆರೆತು ಹೋದಳು. ಕಾಲ ಕ್ರಮೇಣ ಅವಳು ಬೆಳೆದಂತೆ, ಅವಳ ವಯಸ್ಸಿನ ಹುಡುಗಿಯರು ಮಾತ್ರ ಅವಳ ಸ್ನೇಹಿತರಾಗಿ ಉಳಿದರು. ಒಂದು ಅರ್ಥದಲ್ಲಿ, ನನ್ನ ಅವಳ ಸ್ನೇಹದ ತೀವ್ರತೆಯು ಕಡಿಮೆಯಾಗಿತ್ತು.
ಎಷ್ಟೋ ವರ್ಷಗಳು ಕಳೆದು ಹೋದವು. ಶರತ್ಕಾಲದ ದಿನಗಳು. ಮಿನಿಯ ಮದುವೆ ನಿರ್ಧಾರ ಆಗಿತ್ತು. ರಜೆಯ ದಿನಗಳಲಿ ಅವಳು ಮದುವೆಯ ಸಂಭ್ರಮದೊಂದಿಗೆ, ತನ್ನ ಮಾವನ ಮನೆಗೆ ಹೋಗಿ, ನಮ್ಮನ್ನು ಕತ್ತಲಿಗೆ ದೂಡುವ ಸಮಯ ಬಂದಿತ್ತು.
ಮದುವೆಯ ದಿನ ಸೂರ್ಯ ಹೊಂಬಣ್ಣ ದೊಂದಿಗೆ ಕಂಗೊಳಿಸುತ್ತಿದ್ದ. ವಾದ್ಯದವರು ನಸುಕಿನಲ್ಲೇ ತಮ್ಮ ಕಾರ್ಯಾರಂಭ ಮಾಡಿದ್ದರು. ಅದರಲ್ಲಿ ಹುಟ್ಟುತ್ತಿದ್ದ ಶಬ್ದ ನನ್ನ ಹೃದಯದಾಳದಿಂದ ಬಂದಂತೆ, ನನ್ನ ಮಗಳ ಅಗಲಿಕೆಯ ನೋವನ್ನು ಪಸರಿಸುತ್ತಿರುವಂತೆ ಭಾಸವಾಗುತ್ತಿತ್ತು. ಸಾಕಷ್ಟು ಜನ ಓಡಾಡು ತ್ತಿದ್ದರಿಂದ ಮನೆಯಲ್ಲಿ ಸದ್ದು ಗದ್ದಲ ತುಂಬಿತ್ತು.
ಮದುವೆಯ ಲೆಖ್ಖಗಳಲ್ಲಿ ಮುಳುಗಿ ಹೋದ ನನ್ನ ಮುಂದೆ ಬಂದು ನಿಂತದ್ದು ರಹಮತ್, ತನ್ನ ನಮಸ್ತೆಯೊಂದಿಗೆ. ಮೊದಲಿಗೆ ಅವನ ಗುರುತು ಸಿಗಲಿಲ್ಲ. ಅವನ ಮಾಮೂಲು ಗುರುತಾದ ಅವನ ಚೀಲಗಳು ಅಂದು ಇರಲಿಲ್ಲ. ಕೊನೆಗೆ ಅವನ ಮುಗುಳ್ನಗೆ ಗುರುತು ಸಿಕ್ಕಿತು.
ನಾನು ಕೇಳಿದೆ 'ರಹಮತ್, ಹೇಗಿದ್ದೀಯ? ಯಾವಾಗ ಬಂದೆ?'
'ನಿನ್ನೆ ಸಾಯಂಕಾಲ ನನ್ನ ಬಿಡುಗಡೆ ಆಯ್ತು' ಅವನು ಉತ್ತರಿಸಿದ.
ನನ್ನನ್ನು ಬಲವಾಗಿ ಅಲ್ಲಾಡಿಸಿದಂತೆ ಆಯಿತು. ನಾನು ಹೇಳಿದೆ 'ನಮ್ಮ ಮನೆಯಲ್ಲಿ ಶುಭ ಕಾರ್ಯ ನಡೆದಿದೆ. ನನಗೆ ಸಮಯದ ಅಭಾವ ಇದೆ. ನೀನಿನ್ನೂ ಹೋಗಬುದು'.
ಅವನು ಹೊರಡಲು ಅನುವಾದ. ಬಾಗಿಲು ದಾಟುವ ಮುನ್ನ ಒಮ್ಮೆ ಹಿಂತುರಿಗಿ ಕೇಳಿದ 'ನಾನು ಹುಡುಗಿಯನ್ನು ಒಮ್ಮೆ ನೋಡಬಹುದೇ?'
ಅವನ ಮನಸ್ಸಿನಲ್ಲಿ ಮಿನಿ ಇನ್ನು ಪುಟ್ಟ ಹುಡುಗಿಯಾಗೇ ಉಳಿದಿದ್ದಳು. ಹಿಂದಿನ ಹಾಗೆ ಓಡಿ ಬಂದು, "ಕಾಬೂಲಿವಾಲ, ಓ ಕಾಬೂಲಿವಾಲಾ" ಎಂದು ಕರೆಯುವಳು ಎನ್ನುವ ಭ್ರಮೆಯಲ್ಲಿದ್ದ. ತಮ್ಮ ಹಳೆಯ ಸ್ನೇಹಕ್ಕೆ ಕಾಣಿಕೆಯಾಗಿ, ದ್ರಾಕ್ಷಿ ಪೊಟ್ಟಣವೊಂದನ್ನು ಕೈಯಲ್ಲಿ ಹಿಡಿದು ತಂದಿದ್ದ.
ನಾನು ಮತ್ತೆ ಹೇಳಿದೆ 'ಇಂದು ನಮ್ಮ ಮನೆಯಲ್ಲಿ ಶುಭ ಕಾರ್ಯ ಇದೆ. ಇಂದು ಯಾರನ್ನು ಭೇಟಿಯಾಗಲು ಸಾಧ್ಯವಿಲ್ಲ'.
ನನ್ನ ಮಾತಿಗೆ ನೊಂದು ಕಂಡಂತೆ ಕಂಡರೂ ಹೊರ ಹೋದವನು ಮತ್ತೆ ಹೊರಳಿ ಬಂದು ಹೇಳಿದ 'ಈ ಪೊಟ್ಟಣಗಳನ್ನು ಆ ಪುಟ್ಟ ಹುಡಿಗಿಗೆ ಕೊಡಿ'
ಅದನ್ನು ತೆಗೆದುಕೊಂಡು ನಾನು ಸ್ವಲ್ಪ ಹಣ ಕೊಡಲು ಹೋದೆ. ಆದರೆ ಅವನು ನನ್ನ ಕೈಗಳನ್ನು ಹಿಡಿದು 'ದಯವಿಟ್ಟು ಇದಕ್ಕೆ ಹಣ ಕೊಡಬೇಡಿ. ಹಾಗೆ ನನಗೂ ಮಗಳಿದ್ದಾಳೆ. ಊರಲ್ಲಿರುವ ಅವಳ ನೆನಪು ಮಾಡಿಕೊಂಡು ನಾನು ಇವುಗಳನ್ನು ನಿಮ್ಮ ಮಗಳಿಗೆ ತಂದಿದ್ದೇನೆ. ಇದನ್ನು ನಾನು ವ್ಯಾಪಾರಕ್ಕಾಗಿ ಮಾಡುತ್ತಿಲ್ಲ.'
ಅವನು ತನ್ನ ಅಂಗಿಯ ಎದೆಯ ಭಾಗದಲ್ಲಿನ ಒಳಜೇಬಿಗೆ ಕೈ ಹಾಕಿ ಮಡಚಿ, ಮುದುಡಿ ಹೋಗಿದ್ದ ಕಾಗದದ ತುಣುಕು ತೆಗೆದ. ಅದನ್ನು ಜೋಪಾನವಾಗಿ ಬಿಡಿಸಿ ತೋರಿಸಿದ. ಅದು ಭಾವ ಚಿತ್ರವೇನೂ ಆಗಿರಲಿಲ್ಲ. ಬದಲಿಗೆ ಅದರಲ್ಲಿ ಇದ್ದಿಲಿನಿಂದ ಮೂಡಿಸಿದ ಪುಟ್ಟ ಅಂಗೈನ ಪಡಿಯಚ್ಚು ಮೂಡಿತ್ತು. ಅದನ್ನೇ ತನ್ನ ಮಗಳ ನೆನಪಾಗಿ ಇಟ್ಟುಕೊಂಡು ದೂರ ದೇಶಕ್ಕೆ ವ್ಯಾಪಾರಕ್ಕಾಗಿ ಬಂದಿದ್ದ. ಅದು ಅವನ ಏಕಾಂತ ಹೃದಯಕ್ಕೆ ಪ್ರೀತಿ, ಸಂತೋಷ ಕೊಡುವ ಸಂಗಾತಿಯಾಗಿತ್ತು.
ಅದನ್ನು ನೋಡಿ ನನ್ನ ಕಣ್ಣುಗಳು ತುಂಬಿ ಬಂದವು. ಅವನು ಹಣ್ಣು ಮಾರುವ ಮಾಮೂಲಿ ಮನುಷ್ಯ ಮತ್ತು ನಾನು ಬಂಗಾಳದ ಜಮೀನ್ದಾರ ಕುಟುಂಬದ ಶ್ರೀಮಂತ ಎನ್ನುವ ವ್ಯತ್ಯಾಸ ಅಲ್ಲಿಗೆ ಅಳಿದು ಹೋಯಿತು. ಆ ಕ್ಷಣದ ಸತ್ಯದ ಅರಿವಾಯಿತು - ಅವನು ನನ್ನ ಹಾಗೆ ಒಬ್ಬ ತಂದೆ. ಆ ಮೂಡಿದ್ದ ಕೈ ಗುರುತು ನನ್ನ ಮಗಳ ನೆನಪು ತಂತು. ಕೂಡಲೇ ಮಗಳನ್ನು ಬರ ಹೇಳಿದೆ. ಬೇರೆ ಹೆಣ್ಣು ಮಕ್ಕಳು ಅಪಸ್ವರ ತೆಗೆದರೂ, ನಾನು ಜಗ್ಗಲಿಲ್ಲ. ವಧುವಿನ ವೇಷ-ಅಲಂಕಾರಗಳಲ್ಲಿದ್ದ ಮಿನಿ ನನ್ನ ಪಕ್ಕಕ್ಕೆ ಬಂದು ನಿಂತಳು.
ಮಿನಿಯನ್ನು ನೋಡಿದ ಕಾಬೂಲಿವಾಲ ಒಂದು ಕ್ಷಣ ಅವಾಕ್ಕಾಗಿ, ಸಂದೇಹಕ್ಕೆ ಒಳಗಾದ. ನೋಡಿದ ತಕ್ಷಣ ಒಬ್ಬರಿಗೊಬ್ಬರು ಮಾಡಿ ಕೊಳ್ಳುತ್ತಿದ್ದ ಹಾಸ್ಯ ಮತ್ತೆ ಸಾಧ್ಯವಾಗಲಿಲ್ಲ. ಕೊನೆಗೆ ಮುಖದಲ್ಲಿ ನಗೆ ತಂದುಕೊಂಡು ಕೇಳಿದ 'ಹುಡುಗಿ, ಮಾವನ ಮನೆಗೆ ಹೋಗುತ್ತಿರುವೆಯ?'
ಮಿನಿಗೆ ತಾನು ಚಿಕ್ಕವಳಿದ್ದಾಗ ಈ 'ಮಾವನ ಮನೆ' ಪ್ರಶ್ನೆಗೆ ಉತ್ತರ ಕೊಟ್ಟ ಹಾಗೆ, ಈಗ ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ ಅವಳ ಕೆನ್ನೆ ರಂಗೇರಿ ಒಳಗೆ ಹೊರಟು ಹೋದಳು. ಅವರ ಮೊದಲ ಭೇಟಿಯ ನೆನಪಾಗಿ, ನನ್ನ ಮನಸಿಗೆ ನೋವೆನಿಸಿತು.
ಅವಳು ಹೋಗಿ ಸಾಕಷ್ಟು ಹೊತ್ತಿನವರೆಗೆ, ರಹಮತ್ ಅಲ್ಲಿಯೇ ನೆಲದ ಮೇಲೆ ತಲೆ ತಗ್ಗಿಸಿ ನಿಟ್ಟುಸಿರು ಬಿಡುತ್ತ ಕುಳಿತಿದ್ದ. ಸಹಜವಾಗಿಯೇ ಅವನ ಮಗಳು ಸಹ ಬೆಳೆದು ನಿಂತಿರುತ್ತಾಳೆ. ಅವನು ಊರು ಬಿಟ್ಟ ಸಮಯದಲ್ಲಿನ ಬಾಲಕಿಯಾಗಿ ಉಳಿದಿರುವುದಿಲ್ಲ. ಅವನು ಜೈಲು ಸೇರಿದ ನಂತರದ ವರ್ಷಗಳಲ್ಲಿ ಅಲ್ಲಿ ಏನಾಗಿದೆಯೋ ಕೂಡ ಅವನಿಗೆ ಗೊತ್ತಿಲ್ಲ. ಮದುವೆ ಮನೆಯ ಸದ್ದು-ಗದ್ದಲ, ನಾದ ಸ್ವರಗಳ ಹಿನ್ನೆಲೆಯಲ್ಲೂ ಅವನಿಗೆ ಬೆಟ್ಟ-ಗುಡ್ಡಗಳ ಅವನ ಊರಿನ ಚಿತ್ರ ಅವನಿಗೆ ಕಣ್ಮುಂದೆ ಬರತೊಡಗಿತು.
ನಾನು ಸ್ವಲ್ಪ ಹಣ ತೆಗೆದು ಕೊಟ್ಟು ಹೇಳಿದೆ 'ನಿನ್ನ ದೇಶಕ್ಕೆ, ನಿನ್ನ ಮಗಳ ಹತ್ತಿರ ಹೋಗು. ನಿಮ್ಮಿಬ್ಬರ ಮಿಲನ ಮತ್ತು ಹಾರೈಕೆ ನನ್ನ ಮಗಳಿಗೆ ಆಶೀರ್ವಾದವಾಗಲಿ'
ಆ ಹಣ ಕೊಟ್ಟಿದ್ದಕ್ಕಾಗಿ, ನಾನು ಮದುವೆಯ ಕೆಲ ಖರ್ಚುಗಳನ್ನು ಕಡಿಮೆ ಮಾಡಬೇಕಾಯಿತು. ಉದಾಹರಣೆಗೆ, ದೀಪಗಳ ಅಲಂಕಾರ ಮೊದಲು ಅಂದು ಕೊಂಡಷ್ಟು ಆಗಲಿಲ್ಲ. ಸಂಗೀತ ಕಾರ್ಯಕ್ರಮ ರದ್ದು ಪಡಿಸಲಾಯಿತು. ಇದು ಮದುವೆಗೆ ಬಂದ ಕೆಲವವರಲ್ಲಿ ನಿರಾಸೆ ಮೂಡಿಸಿತು. ಆದರೆ ನನ್ನ ಆತ್ಮದಲ್ಲಿ ಹುಟ್ಟಿದ ಸಾರ್ಥಕ ಭಾವನೆಯಿಂದ, ಮನೆಯಲ್ಲಿನ ಶುಭ ಕಾರ್ಯ ಮೆರುಗುನಿಂದ ನಡೆಯಿತು ಎನ್ನಿಸಿತು.
Comments
ಉ: ಕಾಬೂಲಿವಾಲ
ಆನಂದರೆ, ಕಾಬೂಲಿವಾಲ ಕನ್ನಡ ರೂಪಾಂತರ ಚೆನ್ನಾಗಿದೆ.
In reply to ಉ: ಕಾಬೂಲಿವಾಲ by ಗಣೇಶ
ಉ: ಕಾಬೂಲಿವಾಲ
ಧನ್ಯವಾದಗಳು!
In reply to ಉ: ಕಾಬೂಲಿವಾಲ by ಗಣೇಶ
ಉ: ಕಾಬೂಲಿವಾಲ
ಕತೆ ತುಂಬಾ ಇಷ್ಟವಾಯಿತು, ಆನಂದರೆ. ಕನ್ನಡಿಕರಿಕರಿಸಿ ಕೊಟ್ಟಿದ್ದಕ್ಕಾಗಿ ತುಂಬಾ ಥ್ಯಾಂಕ್ಸ್.
ಉ: ಕಾಬೂಲಿವಾಲ
ಶಾಲೆಯಲ್ಲೋದುವಾಗ ನಮ್ಮ ಪಠ್ಯ ಪುಸ್ತಕದಲ್ಲಿ ಈ ಕಥೆ ಇತ್ತು. ನೆನಪು ಹಸುರಾಗಿಸಿತು. ವಂದನೆಗಳು!
In reply to ಉ: ಕಾಬೂಲಿವಾಲ by hpn
ಉ: ಕಾಬೂಲಿವಾಲ
ಹೌದು. ನನಗೂ ಪ್ರಾಥಮಿಕ ಶಾಲೆಯಲ್ಲಿ ಇದರ ಸಂಕಿಪ್ತ ರೂಪದ ಕಥೆ ಓದಿದ್ದ ನೆನಪು. ಈ ಕಥೆ ಜನ್ಮ ತಾಳಿ ೧೨೦ ವರ್ಷಗಳೇ ಕಳೆದಿವೆ. ಟ್ಯಾಗೋರ್ ರವರ ಕಥೆಗಳನ್ನು ಸಾಕಷ್ಟು ಬರಹಗಾರರು ಭಾರತದ ಎಲ್ಲ ಭಾಷೆಗಳಲ್ಲೂ, ಕನ್ನಡದ ಸಹಿತ, ಅನುವಾದ ಮಾಡಿದ್ದಾರೆ. ಹೊಸ ಬರಹಗಾರರಿಗೆ ಇದು ಆನಂದ ಕೊಡುವ ಕೆಲಸ. ಅದಲ್ಲದೆ ಭಾವ ತೀವ್ರತೆಯಿರುವ ಟ್ಯಾಗೋರ್ ರ ಕಥೆಗಳನ್ನು ನಮ್ಮ ಮಾತೃ ಭಾಷೆಯಲ್ಲಿ ಓದಿದಾಗ ಸಿಗುವ ಸಂಪೂರ್ಣ ಅನುಭವ ಇಂಗ್ಲಿಷ್ ನಲ್ಲಿ ಓದಿದಾಗ ಸಾಧ್ಯವಿಲ್ಲ.
ಉ: ಕಾಬೂಲಿವಾಲ
ಸುಪ್ತವಾಗಿ ಹೋದ ಕಥೆಯನ್ನು ಮತ್ತೆ ನೆನಪು ಮಾಡಿದಿರಿ.
ಧನ್ಯವಾದಗಳು.
ಉ: ಕಾಬೂಲಿವಾಲ
ಆನಂದರೆ ನಮಸ್ಕಾರ, ನಮಗೆ ಹೈಸ್ಕೂಲಿನ ಇಂಗ್ಲೀಷ್ ಪಠ್ಯಪುಸ್ತಕದಲ್ಲಿ ಈ ಕಥೆ ಪಾಠವಾಗಿ ಇದ್ದ ನೆನಪು. ಆಗ ಇಂಗ್ಲೀಷು ಸರಿಯಾಗಿ ಬರದೆ ತಿಣುಕಾಡುತ್ತಿದ್ದ ಜಮಾನ - ಅದೆಷ್ಟು ಅರ್ಥವಾಗಿತ್ತೊ, ಬಿಟ್ಟಿತ್ತೊ ? ನಿಮ್ಮ ಅನುವಾದ ಆ ನೆನಪುಗಳನ್ನು ಬಡಿದೆಬ್ಬಿಸಿತು. ಇದೇ ರೀತಿ ನಮ್ಮ ಪ್ರಾಥಮಿಕ ಶಾಲೆಯಲ್ಲಿ ಮುದ್ದಣ ಮನೋರಮೆಯ ಸರಸ ಸಲ್ಲಾಪ, ರಾಘವಾಂಕರ ತರಹದ ಕಥೆಗಳಿದ್ದವು.. ಈಗವೆಲ್ಲ ಹುಡುಕಿದರು ಸಿಗದೆಂದು ಕಾಣುತ್ತದೆ ಆಧುನಿಕ ಕನ್ನಡ ಪಠ್ಯಗಳಲ್ಲಿ..
In reply to ಉ: ಕಾಬೂಲಿವಾಲ by nageshamysore
ಉ: ಕಾಬೂಲಿವಾಲ
ನಮಸ್ಕಾರ. ನಿಜ, ಇದೇ ಕಾರಣಕ್ಕೋ ಏನೋ ಹೊಸ ಪೀಳಿಗೆಯಲ್ಲಿ ಕನ್ನಡ ಬರಹಗಾರರ ಸಂಖ್ಯೆ ಕಡಿಮೆ. ಅತಿ ಹೆಚ್ಚು ಜ್ಞಾನಪೀಠಗಳನ್ನು ಪಡೆದಿರುವ ಭಾಷೆಯ ಭವಿಷ್ಯ ಅಷ್ಟು ಉಜ್ವಲವಾಗೇನೂ ಇಲ್ಲ. ಇರಲಿ, ನಾವು ಮಾತ್ರ ಸಾಧ್ಯವಾದದ್ದನ್ನು ಮುಂದುವರೆಸೋಣ.
ಉ: ಕಾಬೂಲಿವಾಲ
ಮಕ್ಕಳ ನಿಷ್ಕಲ್ಮಶ ಪ್ರೀತಿಯ ಎದುರು ಸೋಲದಿರುವವರು ಯಾರು? ಮನ ಮುಟ್ಟುವ ಕಥೆ. ಧನ್ಯವಾದಗಳು.
In reply to ಉ: ಕಾಬೂಲಿವಾಲ by kavinagaraj
ಉ: ಕಾಬೂಲಿವಾಲ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು.
In reply to ಉ: ಕಾಬೂಲಿವಾಲ by Anand Maralad
ಉ: ಕಾಬೂಲಿವಾಲ
ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಯಿತು
In reply to ಉ: ಕಾಬೂಲಿವಾಲ by VEDA ATHAVALE
ಉ: ಕಾಬೂಲಿವಾಲ
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು.
ಉ: ಕಾಬೂಲಿವಾಲ
ಕಾಬೂಲಿವಾಲಾ ಕಥೆ ಬಗ್ಗೆ ಕೇಳಿದ್ದೆ, ಈ ಹೆಸರಿನ ಚಿತ್ರವೊಂದಿದೆ. ಇದೇ ಕಥೆಯೋ ಹೇಗೋ. ತುಂಬ ಚನ್ನಾಗಿ ಅನುವಾದ ಅನ್ನದಷ್ಟು ಚನ್ನಾಗಿ ಕನ್ನಡೀಕರಿಸಿದ್ದೀರಿ. ಅಭಿನಂದನೆಗಳು ಆನಂದ ಜಿ.
In reply to ಉ: ಕಾಬೂಲಿವಾಲ by lpitnal
ಉ: ಕಾಬೂಲಿವಾಲ
ಹೌದು. ಇದು ಹಿಂದಿಯಲ್ಲಿ ಚಲನಚಿತ್ರವೂ ಆಗಿದೆ.ಧನ್ಯವಾದಗಳು.